ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಸಂಧ್ಯಾ ಬರೆದ ದಿನದ ಕವಿತೆ.

ನೀನಿಲ್ಲಿರಬೇಕಿತ್ತು

ನಿದ್ದೆ ಬಾರದ ರಾತ್ರಿಗಳಲಿ
ಕಿಟಕಿ ಬದಿ ಹಚ್ಚಿಟ್ಟ ದೀಪ ತುಯ್ಯುತ್ತದೆ,
ರೆಪ್ಪೆ ಸೇರದ ಕಂಗಳಲಿ
ರಾತ್ರಿ ಉರಿಯುತ್ತದೆ

ಉಸಿರೆತ್ತದೆ, ಪ್ರಶ್ನೆ ಕೇಳದೆ, ಶರತ್ತು ಹಾಕದೆ
ಕರಿಮಣಿಯ ಜಾಮೀನು ಕೇಳದೆ
ನಿನ್ನೊಡನೆ ಹೆಜ್ಜೆ ಹಾಕುತ್ತಾ
ಇದೆಲ್ಲಿ ಬಂದೆ ನಾನು ಗೆಳೆಯಾ?
ಬಾನ ಚಂದಿರನ ಅಂದ ಸವಿಯುತ್ತಾ, ಮನೆಗೊಂದು
ದೀಪ ಹಚ್ಚಿಡುವುದ ಮರೆತವಳು,
ಕಡಲ ಭೋರ್ಗರೆತಕ್ಕೆ ಮೈ ಮರೆತು, ಕುಡಿಯಲು
ಕೊಡ ನೀರು ಹಿಡಿಯುವುದ ಮರೆತವಳು,
ಇಬ್ಬನಿ ಹನಿಯಲಿ ಮುತ್ತ ಹುಡುಕಿದವಳು..

ನಿನ್ನ ಕಣ್ಣಲ್ಲೇ ಕರಗುತ್ತಾ ಹೆಜ್ಜೆ ಹಾಕಿದ ನನಗೆ
ಬಂದ ದಾರಿಯ ಅರಿವಿಲ್ಲ,
ಈಗ ನಿನ್ನ ಕೈ, ನನ್ನ ಕೈಯಿಂದ ಸರಿದಂತಾದರೆ
ಬೆಚ್ಚುತ್ತೇನೆ, ಎಲ್ಲಿ ಹೋಗಲಿ ನಾನು?
ದೀಪ ತುಯ್ದಾಡುತ್ತದೆ..

ಗೆಳೆಯಾ ಈಗ ನೀನಿಲ್ಲಿರಬೇಕಿತ್ತು

ದೀಪ ತುಯ್ದಾಡುತ್ತದೆ..

ಗಾಳಿ ಬೀಸಿ ದೀಪ ನಡುಗುತ್ತದೆ..
ದೀಪ ದಿಟ್ಟಿಸುತ್ತದೆ, ನಾನು
ದಿಟ್ಟಿ ತಗ್ಗಿಸುತ್ತೇನೆ…

(ಮುಖಪುಟ ಚಿತ್ರ: ಸ್ಟಾರೀ ನೈಟ್, ಕಲಾವಿದ: ವ್ಯಾನ್ ಗೋ, ದೇಶ:ಡಚ್)