ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂಧಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು. 
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಷರ್ಲಿ ಮತ್ತು ಜೆನ್ನಿ ಎಂಬ ಇಬ್ಬರು ಸ್ನೇಹಿತೆಯರ ಕತೆ

 

ಅಮೆರಿಕದ ಟೆನೆಸ್ಸೀ ರಾಜ್ಯದಲ್ಲಿ ಅಭಯಧಾಮವೊಂದಿದೆ. ಅದನ್ನು ಅನಾಥಾಲಯ ಅಥವಾ ವೃದ್ಧಾಶ್ರಮವೆಂದೂ ಕರೆಯಬಹುದು. ೧೯೯೯ರಲ್ಲಿ, ಆ ಅಭಯಧಾಮಕ್ಕೆ ಷರ್ಲಿ ಎಂಬ ೫೧ ವರ್ಷದ ಮಧ್ಯ ವಯಸ್ಸಿನ ನಿವೃತ್ತ ಸರ್ಕಸ್ ಕಲಾವಿದೆ ಹೊಸದಾಗಿ ಸೇರ್ಪಡೆಯಾದಳು. ಇಂಡೋನೇಷಿಯಾದ ಸುಮಾತ್ರದಲ್ಲಿ ಹುಟ್ಟಿದ್ದ ಷರ್ಲಿ, ಹಲವಾರು ದಶಕಗಳ ಕಾಲ ಅಮೆರಿಕದ ಸರ್ಕಸ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಳು. ಐದು ವರ್ಷ ತುಂಬುವ ಮುನ್ನವೇ ತನ್ನ ಕುಟುಂಬದಿಂದ ದೂರವಾಗಿ, ಸಮುದ್ರಯಾನ ಮಾಡಿ ಹಲವಾರು ದೇಶಗಳನ್ನು ಸುತ್ತಿದ್ದಳು; ಸರ್ಕಸ್ ರಿಂಗಿನ ಒಳಗೂ-ಹೊರಗೂ ಹಲವಾರು ಸಾಹಸಗಳನ್ನು ಮಾಡಿದ್ದಳು. ಹಲವಾರು ಥ್ರಿಲ್ಲಿಂಗ್ ಕ್ಷಣಗಳನ್ನು ಅನುಭವಿಸಿದ್ದಳು.

ಕ್ಯೂಬಾದಲ್ಲಿ, ೧೯೫೮ರಲ್ಲಿ, ಕಮ್ಯೂನಿಸ್ಟ್ ಕ್ರಾಂತಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಅಧಿಕಾರಕ್ಕೆ ಬಂದಾಗ, ತನ್ನ ಸರ್ಕಸ್ ಕಂಪೆನಿಯೊಂದಿಗೆ ಷರ್ಲಿ ಕ್ಯೂಬಾದಲ್ಲಿದ್ದಳು. ಆ ಸರ್ಕಸ್ ಕಂಪೆನಿ ಕ್ಯಾಸ್ಟ್ರೋನ ಬದ್ಧವೈರಿಯಾದ ಅಮೆರಿಕಾ ದೇಶದಾದ್ದರಿಂದ, ಕೆಲವು ವಾರಗಳ ಕಾಲ ತನ್ನ ಸಹ ಕಲಾವಿದರೊಂದಿಗೆ ಅವಳೂ ಸಹ ಕ್ಯೂಬಾದಲ್ಲಿಯೇ ಬಂಧನವನ್ನೂ ಅನುಭವಿಸಿದ್ದಳು. ಆಗ ಅವಳಿಗೆ ಇನ್ನೂ ಹತ್ತು ವರ್ಷ ವಯಸ್ಸು.

ಅವಳಿಗೆ ಹದಿನೈದು ವರ್ಷವಿದ್ದಾಗ, ಅವಳು ಪ್ರಯಾಣ ಮಾಡುತ್ತಿದ್ದ ಹಡಗಿಗೆ ಬೆಂಕಿ ಹತ್ತಿಕೊಂಡು ಆ ಹಡಗು ನೀರುಪಾಲಾಯಿತು. ಷರ್ಲಿ ಬದುಕುಳಿದಳಾದರೂ, ಅವಳ ಕಾಲುಗಳಿಗೆ ಮತ್ತು ಬೆನ್ನಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾದವು. ಅವಳ ಬಲಗಿವಿಯ ಗಮನಾರ್ಹ ಭಾಗ ಬೆಂಕಿಗೆ ಸುಟ್ಟು ಕರಕಲಾಯಿತು. ಆದರೂ, ಅವಳ ಸರ್ಕಸ್ ಷೋ ಮಾತ್ರ ನಿಲ್ಲಲಿಲ್ಲ.

ಷರ್ಲಿ ಒಂದು ಹೆಣ್ಣಾನೆ. ಅವಳಿಗೆ ಇಪ್ಪತ್ತೇಳು ವರ್ಷವಾಗಿದ್ದಾಗ, ಇನ್ನೊಂದು ಆನೆಯೊಂದಿಗಿನ ಕಲಹದಲ್ಲಿ, ಅವಳ ಕಾಲು ಮುರಿದು, ನಡೆಯುವುದೇ ಕಷ್ಟವಾಗಿ ಸರ್ಕಸ್‌ನಲ್ಲಿ ಕೆಲಸ ಮಾಡುವುದು ಅಸಾಧ್ಯವಾಯಿತು. ಸರ್ಕಸ್ ಕಂಪೆನಿಯ ಮಾಲೀಕರು ಅವಳನ್ನು ಅಮೆರಿಕದ ಲೂಸಿಯಾನ ರಾಜ್ಯದ ಜ಼ೂ ಒಂದಕ್ಕೆ ಸಾಗಹಾಕಿದರು. ಮುಂದಿನ ೨೨ರ ವರ್ಷಗಳ ಕಾಲ, ಆ ಜ಼ೂನಲ್ಲಿ ಷರ್ಲಿಯೊಬ್ಬಳೇ ಏಕಾಂಗಿ ಆನೆಯಾಗಿ ಜೀವನ ನಡೆಸಿದಳು.

(ಷರ್ಲಿ)

ಷರ್ಲಿ, ಟೆನೆಸ್ಸಿಯ ಆನೆಗಳ ಅಭಯಧಾಮಕ್ಕೆ ಬಂದಾಗ, ಆ ಧಾಮದ ರೀತಿ-ರಿವಾಜುಗಳನ್ನು ಹೊಸದಾಗಿ ಆಗಮಿಸುವವರಿಗೆ ಪರಿಚಯಿಸಲು ನೇಮಕವಾಗಿದ್ದುದು ತಾರಾ ಎಂಬ ಇನ್ನೊಂದು ಹೆಣ್ಣಾನೆ. ತಾರಾ, ಅತ್ಯಂತ ಸ್ನೇಹಪರಳೆಂದು ಹೆಸರಾಗಿದ್ದವಳು. ಅವಳ ಈ ಸ್ನೇಹಪರ ಗುಣದಿಂದಾಗಿಯೇ, ಹೊಸಬರನ್ನು ಆ ಧಾಮಕ್ಕೆ ಸ್ವಾಗತಿಸುವ ಜವಬ್ದಾರಿಯನ್ನು ಅವಳಿಗೆ ನೀಡಲಾಗಿತ್ತು.

ಜುಲೈ ೬, ೧೯೯೯ರಂದು ಷರ್ಲಿ, ಆ ಆಭಯಧಾಮಕ್ಕೆ ಕಾಲಿಟ್ಟಾಗ, ಅದರ ಮೇಲ್ವಿಚಾರಕರು ಕುತೂಹಲದಿಂದ ಇವೆರಡು ಆನೆಗಳ ಮೊಟ್ಟ ಮೊದಲ ಒಡನಾಟವನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲು ಮಾಡಿಕೊಳ್ಳಲು ಆರಂಭಿಸಿದರು. ತಾರಾ ತನ್ನ ಎಂದಿನ ಸ್ನೇಹಪರತೆಯಿಂದ, ತನ್ನ ಸೊಂಡಿಲನ್ನು ಚಾಚಿ ಷರ್ಲಿಯನ್ನು ಸ್ವಾಗತಿಸಿದಳು. ಎರಡು ದಶಕಗಳ ಕಾಲ ಇನ್ನೊಂದು ಆನೆಯನ್ನೇ ಕಾಣದಿದ್ದ ಷರ್ಲಿ, ತಾರಾಳ ಸ್ನೇಹಕ್ಕೆ ತಾನೂ ಅಷ್ಟೇ ಸ್ನೇಹಪೂರ್ವಕವಾಗಿ ಸ್ಪಂದಿಸಿದಳು. ಎರಡೂ ಆನೆಗಳು ತಮ್ಮ ಸೊಂಡಿಲುಗಳನ್ನು ಹೆಣೆದು ಸಣ್ಣ ದನಿಗಳಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದವು. ಕೆಲ ಗಳಿಗೆಗಳ ನಂತರ, ಷರ್ಲಿ, ತನ್ನ ಸರ್ಕಸ್ ಜೀವನದಲ್ಲಿ ಆದ ಪ್ರತಿಯೊಂದು ಗಾಯವನ್ನೂ ತಾರಾಳಿಗೆ ತೋರಿಸಿದಳು. ಆ ಗಾಯಗಳನ್ನು ತಾರಾ ತನ್ನ ಸೊಂಡಿಲಿನಿಂದ ನವಿರಾಗಿ ಸವರಿ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಿದಳು. ಅವರೀರ್ವರೂ ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದರೂ, ಬಹು ಬೇಗ ಆಪ್ತ ಸ್ನೇಹಿತೆಯರಾದರು.

ಆ ದಿನ ಸಂಜೆಯ ವೇಳೆಗೆ, ಜೆನ್ನಿ ಎಂಬ ಇನ್ನೊಂದು ಆನೆಯನ್ನು ಷರ್ಲಿ ಇದ್ದ ಲಾಯಕ್ಕೆ ಕರೆತರಲಾಯಿತು. ಜೆನ್ನಿ ಆ ಆಶ್ರಮದ ಹಳೆಯ ಆನೆ. ಜೆನ್ನಿ, ಲಾಯದೊಳಗೆ ಬಂದೊಡನೆಯೇ ಯಾವುದೋ ಒಂದು ಧಾವಂತದಿಂದ ವಿಪರೀತವಾಗಿ ಚಡಪಡಿಸತೊಡಗಿದಳು. ತಾರಾ ಮತ್ತು ಆಶ್ರಮದ ಇನ್ನಿತರ ಆನೆಗಳಲ್ಲಿ ಕಾಣದಿದ್ದ ಒಂದು ಭಾವ ಜೆನ್ನಿಯಲ್ಲಿತ್ತು.

(ತಾರಾ)

ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು. ಗೇಟುಗಳನ್ನು ತಳ್ಳಿಯಾದರೂ ಸರಿ, ದಾಟಿಯಾದರೂ ಸರಿ, ಒಂದೇ ಸ್ಟಾಲ್‌ನಲ್ಲಿ ಇರಬೇಕೆಂದು ಎರಡೂ ಆನೆಗಳು ಶತಾಯಗತಾಯ ಯತ್ನಿಸುತ್ತಿರುವುದು ಎಲ್ಲರಿಗೂ ತಿಳಿಯಿತು. ಆ ಅಭಯಾಶ್ರಮದ ಸಂಸ್ಥಾಪಕಿ ಕೆರೋಲ್ ಬಕ್ಲಿ ಹೇಳುವಂತೆ, “ಅಂತಹ ಭಾವೋದ್ರೇಕ, ತಲ್ಲಣದ ಆಳವನ್ನು ನಾನೆಂದೂ ಕಂಡಿಲ್ಲ”.

ಆಶ್ರಮದ ಮೇಲ್ವಿಚಾರಕರು, ಗೇಟುಗಳನ್ನು ತೆರೆದು, ಷರ್ಲಿ ಮತ್ತು ಜೆನ್ನಿ ಒಟ್ಟಿಗೆ ಇರಲು ಬಿಟ್ಟರು. ಎರಡೂ ಆನೆಗಳು, ತಮ್ಮ ಸೊಂಡಿಲುಗಳನ್ನು ಸೇರಿಸುತ್ತಾ, ಒಬ್ಬರ ಬೆನ್ನನ್ನು ಇನ್ನೊಬ್ಬರು ಸವರುತ್ತಾ, ಮೈ ಉಜ್ಜುತ್ತಾ, ಮೆಲು ದನಿಯಲ್ಲಿ ಉಸಿರಲು ಪ್ರಾರಂಭಿಸಿದರು.

*****

ಜೆನ್ನಿ, ಷರ್ಲಿಗಿಂತ ೨೪ ವರ್ಷ ಕಿರಿಯಳು. ಅವಳೂ ಸಹ ಸುಮಾತ್ರದವಳೇ. ಷರ್ಲಿ ಅಮೆರಿಕಾಕ್ಕೆ ಬಂದ ಎರಡು ದಶಕಗಳ ನಂತರ ಜೆನ್ನಿಯನ್ನು ಅಮೆರಿಕಕ್ಕೆ ಕರೆತರಲಾಗಿತ್ತು. ಅಮೆರಿಕಕ್ಕೆ ಬಂದ ಹೊಸದರಲ್ಲಿ, ಷರ್ಲಿಯಂತೆಯೇ ಅವಳನ್ನೂ ಸರ್ಕಸ್ಸಿಗೆ ಹಾಕಲಾಗಿತ್ತು. ಆದರೆ, ಸರ್ಕಸ್ ಮಾಡುವ ಮನಸ್ಥಿತಿ ಜೆನ್ನಿಯದ್ದಾಗಿರಲಿಲ್ಲ. ಸರ್ಕಸ್ ವಿದ್ಯೆಗಳನ್ನು ಕಲಿಯಲೊಪ್ಪದ ಅವಳನ್ನು, ಸರ್ಕಸ್ ಕಂಪೆನಿಯವರು ಸಂತಾನೋತ್ಪತ್ತಿಯ ಕೇಂದ್ರವೊಂದಕ್ಕೆ ಮಾರಿದರು. ಆ ಕೇಂದ್ರದ ಉದ್ಯಮವೆಂದರೆ, ಆನೆ ಮರಿಗಳನ್ನು ಉತ್ಪಾದಿಸಿ ಸರ್ಕಸ್ ಕಂಪೆನಿಗಳಿಗೆ ಮಾರುವುದು ಅಥವಾ ಜೀತಕ್ಕೆ ಕಳುಹಿಸುವುದು.

*****

ಆನೆಗಳ ಪ್ರಣಯದಲ್ಲಿ ಗಾಂಭೀರ್ಯವೂ ನವಿರೂ ತುಂಬಿದ ಸೌಂದರ್ಯವಿದೆ. ಗಂಡು-ಹೆಣ್ಣಿನ ಜೋಡಿ, ಜನ್ಮದ ಜೋಡಿಗಳಲ್ಲವಾದರೂ, ಆನೆಗಳ ಮಧುಚಂದ್ರದಲ್ಲಿ ಅಂಗಾಂಗಗಳ ಯಾಂತ್ರಿಕವೆನ್ನಿಸಬಹುದಾದ ಕ್ರಿಯೆಗೆ ಮೀರಿದ ಶೃಂಗಾರಭಾವವಿದೆ.

ಗಂಡಾನೆಗಳು ಒಂಟಿ ಸಲಗಗಳಾಗಿಯೋ ಅಥವಾ ಇತರೆ ಗಂಡಾನೆಗಳ ಜೊತೆಗೋ ಸಣ್ಣ-ಸಣ್ಣ ಗುಂಪುಗಳಲ್ಲಿದ್ದರೆ, ಹೆಣ್ಣಾನೆಗಳು ಮಾತ್ರ ತಮ್ಮ ಜೀವನವಿಡೀ ದೊಡ್ಡದೊಂದು ಕುಟುಂಬ-ಪರಿವಾರದಲ್ಲೇ ಇರುತ್ತವೆ. ಹೀಗೆ ಗಂಡು-ಹೆಣ್ಣುಗಳು ಬೇರ್ಪಟ್ಟರೂ, ಒಂದರಿಂದ ಇನ್ನೊಂದು ತುಂಬಾ ದೂರವೇನೂ ಹೋಗುವುದಿಲ್ಲ. ಒಂದಕ್ಕೊಂದು ಸಂದೇಶ ಕಳುಹಿಸಬಹುದಾದಷ್ಟು ಹತ್ತಿರದಲ್ಲಿಯೇ ಇರುತ್ತವೆ.

ಹೆಣ್ಣಾನೆ ಪ್ರೌಢಾವಸ್ಥೆ ತಲುಪಿದ ಮೇಲೆ, ವರ್ಷದ ಕೆಲ ದಿನಗಳು ಮಾತ್ರ ಅವಳಿಗೆ ಗರ್ಭಧಾರಣೆಯ ಸಾಧ್ಯತೆ ಇರುತ್ತದೆ. ಆ ದಿನಗಳಲ್ಲಿ, ಅವಳು ತನ್ನ ಗುಂಪಿನಿಂದ ಹೊರ ಹೋಗುತ್ತಾಳೆ. ಅವಳಿಂದ ಹೊರ ಹೊಮ್ಮುವ ಗಂಧ, “ಮಸ್ತ್”ನಲ್ಲಿರುವ ಗಂಡಾನೆಗಳನ್ನು ಆಕರ್ಷಿಸುತ್ತದೆ. ಆ ಗಂಡಾನೆಗಳು ಅವಳ ಹಿಂದೆ ಬರುತ್ತವೆ. ಆನೆಗಳನ್ನು ಅಧ್ಯಯನ ಮಾಡುವ ತಜ್ಞರು ಹೇಳುವಂತೆ, ತನ್ನನ್ನು ಯಾರು ಕೂಡಬೇಕೆಂದು ಹೆಣ್ಣಾನೆಯೇ ನಿರ್ಧರಿಸುತ್ತದಂತೆ. ತನ್ನ ತಲೆ ಎತ್ತಿ, ಸಣ್ಣದಾಗಿ ಘೀಳಿಡುತ್ತಾ ಆಹ್ವಾನ ನೀಡುವ ಹೆಣ್ಣಾನೆ, ತನಗೆ ಬೇಕಾದ ಜೊತೆಗಾರ ಸಿಕ್ಕಾಗ ಅವನೊಂದಿಗೆ ಏಕಾಂತಕ್ಕೆ ಹೋಗುತ್ತದೆ. ಆನೆಗಳ ಲೈಂಗಿಕ ಕ್ರೀಡೆ ಕೇವಲ ಎರಡೇ ನಿಮಿಷಗಳಲ್ಲಿ ಮುಗಿಯುವುದಾದರೂ, ಅದಕ್ಕೆ ಮುನ್ನ ಮತ್ತು ನಂತರವೂ ಎರಡು-ಮೂರು ದಿನಗಳ ಕಾಲ ಅವು ಶೃಂಗಾರ ಭಾವದಲ್ಲಿಯೇ ಇರುತ್ತವಂತೆ. ಆನೆಗಳ ಈ ಮಧುಚಂದ್ರ ಹಲವು ವಾರಗಳ ಕಾಲ ನಡೆಯುತ್ತವೆ.

(ಷರ್ಲಿ)

ಅವಳಿಗೆ ಇಪ್ಪತ್ತೇಳು ವರ್ಷವಾಗಿದ್ದಾಗ, ಇನ್ನೊಂದು ಆನೆಯೊಂದಿಗಿನ ಕಲಹದಲ್ಲಿ, ಅವಳ ಕಾಲು ಮುರಿದು, ನಡೆಯುವುದೇ ಕಷ್ಟವಾಗಿ ಸರ್ಕಸ್‌ನಲ್ಲಿ ಕೆಲಸ ಮಾಡುವುದು ಅಸಾಧ್ಯವಾಯಿತು. ಸರ್ಕಸ್ ಕಂಪೆನಿಯ ಮಾಲೀಕರು ಅವಳನ್ನು ಅಮೆರಿಕದ ಲೂಸಿಯಾನ ರಾಜ್ಯದ ಜ಼ೂ ಒಂದಕ್ಕೆ ಸಾಗಹಾಕಿದರು.

ಆದರೆ, ಜೆನ್ನಿ ಇಂತಹ ಆನಂದವನ್ನೆಂದೂ ಅನುಭವಿಸಲಿಲ್ಲ. ಅವಳು, ಆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಕೇವಲ ಆನೆ ಮರಿಗಳ ಸೃಷ್ಟಿಯ ಯಂತ್ರವಾಗಬೇಕಾಯಿತು. ಅದೂ ಹೆಚ್ಚು ಕಾಲ ನಡೆಯಲಿಲ್ಲ. ಮದ ಗಜವೊಂದರ ಜೊತೆಗೆ ಕೂಡುವಾಗ, ಒಮ್ಮೆ, ಅವಳ ಕಾಲೊಂದು ಮುರಿಯಿತು. ಆ ಕೇಂದ್ರದ ಮೇಲ್ವಿಚಾರಕರು, ಮುರಿದ ಕಾಲಿಗೆ ಚಿಕಿತ್ಸೆ ನೀಡುವುದರ ಬದಲು, ಕೇವಲ ನೋವು ನಿವಾರಕಗಳನ್ನೇ ನೀಡುತ್ತಾ ಬಂದರು. ಆದರೆ, ಅವಳಿಂದ ಆನೆಗಳನ್ನು ಸೃಷ್ಟಿಸುವ ಪ್ರಯತ್ನಗಳಂತೂ ನಿಲ್ಲಲಿಲ್ಲ. ಇಂತಹ ಎಡೆಬಿಡದ ಪ್ರಯತ್ನಗಳಿಂದ ಅವಳು ತಾಯಿಯಾಗಲಿಲ್ಲ. ಬದಲಿಗೆ ಒಂದು ಕುಂಟುವ ಆನೆಯಾದಳು. ಅವಳನ್ನು “Useless” ಎಂದು ಘೋಷಿಸಿದ ಆ ಸಂತಾನೋತ್ಪತ್ತಿ ಕೇಂದ್ರದವರು, ಅವಳನ್ನು ಮತ್ತೊಮ್ಮೆ ಇನ್ನೊಂದು ಸರ್ಕಸ್ ಕಂಪೆನಿಗೆ ಮಾರಿದರು. ಆದರೆ, ಕಾಲು ಮುರಿದಿದ್ದರಿಂದ, ಸರ್ಕಸ್ ಮಾಡುವುದಿರಲಿ, ಅವಳನ್ನು ಕೊಂಡೊಯ್ಯುತ್ತಿದ್ದ ಟ್ರೇಲರ್‌ನಿಂದ ಹತ್ತಿ-ಇಳಿಯುವುದೇ ಅವಳಿಗೆ ಕಷ್ಟವಾಗಿತ್ತು. ಹೀಗಾಗಿ, ಅವಳು ಸದಾಕಾಲ ತನ್ನ ಸಣ್ಣ ಟ್ರೇಲರ್‌ನಲ್ಲೇ ಇರುವಂತಾಯಿತು.

ಸರ್ಕಸ್‌ನವರಿಗೆ, ತನ್ನ ಟ್ರೇಲರ್‌ನಿಂದ ಇಳಿಯಲೂ ತಿಣುಕಾಡುವ ಕುಂಟ ಆನೆಯೊಂದರಿಂದ ಪ್ರಯೋಜನವಾದರೂ ಏನು?! ಅವರು, ಜೆನ್ನಿಯನ್ನು, ಅಮೆರಿಕದ ಲಾಸ್ ವೇಗಸ್ ನಗರದ ಅನಾಥ ಮೃಗಗಳ ಕೇಂದ್ರದಲ್ಲಿ ಬಿಟ್ಟುಹೋದರು. ಆದರೆ, ಆ ಕೇಂದ್ರದಲ್ಲಿ, ಆನೆಯೊಂದನ್ನು – ಅದರಲ್ಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೆನ್ನಿಯಂತಹ ಆನೆಯೊಂದನ್ನು – ಸಲಹಲು ಬೇಕಿದ್ದ ತಜ್ಞತೆಯಾಗಲೀ, ಸೌಕರ್ಯಗಳಾಗಲೀ ಇರಲಿಲ್ಲ. ಅವಳ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿತು. ಈ ಸಮಯದಲ್ಲಿಯೇ, ಅಮೆರಿಕದ ಜನಪ್ರಿಯ ಟಿ.ವಿ. ಕಾರ್ಯಕ್ರಮ “20/20”ಯಲ್ಲಿ ಬಂಧಿತ ಆನೆಗಳ ಪರಿಸ್ಥಿತಿಯ ಬಗೆಗೆ ಒಂದು ಎಪಿಸೋಡ್ ಪ್ರಸಾರವಾಯಿತು. ಅದರಲ್ಲಿ ಜೆನ್ನಿಯ ಕತೆಯೂ ಇತ್ತು. ಇದು, ಅವಳಿಗೆ ವರದಾನವಾಯಿತು. ಅವಳ ಇರುವಿಕೆಗೆ ಸೂಕ್ತವಾದ ಸ್ಥಳದ ಹುಡುಕಾಟ ಪ್ರಾರಂಭವಾಯಿತು.

ಕೊನೆಗೆ, ೧೯೯೬ರ ಸೆಪ್ಟೆಂಬರಿನಲ್ಲಿ, ಜೆನ್ನಿಯನ್ನು ಟೆನೆಸ್ಸಿಯಲ್ಲಿನ ಆನೆಗಳ ಅಭಯಧಾಮಕ್ಕೆ ಕಳುಹಿಸಲಾಯಿತು. ಅಲ್ಲಿಗೆ ಹೋದ ಮೇಲೆ, ಅವಳ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆಯಾಗುತ್ತಾ ಬಂದಿತು. ಹಲವು ವರ್ಷಗಳ ಕಾಲ ಕೃಷ ದೇಹಿಯಾಗಿದ್ದ ಅವಳು ಕೊನೆಗೂ ಕೊಂಚ ಮಟ್ಟಿಗೆ ದಷ್ಟ-ಪುಷ್ಟವಾಗತೊಡಗಿದಳು.

*****

ಜೆನ್ನಿ, ಆ ಅಭಯಧಾಮಕ್ಕೆ ಬಂದ ಮೂರು ವರ್ಷಗಳ ನಂತರ, ಷರ್ಲಿ ಬಂದಳು. ಅವಳು ಬಂದ ದಿನ ಸಂಜೆಯೇ, ತಾವಿಬ್ಬರೂ ಒಂದೇ ಸ್ಟಾಲಿನಲ್ಲಿ ಇರಬೇಕೆಂದು ಆ ಅನೆಗಳು ಅಷ್ಟೊಂದು ಹಠ ಹಿಡಿದದ್ದು ಏತಕ್ಕೆ?!

ಆ ಅಭಯಧಾಮದ ಮೇಲ್ವಿಚಾರಕರು, ಷರ್ಲಿ ಮತ್ತು ಜೆನ್ನಿಯರ ಜೀವನ ಚರಿತ್ರೆಯ ಪುಟಗಳನ್ನು ಕೊಂಚ ಕೂಲಂಕುಶವಾಗಿ ಪರಿಶೀಲಿಸಿದರು. ಒಂದು ಕುತೂಹಲಕಾರಿ ಸಂಗತಿ ಹೊರಬಿತ್ತು. ಸುಮಾರು ೨೩ ವರ್ಷಗಳ ಹಿಂದೆ, ಕೆಲ ತಿಂಗಳ ಕಾಲ, ಅವರಿಬ್ಬರೂ ಒಂದೇ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ನಂತರದಲ್ಲಿ, ಅವರಿಬ್ಬರ ಜೀವನದ ಪಥಗಳು ಬೇರೆ-ಬೇರೆಯಾಗೇ ಇದ್ದವು. ಜುಲೈ ೬, ೧೯೯೯ರ ಆ ಬೇಸಗೆಯ ದಿನದ ಸಂಜೆಯವರೆಗೆ.

ಆ ದಿನ ಮತ್ತೊಮ್ಮೆ ಕಲೆತ ಆ ಗೆಳತಿಯರು ಇನ್ನುಳಿದ ತಮ್ಮ ಜೀವನವನ್ನು ಪ್ರತಿ ಕ್ಷಣವೂ ಒಟ್ಟಿಗೆ ಕಳೆದರು. ಆ ಅಭಯಧಾಮದ ಮೇಲ್ವಿಚಾರಕರು ಹೇಳುವಂತೆ, ಆ ಸಂಜೆಯಿಂದ ಅವರೀರ್ವರನ್ನು ಬೇರ್ಪಡಿಸಲು ಸಾಧ್ಯವೇ ಇರಲಿಲ್ಲ. ವಯಸ್ಸಿನಲ್ಲಿ ಎರಡು ದಶಕಗಳ ಅಂತರವಿದ್ದ ಅವರಿಬ್ಬರ ಸಂಬಂಧ ತಾಯಿ-ಮಗಳ ಸಂಬಂಧದಂತೆ ಇತ್ತು ಎನ್ನುತ್ತಾರೆ ಅವರು. ತನ್ನ ಅಲ್ಪ ಜೀವನಾವಧಿಯಲ್ಲಿಯೇ ನಾನಾ ಬವಣೆಗಳನ್ನು ಅನುಭವಿಸಿ ಕುಂಟತನದೊಂದಿಗೆ ವಾಸಿ ಮಾಡಲಾಗದ ಇತರೆ ಅನಾರೋಗ್ಯಗಳನ್ನೂ ಅನುಭವಿಸುತ್ತಿದ್ದ ಜೆನ್ನಿಗೆ, ಷರ್ಲಿ ತಾಯಿಯಂತೆ ಸದಾ ಹತ್ತಿರವಿದ್ದು ಶುಶ್ರೂಷೆ ಮಾಡಿದಳು. ಇಡೀ ಪ್ರಪಂಚದಲ್ಲಿ ಇನ್ನಾರನ್ನೂ ನಂಬದೆ, ತನ್ನ ಅಮ್ಮನಲ್ಲಷ್ಟೇ ವಿಶ್ವಾಸವಿಟ್ಟು ಸದಾಕಾಲ ಅವಳಿಗೆ ಅಂಟಿಕೊಳ್ಳುವ ಮಗುವಿನಂತೆ, ಜೆನ್ನಿ ಸಹ ಷರ್ಲಿಯನ್ನು ಬಿಟ್ಟು ಅರೆ ಕ್ಷಣವೂ ಇರುತ್ತಿರಲಿಲ್ಲ.

ದೀರ್ಘಕಾಲದ ಅನಾರೋಗ್ಯದ ನಂತರ, ೨೦೦೬ ರ ಅಕ್ಟೋಬರಿನಲ್ಲಿ ಜೆನ್ನಿ ಮೃತಳಾದಳು. ಆಗ ಅವಳ ವಯಸ್ಸು ೩೪.

ಷರ್ಲಿ, ೭೩ ವರ್ಷಗಳ ಸುದೀರ್ಘ ಜೀವನ ನಡೆಸಿ, ಈ ವರ್ಷ (೨೦೨೧), ಫೆಬ್ರುವರಿ ೨೨ರಂದು ಮರಣವನ್ನಪ್ಪಿದಳು.

(ಷೆಲ್ಲಿ ಮತ್ತು ಜೆನ್ನಿ)

ಕನ್ನಡಿಯ ಮುಂದೆ ನಿಂತು ಅದರಲ್ಲಿ ಕಾಣಿಸುವುದು ಯಾರೆಂದು ಪ್ರಶ್ನಿಸಿಕೊಂಡರೆ, ಅದಕ್ಕೆ ಸಿಗುವ ಉತ್ತರಗಳು ಎಷ್ಟೋ. ನನ್ನೆಲ್ಲಾ ಜೀವನಾನುಭವಗಳಿಂದ ರೂಪಿತವಾದ ಆ ಭೌತಿಕ ದೇಹ ನನ್ನದೆಂದೆನಿಸಿದರೂ, ಕನ್ನಡಿಯಲ್ಲಿ ಕಾಣುವುದು ನಾನಲ್ಲ. ಅದು, ನನ್ನ ದೇಹದ ಪ್ರತಿಬಿಂಬ ನನ್ನ ದೃಶ್ಯೇಂದ್ರಿಯದ ಮಿತಿಯೊಳಗೆ ನನ್ನ ಮಿದುಳಿನಲ್ಲಿ ನಿರ್ಮಿಸುವ ಒಂದು ರೂಪಕವಷ್ಟೇ.

ಕನ್ನಡಿಯ ಮುಂದೆ ನಿಂತಾಗ, ಆನೆಯೊಂದು ನಿಂತಾಗ ಇದೇ ರೀತಿ ಯೋಚಿಸಬಹುದೇ? ಗೊತ್ತಿಲ್ಲ. ಆದರೆ, ಕನ್ನಡಿಯಲ್ಲಿ ತನ್ನ ಸ್ವರೂಪವನ್ನು ಕಂಡಾಗ, ಅದು ತನ್ನದೇ ರೂಪವೆಂದು ಗುರುತಿಸಬಲ್ಲ ಕೆಲವೇ ಪ್ರಾಣಿಗಳಲ್ಲಿ ಆನೆಯೂ ಒಂದು.

ಆನೆಯೊಂದು ನಿದ್ರಿಸುತ್ತಿದ್ದಾಗ, ಅದಕ್ಕೆ ತಿಳಿಯದಂತೆ, ಅದರ ಹಣೆಯ ಮೇಲೆ ತಿಲಕವಿಟ್ಟು, ಅದು ಎದ್ದ ನಂತರ ಕನ್ನಡಿಯೊಂದನ್ನು ಅದರ ಮುಂದಿಟ್ಟರೆ, “ಅರೆ! ಇದೆಲ್ಲಿಂದ ನನ್ನ ಹಣೆಯ ಮೇಲೆ ಬಂತು?” ಎಂದುಕೊಳ್ಳುತ್ತಾ, ಅದು, ಸೊಂಡಿಲಿನಿಂದ ತನ್ನ ಹಣೆಯ ತಿಲಕವನ್ನು ಪರೀಕ್ಷಿಸಿಕೊಳ್ಳುತ್ತದೆ. (ಆನೆ ಆ ರೀತಿ ಪರೀಕ್ಷಿಸಿಕೊಳ್ಳುವುದು ನಿಜವಾದರೂ, “ಅರೆ! ಇದು ಎಲ್ಲಿಂದ ಬಂತು?” ಎಂಬ ಬೆರುಗು ಆನೆಯ ಮನದಲ್ಲಿ ಮೂಡುತ್ತದೆಯೋ ಇಲ್ಲವೋ ಎನ್ನುವುದು ಬಹುಶಃ ನಮಗೆಂದೂ ತಿಳಿಯಲಾಗದ ರಹಸ್ಯ. ಆನೆಗಳ ಭಾವ ಪ್ರಪಂಚದ ಕುರಿತಾದ ಪ್ರಶ್ನೆಗಳಿಗೆ ವಿಜ್ಞಾನ ಉತ್ತರ ನೀಡಲಾಗದಾಗ, ನಮ್ಮ ಹೃದಯ ನೀಡುವ ಉತ್ತರಗಳು ಸರಿಯಲ್ಲವೆನ್ನುವುದಾದರೂ ಹೇಗೆ?!)

ಆನೆ ಮತ್ತು ತಿಲಕದ ವಿಷಯವನ್ನು ಬರೆಯುವಾಗ, ನನ್ನ ಬಾಲ್ಯದಲ್ಲಿ ಓದಿದ್ದ ಪತ್ರಿಕಾ ವರದಿಗಳು ನೆನಪಿಗೆ ಬಂದವು. ಇದು ಆನೆಗಳ ಭಾವ ಪ್ರಪಂಚದ ವಿಷಯವಲ್ಲ. ನಮ್ಮ ಭಾವ ಪ್ರಪಂಚದ ವಿಷಯ. ಆದರೂ ಅಪ್ರಸ್ತುತವಲ್ಲವೆನಿಸುತ್ತದೆ.

ತಮಿಳುನಾಡಿನ ಕಂಚಿಪುರದ ಶ್ರೀ ದೇವರಾಜಸ್ವಾಮಿ ದೇವಸ್ಥಾನಕ್ಕೆ ಹಲವಾರು ಶತಮಾನಗಳ ಇತಿಹಾಸವಿದೆ. ಚೋಳ, ಪಾಂಡ್ಯ, ಚೇರ, ಕಾಕತೀಯ, ಹೊಯ್ಸಳ, ವಿಜಯನಗರ, ಹೀಗೆ ದಕ್ಷಿಣ ಭಾರತದ ಸುಪ್ರಸಿದ್ಧ ರಾಜ ವಂಶಗಳ ಸಾಮ್ರಾಟರು ಇಲ್ಲಿ ತಮ್ಮ ಶಾಸನಗಳನ್ನು ನಿರ್ಮಿಸಿದ್ದಾರೆ.

ಈ ದೇವಸ್ಥಾನ, ಕ್ರಿ.ಶ.೧೭೯೨ರಲ್ಲಿ, ಶ್ರೀವೈಷ್ಣವ ಸಮುದಾಯದ ಎರಡು ಪಂಗಡಗಳ ನಡುವಿನ ವೈಮನಸ್ಯವೊಂದಕ್ಕೆ ಕಾರಣವಾಯಿತು. “ತೆಂಕಲೈ” ಪಂಗಡದವರು ತಮ್ಮ ಹಣೆಯ ಮೇಲೆ ‘Y’ ಆಕಾರದ ನಾಮ ಹಾಕಿಕೊಂಡರೆ, ‘ವಡಗಲೈ’ ಪಂಗಡದವರು ‘U’ ಆಕಾರದ ನಾಮವನ್ನು ಹಾಕಿಕೊಳ್ಳುತ್ತಾರೆ. ಈ ಎರಡು ಪಂಗಡಗಳ ನಡುವಿನ ಈ ಘರ್ಷಣೆ, ನೂರೈವತ್ತು ವರ್ಷಗಳಾದರೂ ಶಮನವಾಗದೆ, ಕೊನೆಗೆ, ೧೯೭೬ರಲ್ಲಿ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿತು. ಈ ಕೇಸಿನ ಕೇಂದ್ರ ಬಿಂದು (‘ನಾಮ’ ‘ಬಿಂದು’ವಲ್ಲವಾದರೂ!), ಯಾರು ಯಾವ ಆಕಾರದ ನಾಮ ಹಾಕಿಕೊಳ್ಳಬೇಕೆಂಬ ವಿಷಯವಲ್ಲ. ಅದು, ಅವರವರಿಗೆ ಬಿಟ್ಟ ವಿಷಯ. ನೂರೈವತ್ತು ವರ್ಷಗಳ ಆ ವಿವಾದ, ದೇವಸ್ಥಾನದ ಆನೆಯ ಹಣೆಗೆ ಯಾವ ಆಕಾರದ ನಾಮ ಹಾಕಬೇಕೆಂಬುದರ ಬಗೆಗೆ! ಹೈ ಕೋರ್ಟ್ ಕೊನೆಗೆ ‘Y’ ನಾಮದ ಪರವಾಗಿ ತೀರ್ಪು ನೀಡಿತು. ಮೊದಲೇ ಹೇಳಿದಂತೆ, ಈ ಕೇಸ್‌ನಲ್ಲಿ ನಿರ್ಧಾರವಾಗಿದ್ದು ಆನೆಯ ಹಣೆಬರಹವಾದರೂ, ಅದು ಆನೆಯ ಕುರಿತು ಏನು ಹೇಳುವುದಿಲ್ಲ. ನೂರೈವತ್ತು ವರ್ಷಗಳ ಈ ವಿವಾದ ನಮ್ಮ ಬಗೆಗೆ ಬಹಳ ಹೇಳುತ್ತದೆ.

ಆನೆಗಳು, ಕೇವಲ ತಮ್ಮ ಸ್ವರೂಪವನ್ನು ಕನ್ನಡಿಯಲ್ಲಿ ಗುರುತಿಸಿಕೊಳ್ಳುವುದಷ್ಟೇ ಅಲ್ಲ, ಇತ್ತೀಚಿನ ಅಧ್ಯಯನಗಳ ಪ್ರಕಾರ, ಅವುಗಳಿಗೆ ತಮ್ಮ ದೇಹದ ಬಗೆಗೆ ಇನ್ನೂ ಮುಂದುವರೆದ ಅರಿವು ಇದ್ದಂತಿದೆ.

ನಮಗೆ, ನಮ್ಮ ದೇಹದ ಬಗೆಗಿನ ಅರಿವು, ಕೇವಲ “ಇದು ನನ್ನ ದೇಹ” ಎಂದಷ್ಟೇ ಅಲ್ಲ, ಈ ಭೌತಿಕ ಪ್ರಪಂಚ ಮತ್ತು ನಮ್ಮ ದೇಹಗಳ ಸಂಬಂಧದ ಅರಿವೂ ನಮಗಿದೆ. ನಾವು ಮಾಡಬೇಕಿರುವ ಕಾರ್ಯಕ್ಕೆ ನಮ್ಮ ದೇಹವೇ ಅಡ್ಡಿಯಾದಾಗ, ಅದು ನಮಗೆ ತಿಳಿಯುತ್ತದೆ. ಉದಾಹರಣೆಗೆ, ಸಣ್ಣ ಚಾಪೆಯೊಂದರ ಮೇಲೆ ನಿಂತಿದ್ದಾಗ, ಅದನ್ನು ಎತ್ತಿ ಕೊಡುವಂತೆ ಯಾರಾದರೂ ಕೇಳಿದಾಗ, ಅದನ್ನು ಎತ್ತಲೆತ್ನಿಸುವ ಮುನ್ನ ನಾವು ಚಾಪೆಯ ಮೇಲಿನಿಂದ ಪಕ್ಕಕ್ಕೆ ಸರಿಯಬೇಕೆಂದು ನಮಗೆ ಯಾರೂ ಕಲಿಸಬೇಕಿಲ್ಲ. ಅಂತಹ ಅರಿವು, ಮನುಷ್ಯರಲ್ಲಿ, ಎರಡು-ಮೂರನೆಯ ವಯಸ್ಸಿನೊಳಗೇ ಬಂದಿರುತ್ತದೆ. ಇದು ಕಲಿತು ತಿಳಿಯುವ ವಿದ್ಯೆಯಲ್ಲ. ಮಿದುಳಿನಲ್ಲಿ ಆಗುವ ಬೆಳವಣಿಗೆಯಿಂದ ಮೂಡುವ ಒಳನೋಟ. ಇಂತಹ ಅರಿವು-ಒಳನೋಟ ಆನೆಗಳಿಗೂ ಇರಬಹುದೆಂದೆನ್ನುತ್ತಿದ್ದಾರೆ ವಿಜ್ಞಾನಿಗಳು.

ಆನೆಗಳ ನೆನಪಿನ ಶಕ್ತಿಯ ಕುರಿತು ಹೊಸದಾಗಿ ಹೇಳಬೇಕಾದ್ದೇನಿಲ್ಲ. ಯಾವುದೋ ಸರ್ಕಸ್ಸಿನ, ಕೆಲವೇ ತಿಂಗಳ ಒಡನಾಟವನ್ನು ದಶಕಗಳ ನಂತರವೂ ಮರೆಯದ ಷರ್ಲಿ-ಜೆನ್ನಿಯರ ಮೈತ್ರಿಗಿಂತ ಇದಕ್ಕೆ ಉತ್ತಮ ಉದಾಹರಣೆ ಬೇಕೆ?!

ನಾವು ನಾವಾಗುವುದು ನಮ್ಮ ಇರುವಿಕೆಯ ಅರಿವು ಮತ್ತು ನಮ್ಮ ಜೀವನಾನುಭವದ ನೆನಪುಗಳಿಂದಲೇ ಅಲ್ಲವೇ?!
ನಮ್ಮೆಲ್ಲಾ ಭಾವಗಳ ಹಿಂದೆ ಕೆಲಸ ಮಾಡುವುದು ಈ ಅರಿವು-ನೆನಪುಗಳೇ ಅಲ್ಲವೇ?!!

ಇವೆರಡೂ ಇರುವಂತಹ ಆನೆಗಳು, ನಾವು ಅನುಭವಿಸುವ ನೋವು, ಪ್ರೀತಿ, ಆನಂದ, ಕೋಪ, ಮಾತ್ಸರ್ಯ,ಶೋಕ, ವಿಷಾದ, ಆತಂಕ, ಏಕಾಂಗಿತನ, boredom, ಪರಕೀಯತೆ, ಇತ್ಯಾದಿ ಭಾವಗಳನ್ನು ತಾವೂ ಅನುಭವಿಸುತ್ತಿರಬಹುದಲ್ಲವೇ?!!!

[ಈ ಲೇಖನದಲ್ಲಿರುವ ಷರ್ಲಿ, ಜೆನ್ನಿ, ತಾರಾ ಸೇರಿದಂತೆ, ಇನ್ನೆಷ್ಟೋ ಆನೆಗಳ ಕತೆ ಮತ್ತು ಫೋಟೋಗಳು ಇಲ್ಲಿವೆ. ಒಮ್ಮೆಯಾದರೂ ಕಣ್ಣಾಡಿಸಿ. ]

(ಮುಂದುವರೆಯುವುದು)