ಕಥನಕ್ಕಾಗಿ ಇಲ್ಲಿ ಪಾತ್ರಗಳು ದುಡಿಯುವುದಿಲ್ಲ, ಪಾತ್ರಗಳೇ ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಒಂದು ಕತೆಯಾಗಿ ಹೊರ ಹೊಮ್ಮುತ್ತವೆ. ಕೊಜೆ ಯಾನೆ ಹೇಲು ಗೋವಿಂದಪ್ಪ- ಎಂಬ ಪಾತ್ರವನ್ನು ಆ ಪಾತ್ರದ ಹೆಸರಿನ ಹಿನ್ನೆಲೆಯಲ್ಲಿ ಕಟ್ಟುವ ಕ್ರಮ, ಅದೇ ಕತೆಯಲ್ಲಿ ಓಡಿ ಹೋದ ಬಸವ ವಾಪಾಸ್ ಪ್ರತ್ಯಕ್ಷವಾದಾಗ ಅವನನ್ನು ತೋರಿಸುವ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಾಗೇ ಸುಮಂತ್- ಪ್ರಾಣೇಶ್ ಮಧ್ಯೆ ಕ್ರಿಕೆಟ್ ವಿಚಾರಕ್ಕೆ ಶುರುವಾದ ಜಗಳ ಪಡೆದುಕೊಳ್ಳುವ ತಿರುವು, ಪಾತ್ರ ಕಟ್ಟುವಿಕೆಗೆ ಬಹಳ ಒಳ್ಳೆಯ ಉದಾಹರಣೆ.
ಸತೀಶ್ ಶೆಟ್ಟಿ ವಕ್ವಾಡಿ ಬರೆದ ‘ಅಜ್ಜ ನೆಟ್ಟ ಹಲಸಿನ ಮರ’ ಕಥಾಸಂಕಲನಕ್ಕೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ
Arts are out of guilt.
-ಇದನ್ನ ಕೇಳಿದ್ದು ಜಗದ್ವಿಖ್ಯಾತ ನಿರ್ದೇಶಕ ಅಕಿರಾ ಕುರಸಾವಾ ತನ್ನೊಂದು ಸಂದರ್ಶನದಲ್ಲಿ. ಆವತ್ತಿನಿಂದ ಸುಮ್ಮನೆ ಆ ಮಾತಿನ ಜಾಡು ಹಿಡಿದು ಹೋದರೆ ಎಷ್ಟೊಂದು ಪಾಪಪ್ರಜ್ಞೆಗಳು ನಮ್ಮ ಸುತ್ತಮುತ್ತ ಕಾಲಿಗೆ ತೊಡರುತ್ತವೆ ಅನ್ನಿಸಿತು. ಧಾರ್ಮಿಕ ಪಾಪಪ್ರಜ್ಞೆ, ಭಾಷಿಕ ಪಾಪಪ್ರಜ್ಞೆ, ಕೋಮು ಪಾಪಪ್ರಜ್ಞೆ, ಸಂಬಂಧದೊಳಗಿನ ಪಾಪಪ್ರಜ್ಞೆ, ಅಂತಸ್ತು ಹುಟ್ಟಿಸಿದ ಪಾಪಪ್ರಜ್ಞೆ. ಬಡವರಾಗಿದ್ದ ನಾವು ಕ್ರಮೇಣ ಶ್ರೀಮಂತರಾದರೆ ಬಡವರನ್ನು ಕಂಡಾಗೆಲ್ಲ ಪದೇಪದೇ ನಮ್ಮ ಪಾಪಪ್ರಜ್ಞೆ ಜಾಗೃತವಾಗುತ್ತದೆ, ನಮ್ಮ ಮಕ್ಕಳನ್ನು ನಾವು ಸರಿಯಾಗಿ ಬೆಳೆಸುತ್ತಿಲ್ಲವೆಂದಾದರೆ ಎಲ್ಲೋ ಮಕ್ಕಳು ತಂದೆ ತಾಯಿಗಳನ್ನೇ ಕೊಂದ ಸುದ್ದಿ ಓದಿದರೆ ನಮ್ಮ ಪಾಪಪ್ರಜ್ಞೆ ಜಾಗೃತವಾಗುತ್ತದೆ, ಯಾವುದೋ ಕೋಮು ಗಲಭೆ ಸುದ್ದಿಯಾದರೆ ನಮ್ಮೊಳಗೆ ನಾವು ಗುಟ್ಟಾಗಿ ಇಟ್ಟುಕೊಂಡಿರುವ ಕೋಮುವಾದ ಜಾಗೃತವಾಗುತ್ತದೆ. ನಮ್ಮ ದಾಂಪತ್ಯದ ಬಿರುಕು, ನಾವು ನೋಡುವ ಚಿತ್ರ, ಓದುವ ಕತೆಗಳ ಬಿರುಕಿನ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತದೆ.
ನಮ್ಮ ಪಾಪಪ್ರಜ್ಞೆ ಕಲೆಯ ಪಾಪಪ್ರಜ್ಞೆಯೂ ಆಗುತ್ತಿರುವುದು ಹೀಗೇ, ಹಾಗಾಗಿ ಯಾವತ್ತೋ ಹೇಳಿದ ಕುರಸಾವಾನಾ ಮಾತು ಪ್ರಸ್ತುತವಾಗುತ್ತಾ ಹೋಗುತ್ತಿದೆ. ಇತ್ತೀಚೆಗೆ ಹಲವು ದೃಶ್ಯಮಾಧ್ಯಮಗಳಲ್ಲಿ ಬರುತ್ತಿರುವ ಇಂಥಹ ದಂಡಿದಂಡಿ ಕಿರುಚಿತ್ರ, ಸಿನಿಮಾ, ಸರಣಿಗಳು ಅದಕ್ಕೆ ಸಾಕ್ಷಿಯಾಗಿವೆ.
ಮೊನ್ನೆ ಮೊನ್ನೆ ಮಲೆಯಾಳಂನಲ್ಲಿ ಬಂದ ‘ವಿಕೃತಿ’ ಸಿನಿಮಾ ಆಗಲೀ, ಕನ್ನಡದಲ್ಲಿ ಬಂದ ‘ಪಬ್ಲಿಕ್ ಟಾಯ್ಲೆಟ್’ ಆಗಲೀ ಈ ಕಾಲದ ಸೋಶಿಯಲ್ ಮೀಡಿಯಾ ಬಳಕೆ ಬಗ್ಗೆ ನಮಗೆಲ್ಲ ಇರುವ ಪಾಪಪ್ರಜ್ಞೆಯ ಕಲಾರೂಪವೇ. ಇದನ್ನೆಲ್ಲ ಜ್ಞಾಪಿಸುವಂತೆ ಕತೆಗಾರ ಸತೀಶ್ ಶೆಟ್ಟಿ ವಕ್ವಾಡಿ ಅವರ ‘ಅಜ್ಜ ನೆಟ್ಟ ಹಲಸಿನ ಮರ’ ಅವರ ಕಥಾಸಂಕಲನ ಕೈಯಲ್ಲಿದೆ.
ಕುಂದಾಪುರದ ಪ್ರಾಂತ್ಯದಿಂದ ಬಂದ, ಆ ಪರಿಸರದ ಕತೆಗಳನ್ನೇ ಹೆಚ್ಚು ಬರೆದಿರುವ, ಗ್ರಾಮೀಣ ಭಾಗವನ್ನು ಸೂಕ್ಷ್ಮವಾಗಿ ಹಿಡಿದಿಡುವ ಸತೀಶ್ ಶೆಟ್ಟಿ, ಸಂಕಲನದ ಒಂದಿಲ್ಲೊಂದು ಕತೆಗಳಲ್ಲಿ ಮನುಷ್ಯನ ಪಾಪಪ್ರಜ್ಞೆಯನ್ನು ತಂದಿರಿಸುತ್ತಾ ಹೋಗುತ್ತಾರೆ. ಭಿನ್ನ ಕೋಮಿನ ಕತೆಯನ್ನು ಸಾಮಾಜಿಕ ಪ್ಲಾಟ್ ಫಾರ್ಮ್ ನ ಮೇಲಿಡುವ ‘ಬಣ್ಣದ ನೆರಳು’, ಪರಂಪರೆಯನ್ನು ಬಿಗಿದಪ್ಪಿಕೊಂಡು ನಿಲ್ಲಬೇಕಾ, ಆಧುನಿಕತೆಯನ್ನು ಬರಮಾಡಿಕೊಳ್ಳಬೇಕಾ ಎನ್ನುವ ಅಭಿವೃದ್ಧಿ ಬಗೆಗಿನ ಪಾಪಪ್ರಜ್ಞೆಗೆ ಹಚ್ಚುವ ‘ಅಜ್ಜ ನೆಟ್ಟ ಹಲಸಿನ ಮರ’- ಕತೆಗಳು ‘ಗಿಲ್ಟ್’ ಅನ್ನುವ ಕುರಸಾವಾ ಮಾತುಗಳಿಗೆ ಪುರಾವೆಯೆನ್ನುವಂತೆ ಕೈಗೆ ಸಿಕ್ಕವು. ಕಥೆಗಾರರ ಒಟ್ಟು ಕಥಾಪ್ರಜ್ಞೆಯಲ್ಲಿ ಈ ಗಿಲ್ಟ್ ಒಂದಲ್ಲಾ ಒಂದು ಬಗೆಯಲ್ಲಿ ಸಿಗುತ್ತಲೇ ಹೋಗುತ್ತವೆ.
ಭಿನ್ನ ಕೋಮಿನ ಕತೆಯನ್ನು ಸಾಮಾಜಿಕ ಪ್ಲಾಟ್ ಫಾರ್ಮ್ ನ ಮೇಲಿಡುವ ‘ಬಣ್ಣದ ನೆರಳು’, ಪರಂಪರೆಯನ್ನು ಬಿಗಿದಪ್ಪಿಕೊಂಡು ನಿಲ್ಲಬೇಕಾ, ಆಧುನಿಕತೆಯನ್ನು ಬರಮಾಡಿಕೊಳ್ಳಬೇಕಾ ಎನ್ನುವ ಅಭಿವೃದ್ಧಿ ಬಗೆಗಿನ ಪಾಪಪ್ರಜ್ಞೆಗೆ ಹಚ್ಚುವ ‘ಅಜ್ಜ ನೆಟ್ಟ ಹಲಸಿನ ಮರ’- ಕತೆಗಳು ‘ಗಿಲ್ಟ್’ ಅನ್ನುವ ಕುರಸಾವಾ ಮಾತುಗಳಿಗೆ ಪುರಾವೆಯೆನ್ನುವಂತೆ ಕೈಗೆ ಸಿಕ್ಕವು.
ಇಡೀ ಸಂಕಲನವನ್ನು ಓದಿ ಬದಿಗಿಟ್ಟಾಗ ಹಲವು ಸಂಗತಿಗಳು ಗಮನ ಸೆಳೆಯುತ್ತಾ ಹೋದವು. ಅವುಗಳಲ್ಲಿ ಕೆಲವಷ್ಟನ್ನು ಹೀಗೇ ಜೋಡಿಸುತ್ತಾ ಹೋಗಬಹುದೇನೋ?
* ಮುಖ್ಯವಾಗಿ ಗಮನಕ್ಕೆ ಬಂದಿದ್ದು ಇಡೀ ಸಂಕಲನದ ವಸ್ತು ವೈವಿಧ್ಯತೆ. ಸಾಮಾನ್ಯವಾಗಿ ಪ್ರೀತಿ, ಪ್ರೇಮ, ಕಾಮ, ಅಕ್ರಮ ಇತ್ಯಾದಿ ವಿಚಾರಗಳೇ ಕಥೆಗಾರನ ವಸ್ತುವಾಗುವುದನ್ನು ನೋಡಿದಾಗ ಈ ಸಂಕಲನ ಅದಕ್ಕೆ ವ್ಯತಿರಿಕ್ತವಾಗಿ ರಾಜಕೀಯ, ದೇವಸ್ಥಾನದ ರಾಜಕೀಯ, ಸ್ನೇಹಿತರೊಳಗಿನ ಕಿತ್ತಾಟ, ಮನುಷ್ಯ ಗುಣಗಳ ವೈರುದ್ಧ, ಶಿಕ್ಷೆ, ಶ್ರದ್ಧೆ, ಆಚಾರ- ವಿಚಾರ- ಹೀಗೆ ಹಲವು ವಿಚಾರಗಳನ್ನು ಈ ಸಂಕಲನ ಕತೆಯಾಗಿ ಚರ್ಚಿಸುತ್ತಾ ಹೋಗುತ್ತದೆ.
*ಇನ್ನೊಂದು ಗಮನಕ್ಕೆ ಬಂದಿದ್ದು ಕತೆಯ ಕಟ್ಟುವಿಕೆಯಲ್ಲಿ ಬೇಕೆಂತಲೇ ರೋಚಕತೆಯನ್ನು ತರಲಾಗಿಲ್ಲ. ಬಹಳ ತಾಳ್ಮೆಯಿಂದ ಕತೆಯನ್ನು ಹೆಣೆಯುತ್ತಾ ಹೋಗುವ ಕುಸುರಿತನ ಎದ್ದು ಕಾಣುತ್ತದೆ. ಹಾಗಾಗಿ ಒಂದು ಕತೆ ಎಂದರೆ ಒಟ್ಟು ಪರಿಸರ, ಅದರ ಹಿನ್ನೆಲೆ, ಯಾವುದೇ ಊರಿನ ಆಳದಲ್ಲಿ ಇರುವ ಮುಗ್ಧತೆ- ಇವುಗಳೆಲ್ಲ ಕತೆಗಳಾಗುತ್ತವೆ. ರೋಚಕಗೊಳಿಸುವುದೇ ಬಹುದೊಡ್ಡ ಗುಣ ಮತ್ತು ದೋಷವಾಗಿರುವ ಈ ಕಾಲದಲ್ಲಿ ಅದಕ್ಕೆ ವ್ಯತಿರಿಕ್ತವಾದ ಕಥನಗಾರಿಕೆಯೊಂದು ಕಣ್ಣಿಗೆ ಬೀಳುವುದು ಅಪರೂಪವೇ. ಅದಕ್ಕೆ ಈ ಸಂಕಲನದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ, ಕಾಣೆಯಾದವರು ಹಾಗೂ ದೇವರ ಕೆಲಸ ಇದಕ್ಕೆ ಅತ್ಯುತ್ತಮ ಉದಾಹರಣೆ.
* ಇನ್ನೊಂದು ಕಥನಕ್ಕಾಗಿ ಇಲ್ಲಿ ಪಾತ್ರಗಳು ದುಡಿಯುವುದಿಲ್ಲ, ಪಾತ್ರಗಳೇ ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಒಂದು ಕತೆಯಾಗಿ ಹೊರ ಹೊಮ್ಮುತ್ತವೆ. ಕೊಜೆ ಯಾನೆ ಹೇಲು ಗೋವಿಂದಪ್ಪ- ಎಂಬ ಪಾತ್ರವನ್ನು ಆ ಪಾತ್ರದ ಹೆಸರಿನ ಹಿನ್ನೆಲೆಯಲ್ಲಿ ಕಟ್ಟುವ ಕ್ರಮ, ಅದೇ ಕತೆಯಲ್ಲಿ ಓಡಿ ಹೋದ ಬಸವ ವಾಪಾಸ್ ಪ್ರತ್ಯಕ್ಷವಾದಾಗ ಅವನನ್ನು ತೋರಿಸುವ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಾಗೇ ಸುಮಂತ್- ಪ್ರಾಣೇಶ್ ಮಧ್ಯೆ ಕ್ರಿಕೆಟ್ ವಿಚಾರಕ್ಕೆ ಶುರುವಾದ ಜಗಳ ಪಡೆದುಕೊಳ್ಳುವ ತಿರುವು, ಪಾತ್ರ ಕಟ್ಟುವಿಕೆಗೆ ಬಹಳ ಒಳ್ಳೆಯ ಉದಾಹರಣೆ. ಹಾಗೇ ಶೋ ರೂಮ್ ನಲ್ಲಿ ಪ್ರಗತಿ ಮತ್ತು ಅರುಣರ ದುರಂತ ಪ್ರೇಮ ಕತೆಯನ್ನು ಹೇಳುವ ‘ನೇಣುಗಂಬ’ ಕತೆಯನ್ನೂ ಮರೆಯುವಂತಿಲ್ಲ.
* ಗಿಲ್ಟ್ ಬಗ್ಗೆ ಪ್ರಾರಂಭದಲ್ಲೇ ಹೇಳಿದ ಹಾಗೆ ಬಹಳಷ್ಟು ಕತೆಗಳು ಪಾಪಪ್ರಜ್ಞೆಯನ್ನು ಅಲ್ಲಲ್ಲಿ ಉಳಿಸುತ್ತಾ ಹೋಗುತ್ತವೆ. ದೇವರ ಹಣ ಕಾಣೆಯಾಗುವ ವಸ್ತುವನ್ನಾಧರಿಸಿದ ‘ದೇವರ ಕೆಲಸ’ ಮತ್ತು ‘ಜೀರ್ಣೋದ್ಧಾರ’ ಕತೆಯಲ್ಲಾಗಲೀ, ಕಾಣೆಯಾದವರ ಹಿನ್ನೆಲೆಯನ್ನು ಹೇಳುವ ‘ಕಾಣೆಯಾದವರು’ ಕತೆಯಲ್ಲಾಗಲೀ, ಒಂದು ಅಪರಾಧ ಮತ್ತು ಅದಕ್ಕಾಗಿ ಕಾರಾಗೃಹದಲ್ಲಿ ಅನುಭವಿಸುವ ಶಿಕ್ಷೆಯನ್ನು ಹೇಳುವ ‘ನೇಣುಗಂಬ’ ಕತೆಯಲ್ಲಾಗಲೀ ಈ ಪಾಪಪ್ರಜ್ಞೆ ಹಲವು ಸ್ತರಗಳಲ್ಲಿ ಬರುತ್ತಾ ಹೋಗುತ್ತದೆ.
* ಕತೆಯನ್ನು ಅವಸರದಲ್ಲಿ ಮುಗಿಸುವುದಾಗಲೀ, ಮುಗಿಸಲು ಬಾರದೇ ಅನುಮಾನಗಳನ್ನು ಮಿಗಿಸುವುದಾಗಲೀ ಕತೆಗಾರರು ಎಲ್ಲೂ ಮಾಡಿಲ್ಲ. ಕೆಲವೊಂದು ಅಂತ್ಯವನ್ನು ಅದರ ಪಾಡಿಗೆ ಹಾಗೇ ಬಿಟ್ಟಿದ್ದಾರೆ, ಕೆಲ ಕತೆಗಳಿಗೆ ಆ ಅಂತ್ಯ ಬಹಳ ಸೊಗಸಾಗಿ ಹೊಂದಿಕೊಂಡಿದೆ ಕೂಡ.
*****
ಕತೆ ಅನ್ನುವ ಪ್ರಕಾರದ ಕಾಲ ಮುಗಿಯಿತು ಅಂತ ಪ್ರತಿ ಸಲ ಅಂದುಕೊಂಡರೂ ಕಡೆಗೂ ಅದು ಬದುಕುಳಿದಿದೆ. ಹಾಗೇ ಕವಿತೆಯಷ್ಟು ಸದರ ಆಗದೇ ಹೋದ ಪ್ರಕಾರವೆಂದರೆ ಕತೆ. ಕವಿತೆ ಕಾಲಾನುಕ್ರಮದಲ್ಲಿ ಒಂದೋ ತೀರಾ ಸಂಕೇತಗಳಲ್ಲಿ ಮುಳುಗಿ ಹೋಗಿದೆ ಇಲ್ಲವೇ ತೀರಾ ಪ್ರಾಸಕ್ಕೆ ಕಟ್ಟುಬಿದ್ದ ಎಳಸು ರಚನೆಗಳಾಗಿ ಹೋಗಿವೆ. ಇದರಾಚೆ ಹಲವು ಸಾಧ್ಯತೆಗಳನ್ನು ತನ್ನಷ್ಟಕ್ಕೇ ಎಕ್ಸ್ ಪೆರಿಮೆಂಟ್ ಮಾಡುವ ಪ್ರಕಾರವಾಗಿ ಕತೆ ಉಳಿದುಕೊಂಡಿದೆ. ಎಷ್ಟೋ ಕಾದಂಬರಿಗಾರರ ಅಡಗುತಾಣವೂ ಕತೆ ಹೌದು ಹಾಗೂ ಕಾದಂಬರಿ ಎಂಬ ಗಂಭೀರ, ನೈಜ ಅಥವಾ ಒರಿಜಿನಲ್ ಪ್ರಕಾರಕ್ಕೆ ಹಾರಿಕೊಳ್ಳುವವರು ಪ್ರಾಕ್ಟಿಸ್ ಗೆ ಫೀಲ್ಡ್ ಮಾಡಿಕೊಂಡಿದ್ದೂ ಕತೆ ಎನ್ನುವ ಪ್ರಕಾರವನ್ನೇ. ಗಾತ್ರದಿಂದ ಚಿಕ್ಕದಾದರೂ ಪ್ರಭಾವದಿಂದ ದೊಡ್ಡದಾಗಿರುವ ಈ ಕಥಾ ಪ್ರಕಾರವನ್ನು ಸತೀಶ್ ಶೆಟ್ಟಿ ತಮ್ಮದೇ ಶೈಲಿ, ಗ್ರಹಿಕೆ, ಕಥನಗಾರಿಕೆಯಲ್ಲಿ ದುಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂಕಲನ ಆ ನಿಟ್ಟಿನಲ್ಲಿ ಅವರ ಜಾಬ್ ಪ್ರೊಫೈಲ್ ಆಗಿದೆ. ಈ ಸಂಕಲನದಲ್ಲಿ ಕೊರತೆಗಳು ಇಲ್ಲವೆಂದಲ್ಲ, ಆದರೆ ಆ ಕೊರತೆಗಳನ್ನು ಕಾಲಕ್ರಮೇಣ ನೀಗಿಕೊಂಡು ಹೊಸ ಸಾಧ್ಯತೆಗಳನ್ನು ತಮಗೆ ತಾವೇ ಅನ್ವೇಷಣೆ ಮಾಡಿಕೊಳ್ಳುವ ಭರವಸೆಯನ್ನಂತೂ ಈ ಸಂಕಲನದಲ್ಲಿ ನೀಡಿದ್ದಾರೆ. ಅದಕ್ಕೆ ವಸ್ತುವೈವಿಧ್ಯತೆಯಲ್ಲಿ ಅವರು ತೋರಿದ ಧೈರ್ಯ, ಪಾತ್ರಪೋಷಣೆಯಲ್ಲಿ ತಳೆದಿರುವ ಶ್ರದ್ಧೆ ಸ್ಪಷ್ಟ ಸಾಕ್ಷಿ.
ಆದರೆ ಒಂದು ಕತೆ ಆಗುವಾಗ ಪ್ರಫೌಂಡ್ ನೆಸ್ ಬೇಕು, ಕೊಂಚವಾದರೂ ವಾಚ್ಯವಾಗಿಲ್ಲದಂತೆ ವಸ್ತು ನಿರ್ವಹಿಸುವ ಜಾಣ್ಮೆ ಬೇಕು, ಅತಿ ಸಂಕೇತ, ರೂಪಕಗಳಲ್ಲದೇ ಹೋದರೂ ಒಟ್ಟು ಕತೆಯಿಂದಾದರೂ ಅದನ್ನೊಂದು ರೂಪಕ ಆಗಿಸಬಲ್ಲ ಕಲೆಗಾರಿಕೆ ಬೇಕು. ಸ್ವಲ್ಪವಾದರೂ ಏನನ್ನೋ ಬಚ್ಚಿಟ್ಟುಕೊಂಡು, ಮತ್ತೆ ಮತ್ತೆ ಆ ಕತೆಯನ್ನು ಓದುವುದಕ್ಕೆ ಕರೆಯುವ ನಿಗೂಢತೆ ಬೇಕು, ನಾವು ಅತ್ಯುತ್ತಮ ಎಂದು ಕರೆಯುವ ಕನ್ನಡದ ಎಲ್ಲ ಕತೆಗಳಲ್ಲೂ ಈ ಅಂಶಗಳಿವೆ. ಆ ನಿಟ್ಟಿನಲ್ಲಿ ಯೋಚಿಸಿದರೆ ಇನ್ನೂ ಅತ್ಯುತ್ತಮ ಕತೆಗಳನ್ನು ನಾವು ಸತೀಶ್ ಶೆಟ್ಟಿ ಅವರಿಂದ ನಿರೀಕ್ಷಿಸಬಹುದು ಎನ್ನುವುದು ನನ್ನ ವಿನಮ್ರ ನಂಬಿಕೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ