ಸೇನೆಯು ಸೈನಿಕರ ದಿನನಿತ್ಯ ಜೀವನದ ಆಗುಹೋಗುಗಳ ಮೇಲೆ ಹದ್ದಿನಂತೆ ಕಣ್ಣಿಟ್ಟಿರುತ್ತದೆ, ಅವರು ಎಲ್ಲೇ ಹೋಗಲಿ ಬರಲಿ, ಯಾರನ್ನೇ ಭೇಟಿಯಾಗಲಿ, ಎಲ್ಲವೂ ದಾಖಲಾಗುತ್ತದೆ. ರಜೆ ಪಡೆದು ಮನೆಗೆ ಹೋದರು ಕೂಡ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮತ್ತೊಬ್ಬರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಸದಾಕಾಲ ಕಾಲಿನ ಬೆರಳುಗಳ ಮೇಲೆ ನಿಂತಿರುವುದು ಮಾನಸಿಕ ಕ್ಷೋಭೆಗೆ ದಾರಿ ಮಾಡಿಕೊಡುತ್ತದೆ. ಖಾಸಗಿತನವೇ ಇಲ್ಲದೆ ಜೀವನ ಮಾಡುವ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ, ಅವರನ್ನು ಅವಲಂಬಿಸಿದವರ ಜೀವನ ಹೇಗಿರುತ್ತದೆ ಎಂಬ ಬಗ್ಗೆ  ತಾವು ಮಾಡಿದ ಕ್ಷೇತ್ರಕಾರ್ಯವನ್ನು ಆಧರಿಸಿ ಡಾ.ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರ  ಇಲ್ಲಿದೆ.

ಸೇನಾಪಡೆಯ ವೃತ್ತಿಯಿಂದ ಹೊರಬಂದ ವ್ಯಕ್ತಿಯ ಜೀವನ ಹೇಗಿರಬಹುದು? ಸೇನಾಪಡೆ ಅಂದರೆ ಅದರಲ್ಲಿರುವ ಎಲ್ಲರೂ ಕಾಳಗ/ಯುದ್ಧವನ್ನು ನೋಡಿಯೇ ಇರುತ್ತಾರೆ ಎಂದೇನಲ್ಲ. ಒಬ್ಬ ವ್ಯಕ್ತಿ ಸೈನ್ಯದಲ್ಲಿದ್ದ ಮಾತ್ರಕ್ಕೆ ಯುದ್ಧದಲ್ಲಿ ಭಾಗವಹಿಸುವ ಸೈನಿಕನೋ/ಳೋ ಆಗದೆ ಸೇನಾಪಡೆಯ ಇತರ ಕೆಲಸಗಳನ್ನು ನಿರ್ವಹಿಸುವ ಪಾತ್ರದಲ್ಲಿರಬಹುದು. ಆದರೆ ಸೇನಾಪಡೆಯ ಮೂಲ ಉದ್ದೇಶಕ್ಕೆ, ಮೂಲ ನಿಯಮ, ಕಟ್ಟುಪಾಡುಗಳಿಗೆ ಎಲ್ಲರೂ ಬದ್ಧರು. ಒಮ್ಮೆ ಸೇನಾಪಡೆಗೆ ಸೇರಿದರೆ ಅದರಿಂದ ವ್ಯಕ್ತಿ ಮತ್ತು ಅವರ ಜೀವನ ಬದಲಾಗುವುದು ಗ್ಯಾರಂಟಿ.

ಇದೇನಿದು ಇವಳು ಆಸ್ಟ್ರೇಲಿಯನ್ ಸೈನ್ಯಕ್ಕೆ ಸೇರಿಬಿಟ್ಟಳಾ ಎಂಬ ಪ್ರಶ್ನೆಯೆದ್ದಿದ್ದರೆ ಉತ್ತರ ಇಲ್ಲ, ಸೇರಿಲ್ಲ. ಆದರೆ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಆಸ್ಟ್ರೇಲಿಯನ್ ಸೇನಾಪಡೆಯ ನಿವೃತ್ತ ಸಿಬ್ಬಂದಿಯೊಡನೆ, ಅವರ ಕುಟುಂಬಸ್ಥರೊಡನೆ, ಈಗಾಗಲೇ ತೀರಿಕೊಂಡ ನಿವೃತ್ತ ಯೋಧನ ವಿಧವೆ ಮಡದಿಯ ಜೊತೆ, ಇಲ್ಲವೇ ಸೈನಿಕನ ವಯಸ್ಕ ಮಕ್ಕಳೊಡನೆ ಮತ್ತು ಅವರ ಜೊತೆ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳ ಜೊತೆ ನನ್ನ ಒಡನಾಟವಿತ್ತು. ಈ ಒಡನಾಟದ ಮುನ್ನ ನನಗೆ ನಿವೃತ್ತ ಸೇನಾಪಡೆ ಸಿಬ್ಬಂದಿಯ ಮಾನಸಿಕ ಆರೋಗ್ಯದ ಬಗ್ಗೆ ತಿಳುವಳಿಕೆಯಿತ್ತೇ ವಿನಃ ಅವರುಗಳ ಜೀವನದ ಪರಿಚಯವಿರಲಿಲ್ಲ. ಇನ್ನೂ ಸೇವೆಯಲ್ಲಿರುವ ಮತ್ತು ನಿವೃತ್ತಿ ಪಡೆದ ಸೈನಿಕರ ಬಳಿ ಮೊದಲ ಬಾರಿ ನಾನು ಮಾತನಾಡಿದ್ದೇ ಈ ಕೆಲ ತಿಂಗಳುಗಳಲ್ಲಿ.

ತಮ್ಮಗಳ ಶಾಲೆಯ ಕಲಿಕೆ ಮುಗಿದ ಕೂಡಲೇ ಸುಮಾರು ಹದಿನೆಂಟರ ಆಸುಪಾಸು ವಯಸ್ಸಿನಲ್ಲಿ ಸೇನಾಸೇವೆಗೆ ಸೇರಿ ಇನ್ನೂ ತಮ್ಮ ನಡು-ಇಪ್ಪತ್ತನೇ ವಯಸ್ಸಿನಲ್ಲಿದ್ದ ಕೆಲ ಯುವತಿ/ಯುವಕರನ್ನು ಮಾತನಾಡಿಸಿದಾಗ ಸೇನಾ ನೌಕರಿ ಜೀವನದ ಬಗ್ಗೆ ಭ್ರಮನಿರಸನವಾಗಿತ್ತು. ಎಂಟು ಮಂದಿಯಿದ್ದ ಅವರ ಗುಂಪಿನ ಅಭಿಪ್ರಾಯದ ಪ್ರಕಾರ ಆಸ್ಟ್ರೇಲಿಯನ್ ಸಮಾಜದಲ್ಲಿ ಶಾಲೆ ಮುಗಿದ ಮೇಲೆ ಉದ್ಯೋಗಕಲಿಕಾ ಕೋರ್ಸುಗಳನ್ನು ಮಾಡಿ ಟ್ರೇಡಿ ಆಗಬೇಕು ಇಲ್ಲವೇ ವಿಶ್ವವಿದ್ಯಾಲಯಕ್ಕೆ ಸೇರಿ ಒಂದು ಪದವಿ ಗಳಿಸಿ ಕೆಲಸ ಹಿಡಿಯಬೇಕು. ಇವೆರೆಡೂ ಮಾರ್ಗಗಳು ಬೇಡವೆಂದರೆ ಸೇನೆಗೆ ಸೇರಿ ಅಲ್ಲಿಯೇ ಇದ್ದುಕೊಂಡು ಪದವಿಗಾಗಿ ಓದಬಹುದು ಇಲ್ಲವೇ ಕೆಲಸ ಮಾಡುತ್ತಾ ಇರಬಹುದು. ಅವರೆಲ್ಲರೂ ಮೂರನೆಯ ದಾರಿಯನ್ನು ಆರಿಸಿಕೊಂಡಿದ್ದರು. ಯಾವುದೇ ಯುದ್ಧದ ನೇರ ಪರಿಚಯ/ಭಾಗವಹಿಸುವಿಕೆ ಇಲ್ಲದೆ ಅವರು ಸೇನೆಯಲ್ಲಿ ಕೆಲಸಗಾರರಾಗಿದ್ದರು. ಅವರು ಸಂತೋಷ, ತೃಪ್ತಿಯಿಂದ ಇದ್ದಾರೆಯೇ ಎಂದು ಕೇಳಿದೆ. ಎಲ್ಲರಿಂದಲೂ ನಕಾರ! ಸೇನೆಯ ಅತಿಶಿಸ್ತು ಜೀವನ, ಅತಿರೇಕದ ಕಟ್ಟುಪಾಡುಗಳು, ಪರಮ ನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕಾದ ಕ್ರಮಗಳು, ಅನೇಕಾನೇಕ ನಿಬಂಧನೆಗಳು ಅವರಿಗೆ ನಿರಾಸೆ ತಂದಿತ್ತು. ಅವರ ಜೀವನದ ಸಂಪೂರ್ಣ ವಿವರಗಳು ಸೇನೆಯ ವಶದಲ್ಲಿತ್ತು. ತಮಗೆ ಕೊಡುವ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುವುದೇ ಅವರ ದೈನಂದಿಕ ಜೀವನವಾಗಿತ್ತು. ತಮ್ಮ ಖಾಸಗಿತನ, ವ್ಯಯಕ್ತಿಕ ಜೀವನ, ತಮ್ಮದೇ ಆದ ಅಸ್ಮಿತೆ ಇಲ್ಲದೆ ಯಾರದ್ದೋ ವಶದಲ್ಲಿ ಸಿಲುಕಿ ಬಂಧಿತರಾದಂತೆ ಅನಿಸುತ್ತದೆ ಎಂದು ಅವರುಗಳು ಹೇಳಿದಾಗ ಅಯ್ಯೋ ಅನ್ನಿಸಿತ್ತು. ಅವರ ಆರೋಗ್ಯದ ಬಗ್ಗೆ ಕೇಳಿದಾಗ ಮಾನಸಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಹಂಚಿಕೊಂಡರು.

ಸೇನೆಯು ಅವರ ದಿನನಿತ್ಯ ಜೀವನದ ಆಗುಹೋಗುಗಳ ಮೇಲೆ ಹದ್ದಿನಂತೆ ಕಣ್ಣಿಟ್ಟಿರುತ್ತದೆ, ಅವರು ಎಲ್ಲೇ ಹೋಗಲಿ ಬರಲಿ, ಯಾರನ್ನೇ ಭೇಟಿಯಾಗಲಿ, ಎಲ್ಲವೂ ದಾಖಲಾಗುತ್ತದೆ. ಖಾಸಗಿ ರಜೆ ಪಡೆದು ಮನೆಗೆ ಹೋದರು ಕೂಡ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮತ್ತೊಬ್ಬರು ಖಾತ್ರಿ ಪಡಿಸಿಕೊಳ್ಳುತ್ತಾರೆ. ರಜೆಯಲ್ಲಿದ್ದರೂ, ಮೇಲಿನಧಿಕಾರಿ ಕರೆದ ತಕ್ಷಣ ಇವರು ಹಾಜರಾಗಬೇಕು. ಹೀಗೆ ಸದಾಕಾಲ ಕಾಲಿನ ಬೆರಳುಗಳ ಮೇಲೆ ನಿಂತಿರುವುದು ಮಾನಸಿಕ ಕ್ಷೋಭೆಗೆ ದಾರಿ ಮಾಡಿಕೊಡುತ್ತದೆ. ಕ್ರಮೇಣ ಮಾನಸಿಕ ರೋಗಗಳಾದ ಆತಂಕ, ಖಿನ್ನತೆಗಳು ಕಾಣಿಸಿಕೊಳ್ಳುತ್ತವೆ.

ಸೇನೆಯಿಂದ ನಿವೃತ್ತಿ ಪಡೆದ ಬಹುತೇಕ ಮಂದಿಯಲ್ಲಿ ಹಲವಾರು ಮಾನಸಿಕ ರೋಗಗಳು ಮನೆ ಮಾಡಿರುತ್ತವೆಯೆಂದು ಅಧ್ಯಯನಗಳು ಅಂಕಿಸಂಖ್ಯೆ-ಅಂಶಗಳ ಸಹಿತ ಹೇಳುತ್ತವೆ. ಆರ್ಥಿಕವಾಗಿ ಮುಂದುವರೆದ ದೇಶಗಳಿಂದ (ಉದಾಹರಣೆಗೆ, ಅಮೇರಿಕ, ಬ್ರಿಟನ್, ಕೆಲ ಯುರೋಪಿಯನ್ ರಾಷ್ಟ್ರಗಳು) ಪ್ರಕಟವಾಗಿರುವ ಅಧ್ಯಯನಗಳು ಹೇಳುವಂತೆ ಸೇನೆಯಿಂದ ನಿವೃತ್ತಿ ಪಡೆದ ಅನೇಕ ಗಂಡಸರು ಆಘಾತಕಾರಿ ಒತ್ತಡದ ಅಸ್ವಸ್ಥತೆಯಿಂದ (post-traumatic stress disorder) ಬಳಲುತ್ತಾರೆ. PTSD ಮಾನಸಿಕ ಖಾಯಿಲೆಯಿಂದ ಬಳಲುವ ಹೆಚ್ಚಿನವರ ಕುಟುಂಬಗಳು ಕೂಡ ಹಲವಾರು ತರಹದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗಂಡನಿಂದ ಹೆಂಡತಿ ಕಿರುಕುಳವನ್ನು ಅನುಭವಿಸಬಹುದು, ತಂದೆಯ ಖಾಯಿಲೆಯ ನೇರ ಪರಿಣಾಮವು ಮಕ್ಕಳ ಮೇಲೂ ಆಗುತ್ತದೆ. ಇವೆಲ್ಲಾ ತೊಂದರೆ ಇಲ್ಲದ ಆರೋಗ್ಯಕರ ಜೀವನವನ್ನು ಅನುಭವಿಸುವವರೂ ಇದ್ದಾರೆ.

ಸೇನೆಯ ಅತಿಶಿಸ್ತು ಜೀವನ, ಅತಿರೇಕದ ಕಟ್ಟುಪಾಡುಗಳು, ಪರಮ ನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕಾದ ಕ್ರಮಗಳು, ಅನೇಕಾನೇಕ ನಿಬಂಧನೆಗಳು ಅವರಿಗೆ ನಿರಾಸೆ ತಂದಿತ್ತು. ಅವರ ಜೀವನದ ಸಂಪೂರ್ಣ ವಿವರಗಳು ಸೇನೆಯ ವಶದಲ್ಲಿತ್ತು.

ಹಲವಾರು ಮಂದಿ ಸೇನೆಯಿಂದ ನಿವೃತ್ತರಾಗುವುದು ದೈಹಿಕ ಅಂಗವಿಕಲತೆ ಕಾರಣದಿಂದ. ನಾನು ಮಾತನಾಡಿಸಿದ ಒಬ್ಬರು ಇರಾಕ್ ಮತ್ತು ಆಫ್ಘಾನಿಸ್ತಾನ್ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಯೋಧ. ತಮ್ಮ ಕೆಲಸದಲ್ಲಿ ಅವರು ಹೆಗಲು, ಬೆನ್ನಿನ ಮೇಲೆ ಅರವತ್ತು ಕಿಲೊಗ್ರಾಮ್ ತೂಕದ ಪ್ಯಾರಾಶೂಟ್ ಚೀಲವನ್ನು ಹೊತ್ತು ನೂರಾರು ಬಾರಿ ಪ್ಯಾರಾಶೂಟಿನಿಂದ ಜಿಗಿದಿದ್ದರು. ಪರಿಣಾಮವಾಗಿ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಅದು ಮಾನಸಿಕವಾಗಿ ಅವರನ್ನು ಬಾಧಿಸಿ ಕಡೆಗೆ ಸೇವೆಗೆ ವಿದಾಯ ಹೇಳಿದ್ದರು. ಪುಣ್ಯಕ್ಕೆ ಅವರು ಬೇರೆಲ್ಲ ರೀತಿಯಲ್ಲಿ ಆರೋಗ್ಯವಾಗಿದ್ದು, ನಿವೃತ್ತಿ ಹೊಂದಿದ ಬಳಿಕ ಮತ್ತೊಂದು ಉದ್ಯೋಗವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು.

ಆದರೆ ಅಂತಹ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಮಾನಸಿಕ ರೋಗಗಳಿಂದ, ಅಸ್ವಸ್ಥತೆಯಿಂದ ಬಳಲುವ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸೇನೆ ಬಿಟ್ಟು ಹೊರಬಂದ ಮೇಲೆ ಮಾಮೂಲು ಜೀವನ ನಡೆಸುವುದಕ್ಕೆ ಹಲವರಿಗೆ ಕಷ್ಟವಾಗುತ್ತದೆ. ನಿವೃತ್ತಿ ನಂತರ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಓಡಾಡಬೇಕು, ಮತ್ತೆ ಒಂದು ಉದ್ಯೋಗವನ್ನು ಹುಡುಕಬೇಕು, ತಮ್ಮ ಅರೋಗ್ಯ ಸ್ಥಿತಿಯ ಬಗ್ಗೆ ಪುರಾವೆ ಒದಗಿಸಬೇಕು, ನೂರಾರು ಪ್ರಶ್ನೆಗಳನ್ನು ಕೇಳುವ ವ್ಯವಸ್ಥೆಯನ್ನು ಧೈರ್ಯವಾಗಿ ಎದುರಿಸಬೇಕು, ಸಮಾಜದಲ್ಲಿ ತನ್ನದೇ ಒಂದು ಸ್ಥಾನಮಾನವನ್ನು ಹೊಂದಿಸಿಕೊಳ್ಳಲು ಪರದಾಡಬೇಕು. ಹೆಂಡತಿ, ಮಕ್ಕಳು, ಒಡಹುಟ್ಟಿದವರು, ತಂದೆತಾಯಿ, ಸ್ನೇಹಿತರ ಬಳಿ ಹೊಸ ಸಂಬಂಧಗಳನ್ನು ಬೆಸೆಯಬೇಕು. ಇವೆಲ್ಲವನ್ನೂ ಎದುರಿಸಲು ಬೇಕಾದ ಆಂತರಿಕ ಶಕ್ತಿ ಕಡಿಮೆಯಾದರೆ ಕುಡಿತಕ್ಕೆ ಮತ್ತಿತರ ವ್ಯಸನಗಳಿಗೆ ಈಡಾಗುವ ಅಪಾಯ ಕಟ್ಟಿಟ್ಟದ್ದು.

ಮೇಲಿನ ನಿವೃತ್ತ ಸೇನಾಪಡೆಯ ಕಥೆಗಳು ಒಂದು ರೀತಿಯದಾದರೆ, ಕಥೆಗಳ ಇನ್ನೊಂದು ಮುಖ ಸೇನಾಪಡೆಯ ಹೆಂಡಂದಿರಾಗಿದ್ದು ನಂತರ ‘ಸೇನಾ ವಿಧವೆ’ಯೆಂದು ಕರೆಸಿಕೊಳ್ಳುವ ಮಹಿಳೆಯರದ್ದು. ಕಳೆದ ಮೂರು ತಿಂಗಳುಗಳಲ್ಲಿ ಪ್ರಪ್ರಥಮ ಬಾರಿ ನಾನು ಎರಡನೇ ಮಹಾಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದ ಇಲ್ಲವೇ ಯುದ್ಧದ ಪರಿಣಾಮಗಳನ್ನು ಅನುಭವಿಸಿದ್ದ ಕೆಲ ಮಹಿಳೆಯರನ್ನು ಕಂಡು ಅವರನ್ನು ಮಾತನಾಡಿಸಿದ್ದೆ. ಅವರಲ್ಲಿ ಒಬ್ಬಾಕೆಗೆ ತೊಂಭತ್ತೊಂಭತ್ತು (೯೯) ವರ್ಷ. ಮಾಗಿದ ವಯಸ್ಸು. ಅಷ್ಟೊಂದು ವಯಸ್ಸಾದ ಒಬ್ಬ ವ್ಯಕ್ತಿಯನ್ನು ನಾನು ಮಾತನಾಡಿಸಿದ್ದು ಅದೇ ಮೊದಲ ಬಾರಿ. ಅದು ನನಗೆ ವಿಶೇಷವೆನಿಸಿತ್ತು. ಈಕೆಯ ಗಂಡ ಸೈನ್ಯದಲ್ಲಿದ್ದರೂ ತಾನೇ ಸ್ವತಃ ಎರಡನೇ ಮಹಾಯುಧ್ಧದ ಪರಿಣಾಮಗಳನ್ನು ಅನುಭವಿಸಿದ್ದನ್ನು ಆ ಮಹಿಳೆ ವಿವರಿಸುತ್ತಿದ್ದಾಗ ನನ್ನ ಮುಂದೆ ಕುಳಿತಿದ್ದ ಜೀವಂತ ಇತಿಹಾಸದ ಮಹತ್ವ ಅರಿವಿಗೆ ಬಂದಿತ್ತು. ತನ್ನನ್ನು ಮೋಹಿಸಿ, ಮದುವೆ ಪ್ರಸ್ತಾವಿಸಿದ ಸೈನಿಕನನ್ನು ಮದುವೆಯಾದಾಗ ಆಕೆಗೆ ಹತ್ತೊಂಭತ್ತು ವರ್ಷ ವಯಸ್ಸು. ಇಪ್ಪತ್ತಕ್ಕೆ ಅವಳು ತಾಯಾಗಿದ್ದಳು. ಎರಡನೇ ಮಹಾಯುದ್ಧದಲ್ಲಿ ಸೈನಿಕನಾಗಿದ್ದ ಗಂಡ ಆಗಾಗ ಬರುತ್ತಿದ್ದ, ಹೋಗುತ್ತಿದ್ದ. ಹೆಚ್ಚು ಮಾತನಾಡುತ್ತಿರಲಿಲ್ಲ. ಯುದ್ಧದ ಕುರಿತು ಮಾತನಾಡುವುದಕ್ಕೆ ನಿಷೇಧವಿತ್ತು. ತನಗಂತೂ ಅವನ ಬಳಿ ಏನು ಮಾತನಾಡಬೇಕು ಎಂಬುದೇ ತಿಳಿಯುತ್ತಿರಲಿಲ್ಲ ಎಂದು ಈ ೯೯ ವರ್ಷದಾಕೆ ವಿವರಿಸಿದಾಗ ನಾವಿಬ್ಬರೂ ಒಂದಿಷ್ಟು ನಕ್ಕಿದ್ದೆವು. ಯುದ್ಧ ಮುಗಿದ ನಂತರ ಗಂಡ ಸೇನೆಯಿಂದ ನಿವೃತ್ತಿ ಪಡೆದು ಹಿಂದಿರುಗಿದ; ಅಲ್ಲಿಯವರೆಗೂ ತಂದೆತಾಯಿಯರ ಜೊತೆ ಮಗುವಿನೊಂದಿಗೆ ವಾಸವಾಗಿದ್ದ ತನಗೆ ಇದ್ದಕ್ಕಿದ್ದಂತೆ ಹೊಸಜೀವನನವನ್ನು ಎದುರಿಸುವ ಆತಂಕ ಎದುರಾಗಿತ್ತು. ಅವನು ಹೇಳಿದ ದಾರಿಯಲ್ಲಿಯೇ ನಡೆಯುತ್ತಾ ಕಷ್ಟನಷ್ಟ, ನೋವುಗಳನ್ನು ಅನುಭವಿಸಿದ್ದು ಹೇಳಿಕೊಳ್ಳುವಂಥಾ ಒಳ್ಳೆಯ ನೆನಪುಗಳಲ್ಲ ಎಂದು ಆಕೆ ಮೌನವಾದಾಗ ನನ್ನಜ್ಜಿ, ಮುತ್ತಜ್ಜಿಯರು ಕೂಡ ಇಂತಹ ಮೌನಗಳನ್ನು ಅನುಭವಿಸುತ್ತಲೇ ಜೀವಿಸಿದರೇನೋ ಎಂದೆನಿಸಿತು. ತನ್ನ ಗಂಡ ತೀರಿಕೊಂಡ ಮೇಲೆಯೆ ತಾನು ಸರಿಯಾಗಿ ಜೀವನವನ್ನು ಬದುಕಲಾರಂಭಿಸಿದ್ದು ಎಂದಾಕೆ ಹೇಳಿದಾಗ ಹೌದಲ್ಲ, ಅದೆಷ್ಟು ಹೆಂಗೆಳೆಯರು ಅವರ ದೀರ್ಘ ಮೌನಗಳಲ್ಲಿ ತಮ್ಮ ಬದುಕುಗಳನ್ನು ಅವಿತಿಟ್ಟು ಬೂದಿ ಮುಚ್ಚಿದ ಕೆಂಡದಂತೆ ಬದುಕುತ್ತಾರೆ ಎಂದು ಅನ್ನಿಸಿತ್ತು.

ನಾನು ಮಾತನಾಡಿಸಿದ ಮತ್ತೊಬ್ಬಾಕೆ ಭಾರಿ ಹೆಂಗಸು. ಸುಮಾರು ಆರಡಿಗಿಂತಲೂ ಉದ್ದದ ದೇಹ, ವಯಸ್ಸಿನ ಪ್ರಭಾವದಿಂದ ಅರ್ಧ ಬಾಗಿತ್ತು. ನಿಧಾನವಾಗಿ ನಡೆದಾಡಲು ಆಕೆ ಸಂಪೂರ್ಣವಾಗಿ walker ಮೇಲೆ ಅವಲಂಬಿತರಾಗಿದ್ದರು. ಈಕೆಗೆ ಬ್ರಹ್ಮ ಕಿವುಡು. ಒಳ್ಳೆಯ ಹಿಯರಿಂಗ್ ಏಡ್ಸ್ ಕೊಳ್ಳಲು ಮಹಾನ್ ಜಿಪುಣತನ. ತನ್ನಲ್ಲಿರುವ ದುಡ್ಡು ಖರ್ಚಾಗಿಬಿಟ್ಟರೆ ಎಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಕಡಿಮೆಯಾಗಿಬಿಡುತ್ತದೋ ಎಂಬ ಜಿಜ್ಞಾಸೆ. ಈಕೆಯ ಗಂಡ ಸೇನೆಯಲ್ಲಿದ್ದವ; ಜೊತೆಗೆ ಈಕೆ ಕೂಡ ಸೇನೆಯಲ್ಲಿದ್ದು ಟ್ರಕ್ ಚಲಾಯಿಸುವ ಕುಶಲ ಡ್ರೈವರ್ ಆಗಿದ್ದಾಕೆ. ಸೇನಾ ತುಕಡಿ ಸಾಮಗ್ರಿಗಳ ಜೊತೆಗೆ ಆಗಾಗ ತನ್ನ ಟ್ರಕ್ಕಿನಲ್ಲಿ ಬಾಂಬುಗಳನ್ನು ಕೊಂಡೊಯ್ಯುತ್ತಿದ್ದ ಈಕೆಗೆ ರೈಫಲ್ ಹಿಡಿದು ಗುಂಡು ಹೊಡೆಯುವುದರಲ್ಲಿ ತರಬೇತಿಯಿತ್ತು. ತನ್ನ ಗಂಡ ಅಂಥಾ ಸುಂದರಾಂಗನೂ ಅಥವಾ ಒಳ್ಳೆಯವನೂ ಆಗಿರಲಿಲ್ಲ ಬಿಡು ಎಂದು ಈ ಮಹಿಳೆ ಜೋರು ಕಂಠದಲ್ಲಿ ಅದೇ ಗುಂಡು ಹೊಡೆದಂತೆ ಹೇಳಿದ್ದಳು. ಒಮ್ಮೊಮ್ಮೆ ಅವನೇ ತನ್ನ ನಿಜ ಶತ್ರು ಎಂಬಂತೆ ಆಕೆಗೆ ಕನಸು ಬೀಳುತ್ತಿತ್ತು. ತಕ್ಷಣ ರೈಫಲ್ ಹಿಡಿದು ಅದೇ ನಿದ್ರಾವಸ್ಥೆಯಲ್ಲಿಯೇ ಎದ್ದು ನಿಲ್ಲುತ್ತಿದ್ದಳಂತೆ. ಬಹು ಕಾಲ ಇದು ಆಕೆಯನ್ನು ಕಾಡಿತ್ತು. ಆತ್ಮಹತ್ಯೆಗೆ ಪ್ರಯತ್ನಿಸಿ ಎಳೆಮಕ್ಕಳ ಸಹಿತ ಆಸ್ಪತ್ರೆ ಸೇರಿದ್ದಳಂತೆ.

ಒಂದು ನಡುರಾತ್ರಿ ಆಸ್ಪತ್ರೆ ವಾರ್ಡಿನಿಂದ ಹೊರಬಿದ್ದು ಕಟ್ಟಡದ ಹಿಂಬದಿಯಲ್ಲಿ ಇದ್ದ ತನ್ನ ಕಾರಿನಲ್ಲಿ ಅಡಗಿಸಿದ್ದ ರೈಫಲ್ ತೆಗೆದು ಅದನ್ನು ತನ್ನ ಕುತ್ತಿಗೆಗೆ ಗುರಿಮಾಡಿ ಕಾರಿನಲ್ಲಿ ಕುಳಿತಿದ್ದ ಆ ತಾಯಿ ತನ್ನ ಮಕ್ಕಳನ್ನು ನೆನೆದು ರೈಫಲ್ ಮುಚ್ಚಿಟ್ಟು ವಾಪಸ್ ಆಸ್ಪತ್ರೆ ವಾರ್ಡಿಗೆ ಮರಳಿದ್ದಳು. ಒಂದಿಷ್ಟೂ ಕೂಡ ಕಡಿಮೆಯಾಗದ ಅದೇ ಕಕ್ಕುಲಾತಿ ಈಗಲೂ ಆಕೆಯಲ್ಲಿ ಒಸರುತ್ತಿತ್ತು. ಗಂಡನೆಂಬುವವನೊಬ್ಬ ಇದ್ದ, ಆದರೆ ಈಗ ಇನ್ನೂ ಇರುವುದು ಈ ತಾಯಿ ಮತ್ತು ಆಕೆಯ ಮಕ್ಕಳು, ಮೊಮ್ಮಕ್ಕಳು ಎಂದು ಈ ಎಂಭತ್ತೊಂಭತ್ತು ವಯಸ್ಸಿನ ಆಸ್ಟ್ರೇಲಿಯನ್ ಮಹಿಳೆ ಹೇಳಿದಾಗ ಪ್ರಪಂಚದ ಎಲ್ಲಾ ಮಹಿಳೆಯರೂ ಆ ಗೌರವದಡಿ ಬಂದು ಸೇರಿದ್ದರು.