“ಸರಯೆವೊದ ಲ್ಯಾಟಿನ್ ಬ್ರಿಡ್ಜ್ ಎಂಬ ಸೇತುವೆಯ ಮೇಲೆ ಹಂಗೇರಿಯ ರಾಜಕುಮಾರ ಮತ್ತು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಆರ್ಚ್ ಡ್ಯೂಕ್ ಆಗಿದ್ದ ಫ್ರಾನ್ಝ್ ಫರ್ಡಿನಾಂಡ್ ನನ್ನು ಗ್ಯಾವ್ರಿಲೋ ಪ್ರಿನ್ಸಿಪ್ ಎಂಬ ಸ್ವಾತಂತ್ರ್ಯ ಹೋರಾಟಗಾರ ಗುಂಡಿಟ್ಟುಕೊಂದ. ಆ ಹತ್ಯೆಯೇ ಮೊದಲ ಮಹಾಯುದ್ಧಕ್ಕೆ ದಾರಿಮಾಡಿಕೊಟ್ಟಿತು. ಯುದ್ಧ ಮುಗಿದು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದಿಂದ ದೊರೆತ ಸ್ವಾತಂತ್ರ್ಯಾನಂತರ ಯುಗೋಸ್ಲಾವಿಯ ಒಂದು ದೇಶವಾಗಿ ಉಳಿಯಿತು.”
ಸೀಮಾ ಎಸ್ ಹೆಗಡೆ ಬರೆಯುವ ಪ್ರವಾಸ ಕಥನ.

ಚಳಿಗಾಲ ಮುಗಿದು ವಸಂತ ಕಾಲಿಡುತ್ತಿದ್ದಂತೆಯೇ ವಾರಾಂತ್ಯ ಬಂತೆಂದರೆ ನಾವು ಯಾವುದೊ ದೇಶಸುತ್ತಲು ಹೊರಡುವುದು ರೂಢಿಯಾಗಿಬಿಟ್ಟಿದೆ. ಬೇಸಿಗೆಯ ಸಮಯದಲ್ಲಿ ಸುತ್ತಿದ್ದಷ್ಟೇ ಬಂತು, ಒಮ್ಮೆ ಚಳಿ ಶುರುವಾಯಿತೆಂದರೆ ಮನೆಯಿಂದ ಹೊರಬೀಳಬೇಕೆನಿಸುವುದಿಲ್ಲ. ನಾವು ಈ ರೀತಿ ಸುತ್ತುವುದನ್ನು ಕೇಳಿ ಕೇಳಿ ನನ್ನ ಅಮ್ಮನಿಗೆ ಬೇಜಾರಾಗಿರಬಹುದು, ಆದರೂ ಕೂಡ ನಾವು ಹೊರಡುವ ಹಿಂದಿನದಿನ ಮತ್ತು ಹಿಂದಿರುಗಿ ಆ್ಯಮ್ಸ್ಟರ್ ಡ್ಯಾಮ್ ಗೆ ಬಂದ ಮರುದಿನ ತಪ್ಪದೆ ಫೋನ್ ಮಾಡುತ್ತಾಳೆ. ಅವಳ ಕೋರಿಕೆ ಒಂದೇ- ನಾವು ಯಾವುದೇ ದೇಶಕ್ಕೆ ಹೋದರೂ ಹೋಗಿ ತಲುಪಿದ ತಕ್ಷಣ ಅವಳಿಗೊಂದು ಮೆಸೇಜ್ ಮಾಡಬೇಕು, ಮತ್ತು ಹಿಂದಿರುಗಿ ಬಂದ ನಂತರವೂ ಮೆಸೇಜ್ ಮಾಡಬೇಕು- ‘ನಾವು ಆರಾಮಾಗಿದ್ದೇವೆ’ ಎಂದಿಷ್ಟೇ ಬರೆದರೂ ಸಾಕು. ನಾನೂ ಕೂಡ ಅವಳ ಕೋರಿಕೆಯಂತೆಯೇ ನಡೆದುಕೊಳ್ಳುತ್ತೇನೆ. ಒಮ್ಮೆ ಮಾತ್ರ ಹೋಗಿ ಮುಟ್ಟಿದ ತಕ್ಷಣ ಮೆಸೇಜ್ ಮಾಡಲು ಮರೆತುಬಿಟ್ಟಿದ್ದೆ, ಮರುದಿನ ಫೋನ್ ಮಾಡಿ “ಇನ್ನೂ ಹೋಗಿ ತಲುಪಲೇ ಇಲ್ಲವೇನೋ ಅಂದುಕೊಂಡೆ” ಎಂದು ನಕ್ಕಿದ್ದಳು. ಶುಕ್ರವಾರ ಬಂತೆಂದರೆ “ಎಲ್ಲಿಗೆ ಹೋಗಲಿದ್ದೀರಿ ‘ಡಾಬು’?” ಎಂದು ಹಾಸ್ಯಮಾಡುತ್ತಾಳೆ.

(ಕ್ರಾವಿಚೆ ಜಲಪಾತ)

ಈ ‘ಡಾಬು’ ಯಾರು ಎನ್ನುವುದರ ಹಿನ್ನೆಲೆ ಹೇಳಲೇ ಬೇಕು. ಡಾಬು ನನ್ನ ಜೀವನದ ಪ್ರಪ್ರಥಮ ಗೆಳೆಯ. ನನ್ನ ಅವನ ಗೆಳೆತನ ನಾನು ಹುಟ್ಟಿದಾಗಿನಿಂದ ಆರಂಭವಾಗಿತ್ತು. ನನಗಿಂತ ಆತ ಒಂದೆರಡು ವರುಷ ದೊಡ್ಡವನಿರಬಹುದು. ನಾನು ಹುಟ್ಟುವ ಮೊದಲೇ ಅಪ್ಪ, ಅಮ್ಮ ಅವನನ್ನು ಯಾವುದೊ ಸ್ನೇಹಿತರ ಮನೆಯಿಂದ ತಂದು ಬೆಳೆಸಿದ್ದರು. ಇಡೀ ದಿನ ನಾನು ಡಾಬುನ ಜೊತೆಯಲ್ಲಿಯೇ ಕಾಲಕಳೆಯುತ್ತಿದೆನಂತೆ. ಅವನ ಮೈಮೇಲೆ ಮಣ್ಣು ಸುರಿಯುವುದು, ಅವನ ಬಾಯಿಗೆ ಅನ್ನ ತುರುಕುವುದು ಹೀಗೆಯೇ ಹತ್ತು ಹಲವಾರು ರೀತಿಯ ಆಟ. ಆದರೂ ಡಾಬು ಒಂದು ದಿನವೂ ನನ್ನ ಮೇಲೆ ಸಿಟ್ಟು ತೋರಿಸಿದವನಲ್ಲ. ನಿಮಗೀಗಾಲೇ ಅಂದಾಜಾಗಿರಬಹುದು, ಡಾಬು ಯಾರೆಂಬುದು. ಹೌದು, ಆತ ನಮ್ಮನೆಯ ನಾಯಿ. ರೂಪದಲ್ಲಿ ಮಾತ್ರ ನಾಯಿ, ಆದರೆ ಅದಕ್ಕಿಂತಲೂ ಜಾಸ್ತಿ ನಮ್ಮನೆಯ ಮನುಷ್ಯನೇ. ನಾನು ಅವನ ಜೊತೆ ಇದ್ದಾಗ ಅಪ್ಪ ಅಮ್ಮನನ್ನು ಬಿಟ್ಟು ನನ್ನನ್ನು ಮುಟ್ಟಲು ಬಂದ ಇತರರಿಗೆ ಡಾಬು ಕಚ್ಚಿದ ಉದಾಹರಣೆಗಳೂ ಇವೆ. ಅಂತೂ ನನ್ನ ರಕ್ಷಣೆಯ ಪೂರ್ತಿ ಜವಾಬ್ದಾರಿ ಹೊತ್ತಿದ್ದ ಡಾಬು. ಆತನಿಗೊಂದು ಅಭ್ಯಾಸವಿತ್ತು, ಊರೂರು ಅಲೆಯುವುದು. ಅದಕ್ಕಾಗಿ ಅಪ್ಪ ಅವನನ್ನು ಸರಪಳಿ ಹಾಕಿ ಕಟ್ಟಿಯೇ ಇಡುತ್ತಿದ್ದರು. ಬಿಟ್ಟು ಹಾಕಿದರೆಂದರೆ ಮುಗಿಯಿತು; ಊರು ಸುತ್ತಲು ಹೋಗಿಬಿಡುತ್ತಿದ್ದ. ಎಲ್ಲಿದ್ದಾನೆಂದು ಅವನನ್ನು ಹುಡುಕಿ ಕರೆತರಬೇಕಿತ್ತು. ಅದರಿಂದ ನಮ್ಮನೆಯಲ್ಲಿ ಆಡುಮಾತು ಅಭ್ಯಾಸವಾಗಿಬಿಟ್ಟಿತ್ತು- ಯಾರಾದರೂ ತೀರಾ ಸುತ್ತಾಡಿದರೆ “ಡಾಬುನ ತರಹ ಸುತ್ತುತ್ತಾರೆ” ಎಂದು. ಪೇಟೆಯಲ್ಲಿ ಕೆಲಸಗಳಿಂದಾಗಿ ಅನೇಕ ಕಡೆ ಅಡ್ಡಾಡುವಂತಾದರೆ ಅಪ್ಪ ಆ ದಿನ ಮನೆಗೆ ಬಂದು ಹೇಳುವ ಮಾತು “ಡಾಬುನ ತರಹ ತಿರುಗಿದರೂ ಇಂದು ಪೇಟೆಯಲ್ಲಿ ಒಂದು ಕೆಲಸವೂ ಮುಗಿಯಲಿಲ್ಲ” ಎಂದು. ಹೀಗೆ ಎಷ್ಟೊಂದು ಬಾರಿ “ಡಾಬುನ ತರಹ ಸುತ್ತುವುದು” ಎಂಬುದನ್ನು ಬಳಸಿ ಅದು ನಮ್ಮನೆಯಲ್ಲಿ ವಾಡಿಕೆಯಾಗಿಯೇ ಉಳಿದುಬಿಟ್ಟಿದೆ! ಡಾಬು ಮುದುಕನಾಗಿ, ತನ್ನ ಹದಿಮೂರನೆಯ ವಯಸ್ಸಿನಲ್ಲಿ ನಮ್ಮನ್ನಗಲಿದ.

(ಡಾಬುವಿನೊಂದಿಗೆ ಲೇಖಕಿ ಸಣ್ಣ ವಯಸ್ಸಿನಲ್ಲಿ)

ಕೆಲ ದಿನಗಳ ಹಿಂದೆ ಅಮ್ಮ ಫೋನ್ ಮಾಡಿದ್ದಳು- “ವಾರಾಂತ್ಯ ಬಂತಲ್ಲ, ಡಾಬುನ ಸವಾರಿ ಈ ಬಾರಿ ಯಾವ ಕಡೆ?” ಎಂದಳು. ನಾನು “ಈ ಬಾರಿ ಬೋಸ್ನಿಯಾ ಮತ್ತು ಹೆರ್ಸೆಗೋವಿನಗೆ ಹೋಗುತ್ತಿದ್ದೇವೆ” ಎಂದೆ. “ಅದೆಲ್ಲಿ?” ಅಂದಳು. “ಯುಗೋಸ್ಲಾವಿಯಾ ಗೊತ್ತಾ?” ಕೇಳಿದೆ. ತಕ್ಷಣ “ಒಹೋ ಗೊತ್ತು ಗೊತ್ತು, ಯುಗೋಸ್ಲಾವಿಯಾ ಮಾತ್ರ ಅಲ್ಲ, ಝೆಕೋಸ್ಲೋವಾಕಿಯಾನೂ ಗೊತ್ತು” ಎಂದಳು. ಪರವಾಗಿಲ್ವೇ ಎನಿಸಿತು. ಅಮ್ಮನ ವಯಸ್ಸಿನವರಿಗೆ ಯುಗೋಸ್ಲಾವಿಯಾ ಒಡೆದು ಚೂರಾಗಿ ಬೋಸ್ನಿಯಾ ಮತ್ತು ಹೆರ್ಸೆಗೋವಿನ ಹಾಗೂ ಇನ್ನಿತರ ದೇಶಗಳಾಗಿದ್ದು, ಝೆಕೋಸ್ಲೋವಾಕಿಯಾ ಒಡೆದು ಝೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯ ಎಂಬ ಎರಡು ಪ್ರತ್ಯೇಕ ದೇಶಗಳಾಗಿದ್ದು ಗೊತ್ತಿಲ್ಲದಿದ್ದುದು ಆಶ್ಚರ್ಯವಲ್ಲ, ಆದರೆ ನನ್ನ ವಯಸ್ಸಿನ ಹಲವರಿಗೂ ಗೊತ್ತಿಲ್ಲ. ಕಾರಣ ಆ ದೇಶಗಳು ಪ್ರಪಂಚದಲ್ಲಿ ಪ್ರಖ್ಯಾತವಾಗಲೇ ಇಲ್ಲ, ಜನ ಆ ದೇಶಗಳ ಕಡೆ ಕಣ್ಣೆತ್ತಿ ನೋಡಲಿಲ್ಲ, ತಲೆ ಕೆಡಿಸಿಕೊಳ್ಳಲಿಲ್ಲ. ಯುರೋಪ್ ಗೆ ಬಂದು ಇಲ್ಲಿನ ದೇಶಗಳನ್ನು ಒಂದೊಂದಾಗಿ ಸುತ್ತತೊಡಗಿದಾಗ ನನಗೆ ಇಲ್ಲಿನ ದೇಶಗಳ ನಡುವಿನ ಬಾಂಧವ್ಯಗಳು, ಕಲಹಗಳು ಸ್ವಲ್ಪಮಟ್ಟಿಗೆ ಅರ್ಥವಾಗತೊಡಗಿದವು. ಯುರೋಪ್ ನಲ್ಲಿ ಹಲವಾರು ದೇಶಗಳು ತಮ್ಮತಮ್ಮಲ್ಲಿ ಯಾವ ರೀತಿ ಕಿತ್ತಾಡಿವೆ, ಯಾವ ಮಟ್ಟಿಗೆ ಬೇರೆ ಜನಾಂಗದವರ ಮೇಲೆ ಹಲ್ಲೆ ಮಾಡಿವೆ, ನರಮೇಧ, ಎತ್ನಿಕ್ ಕ್ಲೆನ್ಸಿಂಗ್  ನಡೆಸಿವೆ ಎಂಬುದು ಊಹೆಗೆ ನಿಲುಕದ್ದು. ವಿಶೇಷವಾಗಿ ಯುರೋಪ್ ನ ಪೂರ್ವ ಮತ್ತು ದಕ್ಷಿಣ ಭಾಗದ ದೇಶಗಳಲ್ಲಿ ಈ ರೀತಿಯ ಸಮಸ್ಯೆ ಎಷ್ಟಿದೆಯೋ ದೇವರೇ ಬಲ್ಲ! ಆ ಭಾಗದ ದೇಶಗಳಲ್ಲಿ ಸುತ್ತಾಡತೊಡಗಿದ ನಂತರ ನನಗೆ ಭೂಗೋಳ ಮತ್ತು ಇತಿಹಾಸದ ಸಂಬಂಧದ ಬಗ್ಗೆ ಕುತೂಹಲವಾಗತೊಡಗಿದೆ. ಒಂದು ದೇಶದ ಬಗ್ಗೆ ತಿಳಿಯಲು ಪ್ರವಾಸಕಥನಗಳನ್ನು ಓದುವುದಕ್ಕಿಂತಲೂ ಆ ದೇಶದಲ್ಲಿ ಸ್ವತಃ ಪ್ರವಾಸ ಮಾಡುವುದೇ ಅತ್ಯುತ್ತಮ ಎಂದು ಅನಿಸತೊಡಗಿದೆ.

ಬೋಸ್ನಿಯಾ ಮತ್ತು ಹೆರ್ಸೆಗೋವಿನ ಯುರೋಪ್ ನ ದಕ್ಷಿಣ ಭಾಗದಲ್ಲಿ ಹೃದಯದ ಆಕಾರದಲ್ಲಿರುವ ಸುಂದರ ದೇಶ. ರಾಜಧಾನಿ ಸರಯೆವೊ ಯುದ್ಧದ ಪರಿಣಾಮವಾಗಿ ಕುಸಿದ ಆರ್ಥಿಕತೆಯಿಂದ ಈಗೀಗ ಹೊರಬರಲು ಹೆಣಗಾಡುತ್ತಿರುವ ದೇಶ. ಅತ್ಯಂತ ಪುಟ್ಟ ವಿಮಾನನಿಲ್ದಾಣ, ಕೆಲವೇ ಕೆಲವು ವಿಮಾನಗಳು ಮಾತ್ರ ಬರುತ್ತವೆ, ದೂರದಿಂದ ನೇರ ವಿಮಾನಗಳು ಬರುವುದೇ ಇಲ್ಲ. ಆದ್ದರಿಂದ ನಾವೂ ಕೂಡ ಆ್ಯಮ್ಸ್ಟರ್ ಡ್ಯಾಮ್ ನಿಂದ ಹೊರಟು ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ ಗೆ ಹೋಗಿ ಅಲ್ಲಿಂದ ಸರಯೆವೊಗೆ ಹೋಗಬೇಕಾಯಿತು.

ಸರಯೆವೊ ತಲುಪಿದ ತಕ್ಷಣ ಮೊದಲಿಗೆ ಗಮನಕ್ಕೆ ಬಂದಿದ್ದು, ಮನಸ್ಸಿಗೆ ಮುದನೀಡಿದ್ದು ನಗರವನ್ನು ಸುತ್ತುವರಿದ ಸುಂದರ ಗುಡ್ಡಗಳು. ಬರೀ ಬೋಳು ಗುಡ್ಡಗಳಲ್ಲ, ಮರಗಿಡಗಳಿಂದಾವೃತವಾದ ಗುಡ್ಡಗಳು.ಆ ಗುಡ್ಡಗಳನ್ನು ಚುಂಬಿಸುತ್ತಿರುವ ಮೋಡಗಳು. ರಮಣೀಯವಾಗಿತ್ತು. ನಗರದ ಒಳಗೆ ಹೋಗತೊಡಗಿದಂತೆ ಅಲ್ಲಿನ ಜನರು ಕೇವಲ ಎರಡು ದಶಕಗಳ ಹಿಂದಷ್ಟೇ ಅನುಭವಿಸಿದ ಕರಾಳದಿನಗಳ ಕಲ್ಪನೆ ಬರತೊಡಗಿತು. ಯಾವುದೇ ದೇಶಕ್ಕೆ, ನಗರಕ್ಕೆ ಹೊಸದಾಗಿ ಹೋಗುವಾಗ ಅದರ ಬಗ್ಗೆ ಓದಿಕೊಂಡು ಹೋಗುವುದು ನನ್ನ ರೂಢಿ. ಅಂತೆಯೇ ಯುಗೋಸ್ಲಾವಿಯಾ, ಬೋಸ್ನಿಯಾ ಮತ್ತು ಹೆರ್ಸೆಗೋವಿನ ಬಗ್ಗೆ ಅಲ್ಪಸ್ವಲ್ಪ ಓದಿಕೊಂಡಿದ್ದೆ, ಆದರೆ ಅಲ್ಲಿಗೆ ಭೇಟಿಯಿತ್ತು ನೋಡಿದ ಮೇಲೆ ಮನಕಲಕಿತು. ಹೆಚ್ಚುಕಡಿಮೆ ಎಲ್ಲಾ ಕಟ್ಟಡಗಳಿಗೂ ಗುಂಡಿನ ಕಲೆಗಳು. ಹಲವನ್ನು ಮುಚ್ಚಿದ್ದಾರೆ, ಇನ್ನು ಹಲವನ್ನು ಹಾಗೆಯೇ ಬಿಟ್ಟಿದ್ದಾರೆ. ಅವರ ಇತಿಹಾಸದ ಕೆಲ ಪುಟಗಳನ್ನು ತಿರುವೋಣ.

(ಟ್ರೆಬೆವಿಚ್ ಗುಡ್ಡದಿಂದ ಕಾಣುವ ಸರಯೆವೊ ನಗರ)

ಯುಗೋಸ್ಲಾವಿಯಾ ಪ್ರದೇಶವನ್ನು 400 ವರ್ಷಗಳ ಕಾಲ ಒಟ್ಟೋಮನ್ ಟರ್ಕರು ಆಳಿದರು. ತಮ್ಮ ಮುಸ್ಲಿಂ ಧರ್ಮವನ್ನು ಅಲ್ಲಿ ಹರಡಿದರು. ಅಲ್ಲಿಯ ಜನರು ಯಾವುದೇ ಪ್ರತಿರೋಧವನ್ನು ತೋರದೇ ಮುಸ್ಲಿಂ ಧರ್ಮವನ್ನು ಅನುಸರಿಸತೊಡಗಿದರಂತೆ. ತಮ್ಮ ಮೇಲೆ ದಾಳಿಮಾಡಿದವರ ಧರ್ಮವನ್ನು ಪ್ರತಿರೋಧ ತೋರದೇ ಒಪ್ಪಿಕೊಂಡಿದ್ದು ಜಗತ್ತಿನಲ್ಲೇ ಇದೊಂದೇ ದೇಶದಲ್ಲಂತೆ. ಇಲ್ಲವಾದರೆ ಮತ್ತೆಲ್ಲೂ ತಮ್ಮ ಮೇಲೆ ಹೇರಲ್ಪಟ್ಟ ಧರ್ಮವನ್ನು ಜನರು ಸುಲಭವಾಗಿ ಒಪ್ಪಿಕೊಂಡಿಲ್ಲ. ಇಂದಿನ ದಿನದ ಬೋಸ್ನಿಯಾ ಮತ್ತು ಹೆರ್ಸೆಗೋವಿನ ಪ್ರದೇಶದಲ್ಲಿ ಹೆಚ್ಚಾಗಿ ವಸತಿ ಮಾಡಿದರು. ಇಂದಿಗೂ ಕೂಡ ಬೋಸ್ನಿಯಾ ಮತ್ತು ಹೆರ್ಸೆಗೋವಿನದಲ್ಲಿ 50 ಪ್ರತಿಶತ ಜನರು ಮುಸ್ಲಿಂ ಆಗಿಯೇ ಉಳಿದಿದ್ದಾರೆ. ಪೋಚಿಟೇಯ್ (Počitelj) ಎಂಬ ಒಂದು ಪುಟ್ಟ ಹಳ್ಳಿ ಬೋಸ್ನಿಯಾ ಮತ್ತು ಹೆರ್ಸೆಗೋವಿನ ಮೊಟ್ಟಮೊದಲ ಮುಸ್ಲಿಂ ವಸತಿಯನ್ನು ಹೊಂದಿದ ಹಳ್ಳಿ.

(ಪೋಚಿಟೇಯ್ ಹಳ್ಳಿ)

ನಾನೂರು ವರ್ಷಗಳ ನಂತರ ಟರ್ಕರ ಹತೋಟಿ ಕಡಿಮೆಯಾಗುತ್ತಾ ಹೋಯಿತು, ಆ ದೇಶವನ್ನು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯ ಆಳತೊಡಗಿತು. ಆದರೆ ಅವರಿಗೆ ಅಲ್ಲಿ ಕೇವಲ 40 ವರ್ಷಗಳ ಕಾಲ ಮಾತ್ರ ನಿಲ್ಲಲು ಸಾಧ್ಯವಾಯಿತು. ಮೊದಲ ಮಹಾಯುದ್ಧದ ಸಮಯದಲ್ಲಿ ಅಲ್ಲಿಂದ ಹೊರಡಲೇಬೇಕಾಯ್ತು. ಯುಗೊಸ್ಲಾವಿಯಾದ ಜನರಿಗೆ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಬೇಕಾಗಿತ್ತು. 1914 ರಲ್ಲಿ ಸರಯೆವೊದ ಲ್ಯಾಟಿನ್ ಬ್ರಿಡ್ಜ್ ಎಂಬ ಸೇತುವೆಯ ಮೇಲೆ ಹಂಗೇರಿಯ ರಾಜಕುಮಾರ ಮತ್ತು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಆರ್ಚ್ ಡ್ಯೂಕ್ ಆಗಿದ್ದ ಫ್ರಾನ್ಝ್ ಫರ್ಡಿನಾಂಡ್ ನನ್ನು ಗ್ಯಾವ್ರಿಲೋ ಪ್ರಿನ್ಸಿಪ್ ಎಂಬ ಸ್ವಾತಂತ್ರ್ಯ ಹೋರಾಟಗಾರ ಗುಂಡಿಟ್ಟುಕೊಂದ. ಆ ಹತ್ಯೆಯೇ ಮೊದಲ ಮಹಾಯುದ್ಧಕ್ಕೆ ದಾರಿಮಾಡಿಕೊಟ್ಟಿತು. ಯುದ್ಧ ಮುಗಿದು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದಿಂದ ದೊರೆತ ಸ್ವಾತಂತ್ರ್ಯಾನಂತರ ಯುಗೋಸ್ಲಾವಿಯ ಒಂದು ದೇಶವಾಗಿ ಉಳಿಯಿತು.

(ಲ್ಯಾಟಿನ್ ಬ್ರಿಡ್ಜ್)

ಸರ್ಬ್ ಮತ್ತು ಬೋಸ್ನಿಯಾಕ್ ಜನಾಂಗದವರ ನಡುವೆ ಘರ್ಷಣೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಲೇ ಇತ್ತು. ಸರ್ಬ್ ಜನರಿಗೆ ಸರ್ಬಿಯಾ ದೇಶದೊಡನೆಯೇ ಒಂದಾಗಿ ಇರುವ ಮನಸ್ಸಿತ್ತು, ಆದರೆ ಜನಮತಸಂಗ್ರಹದಲ್ಲಿ ಬೋಸ್ನಿಯಾ ಮತ್ತು ಹೆರ್ಸೆಗೋವಿನ ಬೇರೆಯಾಗಬೇಕೆಂಬ ಅಭಿಪ್ರಾಯ ಹೆಚ್ಚು ವ್ಯಕ್ತವಾಗಿತ್ತು. ಒಳಗೊಳಗೇ ಕುದಿಯುತ್ತಿದ್ದ ದ್ವೇಷ ಹೊತ್ತಿ ಉರಿಯತೊಡಗಿತು. 1992 ರ ಏಪ್ರಿಲ್ 5 ರಂದು ಸರ್ಬಿಯಾ, ಕ್ರೊಯೇಷಿಯಾಗಳು ಸೇರಿಕೊಂಡು ಸರಯೆವೊ ದ ಮೇಲೆ ಶೆಲ್ ದಾಳಿಯನ್ನು ಆರಂಭಿಸಿದವು. ಈ ದಾಳಿ 29 ಫೆಬ್ರುವರಿ 1996 ರವರೆಗೆ ಮುಂದುವರಿಯಿತು. ಇದನ್ನು Siege of Sarajevo ಎಂದು ಕರೆಯಲಾಗಿದೆ. ಬರೋಬ್ಬರಿ 1,425 ದಿನಗಳವರೆಗೆ ನಡೆದ ಈ ಮುತ್ತಿಗೆ ಇತಿಹಾಸದಲ್ಲಿಯೇ ರಾಜಧಾನಿಯೊಂದಕ್ಕೆ ನಡೆದ ಅತ್ಯಂತ ದೀರ್ಘಕಾಲದ ಮುತ್ತಿಗೆ ಎಂದೆನಿಸಿಕೊಂಡಿದೆ. ಸುಮಾರು 13,900 ಕ್ಕೂ ಹೆಚ್ಚುಜನರು ಸಾವಿಗೆ ತುತ್ತಾದರು. ಇಡೀ ನಗರದಲ್ಲಿ ವಿದ್ಯುತ್ ಮತ್ತು ನೀರಿನ ಸರಬರಾಜು ನಿಂತಿತು. ಸಂಚಾರ ಅಸ್ತವ್ಯಸ್ತಗೊಂಡಿತು. ಆಹಾರ, ವೈದ್ಯಕೀಯ ಸೌಲಭ್ಯಗಳ ಕೊರತೆ ಮಡುಗಟ್ಟಿತು. ಆಗ ನಿರ್ಮಾಣಗೊಂಡಿದ್ದು ಸರಯೆವೊದ ಸುರಂಗ.

ಟನಲ್ ಆಫ್ ಹೋಪ್

ಸರಯೆವೊ ಮೂರು ದಿಕ್ಕುಗಳಿಂದ ಮುತ್ತಿಗೆಗೊಳಗಾಗಿತ್ತು. ಆಹಾರ, ವೈದ್ಯಕೀಯ ಸೌಲಭ್ಯಗಳನ್ನು ಹೇಗಾದರೂ ಮಾಡಿ ಜನರಿಗೆ ತಲುಪಿಸಲೇಬೇಕಿತ್ತು. ಸ್ವಯಂಸೇವಕರು ತಯಾರಾದರು. ಮುತ್ತಿಗೆಗೊಳಗಾದ ಭಾಗದಿಂದ ಹೊರಗೆ ಹೋಗಲು ವಿಮಾನನಿಲ್ದಾಣದ ರನ್ ವೇ ಕೆಳಗೆ ಸುರಂಗ ನಿರ್ಮಾಣದ ಯೋಜನೆಯನ್ನು ನಿರ್ಮಿಸಿದರು. ದಿನದ ಇಪ್ಪತ್ನಾಲ್ಕೂ ತಾಸು ಕೆಲಸಮಾಡತೊಡಗಿದರು. ಯಾವುದೇ ಯಂತ್ರಗಳನ್ನು ಉಪಯೋಗಿಸುವಂತಿರಲಿಲ್ಲ, ಸದ್ದಾಗುವಂತಿಲ್ಲ. ಕೈಯಲ್ಲಿ ಕೆಲವೇ ಕೆಲವು ಸಲಕರಣೆಗಳನ್ನು ಹಿಡಿದುಕೊಂಡು ಸುರಂಗವನ್ನು ಅಗೆಯತೊಡಗಿದರು. ನಾಲ್ಕು ತಿಂಗಳುಗಳ ಕಾಲ ಒಂದೇಸಮನೆ ಅಗೆದು 800 ಮೀಟರುಗಳಷ್ಟು ಉದ್ದದ ಸುರಂಗವನ್ನು ನಿರ್ಮಿಸಿದರು. ಮುಂದೆ ಈ ಸುರಂಗವನ್ನು ಉಪಯೋಗಿಸಿಕೊಂಡು ಸರಯೆವೊದಲ್ಲಿ ಬದುಕುಳಿದ 3,50,000 ಜನರಿಗೆ ಆಹಾರ ಮತ್ತಿತರ ಸೌಲಭ್ಯಗಳನ್ನೊದಗಿಸಲಾಯಿತೆಂದರೆ ನಂಬಲಸಾಧ್ಯ! ಬಹುಶಃ ಅದಕ್ಕೇ ಇರಬೇಕು ಈ ಸುರಂಗವನ್ನು ‘ಟನಲ್ ಆಫ್ ಹೋಪ್’ ಎಂದು ಕರೆದುದು! ಆ ನಂತರದಲ್ಲಿ ನ್ಯಾಟೋ (NATO) ಮಧ್ಯಪ್ರವೇಶಿಸಿ ಯುದ್ಧ ನಿಲ್ಲುವಂತೆ, ಪರಿಸ್ಥಿತಿ ಹತೋಟಿಗೆ ಬರುವಂತೆ ಮಾಡಿತು. ಯೂ ಎನ್ ಓ (UNO) ದ ಶಾಂತಿಪಡೆಯ ಸೈನಿಕರು ಇಂದೂ ಕೂಡ ಸರಯೆವೊ ನಗರದಲ್ಲಿ ಅಲ್ಲಲ್ಲಿ ಗಸ್ತು ತಿರುಗುತ್ತಿರುತ್ತಾರೆ.

(ಟನಲ್ ಮ್ಯೂಸಿಯಂ) 

ಈ ಮ್ಯೂಸಿಯಂ ನ ಗೋಡೆಯಮೇಲೆ ಗುಂಡಿನ ಕಲೆಗಳನ್ನು ಗಮನಿಸಿ, ಇಂತಹ ಕಲೆಗಳನ್ನು ಸರಯೆವೊದ ತುಂಬೆಲ್ಲಾ ಅದೆಷ್ಟೋ ಮನೆಗಳ ಮೇಲೆ ಇಂದೂ ಕಾಣಬಹುದು. ನಗರದಲ್ಲಿ ಹಲವಾರು ಕಡೆ ನೆಲದಮೇಲೆ ದೊಡ್ಡ ಸ್ಪೋಟಕಗಳಿಂದಾದ ಕಲೆಗಳನ್ನು ಇಂದು ಕೆಂಪುಬಣ್ಣದಿಂದ ತುಂಬಿದ್ದಾರೆ. ಇವುಗಳನ್ನು ಸರಯೆವೊದ ಗುಲಾಬಿಗಳು (Sarajevo Roses) ಎಂದು ಕರೆಯುತ್ತಾರೆ. ಇವು ಯುದ್ಧಸಮಯದಲ್ಲಿ ನಗರದ ಜನರು ಅನುಭವಿಸಿದ ಕಷ್ಟ, ದುಃಖಗಳನ್ನು ನೆನಪಿಸುತ್ತವೆ ಎಂದೆನ್ನುತ್ತಾರೆ. ನಾವು ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಚಾಲಕ ಓಮೋ ನ ಬಳಿ “ನಿಮಗೆ ಸೀಜ್ ಆಫ್ ಸರಯವೋ ದ ನೆನಪಿದೆಯೇ?” ಎಂದು ಕೇಳಿದಾಗ ಆತ “ನಾನು ಅದೇ ವರ್ಷ ಹುಟ್ಟಿದ್ದು, ಹಾಗಾಗಿ ನನಗೇನೂ ಗೊತ್ತಾಗಲಿಲ್ಲ, ಆದರೆ ನನ್ನ ಅಪ್ಪ, ಅಮ್ಮ ಅದರ ಬಗೆಗೆ ಹೇಳಿದ್ದನ್ನು ಕೇಳಿಯೇ ದುಃಖ, ಭಯ ಆಗುತ್ತದೆ. ಅದೃಷ್ಟವಶಾತ್ ನಾನು ಆಗಿನ್ನೂ ಮಗುವಾಗಿದ್ದೆ” ಎಂದ. ಕಟ್ಟಡಗಳ ಮೇಲುಳಿದಿರುವ ಗುಂಡಿನ ಕಲೆಗಳನ್ನು ನೋಡಿ ನಾವು ನಿಟ್ಟುಸಿರಿಟ್ಟೆವು, ಇದು ನಮ್ಮ ಕಲ್ಪನೆಗೂ ನಿಲುಕದ್ದು ಎಂದುಕೊಂಡೆವು, ನಮ್ಮ ಜೀವನದಲ್ಲಿ ನಾವು ಇಂಥ ಸನ್ನಿವೇಶವನ್ನು ಎದುರಿಸದಿರುವುದು ನಮ್ಮ ಅದೃಷ್ಟವೆಂದುಕೊಂಡೆವು.

(ಸರಯೆವೊ ರೋಸಸ್)

ಬೋಸ್ನಿಯಾ ಮತ್ತು ಹೆರ್ಸೆಗೋವಿನಯಾದ ದಕ್ಷಿಣಕ್ಕೆ ಹೋದರೆ ಮೋಸ್ತರ್ ಎಂಬ ಪಟ್ಟಣವೊಂದಿದೆ. ಈ ಪಟ್ಟಣ ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್  ಎಂದು ಗುರುತಿಸಲ್ಪಟ್ಟಿದೆ. ಇದು ಟರ್ಕರು ಯುಗೊಸ್ಲಾವಿಯಾವನ್ನು ಆಳುತ್ತಿದ್ದಾಗ ನಿರ್ಮಿಸಿದ ಪಟ್ಟಣ. ಈ ಪಟ್ಟಣದ ಮೂಲಕ ಹಾದು ಹರಿಯುವ ನೆರೇತ್ವಾ ನದಿಗೆ ಅಡ್ಡಲಾಗಿ ಒಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಸೇತುವೆಯನ್ನು ವ್ಯಾಪಾರಿಗಳು, ಸೈನಿಕರು, ಹಾಗೂ ಇತರೇ ಪ್ರವಾಸಿಗರು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸೇತುವೆಯ ಒಂದು ಕಡೆ ಬೋಸ್ನಿಯಾಕ್ ಜನರು ಮತ್ತೊಂದು ಕಡೆ ಕ್ರೋಟ್ ಜನರು ವಾಸಮಾಡತೊಡಗಿದರು. ವಿಷಾದವೆಂದರೆ ಈ ಎರಡೂ ಜನಾಂಗದ ಜನರ ನಡುವೆ ದ್ವೇಷ ಎಷ್ಟಿದೆಯೆಂದರೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲು ಇಚ್ಛೆಪಡದಷ್ಟು. ಇವತ್ತಿಗೂ ಕೂಡ ಒಂದೇ ಊರಿನಲ್ಲಿದ್ದರೂ ಕೂಡ ಸೇತುವೆಯನ್ನು ದಾಟಿ ಊರಿನ ಮತ್ತೊಂದು ಕಡೆ ಹೋಗದೇ ಇರುವ ಜನರಿದ್ದಾರಂತೆ! ಈ ಸೇತುವೆಯನ್ನು 1992 ರ ಮುತ್ತಿಗೆಯ ಸಮಯದಲ್ಲಿ ಸರ್ಬಿಯಾದವರು ಸಂಪೂರ್ಣವಾಗಿ ನಾಶಮಾಡಿದ್ದರು. ಯುದ್ಧವಾದನಂತರದಲ್ಲಿ ಅದು ಮೊದಲಿದ್ದ ಮಾದರಿಯಲ್ಲೇ ಪುನರ್ನಿರ್ಮಿಸಲಾಯಿತು. ಆ ಸೇತುವೆ 30 ಮೀಟರ್ ಗಳಷ್ಟು ಎತ್ತರವಿದೆ. ವಿಶೇಷವೆಂದರೆ ಆ ಸೇತುವೆಯ ಮೇಲೆ ಒಂದು ಜನರ ಗುಂಪು ನಿಂತಿರುತ್ತದೆ. ಅದರಲ್ಲಿ ಒಬ್ಬಿಬ್ಬರು ಆ ಸೇತುವೆಯ ಮೇಲಿಂದ ನೀರಿಗೆ ಹಾರಿ ಸಾಹಸ ಪ್ರದರ್ಶಿಸುವವರು. ಇನ್ನು ಕೆಲವು ಜನರು ಆ ಸೇತುವೆಯ ಮೇಲೆ ಹೋಗಿಬರುವ ಪ್ರವಾಸಿಗರ ಬಳಿ ಸಾಹಸ ಪ್ರದರ್ಶನವನ್ನು ನೋಡಲು ಪ್ರಚೋದಿಸಿ ದುಡ್ಡು ಕಲೆಹಾಕುತ್ತಿರುವವರು. ಸಾಹಸವನ್ನೇ ವೃತ್ತಿಯನ್ನಾಗಿಸಿಕೊಂಡವರು ಇವರು.

ಮೋಸ್ತರ್ ಪಟ್ಟಣ

ಸರಯೆವೊದಿಂದ ಸುಮಾರು 40 ಕಿಲೋಮೀಟರ್ ಗಳಷ್ಟು ದೂರದಲ್ಲಿ ವಿಸೋಕೊ ಎಂಬ ಗುಡ್ಡಗಳಿಂದ ಸುತ್ತುವರಿದ ಪುಟ್ಟ ಹಳ್ಳಿಯೊಂದಿದೆ. ಆ ಹಳ್ಳಿಯಲ್ಲಿ ನಾಲ್ಕು ಪಿರಮಿಡ್ ಗಳಿವೆ ಎಂದರೆ ಆಶ್ಚರ್ಯವಾಗಬಹುದು! ನೋಡಲು ಈಜಿಪ್ಟ್ ನ ಪಿರಮಿಡ್ ಗಳಂತೆ ಬೋಳಾಗಿಲ್ಲ, ಬದಲಾಗಿ ಇಲ್ಲಿನ ಹವಾಗುಣಕ್ಕನುಸಾರವಾಗಿ ಮರಗಿಡಗಳಿಂದ ತುಂಬಿವೆ, ಗುಡ್ಡದಂತೆಯೇ ಕಾಣಿಸುತ್ತವೆ. ಆದರೆ ನಾಲ್ಕು ಪಕ್ಕಗಳಿರುವ ಪರಿಪೂರ್ಣ ಪಿರಮಿಡ್ ನಂತೆಯೇ ಇರುವುದನ್ನು ಸುಲಭವಾಗಿ ಗುರುತಿಸಬಹುದು. ನಾಲ್ಕು ಪಿರಮಿಡ್ ಗಳಲ್ಲಿ ಒಂದೊಂದಕ್ಕೂ ಒಂದೊಂದು ದೇವತೆಗಳಿವೆ- ಸೂರ್ಯ, ಚಂದ್ರ, ಭೂಮಿ ಮತ್ತು ಡ್ರ್ಯಾಗನ್. ಈಜಿಪ್ಟ್ ನ ಪಿರಮಿಡ್ ನ ಎತ್ತರ 146.5 ಮೀಟರ್ ಗಳಷ್ಟಾದರೆ ಇಲ್ಲಿನ ಸೂರ್ಯನ ಪಿರಮಿಡ್ ನ ಎತ್ತರ 240 ಮೀಟರ್. ಸೂರ್ಯನ ಪಿರಮಿಡ್ ಪ್ರಪಂಚದ ಅತ್ಯಂತ ಹಳೆಯ ಪಿರಮಿಡ್ ಎಂದು ಕಾರ್ಬನ್ ಡೇಟಿಂಗ್ ಮುಖಾಂತರ ಪತ್ತೆಹಚ್ಚಿದ್ದಾರೆ. ಅದೇ ಪ್ರದೇಶದಲ್ಲಿಯೇ ಲಭ್ಯವಿರುವ ಮಣ್ಣು, ಕಲ್ಲು ಮತ್ತು ಬಂಡೆಗಳನ್ನು ಉಪಯೋಗಿಸಿ ಈ ಪಿರಮಿಡ್ ಗಳನ್ನೂ ನಿರ್ಮಿಸಿದ್ದರೆಂಬುದನ್ನು ಅದರ ಮೇಲೆ ಬೆಳೆದಿರುವ ಮರಗಳನ್ನು ತೆಗೆದು ಚೊಕ್ಕಟಗೊಳಿಸಿದಾಗ ಕಂಡುಬಂತು.

(ಬೊಸ್ನಿಯಾದ ಪಿರಮಿಡ್ ಆಫ್ ಸನ್)

ಇವುಗಳನ್ನು ಜನ ಗುರುತಿಸಿರಲೇ ಇಲ್ಲ, ಆದರೆ 2005 ರಲ್ಲಿ ಮೊಟ್ಟಮೊದಲ ಬಾರಿಗೆ ಗುರುತಿಸಿದವರು ಅಮೇರಿಕಾದಲ್ಲಿ ನೆಲೆಸಿರುವ ಬೋಸ್ನಿಯಾ ದೇಶದವರೇ ಆದ ಡಾ. ಸ್ಯಾಮ್ ಒಸ್ಮನಾಜಿಕ್. ಆನಂತರದಲ್ಲಿ ಸೂರ್ಯನ ಪಿರಮಿಡ್ ನ ಅಡಿಯಲ್ಲಿ ಉತ್ಖನನವನ್ನು ಪ್ರಾರಂಭಿಸಿದರು. ಈ ಕೆಲಸಕ್ಕೆ ಸರಕಾರದಿಂದ ಯಾವುದೇ ಹಣಕಾಸಿನ ಅಥವಾ ಇನ್ನಿತರ ಸಹಾಯ ದೊರೆಯುತ್ತಿಲ್ಲವಂತೆ. ಪ್ರಪಂಚದಾದ್ಯಂತದಿಂದ ಸ್ವಯಂಸೇವಕರು ಬಂದು ಇಲ್ಲಿ ಉತ್ಖನನದ ಕೆಲಸಕ್ಕೆ ನೆರವಾಗುತ್ತಿದ್ದಾರೆ. ಆದ್ದರಿಂದ ಕೆಲಸ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ. ಅವರಿನ್ನೂ ಪಿರಮಿಡ್ ನ ತಳದವರೆಗೆ ಹೋಗಿ ತಲುಪಿಲ್ಲ, ಆದರೆ ಆ ಪಿರಮಿಡ್ ಗೆ ಹೋಗಲು ಸುರಂಗಗಳನ್ನು ಅಗೆಯುತ್ತಿದ್ದಾರೆ. ಆ ಸುರಂಗಗಳಲ್ಲಿ ಅನೇಕ ಚಿಕ್ಕ ಕೊಳಗಳಿವೆ. ಅದರಲ್ಲಿನ ನೀರಿಗೆ ಔಷಧೀಯ ಗುಣಗಳಿವೆ ಎಂಬುದನ್ನು ಜಪಾನ್ ನ ವಿಜ್ಞಾನಿ ಮಸಾರು ಇಮೋತೊ ಈಗಾಗಲೇ ಸಾಬೀತುಪಡಿಸಿದ್ದಾರೆ. ಆ ಸುರಂಗಗಳಲ್ಲಿನ ವಾತಾಯನ ಮಾತ್ರ ಇಂದಿಗೂ ರಹಸ್ಯವೇ! ಈ ಪಿರಮಿಡ್ ಗಳು ಇನ್ನೂ ವಿವಾದದ ವಿಷಯವಾಗಿವೆ. ಒಂದು ಗುಂಪಿನವರು ಇವು ಪಿರಮಿಡ್ ಗಳೆಂದು ಪ್ರತಿಪಾದಿಸಿದರೆ ಮತ್ತೊಂದು ಗುಂಪು ಆ ವಿಚಾರವನ್ನು ಸುಳ್ಳೆಂದು ಅಲ್ಲಗಳೆಯುತ್ತಿದೆ. ಯಾವುದಕ್ಕೂ ಮುಂದೆ ವೈಜ್ಞಾನಿಕ ಸಂಶೋಧನೆಗಳು ನಡೆದ ನಂತರ ಕಾಲವೇ ಉತ್ತರ ಹೇಳಬೇಕು.

ಪಿರಮಿಡ್ ನ ಕೆಳಭಾಗದಲ್ಲಿನ ಸುರಂಗ

ಎಷ್ಟೆಲ್ಲಾ ಸಂಪತ್ತನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಈ ಚಂದದ ದೇಶ. ಹಚ್ಚಹಸಿರಾದ ಗುಡ್ಡಬೆಟ್ಟಗಳಿವೆ, ಆಗಸವನ್ನು ತಾಕುವ ಪರ್ವತಗಳಿವೆ, ಬೇಸಿಗೆಯಿದೆ, ಚಳಿಗಾಲದಲ್ಲಿ ಹಿಮವಿದೆ, ಸರೋವರಗಳಿವೆ, ಇನ್ನೂರಕ್ಕೂ ಮಿಕ್ಕಿ ನದಿಗಳಿವೆ, ನದಿಗಳು ದುಮ್ಮಿಕ್ಕಿ ನಿರ್ಮಿಸಿರುವ ಜಲಪಾತಗಳಿವೆ, ಚಿಕ್ಕ ಸಮುದ್ರತೀರವೂ ಇದೆ. ಮರುಭೂಮಿಯೊಂದನ್ನು ಹೊರತುಪಡಿಸಿ ಪ್ರಕೃತಿ ಈ ದೇಶಕ್ಕೆ ಎಲ್ಲವನ್ನೂ ಧಾರೆಯೆರೆದಿದೆ. ವಿಷಾದವೆಂದರೆ ಇಲ್ಲಿಯ ಜನಾಂಗೀಯ ಕಲಹಗಳು, ರಾಜಕೀಯ ಪರಿಸ್ಥಿತಿ. ದೇಶದಲ್ಲಿ 40 ಲಕ್ಷ ಜನರಿದ್ದಾರೆ, ಆದರೆ ಅದರಲ್ಲಿ 10 ಲಕ್ಷ ಜನರು ನಿರುದ್ಯೋಗಿಗಳು. ಉದ್ಯೋಗದಲ್ಲಿರುವವರೂ ಕೂಡ ತಮ್ಮ ಆದಾಯದ 68 ಪ್ರತಿಶತ ತೆರಿಗೆ ಪಾವತಿಸಬೇಕು! ದೇಶಕ್ಕೆ ಮೂರು ರಾಷ್ಟ್ರಪತಿಗಳು; ಪ್ರತಿಯೊಂದು ಮುಖ್ಯ ಜನಾಂಗದಿಂದಲೂ ಒಬ್ಬ- ಬೋಸ್ನಿಯಾಕ್, ಸರ್ಬ್ ಮತ್ತು ಕ್ರೋಟ್. ಇಲ್ಲವಾದಲ್ಲಿ ಅಲ್ಲಿ ಗಲಭೆಗಳಾಗುತ್ತವೆ. ಪ್ರತೀ 50 ವರ್ಷಗಳಿಗೊಮ್ಮೆ ಯಾವುದೊ ಒಂದು ಕಾರಣಕ್ಕೆ ಯುದ್ಧವಾಗುತ್ತದೆಯಂತೆ. ನಾವಲ್ಲಿ ಉಳಿದ ಮೂರು ದಿನಗಳಲ್ಲಿ ಹಲವರ ಬಳಿ ಮಾತನಾಡಿದೆವು, ಎಲ್ಲರೂ ಹೇಳುವುದು ಒಂದೇ- “ಮುಂದೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಭರವಸೆಯಿದೆ”. ಎಂಥ ಸಕಾರಾತ್ಮಕ ಧೋರಣೆ! ನಮ್ಮ ಪರಿಚಯಕ್ಕೆ ಬಂದ ಪ್ರತಿಯೊಬ್ಬರೂ ತುಂಬಾ ಆತ್ಮೀಯತೆಯನ್ನು ತೋರಿದರು, ಪ್ರೀತಿಯಿಂದ ಮಾತನಾಡಿಸಿದರು, ಆದರೆ ಇವರೇಕೆ ತಮ್ಮತಮ್ಮಲ್ಲಿ ಬಡಿದಾಡಿಕೊಳ್ಳುತ್ತಾರೆಂಬುದು ಕೊನೆಗೂ ತಿಳಿಯಲಿಲ್ಲ.

ಕೊನೆಯ ಹನಿ: ಬೋಸ್ನಿಯಾ ಮತ್ತು ಹೆರ್ಸೆಗೋವಿನದಲ್ಲಿ, ವಿಶೇಷವಾಗಿ ಸರಯೆವೊದಲ್ಲಿ ಬಾಲಿವುಡ್ ಸಿನಿಮಾಗಳು, ಹಾಡುಗಳು ತುಂಬಾ ಪ್ರಸಿದ್ಧ. ಅಲ್ಲಿನ ಜನರು ಬಾಲಿವುಡ್ ಸಿನೆಮಾಗಳನ್ನು ಇಷ್ಟಪಟ್ಟು ನೋಡುತ್ತಾರಂತೆ!

 

(ಚಿತ್ರಗಳು: ರಾಜೀವ ಭಟ್)