”ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ? ಹೀಗೆ ಕುತೂಹಲ ಪಟ್ಟೋ, ಕಳೆದುಕೊಂಡೋ ಪ್ರಯೋಜನವಾದರೂ ಏನು? ಅದು ಇನ್ನಷ್ಟು ಭಯದ ಹೊರತು ಏನೂ ನೀಡಲಾರದು ಅನ್ನುವುದಂತೂ ಸತ್ಯ”
ಕೃಷ್ಣ ದೇವಾಂಗಮಠ ಬರೆದ ಸಾವು ಜೀವಗಳ ಕುರಿತ ಭಾವಲಹರಿ.

 

ಸಾವು ಅಂದ ತಕ್ಷಣಕ್ಕೆ ಜೀವನದ ಕೊನೆ ಅಂತಲಷ್ಟೇ ನಮಗೆ ಮೊದಲು ಅನ್ನಿಸಲಿಕ್ಕೆ ಶುರುವಾಗುತ್ತೆ. ಈ ವಿಷಯ ಬಂತೆಂದರೆ ಸಾಕು ಏನೋ ಒಳಗೊಳಗೆ ಒಂದು ರೀತಿಯ ಅನಾಮಿಕ ಭಯ ಆವರಿಸಿಕೊಂಡು ಬಿಡುತ್ತೆ, ಮನಸ್ಸು ಇಹದ ಪರಿವೆ ಮರೆತು ಸ್ವಲ್ಪ ಕಾಲ ಎಲ್ಲೋ ತೇಲಿದ ಅನುಭವ ಆಗುತ್ತೆ, ಅದು ಮತ್ತೇನಲ್ಲಾ ಚಿಂತಾ ಲೋಕ ಅಂತಲೂ ಅದನ್ನಾ ಸಾಧಾರಣವಾಗಿ ಅನ್ನಬಹುದು. ಜನನದ ಜೊತೆಗೆ ಮರಣ ಪ್ರಾಪ್ತಿಯಾಗಿದೆ ಎಂಬುದನ್ನು ಅರಿತೂ, ಏನು? ಯಾವುದು? ಹೇಗೆ? ಸಂಭವಿಸುತ್ತದೆ ಅನ್ನುವುದನ್ನ ಮೊದಲೇ ತಿಳಿಯುವ ದಿನಮಾನಗಳಲ್ಲಿ ಬದುಕುತ್ತಿರುವ ನಮಗೆ, ಸಾವು ಇನ್ನೂ ಎಂದಿಗೂ ನಿಗೂಢವಾಗಿಯೇ ಉಳಿದ, ಹೀಗೆ ಉಳಿಯಲಿರುವ ಪ್ರಸ್ತುತ ಬದುಕಿನ ಕೊನೆಯ ಘಟ್ಟ ಅನ್ನಿಸಿದೆ.

ಭೂಮಿಯ ಆಳವನ್ನೂ, ವ್ಯೋಮದ ಅಗಲವನ್ನು ಸದಾ ಅಭ್ಯಸಿಸುತ್ತಾ ವಿಸ್ತೀರ್ಣವಾಗುತ್ತಿರುವ ನಾವುಗಳು ಅನ್ಯಗ್ರಹ ಜೀವಿಗಳ ಬಗ್ಗೆಯೂ ತಿಳಿಯುತ್ತಿದ್ದೇವೆ. ಆದರೆ ನಮ್ಮನ್ನು ನಾವೇ ಭೇದಿಸಿಕೊಳ್ಳುವುದು ಇನ್ನೂ ಮನುಷ್ಯ ಮಾತ್ರನಿಗೆ ಸಾಧ್ಯವಾಗುತ್ತಿಲ್ಲ. ಸಾವು ಇಷ್ಟು ಖಡಾಖಂಡಿತವಾಗಿದ್ದಾದರೂ ಅದರ ಬಗ್ಗೆ ಒಂದು ಸಣ್ಣ ಭಯ, ನೋವು, ವಿಚಲತೆ, ಅರಗಿಸಿಕೊಳ್ಳಲಾಗದ ದುಃಖ ಇದ್ದೇ ಇದೆ.

ಯಾಕೆ ಹುಟ್ಟು ಸಂತಸವಾಗಿಯೂ, ಸಾವು ಮಡುಗಟ್ಟಿದ ದುಃಖವಾಗಿಯೂ ನಮಗೆ ಕಾಣುವುದು? ಏನಿದರ ಒಳಗುಟ್ಟು ಅಂತಾ ಇದರ ಬೆನ್ನು ಬಿದ್ದು ಯೋಚಿಸಿದ್ದಾದರೆ ಅನ್ನಿಸೋದು ನಮಗೆ ಹುಟ್ಟು ಕಾಣಿಸುತ್ತದೆ ಮತ್ತು ಅದರ ಬೆಳವಣಿಗೆಯ ಹಂತಗಳು ನಮ್ಮ ಕಣ್ಣ ಮುಂದೆಯೇ ಘಟಿಸುತ್ತಾ ಸಾಗುತ್ತವೆ… ಅಂತೆಯೇ ಸಾವು ಕೂಡಾ ಕಾಣಿಸುತ್ತದೆ. ಉಸಿರು ನಿಂತು, ಧಿಮಾಕು, ಅಧಿಕಾರ, ಮೋಹ, ಎಲ್ಲಾ ಕಳೆದುಕೊಂಡು ಇಷ್ಟು ದಿನದ ಗದ್ದಲ ಮರೆತು ಸಂತೆಯಲ್ಲೂ ಸಂತನಂತೆ ಇರಬಲ್ಲವನಾಗಿ ಶಾಂತವಾಗಿ ಮಲಗಿದ ಸತ್ತ ದೇಹದ ಹಾಗೆ ಆದರೆ ಇದರ ಮುಂದಿನ ಹಂತ, ಯೋಚನೆ, ಏಳಿಗೆ, ಊಹೆ ಯಾವುದರ ಕಿಂಚಿತ್ತು ಸುಳಿವು ಸಿಗುವುದಿಲ್ಲ, ಊಹೆಗಳ ಆಚೆಗೆ. ಈ ಕುತೂಹಲವೇ ನಮ್ಮನ್ನು ಈ ಕುರಿತು ಚಿಂತಿಸುವಂತೆಯೂ ಅದರ ಕುರಿತು ಹೆದರುವಂತೆಯೂ ಮಾಡುತ್ತದೆ. ಸಾಧಾರಣವಾಗಿ ನಮ್ಮಲ್ಲಿ ನಮಗೆ ನಾನು ಆಸ್ತಿಕನೋ ನಾಸ್ತಿಕನೋ ಅಂತಾ ಒಂದು ಪ್ರಶ್ನೆ ಏಳುತ್ತದೆ. ನನಗಂತೂ ಕೆಲವು ಬಾರಿ ದೇವರು ಇದ್ದಾನೆ ಅಂತಲೂ ಕೆಲವು ಬಾರಿ ದೇವರೆ ಇಲ್ಲಾ, ಆತನ ಅಸ್ತಿತ್ವವೇ ಸುಳ್ಳು ಅಂತಲೂ ಅನ್ನಿಸುವುದಿದೆ. ಇದು ಆ ಕ್ಷಣದ ನನ್ನ ಪರಿಸ್ಥಿತಿ, ವಾತಾವರಣ, ಇದಕ್ಕಷ್ಟೇ ಸಂಬಂಧಿಸಿದ್ದೂ ಹೌದು. ದೇವರ ಅಸ್ತಿತ್ವವನ್ನು ನಂಬಿಯೋ ಅಥವಾ ನಿರಾಕರಿಸಿಯೋ, ಸಾವಿನ ನಂತರ ಏನೂ ಇಲ್ಲಾ ಶೂನ್ಯ ಮಾತ್ರ ಅಂತಲೊ ಅಥವಾ ಸಾವಿನ ನಂತರದಲ್ಲಿ ಮತ್ತೊಂದು ಹುಟ್ಟು, ಪುನರ್ಜನ್ಮ ಇದೆ ಅಂತಲೊ ನಿರ್ದಿಷ್ಟವಾಗಿ ಹೇಳುವುದು ಬಲು ಕಷ್ಟ.

ಆದರೆ ಏನೂ ಇಲ್ಲಾ ಅಂತ ಅಥವಾ ಏನೋ ಇದೆ ಅಂತಾ ಹೇಳುವುದಕ್ಕೆ ನಮ್ಮಲ್ಲಿ ನಂಬಿಕೆಯನ್ನು ಹೊರತುಪಡಿಸಿ ಯಾವ ಪುರಾವೆಗಳೂ ಇಲ್ಲ ಅನ್ನುವುದು ಸತ್ಯ. ಹೀಗಿರುವಾಗಲೇ ನೆನಪಾಗೋದು ಎರಡು ಸಂಗತಿಗಳು.
ದಾಸರು ಹೇಳುವಂತೆ :
“ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷಜೀವ
ರಾಶಿಯನ್ನು ದಾಟಿಬಂದ ಈ ಶರೀರ
ತಾನಲ್ಲಾ ತನದಲ್ಲಾ ಆಸೆ ತರವಲ್ಲ
ಮುಂದೆ ಬಾ ಹೋದೆಲ್ಲಾ ದಾಸನಾಗು ವಿಶೇಷನಾಗು”

ಉಸಿರು ನಿಂತು, ಧಿಮಾಕು, ಅಧಿಕಾರ, ಮೋಹ, ಎಲ್ಲಾ ಕಳೆದುಕೊಂಡು ಇಷ್ಟು ದಿನದ ಗದ್ದಲ ಮರೆತು ಸಂತೆಯಲ್ಲೂ ಸಂತನಂತೆ ಇರಬಲ್ಲವನಾಗಿ ಶಾಂತವಾಗಿ ಮಲಗಿದ ಸತ್ತ ದೇಹದ ಹಾಗೆ ಆದರೆ ಇದರ ಮುಂದಿನ ಹಂತ, ಯೋಚನೆ, ಏಳಿಗೆ, ಊಹೆ ಯಾವುದರ ಕಿಂಚಿತ್ತು ಸುಳಿವು ಸಿಗುವುದಿಲ್ಲ, ಊಹೆಗಳ ಆಚೆಗೆ.

ಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳೆಂದರೆ ದಾಸರಂತೆ ಅಥವಾ ಅವರ ಕೀರ್ತನೆಯಂತೆ ಮೊದಲ ಸಾಲುಗಳನ್ನು ಗಮನಿಸಿ. ಈ ನಮ್ಮ ಅಂದರೆ ಈಗಿರುವ, ಹೊಂದಿರುವ ಸಶರೀರ ಎಂಬತ್ನಾಲ್ಕು ಲಕ್ಷಜೀವ ರಾಶಿಯನ್ನು ದಾಟಿ ಬಂದಿದೆ ಅರ್ಥಾತ್ ಎರಡು ರೀತಿ ಇದನ್ನು ಉಲ್ಲೇಖಿಸಬಹುದು. ಈ ಶರೀರ ಅಷ್ಟು ಜೀವಗಳ ನಂತರದಲ್ಲಿ ಹುಟ್ಟಿದ್ದು ಅಥವಾ ಇದು ಅವೆಲ್ಲವುಗಳನ್ನು ಮೀರಿ ನಿಂತ ಬುದ್ಧಿ ಜೀವಿ ಅಂತಾ ಜೀವವಿಕಸನದ ಹಾದಿಯಲ್ಲಿ ಗುರುತಿಸುವಂಥದ್ದು ಮತ್ತು ಇನ್ನೊಂದು ಅಷ್ಟೆಲ್ಲಾ ಸೂಕ್ಷ್ಮ, ದೈತ್ಯ ದೇಹಗಳ ನಂತರ ಈ ರೀತಿಯ ಹದವಾದ ದೇಹದ ರೀತಿಯನ್ನು ಆತ್ಮ ಕಂಡುಕೊಂಡಿದೆ ಅಂತಲೂ ಇದನ್ನು ವ್ಯಾಖ್ಯಾನಿಸುವುದು. ಇದೇ ಕೀರ್ತನೆಯ ಪಲ್ಲವಿಯ ಕೊನೆಯ ಸಾಲುಗಳನ್ನು ಗಮನಿಸಿದಾಗ ಆಸೆ ಉಪಯೋಗವಿಲ್ಲ, ಈ ಮನುಷ್ಯ ಶರೀರ ಇದು ಕೊನೆಗೊಳ್ಳುವಂತದ್ದು ಇದೇ ಕೊನೆಯ ಜೀವರಾಶಿಯ ರೂಪ ಅಂತಲೂ ಹಾಗಾಗಿ ನಿನ್ನ ನಂತರದಲ್ಲಿ ಇಲ್ಲಿರುವವರ ಕುರಿತು ಯೋಚಿಸು ದಾಸನಾಗು, ದೇವರನ್ನು ಧ್ಯಾನಿಸು, ಬಡವರ ಕುರಿತು ಯೋಚಿಸು, ಒಳಿತುಮಾಡು, ವಿಶೇಷನಾಗು ಅಂತಲೂ ಅವರು ಹೇಳುತ್ತಾರೆ. ಮತ್ತು…

ಭಗವದ್ಗೀತೆಯಲ್ಲಿ ಹೇಳುವಂತೆ : “ಹುಟ್ಟಿದವನಿಗೆ ಸಾವು ಖಂಡಿತವಾಗಿಯೂ ಇದೆ, ಮತ್ತು ಸತ್ತವನಿಗೆ ಮರುಹುಟ್ಟು ನಿಶ್ಚಯವಾಗಿಯೂ ಇದೆ. ಆದ್ದರಿಂದ, ಯಾವುದರಿಂದ ಪಾರಾಗುವುದು ಸಾಧ್ಯವಿಲ್ಲವೊ ಅದರ ಕುರಿತು ದುಃಖ ಪಡಬಾರದು”.

ಈ ಸಾಲುಗಳನ್ನು ಓದುತ್ತಿದ್ದಂತೆಯೇ ಕೆಲವು ಪ್ರಶ್ನೆಗಳೂ ತಳುಕುಹಾಕಿಕೊಳ್ಳುತ್ತವೆ. ಸಾವು ಖಂಡಿತವಾಗಿಯೂ ಇದೆ ಅನ್ನುವುದನ್ನು ನಾವೆಲ್ಲಾ ಈಗಾಗಲೇ ಒಪ್ಪಿಕೊಂಡಿದ್ದೇವೆ. ಆದರೆ ಸತ್ತವನಿಗೆ ಮರುಹುಟ್ಟು ನಿಶ್ಚಿತವಾಗಿಯೂ ಇದೆ ಅನ್ನುವ ಮಾತಿನ ಬಗ್ಗೆ ಇನ್ನೂ ಹಲವಾರು ತಕರಾರುಗಳು ನಮ್ಮ ಮಧ್ಯೆ ಇವೆ. ಹಾಗೆ ಮರು ಹುಟ್ಟು ಇರುವುದಾದರೆ, ಹಾಗೆ ಹುಟ್ಟಿ ಬಂದವರು ಯಾರು? ಮತ್ತು ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಅದೇ ಮುಖಚಹರೆಯೊಂದಿಗೆ ಹುಟ್ಟಿದ್ದಾರಾ ಅಥವಾ ಬೇರೆಯೇ ಆಗಿ? ಮನುಷ್ಯರಾಗಿಯೇ ಇದ್ದಾರಾ ಅಥವಾ ಬೇರೆ ಅವತಾರದಲ್ಲಿ? ಅವರು ಮರು ಹುಟ್ಟು ಪಡೆದದ್ದರಿಂದ ಅವರಿಗೆ ತಮ್ಮ ಪೂರ್ವ ಜನ್ಮದ ಪರಿಚಯ ಇದೆಯೇ ಅಥವಾ ಎಲ್ಲಾ ಮರೆತು ಹೊಸದಾಗಿದ್ದಾರೆಯೇ? ಪೂರ್ವ ಜನ್ಮದ ನೆನಪಿದ್ದೂ ಅವರು ಆ ಕುರಿತು ಮಾತನಾಡಿದ್ದಾರೆಯೇ ಅಥವಾ ಇಲ್ಲವೆ? ಹೀಗೆ ಹಲವಾರು ಪ್ರಶ್ನೆಗಳು ಒಂದರ ಹಿಂದೊಂದು ಸಾಲುಗಟ್ಟಿ ಉತ್ತರಕ್ಕಾಗಿ ನಿಲ್ಲುತ್ತವೆ.

ನನಗೆ ತಿಳಿದ ಪ್ರಕಾರ ನಮ್ಮಲ್ಲಿ ಈ ಕುರಿತ ನಿಜದ ಘಟನೆಗಳು ಈವರೆಗೂ ನಡೆದಿಲ್ಲ ಅನ್ನಿಸುತ್ತದೆ. ಹಾಗೇ ನಿಜವೊ ಸುಳ್ಳೋ ಈಗ ಸರಿಸುಮಾರು ಒಂದೋ ಎರಡೋ ವರ್ಷದ ಹಿಂದೆಯಷ್ಟೇ ಒಂದು ಸುದ್ದಿ ಹಬ್ಬಿತ್ತು. ಅದು ಯಾವ ದೇಶ, ಆಕೆ ಯಾವ ಮನೆತನದ ರಾಜಕುಮಾರಿ, ಆಕೆಯ ತಂದೆ ಯಾರು? ಎಂಬುದರ ಕುರಿತು ನನಗೆ ಸದ್ಯಕ್ಕೆ ಅಷ್ಟಾಗಿ ನೆನಪಾಗುತ್ತಿಲ್ಲ. ಆದರೆ ಅಲ್ಲಿ ನಡೆದದ್ದೊಂದು ಅದ್ಬುತ ಘಟನೆ. ಆ ದೇಶದ ಒಬ್ಬ ಯುವತಿ ಇದ್ದಕ್ಕಿದ್ದಂತೆಯೇ ತಾನೊಬ್ಬಳು ರಾಜಕುವರಿ, ಹಿಂದೊಮ್ಮೆ ನಾನು ಯಾವುದೋ ದೇಶದ ರಾಜಕುಮಾರಿಯಾಗಿದ್ದವಳು ಎಂದು ಹೇಳಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಳು. ಮತ್ತು ಕ್ರಮೇಣ ಆಕೆಗೆ ಇನ್ನಷ್ಟು ಗತದ ನೆನಪುಗಳು ಮರಳಿ ಆಕೆ ತನ್ನ ದೇಶಕ್ಕೆ ಹೋಗಿ ಅಲ್ಲೊಂದು ಚರಿತ್ರೆಯನ್ನೇ ಹುಟ್ಟುಹಾಕಿದಳು. ಅದೇನೆಂದರೆ ಆ ದೇಶಕ್ಕೆ ಈವರೆಗೂ ಗೊತ್ತೆ ಇರದ ಯಾರೂ ನಂಬಲಾಗದ ಅಚ್ಚರಿಯ ಸಂಗತಿ ಅದು. ತನ್ನ ಕಾಲದಲ್ಲಿ ಬೇರೆ ರಾಜರ ಆಕ್ರಮಣದಿಂದ ಅನ್ಯಾಯವಾಗಿ, ವಿನಾಕಾರಣ ಸಾಯುತ್ತಿದ್ದ ತನ್ನ ಪ್ರಜೆಗಳನ್ನು ಬದುಕಿಸಿಕೊಳ್ಳುವುದಕ್ಕಾಗಿ ಆಕೆ ಭೂಮಿಯ ಒಳಗೆ ಸುರಂಗಮಾರ್ಗದ ರೀತಿಯಲ್ಲಿ ಒಂದು ಹಳ್ಳಿ ಅಥವಾ ಸಣ್ಣ ಪಟ್ಟಣವನ್ನೇ ಸೃಷ್ಟಿಸಿದ್ದನ್ನು ಅಲ್ಲಿಯ ಆಡಳಿತ ವರ್ಗಕ್ಕೆ ತಿಳಿಸಿ ಅವರು ನಂಬದೇ ಹೋದಾಗ ತಾನೇ ಖುದ್ದು ಅದರ ರಹಸ್ಯ ಒಳ ದಾರಿ ಮಾರ್ಗವನ್ನು ಭೇದಿಸಿ ತೋರಿಸಿದ್ದಳು. ನಂತರ ಅಲ್ಲಿ ನಡೆಸಿದ ಸಂಶೋಧನೆಗಳಿಂದ ಆಕೆಯ ಕುರಿತು ಮತ್ತು ಹಳೆಯ ತಂತ್ರಗಾರಿಕೆಗಳ ಕುರಿತು ಇಡೀ ದೇಶವೇ ದಂಗು ಬಡಿದಿತ್ತು. ಇದರಿಂದ ಮತ್ತು ಅಲ್ಲಲ್ಲಿ ಯಾವಾಗ್ಯಾವಾಗಲೋ ಮರು ಹುಟ್ಟು ಪಡೆದವರ ಕಥೆಗಳು ನಮಗೆ ಕೇಳಲು, ಓದಲು ಸಿಕ್ಕಿವೆ. ಈ ಘಟನೆ ಹೀಗಿರಲಿ.

ನಾನು ದಾಸರ ಕೀರ್ತನೆ ಮತ್ತು ಭಗವದ್ಗೀತೆಯ ಸಾಲುಗಳನ್ನು ತೆಗೆದುಕೊಳ್ಳಲು ಪ್ರಮುಖ ಕಾರಣ ಅಲ್ಲಿ ದಾಸರು ಹೇಳುವುದು ಹಿಂದೆ ಬಹಳ ಜನ್ಮಗಳನ್ನು ದಾಟಿ ಬಂದಿದ್ದ ಇದೊಂದೆ ನಿನ್ನ ಕೊನೆಯ ಜನ್ಮ ಇಲ್ಲಿ ಪುಣ್ಯದ ಕೆಲಸಗಳನ್ನು ಮಾಡಿ ಸದ್ಗತಿ ಹೊಂದು ಎಂದು. ಆದರೆ ಭಗವದ್ಗೀತೆ ಹೇಳುವಂತೆ ಹುಟ್ಟು ಸಾವು ಪುನರ್ಜನ್ಮ ಎಲ್ಲವೂ ಇದೆ ಆದರೆ ಇವುಗಳ ಕುರಿತು ಯೋಚಿಸಿ ಫಲವಿಲ್ಲ ಎಂದಷ್ಟೇ ಹೇಳುತ್ತದೆ.

ಈ ಮನುಷ್ಯ ಶರೀರ ಇದು ಕೊನೆಗೊಳ್ಳುವಂತದ್ದು ಇದೇ ಕೊನೆಯ ಜೀವರಾಶಿಯ ರೂಪ ಅಂತಲೂ ಹಾಗಾಗಿ ನಿನ್ನ ನಂತರದಲ್ಲಿ ಇಲ್ಲಿರುವವರ ಕುರಿತು ಯೋಚಿಸು ದಾಸನಾಗು, ದೇವರನ್ನು ಧ್ಯಾನಿಸು, ಬಡವರ ಕುರಿತು ಯೋಚಿಸು, ಒಳಿತುಮಾಡು, ವಿಶೇಷನಾಗು ಅಂತಲೂ ಅವರು ಹೇಳುತ್ತಾರೆ.

ಎರಡೂ ಭಿನ್ನ ಅಭಿಪ್ರಾಯಗಳಾದರೂ ಒಂದು ಅಂಶ ಸ್ಪಷ್ಟ. ಈ ಕುರಿತು ಹೀಗೊಂದು ನಿರ್ಧಾರಕ್ಕೆ ಬರಬಹುದು. ಎಲ್ಲವೂ ಇವೆ ಮತ್ತು ಏನೂ ಇಲ್ಲ. ಇಲ್ಲಿ ಇದ್ದಷ್ಟು ದಿನ ಒಳಿತು ಮಾಡುವುದು ನಿನ್ನ ಕೆಲಸ, ಮಿಕ್ಕಿದ್ದು ಅಗೋಚರ ಅಷ್ಟೇ. ಇವುಗಳ ಕುರಿತು ದೀರ್ಘವಾಗಿ ಮಾತನಾಡಬಹುದಾದರು ನಾನು ತಲುಪಿಸಬೇಕಾದ ವಿಷಯದ ಕುರಿತು ಮಾತ್ರವೇ ಹೇಳುವುದು ನನ್ನ ಉದ್ದೇಶವಾಗಿದೆ.

ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ? ಹೀಗೆ ಕುತೂಹಲ ಪಟ್ಟೋ, ಕಳೆದುಕೊಂಡೋ ಪ್ರಯೋಜನವಾದರೂ ಏನು? ಅದು ಇನ್ನಷ್ಟು ಭಯದ ಹೊರತು ಏನೂ ನೀಡಲಾರದು ಅನ್ನುವುದಂತೂ ಸತ್ಯ.

ವೈಯಕ್ತಿಕವಾಗಿ ನನ್ನ ಸಾವಿನ ಬಗೆಗೆ ನನ್ನಲ್ಲಿ ಒಂದು ಗಟ್ಟಿ ಅನಿಸಿಕೆ ಇದೆ. ಅದು ನಿಮಗೆ ಹುಚ್ಚು, ಭ್ರಮೆ, ಕಲ್ಪನೆಯ ನಂಬಿಕೆ ಅನ್ನಿಸಬಹುದು, ಆದರೆ ನನಗೆ ಅದು ಸದಾ ಕಾಡುವ ವಿಷಯ. ತಮಾಷೆಯಾಗಿ, ಮತ್ತು ಅಷ್ಟೇ ತೀವ್ರವಾಗಿ. ನಾನೇ ನನ್ನನ್ನು ಬಹಳ ಬಾರಿ ಕೇಳಿಕೊಂಡಿದ್ದಿದೆ, ಪರೀಕ್ಷಿಸಿಕೊಂಡಿದ್ದಿದೆ. ಯಾಕೆ ನನಗೆ ಇಷ್ಟು ಸ್ಪಷ್ಟವಾಗಿ ಹೀಗನ್ನಿಸುತ್ತದೆ ಎಂದು. ನಿಮಗೆ ಹೇಳುವುದನ್ನು ಮರೆತೆ ನನ್ನ ಸಾವು ನನ್ನ 32 ರ ವಯಸ್ಸಿಗೆ ಸಂಭವಿಸುತ್ತದೆ ಎನ್ನುವ ಯಾವುದೋ ಒಂದು ಭಾವ ಹೇಗೊ ನನ್ನಲ್ಲಿ ಬೇರೂರಿದೆ. ಇದು ಹೇಗೆ ನನ್ನ ಅಂತರಂಗದಲ್ಲಿ ಮನೆ ಮಾಡಿತು ಅಂತಾ ಯೋಚಿಸಿ, ತಿಳಿಯದೇ ಸುಮ್ಮನಾಗಿದ್ದೇನೆ. ಮುಂದೆ ಇಟ್ಟುಕೊಂಡಿರುವ ನನ್ನ ಭವಿಷ್ಯದ ಕನಸುಗಳನ್ನಾ ಸಾಕಾರಗೊಳಿಸಿಕೊಳ್ಳಲು ನನ್ನಲ್ಲಿ ಅಷ್ಟು ಸಮಯವಿಲ್ಲ ಅಂತಾ ಅಂದುಕೊಂಡದ್ದಿದೆ. ಮತ್ತು ಬರಬರುತ್ತಾ ನಿಧಾನವಾಗಿ ನನಗೆ ಈಗ ಸಾವಿನ ಭಯವೇ ಇಲ್ಲವಾಗಿದೆ ಅನ್ನುವುದು ನನಗೇ ಸ್ವತಃ ಅಚ್ಚರಿ ಉಂಟು ಮಾಡುವ ವಿಷಯ. ಸಾವಿನ ಕುರಿತು ನನ್ನಲ್ಲಿ ಈಗ ಭಯದ ಆಚೆಗೆ ಕರುಣೆ ಇದೆ. ಆದರೂ ನನ್ನ ಸಾವಿನ ವರ್ಷ ಅದೇ ಎಂಬುದು ಈಗಲೂ ಗಟ್ಟಿಯಾಗಿದೆ. ಬಹಳ ಬಾರಿ ಏನೋ ವಿಷಯಕ್ಕೆ ಈ ವಿಷಯ ತಳುಕುಹಾಕಿ ಹೇಳಿ ಮನೆಯಲ್ಲಿ ಬೈಸಿಕೊಂಡದ್ದೂ ಇದೆ. ಈ ವಿಷಯದ ಕುರಿತು ಆಪ್ತ ಗೆಳೆಯರ ಬಳಿಯೂ ಪ್ರಸ್ತಾಪಿಸಿದ್ದೇನೆ. ಬಹಳ ಯೋಚಿಸಿದ್ದೇನೆ, ನಿದ್ದೆಗೆಟ್ಟಿದ್ದೇನೆ, ಉತ್ತರಕ್ಕಾಗಿ ಚಡಪಡಿಸಿದ್ದೇನೆ. ಸಾವಿನ ವಿಷಯ ಮಾತಾಡಿ, ಮಾತಾಡಿ ಅದು ತುಂಬಾ ಮಾಮೂಲಿ ವಿಷಯವಾಗಿ ಹೋಗಿದೆ ನನಗೆ. ಮನೆಯಲ್ಲಿ ಆಗಾಗ ಗಂಟೆಗಟ್ಟಲೇ ಇದರ ಕುರಿತೇ ಚರ್ಚಿಸಿದ್ದೇನೆ. ಸಾವಿನ ಭಯದಿಂದ ದೂರವಿದ್ದೇನೆ ಆದರೆ ಅದು ಅನಿವಾರ್ಯವೆಂದು ತಿಳಿದು ಸಾಯಲು ಸರ್ವತಾ ಸಿದ್ಧವಾಗಿದ್ದೇನೆ.

ಸಾವಿನ ಸ್ಥಳವಾದ ಸ್ಮಶಾನದಲ್ಲಿ ಕುಳಿತ ಪ್ರತೀ ಬಾರಿ ಶಾಂತತೆ ಆವರಿಸಿ ನೆಮ್ಮದಿಯಾಗಿ ಮರಳಿದ್ದೇನೆ. ಹೆಣ ಸುಡುವುದನ್ನು ಕಣ್ತುಂಬಿಕೊಂಡು ನನ್ನ ದುಃಖವನ್ನು, ಕಣ್ಣೀರನ್ನು ಸುಟ್ಟಿದ್ದೇನೆ. ನನ್ನ ಸಾಹಿತ್ಯದ ಗೆಳೆಯರು ನನ್ನನ್ನು ಪ್ರೀತಿಯಿಂದ ಬೈದು ತಾವೇ ಬೇಸರಿಸಿಕೊಂಡ ಘಟನೆಗಳು ತುಂಬಾ ಇವೆ. ಬೇರೆ ಕಾರಣಗಳೇನಿಲ್ಲ ‘ನೀ ಬರೀ ಸಾವಿನ ಬಗ್ಗೇನ ಬರೀತಿ ಮಾರಾಯಾ ಏ ಹೋಗತ್ತಲಾಗ’ ಅಂತಾ. ದಿನವೂ ತುಸು ಹೊತ್ತಾದರೂ ಧ್ಯಾನ ಮಾಡುವ ನಾನು ಕೆಲವು ಬಾರಿ ಅಂತರ್ಜಾಲ ಮಾಧ್ಯಮಕ್ಕೆ ನನ್ನ ಧ್ಯಾನಸ್ಥ ಶೈಲಿಯ ಫೋಟೋಗಳನ್ನ ಹಾಕಿದ್ದಾಗ ಏನೇನೋ ಬೈದದ್ದು ಹೊಗಳಿದ್ದೂ ಉಂಟು. ಸಾಕು ಏಳು ಇದರಿಂದೇನೂ ಆಗಲ್ಲಾ ಅಂದದ್ದು ಇದೆ. ಆದರೆ ಇವೆಲ್ಲವುಗಳ ಆಚೆ ಧ್ಯಾನ ನನ್ನನ್ನು ಶಕ್ತಿವಂತನನ್ನಾಗಿ, ಶಾಂತನನ್ನಾಗಿ, ಧನಾತ್ಮಕನನ್ನಾಗಿ ಬೆಳೆಸಿದೆ.
ಸಾವಿನ ಕೊನೆಗೆ ನಿಂತು ಇಡೀ ಜೀವನವನ್ನು ನೋಡುವುದಾದರೆ ಸಾವು ಜೀವನವನ್ನು ಸಂಪೂರ್ಣ ಅನುಭವಿಸುವಂತೆ ಮಾಡುವ ಒಂದು ದೈವಿಕ ಶಕ್ತಿ ಅಂತಲೇ ನನಗನ್ನಿಸುತ್ತದೆ.

ಸಾವನ್ನು ಸಂಭ್ರಮಿಸಬೇಕು ಅನ್ನುವುದೇ ನನಗೆ ತುಂಬಾ ಇಷ್ಟ. ಆದ್ದರಿಂದಲೇ ನಾನು ಪ್ರತಿ ಕ್ಷಣವನ್ನೂ ನಗುತ್ತಾ ಕಳೆಯುತ್ತೇನೆ. ಚಿಂತೆಗಳಿಂದ ದೂರವಿದ್ದು ನೋವಿನ ಜೀವಗಳಿಗೆ ಹತ್ತಿರವಿರುತ್ತೇನೆ. ಸೂರ್ಯನನ್ನು ಚಂದ್ರನನ್ನು ಒಟ್ಟಾಗಿ ಪ್ರೀತಿಸುತ್ತೇನೆ. ಸಾಯುತ್ತಿರುವವರ, ಸಾಯಲಿರುವವರ ಪಕ್ಕಕ್ಕೆ ಇರಲು ಬಯಸುತ್ತೇನೆ. ಏನಾದರೂ ಒಳ್ಳೆಯದು ಮಾಡಲು ಸಾವು ಕಾರಣವಾಗಬೇಕು ಅಂತಲೇ ಆಶಿಸುತ್ತೇನೆ. ಸಾವು ಜೀವನದ ಒಟ್ಟು ಯಶಸ್ಸಾಗಿ ನನಗೆ ಕಾಣುತ್ತದೆ. ಸತ್ತ ನಂತರವೇ ನಿರಂತರ ಬದುಕು ಇದೆ ಅಂತ ಖಂಡಿತ ಅನ್ನಿಸುತ್ತದೆ. ನಮ್ಮ ಇಲ್ಲದಿರುವಿಕೆಯಲ್ಲಿ ಬದುಕುವುದೇ ಮುಖ್ಯವಾಗಿದೆ.