ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು…
(‘Because I am a Girl I must study’ : Kamala Bhasin)

ಅಪ್ಪ ಮಗಳಿಗೆ ಕೇಳಿದ –
ಓದ್ಬೇಕು ? ನೀ ಯಾಕ ಓದ್ತಿ ?
ಹುಡುಗಿ !
ಓದೊಕಂತಾನ ಭಾಳ
ಗಂಡಮಕ್ಕಳದಾರ ನನಗ
ನೀ ಯಾಕ ಓದ್ತಿ ?

ಮಗಳು ಅಪ್ಪನಿಗೆ ಹೇಳಿದಳು –
ನೀ ಇಷ್ಟು ಕೇಳ್ತಿಯಂದ್ರ ಹೇಳ್ತಿನಿ ಕೇಳು,
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಭಾಳ ಹಿಂದಿನಿಂದ ಹೊಸಕಿ ಹೂತಿರೊ ಅವಕಾಶಗಳಿಗಾಗಿ, ನಾ ಓದ್ಬೇಕು.
ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿ
ಹಾರಿ ಬಿಡಾಕ‌,ನಾ ಓದ್ಬೇಕು.
ಅರಿವು ಹೊಸ ಬೆಳಕಿನ ಸೆಲೆ,
ಅದು ಪಡಿಬೇಕಂದ್ರನಾ ಓದ್ಬೇಕು.
ನಾ ಎದುರಿಸಬೆಕಾದ ಯುದ್ಧಗಳಿಗಾಗಿ
ನಾ ಓದ್ಲೇ ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು

ಹಿಂಸೆಗಳನ್ನ ತುಳಿಯಾಕ, ನಾ ಓದ್ಬೇಕು
ನನ್ನ ಮೌನ ಮುರಿಯಾಕ, ನಾ ಓದ್ಬೇಕು.
ಪುರುಷ ಪ್ರಧಾನತೆ ಮುಂದ ನಿಲ್ಲಾಕ, ನಾ ಓದ್ಬೇಕು.
ಮೇಲು ಕೀಳುಗಳ ಗೆರೆ ಅಳಸಾಕ, ನಾ ಓದ್ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು

ಹೆಸರಿಗಷ್ಟೆ ಇರುವ ‘ನ್ಯಾಯ’ಗಳನ್ನ
ಮತ್ತೆ ರೂಪಿಸಾಕ ನಾ ಓದ್ಬೇಕು.
ನಾ ನಂಬುವಂತ ನಂಬಿಕೆಗಳ
ಅಚ್ಚೊತ್ತಿಸಾಕ, ನಾ ಓದ್ಬೇಕು
ಶತಮಾನಗಳಿಂದ ಹಿಡಿದಿರುವ
ಧೂಳನ್ನ ಗೂಡಿಸಾಕ,ನಾ ಓದ್ಬೇಕು
ಸವಾಲುಗಳನ್ನ ಎದುರುಗೊಳ್ಳಾಕ, ನಾ ಓದ್ಬೇಕು
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ತಪ್ಪುಗಳಿಂದ ಸರಿಗಳನ್ನ ತಿಳಿಯಾಕ, ನಾ ಓದ್ಬೇಕು.
ಗಟ್ಟಿಯಾಗಿ ನಿಲ್ಲುವ ಧ್ವನಿಗಳನ್ನ ಹುಡುಕಾಕ,
ನಾ ಓದ್ಬೇಕು.
ಸ್ತ್ರೀಯರ ಹಾಡುಗಳನ್ನ ಬರಿಯಾಕ, ನಾ ಓದ್ಬೇಕು.
ಹುಡುಗಿಯರಿಗೇ ಇರುವ ಲೋಕವನ್ನ ಕಟ್ಟಾಕ,
ನಾ ಓದ್ಬೇಕು.

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದಲೇ ಬೇಕು.