ನನ್ನ ಬದುಕಿನಲ್ಲಿ ಅವ್ವ ಅಪ್ಪ ಆಕಾಶದೆತ್ತರಕ್ಕೆ ನಿಂತವರು. ಅವರೆಂದರೆ ಗೌರವ, ಭಯ. ನಾನು ಗೌರವಿಸುವ ವ್ಯಕ್ತಿಗೆ ಹೀಗೆ ಅನ್ಯಾಯ ಮಾಡಿಬಿಟ್ಟೆನಲ್ಲಾ ಎಂದು ಬೆದರಿದ್ದೆ. ಆದರೂ ಧೈರ್ಯ ತಂದುಕೊಂಡು, ಊರಿಗೆ ಹೋಗಿರು ಎಂದು ಏಕಾಏಕಿ ಹೇಳಿದ, ಮಾತಿನಲ್ಲಿ ಭರವಸೆ ಕಾಣದ ಗೋವಿಂದರೆಡ್ಡಿ ಅವರನ್ನು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ. ಗೋವಿಂದರೆಡ್ಡಿ ಅಂದು ‘ಇಲ್ಲ, ನಾವಿಬ್ಬರೂ ಮದುವೆಯಾಗಲು ಸಾಧ್ಯವಿಲ್ಲ’ ಎಂದು ಹೇಳಿದ ಮೇಲೆ ಮತ್ತೆ ಅವರನ್ನು ಸ್ವೀಕರಿಸುವುದಕ್ಕೆ ಮನಸ್ಸು ಒಪ್ಪುತ್ತದೆಯೇ! ಮನಸ್ಸು ಗಂಟುಗಳನ್ನು ಬಿಚ್ಚಿಕೊಳ್ಳತೊಡಗಿತ್ತು. ನನ್ನ ಈ ನಿರ್ಧಾರಕ್ಕೆ ಸ್ಪಷ್ಟತೆ ಸಿಗುತ್ತಿತ್ತು. ಹೆಣ್ಣು ಗಂಡಿನ ತಿರಸ್ಕಾರವನ್ನು ಮರುಮಾತಾಡದೆ ಸಹಿಸಬೇಕು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೆಂಟನೆಯ ಕಂತು
ಅಪ್ಪನಿಗೆ ಹೇಳದೆ ನಾನು ಹೀಗೆ ಏಕಾಏಕಿ ಹೊರಟುಬಂದಿದ್ದು ಸರಿಯೇ? ನನ್ನ ಯೋಚನೆಯಲ್ಲೇನಾದರೂ ತಪ್ಪೇ ಎಂದು ಗೊಂದಲಕ್ಕೊಳಗಾಗಿದ್ದೆ. ಮನಸ್ಸಿನೊಳಗೆ ಸಾವಿರ ಸಾವಿರ ಗೊಂದಲಗಳು! ಅಪ್ಪ ನನ್ನ ಬಗ್ಗೆ ಏನೆಂದು ಯೋಚಿಸಿಯಾರು ಎಂದು ನೆನೆದೇ ಭಯವಾಗುತ್ತಿತ್ತು. ಹೇಳಿ ಹಗುರಾಗಲಾದರೂ ಯಾರಿದ್ದಾರೆ ನನಗೆ? ಜಗತ್ತು ಖಾಲಿಯೆನಿಸತೊಡಗಿತು. ದಾವಲ್ಸಾಬನಿಗೆ ವಿಷಯ ತಿಳಿಯುತ್ತಿದ್ದಂತೆ ಶೇಕ್ ಚಾಂದ್ ಇದ್ದಲ್ಲಿ ಕರೆದುಕೊಂಡು ಬಂದ. ನಾನು ಮತ್ತೆ ಶೇಕ್ ಚಾಂದ್ ಇಬ್ಬರೇ ಬಸ್ಸು ಹತ್ತಿ ಹೊರಟೆವು. ಮನೆಗೆ ಕರೆದೊಯ್ಯುತ್ತಾರೇನೊ ಎಂದು ಕಾಯುತ್ತಿದ್ದೆ. ನೋಡಿದರೆ ಅಗಸರ ಮನೆಯಲ್ಲಿ ಉಳಿಯಬಿಟ್ಟರು.
ತಂದೆಯನ್ನು ಬಿಟ್ಟು ಬಂದೆನಲ್ಲಾ ಎಂದು ಮನಸ್ಸು ಕೊರಗುತ್ತಲೇ ಇತ್ತು. ನನಗಾಗಿ ಎಲ್ಲವನ್ನೂ ನೀಡಿದವರಿಗೆ ನೋವು ಕೊಡಬಹುದೇ ಎಂದೆಲ್ಲ ಅನಿಸಿತು. ಸರಿ ತಪ್ಪುಗಳನ್ನು ಯೋಚಿಸಿಯೇ ಗೊಂದಲದ ಗೂಡಾಗಿದ್ದೆ. ನಾನೇಕೆ ಇವರನ್ನು ಪ್ರೀತಿಸಿದೆ? ಈ ಪ್ರಶ್ನೆ ಈಗಲೂ ಮೂಡುತ್ತದೆ. ಬಹುಶಃ ರೂಪವೇ ಉತ್ತರವೆನಿಸಿತು. ವಯಸ್ಸಿನ ಕಣ್ಣು ಎದುರಿಗಿದ್ದದ್ದನ್ನು ಮಾತ್ರ ಕಾಣಿಸುತ್ತದೆ. ಗೋವಿಂದರೆಡ್ಡಿ ನೋಡುವುದಕ್ಕೆ ಅಷ್ಟು ಸ್ಫುರದ್ರೂಪಿ ಅಲ್ಲ; ಸ್ವಭಾವ ಮಾತ್ರ ಅಪ್ಪಟ ಬಂಗಾರವೇ. ಆದರೆ ಮನಸ್ಸು ಬಯಸುತ್ತಿದ್ದದ್ದು ಸೌಂದರ್ಯ ಮಾತ್ರ. ವಯಸ್ಸು ಇಬ್ಬರಿಗೂ ಹೆಚ್ಚಾಗಿದ್ದರೂ ಗೋವಿಂದರೆಡ್ಡಿ ಅವರಲ್ಲಿ ಮಾತ್ರ ಅದು ಕಾಣುತ್ತಿತ್ತು. ಶೇಕ್ ಚಾಂದ್ ಅವರನ್ನೇ ಬಯಸಲು ಮಾತು ಕೊಟ್ಟಿದ್ದು ಒಂದು ಕಾರಣವಾದರೆ, ಮನಸ್ಸು ಬಯಸುತ್ತಿದ್ದದ್ದು ಇನ್ನೊಂದು.
ಸರಿ, ನಾನೇನೊ ಹೊರಟು ಬಂದೆ. ಊರಿನಲ್ಲಿ ತಂದೆ ನನ್ನ ಬರುವಿಕೆಯನ್ನೇ ಕಾಯುತ್ತಿದ್ದರು. ಶೌಚಕ್ಕೆಂದು ತಂಬಿಗೆ ಹಿಡಿದು ಹೊರಟಿದ್ದನ್ನು ತಂದೆ ಮತ್ತವರು ನೋಡಿದ್ದರು. ಇಷ್ಟು ಹೊತ್ತು ಕಳೆದರೂ ಬರದೇ ಇದ್ದದ್ದನ್ನು ಕಂಡು, ಏನೋ ಆಗಿರಬಹುದೆಂಬ ಸುಳಿವಂತೂ ಅವರಿಗೆ ಸಿಕ್ಕಿತು. ಅಪ್ಪ ಯೋಚಿಸದೇ ಇರುತ್ತಾರೆಯೇ? ಒಂದಷ್ಟು ದಿನಗಳಿಂದ ನನ್ನ ವರ್ತನೆಗಳಲ್ಲಾದ ಬದಲಾವಣೆ ಅವರ ಗಮನಕ್ಕೂ ಬಂದಿತ್ತು. ನಾನು ಶೇಕ್ ಚಾಂದ್ ಅವರೊಂದಿಗೆ ನಿಂತು ಹರಟುತ್ತಿದ್ದ ಚಿತ್ರಣಗಳೆಲ್ಲ ಈಗ ಅವರ ಕಲ್ಪನಾಲೋಕದಿಂದ ವಾಸ್ತವಲೋಕಕ್ಕೆ ವಲಸೆ ಬಂದಿದ್ದವು. ತಡಮಾಡದೆ, ಗೋವಿಂದರೆಡ್ಡಿ ಅವರೊಂದಿಗೆ ನಾನಿದ್ದ ಊರನ್ನು ಹುಡುಕಿ ಸಂಜೆಯ ಹೊತ್ತಿಗೆ ಬಂದೇಬಿಟ್ಟರಲ್ಲಾ!
ಶೇಕ್ ಚಾಂದ್ ಅವರ ಮನೆಗೇ ಕರೆದುಕೊಂಡು ಹೋಗಿದ್ದರೆ ಅವರ ಬಗೆಗಿನ ಗೌರವ ಇಮ್ಮಡಿಯಾಗುತ್ತಿತ್ತು. ಆದರೆ ಅಗಸರ ಮನೆಯಲ್ಲಿ ಉಳಿಸಿದ್ದು ಹೊರಗಿನವಳೆಂಬ ಭಾವನೆ ಮೂಡಿಸಿದ್ದಂತೂ ಸತ್ಯ. ಒಬ್ಬಳನ್ನೇ ಉಳಿಯಲು ಬಿಟ್ಟು, ಅವರು ತಮ್ಮ ಮನೆಗೆ ಹೊರಟರು. ಮುಂದೆ ಸಾಗಬೇಕಾದ ನೋವಿನ ಪಯಣಕ್ಕೆ ಇದೊಂದು ಮೈಲಿಗಲ್ಲಾಗುತ್ತದೆಂದು ನನಗಾದರೂ ಹೇಗೆ ತಿಳಿದೀತು? ಮುಜುಗರದಿಂದಲೇ ಮಡಿವಾಳಪ್ಪನವರ ಮನೆಯೊಳಕ್ಕೆ ಹೋದೆ. ಕೋಣೆಯೊಂದನ್ನು ನನಗೆ ಉಳಿಯುವುದಕ್ಕೆಂದು ನೀಡಿದರು. ಮಲಗಲು ಮಂಚ, ಹೊದೆಯಲು ಹೊದಿಕೆ, ತೊಡುವುದಕ್ಕೆಂದು ಬಟ್ಟೆ ಎಲ್ಲದರ ವ್ಯವಸ್ಥೆಯಾಯಿತು. ನಾನೇ ಬಯಸಿದ ಬದುಕು ಕೈ ಸೇರುವ ಹೊತ್ತು. ಮುಖದಲ್ಲಿ ಖುಷಿಯೇ ಇಲ್ಲ. ಮನಸ್ಸು ಸಂಭ್ರಮಿಸುತ್ತಲೇ ಇಲ್ಲ. ಬಂದು ಕೂತ ಸ್ವಲ್ಪ ಕ್ಷಣದಲ್ಲಿ ದೇಹ ಸೋತಂತ ಅನುಭವ. ಆತ್ಮವಿಮರ್ಶೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದೆ. ಬುದ್ಧಿ, ಗೋವಿಂದರೆಡ್ಡಿ ಅವರನ್ನು ಒಪ್ಪಿದ್ದರೆ? ಎಂದು ಹೇಳಿದರೆ, ಮನಸ್ಸು ಮಾತ್ರ ಶೇಕ್ ಚಾಂದ್ ಅವರಿಗೆ ಕೊಟ್ಟ ವಚನವನ್ನು ನೆನಪಿಸುತ್ತಿತ್ತು. ಏನಾದರೂ ಮಾತು ಮೀರಲಾಗುವುದಿಲ್ಲವಲ್ಲಾ! ಅರಳಬೇಕಾದ ಮನಸ್ಸು ಸೊರಗಿಹೋಗಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿರುವಾಗಲೇ ‘ಸರಸಮ್ಮಾ, ಸರಸಮ್ಮಾ’ ಎಂದು ಕರೆದ ಸದ್ದು ಕೇಳಿತು. ಅಪ್ಪನ ಧ್ವನಿ! ‘ಆಂ! ಅಪ್ಪ ಬಂದ್ರಾ?’ ಎಂದು ಆಶ್ಚರ್ಯಪಟ್ಟೆ. ನನ್ನ ಬದುಕಿನಲ್ಲಿ ಅವ್ವ ಅಪ್ಪ ಆಕಾಶದೆತ್ತರಕ್ಕೆ ನಿಂತವರು. ಅವರೆಂದರೆ ಗೌರವ, ಭಯ. ನಾನು ಗೌರವಿಸುವ ವ್ಯಕ್ತಿಗೆ ಹೀಗೆ ಅನ್ಯಾಯ ಮಾಡಿಬಿಟ್ಟೆನಲ್ಲಾ ಎಂದು ಬೆದರಿದ್ದೆ. ಆದರೂ ಧೈರ್ಯ ತಂದುಕೊಂಡು, ಊರಿಗೆ ಹೋಗಿರು ಎಂದು ಏಕಾಏಕಿ ಹೇಳಿದ, ಮಾತಿನಲ್ಲಿ ಭರವಸೆ ಕಾಣದ ಗೋವಿಂದರೆಡ್ಡಿ ಅವರನ್ನು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ. ಗೋವಿಂದರೆಡ್ಡಿ ಅಂದು ‘ಇಲ್ಲ, ನಾವಿಬ್ಬರೂ ಮದುವೆಯಾಗಲು ಸಾಧ್ಯವಿಲ್ಲ’ ಎಂದು ಹೇಳಿದ ಮೇಲೆ ಮತ್ತೆ ಅವರನ್ನು ಸ್ವೀಕರಿಸುವುದಕ್ಕೆ ಮನಸ್ಸು ಒಪ್ಪುತ್ತದೆಯೇ! ಮನಸ್ಸು ಗಂಟುಗಳನ್ನು ಬಿಚ್ಚಿಕೊಳ್ಳತೊಡಗಿತ್ತು. ನನ್ನ ಈ ನಿರ್ಧಾರಕ್ಕೆ ಸ್ಪಷ್ಟತೆ ಸಿಗುತ್ತಿತ್ತು. ಹೆಣ್ಣು ಗಂಡಿನ ತಿರಸ್ಕಾರವನ್ನು ಮರುಮಾತಾಡದೆ ಸಹಿಸಬೇಕು. ಅದೇ ಗಂಡು ಮತ್ತೆ ಬಂದು ನನ್ನನ್ನು ಸ್ವೀಕರಿಸು ಎಂದರೆ ಅವನನ್ನು ಸ್ವೀಕರಿಸಬೇಕು. ಹೆಣ್ಣನ್ನು ಸೂತ್ರದಗೊಂಬೆಯಾಗಿ ಮಾಡಿದ ಆಟ ಇಂದು ನಿನ್ನೆಯದಲ್ಲವಲ್ಲಾ! ಹಾಂ, ‘ಇಲ್ಲ’ ಎಂಬುದನ್ನೇ ನಾನು ಬಿಗಿಹಿಡಿದು ಕೂತೆ.
ಅಪ್ಪ, ಗೋವಿಂದರೆಡ್ಡಿ ಮತ್ತು ಐನೋರು ಇವರೊಡಗೂಡಿ ಬಂದಿದ್ದರು. ಅವಿತು ಕೂತದ್ದು ಇನ್ನೇನೊ ಅಪಾರ್ಥ ಎಸಗುವುದು ಬೇಡವೆಂದು ಹೊರಗಡೆ ಬಂದೆ. ‘ಯಾಕವ್ವಾ ಹೀಗ್ ಮಾಡ್ದೆ? ಎಂದು ಅಪ್ಪ ಕೇಳಿದ್ದಕ್ಕೆ, ‘ಏನು ಮಾಡಿದೆ?’ ಎಂದು ಪ್ರಶ್ನೆಯನ್ನು ಕೇಳಿದೆ. ‘ಹಿಂಗ್ಯಾಕೆ ಮಾಡಿದ್ಯವ್ವಾ? ಆ ಮುಸಲ್ರವ್ನ ಜೊತೆ ಹಿಂಗ್ ಬಂದಿಯಲ್ಲಾ!’ ಎಂದು ಕೇಳುವಲ್ಲಿ ಸಿಟ್ಟು, ಆತಂಕ ಕಾಣಿಸುತ್ತಿತ್ತು. ‘ಇಷ್ಟವಿತ್ತು. ಅದ್ಕ ಬಂದೇನಿ’ ಎಂದೆ. ಕನಸ ಬಾನಾಡಿಯೊಂದು ರೆಕ್ಕೆ ಕಳೆದುಕೊಂಡು ಧೊಪ್ಪನೆ ಉರುಳಿ ಬಿದ್ದದ್ದು ಅಪ್ಪನ ಕಣ್ಣುಗಳೇ ಹೇಳುತ್ತಿತ್ತು. ಎಂದೂ ಕೈಯೆತ್ತದ ಅಪ್ಪ ಅಂದು ಎಲ್ಲರೆದುರು ಕಪಾಳಕ್ಕೆ ಹೊಡೆದುಬಿಟ್ಟರು. ನಾನೂ ಜಿದ್ದಿಗೆ ಬಿದ್ದೆ. ‘ಕಪಾಳಕ್ಕೆ ಹೊಡೆದ್ರಲ್ಲಾ, ಏನ್ ಬೇಕಾರ ಮಾಡ್ಕೊಳ್ರಿ ಮದ್ವಿ ಆಗುದಿದ್ರ ಶೇಕ್ ಚಾಂದನ್ನೇ’ ಎಂದುಬಿಟ್ಟೆ. ಗೋವಿಂದರೆಡ್ಡಿ ಅವರು ಬಂದು ಕಾರಿನಲ್ಲಿ ಕೂರುವಂತೆ ಒತ್ತಾಯಿಸುತ್ತಿದ್ದರು. ಈ ಅವಾಂತರಕ್ಕೆಲ್ಲ ಮೂಲ ಕಾರಣ ಅವರೇ ಎನಿಸಿತು. ಒಂದು ಮಾತು ಅವರ ಬಾಯಿಯಿಂದ ಹೊರಡದಂತೆ ತಡೆದೆ. ಪ್ರೀತಿಸಿದ್ದು, ಅರ್ಧ ದಾರಿಯಲ್ಲಿ ಕೈ ಬಿಟ್ಟು ಒದ್ದಾಡಿಸಿದ್ದು, ನಾನನುಭವಿಸಿದ ಸಂಕಷ್ಟಗಳಿಗೆಲ್ಲ ಪರಿಹಾರ ಏನು? ಎಂದು ಕೂಗಾಡಿಬಿಟ್ಟೆ. ತಪ್ಪಾಯಿತೆಂದು ಕೈ ಮುಗಿದು ಕೂತರೆ ಹೆಣ್ಣು ಕೇಳುತ್ತಾಳೆ, ತಲೆಬಗ್ಗಿಸಿ ಒಪ್ಪಿ ನಡೆಯುತ್ತಾಳೆ ಎಂದು ಯೋಚಿಸಿದ್ದರೋ ಏನೊ, ಹಾಗಾಗಲೇ ಇಲ್ಲ.

ಸಮಾಧಾನ ಮಾಡಲೆಂದೇ ಐನೋರನ್ನು ಕರೆತಂದಿದ್ದಿರಬೇಕು. ‘ನೋಡಮ್ಮಾ, ನೀನು ಹೋಗ್ತಿರೊ ದಾರಿ ಸುಗಮವಾಗಿಲ್ಲ. ಕಲ್ಲು ಮುಳ್ಳಿನ ದಾರಿ. ಮುಂದಿನ ಬದುಕು ಭಾಳ ಕಷ್ಟ. ಅದಕ್ಕ ಸುಲಭದ ದಾರೀಲಿ ಹೋಗಮ್ಮಾ’ ಎಂಬ ಐನೋರ ಗಂಭೀರದ ಮಾತಿಗೆ ಬಗ್ಗಲಿಲ್ಲ. ಕಲ್ಲು ಮುಳ್ಳಿನ ದಾರಿಯೇ ನನಗೆ ಬೇಕಿರುವುದು ಎಂದು ಸ್ಪಷ್ಟಪಡಿಸಿದೆ. ‘ತಂದೆಯ ನಿಟ್ಟುಸಿರ ಶಾಪ ತಟ್ಟುತ್ತದೆ. ಹಾಗೆ ಮಾಡಿಕೊಳ್ಬೇಡಮ್ಮಾ. ಕೊನೆಗೆ ನೆರಳಿಗೆ ಗಿಡವೂ ಸಿಗುವುದಿಲ್ಲ’ ಎಂದಿದ್ದನ್ನೂ ನಿರ್ಲಕ್ಷಿಸಿದೆ. ಅವರಂದು ಹೇಳಿದ ಮಾತು ಇವತ್ತು ಅಕ್ಷರಶಃ ಸತ್ಯವಾಗಿರುವುದು ದುರಂತ ಬಿಡಿ!
(ಹಿಂದಿನ ಕಂತು: ನಾನೇನು ಮಾಡಲಿ… ಯಾರಿಗೆ ಹೇಳಲಿ…)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

