Advertisement
ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಆವತ್ತು ಸೋಮವಾರ. ಮುರುಡಯ್ಯನವರು ಸ್ನಾನ ಮುಗಿಸಿಕೊಂಡು ಕಾಲುದಾರಿಯನ್ನು ಹತ್ತಿ ಮೇಲೆ ಬರುತ್ತಿದ್ದರು. ‘ಅಂಕದ ಪರದೆ ಜಾರಿದ ಮೇಲೆ, ನಾಟಕವಿನ್ನು ಉಳಿದಿಹುದೇ?’ ಎಂದು ಹಾಡುತ್ತಾ ಮುರುಡಯ್ಯನವರು ಹೆಬ್ಬೆಟ್ಟು ಎಡವಿ ಧೊಪ್ಪೆಂದು ಕೆಳಗೆ ಬಿದ್ದಿದ್ದರು. ಅದನ್ನು ನೋಡಿದ ಕಂಪೆನಿಯ ಕೆಲವರು ಎತ್ತುವುದಕ್ಕೆಂದು ಮುಂದಾದರು. ಆಗ ಮುರುಡಯ್ಯನವರು ಏನೂ ಇಲ್ಲವೆಂಬಂತೆ ತಲೆಯಾಡಿಸುತ್ತಾ, ‘ವಹಿಸಿದ ಪಾತ್ರ ತೀರಿದ ಮೇಲೆ’ ಎಂದಿದ್ದಷ್ಟೇ, ಪ್ರಾಣಪಕ್ಷಿ ಹಾರಿಹೋಗಿತ್ತು.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿಮೂರನೆಯ ಕಂತು

ಸಾಗಿ ಬಂದ ಬದುಕಿನ ಪುಟಗಳನ್ನು ಈಗ ತಿರುವಿ ಹಾಕಿದರೆ ಒಂದೊಂದು ನೆನಪುಗಳೂ ಕಾಡುತ್ತವೆ. ನಾಟಕದ ಕಂಪೆನಿಯಲ್ಲಿ ಹೇಳಿದ ಕೆಲಸಗಳನ್ನು ಮಾಡುವುದು, ಕೊಟ್ಟ ಪಾತ್ರಗಳನ್ನು ಅಭಿನಯಿಸುವುದಷ್ಟೇ ಆಗಿರಲಿಲ್ಲ. ಪ್ರೇಮ ಸೇತುವೂ ಆಗಿ ಪೆಟ್ಟು ತಿಂದಿದ್ದೆ! ನನಗಾಗ ಪ್ರೀತಿ ಪ್ರೇಮ ಅಂದರೇನು ಎನ್ನುವುದಕ್ಕೆ ಅರ್ಥ ಗೊತ್ತಿರುವುದಿರಲಿ, ಆ ಪದಗಳನ್ನು ಬರೆಯಲೂ ಬಾರದ ವಯಸ್ಸು. ಆಗ ನಾನಿದ್ದದ್ದು ಪಟ್ಟದಕಲ್ಲು ಕಂಪೆನಿಯಲ್ಲಿ. ಕುಡುಪ್ಲಿ ಎಂಬಲ್ಲಿ ಕ್ಯಾಂಪ್ ನಡೆಯುತ್ತಿತ್ತು. ಆ ಕ್ಯಾಂಪಿನಲ್ಲಿ ಉಷಾರಾಣಿ ಎಂಬ ತಮಿಳುನಾಡಿನ ಮೂಲದ ಭರತನಾಟ್ಯ ಡಾನ್ಸರ್ ಇದ್ದರು. ರೆಕಾರ್ಡ್ ಮಾಡಿಟ್ಟಿದ್ದ ಹಾಡಿಗೆ ಅವರ ಹೆಜ್ಜೆಗಳು ತಾಳಕ್ಕೆ ತಪ್ಪದಂತೆ ಕುಣಿಯುತ್ತಿತ್ತು. ಜೊತೆಗೆ ನನ್ನಿಷ್ಟದ ಗೌರಿ ಪಾತ್ರವನ್ನೂ ಮಾಡುತ್ತಿದ್ದರು. ಅವರ ಪ್ರಿಯತಮ ಕೇಡಗಿ ಮೆಹಬೂಬ್ ಸಾಬ್. ನಾಟಕದಲ್ಲಿ ಅವರದ್ದು ಕಾಮಿಡಿಯ ಪಾತ್ರ. ಬಹುಶಃ ಇವರಿಬ್ಬರ ಪ್ರೇಮ ಪ್ರಕರಣ ನಡೆದಿರಲಿಲ್ಲವೆಂದರೆ ನಾನು ಡಾನ್ಸರ್ ಕೂಡ ಆಗಿರುತ್ತಿದ್ದೆನೋ ಏನೊ!

ಅವರು ಪರಸ್ಪರ ಪ್ರೀತಿಸುತ್ತಿದ್ದ ರೀತಿಯೇ ವಿಶೇಷ ಮತ್ತೆ ವಿಚಿತ್ರ ಅನಿಸುವುದು. ಶೇಂಗಾ ಬೀಜದಲ್ಲಿ ಒಂದನ್ನು ತಾನು ತಿಂದು, ಇನ್ನೊಂದನ್ನು ನನ್ನ ಕೈಗಿತ್ತು ‘ಅವರಿಗೆ ಕೊಟ್ಟು ಬಾ’ ಅನ್ನುತ್ತಿದ್ದರು. ಮೊದಮೊದಲು ನನಗೆ ಏನಾಗುತ್ತಿದೆಯೆಂದು ಅರ್ಥವೇ ಆಗುತ್ತಿರಲಿಲ್ಲ. ಅಲ್ಲಾ, ಕೈ ತುಂಬಾ ಕೊಡುವುದು ಬಿಟ್ಟು, ಇದೇನಿದು ಒಂದೇ ಒಂದು ಕಾಳು? ಕೊಡುವುದನ್ನು ಚೆನ್ನಾಗಿ ಕೊಡಬೇಕು ಅಂತೆಲ್ಲ ಯೋಚಿಸುತ್ತಿದ್ದೆ. ವಿಷಯ ಗೊತ್ತಿಲ್ಲದ ಕಾರಣಕ್ಕಾಗಿ ‘ಅವರಿಗೆ’ ಎಂದಾಗ ‘ಯಾರಿಗೆ?’ ಎಂದು ಪ್ರಶ್ನಿಸುತ್ತಿದ್ದೆ. ಉಷಾರಾಣಿಯೋ ಕಣ್ಣು ಸರಿಸಿದರೆ ನೃತ್ಯ ಭಂಗಿಯೇ ಎನಿಸುತ್ತಿತ್ತು. ಇನ್ನವಳು ನಾಚಿ, ನೀರಾಗಿ ‘ಅಲ್ಲೇ ನಿಂತಿದ್ದಾರಲ್ಲಾ, ಕೇಡಗಿ ಅವರಿಗೆ’ ಎಂದು ಕೈ ದೂಡಿದರೆ ಕೇಳಬೇಕೆ? ನಾಟ್ಯವನ್ನೇ ನೋಡಿದಂತಿರುತ್ತಿತ್ತು.

ನಾ ಹುಡುಕಬೇಕು, ‘ಅವರು’ ಯಾರೆಂದು? ನಂತರ ಕೇಡಗಿಯವರನ್ನು ಕಂಡು, ‘ಅಕ್ಕ ನಿಮಗೆ ಕೊಡಲು ಹೇಳಿದ್ದಾಳೆಂದು ಮಣಭಾರದ ಪ್ರೀತಿಯ ದ್ಯೋತಕವಾದ ಒಂದೇ ಒಂದು ಶೇಂಗಾಬೀಜವನ್ನು ಅವನ ಕೈಗಿತ್ತು ಬರುವುದು ಅಭ್ಯಾಸವಾಯಿತು. ಇದೊಂದೇ ಅಲ್ಲ, ಮಿರ್ಚಿ ಬಜ್ಜಿಯನ್ನು ಅವಳು ಅರ್ಧ ತಿಂದು, ಇನ್ನರ್ಧವನ್ನು ಅವಳ ಇನಿಯ ಕೇಡಗಿಯವರಿಗೆಂದು ಕೊಟ್ಟು ಬರಬೇಕಿತ್ತು. ಅವರಿಬ್ಬರ ಕುಡಿಗಣ್ಣ ನೋಟದ ಪ್ರೇಮ ಹೀಗೆ ಮುಂದುವರೆಯುತ್ತಿತ್ತು.

ಕುಡುಪ್ಲಿಯಲ್ಲಿ ಆಗ ದೊಡ್ಡ ಮಟ್ಟದಲ್ಲಿ ದನಗಳ ಜಾತ್ರೆ ನಡೆಯುತ್ತಿತ್ತು. ಬಂದ ರೈತರು, ಸಾಮಾನ್ಯ ಜನರೆಲ್ಲ ನಾಟಕ ನೋಡುವುದಕ್ಕೆಂದು ಬರುತ್ತಿದ್ದರು. ನಾಲ್ಕಾಣೆ ಕೊಟ್ಟು ಟಿಕೇಟ್ ಪಡೆದು, ಚಾಪೆಯಲ್ಲಿ ಕೂರುತ್ತಿದ್ದರು. ಬೆಳಗಿನ ಜಾವ ಮೂರೂವರೆಯವರೆಗೂ ನಾಟಕ ನಡೆಯುತ್ತಿತ್ತು. ನಾಟಕ ಮುಗಿದರೂ ಬೇರೆ ಊರಿಂದ ಬಂದವರು, ರೈತರು ಹೊರಡುವುದಕ್ಕೆ ಅನುಕೂಲವಾಗುತ್ತದೆಂದು ಅಲ್ಲೇ ಮಲಗುತ್ತಿದ್ದರು. ಬೆಳಕು ಬಿದ್ದ ಆರು ಗಂಟೆಯ ಹೊತ್ತಿಗೆ ಮನೆ ಕಡೆಗೆ ಕಾಲು ಸಾಗಿಸುತ್ತಿದ್ದರು. ಹೀಗಿರುವಾಗ ದನಗಳ ಜಾತ್ರೆ ನಡೆಯುತ್ತಿದ್ದಲ್ಲೇ ನಾಲ್ಕು ರೂಂಗಳಿದ್ದವು. ಒಂದರಲ್ಲಿ ಕೇಡಗಿಯವರಿದ್ದರು. ಉಷಾರಾಣಿಯವರೊಂದಿಗೆ ಅವರ ತಂದೆಯೂ ಇದ್ದರು. ಅವರ ತಂದೆ ತಿಮ್ಮಪ್ಪಜ್ಜನಿಗೆ ನಾನೆಂದರೆ ಬಹಳ ಇಷ್ಟ. ನಾನೆಲ್ಲೇ ಕಂಡರೂ ನಗುತ್ತಲೇ ಮಾತಾಡುತ್ತಿದ್ದರು. ತಂದೆ ಮಗಳಿಬ್ಬರಿಗೂ ಕುಡುಪ್ಲಿ ಕ್ಯಾಂಪಿನಲ್ಲಿ ಊರಿನೊಳಗೆ ಮನೆ ಬಾಡಿಗೆಗೆ ಸಿಕ್ಕಿತ್ತು.

ಅದೊಂದು ದಿನ ಉಷಾರಾಣಿಯವರು ನನ್ನನ್ನು ಕರೆದು, ಹೊರಗೆ ಹೋಗಬೇಕೆಂದರು. ನನಗೋ ಸುತ್ತಾಟ ಎನ್ನುತ್ತಿದ್ದಂತೆ ಮನಸ್ಸಿನೊಂದಿಗೆ ಕಾಲೂ ಓಡುವುದಕ್ಕೆ ಶುರುವಿಟ್ಟಿತು. ತಿಮ್ಮಪ್ಪಜ್ಜನಿಗೆ ಹೇಳಿ ಹೊರಟಿದ್ದೇ. ಜಾತ್ರೆಯ ಬೀದಿಯಲ್ಲಿ ಗಡಿಬಿಡಿಯಲ್ಲೇ ನಡೆದೆವು. ಎಲ್ಲಿಗೆ ಹೋಗುತ್ತಿದ್ದೇವೆಂದು ಎಷ್ಟು ಕೇಳಿದರೂ ನೋಡಿ ಸುಮ್ಮನಾಗುತ್ತಿದ್ದಳಷ್ಟೆ. ಮನೆಯ ಮುಂದೆ ನಿಂತು ಬಾಗಿಲು ಬಡಿದಳು, ನೋಡಿದರೆ ಕೇಡಗಿ ಮೆಹಬೂಬ್ ಸಾಬ್. ಉಷಾರಾಣಿ ಒಳಹೊಕ್ಕು ಕದವನ್ನು ಮುಚ್ಚೇಬಿಟ್ಟಳು. ಹೊರಗೆ ನಿಂತಿದ್ದ ನಾನು ಒಬ್ಬಳೇ ಕಂಗಾಲಾಗಿ ಮತ್ತೆ ಬಾಗಿಲು ಬಡಿಯುತ್ತಲೇ ಇದ್ದೆ. ಸ್ವಲ್ಪ ಹೊತ್ತಿನ ಬಳಿಕ ಬಾಗಿಲು ತೆರೆದು ತಿಂಡಿ ತರುವುದಕ್ಕೆಂದು ಹಣ ಕೊಟ್ಟು ಕಳಿಸಿದಳು. ಬೇಕು ಬೇಕಾದ್ದನ್ನು ಕೊಂಡು ತಿನ್ನುವ ಅವಕಾಶ ಸಿಕ್ಕಿದರೆ ಯಾವ ಮಕ್ಕಳು ತಾನೆ ಬೇಡವೆನ್ನುತ್ತಾರೆ? ನಾನೂ ಹೊರಟೆ.

ಮತ್ತೆ ಬಾಗಿಲು ಬಡಿಯುತ್ತಿದ್ದಂತೆ ಉಷಾರಾಣಿ ಕದ ತೆರೆದರೆ ತಂದೆ ನಿಂತಿದ್ದರು! ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದರು. ಎರಡೂ ಕೈಗಳಲ್ಲಿ ತಿಂಡಿ ಪೊಟ್ಟಣ ಹಿಡಿದು ಆಗತಾನೆ ನಾನೂ ಬಂದಿದ್ದೆ. ತಿಮ್ಮಪ್ಪಜ್ಜ ಎಡಕ್ಕೆ ತಿರುಗಿದರು. ಏನೂ ಗೊತ್ತಿಲ್ಲದವಳಂತೆ ಕೈಯಲ್ಲಿ ಕತ್ತಿ ಹಿಡಿದಿದ್ದನ್ನು ನೋಡುವುದು ಬಿಟ್ಟು ಮುಂದೇನಾಗಬಹುದೆಂದು ಅವರ ಮುಖಭಾವವನ್ನೇ ಸಂಶೋಧಿಸುತ್ತಿದ್ದೆ. ನನ್ನನ್ನು ಹಿಡಿದು, ಎರಡೇಟು ಕೊಟ್ಟರು. ಅಲ್ಲಿಂದ ತಪ್ಪಿಸಿಕೊಂಡು ಕಾಲುಕಿತ್ತೆ.

ಮಗಳು ಉಷಾರಾಣಿಯಲ್ಲಿ ನೃತ್ಯ ಕಲಿತು, ನೀನು ನಮ್ಮೊಂದಿಗೇ ಇರಬಹುದು ಎಂದ ಇದೇ ತಿಮ್ಮಪ್ಪಜ್ಜ ಆವತ್ತು ಕತ್ತಿ ಹಿಡಿದು, ನನ್ನನ್ನು ಸಾಯಿಸಬೇಕೆಂದೇ ಇದ್ದರು. ಅವಿತುಕೊಂಡ ಜಾಗದಿಂದ ಮೂರು ದಿನ ಆಚೆ ಬಂದಿದ್ದರೆ ಕೇಳಿ!  ಪ್ರೀತಿ ಮಾಡುವುದು ಅವರು, ಬಲಿಪಶು ನಾನು. ಮತ್ತೆಂದೂ ಈ ರೀತಿಯ ಸಹವಾಸ ಮಾಡಬಾರದು ಎಂದುಕೊಂಡೆ. ಆದರೆ ತಿಮ್ಮಪ್ಪಜ್ಜ ಮಗಳನ್ನು ಕರೆದುಕೊಂಡು ಆವತ್ತೇ ಊರು ತೊರೆದಿದ್ದರು. ನನ್ನ ಡಾನ್ಸ್ ಕಲಿಯುವ ಆಸೆಯೂ ಅವರೊಂದಿಗೆ ಹೊರಟುಹೋಯಿತು.

ಇನ್ನೂ ಒಂದು ಹೇಳಬೇಕು. ಕಂಪೆನಿಯ ಖಾನಾವಳಿಯಲ್ಲಿ ಪಾರ್ವತಮ್ಮ ಎಂಬುವವಳಿದ್ದಳು. ಆಕೆ ನನಗಿಂತ ಎಂಟ್ಹತ್ತು ವರ್ಷ ದೊಡ್ಡವಳಿರಬೇಕು. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಎರಡು ಮೂರು ಸಲ ಕಟ್ಟಿ ಪಾಸ್ ಮಾಡಿಕೊಂಡಿದ್ದಳು. ಅವಳು ಕಂಪೆನಿ ಮಾಲೀಕರನ್ನು ಪ್ರೀತಿಸುತ್ತಿದ್ದಳೆಂದು ಸುದ್ದಿಯಾಗಿತ್ತು. ಇವರಿಬ್ಬರ ಪ್ರೀತಿಯ ಪ್ರಗತಿ ಪರಿಶೀಲನೆ ಮಾಡುವ ಉಸಾಬರಿ ನನಗೇಕೆಂದು ಸುಮ್ಮನಿದ್ದೆ.

ಲಿಂಗದಹೊಳೆ ಕ್ಯಾಂಪಿನಲ್ಲಿ ‘ಪಣಕ್ಕಿಟ್ಟ ಪ್ರಮಾಣ’ ನಾಟಕ ನಡೆಯುತ್ತಿದ್ದ ದಿನವದು. ಆ ನಾಟಕದಲ್ಲಿ ಬರುವ ಯಶ್ವಂತ ಗೌಡನ ಪಾತ್ರವನ್ನು ಮುರುಡಯ್ಯನವರೇ ಮಾಡಬೇಕಿತ್ತು. ಜಾತ್ರೆಯ ಕ್ಯಾಂಪ್‌ ಆದ್ದರಿಂದ ದಿನಕ್ಕೆ ಮೂರು ಶೋಗಳಿರುತ್ತಿತ್ತು. ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರರವರೆಗೆ, ಆರರಿಂದ ಹತ್ತು, ಕೊನೆಯಲ್ಲಿ ರಾತ್ರಿ ಹತ್ತರಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ನಾಟಕ ನಿರಂತರವಾಗಿ ನಡೆಯುತ್ತಲೇ ಇರುತ್ತಿತ್ತು. ರಾತ್ರಿ ಮೈ ಕೊರೆಯುವ ಚಳಿ ಇರುತ್ತಿತ್ತು. ಕೈ ಬೆರಳುಗಳೆಲ್ಲ ಮರಗಟ್ಟುವಂತಿತ್ತು. ನಾಟಕ ಮುಗಿದ ಮೇಲೆ ಕಲಾವಿದರೆಲ್ಲ ಒಟ್ಟಿಗೆ ಕೂತು ಹರಟುತ್ತಿದ್ದರು. ಮಿರ್ಚಿ ಬಜ್ಜಿ ಮತ್ತು ಶೇಂಗಾ ಬೀಜಗಳನ್ನು ತರುವುದಕ್ಕೆ ನಾನೇ ಹೋಗಬೇಕಿತ್ತು. ಚೂಟಿಯಾಗಿದ್ದೆನಲ್ಲಾ, ಓಡುತ್ತಾ ಬೇಗನೆ ತಂದುಕೊಡುತ್ತಿದ್ದೆ. ಅವರಿಗೆಲ್ಲ ಸಂತೋಷ. ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ತಂದ ತಿಂಡಿಯಲ್ಲಿ ನನಗೂ ಸ್ವಲ್ಪ ಕೊಟ್ಟು, ‘ನೀ ಹೋಗವ್ವಾ, ನಾವು ಕೆಟ್ಟ ಚಟ ಶುರು ಮಾಡ್ತೇವಿ’ ಎಂದು ಮಲಗಲು ಕಳುಹಿಸುತ್ತಿದ್ದರು. ಮಲಗುವುದೂ ಸುಲಭವಿರಲಿಲ್ಲ. ನಾಲ್ಕೈದು ಚಾಪೆಗಳನ್ನು ಒಟ್ಟಿಗೆ ತಂದು ಒಂದನ್ನು ಹಾಸಿ, ಉಳಿದದ್ದನ್ನು ಹೊದ್ದುಕೊಂಡು ಮಲಗಬೇಕಿತ್ತು. ಬೆಳಗ್ಗೆ ಬೇಗನೇ ಆ ಚಾಪೆಗಳಷ್ಟನ್ನೂ ತಂದ ಜಾಗದಲ್ಲಿಟ್ಟು ಬರಬೇಕೆಂಬುದು ಕಂಪೆನಿಯ ನಿಯಮ.

ಆವತ್ತು ಸೋಮವಾರ. ಮುರುಡಯ್ಯನವರು ಸ್ನಾನ ಮುಗಿಸಿಕೊಂಡು ಕಾಲುದಾರಿಯನ್ನು ಹತ್ತಿ ಮೇಲೆ ಬರುತ್ತಿದ್ದರು. ‘ಅಂಕದ ಪರದೆ ಜಾರಿದ ಮೇಲೆ, ನಾಟಕವಿನ್ನು ಉಳಿದಿಹುದೇ?’ ಎಂದು ಹಾಡುತ್ತಾ ಮುರುಡಯ್ಯನವರು ಹೆಬ್ಬೆಟ್ಟು ಎಡವಿ ಧೊಪ್ಪೆಂದು ಕೆಳಗೆ ಬಿದ್ದಿದ್ದರು. ಅದನ್ನು ನೋಡಿದ ಕಂಪೆನಿಯ ಕೆಲವರು ಎತ್ತುವುದಕ್ಕೆಂದು ಮುಂದಾದರು. ಆಗ ಮುರುಡಯ್ಯನವರು ಏನೂ ಇಲ್ಲವೆಂಬಂತೆ ತಲೆಯಾಡಿಸುತ್ತಾ, ‘ವಹಿಸಿದ ಪಾತ್ರ ತೀರಿದ ಮೇಲೆ’ ಎಂದಿದ್ದಷ್ಟೇ, ಪ್ರಾಣಪಕ್ಷಿ ಹಾರಿಹೋಗಿತ್ತು.

ನಾಟಕದ ವೇದಿಕೆಯಲ್ಲಿ ಮುರುಡಯ್ಯನವರ ಪಾರ್ಥೀವ ಶರೀರವನ್ನು ದರ್ಶನಕ್ಕೆಂದು ಇಟ್ಟರು. ಅಂದು ಯಾವ ನಾಟಕವೂ ನಡೆಯಲಿಲ್ಲ. ದೊಡ್ಡ ಗವಾಯಿಗಳಾಗಿದ್ದ ಮುರುಡಯ್ಯನವರ ಅಭಿಮಾನಿ ಬಳಗ ಬಹುದೊಡ್ಡದು. ಅವರ ಅಭಿನಯದ ನಾಟಕವಿದೆ ಎಂದರೆ ಅವರ ನಟನೆ, ಹಾಡುಗಾರಿಕೆಗಾಗಿ ಜನ ಸಾಗರವೇ ಹರಿದುಬರುತ್ತಿತ್ತು. ಒಂದು ದಿನವಿಡೀ ಅವರ ಮೃತಶರೀರವನ್ನು ಇಟ್ಟಿದ್ದಾಯಿತು. ಎಲ್ಲೂ ಗಾಡಿ ಸಿಕ್ಕಿರಲಿಲ್ಲ. ಎರಡು ದಿನಗಳಾದ ಮೇಲೆ ಹಿರೆಕೆರೂರಿಗೆ ಹೋಗಿ ಗಾಡಿ ತಂದು, ಪಾರ್ಥೀವ ಶರೀರವನ್ನು ರಾಣಿಬೆನ್ನೂರಿಗೆ ಸಾಗಿಸಿದರು. ಒಂದಿಡೀ ದಿನದ ಪ್ರಯಾಣ ಕಳೆದು ಇನ್ನೇನು ಮೃತ ಶರೀರ ಇಳಿಸಬೇಕು ಎನ್ನುವಷ್ಟರಲ್ಲಿ ಒಂದು ತೋಳ ಬಂದು ಮೃತ ಶರೀರವನ್ನೆಲ್ಲ ಕಿತ್ತು ತಿಂದಿತು! ವಿಷಯ ಕಿವಿಗೆ ಬೀಳುತ್ತಿದ್ದಂತೆ ಕಣ್ಣೀರಿಟ್ಟೆ. ಮನುಷ್ಯನೊಬ್ಬನ ಬದುಕಲ್ಲಿ ಇದಕ್ಕಿಂತ ದುರಂತ ಇನ್ನೊಂದಿರಲಾರದು ಎನ್ನಿಸಿತು.

ಇಂತಹ ಮೇರು ಕಲಾವಿದರ ಬದುಕನ್ನು ಹತ್ತಿರದಿಂದ ಕಂಡಿದ್ದೆ. ಹಾಗಾಗಿ ಪಟ್ಟದಕಲ್ಲು ಕಂಪೆನಿ ಬಿಟ್ಟು ಮಾಕನೂರು ಭರಮಣ್ಣನವರ ಕಂಪೆನಿಗೆ ಸೇರಿದಾಗ ಹತ್ತು ವರ್ಷವಾಗಿತ್ತು; ಅನುಭವಗಳೂ ಜೀವನ ಜೋಳಿಗೆ ತುಂಬುತ್ತಿತ್ತು. ಹೇಮರೆಡ್ಡಿ ಮಲ್ಲಮ್ಮ ನಾಟಕದ ನಾಗಮ್ಮ, ಚಿತ್ತರಂಜನಿಯಂತಹ ಗಟ್ಟಿ ಪಾತ್ರಗಳನ್ನು ಮಾಡುವುದಕ್ಕೆ ಯೋಗದ ಜೊತೆಗೆ ಯೋಗ್ಯತೆಯೂ ಬೇಕಲ್ಲವೆ? ಅವೆರಡೂ ನನಗೆ ಅದ್ಹೇಗೋ ಒಲಿದುಬಂದವು! ಅದರೊಂದಿಗೆ ಮಾಕನೂರು ಭರಮಣ್ಣನವರ ಕಂಪೆನಿಯೂ ಚಿಕ್ಕದಾಗಿತ್ತು. ಎರಡು ಮೂರು ಹೆಚ್ಚುವರಿ ಕಲಾವಿದರನ್ನು ಕರೆಸುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರಲಿಲ್ಲ. ಕಂಪೆನಿಗೆ ಹೆಣ್ಣು ದಿಕ್ಕಾಗಿ ಇದ್ದದ್ದು ಜುಬೇದಾಬಾಯಿ, ಪೆಟ್ಟಿಗಿ ಮಾಷ್ಟ್ರು ಕುಮ್ಮೂರು ಕಾನಗೌಡರ ಮಗಳು ಮತ್ತು ನಾನು. ಯಾವುದೇ ಸ್ತ್ರೀ ಪಾತ್ರವಿರಲಿ, ಅದನ್ನು ನಾವೇ ನಿಭಾಯಿಸಬೇಕಿತ್ತು.

ಒಮ್ಮೆ ಚಿತ್ತರಂಜನಿ ಪಾತ್ರ ಮಾಡುತ್ತಿದ್ದಾಕೆ ಇನ್ನುಮುಂದೆ ನಾನು ಆ ಪಾತ್ರವನ್ನು ಮಾಡಲು ಸಾಧ್ಯವಿಲ್ಲ ಎಂದು ಹೊರಟುಹೋಗಿದ್ದಳು. ಜುಬೇದಾಬಾಯಿ ನನ್ನೆಡೆಗೆ ತಿರುಗಿ, ‘ನೀನು ಆ ಪಾತ್ರ ಮಾಡುತ್ತೀಯಾ ತಾನೆ?’ ಎಂದು ಕೇಳಿದ್ದಷ್ಟೆ, ನಾನು ಹೌದೆಂಬಂತೆ ಸಂಭ್ರಮದಿಂದ ತಲೆಯಾಡಿಸಿದ್ದೆ. ಆ ಪಾತ್ರಕ್ಕಾಗಿ ಅವರು ನನ್ನನ್ನು ಅದೆಷ್ಟು ಅಣಿಗೊಳಿಸಿದ್ದರೆಂದರೆ ಅಚ್ಚರಿಯಾಗಬಹುದು. ನಾನಾಗ ಚಿಕ್ಕವಳಿದ್ದೆ. ದೇಹವೂ ಪುಟ್ಟ ಹುಡುಗಿಯಂತೆಯೇ ಇತ್ತು. ಆದರೆ ಪಾತ್ರ ಹೆಂಗಸಿನದ್ದು. ಮಾತುಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೆ. ಆದರೆ ನೋಡುಗರಿಗೆ ಧ್ವನಿಗೂ ಧ್ವನಿ ಹೊರಡುತ್ತಿರುವ ದೇಹಕ್ಕೂ ತಾಳ ಮೇಳ ಸಂಬಂಧವೇ ಇಲ್ಲವಲ್ಲಾ ಎಂದು ಅನಿಸಬಾರದು. ಹಾಗಾಗಿ ಸ್ವತಃ ಜುಬೇದಾಬಾಯಿ ಹೆಂಗಸರ ಒಳ ಉಡುಪಿನಲ್ಲಿ ಎರಡು ಬಟ್ಟೆಯಿಂದ ಸುತ್ತಿದ ಚೆಂಡುಗಳನ್ನು ಇಟ್ಟು ಸೀರೆ ಉಡಿಸಿ, ಮೇಕಪ್ ಬಳಿದು ಪಾತ್ರಕ್ಕೆ ಒಗ್ಗುವಂತೆ ಮಾಡಿದ್ದರು. ಅಷ್ಟು ದಿನ ನಾನವರಿಗೆ ಮಾಡಿದ ಸೇವೆಯನ್ನೆಲ್ಲ ಅವರು ಅಂದು ಮರಳಿಸಿದಂತಿತ್ತು.

ಮುಂದುವರೆಯುವುದು…

(ಹಿಂದಿನ ಕಂತು: ಅಂದುಕೊಂಡಿದ್ದು ಆಗೇಹೋಯಿತು!)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ