ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ, ತಪ್ಪುಗಳನ್ನು ತಿದ್ದಿಕೊಳ್ಳುವ ಸುಂದರ ವಾತಾವರಣವು ಮಾಸಿ ಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಬರಹಗಾರರು ಗೊಂದಲದ ಮನಸ್ಥಿತಿಯಲ್ಲಿದ್ದಾರೆ. ನಿಜವಾಗಿಯೂ ಸಾಹಿತ್ಯ ಕೃತಿಯೊಂದರ ಉದ್ದೇಶವೇನಪ್ಪಾ ಎಂಬ ಪ್ರಶ್ನೆಯೊಂದು ಧುತ್ತನೇ ನಮ್ಮೆದುರು ನಿಂತಿರುವಂತಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಕಾರ ಶ್ರೀಧರ ಬಳಗಾರ ಅವರೊಡನೆ ಕೋಡಿಬೆಟ್ಟು ರಾಜಲಕ್ಷ್ಮಿ ನಡೆಸಿದ ಮಾತುಕತೆಯ ತುಣುಕೊಂದು ಇಲ್ಲಿದೆ.

 

ಕಲೆ ಮತ್ತು ಸಾಹಿತ್ಯದ ಕಾರಣಕ್ಕಾಗಿಯೂ ಇಂದು ಸಮಾಜದಲ್ಲಿ ಎಷ್ಟೊಂದು ಗೊಂದಲ, ಗದ್ದಲಗಳು ಮೂಡುತ್ತಿವೆ. ಕೃತಿಗಳ ಆಶಯವನ್ನು ಗಮನಿಸುವುದು ಇಂದಿನ ಕಾಲಮಾನದಲ್ಲಿ ಅಷ್ಟೊಂದು ಕಷ್ಟವಾಗಿಬಿಟ್ಟಿದೆಯೇ..?

ಕಾವ್ಯಮೀಮಾಂಸೆಯಲ್ಲಿ ಹೇಳುವಂತೆ ಕಲೆ ಮತ್ತು ಸಾಹಿತ್ಯದ ಮೂಲ ಆಶಯವೇ ರಂಜನೆಯೊಂದಿಗೆ ಸಹೃದಯರ ಅಂತರಂಗದಲ್ಲಿ ಅರಿವನ್ನು ಮೂಡಿಸುವ, ತಿಳಿವನ್ನು ಒದಗಿಸುವ ಕಾಂತಾಸಮ್ಮಿತ ಮಾದರಿಯ ಶಿಕ್ಷಣ. ಆದ್ದರಿಂದ ಸೃಜನಶೀಲ ಬರಹಗಾರರು ಒಂದು ಕೃತಿ ರಚನೆಯ ಸಂದರ್ಭದಲ್ಲಿ ಜೀವಪರವಾದ ಆಶಯವನ್ನೇ ಉದ್ದೇಶವಾಗಿಟ್ಟುಕೊಂಡು, ಅದು ಕಲಾತ್ಮಕವಾಗಿಯೂ ಇರಬೇಕು ಎಂಬ ಅಪೇಕ್ಷೆಯೊಂದಿಗೆ ಬರವಣಿಗೆ ಮಾಡುತ್ತಾರೆ. ಆದರೆ ಆ ಕೃತಿಯು ಏನೆಲ್ಲಾ ಸಾಮಾಜಿಕ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವನ್ನಿಟ್ಟುಕೊಂಡು ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ಜೀವಪರವಾದ ಆಶಯವನ್ನು ಕಲಾಕುಸುರಿಯೊಂದಿಗೆ ಮಂಡಿಸುವ ಯಾವುದೇ ಕೃತಿಯು ಕೆಡುಕನ್ನು ಬಯಸುವುದು ಸಾಧ್ಯವಿಲ್ಲ. ಆದರೆ ಕಾಲಾಂತರದಲ್ಲಿ ಒಂದು ಕೃತಿಯನ್ನು ಸ್ವೀಕರಿಸುವ ಸಮಾಜವು ಬದಲಾಗುತ್ತದೆಯಲ್ಲ. ಬದಲಾದ ಕಾಲಮಾನದಲ್ಲಿ ಕಲಾಕೃತಿ ಅಥವಾ ಸಾಹಿತ್ಯ ಕೃತಿ ಸೃಷ್ಟಿಸುವ ಪರಿಣಾಮಗಳು ಏನೇನು ಎಂಬುದು ಬೇರೆಯೆ ತೆರನಾದ ಚರ್ಚೆ. ಸಾಹಿತ್ಯ ರಚನೆಯ ಸಂದರ್ಭದಲ್ಲಿ ಲೇಖಕ ಯಾವ ಆಶಯಗಳನ್ನು ಹೊಂದಿರುತ್ತಾನೋ, ಕಾಲಾಂತರದಲ್ಲಿ ಅದರ ಪರಿಣಾಮ ಬೇರೆ ಬೇರೆಯಾಗಿರುತ್ತದೆ. ಹಾಗಂತ ಹೊರಹೊಮ್ಮುವ ಪರಿಣಾಮಗಳಿಗೆ ಲೇಖಕ ಎಷ್ಟರ ಮಟ್ಟಿಗೆ ನೈತಿಕವಾಗಿ ಬದ್ಧ ಎಂದು ಪ್ರಶ್ನೆ ಮಾಡುವುದು ಸೂಕ್ತವೆಂದು ಕಾಣುವುದಿಲ್ಲ. ಈ ವಿಚಾರವನ್ನು ಕೇವಲ ಸಾಹಿತ್ಯ –ಕಲೆಯ ಕ್ಷೇತ್ರಕ್ಕಷ್ಟೇ ಅನ್ವಯಿಸಿ ನೋಡಬೇಕೆಂದೇನೂ ಇಲ್ಲ. ವಿಜ್ಞಾನ ಕ್ಷೇತ್ರವನ್ನೇ ತೆಗೆದುಕೊಳ್ಳಿ. ವಿಮಾನವನ್ನು ಕಂಡು ಹಿಡಿದ ವಿಜ್ಞಾನಿಗಳು ಅದರಿಂದ ಜನರಿಗೆ ಎಷ್ಟೊಂದು ಪ್ರಯೋಜನವಾಗಬಹುದು ಎಂಬ ಸದಾಶಯ ಹೊಂದಿದ್ದರೇ ಹೊರತು, ಅದನ್ನು ಹಿರೋಷಿಮಾ -ನಾಗಸಾಕಿ ಮೇಲೆ ಬಾಂಬ್ ಹಾಕಲು ಬಳಸಿಕೊಳ್ಳಲಾಗುತ್ತದೆ ಎಂದೇನೂ ಊಹಿಸಿರುವುದಿಲ್ಲವಲ್ಲ. ಅಂದಮೇಲೆ ವಿಜ್ಞಾನಿಯನ್ನು ಅಥವಾ ವಿಜ್ಞಾನಿಗಳ ಸಮುದಾಯವನ್ನು ಹೊಣೆಮಾಡಿ ಟೀಕಿಸುವುದು ಹೇಗೆ ಸಾಧುವಲ್ಲವೋ, ಸಾಹಿತ್ಯ ಕ್ಷೇತ್ರದಲ್ಲಿಯೂ ಅಂತಹ ಟೀಕೆಗಳು ಸಾಧುವಲ್ಲ . ಹಾಗಾಗಿ ಸೃಜನಶೀಲ ಚಟುವಟಿಕೆಗಳು ಸದಾಶಯವನ್ನೂ ಕಲಾಕುಸುರಿಯನ್ನೂ ಜೀವಪರತೆಯನ್ನೂ ಹೊಂದಿರುತ್ತವೆ ಎಂಬುದನ್ನು ಅರಿಯುವ ಶಿಕ್ಷಣ ಸದ್ಯದ ತುರ್ತಿನಂತೆ ಗೋಚರಿಸುತ್ತದೆ. ಸಹೃದಯತೆಯ ಪಾಠವನ್ನೂ ಮಾಡಬೇಕಾಗಿದೆ.

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕೃತಿಗಳಿಗೆ ಸಂಚಕಾರ ಎದುರಾಗಿದೆ ಎಂದು ಅನಿಸುತ್ತದೆಯೇ ?

ಸಂಚಕಾರ ಎಂದಲ್ಲ. ಈ ಸಂದರ್ಭದಲ್ಲಿ ನನಗೆ ಟಿ.ಎಸ್. ಎಲಿಯಟ್ ನ ಮಾತುಗಳು ನೆನಪಾಗುತ್ತವೆ. ಅವನ ಪ್ರಕಾರ, ಒಂದು ಕೃತಿಯು ಯಾವ ಪ್ರಕಾರದ್ದು ಎಂದು ನಿರ್ಧರಿಸಲು ಸಾಹಿತ್ಯದ ಮಾನದಂಡಗಳು ಸಾಕಾಗುತ್ತವೆ. ಬರಹವೊಂದನ್ನು ಕಥೆಯೋ, ಪ್ರಬಂಧವೋ, ಕಾದಂಬರಿಯೋ, ಕಾವ್ಯವೋ ಎಂದು ಗುರುತಿಸಿ ಹೇಳುವುದು ಕಷ್ಟವೇನಲ್ಲ ಅಲ್ಲವೇ. ಆದರೆ ಅದರ ಗುಣಮಟ್ಟವನ್ನು, ಅದರ ಶ್ರೇಷ್ಠತೆಯನ್ನು ನಿರ್ಧರಿಸಬೇಕಾದರೆ ಸಾಹಿತ್ಯೇತರ ಮಾನದಂಡಗಳೂ ಕೆಲಸ ಮಾಡುತ್ತವೆ. ಅದು ಆಯಾ ಕಾಲವು ಒದಗಿಸಿಕೊಡುವ ಮಾನದಂಡಗಳೆಂದೂ ಹೇಳಬಹುದು. ಉದಾಹರಣೆಗೆ ಕುವೆಂಪು ಅವರ ಸಾಹಿತ್ಯ ಕೃತಿಗಳು ಸಾಹಿತ್ಯೇತರ ಮಾನದಂಡಗಳಡಿಯಲ್ಲಿಯೂ ಶ್ರೇಷ್ಠತೆಯನ್ನು ಸಾರುವುದು ಕಷ್ಟವಾಗಲಿಲ್ಲ. ಜಾತೀಯತೆ, ಸಾಂಸ್ಕೃತಿಕ ಸಂಘರ್ಷಗಳನ್ನು ದಾಟುವ, ವರ್ಣಾಶ್ರಮವನ್ನು ವಿಮರ್ಶಿಸುವ, ಭಾಷಾ ವಿಚಾರಗಳನ್ನು ಚರ್ಚಿಸುವ ಸಾಮಾಜಿಕ ಆಯಾಮಗಳು ಅವರ ಸಾಹಿತ್ಯದಲ್ಲಿ ಇದ್ದವು. ದ.ರಾ. ಬೇಂದ್ರೆ ಅವರ ಸಾಹಿತ್ಯವೂ ಇಂತಹುದೇ ಸಾಮಾಜಿಕ ಪರಿಣಾಮಗಳೊಂದಿಗೆ ವಿಶ್ವಾತ್ಮಕವಾದ ನಿಲುವುಗಳನ್ನು ಪ್ರತಿಪಾದಿಸುವ ಸಾಮರ್ಥ್ಯ ಹೊಂದಿದ್ದವು, ಅಂತಹ ವಿಚಾರಗಳ ಚರ್ಚೆಗಳೂ ನಡೆದವು ಕೂಡ. ಈ ರೀತಿಯ ಸವಲತ್ತು ಪ್ರಸ್ತುತ ಕಾಲಮಾನದಲ್ಲಿ ದೇವನೂರು ಮಹಾದೇವ ಅವರಿಗೆ ಒಲಿದು ಬಂದಿದೆ ಎನಿಸುತ್ತದೆ. ಸಾಹಿತಿಯಾಗಿ ಗುರುತಿಸಿಕೊಂಡ ಅವರು ಅದರಾಚೆಗೂ ತಮ್ಮ ಬರಹಲೋಕವನ್ನು ವಿಸ್ತರಿಸಿಕೊಂಡಿದ್ದಾರೆ. ಇಂತಹ ಅನೇಕ ಸಾಹಿತಿಗಳ ಉದಾಹರಣೆಯನ್ನು ಕೊಡಬಹುದು. ಪಾಶ್ಚಾತ್ಯ ದೇಶಗಳಲ್ಲಿ ಹೀಗೆ ಜೈಜಾಂಟಿಕ್ ಆಗಿ ವ್ಯಾಪಿಸಿಕೊಂಡವರಲ್ಲಿ ಟಿ.ಎಸ್. ಎಲಿಯಟ್,ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ಕಾಫ್ಕಾ ..ಹೀಗೆ ಅನೇಕರಿದ್ದಾರೆ. ಕೃತಿಕಾರನು ಪ್ರತಿಪಾದಿಸುವ ಆಶಯಗಳು ಅವನ ಕಾಲವನ್ನೂ ಮೀರಿ ತಮ್ಮೊಳಗೆ ಇರುವ ಜೀವಪರವಾದ ಆಶಯವನ್ನು ಸಾರುತ್ತಲೇ ಇರುತ್ತವೆ.

ಸಾಹಿತ್ಯ ರಚನೆಯ ಸಂದರ್ಭದಲ್ಲಿ ಲೇಖಕ ಯಾವ ಆಶಯಗಳನ್ನು ಹೊಂದಿರುತ್ತಾನೋ, ಕಾಲಾಂತರದಲ್ಲಿ ಅದರ ಪರಿಣಾಮ ಬೇರೆ ಬೇರೆಯಾಗಿರುತ್ತದೆ. ಹಾಗಂತ ಹೊರಹೊಮ್ಮುವ ಪರಿಣಾಮಗಳಿಗೆ ಲೇಖಕ ಎಷ್ಟರ ಮಟ್ಟಿಗೆ ನೈತಿಕವಾಗಿ ಬದ್ಧ ಎಂದು ಪ್ರಶ್ನೆ ಮಾಡುವುದು ಸೂಕ್ತವೆಂದು ಕಾಣುವುದಿಲ್ಲ.

ಸಾಹಿತ್ಯ ಕೃತಿಯೊಂದು ಸಮಕಾಲೀನತೆಗೆ ಸ್ಪಂದಿಸುವುದು ಉತ್ತಮ ಎಂಬ ಗ್ರಹಿಕೆಯಿದೆ. ನಿಮಗೇನನಿಸುತ್ತದೆ ?

ಒಂದು ಉತ್ತಮ ಸಾಹಿತ್ಯಕೃತಿಯೊಳಗೆ ಅಥವಾ ಕಲಾಕೃತಿಯೊಳಗೆ ಸ್ವಯಂ ಪೂರ್ಣವಾದ ಸ್ವಾಯತ್ತ ಜಗತ್ತು ಇರುತ್ತದೆ. ಅದು ಸ್ವಯಂಪೂರ್ಣ ಜಗತ್ತು ಏಕೆಂದರೆ ಅಲ್ಲಿನ ಪಾತ್ರ, ಪರಿಸರ, ಭಾಷೆ, ಅಲ್ಲಿನ ಸಂವಿಧಾನ, ಅವೆಲ್ಲವುಗಳ ಸಂಯೋಗದ ಮೂಲಕ ಮೂಡುವ ಜೀವನದರ್ಶನವಾಗಲೀ, ಕೃತಿಯೊಳಗೇ ಸಂಭವಿಸಿ ಪಡಿಮೂಡುವುದು. ಕೃತಿಯೊಳಗಿನ ಸಾವಯವವಾದ ಸಂಬಂಧಗಳು ಅವೆಲ್ಲವನ್ನೂ ಆಗು ಮಾಡುತ್ತವೆ. ಅದು ಜೀವ ವಿರೋಧಿಯಾದ ನಡೆಯನ್ನು, ಸೌಹಾರ್ದ ಬದುಕನ್ನು ವಿರೋಧಿಸುವಂತಹ ಯಾವುದೆ ನಡೆಯನ್ನು ಸ್ವಯಂ ತಾನೇ ತಾನಾಗಿ ಒಂದಲ್ಲ ಒಂದು ರೀತಿಯಲ್ಲಿ ವಿರೋಧಿಸುತ್ತಿರುತ್ತದೆ. ನಾವು ನಮ್ಮ ಪ್ರಸ್ತುತ ಜಗತ್ತಿನ ಸಮಸ್ಯೆಗಳಿಗೆ ಹೋಲಿಸಿ ನೋಡಲು ಶುರು ಮಾಡುವ ಮೂಲಕ ಅದನ್ನು ಅಳೆಯಲು ಶುರು ಮಾಡಿದರೆ ಬಿಕ್ಕಟ್ಟುಗಳು ಸೃಷ್ಟಿಯಾಗುತ್ತವೆ. ಪ್ರಸ್ತುತ ಜಯಂತ ಕಾಯ್ಕಿಣಿ ಅವರು ಬರೆದ ಜತೆಗಿರುವನು ಚಂದಿರ ನಾಟಕಕ್ಕೆ ಸಂಬಂಧಿಸಿ ನಡೆದ ಘಟನೆಗಳೂ ಅಂತಹುದೇ ಒಂದು ಮಾದರಿಯದ್ದು ಎನಿಸುತ್ತದೆ. ನಾಟಕವು ಜೀವಪರವಾಗಿಯೂ ಇದೆ, ಸದಾಶಯವನ್ನೂ ಹೊಂದಿದೆ ಎನ್ನುವುದೇ ಮೊದಲ ಆದ್ಯತೆಯ ವಿಚಾರವಾಗಬೇಕು ಅಲ್ಲವೇ. ಎರಡನೆಯದಾಗಿ ಈ ವಿಚಾರಗಳು ಎಷ್ಟು ಕಲಾತ್ಮಕವಾಗಿ ಮೂಡಿ ಬಂದಿವೆ, ಅವು ಸಹೃದಯನಾದವನಿಗೆ ಎಂತಹ ಅರಿವನ್ನು ಕೊಡುತ್ತವೆ ಎಂಬುದು ಮುಖ್ಯವಾಗುತ್ತವೆ. ಇಂದಿನ ದೋಷಗಳಿಗೂ ಇಂದಿನ ಸಮಾಜದ ಮಿತಿಗಳಿಗೂ ಅದು ವ್ಯತಿರಿಕ್ತವಾಗಿದೆಯೆಂದು ಕಂಡರೆ ಅದು ಯಾವುದೋ ಸೌಹಾರ್ದದ ಸಂದೇಶವನ್ನು ಕೊಡುತ್ತಿದೆ ಎಂದರ್ಥವೇ ಹೊರತು, ಅದು ಸರಿಯಿಲ್ಲ ಎಂಬ ತೀರ್ಮಾನ ಕೊಡುವುದು ಭೂಷಣವಲ್ಲ. ಅದಕ್ಕೂ ಮಿಗಿಲಾದ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದಾಗ, ಅದನ್ನು ತಾತ್ವಿಕವಾಗಿಯೇ ಮಂಡಿಸುವ ವ್ಯಾಪಕ ಅವಕಾಶಗಳೂ ಇದ್ದೇ ಇವೆಯಲ್ಲ.

ಕಲೆ ಮತ್ತು ಸಾಹಿತ್ಯ ಕೃತಿಗಳು ಕೇವಲ ಕಲಾತ್ಮಕವಾಗಿದ್ದರೆ ಸಾಲದು. ಆರ್ಟ್ ಫಾರ್ ಆರ್ಟ್ ಸೇಕ್ ಆಗಿ ಉಳಿಯಬಾರದು. ಕಲಾತ್ಮಕತೆಯ ಮಿತಿಗಳನ್ನೂ ದಾಟಿದ ಜೀವಪರತೆ ಅಲ್ಲಿ ಇರಲೇಬೇಕಾಗುತ್ತದೆ. ಎಲ್ಲವನ್ನೂ ದಾಟಿ ನಿಲ್ಲುವ ಮಾನವೀಯತೆಯೇ ಅಂತಿಮವಾಗಿ ಉಳಿಯುವ ಸತ್ಯವಾಗಿರುತ್ತದೆ. ಬೇಂದ್ರೆಯವರು ಕುರುಡು ಕಾಂಚಾಣ ಕವನವನ್ನು ಅಂದು ಬರೆದರೆ , ಇಂದಿಗೂ ಅದು ಸಹೃದಯರ ನೆನಪಿನಲ್ಲಿ ನಿಲ್ಲುವುದಕ್ಕೆ ಕಾರಣ, ಅದರ ಕಲಾತ್ಮಕತೆಯೂ ಹೌದು, ಅದರ ಸಾರ್ವಕಾಲಿಕತೆಯೂ ಹೌದು. ಚಂದಿರ ಎನ್ನುವುದು ಜೀವಪರತೆಯ, ಸಕಾರಾತ್ಮಕ ಆಶಯದ ರೂಪಕವಾಗಿದ್ದರೆ ನಾಟಕದ ಭಾಷೆಯು ಪರಿಪೂರ್ಣವಾಗಿ ಸಕಾರಾತ್ಮಕವಾದ ತಾತ್ವಿಕತೆಯನ್ನು ಪ್ರತಿಪಾದಿಸುತ್ತಿರುವುದರಿಂದ ಕಾಲ ಕಾಲಕ್ಕೆ ನಾಟಕದ ಆಚೆಗಿನ ಜಿಗಿತವು ಸಾಧ್ಯವಾಗಿದೆ. ಇಂದಿನ ವಾತಾವರಣದಲ್ಲಿಅದು ಏನೋ ಪ್ರಖರವಾದ ಸಂದೇಶವನ್ನು ಕೊಡಬಲ್ಲುದಾಗಿದೆ ಎಂದು ಅನಿಸುತ್ತದೆ.

ಸಾಹಿತ್ಯ ಕೃತಿಗಳು, ವಿವಿಧ ಕಲಾಪ್ರಕಾರಗಳು ಸಮಾಜದಲ್ಲಿ ಬಹಳ ಅಂತರದಲ್ಲಿ ನಿಂತಿರುವ ಮನಸ್ಸುಗಳ ನಡುವೆ ಸೇತುವೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಅಂತಹ ಸಾಮರ್ಥ್ಯ ಅವುಗಳಿಗಿವೆ. ಆದರೆ ಮತಧರ್ಮಗಳು ಮತ್ತು ರಾಜಕೀಯ ವಿಚಾರಗಳೇನಿದ್ದರೂ ಗೋಡೆಗಳನ್ನು ಕಟ್ಟುವ ಕೆಲಸ ಮಾಡುತ್ತವೆ. ಗೋಡೆಗಳನ್ನು ಕಟ್ಟುವವರಿಗೆ ಇರುವುದು ಒಂದೇ ಉದ್ದೇಶ. ತಮ್ಮ ಸ್ವಾರ್ಥ ಲಾಭಗಳಿಗಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುವುದು. ಸಾಹಿತ್ಯವೂ, ಕಲಾಪ್ರಪಂಚವೂ ಭಿನ್ನಾಭಿಪ್ರಾಯಗಳೊಂದಿಗೇ ಸೌಹಾರ್ದತೆಯ ಬದುಕನ್ನು ಪ್ರತಿಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ. ರಾಜಕೀಯ ಕ್ಷೇತ್ರಕ್ಕೆ ಅದು ಸಾಧ್ಯವಿಲ್ಲ.

ಹಾಗಾದರೆ ಸಹೃದಯರು ಸಾಹಿತ್ಯವನ್ನು ಗ್ರಹಿಸುವ ಕ್ರಮದಲ್ಲಿ ವ್ಯತ್ಯಾಸವಾಗಿದೆ ಎನ್ನುತ್ತೀರಾ ?

ಸಾಹಿತ್ಯ- ಸಹೃದಯತೆ ಎಂಬೆಲ್ಲ ಜಿಜ್ಞಾಸೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆನಿಸಿದ್ದರಿಂದ ಇಂದಿನ ಈ ತೊಡಕಿನ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅನಿಸುತ್ತಿಲ್ಲ. ಯಾವುದೇ ಪಂಥಗಳಾದರೂ ತಮ್ಮ ವಿಚಾರ ಮಂಡನೆಯ ಸಂದರ್ಭದಲ್ಲಿ ಪ್ರಾಮಾಣಿಕತೆಯನ್ನು ಇಟ್ಟುಕೊಂಡರೆ ವಿಭಿನ್ನ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಇಂದು ತೀವ್ರತರವಾದ ಸಿದ್ಧಾಂತಗಳನ್ನು ಪ್ರತಿಪಾದಿಸುವವರು, ತಮಗೆ ಪ್ರಾಮಾಣಿಕತೆಯ ಅಗತ್ಯವಿಲ್ಲ ಎಂದು ನಂಬಿದ್ದಾರೆ. ಅವರವರ ರಾಜಕೀಯ ಲಾಭಗಳಿಗೋಸ್ಕರ ಸಿದ್ಧಾಂತಗಳನ್ನು ಪ್ರತಿಪಾದಿಸುವ ಭರಾಟೆಯಲ್ಲಿ ಜನಸಾಮಾನ್ಯರು ಮೂರ್ಖರಾಗುತ್ತಿದ್ದಾರೆ. ಕ್ಷಣಿಕ ಆಮಿಷಗಳಿಗೆ ಬಲಿಯಾಗುವ ಜನರು, ನಮ್ಮ ಸಾಹಿತ್ಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿಹಿಡಿಯುವ, ನಿಷ್ಪಕ್ಷಪಾತವಾಗಿ ಅವುಗಳನ್ನು ಆಸ್ವಾದಿಸುವ, ಮುಕ್ತವಾದ ವಾತಾವರಣದಲ್ಲಿ ಅವುಗಳನ್ನು ವಿಮರ್ಶಿಸುವ, ಖಂಡಿಸುವ, ಬೆಂಬಲಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರಿಗೆ ಸ್ವಾರ್ಥ ಸಿದ್ಧಾಂತಗಳು ಅರ್ಥವಾಗುವ ಹೊತ್ತಿಗೆ ಬಹಳ ತಡವಾಗುತ್ತಿದೆ.

ಸಿದ್ಧಾಂತ ಮತ್ತು ಪಂಥಗಳ ನಡುವಿನ ತಿಕ್ಕಾಟವು ಈ ಎಲ್ಲ ಪರಿಣಾಮಗಳಿಗೆ ಕಾರಣವೆನ್ನಬಹುದಾ ?

ಇತ್ತೀಚೆಗೆ ಪರಿಸ್ಥಿತಿಗಳು ಅತಿರೇಕಕ್ಕೆ ಹೋದಂತೆ ಅನಿಸುತ್ತದೆ. ತಮ್ಮ ತಮ್ಮ ಸಿದ್ಧಾಂತಗಳನ್ನು ನಂಬುವುದಕ್ಕೆ ಮತ್ತು ಸಮರ್ಥಿಸುವುದಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ತೊಡಕಿಲ್ಲ. ಅಂದಮೇಲೆ ನಾಟಕ, ಪದ್ಯ, ಕಲಾಕೃತಿಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಲು ಸಾಧ್ಯವಾಗಬೇಕು. ಮಥಿಸಿದಾಗ ಬೆಣ್ಣೆ ಬರುವಂತೆ, ಸಂವಾದಗಳು ಉತ್ತಮ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ, ನಮ್ಮ ಲಲಿತಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತವೆ. ಆದರೆ ನಾನು ನಂಬಿದ ಸಿದ್ಧಾಂತವನ್ನು ನೀನೂ ನಂಬಲೇಬೇಕು ಎನ್ನುವುದು ಬೌದ್ಧಿಕ ದೌರ್ಜನ್ಯವಾಗುತ್ತದೆ. ಬಲಪಂಥದಲ್ಲಾಗಲೀ, ಎಡಪಂಥದಲ್ಲಾಗಲೀ- ಒಂದು ವಿಚಾರವನ್ನು ನಂಬದೇ ಇರುವವರನ್ನು, ಬೆಂಬಲಿಸದೇ ಇರುವವರನ್ನು ಅಸ್ಪೃಶ್ಯರಂತೆ ನೋಡುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಅದು ಒಳ್ಳೆಯ ಸಾಮಾಜಿಕ ಲಕ್ಷಣವಲ್ಲ. ಅದೇ ರೀತಿ ಒಂದು ತಪ್ಪು ನಡೆದಾಗ ಅದಕ್ಕೆ ಕಾರಣವಾದ ಮನುಷ್ಯ ಸೀಮಿತ ಸ್ವಭಾವವನ್ನು ತಿದ್ದುವ, ತಿದ್ದಿಕೊಳ್ಳುವ ವಾತಾವರಣ ರೂಪಿಸಿಕೊಡದೇ ಇಡೀ ಸಮುದಾಯವನ್ನೇ ಹೊಣೆಯಾಗಿಸಿ ದೂಷಿಸುವುದು ಕೂಡ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನ. ಇದನ್ನು ಅರಿಯುವ ಪ್ರಯತ್ನವನ್ನು ಸಾರ್ವಜನಿಕರು ಮಾಡಬೇಕಾಗಿದೆ. ಅಥವಾ ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸುವ ಕೆಲಸವೂ ಆಗಬೇಕಾಗಿದೆ ಎನಿಸುತ್ತದೆ.