ನೆಹರೂರ ಆಗಿನ ಜೀವನದೃಷ್ಟಿ ದ್ವಂದ್ವಗಳಿಂದ ಕೂಡಿತ್ತು. ಓದು, ಸಹವಾಸ, ಉಪನ್ಯಾಸ, ಸಂಪರ್ಕಗಳು ತಾತ್ವಿಕ ಪ್ರಜ್ಞೆಯನ್ನು ಸುಪ್ತವಾಗಿ ಪ್ರಭಾವಿಸಿದಂತೆ ಕಾಣಿಸುತ್ತಿದ್ದರೂ ಹೆಚ್ಚಿನ ಸಮಯ “ಆ ಕ್ಷಣದ ಸುಖ ನೆಮ್ಮದಿಯ” ನವಿರಾದ ಜೀವನ ಹಿತಕರ ಅನುಭವ ಹುಡುಕಾಟದಲ್ಲಿ ಮುಳುಗಿತ್ತು. ಹತ್ತೊಂಭತ್ತನೆಯ ಶತಮಾನದ ಮುಕ್ತಾಯಕ್ಕಿಂತ ಮೊದಲು ಬರೆಯುತ್ತಿದ್ದ ಆಸ್ಕರ್ ವೈಲ್ಡ್, ವಾಟರ್ ಪೇಟರ್ ರಿಂದ ಜನಪ್ರಿಯವಾದ ನವಿರು ಬದುಕಿನ ಹಂಬಲ ಅವರನ್ನು ಸೋಂಕಿತ್ತು. ರಾಷ್ಟ್ರೀಯತೆ, ಸ್ವಾತಂತ್ಯ್ರ ಸಂಗ್ರಾಮದ ಒಲವು ಸೆಳೆತಗಳು ಆರಂಭವಾಗಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಕುರಿತ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ.

“ಸಮತಾವಾದಿ, ಕ್ರಾಂತಿಕಾರಿ, ಅತ್ಯಂತ ಸಮರ್ಥ ಮತ್ತು ಬ್ರಿಟಿಷ್ ರಾಜ್ ನ ಕಡುವಿರೋಧಿ” ಎಂದು 1937ರಲ್ಲಿ ನೆಹರೂ ಅವರನ್ನು ವಿನ್ಸ್‌ಟನ್ ಚರ್ಚಿಲ್ ವರ್ಣಿಸಿದ್ದರು. ಚರ್ಚಿಲ್ ಒಬ್ಬ ಬ್ರಿಟಿಷ್ ರಾಜನೀತಿಜ್ಞ, ಸೇನಾನಿ, ಬರಹಗಾರ ಮತ್ತೆ 1940ರಿಂದ 45ರ ತನಕ, 1951ರಿಂದ 55ರ ತನಕದ ಎರಡು ಅವಧಿಗಳಿಗೆ ಬ್ರಿಟನ್ನಿನ ಪ್ರಧಾನಿಯಾಗಿದ್ದವರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪ್ರತಿನಿಧಿ ಮತ್ತು ಪ್ರಭಾವಿ ವ್ಯಕ್ತಿ ಚರ್ಚಿಲ್, ತೀವ್ರ ಪ್ರತಿರೋಧ ಹಾಗು ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ತಮ್ಮ ವಸಾಹತೊಂದರ ವಿರೋಧಿ ನಾಯಕನನ್ನು ಹೀಗೆ ವಿವರಿಸಿದ್ದು ಅವರ, ಕೆಲವೊಮ್ಮೆ ವಿಲಕ್ಷಣ ಮತ್ತೆ ಕೆಲವೊಮ್ಮೆ ಉದಾರ ಎನಿಸುವ ವ್ಯಕ್ತಿತ್ವದಿಂದ ಇರಬೇಕು.

ಆ ಕಾಲದ ಬಹುತೇಕ ಬ್ರಿಟಿಷ್ ರಾಜಕಾರಣಿಗಳು ಮತ್ತು ಸಾಮ್ರಾಜ್ಯದ ರಕ್ಷಕರು, ನೆಹರೂ ಬಗೆಗಿನ ಚರ್ಚಿಲ್‌ರ ಅಭಿಮತವನ್ನು ಅಲ್ಲಗಳೆಯಲಾರರು. ವಿಶೇಷ ಎಂದರೆ ಚರ್ಚಿಲ್ ಹಾಗು ನೆಹರೂ ಇಂಗ್ಲೆಂಡ್ ನ ಒಂದೇ ಹೈಸ್ಕೂಲ್‌ನಲ್ಲಿ ಓದಿದವರು. ಶಾಲಾ ಜೀವನದಲ್ಲಿ ಒಬ್ಬರಿಗೊಬ್ಬರು ಪರಿಚಿತರಾಗುವುದು ಅಸಾಧ್ಯವಾದ ವಯಸ್ಸಿನ ಅಂತರ ಅವರದು, ಚರ್ಚಿಲ್ ಅವರು ನೆಹರೂಗಿಂತ ಮೊದಲೇ ಅದೇ ಶಾಲೆಯಿಂದ ಪಾಸಾಗಿ ಹೋದವರು.

ಸಂಪೂರ್ಣ ಆಂಗ್ಲೀಕರಣಗೊಂಡಿದ್ದ, ಇಂಗ್ಲಿಷ್ ಸಂಸ್ಕೃತಿಯ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಕುಟುಂಬವೊಂದು ಕಾಲ ಸಂದರ್ಭಗಳ ತಿರುವಿನಲ್ಲಿ ಬ್ರಿಟಿಷರ ಶತ್ರುವಾಗಿದ್ದು ಭಾರತೀಯ ಸ್ವಾತಂತ್ಯ್ರಪೂರ್ವ ಚರಿತ್ರೆಯೊಳಗಿನ ಮಾತ್ರವಲ್ಲದೇ ಬ್ರಿಟಿಷ್ ಸಾಮ್ರಾಜ್ಯಶಾಹಿ ಇತಿಹಾಸದೊಳಗಿನ ಒಂದು ವೈರುಧ್ಯವೇ ಇರಬೇಕು. ಜವಾಹರರ ತಂದೆ ಮೋತಿಲಾಲ್ ನೆಹರು, ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಲಾಭದಾಯಕ ವಕೀಲಿಕೆ ನಡೆಸುತ್ತಿದ್ದರು. ಹಿಂದು ಸಾಂಪ್ರದಾಯಿಕತೆಯ ವಿರುದ್ಧ ವಾದಿಸುತ್ತಿದ್ದವರು. ವಿದೇಶ ಪ್ರವಾಸದ ಮೇಲಿದ್ದ ಜಾತಿ ನಿಷೇಧವನ್ನು ಪ್ರಶ್ನಿಸುತ್ತಿದ್ದವರು. ಅವರ ಉಡುಗೆ ತೊಡುಗೆ, ಜೀವನ, ಒಳನೋಟ, ಹೊರನೋಟ ಎಲ್ಲವೂ ಆಂಗ್ಲಮಯ ಆಗಿದ್ದವು. ನೆಹರೂರ ಮನೆಯಲ್ಲಿ ಆಧುನೀಕರಣದ ಪ್ರಕ್ರಿಯೆ ಬರೇ ಆಂಗ್ಲ ಮಾದರಿಯ ಪೀಠೋಪಕರಣಗಳು, ಊಟಕ್ಕೆ ಬಳಸುವಂತಹ ಚಮಚ ಚೂರಿ ಫೋರ್ಕ್ ತಟ್ಟೆ ಬಟ್ಟಲು, ಧರಿಸುತ್ತಿದ್ದ ಟೈ ಶೂ ಕೋಟುಗಳಿಗೆ ಮಾತ್ರ ಸೀಮಿತ ಆಗಿರದೇ, ಮನೆಕೆಲಸದವರು, ಮನೆಪಾಠ ಹೇಳುವ ಶಿಕ್ಷಕರು ಕೂಡ ಯುರೋಪ್ ಮೂಲದವರು ಆಗಿದ್ದರು.

ಮೋತಿಲಾಲರು ಸ್ವತಃ ಕೇಂಬ್ರಿಜ್ ಅಲ್ಲಿ ಪದವೀಧರರಾದವರು. ಹಿರಿಯ ಬ್ರಿಟಿಷ್ ಅಧಿಕಾರಿಗಳು ಮೋತಿಲಾಲರ ಸಾಂಗತ್ಯವನ್ನು, ಔದಾರ್ಯವನ್ನು ಮೆಚ್ಚಿಕೊಳ್ಳುತ್ತಿದ್ದರು. ತಮ್ಮ ಭೇಟಿಗಳಲ್ಲಿ ಅವರ ಆಂಗ್ಲ ಪ್ರೇಮ ಹೇಗೆ ಉಕ್ಕಿ ಹರಿಯುತ್ತಿತ್ತು, ಜೊತೆಗೆ ಶಾಂಪೇನ್ ನಂತಹ ವಿದೇಶಿ ಪಾನೀಯಗಳ ಹೊಳೆ ಕೂಡ, ಎಂದು ಮೆಲುಕು ಹಾಕುತ್ತಿದ್ದವರು. “ಆಂಗ್ಲ” ಎನ್ನುವ ಎಲ್ಲವನ್ನೂ ಇಷ್ಟ ಪಡುತ್ತಿದ್ದ ಮೋತಿಲಾಲರು ಏಕೈಕ ಮಗನನ್ನು ಲಂಡನ್ ನ ಹ್ಯಾರೋ ಹಾಗು ಕೇಂಬ್ರಿಜ್ ಗಳಿಗೆ ವ್ಯಾಸಾಂಗಕ್ಕಾಗಿ ಕಳುಹಿಸಿದ್ದರಲ್ಲಿ ಆಶ್ಚರ್ಯ ಇಲ್ಲ. ತನ್ನ ಮಗ ಮುಂದೆ ಬ್ರಿಟಿಷ್ ಅಧಿಪತ್ಯದ ಸರಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವನು, ಎಂಬ ಕನಸು ಅವರದಾಗಿತ್ತು.

ಮಗ ಜವಾಹರರಿಗೆ ಹದಿನೈದು ವರ್ಷ ಆಗಿದ್ದಾಗ ವಿಲಾಯತಿಗೆ ಹೋಗಬೇಕಾಯಿತು. 1905ರಲ್ಲಿ “ಇಂಗ್ಲೆಂಡ್ ವಿದ್ಯಾಭ್ಯಾಸ” ಆರಂಭವಾಯಿತು. ಭಾರತದಲ್ಲಿನ ಮನೆಪಾಠದಿಂದ ಇಂಗ್ಲೆಂಡ್ ನ ಶಾಲಾ ಶಿಕ್ಷಣಕ್ಕೆ ಬದಲಾಗುವುದು ಶುರುಶುರುವಿಗೆ ಕಷ್ಟ ಆಯಿತು. ಪಶ್ಚಿಮ ಲಂಡನ್ ನ ಹ್ಯಾರೋ ಪ್ರದೇಶದ ಪ್ರತಿಷ್ಠಿತ ಶಾಲೆ ಅದು. ಅಲ್ಲಿ ಓದಿದವರಲ್ಲಿ ಕಲಾವಿದರಾದವರು, ಪ್ರಧಾನಿಗಳಾದವರು, ನೊಬೆಲ್ ಪ್ರಶಸ್ತಿ ಪಡೆದವರು ಇದ್ದರು. ನೆಹರು ಅಲ್ಲಿ ಸೇರುವ ಹದಿನೈದು ವರ್ಷಗಳ ಮೊದಲು ಚರ್ಚಿಲ್ ಅದೇ ಶಾಲೆಯಲ್ಲಿ ಓದಿ ರಾಯಲ್ ಮಿಲಿಟರಿ ಅಕಾಡೆಮಿ ಸೇರಿದ್ದರು. ಭಾಷಾ ತಜ್ಞ, ನ್ಯಾಯಶಾಸ್ತ್ರ ಪರಿಣಿತ, ಕೋಲ್ಕತ್ತ ಹೈಕೋರ್ಟ್ ಅಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಸರ್ ವಿಲಿಯಮ್ ಜೋನ್ಸ್ ಕೂಡ ಅದೇ ಶಾಲೆಯ ಹಳೆಯ ವಿದ್ಯಾರ್ಥಿ. ತನ್ನ ಸಮಯವನ್ನು ಕ್ರಿಕೆಟ್ ಫುಟ್ಬಾಲ್ ಆಸಕ್ತಿಗಳಲ್ಲಿ ಕಳೆಯುತ್ತಾ, ಜಾರ್ಜ್ ಬರ್ನಾರ್ಡ್ ಷಾ ರ ಬರವಣಿಗೆಗಳನ್ನು ಓದುತ್ತ, ತಂದೆ ಕಳುಹಿಸಿದ ಭಾರತದ ಸುದ್ದಿಪತ್ರಿಕೆಗಳ ತುಣುಕುಗಳನ್ನು ಓದುತ್ತ ಸಮಯ ಕಳೆಯುತ್ತಿದ್ದವರು ನೆಹರೂ. ತಮ್ಮ ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ವಿಲಿಯಂ ಜೋನ್ಸ್ ರ ಸಾಂಸ್ಥಿಕ ವ್ಯವಸ್ಥೆಗಳಲ್ಲಿನ ನಂಬಿಕೆಗಳು ಹಾಗು ಚರ್ಚಿಲ್ ರ ದೇಶವನ್ನು ಮರುಶೋಧಿಸುವ ಗುಣ ಎರಡೂ ನೆಹರೂರಲ್ಲಿಯೂ ಜಾಗೃತವಾಗುತ್ತಿದ್ದವು. ಹ್ಯಾರೋ ಶಾಲೆಯ ಅಧ್ಯಾಪಕರಿಗೆ ನೆಹರೂರ ಶೈಕ್ಷಣಿಕ ಪ್ರಗತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಬರೇ ಹದಿನಾರು ವರ್ಷದವರಿರುವಾಗ ತಂದೆಗೆ ಬರೆದ ಪತ್ರಗಳಲ್ಲಿ ದೇಶಭಕ್ತಿಯ ಸ್ಪೂರ್ತಿಯ ಸಣ್ಣ ಸೆಲೆ ಕಾಣಿಸುತ್ತಿತ್ತು. ಹ್ಯಾರೋದ ಜೀವನ, ನೆಹರೂರನ್ನು ಪೂರ್ವ ಪಶ್ಚಿಮಗಳ ಸಮಪಾಕದಲ್ಲಿ ಬೆಳೆಸುತ್ತಿತ್ತು. ಐರಿಶ್ ಹೋಂ ರೂಲ್ ಚಳವಳಿ ಮತ್ತು ಗಿಸಿಸಿಪಿ ಗ್ಯಾರಿಬಾಲ್ಡಿಯ ಜೀವನ ಕಥನಗಳು ಭಾರತೀಯ ಸ್ವಾತಂತ್ಯ್ರ ಚಳವಳಿಯ ಹತ್ತಿರ ಎಳೆತರಲು ಸಹಾಯ ಮಾಡಿದವು. ಇಟಲಿಯ ಕ್ರಾಂತಿಕಾರಿ ದೇಶಭಕ್ತ, ದೇಶದ ಏಕೀಕರಣಕ್ಕಾಕಿ ಹೋರಾಡಿದ ಗ್ಯಾರಿಬಾಲ್ಡಿಯ ಆತ್ಮಕತೆಯನ್ನು ಬರೆದು ಶಾಲೆಯಲ್ಲಿ ಬಹುಮಾನವನ್ನು ಪಡೆದಿದ್ದರು.

1907ರಲ್ಲಿ ನೆಹರು, ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಮುಂದಿನ ವ್ಯಾಸಂಗಕ್ಕೆ ತೆರಳಿದರು. ಚರ್ಚಾ ಸಮುದಾಯದ ಸದಸ್ಯರಾಗಿದ್ದರು. ಇಲ್ಲಿರುವಾಗಲೇ ಕಾಂಗ್ರೆಸ್ ನ ತೀವ್ರವಾದಿ ಬಿಪಿನ್ ಚಂದ್ರ ಪಾಲರ ಸಂಪರ್ಕಕ್ಕೆ ಬಂದರು. ಕೇಂಬ್ರಿಜ್ ನಲ್ಲಿ ಪಾಲ್ ರ ನಾಟಕೀಯ ಶೈಲಿಯ ಭಾಷಣ ಭಾರತೀಯ ಆಗುಹೋಗುಗಳಿಗೆ ಬಹುತೇಕ ಕಿವುಡಾಗಿದ್ದ ನೆಹರೂರ ಕಿವಿಯನ್ನು ತಟ್ಟಿ ಮನಸ್ಸನ್ನು ಮುಟ್ಟಿತ್ತು. “ಸಭಾಭವನದಲ್ಲಿ ಕಿವಿಗಡಚಿಕ್ಕುವ ಸದ್ದು ಇದ್ದುದರಿಂದ ಭಾಷಣ ಪೂರ್ತಿಯಾಗಿ ಕೇಳಿಸಲಿಲ್ಲ” ಎಂದು ಕಾರ್ಯಕ್ರಮ ಮುಗಿದ ನಂತರ ನೆಹರು ಹೇಳಿದ್ದರು. ಲಾಲಾ ಲಜಪತ್ ರಾಯ್ ಹಾಗು ಗೋಪಾಲಕೃಷ್ಣ ಗೋಖಲೆಯರ ಪ್ರಖರ ಭಾಷಣಗಳನ್ನೂ ಕೇಳಿದ್ದರು. ನೆಹರು, ಗಾಂಧಿ ಸಾಗಿದ ಹಾದಿಯಲ್ಲಿ ಇನ್ನೊಂದು ದಿಕ್ಕಿನಿಂದ ನಡೆದವರಿರಬೇಕು. ಬಹಳ ಬೇಗ, ಅಂದರೆ ಯೌವ್ವನದ ದಿನಗಳಲ್ಲೇ ಸಮತಾವಾದ ಸಾಮರಸ್ಯ ವಿಶ್ವಭ್ರಾತೃತ್ವದಂತಹ ತತ್ವಗಳ ವಶಕ್ಕೆ ಒಳಗಾಗಿದ್ದರು, ಆದರೆ ಬ್ರಿಟನ್ನಿನಲ್ಲಿ ಅಲ್ಲ ಭಾರತಕ್ಕೆ ಮರಳಿದ ಮೇಲೆ. ಗಾಂಧೀಜಿ ಬ್ರಿಟನ್ನಿನಲ್ಲಿ ಥಿಯೊಸಾಫಿಕಲ್ ಸಮಾಜದ ಚಿಂತನೆಗಳ ಸಂಪರ್ಕಕ್ಕೆ ಬಂದಿದ್ದರೆ, ನೆಹರು ಅವರ ಲಂಡನ್ ದಿನಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಎಫ್. ಟಿ. ಬ್ರೂಕ್ ಮತ್ತು ಅನ್ನಿ ಬೆಸೆಂಟರ ಸಾಂಗತ್ಯ ಇದ್ದರೂ ಥಿಯೊಸಾಫಿಕಲ್ ಚಿಂತನೆಗಳನ್ನು ಅವರು ತುಸು ದೂರ ಇಟ್ಟಿದ್ದರು. ಹ್ಯಾರೋದ ಹೈಸ್ಕೂಲ್ ಓದುತ್ತಿದ್ದಾಗ ಬರೋಡಾದ ಗಾಯಕ್ವಾಡರ ಮಗ ಮತ್ತು ಪರಮಜಿತ್ ಸಿಂಗರನ್ನು ಭೇಟಿ ಆಗಿದ್ದರು. ಹ್ಯಾವೆಲ್ವ್ಕ್ ಎಲ್ಲಿಸ್ ಮತ್ತು ಕ್ರಾಫ್ಟ್ ಎಬ್ಬಿಂಗ್ ಬರೆದ ಲೈಂಗಿಕ ಶಾಸ್ತ್ರವನ್ನು ಓದಿದ್ದರು. ಉದಾರವಾದಿ ಚಿಂತನೆಯ ಬ್ರಿಟಿಷ್ ರಾಜಕಾರಣಿ ಎಡ್ವಿನ್ ಮೊಂಟಾಗುರನ್ನು ಭೇಟಿ ಆಗಿದ್ದರು.

ತಮ್ಮ ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ವಿಲಿಯಂ ಜೋನ್ಸ್ ರ ಸಾಂಸ್ಥಿಕ ವ್ಯವಸ್ಥೆಗಳಲ್ಲಿನ ನಂಬಿಕೆಗಳು ಹಾಗು ಚರ್ಚಿಲ್ ರ ದೇಶವನ್ನು ಮರುಶೋಧಿಸುವ ಗುಣ ಎರಡೂ ನೆಹರೂರಲ್ಲಿಯೂ ಜಾಗೃತವಾಗುತ್ತಿದ್ದವು. ಹ್ಯಾರೋ ಶಾಲೆಯ ಅಧ್ಯಾಪಕರಿಗೆ ನೆಹರೂರ ಶೈಕ್ಷಣಿಕ ಪ್ರಗತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಬರೇ ಹದಿನಾರು ವರ್ಷದವರಿರುವಾಗ ತಂದೆಗೆ ಬರೆದ ಪತ್ರಗಳಲ್ಲಿ ದೇಶಭಕ್ತಿಯ ಸ್ಪೂರ್ತಿಯ ಸಣ್ಣ ಸೆಲೆ ಕಾಣಿಸುತ್ತಿತ್ತು.

ನೆಹರೂರ ಆಗಿನ ಜೀವನದೃಷ್ಟಿ ದ್ವಂದ್ವಗಳಿಂದ ಕೂಡಿತ್ತು. ಓದು, ಸಹವಾಸ, ಉಪನ್ಯಾಸ, ಸಂಪರ್ಕಗಳು ತಾತ್ವಿಕ ಪ್ರಜ್ಞೆಯನ್ನು ಸುಪ್ತವಾಗಿ ಪ್ರಭಾವಿಸಿದಂತೆ ಕಾಣಿಸುತ್ತಿದ್ದರೂ ಹೆಚ್ಚಿನ ಸಮಯ “ಆ ಕ್ಷಣದ ಸುಖ ನೆಮ್ಮದಿಯ” ನವಿರಾದ ಜೀವನ ಹಿತಕರ ಅನುಭವ ಹುಡುಕಾಟದಲ್ಲಿ ಮುಳುಗಿತ್ತು. ಹತ್ತೊಂಭತ್ತನೆಯ ಶತಮಾನದ ಮುಕ್ತಾಯಕ್ಕಿಂತ ಮೊದಲು ಬರೆಯುತ್ತಿದ್ದ ಆಸ್ಕರ್ ವೈಲ್ಡ್, ವಾಟರ್ ಪೇಟರ್ ರಿಂದ ಜನಪ್ರಿಯವಾದ ನವಿರು ಬದುಕಿನ ಹಂಬಲ ಅವರನ್ನು ಸೋಂಕಿತ್ತು. ರಾಷ್ಟ್ರೀಯತೆ, ಸ್ವಾತಂತ್ಯ್ರ ಸಂಗ್ರಾಮದ ಒಲವು ಸೆಳೆತಗಳು ಆರಂಭ ಆಗಿದ್ದರೂ ಅವರ ಪೂರ್ಣ ವ್ಯಕ್ತಿತ್ವ ಚಿಂತನೆಗಳನ್ನು ಆಗಿನ್ನೂ ಆವರಿಸಿರಲಿಲ್ಲ. ಕೇಂಬ್ರಿಜ್ ಓದನ್ನು ಮುಗಿಸಿ ಲಂಡನ್ ನಲ್ಲಿ ನ್ಯಾಯಶಾಸ್ತ್ರವನ್ನು ಬೋಧಿಸುವ ಸಂಸ್ಥೆಯಾದ “ಇನ್ನರ್ ಟೆಂಪಲ್” ಅಲ್ಲಿ ಶಿಕ್ಷಣ ಪಡೆಯಲಾರಂಭಿಸಿದರು. ನ್ಯಾಯಶಾಸ್ತ್ರವನ್ನು ಬೋಧಿಸುವ ನಾಲ್ಕು ಸಂಸ್ಥೆಗಳಲ್ಲಿ “ಇನ್ನರ್ ಟೆಂಪಲ್” ಕೂಡ ಒಂದು. ಭಾರತದಿಂದ ವಕೀಲಿಕೆ ಓದಲು ಬಂದ ಹಲವರು ಇದೇ ಸಂಸ್ಥೆಯಲ್ಲಿ ಜ್ಞಾನ ಪಡೆದವರು.

1911ರ ಹೊತ್ತಿಗೆ ಲಂಡನ್ ವಾಸ ಬೇಡ ಅನಿಸಲು ಶುರು ಆಗಿತ್ತು. “ಕಳೆದ ಕ್ರಿಸ್ಮಸ್ ನಿಂದ ನಾನು ಲಂಡನ್ ನ ಹೊರಗೆಲ್ಲೂ ಹೋಗಿಲ್ಲ, ಇನ್ನಿಲ್ಲದಷ್ಟು ಬೇಸತ್ತು ಹೋಗಿದ್ದೇನೆ. ಸದ್ಯದಲ್ಲಿ ಎಲ್ಲಾದರೂ ಹೋಗುತ್ತೇನೆ, ಆದರೆ ಒಂದಿಲ್ಲೊಂದು ಅಡ್ಡಿ ಎದುರಾಗುತ್ತದೆ ಮತ್ತೆ ಇಲ್ಲೇ ಉಳಿಯಬೇಕಾಗುತ್ತದೆ” ಎಂದು ನ್ಯಾಯಾಂಗದ ಓದಿನ ನಡುವೆ ತಂದೆಗೆ ಬರೆದಿದ್ದರು. ತಂದೆಗೆ, ಮಗಳಿಗೆ, ಗೆಳೆಯರಿಗೆ ಮತ್ತೆ ಭಾರತದ ಪ್ರಥಮ ಪ್ರಧಾನಿಯಾದ ಮೇಲೆ ರಾಜ್ಯದ ಮುಖ್ಯಮಂತ್ರಿಗಳಿಗೆ, ಹೀಗೆ ಜೀವನದುದ್ದಕ್ಕೂ ಅನೇಕ ಪತ್ರಗಳನ್ನು ಬರೆದು ಆಪ್ತವಾಗಿ ಸಂವಾದಿಸುತ್ತಿದ್ದ ನೆಹರು ಅವರ “ಪತ್ರಪರಂಪರೆ” ಗೆ ಸೂಕ್ತ ಚಾಲನೆ ಸಿಕ್ಕಿದ್ದು ಲಂಡನ್ ನಲ್ಲಿಯೇ, ಮತ್ತೆ ಆ ಮೊದಮೊದಲ ಪತ್ರಗಳು ಪೋಸ್ಟ್ ಆಗುತ್ತಿದ್ದುದು ಲಂಡನ್ ನ ಯಾಕೆ ಇಡೀ ಬ್ರಿಟನ್ನಿನ ಬೀದಿ ಬದಿಗಳಲ್ಲಿ ಈಗಲೂ ಕಾಣಿಸುವ ಕೆಂಪು ಸ್ಥಿರ ಪೋಸ್ಟ್ ಡಬ್ಬಿಗಳಿಂದಲೇ.

“ಇನ್ನರ್ ಟೆಂಪಲ್” ಸೇರಿದ ಮೇಲೆ ಬ್ರಿಟಿಷ್ ಸಮಾಜವಾದಿ ಸಂಘಟನೆಗಳ ಅಸಮ್ಮತಿಯ ಹಾಡುಗಳು ನೆರೆಹೊರೆಯಲ್ಲಿ ಕೇಳಿಸುತ್ತಿದ್ದವು. “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್” ಅಲ್ಲಿ ಕೆಲವು ಉಪನ್ಯಾಸಗಳನ್ನು ಕೇಳುವಾಗ ಅವರೊಳಗೆ ರಾಜಕೀಯ ಪ್ರಜ್ಞೆ ಬಲವಾಗುತ್ತಿತ್ತು. ಆಗಿನ ಲಂಡನ್ ಅಲ್ಲಿ ನೆಹರೂರವರ ಹಲವು ಗೆಳೆಯರಲ್ಲಿ, ಖಾನ್ ಅಬ್ದುಲ್ ಜಬ್ಬಾರ್ ಖಾನ್ ಕೂಡ ಒಬ್ಬರು. “ಗಡಿನಾಡ ಗಾಂಧಿ”, ಖಾನ್ ಅಬ್ದುಲ್ ಗಫಾರ್ ಖಾನರ ಕಿರಿಯ ಸಹೋದರ, ಲಂಡನ್ನಿನ ಸಂತ ಥಾಮಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದವರು.

1910-12 ರ ನಡುವೆ ಲಂಡನ್ ನ ಕೆನ್ಸಿಂಗ್ಟನ್ ಪ್ರಾಂತ್ಯದ ಎಲ್ಜಿನ್ ಕ್ರೆಸೆಂಟ್ ನ 60ನೆಯ ನಂಬ್ರದ ಮನೆ ನೆಹರೂರವರ ವಾಸ್ತ್ಯವ್ಯವಾಗಿತ್ತು. 1911ರಲ್ಲಿ ಲಂಡನ್ ನ ಹೈಡ್ ಪಾರ್ಕ್ ಹತ್ತಿರದ ವಸತಿಯಲ್ಲೂ ಅಲ್ಪಕಾಲ ತಂಗಿದ್ದರು. ಲಂಡನ್ ವಾಸದ ಅವರ ವೆಚ್ಚ ತಂದೆಗೆ ಮೋತಿಲಾಲರಿಗೆ ದಿಗ್ಭ್ರಮೆ ಉಂಟು ಮಾಡಿತ್ತು. ತಂದೆಯಲ್ಲಿ ಕ್ಷಮೆ ಕೋರುತ್ತ “ಇತ್ತೀಚಿಗೆ ನಾನು ಅತಿಯಾಗಿ ಖರ್ಚು ಮಾಡುತ್ತ, ಓದಿನ ಕಡೆ ಸಾಕಷ್ಟು ಗಮನ ಹರಿಸದಿರುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ನನಗಿಂತ ಅತಿಯಾಗಿ ವೆಚ್ಚ ಮಾಡಬಲ್ಲ ಕೆಲವರ ಪರಿಚಯ ಆಗಿದೆ, ಪರಿಣಾಮ ನಾನೂ ಕೆಲವೊಮ್ಮೆ ಯೋಚಿಸದೇ ಮಿತಿಮೀರಿ ವ್ಯಯಿಸಿದ್ದೇನೆ” ಎಂದು ಪತ್ರ ಬರೆದಿದ್ದರು. 1912ರಲ್ಲಿ ಲಂಡನ್ ನ ವಕೀಲರ ಸಂಘಕ್ಕೆ ಆಹ್ವಾನವಿದ್ದರೂ, ನ್ಯಾಯಾಲಯ, ವಕೀಲರು, ನ್ಯಾಯಾಂಗ ತರಬೇತಿಗಳು ಅವರಿಗೆ ಆಸಕ್ತಿಯ ವಿಷಯಗಳಾಗಿರಲಿಲ್ಲ. ಇನ್ನರ್ ಟೆಂಪಲ್ ಸಂಸ್ಥೆಯ ಸುದ್ದಿಪತ್ರಿಕೆಯಲ್ಲಿ “ವಕೀಲಿಯ ಓದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿರಲಿಲ್ಲ, ನ್ಯಾಯಾಂಗ ಪರೀಕ್ಷೆಗಳನ್ನು ಒಂದರ ನಂತರ ಇನ್ನೊಂದು ದೊಡ್ಡ ಕೀರ್ತಿ ಬರುವಂತೆಯೂ ಅಲ್ಲದೆ ಅಗೌರವ ದೊರೆಯುವಂತೆಯೂ ಅಲ್ಲದ ರೀತಿಯಲ್ಲಿ ಉತ್ತೀರ್ಣನಾದೆ” ಎಂದು ತಮ್ಮ ನಿರಾಸಕ್ತಿಯನ್ನು ಬಯಲುಗೊಳಿಸಿ ಬರೆದಿದ್ದರು.

ನೆಹರೂರ ಏಳು ವರ್ಷಗಳ ಬ್ರಿಟನ್ ವಾಸದ ಮಹತ್ವದ ಅಧ್ಯಾಯ ಅವರ ವಿದ್ಯಾರ್ಥಿ ಜೀವನದ ವಿಶೇಷ ಅನುಭವಗಳಿಂದ ಕೂಡಿದೆ. ಆಂಗ್ಲ ಸಂಸ್ಕೃತಿಯನ್ನೇ ಮೈಮನಗಳಲ್ಲಿ ನೆಚ್ಚಿಕೊಂಡ ಸಿರಿವಂತರ ಮನೆಯ ಒಬ್ಬ ಭಾರತೀಯ ವಿದ್ಯಾರ್ಥಿ, ಮೌನವಾಗಿಯೇ ನಿಧಾನವಾಗಿಯೇ ಆದರೂ ರಾಜಕೀಯ ಚಿಂತಕನಾಗಿ ರೂಪುಗೊಳ್ಳುವುದು, ಇತರ ಭಾರತೀಯ ವಿದ್ಯಾರ್ಥಿಗಳ ಜೊತೆ ಬೆರೆತು ಭಾರತೀಯತೆಯ ಪ್ರಜ್ಞೆ ಸಂವೇದನೆಗಳನ್ನು ಹರಿತಗೊಳಿಸಿಕೊಳ್ಳುವುದು ಆ ವಿದ್ಯಾರ್ಥಿ ಜೀವನದ ಮುಖ್ಯಾಂಶಗಳಿರಬೇಕು. ಲಂಡನ್ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿದ ಮೇಲೆ ಬ್ರಿಟನ್ ಗೆ ನೆಹರೂ ಹಲವು ಬಾರಿ ಭೇಟಿ ಕೊಟ್ಟಿದ್ದರು. ರಾಜಕೀಯ ಚರ್ಚೆಗಳ ಕಾರಣಕ್ಕೆ, ಸರಕಾರಿ ಕೆಲಸಕ್ಕೆ ಅಲ್ಲದಿದ್ದರೆ ಮಗಳು ಇಂದಿರಾಳನ್ನು 1930ರಲ್ಲಿ ಶಾಲೆಗೆ ಸೇರಿಸಲಿಕ್ಕೆ. 1926-27ರ ಯುರೋಪ್ ಪ್ರವಾಸ ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳಿಗೆ ಹೊಸ ಅಲಗನ್ನು ನೀಡಿತು. ಆ ಚಿಂತನೆಗಳ ಪ್ರಭಾವದಲ್ಲೇ ಭಾರತಕ್ಕೆ ಮರಳಿದವರು ವಿದ್ಯಾರ್ಥಿಗಳನ್ನು ಕಾರ್ಮಿಕರನ್ನು ಹಿಂದಿಗಿಂತ ಹೆಚ್ಚು ಸಶಕ್ತವಾಗಿ ಸಂಘಟಿಸಿದರು.

ಬ್ರಿಟನ್ ಮತ್ತು ಯೂರೋಪಿನ ಅನುಭವಗಳಿಂದ ಪ್ರೇರಿತವಾದ ಆರ್ಥಿಕ ನೀತಿಗಳು ರಾಜಕೀಯ ದೂರದರ್ಶಿತ್ವ ಕಾಲವನ್ನು ಮೀರಿ ಈಗಲೂ ಭಾರತದಲ್ಲಿ ಉಸಿರಾಡಿಕೊಂಡಿವೆ, ಸಾಮಾಜಿಕ ಆರ್ಥಿಕ ಜನಜೀವನದೊಳಗೆ ಸದ್ದಿಲ್ಲದೇ ಸೇರಿಹೋಗಿವೆ.

ಏಳು ವರ್ಷಗಳ ಲಂಡನ್ ನ ಓದಿನ ಸಮಯದಲ್ಲಿ, ಸುಮಾರು ಎರಡು ವರ್ಷ ಕಾಲ ವಾಸಿಸಿದ ಎಲ್ಜಿನ್ ಕ್ರೆಸೆಂಟ್ ನ 60ನೆಯ ನಂಬ್ರದ ಮನೆಯ ಗೋಡೆಯ ಮೇಲೆ ಸ್ಮರಣೆಯ ನೀಲಿ ಫಲಕವನ್ನು ನೆಡಲಾಗಿದೆ. ಬೀದಿಯಲ್ಲಿ ಸಂಚರಿಸುವವರಿಗೆ “ಭಾರತದ ಮೊದಲ ಪ್ರಧಾನಿ ಇಲ್ಲಿದ್ದರು” ಎಂದೂ ನೆನಪಿಸುತ್ತದೆ. ಅವರನ್ನು ರೂಪಿಸಿದ ಲಂಡನ್ ವಿದ್ಯಾರ್ಥಿ ಜೀವನ ಹೀಗಿತ್ತು ಎಂದು, ಎಂದೋ ಸಾಗಿದ ದಿಕ್ಕನ್ನು ಸವೆದ ಹಾದಿಯನ್ನು ತೋರಿಸುತ್ತದೆ.