ಈ ರೀತಿಯ ಚರ್ಚೆಗಳನ್ನ ನಾನು ಎಷ್ಟು ಬಾರಿ ಕೇಳಿದರೂ, ಪ್ರತಿ ಬದಿಯವರು ಪರಿಣಾಮಕಾರಿಯಾಗಿ ಇನ್ನೊಬ್ಬರ ವಾದಗಳನ್ನ ಉರುಳಿಸುತ್ತಿದ್ದರು! ಆದರೆ ಯಾವುದಾದರೂ ಪ್ರಕರಣವನ್ನು ಸಮರ್ಥಿಸುವಾಗ ಅವಲಂಬಿಸುತ್ತಿದ್ದದ್ದು ವಿವಾದಾಸ್ಪದ ಉಲ್ಲೇಖನಗಳಿಗೆ, ನಾನು ನನ್ನದೇ ಅಭಿಪ್ರಾಯಗಳನ್ನು ಮಾತನಾಡದೇ ಇಟ್ಟುಕೊಳ್ಳುತ್ತಿದ್ದೆ. 
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಎಂಟನೆಯ ಕಂತು

 

ನನ್ನಣ್ಣ ಇಸ್ರೇಲ್ ಜೋಶುವಾನಿಗೆ ತನ್ನ ಸ್ವತಂತ್ರ ದೃಷ್ಠಿಕೋನಗಳಿಂದ ಅಪ್ಪನ‌ ಜೊತೆಗೆ ಮಾತನಾಡುವುದು ಕಷ್ಟಕರವಾಗಿತ್ತು. ಅಪ್ಪನ ಏಕೈಕ ಪ್ರತಿಕ್ರಿಯೆ “ನಂಬಿಕೆಯಿಲ್ಲದವನು! ಜುದಾಯಿಸಂನ ಶತ್ರು!” ಎಂದೇ ಆಗಿತ್ತು. ಮತ್ತೊಂದೆಡೆ ನಮ್ಮಣ್ಣ ಅಮ್ಮನ ಜೊತೆಗೆ ದೀರ್ಘ ಮಾತುಕತೆ ನಡೆಸುತ್ತಿದ್ದ. ಅನೇಕ ವೇಳೆ ನನ್ನ ಉಪಸ್ಥಿತಿಯಲ್ಲೇ ನನ್ನ ಬಗ್ಗೆ ಚರ್ಚಿಸೋರು.

“ಇವನು ಮುಂದೇನಾಗಬಹುದು?” ಎಂಬುದನ್ನ ನಮ್ಮಣ್ಣ ಚರ್ಚಿಸುತ್ತಿದ್ದ. ಇವನು ಮದುವೆ ಆಗಿ ಅಂಗಡಿ ತೆರೆಯಬೇಕಾ ಅಥವಾ ಹೆಡರ್ನಲ್ಲಿ ಮೇಷ್ಟ್ರಾಗಬೇಕಾ? ಈಗಾಗಲೇ ಸುಮಾರು ಅಂಗಡಿಗಳು ಇದ್ದಾವೆ ಮತ್ತು ತುಂಬಾ ಜನ ಮೇಷ್ಟ್ರುಗಳು ಕೂಡ. ಅಮ್ಮ, ನೀವು ಕಿಟಕಿಯಿಂದ ಆಚೆ ನೋಡಿದ್ದೇ ಆದರೆ ಬಗ್ಗಿದ, ನಿರಾಶನಾದ, ಕೊಳಕಿನಲ್ಲಿ ಬದುಕುವ ಈ ಯಹೂದಿಗಳು ಕಾಣಿಸುತ್ತಾರೆ. ಅವರು ತಮ್ಮ‌ ಕಾಲುಗಳನ್ನು ಎಳೆದುಕೊಂಡು ನಡಿಯೋದನ್ನ ನೋಡಿ… ಅವರುಗಳು ಮಾತನಾಡೋದನ್ನ ಕೇಳಿ. ಎಲ್ಲರೂ ಇವರನ್ನು ಏಷ್ಯಾದವರು ಎಂದು ಅಂದುಕೊಳ್ಳೋದರಲ್ಲಿ ಆಶ್ಚರ್ಯವೇನು ಇಲ್ಲಾ. ಮತ್ತು ಇನ್ನೆಷ್ಟು ಕಾಲ ಯೂರೋಪ್ ಏಷ್ಯಾದ ಗುಂಪಿನ‌ ನಡುವೆ ನಿಲ್ಲುತ್ತೆ ಎಂದು ನಿಮಗೆ ಅನಿಸುತ್ತೆ?”

“ಅನ್ಯ ಜನರು ಯಾವಾಗಲೂ ಯಹೂದ್ಯರನ್ನು ದ್ವೇಷಿಸುತ್ತಾರೆ,” ಅಮ್ಮ ಹೇಳಿದಳು.

“ಯಹೂದಿಯೊಬ್ಬ ಎತ್ತರವಾದ ರೇಷ್ಮೆಟೋಪಿ ಧರಿಸಿದರು ಅವನನ್ನು ದ್ವೇಷಿಸುತ್ತಾರೆ ಏಕೆಂದರೆ ಅವನು ಸತ್ಯದ ಪರ ನಿಲ್ಲುತ್ತಾನೆ.”

“ಯಾವ ಸತ್ಯ? ಯಾರಿಗಾದರೂ ಸತ್ಯ ಅಂದ್ರೆ ಏನು ಎಂದು ತಿಳಿದಿದೆಯೇ? ಪ್ರತಿ ಧರ್ಮವೂ ಅದರದೇ ಆದ ಸ್ವಂತ ಪ್ರವಾದಿಗಳನ್ನ ಮತ್ತು ಧರ್ಮ ಗ್ರಂಥಗಳನ್ನ ಹೊಂದಿದ್ದಾವೆ. ನೀವು ಬೌದ್ಧಧರ್ಮದ ಬಗ್ಗೆ ಕೇಳಿದ್ದೀರಾ? ಬುದ್ಧ ಮೋಸೆಸ್ ತರಹನೇ ಮತ್ತು ಅವನ ಹಾಗೇ ಅದ್ಭುತಗಳನ್ನ ಮಾಡಿದವನು.”

ಅಮ್ಮ ಅವಳ ಬಾಯಿಯಲ್ಲಿ ಕೆಟ್ಟ ರುಚಿಯ ಪದಾರ್ಥವೊಂದು ಸಿಕ್ಕಿದೆಯೇನೊ ಎಂಬಂತೆ ಮುಖಮಾಡಿದಳು.

“ನಿನಗೆಷ್ಟು ಧೈರ್ಯ ವಿಗ್ರಹ ಆರಾಧಕನನ್ನು ನಮ್ಮ ಪಿತೃಪ್ರಧಾನ ಮೋಸೆಸ್‌ಗೆ ಹೋಲಿಸಲು? ವ್ಯಥೆಯೇ ನಾನು! ನನ್ನ ಸ್ವಂತ ಮಾಂಸ ಮತ್ತು ರಕ್ತ ಇದನ್ನ ಹೇಳುತ್ತೆ….”

“ಅಮ್ಮ, ಕೇಳಿ. ಬುದ್ಧ ವಿಗ್ರಹ ಆರಾಧಕನಾಗಿರಲಿಲ್ಲ, ಆದರೆ ಬಹಳ ಆಳವಾದ ಚಿಂತಕ. ಅವನು ನಮ್ಮ ಪ್ರವಾದಿಗಳನ್ನು ಒಪ್ಪಿದ್ದ. ಕನ್ಫ್ಯೂಷಿಯಸ್‌ನಂತೆ…..”

“ಮತ್ತೆ ನೀನು ಯೋಚಿಸಬಹುದಾದ ಎಲ್ಲವನ್ನೂ… ಅವರೆಲ್ಲಾ ದುಷ್ಟರು. ‘ಕ್ಷಮಿಸುತ್ತೀವಿ’ ಎಂದು ಹೇಳಿದರು, ಅವರೆಲ್ಲಾ ಒಬ್ಬರನ್ನೊಬ್ಬರು ಕೊಲೆ ಮಾಡುತ್ತಾ ಪಾಪ ಮಾಡುತ್ತಲೇ ಇರುತ್ತಾರೆ. ಅಂತಹವರನ್ನು ನೀನು ನಮಗೆ ಹೋಲಿಸುತ್ತಿಯಾ?”

“ನಮಗೂ ಸ್ವಂತ ರಾಷ್ಟ್ರವಿದ್ದಿದ್ದರೇ ನಾವು ಕೂಡ ಯುದ್ಧಗಳಲ್ಲಿ ನಿರತರಾಗಿರುತ್ತಿದ್ದೆವು. ರಾಜ ಡೇವಿಡ್ ಅಂತಹ ಸಹಾನುಭೂತಿಯ ಮನುಷ್ಯನೇನಾಗಿರಲಿಲ್ಲ…”

“ಸದ್ದು! ನೀನು ಏನು ಹೇಳುತ್ತಾ ಇದ್ದೀಯಾ ನೋಡು, ದೇವರು ನಿನ್ನ ಮೇಲೆ ಕರುಣೆ ತೋರಲಿ! ನಮ್ಮ ಅಭಿಷಿಕ್ತರನ್ನು ಮುಟ್ಟಬೇಡ. ರಾಜ ಡೇವಿಡ್ ಮತ್ತು ಸೋಲೋಮನ್ ಇಬ್ಬರು ಧರ್ಮೋಪದೇಶಕರು. ಟಾಲ್ಮಡ್ ಹೇಳುತ್ತೆ ಡೇವಿಡ್ ಅವರನ್ನ ಪಾತಕಿ ಎಂದು ನೋಡುವುದು ತಪ್ಪು ಎಂದು…”

“ನನಗೆ ಗೊತ್ತು ಅದು ಏನು ಹೇಳುತ್ತೆ ಎಂದು. ಆದರೆ ಬೆಥ್‌ಶೆಬಾ ಬಗ್ಗೆ ಏನು?”

ಅದು ನಮ್ಮಮ್ಮ‌ನ ಹೆಸರು ಕೂಡ ಆಗಿದ್ದರಿಂದ, ಪ್ರತಿಬಾರಿ ನಾನು ಬೆಥ್‌ಶೆಬಾ ಬಗ್ಗೆ ಕೇಳಿದಾಗಲೆಲ್ಲಾ ಅಮ್ಮನನ್ನು ಅದರೊಳಗೆ ಒಳಗೊಳ್ಳಲಾಗಿದೆ ಎಂದು ಭಾಸವಾಗುತ್ತಿತ್ತು. ಅಮ್ಮನ‌ ಮುಖ ಕೆಂಪೇರುತ್ತಿತ್ತು.

“ಶ್! ನೀನು ಮೂರ್ಖ ಪುಸ್ತಕಗಳನ್ನ ಓದಿ ಮತ್ತೆ ಅದನ್ನೇ ಪುನರ್ ಉಚ್ಚರಿಸುತ್ತೀಯಾ! ರಾಜ ಡೇವಿಡ್ ಶಾಶ್ವತವಾಗಿರುತ್ತಾರೆ ಮತ್ತು ಆ ನಿಷ್ಪ್ರಯೋಜಕ ಪುಸ್ತಕಗಳು ಅವು ಮುದ್ರಣವಾದ ಹಾಳೆಗಳಿಗೂ ಯೋಗ್ಯವಲ್ಲದ್ದು. ಲೇಖಕರು ಯಾರು? ಉಂಡಾಡಿಗಳು.”

ಈ ಚರ್ಚೆಗಳು ನನಗೆ ಕೂತಹಲವನ್ನುಂಟು ಮಾಡಿದ್ದವು. ನಾನು ಇದಾಗಲೇ ನನ್ನಣ್ಣನ ಬಳಿ ಈ ವಿಷಯಗಳನ್ನೆಲ್ಲಾ ಮಾತನಾಡಿದ್ದೆ. ನಮ್ಮಣ್ಣ ಹೇಳುವ ಹಾಗೇ ನನಗೆ ಅಂಗಡಿಯವನಾಗಲೋ ಅಥವಾ ಟಾಲ್ಮಡ್ ಟೀಚರ್ ಆಗಲೋ ಅಥವಾ “ಅಸಡ್ಡೆಯ ಹೆಂಡತಿ ಮತ್ತು ಚಿಳ್ಳೆಗಳ ಗುಂಪು” ಹೊಂದಲೋ ಒಲವಿರಲಿಲ್ಲ. ಒಮ್ಮೆ ಅವನು ಹೇಳಿದ್ದ, “ಕೆಲಸಗಾರನಾಗುವುದು ಉತ್ತಮವೆಂದು.”

“ದೇವರ ಸಹಾಯದಿಂದ ಅವನು ರಬ್ಬಿಯಾಗುತ್ತಾನೆ ವಿನಃ ಕೆಲಸಗಾರನಲ್ಲ. ಅವನು ಅವನ ತಾತನಂತೆ,” ಎಂದಳು ಅಮ್ಮ.

“ರಬ್ಬಿ? ಎಲ್ಲಿ? ಎಲ್ಲಾ ಕಡೆ ರಬ್ಬಿಗಳಿದ್ದಾರೆ. ನಮಗೆ ಅಷ್ಟೊಂದು ಜನ ಯಾಕೆ ಬೇಕು?”

“ಮತ್ತು ಅಷ್ಟೊಂದು ಕೆಲಸಗಾರರೇಕೆ ಬೇಕು? ರಬ್ಬಿ ಎಷ್ಟೇ ಬಡವನಿದ್ದರೂ ಸಹ ಅವನು ಮೋಚಿಗಿಂತ ಉತ್ತಮ.”

“ಶ್ರಮಿಕರೆಲ್ಲಾ ಒಟ್ಟಾಗುವವರೆಗೂ ಕಾಯಿರಿ.”

“ಅವರೆಂದಿಗೂ ಒಂದಾಗುವುದಿಲ್ಲಾ. ಪ್ರತಿಯೊಬ್ಬನೂ ಇನ್ನೊಬ್ಬನ ಅನ್ನವನ್ನ ಕಸಿಯಲು ಬಯಸುತ್ತಾನೆ. ಅದೇ ಸೈನಿಕರು ಯಾಕೆ ಒಟ್ಟಾಗಿ ಯುದ್ಧಕ್ಕೆ ಹೋಗಲು ನಿರಾಕರಿಸುವುದಿಲ್ಲ?”

“ಒಹ್, ಅದೂ ಕೂಡ ಬರುತ್ತೆ.”

“ಯಾವಾಗ? ಈಗಾಗಲೇ ಎಷ್ಟೊಂದು ಅನಗತ್ಯ ಕೊಲೆಗಳಾಗಿವೆ. ಪ್ರತಿ ಸೋಮವಾರ ಮತ್ತು ಗುರುವಾರ ಟರ್ಕಿ ಬಿಕ್ಕಟ್ಟುಗಳಿವೆ. ಪ್ರಪಂಚದ ತುಂಬಾ ದುಷ್ಟತೆಯೇ ಇದೆ, ಅದನ್ನೇ ಹೊಂದಿದೆ ಕೂಡ. ನಮಗೆ ಇಲ್ಲಿ ಶಾಂತಿ ಸಿಗುವುದಿಲ್ಲ, ಅದೇನಿದ್ದರೂ ಇನ್ನೊಂದು ಲೋಕದಲ್ಲಿ‌ ಮಾತ್ರ.”

“ಅಮ್ಮ, ನೀವೊಬ್ಬ ನಿರಾಶಾವಾದಿ.”

“ನಿಲ್ಲಿಸು, ನನ್ನ ಸೂಪು ಬೇಯುತ್ತಿದೆ!”

ಅದು ನಮ್ಮಮ್ಮ‌ನ ಹೆಸರು ಕೂಡ ಆಗಿದ್ದರಿಂದ, ಪ್ರತಿಬಾರಿ ನಾನು ಬೆಥ್‌ಶೆಬಾ ಬಗ್ಗೆ ಕೇಳಿದಾಗಲೆಲ್ಲಾ ಅಮ್ಮನನ್ನು ಅದರೊಳಗೆ ಒಳಗೊಳ್ಳಲಾಗಿದೆ ಎಂದು ಭಾಸವಾಗುತ್ತಿತ್ತು. ಅಮ್ಮನ‌ ಮುಖ ಕೆಂಪೇರುತ್ತಿತ್ತು.

ಈ ರೀತಿಯ ಚರ್ಚೆಗಳನ್ನ ನಾನು ಎಷ್ಟು ಬಾರಿ ಕೇಳಿದರೂ, ಪ್ರತಿ ಬದಿಯವರು ಪರಿಣಾಮಕಾರಿಯಾಗಿ ಇನ್ನೊಬ್ಬರ ವಾದಗಳನ್ನ ಉರುಳಿಸುತ್ತಿದ್ದರು! ಆದರೆ ಯಾವುದಾದರೂ ಪ್ರಕರಣವನ್ನು ಸಮರ್ಥಿಸುವಾಗ ಅವಲಂಬಿಸುತ್ತಿದ್ದದ್ದು ವಿವಾದಾಸ್ಪದ ಉಲ್ಲೇಖನಗಳಿಗೆ. ನಾನು ನನ್ನದೇ ಅಭಿಪ್ರಾಯಗಳನ್ನು ಮಾತನಾಡದೇ ಇಟ್ಟುಕೊಳ್ಳುತ್ತಿದ್ದೆ. ಅನ್ಯ ಧರ್ಮದವರು ವಿಗ್ರಹ ಆರಾಧಕರು ನಿಜ, ಆದರೆ ರಾಜ ಡೇವಿಡ್ ನಿಜಕ್ಕೂ ದುಷ್ಕರ್ಮ ಮಾಡಿದ್ದ. ಮತ್ತು ಯಹೂದಿಗಳು ತಮ್ಮದೇ ರಾಷ್ಟ್ರವನ್ನು ಹೊಂದಿದ್ದಾಗ ಅವರೂ ಸಹ ಕೊಲೆಗಳನ್ನು ಮಾಡಿದ್ದರು. ಎಲ್ಲಾ ಧರ್ಮಗಳು ಅದರದೇ ಆದ ಸಂತರನ್ನ ಹೊಂದಿರೋದು ನಿಜವೇ, ಆದರೆ ಯಾರು ಹೇಳಬಲ್ಲರು ಯಾರು ದೇವರ ಬಳಿ ಮಾತನಾಡಿದ್ದಾರೆ ಎಂದು? ಇವೆಲ್ಲಾ ಪ್ರಶ್ನೆಗಳಿಗೆ ನಮ್ಮಮ್ಮನಿಗೆ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ.

“ನಿನಗೆ ಯಾವ ರೀತಿಯ ವ್ಯಾಪಾರ ಒಗ್ಗುತ್ತದೆ?” ಅಣ್ಣ ಕೇಳಿದ.

“ಕೆತ್ತನೆ ಮಾಡುವವನಾದರೆ ಹೇಗೆ? ತಾಮ್ರ ಮತ್ತು ಹಿತ್ತಾಳೆಗಳ ಮೇಲೆ ಅಕ್ಷರಗಳನ್ನು ಕೊರೆಯುವುದು?”

“ಒಳ್ಳೆಯದು.”

“ಅಥವಾ ಗಡಿಯಾರ ಮಾಡುವವನು?”

“ತುಂಬಾ ಕಷ್ಟ.”

“ಅದನ್ನ ನೀನು ಕಲಿಯಬಹುದು. ಡಾಕ್ಟರ್ ಆದರೆ ಹೇಗೆ?”

“ಅವನು ಇರಲಿ. ಈ ಡಾಕ್ಟರ್‌ಗಳಿಗೆ ಏನು ಗೊತ್ತು? ಅವರು ಸುಮ್ಮನೆ ದುಡ್ಡು ತಗೋತಾರೆ. ಯಹೂದಿಗಳು ಯಹೂದಿಗಳಾಗಿನೇ ಇರ್ತಾರೆ ಮತ್ತೆ ಅವರಿಗೆ ಯಾವಾಗಲೂ ರಬ್ಬಿಗಳು ಬೇಕಾಗ್ತಾರೆ.”

“ಜರ್ಮನಿಯಲ್ಲಿ ರಬ್ಬಿಗಳೇ ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ!” ಅಣ್ಣ ಹೆಮ್ಮೆಯಿಂದ ಘೋಷಿಸಿದ.

“ನನಗೆ ಈ ಸುಧಾರಿತ ರಬ್ಬಿಗಳು ಗೊತ್ತು,” ನಮ್ಮಮ್ಮ‌ ಹೇಳಿದಳು. “ಅವರಿಗೆ ಮಾಂಸವನ್ನ ಹಾಲಿನ ತಿನಿಸಿನೊಂದಿಗೆ ತಿನ್ನಲು ಪರವಾನಿಗೆಗೆ ದಾರಿ ಹುಡುಕುತ್ತಿದ್ದರು, ಆದರೆ ಅದೇಗೆ ಅವರು ಮುಂಡನವನ್ನ ಸಮರ್ಥಿಸಿಕೊಳ್ಳುತ್ತಾರೆ, ಅದು ಮೊಸಾಯಿಕ್ ಕಾನೂನಿಗೆ ವಿರುದ್ಧವಾಗಿರುವಾಗ? ಯಾವ ತರಹದ ರಬ್ಬಿ ಟೋರಾವನ್ನ ನಿರಾಕರಿಸುತ್ತಾರೆ?”

“ಅವರು ಮುಂಡನಕ್ಕೆ ಒಂದು ರೀತಿಯ ಪೌಡರ್ ಬಳಸುತ್ತಾರೆ, ಕ್ಷೌರ ಕತ್ತಿಯನ್ನಲ್ಲಾ”

“ಅವರಿಗೆ ಅವರ ಗಡ್ಡಗಳ ಬಗ್ಗೆ ನಾಚಿಕೆ ಏನು? ಅವರಿಗ್ಯಾಕೆ ಅನ್ಯರ ರೀತಿ ಕಾಣುವ ಬಯಕೆ? ಅವರ ರಬ್ಬಿಗಳು ಹೀಗೆ ಅಂದ್ರೆ, ನಾನು ಕಲ್ಪಿಸಿಕೊಳ್ಳಬಲ್ಲೆ ಮಿಕ್ಕವರು ಇನ್ನೇಗೆ ಇದ್ದಾರೆ ಎಂದು.”

ಇದ್ದಕ್ಕಿದ್ದಂತೆ ಅಪ್ಪ ಅವನ ಅಧ್ಯಯನದಿಂದ‌ ಹೊರಬಂದ. “ಈ ಚರ್ಚೆಗಳನ್ನು ಒಮ್ಮೆಗೇ ಕೊನೆಗೊಳಿಸಿ” ಎಂದು ಕರೆ ನೀಡಿದ. “ಹೇಳಿ ಯಾರು ಈ ಪ್ರಪಂಚವನ್ನ ಸೃಷ್ಠಿ ಮಾಡಿದ್ದು? ಬರೀ ಶರೀರವನ್ನಷ್ಟೇ ನೋಡಿ, ಇರುವುದು ಅದಷ್ಟೇ ಅಂದುಕೊಂಡಿದ್ದಾರೆ. ಈ ಶರೀರ ಒಂದು ಉಪಕರಣವಲ್ಲದೇ ಮತ್ತೇನ್ನಲ್ಲಾ. ಆತ್ಮವಿಲ್ಲದೆ, ದೇಹ ಕೇವಲ ಹಲಗೆಯ ತುಂಡು. ತಮ್ಮನ್ನು ತಾವೇ ಕಬಳಿಸಿಕೊಂಡ ಚೇತನಗಳು ಗಟಗಟನೆ ಕುಡಿವುದು ಅಧರ್ಮವನ್ನೇ ಮತ್ತು ಮರಳುಗಾಡಿನಲ್ಲಿ ಅಲೆದು, ದೆವ್ವ ಮತ್ತು ರಕ್ಕಸಗಳಿಂದ ಚಿತ್ರಹಿಂಸೆ ಅನುಭವಿಸುತ್ತಾರೆ. ಅವರು ಸತ್ಯವನ್ನು ತುಂಬಾ ತಡವಾಗಿ ಕಲಿಯುತ್ತಾರೆ. ಗೆಹೆನ್ನಾ ಕೂಡ ಅವರಿಗೆ ಮುಚ್ಚಿರುತ್ತದೆ. ಪ್ರಪಂಚದ ತುಂಬೆಲ್ಲಾ ಇಂತಹ ವಲಸೆ ಆತ್ಮಗಳು ತುಂಬಿವೆ…” ಅಪ್ಪ ಕೂಗಿ ಹೇಳಿದ,

“ಅಪವಿತ್ರ ದೇಹಗಳನ್ನ ಆತ್ಮ ತ್ಯಜಿಸಿದೊಡನೆ, ಅದು ಮತ್ತೆ ಭೂಮಿಯಲ್ಲಿ ವಾಪಸ್ಸು ಅಲೆಯಲಾರಂಭಿಸುತ್ತದೆ, ಹುಳುವಾಗಿ, ಸರೀಸೃಪವಾಗಿ ಮತ್ತು ಅದರ ದುಃಖ ಪ್ರಚಂಡವಾಗಿರುತ್ತದೆ….”

“ಮತ್ತೆ, ಅದು ನಿಮ್ಮ ಪ್ರಕಾರ ಅಪ್ಪ, ದೇವರು ನೀಚ.”

“ಇಸ್ರೇಲ್‌ನ ಶತ್ರು! ದೇವರು ಮನುಷ್ಯನನ್ನು ಪ್ರೀತಿಸುತ್ತಾನೆ, ಆದರೆ ಮನುಷ್ಯ ತನ್ನಿಂದಲೇ ಅಪವಿತ್ರಗೊಂಡಾಗ, ಅವನನ್ನು ಶುದ್ಧೀಕರಿಸಬೇಕಾಗುತ್ತದೆ.”

“ಚೀನಾದವನಿಗೆ ಟೋರಾ ತಿಳಿದಿರಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಾ?”

“ಚೀನಾದವನು ನಿನಗೇನಾಗಬೇಕು? ಪಕ್ಷಿಗಳೋ ಅಥವಾ ಮೀನಾಗಿಯೋ ಅನ್ಯರು ಅಸ್ತಿತ್ವದಲ್ಲಿ ಇರುವುದು ಅವಶ್ಯಕ. ನಾನು ಪವಿತ್ರ ಗ್ರಂಥವನ್ನು ತೆರೆದಾಗ ಕೆಲವು ಬಾರಿ ನಿಕೃಷ್ಟವಾಗಿ ಗುರುತಿಸಲು ಸಾಧ್ಯವಾಗದಂತಹ ಸಣ್ಣಗಾತ್ರದ ತೊಣಚಿಗಳು ಓಡಾಡುವುದನ್ನು ನೋಡಿದ್ದೇನೆ. ಇದು ಕೂಡ ದೇವರ ವಿಸ್ಮಯವೆ. ಪ್ರಪಂಚದಲ್ಲಿರುವ ಎಲ್ಲಾ ಪ್ರೊಫೇಸರ್‌ಗಳು ಒಟ್ಟುಗೂಡಿ ಒಂದು ತೊಣಚಿಯನ್ನ ಸೃಷ್ಠಿಸಲು ಆಗುತ್ತಾ?”

ಅಪ್ಪ ಅಲ್ಲಿಂದ ಹೊರಟ ಮತ್ತು ಅಮ್ಮ ಏನನ್ನೋ ಕೊಳ್ಳಲು ಹೊರಗೆ ಹೋದಳು. ನಾನು ಅಣ್ಣನನ್ನು ಕೇಳಿದೆ “ಯಾರು ತೊಣಚಿಯನ್ನು ಸೃಷ್ಠಿಸಿದ್ದು?”

“ಪ್ರಕೃತಿ”

“ಮತ್ತೆ ಪ್ರಕೃತಿನಾ?”

“ಮತ್ತು ದೇವರನ್ನ ಯಾರು ಸೃಷ್ಟಿಸಿದ್ದು?” ಮತ್ತೆ ನಮ್ಮಣ್ಣ ಮಾರ್ನುಡಿದ. “ಏನೋ ಒಂದು ಸ್ವತಃ ಬರಬೇಕು ನಂತರದಲ್ಲಿ ಎಲ್ಲವೂ ಅದರ ಮೂಲ‌ಸ್ವರೂಪದಿಂದ ಅಭಿವೃದ್ಧಿ ಪಡೆದಿದೆ. ಸೂರ್ಯನ ಶಕ್ತಿಯಿಂದ ಮೊದಲ ಬ್ಯಾಕ್ಟೀರಿಯಾ ಸಮುದ್ರದ ಮೊನೆಯಲ್ಲಿ ರಚನೆಯಾಗಿರೋದು. ಪರಿಸ್ಥಿತಿಗಳು ಅದಕ್ಕೆ ಪೂರಕವಾಗಿ ಇತ್ತು. ಜೀವಿಗಳು ತಮ್ಮ ಮಧ್ಯೆ ಹೋರಾಡಿ ಬಲಶಾಲಿಗಳು ಬದುಕುಳಿದವು. ಬ್ಯಾಕ್ಟೀರಿಯಾಗಳು ವಸಾಹತುಗಳಾಗಿ ರೂಪುಗೊಂಡವು ಮತ್ತು ನಂತರದಲ್ಲಿ ಅವು ಕಸುಬು ಶುರುವಿಟ್ಟವು.”

ಆದರೆ ಇವೆಲ್ಲಾ ಮೊದಲು ಹೇಗೆ ಬಂದವು?

“ಇದು ಯಾವಾಗಲೂ ಹೀಗೇನೆ; ಯಾರಿಗೂ ಗೊತ್ತಿಲ್ಲ. ಆದರೆ ನೀನು ಒಂದು ವಿಷಯದ ಬಗ್ಗೆ ಖಚಿತವಾಗಿರಬಹುದು – ರಬ್ಬಿ ಟಾಮ್‌ನ ಧರ್ಮಕರಡಿಗೆ ಧರಿಸಬೇಕಾಗಿಲ್ಲಾ. ಇದು ಕಲ್ಪಿತ. ಎಲ್ಲಾ ಜನರಿಗೂ ಅವರದೇ ಆದ ಆಚಾರಗಳಿರುತ್ತವೆ. ಉದಾಹರಣೆಗೆ ಅಲ್ಲೊಬ್ಬ ರಬ್ಬಿ ಇದ್ದ, ಅವನು ಸಬ್ಬಾತಿನ ದಿನ ಹಿಮದ ಮೇಲೆ ಉಚ್ಚೆ ಹುಯ್ಯಬಾರದೆಂದು ಹೇಳಿದ್ದ ಏಕೆಂದರೆ ಅದು ಉಳುಮೆಯನ್ನು ಹೋಲುತ್ತದೆ ಎಂದು…..”

ನನ್ನ ನಂತರದ ಜೀವನದಲ್ಲಿ ನಾನು ತತ್ವಶಾಸ್ತ್ರವನ್ನು ತುಂಬಾ ಓದಿಕೊಂಡೆ, ಆದರೆ ಅವುಗಳಲ್ಲಿ ಯಾವುದರಲ್ಲೂ ನಮ್ಮ ಮನೆಯ ಅಡುಗೆ ಮನೆಯಲ್ಲಿ ನಡೆಯುತ್ತಿದ್ದಂತಹ ಬಲವಂತವಾದ ವಾದಗಳನ್ನು ನೋಡಲೇ ಇಲ್ಲಾ. ನಾನು ಮನೆಯಲ್ಲಿ ಮಾನಸಿಕ ಕ್ಷೇತ್ರದಲ್ಲಿನ ಸಂಶೋಧನೆಗಳ ಬಗೆಗಿನ ಕೆಲವು ವಿಚಿತ್ರ ವಿದ್ಯಮಾನಗಳನ್ನು ಕೇಳಿಸಿಕೊಂಡಿದ್ದೆ. ಮತ್ತೆ ಇಂತಹ ಚರ್ಚೆಗಳ ನಂತರ ನಾನು ಹೊರಗೆ ಆಡಲು ಹೋಗುತ್ತಿದ್ದೆ. ಆದರೆ ನಾನು ಕಳ್ಳ ಪೋಲಿಸ್, ಕಣ್ಣಾಮುಚ್ಚಾಲೆ ಮತ್ತು ಜೂಟಾಟಗಳನ್ನು ಆಡುವಾಗ ನನ್ನ ಕಲ್ಪನೆಗಳು ಕೆಲಸವನ್ನು ಶುರುವಿಡೋವು. ನನಗೆ ಜ್ಞಾನಿಯನ್ನಾಗಿ ಮಾಡುವ ಮತ್ತು ಎಲ್ಲಾ ರಹಸ್ಯಗಳ ತಿಳಿದುಕೊಳ್ಳೋ ನೀರು ಸಿಕ್ಕರೆ ಅಥವಾ ಪ್ರವಾದಿ ಎಲಿಜಾ ಬಂದು ನನಗೆ ಪ್ರಪಂಚದ ಏಳು ಜ್ಞಾನಗಳ ಬಗ್ಗೆ ಬೋಧಿಸಿದರೆ? ಮತ್ತು ನನಗೆ ದೂರದರ್ಶಕ ಸಿಕ್ಕಿ ನೇರವಾಗಿ ಸ್ವರ್ಗವನ್ನೇ ನೋಡಿದರೆ? ನನ್ನ ಆಲೋಚನೆಗಳು ಬೇರೆ ಹುಡುಗರ ಆಲೋಚನೆಗಳಾಗಿರಲಿಲ್ಲ, ಇವು ನನ್ನನ್ನು ಹೆಮ್ಮೆ ಮತ್ತು ಒಂಟಿಯನ್ನಾಗಿ ಮಾಡಿದ್ದವು. ಮತ್ತು ಯಾವಾಗಲಿನ ಒಂದು ಕಡೆಯ ಪ್ರಶ್ನೆ: ಯಾವುದು ಸರಿ? ನಾನು ಏನು ಮಾಡಬೇಕು? ದೇವರು ಏಕೆ ಏಳನೇ ಸ್ವರ್ಗದಲ್ಲಿ ಮೌನವಾಗಿದ್ದ? ಒಂದು ಬಾರಿ ಮನುಷ್ಯನೊಬ್ಬ ನನ್ನ‌ ಬಳಿ ಬಂದು ಕೇಳಿದ್ದ, “ಏನು ವಿಷಯ? ನೀನೇಕೆ ಇಷ್ಟು ಯೋಚಿಸುತ್ತಿದ್ದೀಯಾ? ಆಕಾಶ ಕಳಚಿ ನಿನ್ನ ಮೇಲೆ ಬೀಳಬಹುದು ಎಂದು ಭಯವಾ?”