ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು. ಪಕ್ಕದ ಮನೆಯಿಂದ ರಾಕೆಟ್ಟೊಂದು ನಮ್ಮ ಅಂಗಳದ ಕಡೆ ನುಗ್ಗಿ ಮುಖವಡಿಯಾಗಿ ಬಿದ್ದುಬಿಟ್ಟಿತು. ನಮ್ಮ ತೋಟ, ಹಿತ್ತಿಲುಗಳೊಳಗೆ ಪಟಾಕಿಗಳು ಬಿದ್ದು ಸಿಡಿಯತೊಡಗಿದವು.
ಸುಭಾಷ್ ಪಟ್ಟಾಜೆ ಬರೆದ ಈ ಕಥೆ “ಗೋಡೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ಹೀಗೆಲ್ಲ ಮಾಡೋದಾ ಸ್ವಾಮೀ? ಅವಳನ್ನು ಕೊಂದೇ ಹಾಕ್ತಿದ್ದೆ. ನಿಮ್ಮ ಮನೆ ಮುಂದೆ ಬೇಡ ಅಂತ ಬಿಟ್ಟೆ. ನನ್ನ ರ‍್ಯಾದೆಯನ್ನು ಮೂರು ಕಾಸಿಗೆ ಮಾರಿದ ಈ ಹಡಬೆಗೆ ಏನು ಹೇಳೋದು? ನೀವೇ ಬಂದು ಪಂಚಾಯ್ತಿ ಮಾಡಿಬಿಟ್ರೆ ಸರಿ”

“ಏನು ಲೋಕೇಶ ಇದು? ಇಂಥದ್ದನ್ನೆಲ್ಲ ನಿಮ್ಮನೆಯಲ್ಲೇ ಬಗೆಹರಿಸಿ ಬಿಡ್ಬೇಕು. ಅವಳು ಹಾಗೆ ಮಾಡಿದ್ದು ನಿಜ ಅಂತಾದ್ರೆ ‘ಇನ್ನು ಮುಂದೆ ಈ ಕಡೆ ಕಾಲು ಹಾಕ್ಬೇಡ’ ಅಂತ ನೀನೇ ಹೇಳು ನಿನ್ನ ತಮ್ಮನಿಗೆ. ನಿಮ್ಮ ನಡುವೆ ನನ್ನನ್ಯಾಕೆ ಎಳ್ದು ತರ‍್ತೀ?”

ಅಪ್ಪನ ಮಾತು ಕೇಳುತ್ತಿದ್ದಂತೆ ಲೋಕೇಶನ ಆವೇಶ ತಗ್ಗಿದಂತೆ, ಮುಖದಲ್ಲಿ ಬಿಗಿದ ಗಂಟು ಸಡಿಲವಾದಂತೆ ಕಂಡಿತು. “ಆಯ್ತು ನಾನೀಗ ಹುಲ್ಲು ಮಾಡ್ಕೊಂಡು ಬರ‍್ತೇನೆ” ಎಂದು ಹಗ್ಗವನ್ನು ಒಟ್ಟು ಮಾಡಿಕೊಂಡು ತೋಟಕ್ಕೆ ಹೋಗುತ್ತಿದ್ದಂತೆ “ಬೆಳಿಗ್ಗೆಯೇ ಸುರು ಇವನ ಕಿರಿಕಿರಿ” ಎನ್ನುತ್ತಾ ಹೆಗಲ ಮೇಲಿದ್ದ ಬೈರಾಸನ್ನು ಕೊಡವಿ ಒಳಗೆ ಬಂದ ಅಪ್ಪನ ಮುಖವನ್ನೇ ಮಿಕಿಮಿಕಿ ನೋಡಿದೆ. ಶಾಲೆಗೆ ರಜೆ ಇದ್ದುದರಿಂದ ಬೆಳಗ್ಗೆ ಬೇಗನೆ ಏಳದೆ ಒಳ್ಳೆಯ ಪ್ರಸಂಗವನ್ನೇ ಕಳೆದುಕೊಂಡೆನಲ್ಲಾ ಎಂದು ಪರಿತಪಿಸುತ್ತಾ ಬಚ್ಚಲು ಮನೆಯೊಳಗೆ ಹೋಗಿ ಹಲ್ಲುಜ್ಜುತ್ತಿದ್ದಂತೆ ಹೊರಗಿನಿಂದ ಮಾತು ಕೇಳಿ ಬಂದು ಕಿಟಿಕಿಯೆಡೆಯಿಂದ ಇಣುಕಿದೆ.

“ಇದೇನೇ ಪ್ರಿಯಾ ಹೀಗೊಂದು ಹೊಡ್ದಿದ್ದಾನಲ್ಲ”
ಅಮ್ಮನ ಮಾತು ಕೇಳುತ್ತಿದ್ದಂತೆ ಪ್ರಿಯಾಳ ಮುಸುಮುಸು ಅಳು ತಾರಕಕ್ಕೇರಿತು. ಅವಳ ಬೆನ್ನು, ಮುಖ, ಭುಜಗಳ ಮೇಲೆ ತಲೆಗೂದಲೆಲ್ಲ ಕೆದರಿ ಬಿದ್ದಿತ್ತು. ತುಟಿ, ಮೂಗಿನಿಂದ ರಕ್ತ ಜಿನುಗುತ್ತಿತ್ತು. ಸೆರಗು ಅಸ್ತವ್ಯಸ್ತಗೊಂಡು, ರವಿಕೆಯ ಗುಂಡಿಗಳು ಕಿತ್ತು ಹೋಗಿದ್ದರಿಂದ ತುಂಬಿದ ಎದೆಯ ಅರ್ಧಭಾಗ ಎದ್ದು ಕಾಣುತ್ತಿತ್ತು.
“ಕುಡ್ದು ಬಂದು ಹೋಡೀತಾರಮ್ಮಾ. ಯಾವಾಗ ನೋಡಿದ್ರೂ ಸಂಶಯ. ನಾನು ಯಾರನ್ನೂ ನೋಡ್ಬಾರ್ದು. ಮಾತಾಡ್ಬಾರ್ದು. ಹೀಗೇ ಮುಂದುವರಿದ್ರೆ ಕುತ್ತಿಗೆಗೆ ಹಗ್ಗವೇ ಗತಿ”

“ನೀನು ಮಾಡೋದೂ ಹಾಗೆ. ಗಂಡ ಅನಿಸ್ಕೊಂಡವನು ಬದುಕಿರೋವಾಗ…”
“ನಾನೇನು ಮಾಡಿದೆ ಹೇಳಿ?”

ನಾನು ಕಾಫಿ ಕುಡಿದು ಮುಗಿಸುವ ಹೊತ್ತಿಗೆ ಎಲ್ಲವೂ ತಣ್ಣಗಾಗಿತ್ತು. ಎದ್ದು ಹೊರ ಬಂದು ಕೈತೊಳೆಯುತ್ತಿದ್ದಂತೆ ತೋಟದ ಬದಿಯಿಂದ ಬಂದು “ಪಟೇಲ್ರೇ” ಎಂದು ಕರೆದ ಲೋಕೇಶನ ದನಿಯು ಮೆತ್ತಗಾಗಿತ್ತು. ಅಮ್ಮ ಅಡುಗೆಕೋಣೆಯಿಂದ ಹಜಾರಕ್ಕೆ ಬಂದು ಬಾಳೆಲೆಯ ತುಂಬಾ ಉಪ್ಪಿಟ್ಟು ಅವಲಕ್ಕಿ ಮತ್ತು ಚಹಾವನ್ನು ಜಗಲಿ ಮೇಲೆ ಇಡುತ್ತಾ “ಇದೇನು ನೀವು ಗಂಡಹೆಂಡತಿಯರದ್ದು ದಿನಾ ಗಲಾಟೆ?” ಎಂದಳು. ಪ್ರಿಯಾ ಹಣೆಗೆ ಕೈಯೊತ್ತಿ ಹಿಡಿದು ಅಲ್ಲೇ ಕುಳಿತಿದ್ದಳು.

“ನನ್ನ ಗ್ರಾಚಾರ ಅಮ್ಮಾ. ಸಾಯ್ಲಿ ಬಿಡಿ. ಒಂದಲ್ಲಾ ಒಂದಿನ ಇವರಿಬ್ರೂ ನರಕ ಕಾಣೋ ಹಾಗೆ ಮಾಡ್ತೇನೆ ನೋಡಿ.”

“ಇವಳಿಗೆ ಮಾನಮರ್ಯಾದೆ ಇಲ್ಲ ಅಂತಲೇ ಇಟ್ಟುಕೊಳ್ಳುವ. ಹಾಗಿದ್ರೆ ನೀನೇಕೆ ಇವಳನ್ನು ಬಿಟ್ಟು ಬಿಡೋದಿಲ್ಲ? ಮನೆ ಮುಂದೆ ದಿನಾ ಹೀಗೆ ಆಗ್ತಾ ಇದ್ರೆ ನಿಮ್ಮ ಮರ್ಯಾದೆ ಏನಾಗಬಹುದು? ಇದ್ರಿಂದಾಗಿ ಊರಿಗೇ ಕೆಟ್ಟ ಹೆಸರು ಬರೋದಲ್ವೋ?”

“ಮರ್ಯಾದೆ ಬಗ್ಗೆ ಮಾತಾಡ್ತೀರಾ ನೀವು? ಇವಳ ಕತೆ ಕೇಳಿದ್ರೆ ಯಾರ ಮರ್ಯಾದೆ ಎಷ್ಟೂಂತ ಗೊತ್ತಾಗ್ತದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಬಂದು ಮನೆಯ ಮಾಡಿನಡಿಯಲ್ಲಿ ನಿಂತಾಗ ಒಳಗಿನಿಂದ ಮಾತು ಕೇಳಿಸ್ತಿತ್ತು. ನಾನು ಮೆಲ್ಲಗೆ ಪೊದೆಯ ಹಿಂದೆ ಅಡಗಿಕೊಂಡೆ. ಸ್ವಲ್ಪ ಹೊತ್ತಿನ ಬಳಿಕ ಕಳ್ಳನಂತೆ ಹೊರಗೆ ಬರ‍್ತಿದ್ದಾನೆ ದಿನೇಶ! ಮತ್ತೇನಾಯ್ತು ಅಂತ ನಿಮಗೊತ್ತುಂಟು. ನಾಲ್ಕು ಬಿಗಿದಾಗ ನಿಮ್ಮಲ್ಲಿಗೆ ಓಡಿ ಬಂದ್ಲು. ಪ್ರತಿ ಸಲದಂತೆ ಅವಳನ್ನು ಕಾಪಾಡೋದಕ್ಕೆ ನೀವು.”

“ಅದುವರೆಗೂ ದಿನೇಶ ತನ್ನ ಕೋಣೆಯಲ್ಲಿ ಮಲಗಿದ್ದು ಮೂತ್ರ ಮಾಡೋದಕ್ಕೋ, ಮತ್ತೆಂಥದಕ್ಕಾದರೋ ಎದ್ದು ಹೊರಗೆ ಬಂದದ್ದಾಗಿರಬಹುದು” ಅಪ್ಪ ಬಾಯಿ ಹಾಕಿದರು.

“ನೀವು ಹಾಗೇ ಹೇಳ್ತೀರಿ. ಅವಳ ಕಣ್ಣೀರು ಕಂಡು ಕರಗ್ತೀರಿ. ಎಂಥವರನ್ನೂ ಒಳಗೆ ಹಾಕೋ ಸಾಮರ್ಥ್ಯ ಉಂಟು ಅವಳಿಗೆ. ನಾನು ಅವಳನ್ನೆಲ್ಲಾದ್ರೂ ಬೈದ್ರೆ, ಹೊಡೆದ್ರೆ ದಿನೇಶ ಬಂದು ತಡೀತಾನೆ. ಕಳೆದ ವಾರ ಅವಳು ಬೀಡಿಕಟ್ಟ ತಗೊಂಡು ಪೇಟೆಗೆ ಹೋಗ್ತಿದ್ದಾಗ ಯಾರೋ ಚುಡಾಯಿಸಿದ್ರಂತೆ. ಮರುದಿವಸವೇ ದಿನೇಶ ಅವರಿಗೆ ಹೊಡೆದ್ನಂತೆ. ಗಂಡನಾದ ನಾನಿರುವಾಗ…”

“ಬಾಯ್ಮುಚ್ಚು ನಾಯಿ” ಮೈಮೇಲೆ ಬಂದವಳಂತೆ ಅಬ್ಬರಿಸಿದ ಪ್ರಿಯಾಳ ಕಣ್ಣುಗಳಲ್ಲಿ ಬೆಂಕಿ.

“ಮತ್ತೇನು ಮಾಡ್ಬೇಕಿತ್ತು ಅವ? ಕೈಕಟ್ಟಿ ಕೂತ್ಕೊಳ್ಬೇಕಿತ್ತಾ? ನಿನ್ನಿಂದ ಏನಾದ್ರೂ ಆದದ್ದುಂಟಾ? ಗಂಡನಂತೆ ಗಂಡ. ಥ್ಫೂ!”
ಮಾತು ಮುಗಿಸುವ ಮುನ್ನ ಲೋಕೇಶ ಕೈ ಎತ್ತಿ ಅವಳ ಕೆನ್ನೆಗೆ ಫಟಾರನೆ ಬಾರಿಸಿದ. ಅವನ ಕೈ ಹಿಂತಿರುಗುವ ಮೊದಲೇ ಪ್ರಿಯಾ ಅದಕ್ಕಿಂತ ಹೆಚ್ಚು ರಭಸದಿಂದ ಅವನ ಎಡಗೆನ್ನೆಗೆ ಬಾರಿಸಿದ್ದಳು. ಕೆರಳಿ ಕೆಂಡವಾದ ಲೋಕೇಶ ಮುಂದೇನು ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಅಲ್ಲೇ ಇದ್ದ ಹಾರೆಯನ್ನು ಹಿಡಿದೆಳೆದು “ಕೊಚ್ಚಿಹಾಕ್ತೇನೆ ನಿನ್ನನ್ನು” ಎಂದು ಬೊಬ್ಬಿರಿಯುವ ಹೊತ್ತಿಗೆ ಅವಳು ತನ್ನ ಮನೆಯ ಕಡೆ ಓಡಿದ್ದಳು. ಅವನು ಕೂಡ ಹಿಂದೆಮುಂದೆ ನೋಡದೆ ದಣಪೆಯನ್ನು ಹಾರಿ ದೌಡಾಯಿಸಿದ ಬೆನ್ನಿಗೇ ಮನೆಯೊಳಗಿನಿಂದ “ಅಯ್ಯೋ! ಸಾಕೋ ಸಾಕು. ಬೇಡವೇ ಬೇಡ” ಎಂಬ ಚೀರಾಟದ ದನಿ, ಕರುಳು ಕೊಯ್ಯುವ ಆರ್ತನಾದ ಕೇಳಿ ಬರತೊಡಗಿತು. ಸ್ವಲ್ಪ ಹೊತ್ತಿನ ಚೀರಾಟದ ಬಳಿಕ ಸುತ್ತಲೂ ಮೌನ ಪಸರಿಸುತ್ತಿದ್ದಂತೆ ಅಪ್ಪನ ಮುಖ ವಿಕಾರವಾಗತೊಡಗಿತು. ಅಲ್ಲೇ ಶತಪಥ ತುಳಿಯುತ್ತಾ “ಇದೊಂದು ಶನಿ ಇಲ್ಲದರ‍್ತಿದ್ರೆ…ಇಲ್ಲದರ‍್ತಿದ್ರೆ” ಎಂದು ಗೊಣಗತೊಡಗಿದರು. ತಲೆಯು ಹತೊಟಿಯನ್ನು ಮೀರಿ ನಡುಗತೊಡಗಿತು.

“ಪ್ರಿಯಾ ಆ ಮನೆಗೆ ಕಾಲಿಟ್ಟಂದೇ ಸುರುವಾಗಿದೆ ಅವಳ ಕಷ್ಟಕಾಲ. ಯಾವಾಗ ನೋಡಿದ್ರೂ ಮೂದಲಿಕೆ; ಬೈಗಳು. ಎಲುಬು ಮುರಿವಂಥ ಏಟು. ಎಷ್ಟು ಚಂದದ ಹೆಣ್ಣು. ಅಂಥವಳನ್ನು ಹೀಗೆ ನಡೆಸಿಕೊಳ್ಳಲು ಹೇಗೆ ಮನಸ್ಸು ಬರ‍್ತದೆ ಅವನಿಗೆ?” ಎಂದು ಅಪ್ಪನು ಹೇಳುತ್ತಿದ್ದಂತೆ,
“ಲೋಕೇಶನಿಗೆ ಯಾಕೆ ಬೈತೀರಿ ನೀವು? ಅವನ ತಮ್ಮ ದಿನೇಶನಿಗೆ ಉಗೀರಿ. ಪ್ರಿಯಾಳಿಗೆ ಮಂಕುಬೂದಿ ಎರಚಿ ತನ್ನ ಕಡೆ ಎಳ್ಕೊಂಡದ್ದು ಅವನೇ ಅಲ್ವಾ? ನರಪೇತಲ ಲೋಕೇಶನಿಗಿಂತ ಎಷ್ಟೋ ಚೆನ್ನಾಗಿಲ್ವಾ ಆತ? ಪ್ರಿಯಾ ಕೂಡ ಚಿಲ್ಲರೆಯವಳೇನಲ್ಲ. ಮೈಮಾಟಕ್ಕೆ ತಕ್ಕ ವೈಯಾರವೂ ಉಂಟು. ಅವಳೇ ಅವನನ್ನು ಬುಟ್ಟಿಗೆ ಹಾಕಿಕೊಂಡಿರಲಿಕ್ಕೂ ಸಾಕು.” ಎಂದಳು ಅಮ್ಮ.

ಅವರ ಮಾತು ಕೇಳುತ್ತಿದ್ದಂತೆ ದಿನೇಶನ ರೂಪ ಮನದಲ್ಲಿ ಮೂಡಿತು. ಉರುಟಾಗಿ ಉಬ್ಬಿದ ಮುಖ. ದುಡಿಮೆಯ ಫಲವಾಗಿ ತುಂಬಿದ ಮೈಮೇಲೆ ದೃಢಗೊಂಡು ಕುಣಿಯುವ ಮಾಂಸಖಂಡಗಳು. ಲೋಕೇಶನ ಮುಂದೆ ಯಾವತ್ತೂ ಅಪರಿಚಿತಳಂತಿರುತ್ತಿದ್ದ ಪ್ರಿಯಾ ಸಂತಸದಿಂದ ಇರುವುದು ದಿನೇಶ ಜೊತೆಯಲ್ಲಿರುವಾಗಲೇ. ಅವಳ ನಗೆ, ಮಾತುಗಳು ನಮ್ಮ ಮನೆಯವರೆಗೂ ಕೇಳಿಬರುತ್ತವೆ ಎಂದರೆ ಅಲ್ಲಿ ದಿನೇಶನಿದ್ದಾನೆ ಎಂದೇ ಅರ್ಥ. ಹಾಲಿಗೆಂದು ಅವಳು ನಮ್ಮ ಮನೆಗೆ ಬಂದಾಗ ಅಮ್ಮ ಕೇಳುವುದಿತ್ತು. “ಏನಿದು ಸಂಗತಿ? ಮುಖ ತುಂಬಾ ನಗು ತುಂಬಿಕೊಂಡಿದ್ದೀಯಲ್ಲ! ಮುಖದಲ್ಲೇನು ಅಷ್ಟೊಂದು ಗೆಲುವು? ಕಣ್ಣಲ್ಲಿ ಹೊಳಪು? ಏನು ಸಮಾಚಾರ?” ಆಗ ಅವಳ ಮೋರೆ ಕೆಂಪೇರಿ ತುಟಿಯಲ್ಲಿ ನಗು ಅರಳುತ್ತಿತ್ತು.

ಆಹಾ! ಇದೊಳ್ಳೆ ಕತೆ ಅಮ್ಮನದ್ದು. ದಿನೇಶ ಬಂದರೆ ಅವಳೇಕೆ ಉತ್ಸಾಹ, ಉಲ್ಲಾಸ, ಸಂಭ್ರಮಗಳಿಂದ ಇರಬಾರದು? ನನಗೂ ಅವನೆಂದರೆ ಬಹಳ ಇಷ್ಟ. ಲೋಕೇಶ ಮನೆಯಲ್ಲಿದ್ದರೆ ಅಲ್ಲಿಗೆ ಕಾಲಿಡಲು ಹಿಂಜರಿಯುತ್ತಿದ್ದ ನಾನು ದಿನೇಶನಿದ್ದರೆ ಯಾವ ಅಂಜಿಕೆಯೂ ಇಲ್ಲದೆ ಒಳಗೆ ಹೋಗುತ್ತಿದ್ದೆ. ನನ್ನನ್ನು ನೋಡಿದಾಗಲೆಲ್ಲ ಆತನು ಮುಖವನ್ನು ಅರಳಿಸಿ ನಕ್ಕು “ಪುಟ್ಟ ಬಂಗಾರೂ ಬಂದೆಯಾ?” ಎನ್ನುತ್ತಾ ತಲೆಯನ್ನು ನೇವರಿಸುತ್ತಿದ್ದ. ಕಲ್ಲುಸಕ್ಕರೆಯ ತುಂಡುಗಳನ್ನು ನನ್ನ ಪುಟ್ಟ ಬೊಗಸೆಗೆ ಹಾಕುತ್ತಿದ್ದ. “ಇಷ್ಟೆಲ್ಲಾ ಬೇಡಣ್ಣಾ” ಎಂದಾಗ “ಅಯ್ಯೋ! ನನ್ನನ್ಯಾಕೆ ಅಣ್ಣಾ ಅಂತೀಯೋ. ಹೆಸರು ಹಿಡಿದು ಕರಿ, ನೀವು ದೊಡ್ಡ ಜಾತಿಯೋರು. ಆದ್ರಿಂದ ಒಂದು ಲೆಕ್ಕದಲ್ಲಿ ನಾನೇ ನಿನ್ನನ್ನು ಅಣ್ಣ ಅನ್ಬೇಕು” ಎನ್ನುತ್ತಾ ನನ್ನ ಕೈಗೊಂದು ಮಾವಿನ ಹಣ್ಣು ಕೊಟ್ಟು ಕೆನ್ನೆ ಸವರಿದಾಗ ನನಗೆಷ್ಟು ಖುಷಿಯಾಗಿತ್ತು! “ಒಳ್ಳೆ ಹುಡುಗ. ಹೋಗು. ಶಾಲೆಗೆ ಹೊತ್ತಾಯ್ತು” ಎಂದು ಗೇಟಿನವರೆಗೆ ಬರುತ್ತಿದ್ದ. ವರ್ಷಕ್ಕೊಮ್ಮೆ ಶಬರಿಮಲೆಗೆ ಹೋದಾಗ ಅಲ್ಲಿನ ಪ್ರಸಾದವನ್ನು ಮೊದಲು ನಮ್ಮ ಮನೆಗೆ ತಂದುಕೊಡುತ್ತಿದ್ದ. ಒಂದುವೇಳೆ ದಿನೇಶ ಇವತ್ತು ಗಾರೆ ಕೆಲಸಕ್ಕೆ ಹೋಗದಿರುತ್ತಿದ್ದರೆ ಇದೆಲ್ಲ ನಡೆಯುತ್ತಿತ್ತಾ? ಪ್ರಿಯಾಳಿಗೆ ಏಟು ಬೀಳದಂತೆ ಅವನು ಲೋಕೇಶನನ್ನು ತಡೆದೇ ಬಿಡುತ್ತಿದ್ದ.

“ತಮ್ಮನನ್ನು ಹೇಗೂ ಹೊರಗಟ್ಟೋ ಹಾಗಿಲ್ಲ. ಕೇವಲ ಒಬ್ಬನ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆಯಾಗದು. ಲೋಕೇಶನೂ ಕಡಿಮೆಯೇನಲ್ಲ. ಲೋಡ್ ಇಳಿಸೋದಕ್ಕೆ ಲಾರಿ ತಗೊಂಡು ಹೋದೋನು ಅಲ್ಲಿಂದ ಬರುವಾಗ ಅಷ್ಟೂ ದಿನಗಳಾಗೋದು ಯಾಕೆ? ಯಾವತ್ತೂ ಮನೆಗೆ ಬರೋ ಹಾಗರ‍್ತಿದ್ರೆ ಇದೆಲ್ಲ ಇರ‍್ತಿತ್ತಾ?” ಅಪ್ಪನ ಮಾತು ನನ್ನನ್ನು ವಾಸ್ತವಲೋಕಕ್ಕೆ ತಂದಿತು.

“ಪಾಪ! ಅಪ್ಪುವನ್ನು ನೆನೆಯುವಾಗಲಂತೂ…”
“ಹೂಂ” ಅಪ್ಪ ಗೊಣಗಿದರು ನಿದ್ದೆಯ ಮಂಪರಿನಲ್ಲಿ “ಅವ ಲೋಕೇಶನ ಮಗನಲ್ಲಂತೆ?”
“ಲೋಕೇಶನಿಗೆಲ್ಲೋ ಹುಚ್ಚು. ಸುಮ್ಮನೇ ಏನೋ ಅಂದುಕೊಳ್ತಾನೆ”
ಮಾತು ಅಲ್ಲಿಗೆ ನಿಂತುದರಿಂದ ಎಲ್ಲವೂ ಗೋಜಲು ಗೋಜಲಾಯಿತು. ಲೋಕೇಶನಿಗೆಲ್ಲೋ ಹುಚ್ಚು ಎಂಬ ಮಾತಷ್ಟೇ ಅರ್ಥವಾಗಿತ್ತು.
ನಿಜವಿರಬಹುದು.

ಇವಳ ಕತೆ ಕೇಳಿದ್ರೆ ಯಾರ ಮರ್ಯಾದೆ ಎಷ್ಟೂಂತ ಗೊತ್ತಾಗ್ತದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಬಂದು ಮನೆಯ ಮಾಡಿನಡಿಯಲ್ಲಿ ನಿಂತಾಗ ಒಳಗಿನಿಂದ ಮಾತು ಕೇಳಿಸ್ತಿತ್ತು. ನಾನು ಮೆಲ್ಲಗೆ ಪೊದೆಯ ಹಿಂದೆ ಅಡಗಿಕೊಂಡೆ. ಸ್ವಲ್ಪ ಹೊತ್ತಿನ ಬಳಿಕ ಕಳ್ಳನಂತೆ ಹೊರಗೆ ಬರ‍್ತಿದ್ದಾನೆ ದಿನೇಶ! ಮತ್ತೇನಾಯ್ತು ಅಂತ ನಿಮಗೊತ್ತುಂಟು.

ಆ ದಿನ ಅಪ್ಪ ಬೆಂಕಿಯ ಮೇಲೆ ಕುಳಿತವನಂತೆ ಒದ್ದಾಡುತ್ತಿದ್ದರು. ಕೂತಲ್ಲಿ ಕೂತಿರಲಾರದೆ, ನಿಂತಲ್ಲಿ ನಿಂತಿರಲಾರದೆ ಅಡ್ಡಾಡುತ್ತಿದ್ದರು. ಮುಖಭಾವ ಶಾಂತವಾಗಿದ್ದರೂ ಬಿಗಿದ ತುಟಿಗಳ ಹಿಂದೆ ಸಪ್ತಸಾಗರ ಭೋರ್ಗರೆಯುತ್ತಿತ್ತು. ಅರಳಿದ ಕಣ್ಣುಗಳ ಹಿಂದೆ ಜ್ವಾಲಾಮುಖಿ ಕೆಂಡ ಕಾರುತ್ತಿತ್ತು. ಯಾರನ್ನೋ ಹಿಸುಕುವಂತೆ ಕೈಗಳು ಗಾಳಿಯಲ್ಲಿ ಮುಷ್ಠಿಗಟ್ಟುತ್ತಿದ್ದವು. “ಸಾಲ ಪಡೆಯುವಾಗ ಇದ್ದ ಆತುರ ಹಿಂತಿರುಗಿಸುವಾಗ ಏಕಿಲ್ಲ?” ಎಂದು ಗುರುಗುಟ್ಟುತ್ತಿದ್ದರು. ಆಮೇಲೆ ಲೋಕೇಶನ ಮನೆಯತ್ತ ಹಬ್ಬಿದ ಕತ್ತಲಲ್ಲಿ ದೂರವಾಗುತ್ತಿದ್ದ ಅಪ್ಪನ ಬೆನ್ನೂ ಭುಜಗಳೂ ಕಂಡವು. ಆಮೇಲೆ ಬಿರುಗಾಳಿಯಂತೆ ಮರಳಿದ ಅಪ್ಪನ ಹಣೆ ಕತ್ತಿಯಿಂದ ಗೀರಿದಂತೆ ನೆರಿಗೆಗಟ್ಟಿತ್ತು. ಹುರಿಹಗ್ಗದಂತೆ ನರ ಬಿಗಿದುಕೊಳ್ಳುತ್ತಿತ್ತು. ತಿದಿಯೊತ್ತಿದಂತೆ ಏದುಸಿರು ಹೊರಹೊಮ್ಮುತ್ತಿತ್ತು. ಇದ್ದಕ್ಕಿದ್ದಂತೆ ಲೋಕೇಶನ ಮನೆಯಿಂದ ಭೀಕರ ದನಿ. ಏನೇನೋ ಬೊಬ್ಬೆ. ರೋದನ. ಆರ್ತನಾದ. ಮರುಕ್ಷಣವೇ ಯಾರೋ ಓಡಿಬರುತ್ತಿರುವ ಸದ್ದು. ಅದು ಲೋಕೇಶ ಎಂಬುದರಲ್ಲಿ ಸಂದೇಹವಿಲ್ಲ. ಜೊತೆಯಲ್ಲಿ ಪ್ರಿಯಾ ಅವನನ್ನು ಹಿಡಿದು ಮನೆಯತ್ತ ತಿರುಗಿಸಲು ಯತ್ನಿಸುತ್ತಿದ್ದಾಳೆ. ಕೊರಳಿಗೆ ಕಟ್ಟಿದ ಹಗ್ಗವನ್ನು ಲೆಕ್ಕಿಸದ ಮೃಗದಂತೆ ಗುಟುರು ಹಾಕುತ್ತಿದ್ದ ಲೋಕೇಶನು ನನ್ನ ಅಪ್ಪನನ್ನು ಕಂಡು ‘ಸ್ವಾಮೀ’ ಎನ್ನಲಿಲ್ಲ. ಜಗಲಿಯ ಮೇಲೆ ಕೂರಲಿಲ್ಲ. “ಇಗೊಳ್ಳಿ ನಿಮ್ಮ ಸಾಲದ ಹಣ” ಎನ್ನುತ್ತಾ ಕೈಯಲ್ಲಿದ್ದ ನೋಟಿನ ಮುದ್ದೆಗಳನ್ನು ಜಗಲಿಯ ಮೇಲೆ ಬೀಸಿ ಎಸೆದ. ಅದು ನೆಲಕ್ಕೆ ಬಿದ್ದು ಚದುರುತ್ತಲೇ ಅಪ್ಪನ ಮೋರೆ ಗಂಟಿಕ್ಕಿತು. ಮುಷ್ಠಿ ಬಿಗಿಯಿತು. ನಾನು ಉಸಿರು ಬಿಗಿಹಿಡಿದು ನೋಡಿದೆ. ನೆಲದಲ್ಲಿ ಪಾದ ಗಟ್ಟಿಗೊಳಿಸಲು ಯತ್ನಿಸುತ್ತಿದ್ದ ಲೋಕೇಶನ ನಾಲಗೆ ತೊದಲುತ್ತಿತ್ತು. ಅಯ್ಯೋ! ಅಪ್ಪನ ಮುಖದಲ್ಲೂ ಅದೆಂಥ ಕ್ರೂರ ಸಿಟ್ಟು! ಅವರು ಸರ್ಪದಂತೆ ಮುಖ ಹೊರಳಿಸಿ ಪ್ರಿಯಾಳತ್ತ ನೋಡಿದಾಗ ಅವಳು ಬೇಡ ಬೇಡವೆಂಬಂತೆ ಕೈ ಅಲುಗಿಸುತ್ತಾ ಸೆರಗನ್ನು ಬಾಯಿಗೆ ತುರುಕಿಕೊಂಡಳು.

“ಇನ್ನೇನು ಬೇಕು ನಿಂಗೆ? ಎಷ್ಟು ಬೇಕು ಹೇಳು. ಕೊಡ್ತೇನೆ. ಸಾಲ ವಸೂಲಿ ಮಾಡ್ಲಿಕ್ಕೆ ಹೊತ್ತು ಗೊತ್ತು ಇಲ್ವಾ? ರಾತ್ರಿಯಲ್ಲೇ ಆಗ್ಬೇಕಾ?” ಗಂಟಲ ಪೇಶಿ ಹರಿಯುವಂತೆ ಲೋಕೇಶ ಬೊಬ್ಬಿರಿದ. ಅಪ್ಪ ಕಲ್ಲಾಗಿದ್ದರು. ಆದರೆ ಗಂಟಿಕ್ಕಿದ ಹುಬ್ಬಿನಡಿಯಲ್ಲಿ ಮಿನುಗುತ್ತಿದ್ದ ಕಣ್ಣುಗಳು ಕಿಡಿ ಕಾರುತ್ತಿದ್ದವು. ಬಳಿಕ ಲೋಕೇಶ ಕಟಕಟನೆ ಹಲ್ಲು ಕಡಿದು ಭುಸುಗುಟ್ಟುತ್ತಾ “ನನ್ನ ಮನೆಗೆ ಯಾರ‍್ಯಾರು ಯಾಕೆ ಬರ‍್ತಾರೆ ಅಂತ ನಂಗೊತ್ತುಂಟು. ನಾನು ಯಾವ ನಾಯಿಮಗನ ಔದಾರ್ಯದಲ್ಲೂ ಬದುಕ್ತಾ ಇಲ್ಲ. ನೀವಾದ್ರಿಂದ ಹೆಚ್ಚು ಹೇಳೋದಿಲ್ಲ” ಎಂದವನೇ ತೊಡರುಗಾಲು ಹಾಕುತ್ತಾ ತನ್ನ ಮನೆಯ ಕಡೆ ನಡೆದಿದ್ದ.

ಮತ್ತೊಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಮುಂದೆ ಪ್ರತ್ಯಕ್ಷಗೊಂಡ ಆತನು “ದನಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ಅವುಗಳನ್ನು ಯಾರಿಗಾದ್ರೂ ಮಾರಿಬಿಡಿ. ಬಾಕಿದ್ದವರ ಗದ್ದೆಗೆ ಬಿಟ್ಟು ಮೇಯಿಸೋದ್ಯಾಕೆ? ಇನ್ನು ಮುಂದೆ ಹೀಗೆಲ್ಲಾದ್ರೂ ಆದ್ರೆ ವಿಷ ಹಾಕ್ತೇನೆ. ಕಾಲು ಮುರೀತೇನೆ. ಜಾಗ್ರತೆ” ಎಂದು ಕೂಗಾಡಿದಾಗ ಒಡ್ಡು ಹರಿದ ನೀರು ರಭಸದಿಂದ ಹೊರನುಗ್ಗುವಂತೆ ಅಪ್ಪನ ಮಾತುಗಳು ಅವನ ಮುಖಕ್ಕಪ್ಪಳಿಸಿದವು. “ಮರ್ಯಾದೆಗೆ ಮಾತಾಡು. ಏನಂತ ತಿಳ್ಕೊಂಡಿದ್ದಿ? ಈ ಲೋಕದಲ್ಲಿ ದನ ಸಾಕೋದು ನಾನು ಮಾತ್ರವಾ? ನನ್ನ ಮೇಲಿನ ಕೋಪದಲ್ಲಿ ದಣಪೆಯನ್ನು ಒದ್ದು ತುಂಡು ಮಾಡದರ‍್ತಿದ್ರೆ ರಾಘವನ ದನಗಳು ನಿನ್ನ ಗದ್ದೆಗೆ ನುಗ್ತಿದ್ವಾ? ನನ್ನ ಎದುರು ದನಿ ಏರಿಸ್ತೀಯಾ? ನಡಿ ಇಲ್ಲಿಂದ” ಬೆದರಿಸಿ ಕುಗ್ಗಿಸುವಂತೆ ಮಾಡಿದ ಆ ದನಿಯನ್ನು ಕೇಳಿ ಲೋಕೇಶ ದಂಗಾದರೂ ತೋರಿಸಿಕೊಳ್ಳದೆ “ಒಂದಲ್ಲಾ ಒಂದಿನ ಈ ಮನೆಗೆ ಬೆಂಕಿ ಹಚ್ಚಿ, ತೋಟದ ಅಡಿಕೆ ಮರಗಳನ್ನೆಲ್ಲಾ ಕಡಿದು ಹಾಕದಿದ್ರೆ ನಾನು ಕಣ್ಣಪ್ಪನ ಮಗನೇ ಅಲ್ಲ” ಎಂದು ಚೀರತೊಡಗಿದ.

ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು. ಪಕ್ಕದ ಮನೆಯಿಂದ ರಾಕೆಟ್ಟೊಂದು ನಮ್ಮ ಅಂಗಳದ ಕಡೆ ನುಗ್ಗಿ ಮುಖವಡಿಯಾಗಿ ಬಿದ್ದುಬಿಟ್ಟಿತು. ನಮ್ಮ ತೋಟ, ಹಿತ್ತಿಲುಗಳೊಳಗೆ ಪಟಾಕಿಗಳು ಬಿದ್ದು ಸಿಡಿಯತೊಡಗಿದವು. ಅರೆ! ಇವತ್ತು ದೀಪಾವಳಿಯಲ್ಲದಿದ್ದರೂ ಲೋಕೇಶ ಏಕೆ ಹೀಗೆ ಮಾಡುತ್ತಿದ್ದಾನೆ ಎಂದುಕೊಂಡು ಹೊರಬಂದು ನೋಡುತ್ತಿದ್ದಂತೆ ಕೊಟ್ಟಿಗೆಯ ಜಗಲಿ ಮೇಲೆ ನಾಲ್ಕಾರು ಲಕ್ಷ್ಮಿ ಪಟಾಕಿಗಳು ಸ್ಪೋಟಿಸಿದವು. ಒಳಗಿದ್ದ ದನಕರುಗಳ ಆಕ್ರಂದನ ಮುಗಿಲು ಮುಟ್ಟತೊಡಗಿತು. ಕೊರಳಿಗೆ ಕಟ್ಟಿದ್ದ ಹಗ್ಗವನ್ನು ತುಂಡರಿಸಿ ಹೊರಗೆ ಓಡಲೆಳಸುತ್ತಿದ್ದುದರಿಂದ ಅವುಗಳನ್ನು ಹಿಡಿದು ಕಟ್ಟಲು ಎಲ್ಲಿಲ್ಲದ ತ್ರಾಸ ಪಡಬೇಕಾಯಿತು. ಕುಣಿಕೆಗೆ ಕೊರಳೊಡ್ಡದೆ ಸತಾಯಿಸುವ ದನಗಳಿಂದ ತುಳಿಸಿಕೊಳ್ಳುತ್ತಾ, ಗುದ್ದಿಸಿಕೊಳ್ಳುತ್ತಾ ಬೇಸತ್ತ ಅಪ್ಪ ಕೋಲು ತಗೊಂಡು ಅವುಗಳ ಮುಖಮೂತಿಯೆನ್ನದೆ ಬಾರಿಸುತ್ತಾ “ಇವತ್ತಿಗೆ ಇದು ನಿಲ್ಲಿಸದಿದ್ರೆ ನಿಮಗಿದೆ ಮಕ್ಕಳ್ರಾ ಮಾರಿಹಬ್ಬ” ಎನ್ನುತ್ತಾ ವಿಜಯೋತ್ಸವವನ್ನು ಆಚರಿಸುತ್ತಿದ್ದ ಲೋಕೇಶನತ್ತ ಹೇಗೆ ನೋಡಿದರೆಂದರೆ…

ಏನೇ ಆಗಲಿ, ಲೋಕೇಶನೊಂದಿಗೆ ಜಗಳವಾದ ಬಳಿಕ ‘ಮಾಮಾ ಮಾಮಾ’ ಎನ್ನುತ್ತಾ ವಕ್ಕರಿಸುತ್ತಿದ್ದ ಅಪ್ಪುವಿನ ಕಿರಿಕಿರಿ ನಿಂತುಹೋಯಿತಲ್ಲ. ಅದೇ ಸಮಾಧಾನ. ಅಪ್ಪನಿಗೆ ಅದೆಂಥ ಪ್ರೀತಿ ಅವನ ಮೇಲೆ. ಅವ ಲೋಕೇಶನಿಗಿಂತಲೂ ಹೆಚ್ಚು ನೆಚ್ಚಿಕೊಂಡದ್ದು ನನ್ನಪ್ಪನನ್ನು. ಇಲ್ಲಿನ ಎರಡಂತಸ್ತಿನ ಮನೆಯೊಳಗೆ ಓಡಾಡುವುದೆಂದರೆ ಅವನಿಗೆ ತುಂಬಾ ಇಷ್ಟ. ಅಡಿಕೆ ತೋಟ, ತೆಂಗಿನ ಹಿತ್ತಿಲುಗಳಲ್ಲಿ ತಿರುಗಾಡದಿದ್ದರಂತೂ ನಿದ್ದೆಯೇ ಬಾರದು. ಬೈಕಿನಲ್ಲಿ ಕುಳಿತು ಸುತ್ತು ಹೊಡೆಯದಿದ್ದರೂ, ಮೊಬೈಲಿನಿಂದ ಫೊಟೋ ಕ್ಲಿಕ್ಕಿಸಿಕೊಳ್ಳದಿದ್ದರೂ ಆದೀತು. ಆದರೆ ಅವರ ಕೈಯಿಂದ ಚಿಪ್ಸ್, ಕೋಡುಬಳೆ, ಚಕ್ಕುಲಿ ಅಥವಾ ಮಿಠಾಯಿಗಳು ಸಿಗದೆ ಕದಲುತ್ತಿರಲಿಲ್ಲ. ಅವನು ನನ್ನ ತಂದೆಯ ಜೊತೆ ತನ್ನ ಪುಟ್ಟ ಕೈಗಳಿಂದ ಅಡಿಕೆ, ತೆಂಗಿನಕಾಯಿಗಳನ್ನು ಹೆಕ್ಕುವಾಗ ನಾನು ತಪ್ಪಿತಸ್ಥನಂತೆ ತಲೆ ತಗ್ಗಿಸುತ್ತಿದ್ದೆ. ಒಂದೇ ಒಂದು ಮರದ ಬುಡದಲ್ಲಿದ್ದ ಅಡಿಕೆಗಳನ್ನು ಹೆಕ್ಕಲು ಬಾಕಿಯಾದ್ದಕ್ಕೆ, ಬಾಯಗಲಿಸಿ ಹಿಡಿದ ಗೋಣಿಯೊಳಗೆ ತುಂಬುತ್ತಿದ್ದ ತೆಂಗಿನಕಾಯಿಗಳಲ್ಲೊಂದು ನೆಲಕ್ಕೆ ಬಿದ್ದುದಕ್ಕೆ ಅಪ್ಪ ನನ್ನನ್ನು ಅಷ್ಟೂ ಬೈದುದರಿಂದ ಇನ್ನು ಮುಂದೆ ಅಪ್ಪನೊಂದಿಗೆ ಕೈಜೋಡಿಸಲಾರೆ, ಅವರ ಯಾವ ವಹಿವಾಟಿಗೂ ತಲೆ ಹಾಕಲಾರೆ ಎಂದು ನಿರ್ಧರಿಸಿದ್ದೆ. ಚಿಕ್ಕಂದಿನಲ್ಲಿ ಸೈಕಲ್ ಕಲಿಯುತ್ತಿರುವಾಗ ದಾರಿಯಲ್ಲಿ ಕಲ್ಲೋ ಮರದ ತುಂಡೋ ಚಕ್ರದಡಿಗೆ ಸಿಲುಕಿ ಆಯತಪ್ಪಿ ನೆಲಕ್ಕುರುಳಿದಾಗ ಏಳುವ ಮುಂಚೆಯೇ ನನಗೆ ಹೊಡೆಯುತ್ತಿದ್ದ ಅಪ್ಪ ಪಕ್ಕದಮನೆಯ ಅಪ್ಪು ಎಲ್ಲಾದರೂ ನೆಲಕ್ಕೆ ಬಿದ್ದರೆ ಅದೆಷ್ಟು ಕಕ್ಕುಲಾತಿಯಿಂದ ಅವನನ್ನು ಎತ್ತಿ ಸಮಾಧಾನಪಡಿಸುತ್ತಾರೆ! ಅಮ್ಮನೊಡನೆ ಮಾತನಾಡುವಾಗಲೂ ಅವರದ್ದು ಉರಿಮೂತಿಯೇ. ಸಂಬಂಧಿಕರ ಮದುವೆಗೆ ಉಡಲೆಂದು ಅಮ್ಮ ಹೊಸ ಸೀರೆಯನ್ನು ಕೊಳ್ಳಬಯಸಿದಾಗ ‘ಈಗ ಹಣವಿಲ್ಲ. ಬ್ಯಾಂಕಿನಿಂದ ತೆಗೆದೇ ಆಗ್ಬೇಕಷ್ಟೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದವರು ಪ್ರಿಯಾಳಿಗಾಗಿ ಎಲ್ಲಾ ಕೆಲಸವನ್ನು ಬದಿಗಿಟ್ಟು ರಾಜೀವಿಯ ಮನೆಗೆ ಹೋಗಿ ಬೀಸುವ ಕಲ್ಲನ್ನು ತಂದಿದ್ದರು. ಅವಳು ಎಷ್ಟೇ ಕೇಳಿದರೂ ಹಣದ ಬಗ್ಗೆ ಚಕಾರವೆತ್ತಲಿಲ್ಲ. ಅವಳು ತನ್ನ ಸಮಸ್ಯೆಗಳನ್ನು ಹೇಳಿ ಕಣ್ಣೀರಿಡುವಾಗ ಇನ್ನಿಲ್ಲದಂತೆ ಸಂಕಟಪಡುವ ಅಪ್ಪ ಕೆಲವೊಮ್ಮೆ ನನ್ನಮ್ಮ ಅಳುವಾಗ ತಿರುಗಿಯೂ ನೋಡದಿರುವುದೇಕೆ?

“ಓಹೋ! ಮನೆ ಕಟ್ತಿದ್ದಾನಂತೆಯೋ ಆ ಪಟೇಲ? ಒಳ್ಳೇದಾಯ್ತು. ನೋಡ್ಕೊಳ್ಳಿ ಇನ್ನು ಅವನಾಗಿಯೇ ನಮ್ಮ ಕಾಲಬುಡಕ್ಕೆ ಬರ‍್ತಾನೆ. ಗಾರೆ ಕೆಲಸಕ್ಕೆ, ಸಾರಣೆ ಮಾಡೋದಕ್ಕೆ ನನ್ನ ತಮ್ಮನಷ್ಟು ನಿಯತ್ತಿನವರು ಇನ್ಯಾರು ಸಿಗ್ತಾರೆ ಅವನಿಗೆ?” ಎಂದು ತನ್ನ ಗೆಳೆಯರೊಡನೆ ರಾಜಾರೋಷವಾಗಿ ಕೊಚ್ಚಿಕೊಳ್ಳುತ್ತಿದ್ದ ಲೋಕೇಶ. ಆದರೆ ಅಪ್ಪ ಅದಕ್ಕೆ ಸೊಪ್ಪು ಹಾಕದೆ ನೆಲ್ಲಿಕಟ್ಟೆಯಲ್ಲಿ ಬಿಡಾರ ಹೂಡಿದ್ದ ಬಂಗಾಳಿ ಕಾರ್ಮಿಕರಿಂದ ಆ ಕೆಲಸವನ್ನು ಮಾಡಿಸಿದಾಗ ಅವನ ಬಾಯಿ ಕಟ್ಟಿತು. ಆದರೆ ನಮಗೆ ಮೊದಲ ಅಭಿನಂದನೆಗಳನ್ನು ತಿಳಿಸಿದವನೇ ದಿನೇಶ.

“ಒಳ್ಳೆ ಕೆಲಸ ಮಾಡಿದ್ರಿ ಸ್ವಾಮಿ. ನಿಜ ಹೇಳಬೇಕಂದ್ರೆ ನನ್ನೊಟ್ಟಿಗೆ ಕೆಲಸ ಮಾಡೋರನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಕೆಲಸ ಸುರು ಮಾಡಿದ ಮರುದಿನವೇ ಮಾಯವಾಗಿ ಬೇರೆ ಕಡೆ ತೊಡಗಿಸಿಕೊಳ್ತಾರೆ. ಆಮೇಲೆ ನೀವೇ ಹೋಗಿ ಅವರ ಕಾಲಿಗೆ ಬೀಳ್ಬೇಕು. ಅದಕ್ಕಿಂತ ಈ ಬಂಗಾಳಿ ಕಾರ್ಮಿಕರೇ ವಾಸಿ. ಅವರಿಗೊಂದು ಶೆಡ್ ಕಟ್ಟಿ ಕೊಟ್ರೆ ತಾವೇ ಆಹಾರ ಬೇಯಿಸ್ಕೊಂಡು ತಮ್ಮಷ್ಟಕ್ಕೆ ಕೆಲಸ ಮಾಡ್ತಾರೆ. ಒಂದ್ವೇಳೆ ನೀವು ನನ್ನನ್ನು ಕೆಲಸಕ್ಕೆ ಕರೆದಿದ್ರೆ ಮನೆ ಕಟ್ಟಿ ಮುಗಿಯೋವರೆಗೂ ಅಣ್ಣನ ಅಬ್ಬರ ಸಹಿಸ್ಕೊಂಡು ಇಲ್ಲೇ ಇರಬೇಕಾಗ್ತಿತ್ತು.”

ಅಂದುಕೊಂಡದ್ದಕ್ಕಿಂತಲೂ ಬೇಗನೆ ಕೆಲಸಗಳು ಮುಗಿದಿದ್ದವು. ಗೃಹಪ್ರವೇಶಕ್ಕೆ ಲೋಕೇಶನಿಗೂ ಆಮಂತ್ರಣವಿತ್ತು. ಆ ದಿನ ಆತ ಹಳೆಯ ಲೋಕೇಶನಾಗಿ ಬಂದು ಊಟ ಮಾಡಿದ. ನಮ್ಮ ನಡುವೆ ಮತ್ತೆ ನಗು- ಮಾತುಗಳು ಹುಟ್ಟಿದವು.

ರಾತ್ರಿಯಿಡೀ ಮಳೆ. ಅಪ್ಪ, ಅಮ್ಮ, ಅಪ್ಪು, ಲೋಕೇಶ, ದಿನೇಶ, ಪ್ರಿಯಾ ಪರಸ್ಪರ ಕಲಸಿಕೊಂಡು ಕಲಸು ಮೇಲೋಗರವಾಗುತ್ತಾ ಯಾರು ಏನಾಗಿದ್ದರೆಂಬುದೇ ಗೊತ್ತಾಗದಂತೆ ಚಕಚಕನೆ ಬದಲಾಗುತ್ತಾ ಮೂಡಿದ ಕನಸು ಇದ್ದಕ್ಕಿದ್ದ ಹಾಗೆ ಪುಗ್ಗೆಯಂತೆ ಒಡೆಯಿತು. ಕಣ್ತೆರೆದಾಗ ಲೋಕೇಶನ ಮನೆಯಿಂದ ಹೊರಟ ಪ್ರಿಯಾ ಮತ್ತು ಅವಳ ಮಗನ ಆರ್ತನಾದ ಎರಡಲಗಿನ ಕತ್ತಿಯಂತೆ ಕಿವಿಗೆರಗಿತು. ಒಂದೇ ದಿನ ಎರಡು ಬಾರಿ ಜಗಳವಾಡುವ ರೂಢಿಯಿಲ್ಲದಿದ್ದರೂ ಅವಳ ಕೂಗಿನಲ್ಲಿದ್ದ ಭಯವನ್ನು ಗುರುತಿಸಿದರೆ ಲೋಕೇಶ ಆಕೆಯನ್ನು ಖಂಡಿತಾ ಕೊಂದು ಹಾಕುತ್ತಾನೆ ಎನಿಸಿ ಲಗುಬಗೆಯಿಂದ ಎದ್ದು ಹೊರಗೆ ಬಂದೆ. ಅಮ್ಮ ಆಗಲೇ ಹೊರಗೆ ಬಂದು ನಿಂತಿದ್ದಳು. ಅಪ್ಪುವಿನ ಕೈಹಿಡಿದುಕೊಂಡು ಓಡಿಬಂದ ಪ್ರಿಯಾ ಅಂಗಳದ ಕೆಸರಲ್ಲಿ ಕುಸಿದು ಎದೆ ಬಡಿದುಕೊಂಡು ಅಳತೊಡಗಿದಳು. “ನನ್ನ ಗಂಡ ಹೊಟ್ಟೆ ನೋವು ಅಂತ ಮಲಗಿದ್ದ. ಮನೆಯೊಳಗೆ ಮಳೆನೀರು ತುಂಬಿದ್ರಿಂದ ನಿದ್ದೆ ಬಂದಿರ‍್ಲಿಲ್ಲ. ಕೊನೆಗೆ ನೀರು ಸೋರದ ಕಡೆ ಮಗನನ್ನು ಮಲಗಿಸಿ ನಾನೂ ಅವನೊಟ್ಟಿಗೆ ಮಲಗಿದೆ. ಅವ ಮತ್ತೂ ಕಿರುಚ್ತಲೇ ಇದ್ದ. ಮಳೆ ನಿಂತ ಮೇಲೆ ಮಲಗಿದ್ರಿಂದ ನಂಗೆ ಒಳ್ಳೆ ನಿದ್ದೆ ಬಂತು. ಆದ್ರೂ ನಡುರಾತ್ರಿಯಲ್ಲಿ ಎಚ್ಚರವಾದಾಗ ಗಂಡ ಪಕ್ಕದಲ್ಲಿರಲಿಲ್ಲ. ಎಷ್ಟು ಹೊತ್ತಾದ್ರೂ ಪತ್ತೆಯಿಲ್ಲ. ಹೊರಗೆ ಬಂದು ನೋಡಿದ್ರೆ ಅವ ಮಾವಿನ ಮರದ ಕೊಂಬೆಗೆ ಹಗ್ಗ ಬಿಗಿದು…”

ನನ್ನ ಉಸಿರೇ ಗಂಟಲಲ್ಲಿ ಸಿಕ್ಕಿಕೊಂಡಂತಾಯಿತು. ನಿಂತ ನೆಲ ಕುಸಿದಂತೆನಿಸಿತು. ಎಲ್ಲಿಂದಲೋ ಒಳಗೆ ಬಂದ ಅಪ್ಪ ಲಗುಬಗೆಯಿಂದ ಬಟ್ಟೆ ಧರಿಸಿ ಗೇರು ಮರದ ಕಡೆ ಹೊರಟರು. ಅಕ್ಕಪಕ್ಕದವರು ಒಬ್ಬೊಬ್ಬರೇ ಸೇರತೊಡಗಿದರು. ಕೊಂಬೆಗೆ ಬಿಗಿದ ಹಗ್ಗದ ತುದಿಯಲ್ಲಿ ಲೋಕೇಶ ಉದ್ದಕ್ಕೆ ನೇತಾಡುತ್ತಿದ್ದ. ಕಿರುಚಲೆಂದು ತೆರೆದ ನನ್ನ ಬಾಯಿಯೊಳಗಿನಿಂದ ದನಿಯೇ ಹೊರಡಲಿಲ್ಲ. ಯಾರೋ ಗಂಟಲು ಹಿಸುಕುತ್ತಿರುವಂತೆ ಭಾಸವಾಗುತ್ತಿತ್ತು. ಕಾಲುಗಳನ್ನು ಓಡದಂತೆ ಗಟ್ಟಿಯಾಗಿ ಹಿಡಿದಿಟ್ಟಂತೆ ತೋರುತ್ತಿತ್ತು. ಒಳಗಿನಿಂದ ಕಾಣಿಸುತ್ತಿದ್ದ ಪರಿಚಿತ ವ್ಯಕ್ತಿ ಈಗ ಎಷ್ಟು ಅಪರಿಚಿತನಾಗಿ ತೋರುತ್ತಿದ್ದನೆಂದರೆ ಸಾವು ಅವನ ದೇಹವನ್ನು ಅಷ್ಟೂ ವಿಕಾರವಾಗಿಸಿದ್ದು ಗೋಚರವಾಗಿತ್ತು. ಪಕ್ಕಕ್ಕೆ ವಾಲಿದ ಗೋಣು, ಕಚ್ಚಿದ ವಸಡುಗಳೆಡೆಯಿಂದ ಹೊರಬಂದ ನಾಲಿಗೆ, ಬಿಗಿಮುಷ್ಠಿ, ಕೆದರಿದ ಕೂದಲರಾಶಿ, ಮೃತ್ಯುಭಯದಿಂದ ಹೊರ ಚಾಚಿದ ಕಣ್ಣಗುಡ್ಡೆಗಳು, ನೋವಿನ ಅಪಾರಯಾತನೆಯಲ್ಲಿ ಸುರಿದ ಕಂಬನಿಯ ಧಾರೆ, ತುಟಿಯಂಚಿನಲ್ಲಿ ಬೊಟ್ಟುಬೊಟ್ಟಾಗಿ ಸುರಿಯುತ್ತಿರುವ ಜೊಲ್ಲು. ಕಣ್ಣೆದುರಿಗಿದ್ದುದನ್ನು ನೋಡಲಾಗದೆ ದೃಷ್ಟಿಯನ್ನು ಕದಲಿಸಿದರೆ ಒಂದು ಪಕ್ಕದಲ್ಲಿ ಪ್ರಿಯಾಳನ್ನು ಸಮಾಧಾನಪಡಿಸುವ ನೆರೆಹೊರೆ. ಅಪ್ಪುವಿನ ರೋದನ. ಸಂತೈಸುವ ದನಿಗಳಿಗೆ ಕಿವುಡಾಗಿ ಗಲ್ಲಕ್ಕೆ ಕೈಕೊಟ್ಟು ಮಂಕಾಗಿ ಕುಳಿತಿರುವ ದಿನೇಶನ ಬಳಿ ಹೋದ ಅಪ್ಪ ಶವವನ್ನು ಕೆಳಗಿಳಿಸಲು ಹೇಳಿದರು.

“ಮಳೆ ಬಂದದ್ರಿಂದ ಮರ ಜರ‍್ತದೆ ಸ್ವಾಮಿ. ಹಗ್ಗ ಬಿಚ್ಲಿಕೆ ಆಗ್ಲಿಕ್ಕಿಲ್ಲ”

ಹಾಗಿದ್ದರೆ ಲೋಕೇಶ ಅದನ್ನು ಏರಿದ್ದು ಹೇಗೆ? ಹಗ್ಗ ಕಟ್ಟಿದ್ದು ಹೇಗೆ ಎಂದುಕೊಂಡು ಅಪ್ಪನನ್ನು ನೋಡಿದೆ. ಹಾವು ಕಂಡಂತೆ ಬೆಚ್ಚಿ ಬೆವರುತ್ತಿರುವ ಅಪ್ಪನ ಮುಖ ನೋಡಲೂ ಹೆದರಿಕೆಯಾಗುತ್ತಿದ್ದುದರಿಂದ ಪ್ರಶ್ನೆಗಳು ಗಂಟಲಲ್ಲೇ ಇಂಗಿ ಹೋದವು. ಕೊನೆಗೆ ದಿನೇಶನು ಬಿದಿರಿನ ಕೊಕ್ಕೆಯ ತುದಿಗೆ ಕತ್ತಿಯನ್ನು ಸಿಕ್ಕಿಸಿ ಹಗ್ಗವನ್ನು ಕಡಿದಾಗ ಲೋಕೇಶನ ಹೆಣ ಹಲಸಿನ ಹಣ್ಣಿನಂತೆ ಕೆಳಗೆ ಬಿತ್ತು.
“ಇನ್ನು ನನ್ನ ಗತಿಯೇನು ದೇವರೇ” ಎಂದು ಪ್ರಿಯಾ ಗೋಳಾಡುತ್ತಿರುವುದನ್ನೂ ಲೆಕ್ಕಿಸದೆ ಅಪ್ಪ ಹೇಳಿದರು.

“ನೋಡಿ, ಪೋಲೀಸರಿಗೆ ಗೊತ್ತಾದ್ರೆ ಕಷ್ಟ. ಆದಷ್ಟು ಬೇಗ ಎಲ್ಲ ಮುಗಿಸಿಬಿಡಿ”

ಉಸಿರುಗಟ್ಟಿಸುವ ಈ ವಾತಾವರಣದಿಂದ ಒಮ್ಮೆ ಪಾರಾದರೆ ಸಾಕೆಂದುಕೊಂಡು ಅಪ್ಪನ ಹಿಂದೆ ಓಡಿ ಮನೆಯೊಳಗೆ ಹೊಕ್ಕು ತೇಕುತ್ತಾ ಧಬ್ಬೆಂದು ಹಾಸಿಗೆಯಲ್ಲಿ ಬಿದ್ದುಕೊಂಡೆ. ಕತ್ತಿನವರೆಗೂ ಬಿಳಿ ಬಟ್ಟೆ ಹೊದೆಸಿ, ಮೂಗಿನ ಹೊಳ್ಳೆಗಳಿಗೆ ಹತ್ತಿ ತುರುಕಿ ಅಂಗಾತವಾಗಿದ್ದ ಲೋಕೇಶನ ಹೆಣ ಬೃಹದಾಕಾರವಾಗಿ ಬೆಳೆಯತೊಡಗಿದಂತೆ ಭಾಸವಾಗಿ ಕಣ್ಣುಗಳನ್ನು ತೆರೆದು ನೋಡಿದರೆ ಸದ್ಯ! ಅಮ್ಮ ಪಕ್ಕದಲ್ಲೇ ಮಲಗಿದ್ದಾಳೆ. ಅದರಾಚೆಗೆ ಅಪ್ಪ.

“ಹೊಟ್ಟೆನೋವು ಹೆಚ್ಚಾದ್ರಿಂದಲೇ ಲೋಕೇಶ ಆತ್ಮಹತ್ಯೆ ಮಾಡಿದ್ದಲ್ಲ ಅನಿಸ್ತದೆ” ಅಪ್ಪನ ಕಡೆ ಮಗ್ಗುಲಾಗುತ್ತಾ ಅಮ್ಮ ಹೇಳಿದಳು.

“ನಿಂಗೆ ಹೇಗೆ ಗೊತ್ತು?” ಗವಿಯೊಳಗಿನಿಂದಲೋ ಎಂಬಂತೆ ಅಪ್ಪನ ದನಿ.

“ರಾತ್ರಿ ಯಾವುದೋ ಹೊತ್ತಲ್ಲಿ ಎಚ್ಚರವಾಯ್ತು. ಕಿಟಿಕಿಯಿಂದ ಹೊರಗೆ ನೋಡಿದಾಗ ಲೋಕೇಶನ ಮನೆಯಲ್ಲಿ ಜೋರು ಜಗಳ. ಹೊರಗೇನೋ ಗದ್ದಲ. ನಿಮ್ಮನ್ನು ಎಚ್ಚರಿಸುವ ಅಂದುಕೊಂಡ್ರೆ ನೀವು ಹಾಸಿಗೆಯಲ್ಲರ‍್ಲಿಲ್ಲ. ಎಲ್ಲಿದ್ರಿ ನೀವು?”