ನಮ್ಮ ಸುಮ್ಮಕ್ಕನ ಮಗಾ ನಿಖಿಲಂದ ಮೊನ್ನೆ ಔರಂಗಾಬಾದನಾಗ ಮದುವಿ ಆತು. ನಾವು ಇಲ್ಲಿಂದ ಗಾಡಿ ಖರ್ಚ ಮೈ ಮ್ಯಾಲೆ ಹಾಕ್ಕೊಂಡ ಹೋಗಿ ಸಾವಿರಗಟ್ಟಲೇ  ಉಡಗೊರೆ ಕೊಟ್ಟ ಲಗ್ನ ಅಟೆಂಡ ಮಾಡಿ ಬಂದ್ವಿ, ಲಗ್ನಾದ ದಿವಸ ಮಧ್ಯಾಹ್ನನ ಸುಮಕ್ಕಾ ಮದುಮಕ್ಕಳನ್ನ ಕರಕೊಂಡ ಪುಣಾಕ್ಕ ಹೋಗೊಕಿ ಇದ್ದಳು. ನಾವು ಹೆಂಗಿದ್ರು ಇಷ್ಟ ದೂರ ಅನಾಯಸ ಗಾಡಿ ಖರ್ಚ ಮಾಡಕೊಂಡ ಬಂದೇವಿ,  ಇನ್ನೊಂದ ಎರಡ ದಿವಸ ಅಲ್ಲೆ ಇದ್ದ ಅಜಂತಾ- ಎಲ್ಲೋರಾ ಎಲ್ಲಾ ನೋಡಿ ಹುಬ್ಬಳ್ಳಿ ಹಾದಿ ಹಿಡಿಬೇಕು ಅಂತ ಅನ್ಕೊಂಡಿದ್ವಿ. ನಮ್ಮ ನಿಖಿಲ ತಾ ಲಗ್ನ ಮುಗಿಸಿಕೊಂಡ ಹೆಂಡ್ತಿ ಕರಕೊಂಡ ಹೋಗೊಕಿಂತ ಮುಂಚೆ ನಂಗ ಸೈಡಿಗೆ ಕರದ
“ಪ್ರಶಾಂತಣ್ಣಾ ಇಲ್ಲೆ ಬಾ, ನಿನ್ನ ಜೊತಿ ಸ್ವಲ್ಪ ಮಾತೋಡದ ಅದ” ಅಂತ ಅಂದಾ .

ನಮ್ಮ ಸುಮಕ್ಕ  ಮರುದಿವಸ ಪುಣಾದಾಗ ಸತ್ಯನಾರಾಯಣ ಕಮ್ ರಿಸೆಪ್ಶನ ಇಟಗೊಂಡ ಅಲ್ಲಿನೂ ಒಂದಿಷ್ಟ ಲೊಕಲ್ ಉಡಗೊರೆ ತೊಗಂಡ ಆಮೆಲೆ ಅವತ್ತ ರಾತ್ರಿನ ನಿಖಿಲಂದ ಪ್ರಸ್ಥದ ವ್ಯವಸ್ಥೆ ಮಾಡಿದ್ಲು.  ಬಹುಶಃ ನಿಖಿಲ ಪ್ರಸ್ಥದ ಸಂಬಂಧ ನನ್ನ ಕಡೆ ಏನರ ಸಜೆಶನ್, ಟಿಪ್ಸ, ಹಿಂಟ್ಸ ಕೇಳಬಹುದು ಅನಸ್ತು. ಪಾಪ, ಸಣ್ಣ ಹುಡಗಾ, ನನಗ ತಿಳದದ್ದು, ನಾ ಈ ಹನ್ನೊಂದ ವರ್ಷದಾಗ ಇದರಾಗ ತಿಳ್ಕೊಂಡಿದ್ದು ಎಲ್ಲಾ ಹೇಳಿದರಾತು ಅಂತ ಅನ್ಕೊಂಡೆ. ಹಂಗ ನಾ  ಈ ವಿಷಯದಾಗ  ಎಕ್ಸಪರ್ಟ ಏನ ಅಲ್ಲಾ, ನಂದು ಪ್ರಸ್ಥ ಅಂತ ಆಗಿದ್ದ ಒಂದ, ಆದ್ರ ನಮ್ಮ ಈಡಿ ಬಳಗದಾಗ ಛಂದಾಗಿ “ಒಂದ ಗಂಡು-ಒಂದ ಹೆಣ್ಣು” ಅಂತ ಎರಡು ಹಡಿಯೋದ ಹೆಂಗ ಅಂತ ಗೊತ್ತ ಇದ್ದೊಂವಾ ನಾ ಒಬ್ಬನ. ಉಳದವರಿಗೆಲ್ಲಾ ಒಂದ ಹಡದ ಮ್ಯಾಲೆ ಇನ್ನೋಂದ ಹೆಂಗ ಹಡಿಬೇಕಂತ  ಗೊತ್ತಾಗಲಾರದ ಅಷ್ಟಕ್ಕ ಕೈ ತೊಳ್ಕಂಡ ಬಿಟ್ಟಾರ. ಇರಲಿ ಅಂವಾ ಅದ ಏನ ಕೇಳ್ತಾನೋ ಕೇಳಲಿ, ಮುಚ್ಚು ಮರಿಯಿಲ್ಲದ ಹೇಳಿ ಬಿಡೋಣ, ಪುಣ್ಯಾದ ಕೆಲಸಾ ಅಂತ ನಾ ಅವನ ರೂಮಿಗೆ ಹೋದೆ.

“ಏನ ಆತೋ ನಿಖಿಲಾ, ನೀ ಏನ ಟೆನ್ಶನ್ ತೊಗೊ ಬ್ಯಾಡಾ,  ನಾಳೆ ಎಲ್ಲಾ ಕಾರ್ಯಕ್ರಮ ಸರಳ ಆಗತದ, ಧೈರ್ಯಾ ತೊಗೊ” ಅಂತ ಅಂದೆ.
ಅಂವಾ “ಯಪ್ಪಾ, ಅದ ಅಲ್ಲೋ ಮಾರಾಯ, ಸದಾಶಿವಗ ಅದ ಧ್ಯಾನ ಅನ್ನೊ ಹಂಗ ನೀ ಬರೆ ಹಿಂತಾದರ ಬಗ್ಗೆ ವಿಚಾರ ಮಾಡ್ತಿ ನೋಡ. ಅದನ್ನೇಲ್ಲಾ ನಾ ಸಂಭಾಳಸ್ತೇನಿ, ನಾನೂ ಸೈನ್ಸ ಕಲ್ತೇನಿ, ನನಗ ಎಲ್ಲಾ ಗೊತ್ತಾಗತದ. ನಿನ್ನ ಹತ್ರ ಬ್ಯಾರೆ ವಿಷಯ ಮಾತೋಡದ ಅದ ಬಾ” ಅಂತ ಅಂದಾ. ನಾ ಏನೇನೋ ವಿಸ್ತಾರವಾಗಿ ಪ್ರಸ್ಥದ ಬಗ್ಗೆ ಉಪ್ಪು-ಖರಾ-ಹುಳಿ ಹಚ್ಚಿ ಹೇಳ್ಬೇಕು ಅಂತ ಅನ್ಕೊಂಡಿದ್ದೆ, ನಂಗ ಭಾಳ ನಿರಾಶೆ ಆತ. ಆದ್ರೂ ಇಂವಾ ಎನ ಕೇಳೊಂವಾ ಇದ್ದಾನ ನನ್ನ ಕಡೆ ಅಂತ ವಿಚಾರ ಮಾಡಲಿಕತ್ತೆ, ಅಂವಾ ಹಗರಕ ವಿಷಯಕ್ಕ ಬಂದಾ

“ನೋಡಣ್ಣಾ, ಈಗ ನಾ ಮದುವಿ ಆಗಿದ್ದ ಮರಾಠಿ ಹುಡಗಿ, ಪಾಪ ಅಕಿಗ ಮದ್ಲ ಕನ್ನಡ ಅಜಿಬಾತ ಬರಂಗಿಲ್ಲಾ, ನಾವ ಮನ್ಯಾಗಿಷ್ಟ ಕನ್ನಡಾ ಮಾತೊಡೊ ಮಂದಿ, ಅಕಿಗೆ ಸ್ವಲ್ಪ ಹೊಂದಕೋಳೊದು ತ್ರಾಸ ಆಗಬಹುದು. ಅದರಾಗ ನಿಂಗ ನಮ್ಮವ್ವಂದ ಸ್ವಭಾವ ಅಂತೂ ಗೊತ್ತ ಅದ, ಅಕಿಗೆ ತಾ ಮಾಡಿದ್ದ  ಕೆಲಸನ ಸರಿ ಬರಂಗಿಲ್ಲಾ ಇನ್ನ ಮಂದಿ ಮಾಡಿದ್ದಂತೂ ತೀರೇ ಹೋತ. ಇನ್ನ ನಮ್ಮಪ್ಪಂತೂ, ತಾ ಆತೂ ತನ್ನ ಫ್ಯಾಕ್ಟರಿ ಆತು, ಯಾರ ಉಸಾಬರಿಗೂ ಹೋಗಂಗಿಲ್ಲಾ. ನಾಳೆ ಏನ ಸಮಸ್ಯೆ ಬಂದರು ಅತ್ತಿ-ಸೊಸಿ ನಡಕ ಸಿಕ್ಕೊಂಡ ಸಾಯೋಂವಾ ಅಂದರ ನಾ ಒಬ್ಬನ ” ಅಂತ ಶುರು ಮಾಡಿದಾ

“ಅದ ಖರೆಪಾ, ಇದ್ರಾಗ ನಾ ಏನ ಮಾಡ್ಬೇಕು, ನಿಮ್ಮವ್ವನ ಏನ ಕರಕೊಂಡ ಹೋಗಿ ನಾ ಹುಬ್ಬಳ್ಯಾಗ ಇಟ್ಟಗೊಳ್ಯಾ? ನಮ್ಮವ್ವನ  ಇಟಗೋಳೊದ ನನಗ ರಗಡ ಆಗೇದ, ಈಗ ನನ್ನಿಂದ ನಿನಗ ಏನ ಆಗ್ಬೇಕ ಹೇಳ?” ಅಂದೆ.

“ಏ, ನಮ್ಮವ್ವನ ನಿಮ್ಮ ಮನಿಗೆ ಕಳಸಿದರ ನಮ್ಮನಿ ಕೆಲಸ ಏನ ನನ್ನ ಹೆಂಡ್ತಿ ಒಬ್ಬಕಿನ ಮಾಡ್ಬೇಕಾ? ನಮ್ಮವ್ವ  ಕೈ ಕಾಲ ಗಟ್ಟಿರೋತನಕ ನಮ್ಮ ಮನ್ಯಾಗ ಇರಲಿಪಾ. ಈಗ ನಿನ್ನ ಹತ್ರ ಏನ ಕೇಳೋದ ಅಂದ್ರ, ನಮ್ಮ ಬಳಗದಾಗ  ಲಗ್ನಾಗಿ ಇಷ್ಟ ವರ್ಷ ಆದರೂ ಇದ್ದದ್ದರಾಗ ಖುಷಿ-ಖುಷಿಲೇ  ಸಂಸಾರ ಮಾಡಲಿಕತ್ತಂವಾ ಅಂದ್ರ ನೀ ಒಬ್ಬಂವನ. ನಾನೂ ಇಷ್ಟ ವರ್ಷದಿಂದ ನೋಡಲಿಕತ್ತೇನಿ, ನಿಮ್ಮ ಮನ್ಯಾಗ ಅತ್ತಿ ಸೊಸಿ ಅಂತೂ ತಾಯಿ-ಮಗಳೂ ಇದ್ದಂಗ ಇದ್ದಾರ. ಒಬ್ಬರ ಅರಬಿ ಒಗದರ, ಮತ್ತೊಬ್ಬರ  ಹಿಂಡತಾರ. ಒಬ್ಬರ ಭಾಂಡೆ ತಿಕ್ಕಿದರ, ಇನ್ನೊಬ್ಬರ ತೊಳಿತಾರ. ನೀ  ಅಂತೂ ನೋಡಿದವರಿಗೆ ಸಂಕಟಾ ಆಗೋಷ್ಟ  ಛಂದಾಗಿ ಲಗ್ನಾದರೂ ಇನ್ನೂ ಬದಲಾಗದ, ಹೆಂಡತಿನ ಇಟಗೊಂಡ  ಇದ್ದಿ. ಇದ ಹೆಂಗ ಸಾಧ್ಯ? ಇದರ ಹಿಂದಿನ ಗುಟ್ಟು  ಏನು? ನಾನು ಈಗಿಂದ ನಿನ್ನಂಗ ಕರೆಕ್ಟ ಇದ್ದನೆಂದರ ಮುಂದ ತಾಯಿ-ಹೆಂಡತಿ ಇಬ್ಬರನ್ನೂ ಸಂಭಾಳಿಸಿಕೊಂಡ ಹೋಗಬಹುದು” ಅಂದಾ. ನನ್ನ ಪುಣ್ಯಾಕ್ಕ  ‘ಒಬ್ಬರ ಹಡದರ ಇನ್ನೊಬ್ಬರ ಬಾಣಂತನಾ ಮಾಡ್ತಾರ’ ಅನ್ನಲಿಲ್ಲಾ.

ಇರಲಿ, ಅಡ್ಡಿಯಿಲ್ಲಾ ಹುಡಗ ಲಗ್ನಾಗಿ ಎರಡ ತಾಸ ಆಗಿಲ್ಲಾ ಭಾರಿ ಬುದ್ಧಿವಂತರಗತೆ ವಿಚಾರಮಾಡಲಿಕತ್ತಾನ ಅನಸ್ತು. ನಮ್ಮಲ್ಲೆ ಇನ್ನೂ ಎಷ್ಟೋ ಜನಾ ಲಗ್ನಾಗಿ ಹತ್ತ ವರ್ಷ ಆದರನೂ ಇನ್ನೂ ಯಾರು-ಯಾರನ ಹೆಂಗ ಸಂಭಾಳಸಬೇಕು ಅಂತ ಗೊತ್ತಿಲ್ಲದ ಹಂಗ ಸಂಸಾರ ಮೈ ಮ್ಯಾಲೆ ಹಾಕ್ಕೊಂಡ ಮ್ಯಾಲಿಂದ ಕೆಳಕ್ಕ ಬಿಳ್ಕೊತ್ತ ಹೊಂಟಾರ. ಅದರಾಗ ಇಂವಾ ಹಿಂತಾ ಸಂಸಾರಿಕ ವಿಷಯದಾಗ ನನ್ನ ಸಜೆಶನ್ ಕೇಳಿದನಲಾ ಅಂತ ನಂಗ ಸ್ವಲ್ಪ ತಲ್ಯಾಗ ಕೊಂಬ ಮೂಡಿದ್ವು ಅಂದ್ರು ಅಡ್ಡಿಯಿಲ್ಲಾ.  ಪಾಪ, ಹುಡಗಗ ಸರಿಯಾಗಿ, ಪ್ರಾಮಾಣಿಕವಾಗಿ ನಾ ಪಾಲಿಸಿದ್ದ ಸಂಸಾರಿಕ ಸೂತ್ರ ಹೇಳೋಣ ಅಂತ ಶುರು ಮಾಡಿದೆ.

“ನೋಡ ತಮ್ಮಾ ಮೊದಲ ಸಂಸಾರಿಕ ಜೀವನದಾಗ ಏನ ಡಿಸಿಜನ್ ತೊಗೊಬೇಕಾರ, ಅವು ಯಾವುದು ಸಂಸಾರಕ್ಕ ಅವಶ್ಯಕ, ಯಾವುದು ಅನಾವಶ್ಯಕ ಅಂತ ನಿವಿಬ್ಬಿರೂ ಗಂಡಾ – ಹೆಂಡತಿ ಕೂಡಿ ಡಿಸೈಡ ಮಾಡಬೇಕು. ಮುಂದ, ನಿಮ್ಮಿಬ್ಬಿರಾಗ ಯಾರು ಅವಶ್ಯಕ ಇದ್ದದ್ದನ್ನ ಡಿಸೈಡ ಮಾಡಬೇಕು, ಯಾರ ಅನಾವಶ್ಯಕ ಇದ್ದದ್ದನ್ನ ಡಿಸೈಡ ಮಾಡಬೇಕು ಅಂತ ಡಿಸೈಡ ಮಾಡಿ ಅದರ ಪ್ರಕಾರ ಡಿಸಿಜನ್ ತೊಗೋತ ಹೋದರ ಜೀವನದಾಗ ಏನ ಸಮಸ್ಯೆನ ಇರಂಗಿಲ್ಲಾ ” ಅಂದೆ

“ಹಂಗ ಅಂದ್ರ ಏನಪಾ, ನಿ ಬಿಡಿಸಿ ಹೇಳೋ ” ಅಂದಾ

“ಈಗ ನೋಡ, ನಮ್ಮ ಸಂಸಾರದಾಗ ಏನ ಎಸೆನ್ಶಿಯಲ್ ಡಿಸಿಜನ್ ಇದ್ದರೂ ನಾನ ಮಾಡತೇನಿ, ಅದರಾಗ ನನ್ನ ಹೆಂಡತಿ ತಲಿ ಹಾಕಂಗಿಲ್ಲಾ. ಇನ್ನ ಅನಾವಶ್ಯಕ ಡಿಸಿಜನ್ ಎಲ್ಲಾ ಅಕಿನ ಮಾಡ್ತಾಳ. ಅಲ್ಲೇ ನಾ ತಲಿಹಾಕಂಗಿಲ್ಲಾ, ಅಲ್ಲೆ ಅಕಿ ಹೇಳಿದ್ದಕ್ಕೆಲ್ಲಾ ನಾ ಹೂಂನ. ಇನ್ನ ಜೀವನದಾಗಿನ ಅವಶ್ಯಕ ಡಿಸಿಜನ ಏನಪಾ ಅಂತ  ಬಿಡಿಸಿ ಹೇಳ್ಬೇಕಂದರ – ಈಗ ನೋಡ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಗೌಡರು ಮುಂದವರೆಯೋದ ಛಲೋನೊ ಇಲ್ಲೋ? ಧೋನಿ ಕ್ಯಾಪ್ಟನ್ಸಿ ಫೇಲ್ ಆಗೇದ ಅವನ್ನ ಚೆಂಜ ಮಾಡಬೇಕೇನು?  ನಮ್ಮ ದೇಶಕ್ಕ ಲೋಕಪಾಲ್ ಬೇಕೊ ಬ್ಯಾಡೋ? ಹಿಂತಾವೆಲ್ಲಾ ನಾ ಡಿಸೈಡ ಮಾಡಿ ನನ್ನ ಅನಿಸಿಕೆ ಹೇಳ್ತೇನಿ. ಇಲ್ಲೆ ಅಕಿ ನನ್ನ ಒಪಿನಿಯನಗೆ ಕರೆಕ್ಟ ಅಂತಾಳ.

ಇನ್ನ ನನ್ನ ಪ್ರಕಾರ ಸಂಸಾರದಾಗಿನ ಸಣ್ಣ-ಪುಟ್ಟ ವಿಚಾರ ಎಲ್ಲಾ  ಅನಾವಶ್ಯಕ, ಅವನ್ನೆಲ್ಲಾ  ಮೊದ್ಲಿಂದ ನನ್ನ ಹೆಂಡತಿನ ಡಿಸೈಡ ಮಾಡೋದ. ಅಂದ್ರ ‘ನಾವು ಒಟ್ಟ ಎಷ್ಟ ಮಕ್ಕಳನ್ನ ಹಡಿಬೇಕು ಯಾವಾಗ ಹಡಿಬೇಕು? ಮುಂದ ಮಕ್ಕಳನ್ನ ಯಾವ ಸಾಲಿಗೆ ಹಾಕ ಬೇಕು? ಬಳಗದಾಗ ಯಾರನ ಹಚಗೋ ಬೇಕು ಯಾರನ ಬಿಡಬೇಕು? ಇದ ಮನ್ಯಾಗ ಅವ್ವಾ-ಅಪ್ಪನ ಜೊತಿನ ಇರೋದೊ, ಇಲ್ಲಾ ನಾವ ಬ್ಯಾರೆ ಮನಿಮಾಡಿ ಗಂಡಾ – ಹೆಂಡತಿ ಇಷ್ಟ ಇರೋದ ಛಲೋನೋ? ಸುಮ್ಮನ ಹುಬ್ಬಳ್ಳಿ ನೌಕರಿ ಬಿಟ್ಟ, ಅವ್ವಾ-ಅಪ್ಪನ್ನೂ ಇಲ್ಲೆ ಬಿಟ್ಟ ನಾವು ಬೆಂಗಳೂರಿಗೆ ಹೋಗಿ ಸೆಟ್ಲ್ ಆದರ ಹೆಂಗ? ಸಾಯೋತನಕ ಇದ ಭಾಡಗಿ ಮನ್ಯಾಗ ಇರೋಣೋ ಇಲ್ಲಾ ಒಂದ ನಮ್ಮದು ಅಂತ ಸಣ್ಣ ಮನಿ ಕಟ್ಟಸೋಣೋ? ಹಿಂತಾವೆಲ್ಲಾ ನನ್ನ ಹೆಂಡತಿನ ಇಷ್ಟ ದಿವಸ ನಿರ್ಣಯ ಮಾಡ್ಯಾಳ, ಇದರಾಗ ನಾ ಒಟ್ಟ ತಲಿಹಾಕಿಲ್ಲಾ – ಮುಂದನೂ ತಲಿಹಾಕಂಗಿಲ್ಲಾ, ಅಕಿ ಹೇಳಿದ್ದಕ್ಕೇಲ್ಲಾ ನಾ ಕೌಲೆತ್ತಿನಗತೆ ಗೋಣ ಹಾಕಿದಾಂವ. ಹಿಂಗಾಗಿ ನಮ್ಮಲ್ಲೆ ಏನೂ ಸಮಸ್ಯೆ ಬರದ ಸುಖವಾಗಿ ಸಂಸಾರ ನಡಿಸಗೋತ ಹೊಂಟೇನಿ ” ಅಂದೆ, ಅಷ್ಟರಾಗ ಅಂವಾ ನನ್ನ ಅರ್ಧಾಕ್ಕ ತಡದ

“ಅಲ್ಲಾ ಅಣ್ಣಾ  ನೀ ತೊಗೊಳೋ ಡಿಸಿಜನ್, ನಿನ್ನ ವಿಚಾರ ಯಾವು ಸಂಸಾರಕ್ಕ ಸಂಬಂಧ ಪಟ್ಟದ್ವ ಅಲ್ಲೇ ಅಲ್ಲಾ, ನೀ ಜಗತ್ತಿನ ವಿಷಯಗಳ ಬಗ್ಗೆ ತಲಿಕೆಡಿಸಿಕೊಂಡ  ನಿನ್ನ ಅಭಿಪ್ರಾಯ ಕೊಟ್ಟರ ಏನ ಉಪಯೋಗ ? ”  ಅಂದಾ.
“ನಾ ಅದ  ಹೇಳೋದಲೆ, ನಾ ಯಾಕ ಸಂಸಾರದ್ದ ಬಗ್ಗೆ ತಲಿಕೆಡಿಸ್ಗೋಬೇಕ, ಅದಕ್ಕ ಅಕಿ ಇದ್ದಾಳಲಾ. ನಾವು ಸ್ವಲ್ಪ ನಮ್ಮ ಲೇವಲ್ ವಿಚಾರ ಮಾಡಬೇಕಪಾ , ಸಂಸಾರದ ಜಂಜಾಟ ಎಲ್ಲಾ ಅಕಿಗೆ ಬಿಟ್ಟರ ಆತು” ಅಂದೆ
“ಏ ಹಂಗಂದರ,  ಒಂದ ಮಾತನಾಗ ಹೇಳ್ಬೇಕಂದ್ರ ನೀ ಇಷ್ಟ ದಿವಸ ಹೆಂಡತಿ ಹೇಳದಂಗ ಕೇಳ್ಕೋಂಡ ಇದ್ದಿ ಬಿಡ, ಯಾಕಂದರ ಏಲ್ಲಾ  ವೈನಿನ ಡಿಸಿಜನ್ ಮಾಡೋರು ಮನ್ಯಾಗ ಅಂದರ ನಿಂದ ಏನೂ ನಡೆಂಗಿಲ್ಲಾ ಅಂತ ಅಂದಂಗ ಆತು” ಅಂದಾ.
” ಲೇ ಹಂಗ್ಯಾಕ ಅಂತಿ ಮಗನ, ನಮ್ಮ ದೇಶಾ , ನಮ್ಮ ರಾಜ್ಯ ಇವು ನಮ್ಮ ವಯಕ್ತಿಕ ಜೀವನದಕ್ಕಿಂತಾ ಮುಖ್ಯ ಹೌದಲ್ಲೋ ?ಜೀವನದಾಗ ಯಾವುದು ಅವಶ್ಯಕ ಅದರ ಬಗ್ಗೆ ಇಷ್ಟ ತಲಿಕೆಡಿಸಿಕೊಂಡರ ಆತು. ನಮ್ಮ ಸಂಸಾರದಾಗ ಯಾರ ಯಾವದನ್ನ ಡಿಸೈಡ ಮಾಡಿದರ ಏನ ಆತಲೇ , ನಾವು ಇಷ್ಟ ದಿವಸ ಗಂಡಾ-ಹೆಂಡತಿ ಇಬ್ಬರು ಒಟ್ಟ ಖುಷ್ ಇದ್ದೇವಿಲ್ಲೊ?”  ಅಂದೆ
“ಯೇ, ನೀ ಭಾಳ ಶಾಣ್ಯಾ ಇದ್ದಿ ಬಿಡ. ಒಟ್ಟ ನನಗೂ ನಿನ್ನಂಗ  ಹೆಂಡ್ತಿ ಹೇಳದಂಗ ಕೇಳ್ಕೊಂಡ ‘ಜೋರು ಕಾ ಗುಲಾಮ’ ಆಗ ಅನ್ನೋಂವಾ ” ಅಂತ ಎದ್ದಬಿಟ್ಟಾ, ನಾ ಇನ್ನೂ ಏನೇನೋ ಹೇಳಬೇಕು ಅನ್ನೊವಿದ್ದೆ ಆದರ ಅಷ್ಟರಾಗ ಅವರದ ಪುಣಾಕ್ಕ ಹೋಗೊ ಟೈಮ ಆಗಿತ್ತು.

ನಾನೂ  ಹಂಗರ  ಔರಾಂಗಬಾದನಾಗ ಇದ್ದಿದ್ದ ‘ಬಿಬಿ ಕಾ ಮಕಬರಾ’ ಒಂದ ನೋಡಿದ್ರಾತ ಅಂತ ಎದ್ದೆ. ನಾ ಇದನ್ನ ಮೊದ್ಲ ‘ಬಿವಿ ಕಾ ಮಕಬರಾ’ ಅಂತ ತಿಳ್ಕೊಂಡಿದ್ದೆ. ಹಂಗ ನನಗ ಲಗ್ನಾದಾಗಿಂದ ‘ಹೆಂಡಂದರ ಗೋರಿ’ ನೋಡೋ ಚಟಾ, ಏನೋ ವಟ್ಟ ‘ಹೆಂಡಂದರ ಗೋರಿ’ಗೆ  ಹೋಗಿ ಕೂತರ ಒಂದ ಸ್ವಲ್ಪ ಮನಸಿಗೆ ಸಮಾಧಾನ, ಅದ ಯಾರ ಹೆಂಡತಿದರ ಮಕಬರಾ ಇರವಲ್ತಾಕ. ಆದ್ರ ಅಲ್ಲೆ ಹೋದ ಮ್ಯಾಲೆ ಗೊತ್ತಾತು ಇದು ‘ಬಿವಿ ಕಾ’ ಅಲ್ಲಾ ‘ಬಿಬಿ ಕಾ ಮಕಬರಾ’, ಹಡದ ತಾಯಿನ್ನ ಅಕಿ ಸತ್ತ ಮ್ಯಾಲೂ ನೆನಪ ಇಟಗೊಂಡ ಕಟ್ಟಿಸಿದ್ದು ಅಂತ.

ಹಿಂಗ ಅದನ್ನ ನೋಡಿ ಅಲ್ಲೆ ಕಟ್ಟಿ ಮ್ಯಾಲೆ ಕೂತಾಗ ನನಗ ‘ಅಲ್ಲಾ, ಅಲ್ಲೆ ಆಗ್ರಾದಾಗ  ಶಹಜಹಾನ ತನ್ನ ಹೆಂಡತಿ ನೆನಪನ್ಯಾಗ ಅಕಿ ಸತ್ತ ಹೋದಮ್ಯಾಲ ತಾಜ ಮಹಲ್ ಕಟ್ಟಸಿದಾ ಅಂದರ, ಅವನ  ಹೆಂಡತಿ ಅವನ್ನ  ಎಷ್ಟ ಪ್ರೀತಿಸ್ತಿದ್ಲು, ಅಕಿ ಎಷ್ಟ ಛಲೋ ಇದ್ದಿರಬಹುದು. ಹಂತಾ ಹೆಂಡಂದರು ಇದ್ದರಾ  ಒಂದ ಕಾಲದಾಗ, ಇಲ್ಲಾ ಅವನೂ ನಮ್ಮಂಗ ಹೆಂಡ್ತಿ ಕೈಯಾಗ ಸಿಕ್ಕ ಒದ್ಯಾಡಿ ಅಕಿ ಸತ್ತ ಮ್ಯಾಲೆ ‘ಯಪ್ಪಾ ಅಂತೂ ಸತ್ಲಪಾ’ ಅಂತ ಖುಷಿಲೆ ತಾಜಮಹಲ ಕಟ್ಟಿಸಿದ್ನಾ  ಅಂತ ವಿಚಾರ ಬಂತು.

ಇಲ್ಲೆ ನೋಡಿದ್ರ ಈ ‘ಬಿಬಿ ಕಾ ಮಕಬರಾ’ ನ ಔರಂಗಜೇಬನ ಮಗಾ ತಾಜ ಮಹಲಗತೆನ ತಮ್ಮವ್ವನ ನೆನಪನಾಗ ಕಟ್ಟ್ಯಾನ.  ಅಲ್ಲಾ,  ಒಬ್ಬ ಗಂಡಸ ಮನಷ್ಯಾ, ಅದು ಲಗ್ನ ಆದೊಂವಾ, ಅವನ ಹೆಂಡತಿ ಇನ್ನೂ ಜೀವಂತ ಇದ್ದಾಗ, ಅಕಿ ಮುಂದನ ಅವರವ್ವನ ನೆನಪನಾಗ ಇಷ್ಟ ದೊಡ್ಡ ಇಮಾರತ ಕಟ್ಟತಾನ ಅಂದ್ರ ಅದ ಹೆಂಗ ಸಾಧ್ಯ ಅಂತೇನಿ. ಅವನ ಹೆಂಡತಿ ಅವಂಗ ಹೆಂಗ ಕಟ್ಟಲಿಕ್ಕೆ ಬಿಟ್ಲು ? ಅದ ಅರ್ಥಾ ಆಗಲಿಲ್ಲಾ. ಇವತ್ತ ನಮ್ಮ ಪೈಕಿ ಕೆಲವಬ್ಬರ ಮನ್ಯಾಗ ವರ್ಷಕ್ಕೊಮ್ಮೆ ಗಂಡಗ ಅವರವ್ವ ಸತ್ತ ಮ್ಯಾಲೆ ಅಕಿ ಶ್ರಾದ್ಧಾ ಮಾಡಲಿಕ್ಕೂ ಹೆಂಡತಿ ಕೊಡಂಗಿಲ್ಲಾ,

“ನೀ ಎಲ್ಲರ ಮಠದಾಗ ಮಾಡ್ಕೋಂಡ ಬಾ ನಿಮ್ಮವ್ವನ ಶ್ರಾದ್ಧಾ, ಮನ್ಯಾಗ ಮಾತ್ರ ಮಾಡಂಗಿಲ್ಲಾ” ಅಂತ ಕಡ್ಡಿ ಮುರದಂಗ ಹೇಳಿ ಬಿಡೊ ಹೆಂಡಂದರ ಇದ್ದಾರ. ಎಷ್ಟ ಫರಕ ಅದ ನೋಡ್ರಿ ಆ ಕಾಲದಾಗಿನ ಹೆಂಡಂದರಿಗೂ ಈ ನಮ್ಮ ಸಮಕಾಲಿನ ಹೆಂಡಂದರಿಗೂ. ಹೆಂಡತಿ ಅಂದ್ರ ಹೆಂಗ ಇರಬೇಕರಿ, ಅವನೌನ ಸತ್ತರ  ಅಕಿ ನೆನಪನಾಗ  ಇನ್ನೋಂದ’ ತಾಜ ಮಹಲ’ ಕಟ್ಟೋ ಹಂಗ ಇರಬೇಕರಿಪಾ.

ಈಗ, ಇವತ್ತ ನಮ್ಮ ನಿಖಿಲಗ ಬಂದಿರೋ ಸಮಸ್ಯೆ ನಮಗೂ ಹಿಂದ ಬಂದ ಹೊಗ್ಯಾವ, ಇಂವಾ ಲಗ್ನಾಗಿ ಎರಡ ತಾಸ ಆದಮ್ಯಾಲೆ ಇದರ ಬಗ್ಗೆ ವಿಚಾರ ಮಾಡಿದ್ದೂ ಭಾಳ ಲೆಟ ಆತ ಅಂತ ನನಗ ಅನಸ್ತದ. ಈಗಾಗಲೇ ಇಂವಾ ಲಗ್ನದಕಿಂತಾ ಮುಂಚೆ ಒಂದ ಹತ್ತ ಸರತೆ ಪುಣಾ- ಔರಾಂಗಾಬಾದ ಅಡ್ಡಾಡಿ ತನ್ನ ಆಬ್ರು- ಇಜ್ಜತ್ ಎಲ್ಲಾ ಕಳಕೊಂಡ ಬಿಟ್ಟಿರತಾನ. ಇನ್ನ ಮ್ಯಾಲೆ ಏನ ಗುದ್ದಾಡಿದ್ರು ಉಪಯೋಗ ಇಲ್ಲಾ.

ನನ್ನ ಪ್ರಕಾರ ನಮ್ಮ ಸಂಸಾರದ್ದ ಬಗ್ಗೆ ನಾವ ಪ್ರಿಕಾಶನ್ ತೊಗೊಬೇಕಾಗಿದ್ದ ಮದುವಿ ಆದ ಮ್ಯಾಲೆ ಅಲ್ಲಾ, ನಮಗ ಕನ್ಯಾಗೋತ್ತಾಗಿ, ಇದ ಹುಡಗಿ ಅಂತ ಫೈನಲ್ ಆಗತದಲಾ ಆವಾಗ. ಒಮ್ಮೆ  ನಾವ ಏನರ ಈ ಪಿರಿಯಡ ಒಳಗ ‘ಕಂಡೇನೋ ಇಲ್ಲೊ’ ಅನ್ನರಂಗ ಮಾಡಿ, ಹುಡುಗಿನ ತಲಿಮ್ಯಾಲೆ ಕೂಡಿಸ್ಕೊಂಡವಿ, ಮುಂದ ಸತ್ತವಿ ಅಂದಂಗ.  ‘ಪ್ರಿವೆನ್ಶನ್ ಇಸ್ ಬೆಟ್ಟರ ದ್ಯಾನ ಅಬಾರ್ಶನ್’ ಅಂತಾರಲಾ ಅದು ಇದ ಸ್ಟೇಜನಾಗ ಲಾಗೂ ಆಗೋದ ಮತ್ತ. ಯಾವಾಗ ನಾವು ಫೋನು, ಇ-ಮೆಲ್, ಹಂಗ ಹಗರಕ ಕದ್ದು ಮುಚ್ಚಿ ಭೆಟ್ಟಿ ಆಗೋದು ಶುರು ಮಾಡತೇವೂ, ಅವಾಗ ನೋಡ್ರಿ ನಾವ ಎಡವೊದು. ಹಂಗ ಹುಡುಗಿನು ನಮ್ಮ ಜೋತಿ ಎಡವಿರತಾಳ ಆ ಮಾತಬ್ಯಾರೆ, ಆದ್ರ ನಾವು ಎಡವಿದರ, ಮುಂದ ಲಗ್ನ ಆದ ಮ್ಯಾಲೆ ಕಡೆತನಕ ಕುಂಟೋರೂ ನಾವ. ನಾವ ಏನ್ ಈ ಪಿರಿಯಡ್ ಒಳಗ ಅಕಿ ಹೇಳಿದ್ದಕ್ಕೆಲ್ಲಾ ‘ಹೌದು-ಹೌದು’ ಅಂತ ಅಕಿ ಕಂಟ್ರೋಲ್ನಾಗ ಬಂದ ಬಿಟ್ಟವಿ ಅಂದರ ಮುಗದ ಹೋತ. ಮುಂದ ಮದುವಿ ಆಗಿ, ಮಕ್ಕಳಾಗಿ, ಮೊಮ್ಮಕ್ಕಳ ಹುಟ್ಟಿ ಮುದಕಾದರು ನಾವ ‘ಅಮ್ಮಾವ್ರ ಗಂಡನ’. ಕಡಿಕೆ ವಯಸ್ಸಾದ ಮ್ಯಾಲೆ ಈಗ ಏನ ಮಾಡೋದು, ನಮ್ಮ ‘ ಪಾಲಿಗೆ ಬಂದಿದ್ದು ಪಂಚಾಮೃತ’  ಅದು ‘ಪಂಚಗವ್ಯ’ನಾ ಯಾಕ ಆಗವಲ್ತಾಕ, ದಿವಸಾ ಅನುಭವಿಸಿಗೋತ ಸಂಸಾರ ದುಗಿಸಿಕೋತ ಹೋಗಬೇಕು.

ಇಷ್ಟ ದಿವಸೆಲ್ಲಾ ನಾವ ಅನುಭವಿಸಿ, ಈಗ ಹೊಸದಾಗಿ ಲಗ್ನ ಆದವರಿಗೆ ಹಂಗ ಮಾಡರಿ, ಹಿಂಗ ಮಾಡರಿ, ಅಕಿ ಮಾತ ಕೇಳಬ್ಯಾಡರಿ, ಅದು – ಇದು ಅಂತ ಹೇಳಿದರ, ಇಲ್ಲಾ ಅದರ ಮ್ಯಾಲೆ ಲೇಖನಾ ಬರದರ ಏನ ಪ್ರಯೋಗ ? ಅನುಭವಸೋದು, ಅನುಭವಿಸಿದವರು ಏಲ್ಲಾ ನಾವ ಅಲಾ.. ಮಂದಿ ಏನ, ನಾವ ಹೆಂಗ ಇದ್ದರೂ  ಕಮೆಂಟ್ ಮಾಡತಾರ.

ಅನ್ನಂಗ ಒಂದ ಮುಖ್ಯ ಸೂತ್ರಾ ಹೇಳೋದ ಮರತೆ ‘ಜೀವನದಾಗ ಖುಷಿಲೆ ಬದಕೋದ ಎಸೆನ್ಶಿಯಲ್, ಅದಕ್ಕ ಹೆಂಡ್ತಿ ನಾನ್- ಎಸೆನ್ಶಿಯಲ್. ಜೀವನಕ್ಕ ಹೆಂಡ್ತಿ ಬೇಕಾಗಬಹುದು, ಆದರ ಹೆಂಡ್ತಿನ ಜೀವನ ಅಲ್ಲಾ ‘ಇದನ್ನ ಬರದ ಮನ್ಯಾಗ ಗೊಡಿ ಮ್ಯಾಲೆ ತೂಗ ಬಿಡರಿ, ಪಾಪ ಯಾರರ ಓದಿದವರರ ಸುಧಾರಿಸಿದರು ಸುಧಾರಸಬಹುದು.