ಕಾರಿನಲ್ಲಿ ಸ್ಲೊವೇನಿಯಾದ ಯಾವುದೇ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಎರಡು ತಾಸಿನಲ್ಲಿ ಪ್ರಯಾಣಿಸಬಹುದು. ಅಷ್ಟು ಪುಟ್ಟ ದೇಶ. ಪುಟ್ಟ ರಾಷ್ಟ್ರವಾದರೂ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನೊಳಗೊಂಡಿದೆ. ಪ್ರವಾಸಿಗಳಿಗೆ ಹೇರಳ ಅವಕಾಶಗಳನ್ನು ತೆರೆದಿಟ್ಟಿರುವ ಸ್ಲೊವೇನಿಯಾ ಪ್ರಕೃತಿ ಪ್ರೇಮಿಗಳನ್ನು ಎಲ್ಲ ಋತುಗಳಲ್ಲೂ ಕೈಬೀಸಿ ಕರೆಯುತ್ತದೆ. ಸ್ಲೊವೇನಿಯಾದ ಶುಭ್ರ ಸ್ಪಟಿಕದಂತಹ ಸ್ವಚ್ಚ ನದಿಗಳು ನನ್ನ ಅಚ್ಚುಮೆಚ್ಚು. ಪ್ರಪಂಚದ ಅತ್ಯಂತ ಸುಂದರ ಸರೋವರಗಳಲ್ಲಿ ಒಂದಾದ “ಲೇಕ್ ಬ್ಲೆಡ್” ಕೂಡ ಸ್ಲೊವೇನಿಯಾದಲ್ಲಿದೆ. ನಾನು ಗಮನಿಸಿದಂತೆ ಕನ್ನಡದ ಹಲವಾರು ಚಲನಚಿತ್ರಗಳ ಹಾಡುಗಳು ಸ್ಲೊವೇನಿಯಾದಲ್ಲಿ ಚಿತ್ರೀಕರಣಗೊಂಡಿವೆ.
“ದೂರದ ಹಸಿರು” ಸರಣಿಯಲ್ಲಿ ಸ್ಲೊವೇನಿಯಾದ ಪೋಸ್ಟೋಯ್ನಾ ಗುಹೆಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

ಸ್ಲೊವೇನಿಯಾ ಮಧ್ಯ ಯುರೋಪಿನ ಒಂದು ಪುಟ್ಟ ರಾಷ್ಟ್ರ. ಆಸ್ಟ್ರಿಯಾ, ಕ್ರೊಯೇಷಿಯಾ ಹಾಗೂ ಹಂಗೇರಿ ದೇಶಗಳೊಂದಿಗೆ ಭೂ ಗಡಿ ಹಂಚಿಕೊಂಡಿದೆ. ಮತ್ತೊಂದು ಭಾಗದಲ್ಲಿ ಆಡ್ರಿಯಾಟಿಕ್ ಸಮುದ್ರ ತೀರವಿದೆ. ಇದರ ರಾಜಧಾನಿ Ljubljana. ಈ ಹೆಸರಿನ ಉಚ್ಚಾರಣೆ ಲುಬಿಯಾನಾ ಎಂದು. ಇದೊಂದು ಚೊಕ್ಕವಾದ, ಚಿಕ್ಕದಾದ ನಗರ. ಮುಂದೆ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ.

ಕಾರಿನಲ್ಲಿ ಸ್ಲೊವೇನಿಯಾದ ಯಾವುದೇ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಎರಡು ತಾಸಿನಲ್ಲಿ ಪ್ರಯಾಣಿಸಬಹುದು. ಅಷ್ಟು ಪುಟ್ಟ ದೇಶ. ಪುಟ್ಟ ರಾಷ್ಟ್ರವಾದರೂ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನೊಳಗೊಂಡಿದೆ. ಪ್ರವಾಸಿಗಳಿಗೆ ಹೇರಳ ಅವಕಾಶಗಳನ್ನು ತೆರೆದಿಟ್ಟಿರುವ ಸ್ಲೊವೇನಿಯಾ ಪ್ರಕೃತಿ ಪ್ರೇಮಿಗಳನ್ನು ಎಲ್ಲ ಋತುಗಳಲ್ಲೂ ಕೈಬೀಸಿ ಕರೆಯುತ್ತದೆ. ಸ್ಲೊವೇನಿಯಾದ ಶುಭ್ರ ಸ್ಪಟಿಕದಂತಹ ಸ್ವಚ್ಚ ನದಿಗಳು ನನ್ನ ಅಚ್ಚುಮೆಚ್ಚು. ಪ್ರಪಂಚದ ಅತ್ಯಂತ ಸುಂದರ ಸರೋವರಗಳಲ್ಲಿ ಒಂದಾದ “ಲೇಕ್ ಬ್ಲೆಡ್” ಕೂಡ ಸ್ಲೊವೇನಿಯಾದಲ್ಲಿದೆ. ನಾನು ಗಮನಿಸಿದಂತೆ ಕನ್ನಡದ ಹಲವಾರು ಚಲನಚಿತ್ರಗಳ ಹಾಡುಗಳು ಸ್ಲೊವೇನಿಯಾದಲ್ಲಿ ಚಿತ್ರೀಕರಣಗೊಂಡಿವೆ. ಮುಂದೆ ಆಯಾ ಪ್ರದೇಶಗಳನ್ನು ವಿವರಿಸುವಾಗ ಹಾಡುಗಳನ್ನು ನೆನಪಿಸುತ್ತೇನೆ.

ಬೇಸಿಗೆಯಲ್ಲಿ ಚಾರಣಿಗರಿಗೆ ಹಾಗೂ ಚಳಿಗಾಲದಲ್ಲಿ ಸ್ಕೀ ಸಾಹಸಿಗಳಿಗೆ ಅನೇಕ ಪರ್ವತಗಳಿವೆ. ಪರ್ವತಗಳ ನಡುವೆ, ತಿರುವು ರಸ್ತೆಗಳಲ್ಲಿ ಕಾರು ಓಡಿಸುವ ಆಸಕ್ತಿ ಇರುವ ನನ್ನಂತಹವರಿಗೆ ಸ್ಲೊವೇನಿಯಾ ಹಲವಾರು ಘಾಟಿ ರಸ್ತೆಗಳನ್ನು ಪರಿಚಯಿಸುತ್ತದೆ. ನಾವು ಭೇಟಿ ಕೊಟ್ಟ “ಲೋಗಾರ್ ವ್ಯಾಲಿ” ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ.

ನಾನು ಇದುವರೆಗೂ ಯೂರೋಪಿನ ಪ್ರವಾಸಗಳಲ್ಲಿ ನೋಡಿರುವ ವಿಶೇಷವಾದ ಸ್ಥಳಗಳಲ್ಲಿ ಒಂದು ಎಂದರೆ ಸ್ಲೊವೇನಿಯಾದ “ಪೋಸ್ಟೋಯ್ನಾ ಗುಹೆಗಳು”(Postojna Caves). ಈ ಗುಹೆಗಳ ಇತಿಹಾಸ ಬಹಳ ರೋಚಕವಾಗಿದೆ. ಗುಹೆಯೊಳಗೆ ಲಕ್ಷಾಂತರ ವರ್ಷಗಳ ಇತಿಹಾಸ ಅಡಗಿದ್ದರೂ, ಇದು ಮನುಷ್ಯನ ಕಣ್ಣಿಗೆ ಬಿದ್ದಿದ್ದು ಮಾತ್ರ ಹದಿನೇಳನೇ ಶತಮಾನದ ಕೊನೆ ಕೊನೆಯಲ್ಲಿ. ಆ ಕಾಲದಲ್ಲಿ, ಈ ಗುಹೆಯ ಪ್ರದೇಶವು ಆಸ್ಟ್ರಿಯ ರಾಜನ ಆಳ್ವಿಕೆಯ ಅಡಿಯಲ್ಲಿತ್ತು. ಅಲ್ಲಿಯ ಕೆಲಸಗಾರನಾದ “ಲೂಕಾ ಚೆಕ್” ಎನ್ನುವ ವ್ಯಕ್ತಿ ಈ ಗುಹೆಗಳನ್ನು ಅನ್ವೇಷಿಸಿದನು. 1819 ರಲ್ಲಿ ಸಾರ್ವಜನಿಕರಿಗೆ ಪೋಸ್ಟೋಯ್ನಾ ಗುಹೆಗಳ ಪ್ರವೇಶ ಪ್ರಾರಂಭವಾಯಿತು. ನಂತರ ಆಳ್ವಿಕೆ ಬದಲಾದಂತೆ ಗುಹೆಗಳ ದುರುಪಯೋಗವೂ ಬದಲಾಯಿತು. ಅದರಲ್ಲಿಯೂ ವಿಶ್ವ ಯುದ್ಧದ ಸಮಯದಲ್ಲಿನ ಕಾಲಘಟ್ಟದಲ್ಲಿ, ಪೋಸ್ಟೋಯ್ನಾ ಗುಹೆಗಳನ್ನು ಹಲವಾರು ರೂಪದಲ್ಲಿ ಉಪಯೋಗಿಸಲಾಯಿತು. ಕೆಲ ಕಾಲ ಸರಕು, ಯುದ್ಧ ಸಾಮಗ್ರಿಗಳನ್ನು ಅವಿತಿಡಲು ಬಳಸಲಾಯಿತು. ಯುದ್ಧದ ತುತ್ತ ತುದಿಯ ಕಾಲದಲ್ಲಿ ಈ ಗುಹೆಗಳನ್ನು ಬಂಕರ್ ರೀತಿಯಲ್ಲಿ ಬಳಸಲು ಸಹಾಯವಾಯಿತು.

ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಒಂದು ವಿಶೇಷವಾದ ಯುದ್ಧ ತಂತ್ರವಿತ್ತು. ಈ ತಂತ್ರಗಾರಿಕೆಯ ಪ್ರಕಾರ ಜರ್ಮನಿ ಒಕ್ಕೂಟದ ಪ್ರದೇಶದೊಳಗೆ, ಅವರ ವಿರುದ್ಧವೇ ದಂಗೆ ಏಳುವ ಸಣ್ಣ ಸಣ್ಣ ಗುಂಪುಗಳನ್ನು ಗುಪ್ತವಾಗಿ ತಯಾರು ಮಾಡಲಾಗಿತ್ತು. ಈ ಗುಂಪಿನ ಸದಸ್ಯರನ್ನು “ಪಾರ್ಟಿಸಾನ್ಸ್” ಎಂದು ಕರೆದರು. ಆ ದಂಗೆಗಳಿಗೆ ನಿರ್ದಿಷ್ಟವಾದ ಸಮಯದಲ್ಲಿ ಸೂಚನೆಗಳು ಬರುತ್ತಿದ್ದವು. ಸೋವಿಯತ್ ಯೂನಿಯನ್ ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಎಷ್ಟೋ ಪಾರ್ಟಿಸಾನ್ಸ್ ಗಳು ಸಂತೋಷವಾಗಿ ನೇಣುಗಂಬಕ್ಕೆ ಕೊರಳೊಡ್ಡಿದ್ದಾರೆ. ಸಂವಹನದ ಯಾವ ತಂತ್ರಜ್ಞಾನವೂ ಇಲ್ಲದ ಆ ಸಮಯದಲ್ಲಿ, ಜರ್ಮನಿ ಒಕ್ಕೂಟದ ಬಾಹುಳ್ಯವಿದ್ದ ಪ್ರದೇಶಗಳಲ್ಲಿ ಅವರಿಗೆ ಅನುಮಾನವೇ ಬರದಂತೆ ನಡೆದ ಈ ತಂತ್ರಗಾರಿಕೆ ಇಂದಿಗೂ ಅಚ್ಚರಿಯಾಗಿಯೇ ಉಳಿದಿದೆ.

ಈಗ ಈ ಉಲ್ಲೇಖ ಯಾಕೆ ಬಂತು ಎಂದು ಯೋಚಿಸುತ್ತಿದ್ದೀರಾ? ಇದಕ್ಕೊಂದು ಕಾರಣವಿದೆ. ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಪಡೆ ತನ್ನ ದೊಡ್ಡ ಮಟ್ಟದ ತೈಲ ಸಂಗ್ರಹವನ್ನು ಪೋಸ್ಟೋಯ್ನಾ ಗುಹೆಗಳಲ್ಲಿ ಶೇಖರಿಸಿಟ್ಟಿದ್ದರು. ಇಟಲಿಯನ್ನರು ತಯಾರು ಮಾಡಿದ್ದ ಸ್ಥಳೀಯ ಪಾರ್ಟಿಸಾನ್ಸ್‌ಗಳು, ಜರ್ಮನ್ನರಿಗೆ ತಿಳಿಯದಿದ್ದ ಗುಹೆಯ ಹಿಂಭಾಗದ ಮತ್ತೊಂದು ಸುರಂಗದೊಳಗಿಂದ ನುಗ್ಗಿ ತೈಲಾಗಾರಕ್ಕೆ ಬೆಂಕಿ ಇತ್ತು ಪರಾರಿಯಾಗಿದ್ದರಂತೆ. ಏಳು ದಿನಗಳ ಕಾಲ ಸತತವಾಗಿ ಉರಿದ ಇಂಧನ ಗುಹೆಯ ಬಹು ಭಾಗವನ್ನು ನಾಶಮಾಡಿಬಿಟ್ಟಿತು. ಯಾರು ಈ ಕೆಲಸ ಮಾಡಿದ್ದು ಎಂದು ಜರ್ಮನ್ ಪಡೆಗೆ ಕೊನೆಗೂ ಪ್ರಶ್ನೆಯಾಗಿಯೇ ಉಳಿದಿತ್ತು. ಅದ್ಭುತ ಯುದ್ಧ ತಂತ್ರಗಾರಿಕೆ!

(ಸುಟ್ಟು ಕರಕಲಾಗಿರುವ ಗುಹೆಯ ಒಳಭಾಗ)

ಇಪ್ಪತ್ನಾಲ್ಕು ಕಿಲೋಮೀಟರ್ ಉದ್ದವಿರುವ ಪೋಸ್ಟೋಯ್ನಾ ಗುಹೆ, ಪ್ರಸ್ತುತ ವರ್ಷದುದ್ದಕ್ಕೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಗುಹೆಯ ಹೊರಗೆ ಉರಿಯುವ ಬಿಸಿಲಿದ್ದರೂ, ಸುರಿಯುವ ಮಳೆಯಿದ್ದರೂ ಅಥವಾ ಹಿಮ ಸುರಿಯುತ್ತಿದ್ದರೂ ಒಳಗೆ ಮಾತ್ರ ಯಾವಾಗಲೂ ಒಂದೇ ತಾಪಮಾನ! ಹೌದು, ಯಾವಾಗಲೂ 10 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಗುಹೆಗೆ ಭೇಟಿ ನೀಡಿದ ಮೇಲೆ ನಮ್ಮ ಮುನಿಗಳು, ಸಾಧು-ಸಂತರು ತಪಸ್ಸು, ಧ್ಯಾನ ಮಾಡುವುದಕ್ಕೆ ಹಿಮಾಲಯದಲ್ಲಿ ಏಕೆ ಗುಹೆಗಳನ್ನೇ ಆರಿಸಿಕೊಳ್ಳುತ್ತಿದ್ದರು ಎನ್ನುವ ಬಹುಕಾಲದ ಪ್ರಶ್ನೆಗೆ ಉತ್ತರ ದೊರೆಯಿತು. ಪ್ರಕೃತಿಯ ವಿಚಿತ್ರಗಳು ಎಷ್ಟು ವಿಸ್ಮಯಕಾರಿ!

ವಿಶ್ವ ಯುದ್ಧದ ಸಮಯದಲ್ಲಿನ ಕಾಲಘಟ್ಟದಲ್ಲಿ, ಪೋಸ್ಟೋಯ್ನಾ ಗುಹೆಗಳನ್ನು ಹಲವಾರು ರೂಪದಲ್ಲಿ ಉಪಯೋಗಿಸಲಾಯಿತು. ಕೆಲ ಕಾಲ ಸರಕು, ಯುದ್ಧ ಸಾಮಗ್ರಿಗಳನ್ನು ಅವಿತಿಡಲು ಬಳಸಲಾಯಿತು. ಯುದ್ಧದ ತುತ್ತ ತುದಿಯ ಕಾಲದಲ್ಲಿ ಈ ಗುಹೆಗಳನ್ನು ಬಂಕರ್ ರೀತಿಯಲ್ಲಿ ಬಳಸಲು ಸಹಾಯವಾಯಿತು.

ಪ್ರವಾಸಿಗರಿಗೆ ಗುಹೆಯ ಮೊದಲ ಐದು ಕಿಲೋಮಿಟರ್ ನೋಡಲು ಮಾತ್ರ ಅವಕಾಶವಿದೆ. ಒಳಗೆ ಕತ್ತಲಿರುವುದರಿಂದ ನಾವಾಗಿಯೇ ಹೋಗಲು ಅವಕಾಶವಿಲ್ಲ. ನಿಗದಿಪಡಿಸಿದ ಸಮಯದಲ್ಲಿ ಗುಂಪಿನ ಜೊತೆಯಲ್ಲಿ ಮಾತ್ರ ಹೋಗಬಹುದು. ಆದ್ದರಿಂದ ಗೈಡ್ ವ್ಯವಸ್ಥೆ ಕೂಡ ಒಳಗೊಂಡಿದೆ. ಇಂಗ್ಲೀಷ್, ಇಟಾಲಿಯನ್ ಹಾಗೂ ಸ್ಲೋವೇನಿಯನ್ ಭಾಷೆಯಲ್ಲಿ ವಿವರಣೆ ಇರುತ್ತದೆ. ಬೇರೆ ಭಾಷೆಗಳಿಗೆ ಆಡಿಯೋ ಗೈಡ್ ವ್ಯವಸ್ಥೆ ಇದೆ. ಹಾಗಾದರೆ ಇಲ್ಲಿ ಕಿಲೋಮೀಟರ್ ಗಟ್ಟಲೆ ನಡೆಯಬೇಕಾ? ಖಂಡಿತಾ ಇಲ್ಲ. ಪ್ರವಾಸಿಗರಿಗಾಗಿ ಗುಹೆಯೊಳಗೆ ರೈಲು ಹಳಿಗಳನ್ನು ಹಾಕಿ ಪುಟ್ಟ ರೈಲಿನ ವ್ಯವಸ್ಥೆ ಮಾಡಿದ್ದಾರೆ. ಕಬ್ಬನ್ ಪಾರ್ಕಿನ ಪುಟಾಣಿ ರೈಲಿನ ಹಾಗೆಯೇ ಇದೆ. “Age is just a number” ಎನ್ನುವುದು ಇಲ್ಲಿ ಅಕ್ಷರ ಸಹ ಸತ್ಯ. ವಯಸ್ಸಿನ ಗಡಿಯನ್ನು ದಾಟಿ, ಪುಟಾಣಿ ರೈಲಿನ ಪ್ರಯಾಣವನ್ನು ಆನಂದಿಸದ ಪ್ರವಾಸಿಗರೇ ಇಲ್ಲ.

ಸಮಯಕ್ಕೆ ಸರಿಯಾಗಿ ಟಿಕೆಟ್ ಪರೀಕ್ಷಿಸಿ ರೈಲಿನಲ್ಲಿ ಆಸನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಮೊದಲ ಮೂರುವರೆ ಕಿಲೋಮೀಟರ್ ರೈಲಿನ ಪ್ರಯಾಣ. ಹೊರಡುವ ಸಮಯ ಆಗುತ್ತಲೇ ರೈಲು “ಕೂ..” ಎಂದು ಕೂಗಿ ಬಾಲ್ಯದ ಕಬ್ಬನ್ ಪಾರ್ಕ್ ನೆನಪನ್ನು ಮರುಕಳಿಸುವಂತೆ ಮಾಡುತ್ತದೆ. ಸಂಪೂರ್ಣ ರೈಲಿನ ಪ್ರಯಾಣ ಗುಹೆಯೊಳಗೆ ಇರುವುದರಿಂದ “ಚುಕು ಬುಕು..” ಶಬ್ದದ ಪ್ರತಿಧ್ವನಿ ಎಲ್ಲೆಡೆಯಿಂದ ಕೇಳಿಬರುತ್ತದೆ. ಅಲ್ಲಲ್ಲಿ ಬೆಳಕಿನ ವ್ಯವಸ್ಥೆ ಇದೆ. ಗುಹೆಯ ಒಳಗೆ ಸಾಗುತ್ತಲೇ ಬೇರೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಎತ್ತ ನೋಡಿದರೂ ಸುಂದರ ಕಲಾಕೃತಿಯಂತೆ ಕಾಣುವ ಸುಣ್ಣದ ಕಲ್ಲಿನ ನೈಸರ್ಗಿಕ ರಚನೆಗಳು. ಒಂದು ಕಡೆಯಂತೂ ಕಲ್ಲಿನ ರಚನೆ ಎಷ್ಟು ತೆಳುವಾಗಿದೆ ಎಂದರೆ ಯಾರೋ ಸೀರೆಯ ನೆರಿಗೆ ಹಾಕಲು ತಯಾರು ಮಾಡಿದಂತಿದೆ.

ಸಾಗುತ್ತಾ ಗುಹೆಯ ಮಧ್ಯ ಭಾಗದಲ್ಲಿ ಸಿಗುವುದು “ಕಾನ್ಸರ್ಟ್ ಹಾಲ್”. ಇಲ್ಲಿ ಇಟಲಿಯ ಸುಪ್ರಸಿದ್ಧ ಮುರಾನೋ ಗಾಜಿನ ಸುಂದರವಾದ ದೀಪಗಳನ್ನು ಬೆಳಕಿಗಾಗಿ ಅಳವಡಿಸಲಾಗಿದೆ. ಸುಮಾರು ಐವತ್ತು ಮಂದಿ ಕುಳಿತುಕೊಳ್ಳಬಹುದಾದಷ್ಟು ಜಾಗ ಇದೆ. ನಮ್ಮ ಗೈಡ್ ವಿವರಿಸಿದ್ದನ್ನು ಕಲ್ಪನೆ ಮಾಡಿಕೊಂಡರೆ ಸಾಕು, ಮೈ ರೋಮಾಂಚನವಾಗುವಂತಿತ್ತು. ಇನ್ನು ಇಲ್ಲಿ ಸಂಗೀತ ಕಾರ್ಯಕ್ರಮ ಕೇಳುವವರು ಎಷ್ಟು ಪುಣ್ಯವಂತರು! ಅವರ ವಿವರಣೆಯ ಪ್ರಕಾರ ಇಲ್ಲಿ ವಾದ್ಯ ನುಡಿಸುವ ಸಂಗೀತಗಾರರು, ತಾಳ-ಶೃತಿ ಸಂಯೋಜನೆಯನ್ನು ಇಲ್ಲಿನ ಪ್ರತಿಧ್ವನಿಗಳ ಅನುಸಾರವಾಗಿ ಸಿದ್ಧಪಡಿಸಿರುತ್ತಾರಂತೆ. ಒಮ್ಮೆ ನುಡಿಸಿದ ಸ್ವರಗಳು ಪ್ರತಿಧ್ವನಿಗೊಂಡು, ಒಂದರ ನಂತರ ಒಂದರಂತೆ ಬರುತ್ತವಂತೆ. ಬಹುಷಃ ಇಂತಹ ಸಂಗೀತ ಸಂಜೆ ಬೇರೆಲ್ಲೂ ಕೇಳಲು ಸಿಗುವುದಿಲ್ಲ ಅನ್ನಿಸುತ್ತದೆ. ಯಾರು ಬೇಕಾದರೂ ಈ ಕಾನ್ಸರ್ಟ್ ಹಾಲ್ ಕಾಯ್ದಿರಿಸಬಹುದು. ಮದುವೆ, ಸಮಾರಂಭಗಳಿಗೂ ಅವಕಾಶವಿದೆ. ಇಲ್ಲಿನವರು ಮದುವೆಗೆ ಇಪ್ಪತ್ತು ಮೂವತ್ತು ಆಪ್ತರನ್ನು ಕರೆದರೆ ಹೆಚ್ಚು! ಹಾಗಾಗಿ ನಡೆಯುತ್ತದೆ. ನಮ್ಮ ಕಡೆಯ ಹಾಗೆ ಸಾವಿರ ಸಂಖ್ಯೆಯಲ್ಲಿ ಜನ ಬರುವ ಹಾಗಿದ್ದರೆ, ಇದಕ್ಕೆಲ್ಲ ಅವಕಾಶವಿರುತ್ತಿರಲಿಲ್ಲ ಎನ್ನಿಸುತ್ತದೆ.

(ಗುಹೆಯೊಳಗಿರುವ “ಕಾನ್ಸರ್ಟ್ ಹಾಲ್”)

ಕೊನೆಯ ಒಂದೂವರೆ ಕಿಲೋಮೀಟರ್ ನಡೆಯಬೇಕು. ಗುಹೆಯ ಅಸಲಿ “ಪೈಸಾ ವಸೂಲ್” ಜಾಗ ಎಂದರೆ ಇದೇ. ಈ ಒಂದೂವರೆ ಕಿಲೋಮೀಟರ್ ನಡೆಯಲಿಕ್ಕೆ ಕಿರಿದಾದ, ಗೊತ್ತುಪಡಿಸಿದ ಮಾರ್ಗವಿರುತ್ತದೆ. ಗೈಡ್ ಟಾರ್ಚ್ ಲೈಟ್ ಸಹಾಯದಿಂದ ಎಲ್ಲವನ್ನು ನಿಧಾನವಾಗಿ ತೋರಿಸಿ ವಿವರಿಸುತ್ತಾರೆ. ಕೃತಕ ಬೆಳಕಿನ ವ್ಯವಸ್ಥೆ ಗುಹೆಯೊಳಗೆ ಎಷ್ಟು ಬೇಕೋ ಅಷ್ಟು ಮಾತ್ರ ಇದೆ. ಫೋಟೋ ತೆಗೆಯುವ ಅವಕಾಶವಿದೆ, ಆದರೆ ಫ್ಲಾಶ್ ಬಳಸುವಂತಿಲ್ಲ. ಇಲ್ಲಿರುವ ಸುಣ್ಣದ ಕಲ್ಲಿನ ಆಕೃತಿಗಳು ಇಂದು ಕಾಣುವ ರೀತಿಯಲ್ಲಿ ರೂಪಾಂತರಗೊಳ್ಳಲು ಲಕ್ಷಾಂತರ ವರ್ಷಗಳೇ ಹಿಡಿದಿದೆ! ಮಳೆ ಬಂದಾಗ ಬೆಟ್ಟದ ಮೇಲೆ ಬೀಳುವ ನೀರಿನ ಹನಿಗಳು ವಾತಾವರಣದ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇದೊಂದು ರೀತಿಯ ತೀಕ್ಷ್ಣವಲ್ಲದ ಆಸಿಡ್ ರೂಪ ಪಡೆದುಕೊಳ್ಳುತ್ತದೆ. ಕಲ್ಲಿನೊಳಗೆ ಪಸೆಯಾಗಿ ಗುಹೆಯೊಳಗೆ ದೀರ್ಘ ಕಾಲದವರೆಗೂ ತೊಟ್ಟಿಕ್ಕುತ್ತಿರುತ್ತದೆ. ಈ ರೀತಿಯಾಗಿ ಬರುವ ನೀರಿನ ಹನಿಗಳು ಆಸಿಡ್ ಸ್ವಭಾವವನ್ನು ಹೊಂದಿರುವುದರಿಂದ, ಸುಣ್ಣದ ಕಲ್ಲನ್ನು ಕರಗಿಸಿ ತನ್ನೊಟ್ಟಿಗೆ ತರುತ್ತವೆ. ಸದಾ ತೊಟ್ಟಿಕ್ಕುವ ಒಂದು ಹನಿ ನೀರು ತನ್ನೊಟ್ಟಿಗೆ ಎಷ್ಟು ಸುಣ್ಣದ ಕಲ್ಲನ್ನು ತರಬಹುದು ಎಂದು ಊಹಿಸಿ? ಹೀಗೆ ಗುಹೆಯೊಳಗೆ ನಿರಂತರವಾಗಿ ಬೀಳುವ ನೀರಿನ ಹನಿಗಳು ಕೆಳಗೆ ಬಿದ್ದಾಗ, ತನ್ನೊಟ್ಟಿಗೆ ತರುವ ಅತ್ಯಲ್ಪ ಪ್ರಮಾಣದ ಸುಣ್ಣದ ಕಲ್ಲಿನ ಅಂಶವು ಹಾಗೆಯೇ ಉಳಿದು ಶೇಖರಣೆಯಾಗುತ್ತಾ ಸಾಗುತ್ತದೆ. ಅಂದರೆ ನಿಸರ್ಗದ ಈ ಕಲಾಕೃತಿಗಳು ಈಗಲೂ ಬೆಳೆಯುತ್ತಿವೆ! ಈ ರೀತಿ ಶೇಖರಣೆಯಾಗಿ ರಚನೆಯಾಗಿರುವ ಆಕೃತಿಗಳು ಒಂದಕ್ಕಿಂತ ಒಂದು ವಿಭಿನ್ನ! ಬಳಪದ ಕಲ್ಲಿನ ಗುಹೆಯೊಳಗೆ ಮುಂದೆ ಯಾವ ರೀತಿಯ ರಚನೆಯಾಗಬಹುದು ಎಂದು ಇಂದಿಗೂ ನಮ್ಮ ವಿಜ್ಞಾನಿಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪ್ರಕೃತಿಯ ಒಡಲು ಇಂದಿಗೂ ಊಹಿಸಲಾಗದಷ್ಟು ರಹಸ್ಯಗಳನ್ನು ಭದ್ರವಾಗಿಟ್ಟಿದೆ.

(ನೀರಿನ ಹನಿಯೊಂದು ತೊಟ್ಟಿಕ್ಕುತ್ತಿರುವುದು)

ಈ ರಚನೆಗಳಲ್ಲೆಲ್ಲಾ ಬಹಳ ವಿಶಿಷ್ಟವಾದುದು “Skyscraper”. ಗಗನಚುಂಬಿ ಕಟ್ಟಡಗಳು ಇನ್ನೇನು ಆಕಾಶವನ್ನು ಮುಟ್ಟುತ್ತವೆ ಎನ್ನುವ ಅರ್ಥವನ್ನು ಅತಿಶಯೋಕ್ತಿಯಲ್ಲಿ Skyscraper ಎಂದು ಕರೆಯುವುದು ಸಾಮಾನ್ಯ. ಇದು ಈ ಗುಹೆಯಲ್ಲಿ ಪ್ರವಾಸಿಗರಿಗೆ ಲಭ್ಯವಿರುವ ದಾರಿಯಲ್ಲಿ ಕಾಣಸಿಗುವ ಅತ್ಯಂತ ಪುರಾತನವಾದ ಆಕೃತಿ. ಇದರ ಎತ್ತರ ಹದಿನಾರು ಮೀಟರ್ ಮತ್ತು ವಯಸ್ಸು ಒಂದೂವರೆ ಲಕ್ಷ ವರ್ಷಗಳು! ಗುಹೆಯ ಆಳದಲ್ಲಿ ಇದಕ್ಕಿಂತಲೂ ಎತ್ತರವಾದ ಹಾಗೂ ಪುರಾತನವಾದ ಆಕೃತಿಗಳು ಇದೆಯಂತೆ. ಇದರ ಪಕ್ಕದಲ್ಲಿಯೇ ಶುಭ್ರ ಶ್ವೇತವರ್ಣದ ಆಕೃತಿಯನ್ನು “ಪೀಸಾ ಟವರ್” ಎಂದು ಕರೆಯುತ್ತಾರೆ. ಗುಹೆಯೊಳಗೆ ಮತ್ತೆ ಮುಂದೆ ಹೋದರೆ ಒಂದು ಭಾಗದಲ್ಲಿ ಈ ರೀತಿಯ ಉದ್ದುದ್ದ ಆಕೃತಿಗಳಿರಲಿಲ್ಲ. ಮೊದಲು ಖಾಲಿ ಜಾಗದಂತೆ ಕಾಣುತಿತ್ತು. ನಮ್ಮ ಗೈಡ್ ಟಾರ್ಚ್ ಬೆಳಕನ್ನು ಮೇಲೆ ಹಾಯಿಸಿದಾಗ ಕಾಣಿಸಿದ್ದು ವಿಶಿಷ್ಟವಾದ “ಸ್ಪಗೆಟ್ಟಿ ಸ್ಟೋನ್ಸ್”. ಮತ್ತೆ ರೈಲಿನ ಬಳಿ ಬಂದು ಆಸೀನರಾದರೆ, ವಾಪಾಸ್ ಮೂರುವರೆ ಕಿಲೋಮೀಟರ್ ರೈಲಿನ ಪ್ರಯಾಣದೊಂದಿಗೆ ಗುಹೆಯ ದರ್ಶನ ಅಂತ್ಯಗೊಳ್ಳುತ್ತದೆ.

(ಪೀಸಾ ಟವರ್ ಎಂದು ಹೆಸರಿಸಲಾಗಿರುವ ಆಕೃತಿ)

ನಮ್ಮ ಕರ್ನಾಟಕದ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ತ್ರಿವೇಣಿ ಸಂಗಮವಿದೆ. ಆದರೆ ಒಂದು ನದಿ ಗುಪ್ತಗಾಮಿನಿ ಎಂದು ಹೇಳುತ್ತಾರೆ. ಕಾವೇರಿ, ಕಬಿನಿ ಹಾಗೂ ಸ್ಪಟಿಕ ಸರೋವರ (ಗುಪ್ತಗಾಮಿನಿ) ಸಂಗಮವಾಗುವ ಜಾಗ. ಈ ಪ್ರಶ್ನೆಯನ್ನು ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಕೇಳಿದ್ದರು. ಆಗಿಂದಲೂ ಗುಪ್ತಗಾಮಿನಿ ಎಂದರೆ ಹೇಗಿರುತ್ತದೆ ಎನ್ನುವ ಕುತೂಹಲವಿತ್ತು. ಪೋಸ್ಟೋಯ್ನಾ ಗುಹೆಯಿಂದ ಒಂದು ದೊಡ್ಡ ನದಿ ಹರಿಯುತ್ತದೆ. ಗೂಗಲ್ ಮ್ಯಾಪ್ಸ್ ನೋಡಿದಾಗ ನನ್ನ ಕುತೂಹಲಕ್ಕೆ ರೆಕ್ಕೆ ಪುಕ್ಕ ಬಂದಿತ್ತು. ಗುಪ್ತಗಾಮಿನಿ ಹೇಗಿರುತ್ತದೆ ಎಂದು ನೋಡುವ ಹಂಬಲ. ಅನಿರೀಕ್ಷಿತವಾಗಿ ಈ ಗುಹೆಯ ಭೇಟಿಯಲ್ಲಿ ಗುಪ್ತಗಾಮಿನಿಯನ್ನು ಸಹ ನೋಡಿದೆವು. ಸಾಮಾನ್ಯವಾಗಿ ನದಿ ಹರಿಯುವ ಶಬ್ದ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಗುಹೆಯೊಳಗೆ ರಭಸದಿಂದ ಹರಿಯಿವ “ಪಿವಿಕ” ನದಿಯ ಝುಳು ಝುಳು ನಾದ ಪ್ರತಿಧ್ವನಿಸಿ ನೈಸರ್ಗಿಕ “ಸರೌಂಡ್ ಸೌಂಡ್” ಅನುಭವ ನೀಡಿತು. ನಿಶ್ಚಿತವಾಗಿ ಇದೊಂದು ವಿಶೇಷ ಅನುಭವ. ಗುಹೆಯೊಳಗೆ ನದಿಗೆ ಒಂದು ಸಣ್ಣ ಚೆಕ್ ಡ್ಯಾಮ್ ಕೂಡ ಕಟ್ಟಿದ್ದಾರೆ.

(ಗುಹೆಯೊಳಗೆ ಹರಿಯುತ್ತಿರುವ ಗುಪ್ತಗಾಮಿನಿ)

ಈ ಗುಹೆಯಿಂದ ಹೊರ ಬಂದ ನಂತರ ಪಕ್ಕದಲ್ಲಿ ಒಂದು ವಿಶೇಷ ಪ್ರಾಣಿ ಹಾಗೂ ಕೀಟ ಸಂಗ್ರಹಾಲಯವಿದೆ. ಇಲ್ಲಿ ಗುಹೆಯೊಳಗೆ ವಾಸಿಸುವ ಪ್ರಾಣಿ ಮತ್ತು ಕೀಟಗಳನ್ನು ಸಂರಕ್ಷಿಸಲಾಗಿದೆ. ಒಂದು ಪ್ರಾಣಿಯನ್ನು “ಬೇಬಿ ಡ್ರ್ಯಾಗನ್” ಎಂದು ಕರೆಯುತ್ತಾರೆ. ಸೂರ್ಯನ ಬಿಸಿಲೆ ಇಲ್ಲದ ಗುಹೆಯೊಳಗೆ ಜೀವಿಸುವ ಈ ಪ್ರಾಣಿಗೆ ಚರ್ಮವಿಲ್ಲ. ಹತ್ತು ವರ್ಷಗಳ ತನಕವೂ ಆಹಾರವಿಲ್ಲದೆ ಬದುಕಬಲ್ಲದಂತೆ! ಇದರ ಕಾಲುಗಳು, ಮೂತಿ ನೋಡಿ ಇದಕ್ಕೆ ಆ ಹೆಸರು ಇಟ್ಟರಂತೆ. ಸುಮಾರು ನೂರು ವರ್ಷಗಳ ಆಯಸ್ಸಿರುವ ಈ ಜೀವಿಗಳ ಜೀವನ ಶೈಲಿ ವಿಭಿನ್ನ. ಪೋಸ್ಟೋಯ್ನಾ ಗುಹೆಗಳನ್ನು ಅನ್ವೇಷಿಸಿದ ನಂತರದ ಸುಮಾರು ಇನ್ನೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಇದರ ಮೊಟ್ಟೆ ನೋಡಲು ಸಿಕ್ಕಿದೆ. ಒಟ್ಟಾರೆಯಾಗಿ ನೂರೈವತ್ತು ವಿಧದ ಪ್ರಾಣಿ, ಕೀಟಗಳು ಈ ಗುಹೆಯಲ್ಲಿವೆ.

ಪ್ರಪಂಚದಾದ್ಯಂತ ಇರುವ ಗುಹೆಗಳಲ್ಲಿ, ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಾಗ “ಪೋಸ್ಟೋಯ್ನಾ ಗುಹೆಗಳು”. ಇಲ್ಲಿಯವರೆಗೂ ಸುಮಾರು ಮೂರುವರೆ ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರಂತೆ! ಹಲವಾರು ವಿಶೇಷಗಳನ್ನು ಒಳಗೊಂಡಿರುವ ಈ ಗುಹೆಯ ಭೇಟಿ ನನಗೆ ವಿಶೇಷ ಅನ್ನಿಸಿತು. ಈ ಪ್ರವಾಸದಲ್ಲಿ ನಮ್ಮೊಟ್ಟಿಗೆ ನನ್ನಮ್ಮ ಮತ್ತು ಅತ್ತೆ-ಮಾವ ಅವರನ್ನೂ ಸಹ ಇಲ್ಲಿ ಕರೆದೊಯ್ದಿದ್ದೆವು. ಅವರೆಲ್ಲರೂ ಪೋಸ್ಟೋಯ್ನಾ ಗುಹೆಗಳನ್ನು ನೋಡಿ ನಿಬ್ಬೆರಗಾಗಿ, ಬಹು ಕಾಲ ಮೆಲುಕು ಹಾಕುತ್ತಿದ್ದರು. ಮುಂದಿನ ಸಂಚಿಕೆಗಳಲ್ಲಿ ಸ್ಲೊವೇನಿಯಾದ ಸುಂದರವಾದ ಸರೋವರಗಳು, ನದಿಗಳು ಮತ್ತು ಲೋಗಾರ್ ವ್ಯಾಲಿಯ ಬಗ್ಗೆ ಬರೆಯುತ್ತೇನೆ. ಸಾಟಿಯಿಲ್ಲದ ಸ್ಲೊವೇನಿಯಾ ಮುಂದುವರೆಯುತ್ತದೆ…

(ಬೇಬಿ ಡ್ರ್ಯಾಗನ್‌, ಚಿತ್ರ: ಅಂತರ್ಜಾಲ)