ಎಳವೆಯಿಂದಲೇ ನೈಟಿಂಗೇಲ್ ಗಣಿತವನ್ನು ಅಭ್ಯಾಸ ಮಾಡಿದ್ದಳು. ಹನ್ನೆರಡನೆಯ ವಯಸ್ಸಿನಲ್ಲಿ ಔಪಚಾರಿಕ ಶಿಕ್ಷಣ ಪಡೆಯುವ ಮೊದಲೇ ಅವಳು ಮಾಹಿತಿ ಸಂಗ್ರಹಿಸುವ, ಸಂಯೋಜಿಸುವ ಮತ್ತು ಪ್ರಸ್ತುತ ಪಡಿಸುವ ಬಗ್ಗೆ ಆಸಕ್ತಿ ವಹಿಸಿದ್ದಳು. ಗಣಿತಶಾಸ್ತ್ರ ಹಾಗು ಸಂಖ್ಯಾಶಾಸ್ತ್ರದ ಕುರಿತಾದ ಆಸಕ್ತಿ ಅವಳ ಜೀವನದುದ್ದಕ್ಕೂ ಜೊತೆಯಲ್ಲಿತ್ತು. ಮಾಹಿತಿಗಳನ್ನು ಸಂಗ್ರಹಿಸಿ ಅವಳು ಬಳಸಿಕೊಳ್ಳುತ್ತಿದ್ದ ರೀತಿ ನರ್ಸಿಂಗ್ ಹಾಗು ವೈದ್ಯಕೀಯ ಸುಧಾರಣೆಗಳ ಮೇಲೆ ಪ್ರಭಾವ ಬೀರಿತು. ಕ್ರಿಮಿಯಾ ಯುದ್ಧದ ಸಮಯದಲ್ಲಿ ಅವಳು ಸಂಗ್ರಹಿಸಿದ ಮಾಹಿತಿ ಒಳಹೊಳಹುಗಳನ್ನು ನೀಡಿತ್ತು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ಕುರಿತ ಬರಹ ನಿಮ್ಮ ಓದಿಗೆ

ಬ್ರಿಟಿಷ್ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾದ ವಿರುದ್ಧ 1854ರಲ್ಲಿ ಆರಂಭಿಸಿದ ಸೆಣಸಾಟವನ್ನು ಕ್ರಿಮಿಯನ್ ಯುದ್ಧ ಎಂದು ಇತಿಹಾಸ ದಾಖಲಿಸುತ್ತದೆ. ಯೂರೋಪಿನ ಸಂಕೀರ್ಣ ರಾಜಕೀಯ ಸಂದಿಗ್ಧತೆಯ ಈ “ಇನ್ನೊಂದು ಮತ್ತೊಂದು” ಯುದ್ಧ, ಟರ್ಕಿ ಪ್ರಾಂತ್ಯದಲ್ಲಿ ನಡೆಯಿತು. ಬ್ರಿಟಿಷ್ ಪಡೆಯ ಯುದ್ಧ ತಯಾರಿ ಸದೃಢವಾಗಿದ್ದರೂ, ಯುದ್ಧಕಾಲದಲ್ಲಿ ಗಾಯಾಳು ಮತ್ತು ಅಸ್ವಸ್ಥ ಸೈನಿಕರನ್ನು ನೋಡಿಕೊಳ್ಳುವಲ್ಲಿನ ಸಿದ್ಧತೆ ಮಾತ್ರ ಸಮರ್ಪಕವಾಗಿ ಇರಲಿಲ್ಲ. ಯುದ್ಧನೆಲೆಯ ಸಮೀಪದ ಬಿಡಾರದಲ್ಲಿ ಸಾಕಷ್ಟು ವೈದ್ಯಕೀಯ ಸರಬರಾಜು ಇಲ್ಲದಿರುವುದು, ನೈರ್ಮಲ್ಯರಹಿತ ಕೊಠಡಿಗಳು, ರೋಗಿಗಳ ದಟ್ಟಣೆ ಕುರಿತು ಸೈನಿಕರು ದೂರುತ್ತಿದ್ದರು. ಬ್ರಿಟನ್ನಿನ ಸುದ್ದಿಪತ್ರಿಕೆಗಳಲ್ಲಿ ಯುದ್ಧಶಿಬಿರದಲ್ಲಿ ವೈದ್ಯಕೀಯ ಹಾಗು ಆರೈಕೆಯ ದುರಾವಸ್ಥೆಯ ಕುರಿತು ವರದಿಗಳು ಬರುತ್ತಿದ್ದವು.

ಆ ಕಾಲದ ಬ್ರಿಟಿಷ್ ಪಾಳಯದ ಯುದ್ಧ ನಿರ್ವಾಹಕ ಸಿಡ್ನಿ ಹರ್ಬರ್ಟ್ ಶುಶ್ರೂಷಕಿಯಾಗಿ ಬ್ರಿಟನ್ನಿನಲ್ಲಿ ಆಗಷ್ಟೇ ಹೆಸರು ಮಾಡುತ್ತಿದ್ದ ವನಿತೆಯನ್ನು ಸಹಾಯಕ್ಕಾಗಿ ಆಹ್ವಾನಿಸಿದ. 1854ರ ನವೆಂಬರ್ ನಾಲ್ಕರಂದು ಇಂಗ್ಲೆಂಡ್ ನಿಂದ ಹೊರಟ ಶುಶ್ರೂಷಕಿ ತನ್ನ ೩೮ ಜತೆಗಾರ್ತಿಯರೊಡನೆ ಟರ್ಕಿಯಲ್ಲಿ ಬಂದಿಳಿದಳು. ಸುದ್ದಿ ಪತ್ರಿಕೆಗಳು ವರದಿ ಮಾಡಿದಂತೆಯೇ ಮಿಲಿಟರಿ ಆಸ್ಪತ್ರೆ ಸ್ವಚ್ಛವಿರಲಿಲ್ಲ, ಗಾಯಾಳು ಸೈನಿಕರ ಶುಶ್ರೂಷೆಗೆ ಬೇಕಾದ ವಸ್ತುಗಳು ಇರಲಿಲ್ಲ ಎಂದು ಅವರಿಗೆ ಮನವರಿಕೆ ಆಯಿತು. ಹಾಗಂತ ಮೊದಲೇ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುರುಷ ವೈದ್ಯರು ಮಹಿಳಾ ನರ್ಸ್ ಗಳ ಆಗಮನವನ್ನು ಸ್ವಾಗತಿಸಲಿಲ್ಲ, ಮಹಿಳೆಯರೊಂದಿಗೆ ಕೆಲಸ ಮಾಡುವುದು ಅವರಿಗೆ ಇಷ್ಟವೂ ಇರಲಿಲ್ಲ. ಬ್ರಿಟನ್ನಿಂದ ಆಗಷ್ಟೇ ಬಂದ ನರ್ಸ್ ಗಳ ತಂಡಕ್ಕೆ ಸ್ವಾಗತ ಸಿಕ್ಕಿದ್ದಿದ್ದರೆ ಅದು ಹಾಸಿಗೆಗಳು ಹೊದಿಕೆಗಳು ಇಲ್ಲದ ಆಸ್ಪತ್ರೆ ಕೋಣೆಗಳಿಂದ, ಸೊರಗಿದ ದುರ್ಬಲರಾದ ತುಸು ಹೊತ್ತಿನಲ್ಲಿ ಸಾಯಲಿರುವ ರೋಗಿಗಳಿಂದ ಮತ್ತು ರೋಗಿಗಳ ಹಾಸಿಗೆಯ ಬಳಿ ಖುಷಿಯಲ್ಲಿ ಓಡಾಡಿಕೊಂಡಿದ್ದ ಇಲಿ ತಿಗಣೆಗಳಿಂದ ಮಾತ್ರ.

ಆದರೆ, ಗಾಯಾಳುಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದುದರಿಂದ ಶುಶ್ರೂಷಕಿಯರ ಸಹಾಯ ಪಡೆಯುವುದು ಅಲ್ಲಿದ್ದ ವೈದ್ಯರಿಗೆ ಅನಿವಾರ್ಯ ಆಯಿತು. ನರ್ಸ್ ತಂಡದ ನಾಯಕಿಯ ಯೋಜನೆಯಂತೆ ಹೆಚ್ಚು ವೈದ್ಯಕೀಯ ಸರಬರಾಜಿನ ವ್ಯವಸ್ಥೆ ಮಾಡಲಾಯಿತು, ಪೌಷ್ಟಿಕ ಆಹಾರಗಳನ್ನೂ ತರಿಸಲಾಯಿತು. ನಿತ್ಯವೂ ಬಿಡಾರವನ್ನು ಶುಚಿಗೊಳಿಸುವ ಪದ್ಧತಿ ಜಾರಿಗೆ ಬಂತು. ಆಯಾ ರೋಗಿಗಳ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಆರೈಕೆಗೆ ಮಹತ್ವ ನೀಡಲಾಯಿತು. ವಿಶೇಷ ಆಹಾರದ ಅಗತ್ಯ ಇರುವ ರೋಗಿಗಳಿಗೆಂದೇ ಬೇರೆ ಅಡುಗೆ ಮನೆಯ ವ್ಯವಸ್ಥೆ ಮಾಡಲಾಯಿತು. ಹಾಸಿಗೆ ಬಟ್ಟೆಗಳನ್ನು ಒಗೆದು ಒಣಗಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಇಂಗ್ಲೆಂಡ್ ನಿಂದ ಬಂದಿದ್ದ ವನಿತೆ, ದಿನವೂ ರಾತ್ರಿ ಕೈಯಲ್ಲೊಂದು ದೀಪ ಹಿಡಿದು ಗಾಯಾಳುಗಳಾಗಿ ಮಲಗಿರುವ ಸೈನಿಕರ ಬಳಿ ಹೋಗಿ ಕ್ಷೇಮ ವಿಚಾರಿಸುತ್ತಿದ್ದಳು, ನರಳುತ್ತಿದ್ದರೆ ಉಪಚರಿಸಿ ಶುಶ್ರೂಷೆ ಮಾಡುತ್ತಿದ್ದಳು. ರೋಗಿಗಳಿಗೆಂದು ತರಗತಿ, ಓದುವ ಕೋಣೆ, ಮನರಂಜನೆಯ ಏರ್ಪಾಟು ಮಾಡಿಸಿದಳು. ಅವಳು, ಶುಶ್ರೂಷಕಿಯರ ಮಾತ್ರವಲ್ಲದೇ ಶುಶ್ರೂಷೆಯ ನಾಯಕಿಯಾಗಿಯೂ ಆಗಿ ಅಲ್ಲಿನ ರೋಗಿಗಳಿಗೆ ಅಸ್ವಸ್ಥರಿಗೆ ಕಾಣಿಸುತ್ತಿದ್ದಳು.

ಆರು ತಿಂಗಳಲ್ಲಿ ಬ್ರಿಟನ್ನಿನ ಶುಶ್ರೂಷಕಿಯರ ತಂಡ ಯುದ್ಧಕ್ಷೇತ್ರದ ಮಿಲಿಟರಿ ಆಸ್ಪತ್ರೆಯ ಪರಿಸ್ಥಿತಿಯನ್ನು ಸಂಪೂರ್ಣ ಸುಧಾರಿಸಿತು, ಉತ್ತಮಗೊಳಿಸಿತು. ಅಲ್ಲಿಯತನಕ ಆಸ್ಪತ್ರೆಗೆ ಬರುತ್ತಿದ್ದ ಸೈನಿಕರಲ್ಲಿ 40%, ಟೈಫಾಯಿಡ್, ಕಾಲರಾ ಅಥವಾ ಅನಾಮಿಕ ಕಾರಣಗಳಿಂದ ಮರಣ ಹೊಂದುತ್ತಿದ್ದುದು, ಶುಶ್ರೂಷಕಿಯರ ಆಗಮನದ ಒಂದು ವರುಷದ ನಂತರ 2% ಗೆ ಇಳಿಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷೆಯ ಹೊಸ ಯುಗ ಆರಂಭವಾಯಿತು. ರಾತ್ರಿಪಾಳಿಯಲ್ಲಿಯೂ ಗಸ್ತು ತಿರುಗಿ ಆರೈಕೆ ಮಾಡುತ್ತಿದ್ದ ಕಾರಣಕ್ಕೆ “ಹಣತೆ ಹಿಡಿದ ವನಿತೆ” ಎನ್ನುವ ಹೆಸರು ಪಡೆದ ಶುಶ್ರೂಷಕಿಯರ ನಾಯಕಿ “ಫ್ಲೋರೆನ್ಸ್ ನೈಟಿಂಗೇಲ್”.

ಶಿಬಿರದಲ್ಲಿದ್ದ ಸೈನಿಕರು ಅವಳನ್ನು “ಕ್ರಿಮಿಯಾದ ದೇವದೂತೆ” ಎಂದು ಕರೆದರು. ಆಧುನಿಕ ವೈದ್ಯಕೀಯ ಶುಶ್ರೂಷೆಯ ಆದಿಮಹಿಳೆ, ಸುಧಾರಕಿ, ನಾಯಕಿ ಎಂದೆಲ್ಲ ಕರೆಸಿಕೊಳ್ಳುವ ಅವಳ ಸಾಧನೆ ಕೊಡುಗೆಗಳ ಕಾರಣಕ್ಕೆ, ಆಕೆಯ ಹುಟ್ಟುದಿನವಾದ ಮೇ ತಿಂಗಳ 12ಅನ್ನು 1965ರಿಂದ ಅಂತರಾಷ್ಟ್ರೀಯ ಶುಶ್ರೂಶಕರ ದಿನವಾಗಿ ಆಚರಿಸುತ್ತಾರೆ.

ಬ್ರಿಟನ್ನಿನವರಾದ ಫ್ಲೋರೆನ್ಸ್ ನೈಟಿಂಗೇಲ್ ಳ ತಂದೆ ತಾಯಿಯರು, 1820ರಲ್ಲಿ ಇಟಲಿಯ ಪ್ರವಾಸದಲ್ಲಿದ್ದರು. ಅಲ್ಲಿನ ಫ್ಲೋರೆನ್ಸ್ ನಗರದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಸ್ಥಳದ ಹೆಸರನ್ನೇ ಕೊಟ್ಟರು. ಮತ್ತೆ ನೈಟಿಂಗೇಲ್ ಎನ್ನುವುದು ಆ ಮಗುವಿಗೆ ತಂದೆಯಿಂದ ಬಂದ ಹೆಸರು. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಅವಳ ಓದು ಮನೆಯ ಶಾಲೆಯಲ್ಲಿ ನಡೆಯುತ್ತಿತ್ತು. ಓದು ಮುಗಿದು ಪ್ರಾಯ ಪ್ರಬುದ್ಧೆಯಾದಾಗ ತಮ್ಮ ಕುಟುಂಬಕ್ಕೆ ಸರಿಯಾದ ಸ್ಥಾನದಲ್ಲಿರುವ ಮನೆಯ ಹುಡುಗನೊಟ್ಟಿಗೆ ವಿವಾಹ ಆಗಬೇಕೆಂದು ಅಪೇಕ್ಷಿಸಲಾಗಿತ್ತು. ಆದರೆ ಆಕೆ ಸಣ್ಣ ವಯಸ್ಸಿನಿಂದಲೇ, ಬಡವರ ಮತ್ತು ಅಸ್ವಸ್ಥರ ಸೇವೆ ಮಾಡಲು ತನಗೆ ದೇವರಿಂದ ಕರೆ ಬಂದಿದೆ ಎಂದು ನಂಬಿದ್ದಳು. ಆ ಕಾಲದಲ್ಲಿ ಗೌರವಯುತವಾದ ವೃತ್ತಿ ಅಲ್ಲದಿದ್ದರೂ, ತಾನು ಶುಶ್ರೂಷಕಿಯೇ ಆಗುವುದಾಗಿ ಹೆತ್ತವರಿಗೆ ಹೇಳಿದಳು.

ತಂದೆ ತಾಯಿಯರು ಮೊದಲಿಗೆ ಮಗಳ ನಿರ್ಧಾರವನ್ನು ಒಪ್ಪದೇ, ಮದುವೆ ಆಗಿ ಸಂಸಾರ ಬೆಳೆಸುವಂತೆ ಒತ್ತಾಯಿಸಿದ್ದರು. ಹಠ ಬಿಡದ ಹುಡುಗಿ, ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ಕೊನೆಗೂ ತಂದೆ ತಾಯಿಯರ ಮನವೊಲಿಸಿ ೧೮೪೪ರಲ್ಲಿ ಜರ್ಮನಿ ಹಾಗು ಫ್ರಾನ್ಸ್‌ಗೆ ಶುಶ್ರೂಷಕ ತರಬೇತಿಗಾಗಿ ತೆರಳಿದಳು. ಆಕೆಗೆ 33 ವರ್ಷವಾಗುವ ಹೊತ್ತಿಗೆ ನರ್ಸಿಂಗ್ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಳು. ೧೮೫೩ರಲ್ಲಿ ಇಂಗ್ಲೆಂಡ್ ಗೆ ಮರಳಿ ಶುಶ್ರೂಷಕಿಯಾಗಿ ದುಡಿದು ಹೆಸರು ಮಾಡಿದಳು, ಆಸ್ಪತ್ರೆಯೊಂದರ ಮಹಿಳಾ ಮೇಲ್ವಿಚಾರಕಿಯಾಗಿ ಭಡ್ತಿ ಪಡೆದಳು.

ಇಂಗ್ಲೆಂಡ್ ನಿಂದ ಬಂದಿದ್ದ ವನಿತೆ, ದಿನವೂ ರಾತ್ರಿ ಕೈಯಲ್ಲೊಂದು ದೀಪ ಹಿಡಿದು ಗಾಯಾಳುಗಳಾಗಿ ಮಲಗಿರುವ ಸೈನಿಕರ ಬಳಿ ಹೋಗಿ ಕ್ಷೇಮ ವಿಚಾರಿಸುತ್ತಿದ್ದಳು, ನರಳುತ್ತಿದ್ದರೆ ಉಪಚರಿಸಿ ಶುಶ್ರೂಷೆ ಮಾಡುತ್ತಿದ್ದಳು. ರೋಗಿಗಳಿಗೆಂದು ತರಗತಿ, ಓದುವ ಕೋಣೆ, ಮನರಂಜನೆಯ ಏರ್ಪಾಟು ಮಾಡಿಸಿದಳು.

ಎಳವೆಯಿಂದಲೇ ನೈಟಿಂಗೇಲ್ ಗಣಿತವನ್ನು ಅಭ್ಯಾಸ ಮಾಡಿದ್ದಳು. ಹನ್ನೆರಡನೆಯ ವಯಸ್ಸಿನಲ್ಲಿ ಔಪಚಾರಿಕ ಶಿಕ್ಷಣ ಪಡೆಯುವ ಮೊದಲೇ ಅವಳು ಮಾಹಿತಿ ಸಂಗ್ರಹಿಸುವ, ಸಂಯೋಜಿಸುವ ಮತ್ತು ಪ್ರಸ್ತುತ ಪಡಿಸುವ ಬಗ್ಗೆ ಆಸಕ್ತಿ ವಹಿಸಿದ್ದಳು. ಗಣಿತಶಾಸ್ತ್ರ ಹಾಗು ಸಂಖ್ಯಾಶಾಸ್ತ್ರದ ಕುರಿತಾದ ಆಸಕ್ತಿ ಅವಳ ಜೀವನದುದ್ದಕ್ಕೂ ಜೊತೆಯಲ್ಲಿತ್ತು. ಮಾಹಿತಿಗಳನ್ನು ಸಂಗ್ರಹಿಸಿ ಅವಳು ಬಳಸಿಕೊಳ್ಳುತ್ತಿದ್ದ ರೀತಿ ನರ್ಸಿಂಗ್ ಹಾಗು ವೈದ್ಯಕೀಯ ಸುಧಾರಣೆಗಳ ಮೇಲೆ ಪ್ರಭಾವ ಬೀರಿತು. ಕ್ರಿಮಿಯಾ ಯುದ್ಧದ ಸಮಯದಲ್ಲಿ ಅವಳು ಸಂಗ್ರಹಿಸಿದ ಮಾಹಿತಿ ಒಳಹೊಳಹುಗಳನ್ನು ನೀಡಿತ್ತು. ಎಷ್ಟು ಸೈನಿಕರು ಸತ್ತರು, ಅವರ ಸುತ್ತಮುತ್ತಲ ಯಾವ ಸ್ಥಿತಿ ಇತ್ತು, ಯಾವ ಬದಲಾವಣೆ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿತು, ಹೀಗೆ ಅವಳು ಕಲೆಹಾಕುತ್ತಿದ್ದ ವಿಷಯಗಳು ಜೀವವಿಜ್ಞಾನಿಗಳು ಚಿಟ್ಟೆಯ ಕುರಿತೋ, ಪಳೆಯುಳಿಕೆಗಳ ಅವಶೇಷಗಳ ಬಗೆಗೋ ಮಾಹಿತಿ ಸಂಗ್ರಹಿಸುವಂತೆಯೇ ಇತ್ತು. ವಿಷಯ ಸಂಗ್ರಹಕ್ಕಾಗಿಯೇ ಅವಳು ಸಹಾಯಕರನ್ನು ಇರಿಸಿಕೊಳ್ಳುತ್ತಿದ್ದಳು.

ಕ್ರಿಮಿಯನ್ ಯುದ್ಧ ಶಿಬಿರದಲ್ಲಿ ಸೇವೆ ಸಲ್ಲಿಸಿ 1856ರಲ್ಲಿ ಟರ್ಕಿಯಿಂದ ಮರಳಿದ ನಂತರ ಬ್ರಿಟನ್ನಿನಲ್ಲಿ ಆಸ್ಪತ್ರೆ ಪರಿಸ್ಥಿತಿಯನ್ನು ವಿಮರ್ಶಿಸಿ ಸುಧಾರಿಸುವಲ್ಲಿ ತೊಡಗಿಕೊಂಡಳು. ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ವಹಣೆಯಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೂಚಿಸಿದಳು. ಟರ್ಕಿಯಲ್ಲಿ ಪಡೆದ ಅನುಭವ ಮತ್ತು ಸಂಗ್ರಹಿಸಿದ ದತ್ತಾಂಶಗಳನ್ನು ಆಗಿನ ರಾಣಿ ವಿಕ್ಟೋರಿಯಾಳ ಮುಂದೆ ಪ್ರಸ್ತುತ ಪಡಿಸಿ ಮೆಚ್ಚುಗೆ ಪಡೆದಳು. ಅವಳ ಮುಂದಿನ ಗುರಿ ಹೆಚ್ಚು ಜನರು ವೈದ್ಯಕೀಯ ಸುಧಾರಣೆಗಳನ್ನು ಅಳವಡಿಸಬೇಕು ಎಂಬುದಾಗಿತ್ತು. ಸಂಸತ್ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು, ಮಿಲಿಟರಿ ಆಫೀಸರುಗಳು ಹೀಗೆ ಸ್ವಲ್ಪವಾದರೂ ವೈಜ್ಞಾನಿಕ ತರಬೇತಿ ಇರುವವರನ್ನು ಮೊದಲು ಸಂಪರ್ಕಿಸಿ ವಿಚಾರಗಳನ್ನು ಹಂಚಿಕೊಂಡಳು.

ವೈದ್ಯಕೀಯ ಕ್ಷೇತ್ರಕ್ಕೆ ನೈಟಿಂಗೇಲ್ ಳ ದೊಡ್ಡ ಕೊಡುಗೆ, ಕ್ರಿಮಿಯಾದಲ್ಲಿ ಎರಡವು ವರ್ಷಗಳ ಅವಧಿಯಲ್ಲಿ ಸೈನಿಕರ ಸಾವಿನ ಅಂಕಿಅಂಶವನ್ನು ರೇಖಾಚಿತ್ರದ ಮೂಲಕ ತೋರಿಸಿದ್ದು. ವೈದ್ಯಕೀಯ ಅಂಕಿಅಂಶಗಳನ್ನು ವಿವರವಾಗಿ ತಿಳಿಯಲು ರೇಖಾಚಿತ್ರಗಳ ಬಳಕೆ ಅವಳಿಂದಲೇ ಆರಂಭವಾಯಿತು. ಮೊದಲ ವರ್ಷ (1854-55ರಲ್ಲಿ)ಅವಳು ಕ್ರಿಮಿಯಾಗೆ ಬಂದ ಮೇಲಿನ ವಿವರಗಳು, ಮತ್ತೆ 1855-56ರಲ್ಲಿ ವೈದ್ಯಕೀಯ ಹಾಗು ಶುಶ್ರೂಷೆ ಸಂಬಂಧಿ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದ ನಂತರದ ಅಂಕಿಅಂಶಗಳು ಆ ರೇಖಾಚಿತ್ರದ ಭಾಗವಾಗಿದ್ದವು. ಒಂದೊಂದು ತಿಂಗಳಲ್ಲೂ ಮಡಿದ ಸೈನಿಕರ ಸಂಖ್ಯೆಯನ್ನು ತೋರಿಸಿದಳು. ನಕ್ಷೆಯಲ್ಲಿ ನೀಲಿ ಬಣ್ಣದ ಭಾಗ, ಆಸ್ಪತ್ರೆಯ ಅವ್ಯವಸ್ಥೆಯ ಕಾರಣಕ್ಕೆ, ತಡೆಯಬಹುದಾಗಿದ್ದ ಕಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆಯನ್ನು ತೋರಿಸುತ್ತಿತ್ತು. ಕೆಂಪು ಬಣ್ಣದ ಭಾಗ ಯುದ್ಧ ಮಾಡುವಾಗ ಅತಿಯಾದ ಗಾಯಗಳಾದ ಕಾರಣಕ್ಕೆ ಸತ್ತವರ ಅಂಕಿಅಂಶ ತೋರಿಸುತ್ತಿತ್ತು. ರೇಖಾಚಿತ್ರವನ್ನು ಯಾರೇ ನೋಡಿದರೂ ವಾಸ್ತವ ಹಾಗು ಮಾರ್ಪಾಟುಗಳಿಂದ ಆದ ಪರಿಣಾಮಗಳ ಸ್ಪಷ್ಟ ನಿಖರ ನೋಟವನ್ನು ಒದಗಿಸುತ್ತಿತ್ತು. ಆಕೆ ಒದಗಿಸಿದ ವಿಚಾರಗಳ ಆಧಾರದ ಮೇಲೆಯೇ ಬ್ರಿಟಿಷ್ ಸೈನ್ಯದ ಆರೋಗ್ಯ ಹಾಗು ಶಶ್ರೂಷೆಯ ವ್ಯವಸ್ಥೆಯನ್ನು ಪರಿವರ್ತಿಸಲಾಯಿತು.

ನೈಟಿಂಗೇಲ್ ಆರೈಕೆಯ ಬಗೆಗಿನ ಯೋಚನೆಗಳನ್ನು ಇಡೀ ಬ್ರಿಟನ್ನಿನ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಪಸರಿಸಿದಳು. 830 ಪುಟಗಳ “ಶುಶ್ರೂಷೆಯ ಬಗೆಗಿನ ಟಿಪ್ಪಣಿಗಳು” 1859ರಲ್ಲಿ ಪ್ರಕಟವಾಯಿತು. ಬ್ರಿಟನ್ನಿನ ಸೈನಿಕರ ಸಾವುಗಳ ಮಾಹಿತಿಯಲ್ಲಿ ಹುದುಗಿದ್ದ ಆಘಾತಕಾರಿ ಅಂಶಗಳನ್ನು ಬೆಳಕಿಗೆ ತಂದಳು. ಹದಿನಾರರಿಂದ ಹದಿನೆಂಟು ಸಾವಿರ ಜನರು ಯಾವುದೇ ಯುದ್ಧ ಇಲ್ಲದೇ, ತಡೆಯಬಹುದಾದ ಅಸ್ವಾಸ್ಥ್ಯದಿಂದ ಸಾವನ್ನಪ್ಪುತ್ತಿರುವುದನ್ನು ಕಂಡುಕೊಂಡಳು. ಇಂತಹ ಮಾಹಿತಿಗಳನ್ನು ಕಣ್ಣಿಗೆ ಕಟ್ಟುವ ವಿವರಪೂರ್ಣ ರೇಖಾಚಿತ್ರಗಳಾಗಿ ಮಾರ್ಪಾಟುಗೊಳಿಸುವ ಕೌಶಲ ವೈದ್ಯಕೀಯ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿತು. ಸ್ವಚ್ಛತಾ ಆಯೋಗದ ಕೆಲಸ ಹೇಗೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ನಕ್ಷೆಯ ಮೂಲಕ ತೋರಿಸಿದಳು. ಅವಳ ಹೆಜ್ಜೆಗಳು ಮಿಲಿಟರಿ ಆರೈಕೆಗೆ ಸೀಮಿತವಾಗದೆ ಜನಸಾಮಾನ್ಯರ ಸ್ವಾಸ್ಥ್ಯ ಸುಧಾರಣೆಯನ್ನೂ ಪ್ರೇರೇಪಿಸಿ ಬದಲಾಯಿಸಿದವು. ಬ್ರಿಟನ್ನಿನ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ಮಾನದಂಡಗಳನ್ನು ಹುಟ್ಟುಹಾಕಿದವು. ಸಂಖ್ಯಾಶಾಸ್ತ್ರ, ದತ್ತಾಂಶವನ್ನು ಕಲೆ ಹಾಕಿ ಬಳಸುವ ರೀತಿಗಾಗಿ “ರಾಯಲ್ ಸಂಖ್ಯಾಶಾಸ್ತ್ರ” ಸಂಘಟನೆಯ ಮೊಟ್ಟಮೊದಲ ಮಹಿಳಾ ಸದಸ್ಯೆಯ ಗೌರವ ಅವಳಿಗೆ ದೊರೆಯಿತು.

ರೋಗಿಯ ಸ್ವಾಸ್ತ್ಯ ಹಾಗು ಆರೈಕೆಯ ಕುರಿತು ಮಾರ್ಗದರ್ಶನ ನೀಡುವ ಅವಳ ಬರಹಗಳು ಶುಶ್ರೂಷಕ ಕಲಿಕೆಯ ಭಾಗವಾದವು. 1860ರಲ್ಲಿ ಅವಳದೇ ಹೆಸರಿನ ನರ್ಸಿಂಗ್ ವಿದ್ಯಾಸಂಸ್ಥೆ ಲಂಡನ್ ಅಲ್ಲಿ ಆರಂಭವಾಯಿತು. ಆಗಾಗ ಅವಳು ಅಸ್ವಸ್ಥಳಾಗುತ್ತಿದ್ದರೂ ಸುರಕ್ಷಿತ ಆರೈಕೆಯ ಬಗೆಗೆ ಪ್ರಚಾರವನ್ನು ನಿಲ್ಲಿಸಲಿಲ್ಲ. ತಾನು ನರ್ಸಿಂಗ್ ನಿಂದ ಗಳಿಸಿ, ಉಳಿಸಿದ ಹಣವನ್ನು ನರ್ಸಿಂಗ್ ಕ್ಷೇತ್ರದಲ್ಲಿಯೇ ವಿನಿಯೋಗಿಸಿದಳು.

1865ರಲ್ಲಿ 45ರ ಪ್ರಾಯದ ನೈಟಿಂಗೇಲ್, ಪಶ್ಚಿಮ ಲಂಡನ್ನಿನ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಳು. 1910ರಲ್ಲಿ ಸಾವಿನ ತನಕವೂ ವಾಸಿದ “ಮೆಫೇರ್” ಪ್ರದೇಶದ “ಸೌತ್ ಸ್ಟ್ರೀಟ್” ನ 10ನೆಯ ನಂಬ್ರದ ಮನೆಯಲ್ಲಿ 1912ರಲ್ಲಿ ನೆನಪಿನ ನೀಲಿ ಫಲಕವನ್ನು ನೆಡಲಾಯಿತು. 1929ರಲ್ಲಿ ಆ ಮನೆಯನ್ನು ಕೆಡವಿ ಹೊಸ ಕಟ್ಟಡಗಳನ್ನು ಕಟ್ಟುವಾಗ ಫಲಕವನ್ನು ತೆಗೆದು ಮತ್ತೆ ಅದೇ ಸ್ಥಳದಲ್ಲಿ ಹೊಸತಾಗಿ ನಿರ್ಮಾಣವಾದ ಕಟ್ಟಡಗಳಿರುವ ಸಮುಚ್ಚಯದ ಮೇಲೆ 1955ರಲ್ಲಿ ಮರುಸ್ಥಾಪಿಯಲಾಯಿತು. ಫ್ಲೋರೆನ್ಸ್ ನೈಟಿಂಗೇಲ್ ಲಂಡನ್ ಅಲ್ಲಿ ವಾಸಿಸುತ್ತಿದ್ದ ಮನೆ ಅಳಿದರೂ ನೀಲಿ ಫಲಕ ಅವಳ ಜೀವನ ಹಾಗು ಕೊಡುಗೆಗಳನ್ನು ಮನೆಯ ಆಸುಪಾಸಲ್ಲಿ ಜೀವಂತವಾಗಿಡುವ ಪ್ರಯತ್ನ ಮಾಡುತ್ತದೆ.

ಈ ಕಾಲದಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಪ್ರಸ್ತುತ ಪಡಿಸಲಾಗುವ ರೇಖಾಚಿತ್ರಗಳು ಸಾಮಾನ್ಯ ಎನಿಸಿದರೂ ೧೮೫೦ರ ಆಸುಪಾಸಲ್ಲೇ ಅಂತಹ ಕಲ್ಪನೆಯ ಮೂಲಕ ವಿಚಾರ ಸ್ಪಷ್ಟತೆಯನ್ನು ಒದಗಿಸುತ್ತಿದ್ದುದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಅವಳ ಸೇವೆ ಹಾಗು ಸುಧಾರಣೆಯ ಕುರಿತಾದ ಯೋಚನೆಗಳು ಅಪಾರ ಪ್ರಸಿದ್ಧಿ ಹಾಗು ಜನಾನುರಾಗವನ್ನು ಪಡೆದಿದ್ದವು, ಪ್ರೀತಿ ಗೌರವಕ್ಕಾಗಿಯೇ ಕಥೆ, ಕವನಗಳು ಆಕೆಯ ಕುರಿತಾಗಿ ಬರೆಯಲ್ಪಟ್ಟವು, ಹಾಡುಗಳು ನಾಟಕಗಳು ಸಂಯೋಜಿಸಲ್ಪಟ್ಟವು. ಬ್ರಿಟನ್ನಿನ ಅನೇಕ ಯುವತಿಯರು ಅವಳಂತೆ ತಾವೂ ಆಗಬೇಕೆಂದು ಬಯಸಿದರು. ಸಿರಿವಂತರ ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೂ ನರ್ಸಿಂಗ್ ಶಾಲೆಯಲ್ಲಿ ತರಬೇತಿಗೆ ಸೇರಿದರು. ಶುಶ್ರೂಷೆಯ ಬಗ್ಗೆ ಬ್ರಿಟನ್ನಿನ ಶ್ರೀಮಂತ ಸಮಾಜ ಕೀಳಾಗಿ ನೋಡುವುದು ಕಡಿಮೆ ಆಯಿತು, ಗೌರವಯುತ ಮತ್ತು ಅಗತ್ಯದ ಸೇವಾ ವೃತ್ತಿಯಾಗಿ ಪರಿಗಣಿಸಲ್ಪಟ್ಟಿತು.

1910ರಲ್ಲಿ ತೊಂಭತ್ತು ವರ್ಷದ ನೈಟಿಂಗೇಲ್ ತೀರಿಕೊಂಡರೂ ಹುಟ್ಟುಹಾಕಿದ ಶುಶ್ರೂಷೆಯ ಪರಂಪರೆ, ಯೋಚನಾಕ್ರಮ, ಮಾಹಿತಿಗಳ ಬಳಕೆ, ಸುಧಾರಣೆಗಳು ಜಗತ್ತಿನಾದ್ಯಂತ ಈಗಲೂ ಬದುಕುತ್ತಿವೆ. ಆಗ ಹಚ್ಚಿದ ಹಣತೆಯೊಂದು ಈಗಲೂ ಬೆಳಕು ನೀಡುತ್ತಿದೆ.