Advertisement
ಸಿಯಾಟಲ್‌ನಲ್ಲಿ ದಾಯಾದಿ ಜಗಳ: ಕೆ. ಸತ್ಯನಾರಾಯಣ ಕಥಾ ಸರಣಿ

ಸಿಯಾಟಲ್‌ನಲ್ಲಿ ದಾಯಾದಿ ಜಗಳ: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೆ ನಮ್ಮ ದೇಶದ ಬಗ್ಗೆ, ಇಲ್ಲಿ ವಾಸಿಸುತ್ತಿರುವ ಭಾರತೀಯರ ಕುರಿತು, ಕೆಟ್ಟ ಅಭಿಪ್ರಾಯ ಬರಬಹುದು ಎನಿಸಿತು. ಜಗಳ ಬಿಡಿಸಲು, ನಿಲ್ಲಿಸಲು ಪ್ರಯತ್ನಿಸಿದೆ. ಇಬ್ಬರೂ ಒಬ್ಬರಿಗಿಂತ ಒಬ್ಬರು. ಜೋರಾದ ಆಳುಗಳು. ನನ್ನನ್ನೇ ಜೋರಾಗಿ ಪಕ್ಕಕ್ಕೆ ನೂಕಿ, ತಂತಿ ಬೇಲಿ ಹತ್ತಿರ ಬೀಳುವಂತಾಯಿತು. ನಾನು ಅವರಿಬ್ಬರಿಂದ ತಳ್ಳಿಸಿಕೊಂಡರೂ ನೆರೆದಿದ್ದ ಯಾರೊಬ್ಬರಿಗೂ ಅರ್ಥವಾಗದ ಕನ್ನಡದಲ್ಲಿ ಬುದ್ಧಿ ಹೇಳ್ತಾ ಇದ್ದುದರಿಂದ, ಕೆಲವರಾದರೂ ಇದೇನಿದು ಜಗಳ, ಯಾಕೆ ಜಗಳ, ಇಲ್ಲಿ ಯಾಕೆ ಈ ಜಗಳ, ಸ್ವಲ್ಪ ವಿವರಿಸಿ ಹೇಳು ಅಂತ ನನ್ನನ್ನು ಕೇಳಿದರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ಸಿಯಾಟಲ್‌ನ ದೀರ್ಘವಾಸದ ಸಂದರ್ಭದಲ್ಲಿ ನನಗೂ ನನ್ನ ಮಗನಿಗೂ ಕೆಲವು ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಮೂಡುತ್ತಿತ್ತು. ಸಂಜೆಯ ವಾಯು ವಿಹಾರವನ್ನು ಮನೆಯ ಹತ್ತಿರದ ಉಬ್ಬು-ತಗ್ಗು ತುಂಬಿದ ನಾಲ್ಕಾರು ತಿರುವುಗಳಲ್ಲಿ ಮಾಡಿದರೆ ಸಾಕೆಂದು ನನ್ನ ಅಭಿಪ್ರಾಯ. ಅಷ್ಟಕ್ಕೇ ನನಗೆ ಸುಸ್ತಾಗುತ್ತಿತ್ತು. ಇದು ಯಾವ ಸೀಮೆಯ ವ್ಯಾಯಾಮ, ಚೆನ್ನಾಗಿ ಡ್ರೆಸ್‌ ಮಾಡಿಕೊಂಡು, designer ಬೂಟುಗಳನ್ನು ಹಾಕಿಕೊಂಡು, ಹೆಗಲಿಗೆ ನೀರಿನ ಬಾಟಲ್‌ನ ಬ್ಯಾಗ್‌ ನೇತು ಹಾಕಿಕೊಂಡು, ಸೊಂಟಕ್ಕೆ ಟವಲ್‌ ಸಿಕ್ಕಿಸಿಕೊಂಡು ನಗರದ ಮಧ್ಯಭಾಗದಲ್ಲಿ Liberty Park ನಲ್ಲಿ ವೇಗವಾಗಿ ನಡೆದಾಡಬೇಕು ಎಂಬುದು ಅವನ ವಾದ. ನಂತರ ಕುರುಕಲು ತಿಂಡಿ ತಿಂದು Ice Cream ಅಂಗಡಿಗೆ ಭೇಟಿ ನೀಡಿ ಒಟ್ಟು ಎರಡು ಮೂರು ಘಂಟೆ ಕಾಲ ಕಳೆದರೆ ಮನಸ್ಸಿಗೆ, ದೇಹಕ್ಕೆ ನವನವೀನ ಭಾವನೆ ಬರುತ್ತದೆ ಎಂಬುದು ಅವನ ವಾದ. ಕೊನೆಗೂ ವಿಷಯದಲ್ಲಿ ಏಕತೆ ಮೂಡಲಿಲ್ಲ. ಹಾಗಾಗಿ Liberty ಉದ್ಯಾನವನಕ್ಕೆ ಆಗಾಗ್ಗೆ ಹೋಗಬೇಕಾಗುತ್ತಿತ್ತು.

ಎಂತಹ ಉದ್ಯಾನವನವದು! ಉದ್ಯಾನವನವೇ, ಇಲ್ಲ ಕ್ರೀಡಾಂಗಣ. ಅಲ್ಲ ಕಾರಂಜಿ ತುಂಬಿದ ಉದ್ಯಾನವನ. ಅಲ್ಲಿ ಮೆಟ್ಟಿಲುಗಳುಳ್ಳ ರಂಗಭೂಮಿ. ಸೈಕಲ್‌ ಓಡಿಸುವವರಿಗೆ ಪ್ರತ್ಯೇಕ ಕಿರುದಾರಿ. ಉಯ್ಯಾಲೆ, ಕಲ್ಲು ಬೆಂಚುಗಳು, ನಲ್ಲಿಗಳು, ಶೌಚಾಲಯ, ನೆಗೆಯುವವರಿಗೆ, ಚಿಮ್ಮುವವರಿಗೆ, ವಾಲಿಬಾಲ್‌, ಬ್ಯಾಡ್‌ಮಿಂಟನ್‌, ಬೇಸ್‌ಬಾಲ್‌ ಯಾವುದೇ ಆಟವನ್ನು ಎಷ್ಟು ತಂಡಗಳಾದರೂ ಏಕಕಾಲದಲ್ಲಿ ಆಡಬಹುದಾದ ವಿಶಾಲ ಮೈದಾನ. ಇದೆಲ್ಲವನ್ನೂ ಸದಾ ಪೋಷಿಸುತ್ತಿರುವ ಹಾಗೆ ಮೇಲುಗಡೆ ನೀಲಿ ಆಕಾಶ. ಕ್ರೀಡಾಂಗಣ ಅಂತಲೋ, ಇಲ್ಲ ಅದು ಅಮೆರಿಕ ಅಂತಲೋ ಒಂದೇ ಒಂದು ದಿನ, ಒಂದೇ ಒಂದು ಕಡೆ ಮೋಡದ ರಾಶಿ ಕಾಣಲಿಲ್ಲ. ಅಲ್ಲದೆ ಸಂಜೆಯ ವಾತಾವರಣ ಮೂಡುತ್ತಿದ್ದುದೇ ಅಲ್ಲಿ. ರಾತ್ರಿ ಒಂಭತ್ತು ಘಂಟೆ ಆದಮೇಲೆ ಮುಸ್ಸಂಜೆ ನೋಡಬೇಕಾದರೆ ಹತ್ತೂವರೆ-ಹನ್ನೊಂದೂವರೆಯವರೆಗೆ ಕಾಯಬೇಕು.

ಆದರೆ ಉದ್ಯಾನವನದ ಮುಖ್ಯ ಚಟುವಟಿಕೆ – ಓಡುವುದು, ನೆಗೆಯುವುದು, ಓಡುತ್ತಾ ಓಡುತ್ತಾ ಜೂಟ್‌ ಆಟ ಆಡುವುದು, ಜಗಳ ಕಾಯುವುದು, ಗುದ್ದಾಡುವುದು, ಮತ್ತೆ ನಗುವುದು, ಮತ್ತೆ ಓಡುವುದು. ಇದನ್ನೆಲ್ಲ ನೋಡುವುದರಲ್ಲೇ ಒಂದು ತಲ್ಲೀನತೆ, ಒಂದು ಸಂತೋಷ, ಒಂದು ಮೈ ಮರೆವು. ನಿನಗೂ ನಿಜಕ್ಕೂ ಸಂತೋಷವಾಗುತ್ತೆ. ಸುಮ್ಮನೆ ನನ್ನ ಹತ್ತಿರವಾದ ಮಾಡುತ್ತಿ ಅಷ್ಟೆ ಎಂದು ಮಗನ ಒಗ್ಗರಣೆ.

ಇಂತಹ ಉದ್ಯಾನವನಾದಲ್ಲಿ ನಾನು ಒಂದು ಭಾರತೀಯ ದಾಯಾದಿ ಕಲಹ ನೋಡ್ತೀನಿ ಅಂತ ಕನಸು ಮನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಅದೂ ಗಂಡಸು, ಹೆಂಗಸಿನ ನಡುವೆ. ಹೆಂಗಸಿಗೆ ಅರವತ್ತರ ಹತ್ತಿರ ಹತ್ತಿರ. ಗಂಡಸಿಗೆ ಇನ್ನೂ ನಾಲ್ಕಾರು ವರ್ಷ ಹೆಚ್ಚಾಗಿರಬಹುದು. ಗಂಡಿನ ಮುಖದಲ್ಲಿ ಕ್ಯಾಣ ಜಾಸ್ತಿ. ವಯಸ್ಸಿನಲ್ಲಿ ಮುಖದ ತುಂಬಾ ಮೊಡವೆಗಳಿದ್ದಿರಬೇಕು. ಮೊಡವೆಗಳ ಗುರುತು ಮುಖದ ತುಂಬಾ ಹಾಗೆ ಉಳಿದುಬಿಟ್ಟಿದೆ. ಸಣ್ಣ ಗಲ್ಲ. ಕೀಚಲು ಧ್ವನಿ. ಜಗಳ ಕಾಯುವುದಕ್ಕೆ ಪ್ರಶಸ್ತವಾದದ್ದು. ಇಬ್ಬರೂ ಸಾದುಗಪ್ಪು ಬಣ್ಣದವರೇ. ಇಬ್ಬರ ಹಣೆ, ಹುಬ್ಬು, ಕಿವಿ, ಕತ್ತಿನ ಉದ್ದ ಗಮನಿಸಿದರೆ ಸಂಬಂಧಿಕರು ಅಂತ ಯಾರಿಗಾದರೂ ಅನುಮಾನ ಬಂದರೂ ಬರಬಹುದು.

ಹೆಂಗಸಿನ ಮುಖದಲ್ಲಿ ವಿಪರೀತ ಪೌಡರ್‌. ಎಷ್ಟು ಅಂದರೆ, ಅವಳ ಕಪ್ಪು ಬಣ್ಣ ಎದ್ದು ಕಾಣುವಷ್ಟು. ಎಡಗೆನ್ನೆಯ ಕೆಳ ಭಾಗದಲ್ಲಿ ಇರುವ ದೊಡ್ಡ ಮಚ್ಚೆ ಕೂಡ ಇನ್ನೊಬ್ಬರ ಗಮನಕ್ಕೆ ಬರುವಷ್ಟು. ನಾಗವೇಣಿ ತರ ಉದ್ದದ ಕೂದಲು, ಬೆನ್ನು ತುಂಬಾ ಹರಡಿಕೊಂಡು ಸೊಂಟದ ತನಕ ಬಂದಿದೆ. ಅಮೆರಿಕಕ್ಕೆ ಬಂದಿದ್ದರೂ ಕೂದಲಿಗೆ ಒಂದು ಶಿಸ್ತು, ಒಪ್ಪ ಬಂದಿಲ್ಲ. ಹಾಕಿಕೊಂಡಿರುವ ಟೀಷರ್ಟ್‌ ತುಂಡಾಗಿದ್ದು, ಹೊಟ್ಟೆಯ ಕೆಳ ಭಾಗದ ಸುಕ್ಕು ಕೂಡ ಕಾಣುತ್ತದೆ. ಹುಬ್ಬಲ್ಲು ಅಂತ ಹೇಳೋದಕ್ಕೆ ಕಷ್ಟವಾದರೂ ಜಗಳ ಕಾಯವಾಗ ಶೋಭೆ ತರಲೆಂದು ಸಾಕಷ್ಟು ಮುಂದೆ ಬಂದಿದೆ.

ಇಬ್ಬರೂ ಬರೀ ಮಾತಿನ ಜಗಳ ಕಾಯುತ್ತಿಲ್ಲ, ಒಬ್ಬರಿಗೆ ಒಬ್ಬರು ಹೊಡೆಯಲು ಹೋಗುತ್ತಾರೆ, ಹೊಡೆಯುತ್ತಾರೆ, ನೂಕಿ ಬೀಳಿಸುತ್ತಾರೆ, ಮರಳು ತೆಗೆದುಕೊಂಡು ತೂರಿ, ಪರಸ್ಪರ ಎರಚಾಡುತ್ತಾರೆ.

ನೋಡಿ ಸಾರ್‌, ಈ ಬಿಕನಾಸಿ ರಂಡೆ, ಎಂತಹ ಜುಜುಬಿ family ಯಿಂದ ಬಂದಿರೋದು ಗೊತ್ತಾ? ಇವಳು, ಇವರ ತಾಯಿ ಏಳೆಂಟು ಮನೆಗಳಲ್ಲಿ ಮೆಣಸಿನ ಪುಡಿ, ಚಟ್ನಿಪುಡಿ, ಹಪ್ಪಳ, ಸಂಡಿಗೆ, ಹುರಿಗಾಳು ಮಾಡಿಕೊಂಡು, ಮುಸುರೆ ತಿಕ್ಕತಾ ಇದ್ದೋರು. ಗಂಡನಿಗೆ ಜೀವನದುದ್ದಕ್ಕೂ Postman ಕೆಲಸ. ತಿಪ್ಪರಲಾಗ ಹಾಕಿ, ನೆಹರು, ಅವನ ಮಗಳು, ಅವಳ ಮಗನ ಕಾಲ ಮುಗಿದು ಹೋದರೂ ಪೋಸ್ಟ್‌ ಮಾತ್ರ ಖಾಯಂ ಆಗಲಿಲ್ಲ. ಉಟ್ಟುಕೊಳ್ಳೋಕೆ ಒಂದು ಸರಿಯಾದ ಸೀರೆ ಗತಿ ಇಲ್ಲದೆ, ಯಾವ ಮದುವೆಗೂ, ಮುಂಜಿಗೂ ಬರ್ತಾ ಇರಲಿಲ್ಲ. ಊರವರೆಲ್ಲರ ಹತ್ತಿರ ಹೊಯ್ಸಳ ಕರ್ನಾಟಕದವರು ಅಂತ ಬೀಗುತ್ತಿದ್ದರೂ ಮಗನಿಗೆ free seat ಸಿಗಲಿ ಅಂತ ಸರ್ಕಾರದ OBC ಹಾಸ್ಟೆಲ್‌ನಲ್ಲಿಟ್ಟು ಓದಿಸಿದರು. ನಮ್ಮ ಸಮಾಜಕ್ಕೇ ಅವಮಾನ ಹಾಗುವ ಹಾಗೆ ಇಡೀ ಹಾಸ್ಟೆಲ್‌ನಲ್ಲಿ ಇವರ ಪುತ್ರ ಒಬ್ಬನೇ ಬ್ರಾಹ್ಮಣ ವಟು. ಅದೃಷ್ಟ ಚೆನ್ನಾಗಿತ್ತು. ಈಗ ಆ ಮಗನೇ ಇಲ್ಲಿ ಯಾವುದೋ ಕಂಪನಿಯಲ್ಲಿ ದೊಡ್ಡ ಪೋಸ್ಟ್‌ ಹೊಡೆದು, ಏಳೆಂಟು ಅಡಿ ಉದ್ದವಿರುವ ದೊಡ್ಡ ಮೂತಿಯ ಕಾರ್‌ ಇಟ್ಟುಕೊಂಡಿದ್ದಾನೆ. ಆ ಕಾರನಲ್ಲಿ ಇವಳನ್ನು ಡ್ರೈವರ್‌ ಸಮೇತ ಕಳಿಸ್ತಾನೆ. ಈ ಮಗನ ದೆಸೆಯಿಂದಾಗಿಯೇ ಉಳಿದ ತಮ್ಮ ತಂಗಿಯರು ಕೂಡ ಸರಿಯಾದ ನೆಲೆ ಕಂಡುಕೊಂಡರು. ಸಂತೋಷ. ಹಾಗಂತ ನನಗೆ ಸಮಾನ, ನನಗಿಂತ ಮೇಲು ಅಂತ ಭಾವಿಸಿ, ನನ್ನ ಹೊಟ್ಟೆ ಉರಿಸೋಕೆ ಬೇಕು ಬೇಕು ಅಂತಾ ಇದೇ ಪಾರ್ಕಿಗೆ ಇದೇ ಹೊತ್ತಿಗೆ ಬರ‍್ತಾಳೆ. ನನ್ನನ್ನೇ ಕೆಕ್ಕರಿಸಿ ನೋಡ್ತಾ, ನನಗಿಂತ ಜೋರಾಗಿ ದಾಪುಗಾಲು ಹಾಕ್ತಾಳೆ. ಚಿಕ್ಕ ಹೆಣ್ಣು ಮಕ್ಕಳ ತರ skipping ಮಾಡ್ತಾಳೆ. ಇಲ್ಲಿಯ ಹೆಂಗಸರಿಗೆ ಕುಂಟೋಬಿಲ್ಲೆ ಆಡೋಕೆ ಹೇಳಿಕೊಡ್ತಾಳೆ. ಓದಿರೋದು ಮೂರನೇ ಕ್ಲಾಸೋ, ನಾಲ್ಕನೇ ಕ್ಲಾಸೋ! ನನಗೆ ಗೊತ್ತಿಲ್ವಾ ಇವಳ ಇತಿಹಾಸ. ಅದನ್ನೆಲ್ಲ ಮುಚ್ಚಿಡೋಕೆ butler ಇಂಗ್ಲಿಷ್‌ನಲ್ಲಿ ಇಲ್ಲಿಯವರ ಜೊತೆ ಹರಟ್ತಾಳೆ.

ಹೆಂಗಸು ಕೂಗಾಡ್ತಾ ಇದಾಳೆ. ಕಿರುಚಾಡ್ತಾ ಇದಾಳೆ. ಮಾತು ಮಾತಿಗೂ ಬಿಕ್ಕಳಿಸುತ್ತಾಳೆ. ಅವನಿಗೆ ಉತ್ತರ ಕೊಡಬೇಕು ಅನ್ನುವುದಕ್ಕಿಂತ ಸುತ್ತ ನೋಡ್ತಾ ನಿಂತ ನಾಲ್ಕಾರು ಜನರಿಗೆ ನ್ಯಾಯ ಒಪ್ಪಿಸಬೇಕು ಅನ್ನುವ ಧಾಟಿ.

ಇವನು ನಮ್ಮ ಸಂಬಂಧದೋನು ನಿಜ. ನಮಗಿಂತ ಶ್ರೀಮಂತರು ಕೂಡ. ಕೆರೆ ಬಯಲಲ್ಲೇ ಎಂಟು ಹತ್ತು ಎಕರೆ ಜಮೀನಿದ್ದವರು. ರೈಸ್‌ ಮಿಲ್‌ ಇತ್ತು. ಆಲೆಮನೆ ಕೂಡ ಬಾಡಿಗೆಗೆ ತಗೊಂಡು ನಡೆಸಿದರು. ಮಂಡ್ಯದ ಪೇಟೆ ಬೀದಿಯಲ್ಲಿ ಕಾಫಿಪುಡಿ ಅಂಗಡಿ ಇಟ್ಟುಕೊಂಡಿದ್ದರು. ಮಕ್ಕಳನ್ನು ಮೈಸೂರು ಬೆಂಗಳೂರಿನಲ್ಲಿ ಓದಿಸಿದರು. ಶಿವಮೊಗ್ಗ, ಶೃಂಗೇರಿ, ಸಕಲೇಶಪುರದ ಕಡೆಯಿಂದೆಲ್ಲಾ ಒಳ್ಳೊಳ್ಳೆ ಸಂಬಂಧ ಮಾಡಿಕೊಂಡರು, ನಿಜ. ಅವನ ಮಗಳು ಅಳಿಯ ಕೂಡ ಇಲ್ಲೇ ಇದ್ದಾರೆ. ಇರಲಿ ಸಂತೋಷ. ನಾವೇನು ಬೇಡ ಅಂದ್ವಾ? ಇವನ ಪ್ರಕಾರ ನಾನು ಮೊದಲಿದ್ದ ಹಾಗೇ ಇರಬೇಕಾಗಿತ್ತು. ನಮ್ಮ ಮಗ ಅಮೆರಿಕಗೆ ಬರಬರದಾಗಿತ್ತು. ನಾನು ಪಾರ್ಕಿಗೆ ದಿನವೂ ಬರಬಾರದು. ಇವನೆದುರಿಗೆ ಸಮನಾಗಿ ಕೈ ಬೀಸಿಕೊಂಡು ಓಡಾಡಬಾರದು. ಪಾರ್ಕಿನ ಗೇಟ್‌ ಹತ್ತಿರವೇ ಕಾಯ್ತಾ ಇರ‍್ತಾನೆ. ಒಳಗೆ ಬರಕೂಡದ ಅಂತಾನೆ. ಕಲ್ಲು ತಗೊಂಡು ಹೊಡೆದು ಓಡಿಸೋಕೆ ನೋಡ್ತಾನೆ. ಇವರಪ್ಪನದಾ park? ಇವರ ತಾತನದಾ ಅಮೆರಿಕ? ಎಲ್ಲರೂ ಸುಮ್ಮನೆ ನಿಂತುಕೊಂಡು ತಮಾಷೆ ನೋಡ್ತಾ ಇದೀರಲ್ಲ ಬುದ್ಧಿ ಹೇಳಿ. ಅವನು ಏನೇ ಕೂಗಾಡಲಿ, ಎಷ್ಟೇ ಹೊಡೆಯಲಿ, ಬಡಿಯಲಿ ನಾನು ದಿನಾ ಇಲ್ಲಿಗೇ ವಾಕಿಂಗ್‌ಗೆ ಬಂದೇ ಬರೋಳು. ಅವನ ಸಮಕ್ಕೂ ಓಡಾಡ್ತೀನಿ. ಅವನಿಗಿಂತ ಸ್ಪೀಡಾಗಿ ವಾಕಿಂಗ್‌ ಮಾಡ್ತೀನಿ.

ಇಬ್ಬರು ಪರಸ್ಪರ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನಾಲ್ಕು ಸಲವಾದರೂ ಎದೆ ಪಟ್ಟಿ ಹಿಡಿದಿರುತ್ತಿದ್ದರು. ಒಂದು ಸಲ ಅವಳು ಜೋರಾಗಿ ನೂಕಿ, ಇವನು ಕೆಳಗೆ ಬಿದ್ದು, ಬಿದ್ದವನು ಎರಡು ಕಾಲನ್ನು ಮೇಲಕ್ಕೆತ್ತಿ, ದಿಢೀರ್‌ ಅಂತ ಕಾಲುಗಳಲ್ಲಿ ಇವಳಿಗೆ ಗುದ್ದಿ ಕೆಳಗೆ ಬೀಳಿಸಿ ಎದೆ ಮೇಲೆ ಕೂತು, ಕತ್ತು ಹಿಸುಕುವ ತನಕವೂ ಹೋದ.

ಅಷ್ಟು ದೊಡ್ಡ ಸ್ಟೇಡಿಯಂ, ಪಾರ್ಕ್‌ಗೆ ಇದೊಂದೇ ಈ ರೀತಿಯ ಜಗಳ. ಎಲ್ಲರಲ್ಲೂ ಕುತೂಹಲ ಮೂಡಿಸಿರಬೇಕು. ಒಂದಿಷ್ಟು ಜನ ಸುತ್ತ ಮುತ್ತ ಸೇರಿದರು. ಜಗಳ ಅರ್ಥ ಆಗ್ತಾ ಇರಲಿಲ್ಲ. ಜಗಳದ ಬಿರುಸು ತಟ್ತಾ ಇತ್ತು. ಕೆಲವರ ಮುಖದಲ್ಲಿ ಆತಂಕ. ಒಂದಿಬ್ಬರು ಬೆವರಿದಂತೆ ಕೂಡ ಕಂಡಿತು. ಯಾರೂ ಬಿಡಿಸಲೂ ಹೋಗಲಿಲ್ಲ. ಸಮಾಧಾನವನ್ನು ಕೂಡ ಹೇಳಲಿಲ್ಲ.

ನನಗೆ ನಮ್ಮ ದೇಶದ ಬಗ್ಗೆ, ಇಲ್ಲಿ ವಾಸಿಸುತ್ತಿರುವ ಭಾರತೀಯರ ಕುರಿತು, ಕೆಟ್ಟ ಅಭಿಪ್ರಾಯ ಬರಬಹುದು ಎನಿಸಿತು. ಜಗಳ ಬಿಡಿಸಲು, ನಿಲ್ಲಿಸಲು ಪ್ರಯತ್ನಿಸಿದೆ. ಇಬ್ಬರೂ ಒಬ್ಬರಿಗಿಂತ ಒಬ್ಬರು. ಜೋರಾದ ಆಳುಗಳು. ನನ್ನನ್ನೇ ಜೋರಾಗಿ ಪಕ್ಕಕ್ಕೆ ನೂಕಿ, ತಂತಿ ಬೇಲಿ ಹತ್ತಿರ ಬೀಳುವಂತಾಯಿತು. ನಾನು ಅವರಿಬ್ಬರಿಂದ ತಳ್ಳಿಸಿಕೊಂಡರೂ ನೆರೆದಿದ್ದ ಯಾರೊಬ್ಬರಿಗೂ ಅರ್ಥವಾಗದ ಕನ್ನಡದಲ್ಲಿ ಬುದ್ಧಿ ಹೇಳ್ತಾ ಇದ್ದುದರಿಂದ, ಕೆಲವರಾದರೂ ಇದೇನಿದು ಜಗಳ, ಯಾಕೆ ಜಗಳ, ಇಲ್ಲಿ ಯಾಕೆ ಈ ಜಗಳ, ಸ್ವಲ್ಪ ವಿವರಿಸಿ ಹೇಳು ಅಂತ ನನ್ನನ್ನು ಕೇಳಿದರು.

ಅವರು ಮತ್ತೆ ಮತ್ತೆ ಕೂಗುತ್ತಲೇ ಇದ್ದರು. ಹೇಳಿದ್ದನ್ನೇ ಹೇಳುತ್ತಿದ್ದರು. ಅದೇ ಪದಗಳು, ಅದೇ ವಾಕ್ಯಗಳು. ಮಧ್ಯೆ ಮಧ್ಯೆ, ಕೀಳು ಭಾಷೆ ಕೂಡ. ಅನುವಾದ ಮಾಡಿ ಹೇಳುವುದಕ್ಕೇನು ಕಷ್ಟವಾಗುತ್ತಿರಲಿಲ್ಲ. ಆದರೆ ಜೀವನದಲ್ಲಿ ಅನುವಾದ ಮಾಡಬಾರದ ಸಂದರ್ಭಗಳು, ಅನುವಾದ ಮಾಡಲೇಬಾರದ ಸಂದರ್ಭಗಳೂ ಇರುತ್ತವಲ್ಲ.

ಜಗಳದ ಬಿರುಸಿನಲ್ಲಿ ಅವನು ಒಂದು ಸಲ ಕ್ಯಾಕರಿಸಿ ಉಗುಳಿ, ಉಗುಳು ಅವಳ ಮುಖಕ್ಕೆ ಅಂಟಿಕೊಂಡಾಗ, ಇವಳು ಎರಚುತ್ತಿದ್ದ ಮರಳು ಅವನ ಕಣ್ಣುಗಳಲ್ಲಿ ತುಂಬಿ, ಮರಳನ್ನು ಕಣ್ಣುಗಳಿಂದ ಹೊರ ತೆಗೆಯಲು ಕಷ್ಟ ಪಡುತ್ತಾ ಅವಳ ಮೇಲೆ ಇನ್ನೂ ಬಲವಾಗಿ ಎರಗಲು ಹೋದಾಗ ಮಾತ್ರ ಕೆಲವರು ಭಯ ಬಿದ್ದು ಹಿಂದೆ ಸರಿದರು. ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು. ಒಂದಿಬ್ಬರು ಅಸಹ್ಯ ಪಟ್ಟುಕೊಂಡಂತೆ ಕಾಣಿಸಿತು.

ಸಿಯಾಟಲ್‌ ನಗರದ ನಮ್ಮ ನಾಲ್ಕಾರು ತಿಂಗಳ ವಾಸದಲ್ಲಿ ಈ ಜಗಳವನ್ನು ನಾನು ಏಳೆಂಟು ಸಲ ನೋಡಿದೆ. ಅಷ್ಟು ಸಲವೂ ಒಂದೇ ತೀವ್ರತೆಯಲ್ಲಿ ಈ ದಾಯಾದಿ ಜಗಳ ನಡೆಯಿತು, ನಡೆಯುತ್ತಿತ್ತು. ಹೀಗೆ ಜಗಳ ಕಾಯುವುದಕ್ಕೆ ಅವರು ಲಿಬರ್ಟಿ ಪಾರ್ಕ್‌ಗೆ ಬರುತ್ತಿದ್ದರೋ ಏನೋ ಅನಿಸುತ್ತದೆ. ನೋಡುವವರ ಸಂಖ್ಯೆ ಮಾತ್ರ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇರೋದು.

ಅಷ್ಟು ಜಗಳದ ಮಧ್ಯೆಯೂ ನನಗೂ ನನ್ನ ಹೆಂಡತಿಗೂ ಕನ್ನಡದಲ್ಲೇ ನಮಸ್ಕಾರ ಹೇಳುತ್ತಿದ್ದರು. ಈ ಜಗಳ ನೋಡುವುದಕ್ಕೆ, ತಿಳಿಯುವುದಕ್ಕೆ ನಾವು ಇಲ್ಲಿಗೆ ಬಂದಿದ್ದೀವೇನೋ ಅನಿಸುತ್ತಿತ್ತು.

ಹೌದೆ?

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ