ಗದಗದಿಂದ ಹೊರಟು ಹೂವಿನ ಹಡಗಲಿಯನ್ನು ತಲುಪಿದ ನಮ್ಮನ್ನು ಮಿತ್ರ ಪಂಪಾಪತಿರಾಯರು ದೊಡ್ಡ ಅಂಗಳವಿದ್ದ ಮನೆಯೊಂದಕ್ಕೆ ಕರೆದೊಯ್ದರು. ವಾಸ್ತವವಾಗಿ, ಅದು ವಾಸದ ಮನೆಯಾಗಿರದೆ, ಹೊಯ್ಸಳ ಕಾಲದ ದೇವಶಿಲ್ಪಗಳನ್ನು ಇರಿಸಿದ ಗುಡಿಯೆಂದು ತಿಳಿದಾಗ ಅಚ್ಚರಿಯಾಯಿತು. ಯೋಗಮಾಧವನ ಭವ್ಯವಾದ ಶಿಲ್ಪವೊಂದನ್ನು ಇಲ್ಲಿನ ಕೋಷ್ಠವೊಂದರಲ್ಲಿ ಇರಿಸಿದೆ. ಆರಡಿ ಎತ್ತರದ ಈ ವಿಗ್ರಹವು ಹೊಯ್ಸಳ ಕಾಲದ ಅತಿ ಸುಂದರ ಮೂರ್ತಿಗಳಲ್ಲೊಂದೆಂಬುದರಲ್ಲಿ ಸಂಶಯವಿಲ್ಲ. ಚತುರ್ಭುಜ ವಿಷ್ಣು ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿದ್ದು ಮುಂದಿನ ಕೈಗಳಲ್ಲಿ ಯೋಗಮುದ್ರೆಯನ್ನು ಪ್ರದರ್ಶಿಸುತ್ತ ಕಣ್ಮುಚ್ಚಿ ಪದ್ಮಾಸನದಲ್ಲಿ ಕುಳಿತಿರುವ ಭಂಗಿ ಅನನ್ಯವಾಗಿದೆ.
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತೈದನೆಯ ಕಂತು

 

ಹೂವಿನ ಹಡಗಲಿ ಬಳ್ಳಾರಿ ಜಿಲ್ಲೆಯ ಪಶ್ಚಿಮ ಅಂಚಿನಲ್ಲಿರುವ ಒಂದು ಊರು. ನೂರೈವತ್ತು ಕಿಮೀ ದೂರದ ಬಳ್ಳಾರಿಗಿಂತ 60-65 ಕಿಮೀ ಅಂತರದ ಕೊಪ್ಪಳ, ಗದಗಗಳಂತಹ ಜಿಲ್ಲಾಕೇಂದ್ರಗಳಿಂದಲೇ ಸುಲಭಗಮ್ಯವಾಗಿರುವ ಈ ಸ್ಥಳವು ಚಾಲುಕ್ಯ, ಹೊಯ್ಸಳ ಮೊದಲಾದ ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿದ್ದ ಐತಿಹಾಸಿಕ ಕೇಂದ್ರ. ಹೂವಿನ ಹಡಗಲಿಯಲ್ಲಿರುವ ಪ್ರಮುಖ ದೇಗುಲಗಳೆಂದರೆ ಕಲ್ಲೇಶ್ವರ ಹಾಗೂ ಕೇಶವ ದೇವಾಲಯಗಳು. ಕಲ್ಯಾಣ ಚಾಲುಕ್ಯರ ನಿರ್ಮಾಣಗಳಾದ ಈ ಆಲಯಗಳು ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲನ ಆಳ್ವಿಕೆಯ ಕಾಲದವು. ಕಲ್ಲೇಶ್ವರ ದೇಗುಲದಲ್ಲಿರುವ ಶಾಸನವೊಂದು 1071ರಲ್ಲಿ ಕಲಿದೇವರಿಗೆ ದತ್ತಿಬಿಟ್ಟುದನ್ನು ಉಲ್ಲೇಖಿಸಿದರೆ, ಮತ್ತೊಂದು ಶಾಸನವು ಕೇಶವದೇವರ ಗುಡಿಯನ್ನು ತ್ರಿಭುವನಮಲ್ಲನ ದಂಡನಾಯಕನಾದ ರವಿದೇವನ ಪತ್ನಿ ರಬ್ಬಲದೇವಿಯು 1090ರಲ್ಲಿ ನಿರ್ಮಿಸಿದಳೆಂದು ವರ್ಣಿಸುತ್ತದೆ.

ಗದಗದಿಂದ ಹೊರಟು ಹೂವಿನ ಹಡಗಲಿಯನ್ನು ತಲುಪಿದ ನಮ್ಮನ್ನು ಮಿತ್ರ ಪಂಪಾಪತಿರಾಯರು ದೊಡ್ಡ ಅಂಗಳವಿದ್ದ ಮನೆಯೊಂದಕ್ಕೆ ಕರೆದೊಯ್ದರು. ವಾಸ್ತವವಾಗಿ, ಅದು ವಾಸದ ಮನೆಯಾಗಿರದೆ, ಹೊಯ್ಸಳ ಕಾಲದ ದೇವಶಿಲ್ಪಗಳನ್ನು ಇರಿಸಿದ ಗುಡಿಯೆಂದು ತಿಳಿದಾಗ ಅಚ್ಚರಿಯಾಯಿತು. ಯೋಗಮಾಧವನ ಭವ್ಯವಾದ ಶಿಲ್ಪವೊಂದನ್ನು ಇಲ್ಲಿನ ಕೋಷ್ಠವೊಂದರಲ್ಲಿ ಇರಿಸಿದೆ. ಆರಡಿ ಎತ್ತರದ ಈ ವಿಗ್ರಹವು ಹೊಯ್ಸಳ ಕಾಲದ ಅತಿ ಸುಂದರ ಮೂರ್ತಿಗಳಲ್ಲೊಂದೆಂಬುದರಲ್ಲಿ ಸಂಶಯವಿಲ್ಲ. ಚತುರ್ಭುಜ ವಿಷ್ಣು ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿದ್ದು ಮುಂದಿನ ಕೈಗಳಲ್ಲಿ ಯೋಗಮುದ್ರೆಯನ್ನು ಪ್ರದರ್ಶಿಸುತ್ತ ಕಣ್ಮುಚ್ಚಿ ಪದ್ಮಾಸನದಲ್ಲಿ ಕುಳಿತಿರುವ ಭಂಗಿ ಅನನ್ಯವಾಗಿದೆ. ಸರ್ವಾಲಂಕಾರದಿಂದ ಶೋಭಿಸುವ ಈ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರಗಳನ್ನು ಚಿತ್ರಿಸಿದೆ. ಅಷ್ಟದಳಾಕೃತಿಯ ಪೀಠದ ಬುಡದಲ್ಲಿ ಗರುಡನು ಆಸೀನನಾಗಿದ್ದಾನೆ.

ಇಷ್ಟೇ ಆಕರ್ಷಕವಾದ ಇನ್ನೊಂದು ಶಿಲ್ಪ ಪಕ್ಕದ ಕೋಷ್ಠದಲ್ಲಿದೆ. ಅಂಬೆಗಾಲು ಬಾಲಕೃಷ್ಣ. ಬಲಗೈಯಲ್ಲಿ ಬೆಣ್ಣೆಮುದ್ದೆಯನ್ನು ಹಿಡಿದ ಮುದ್ದಾದ ಬಾಲಕನ ರೂಪದಲ್ಲಿ ಕೃಷ್ಣನನ್ನು ಚಿತ್ರಿಸಿರುವ ಪರಿ ಮೋಹಕವಾಗಿದೆ. ಬಾಲಕನ ಕೇಶಾಲಂಕಾರ, ಒಡವೆಗಳ ಸಿಂಗಾರವೆಲ್ಲವೂ ಶಿಲ್ಪದ ಸೊಬಗಿಗೆ ಪುಷ್ಟಿನೀಡುವಂತಿವೆ. ಎತ್ತರವಾದ ಪೀಠದ ಮೇಲುಪಟ್ಟಿಯಲ್ಲಿ ಸಿಂಹಯಾಳಿಗಳ ಅಲಂಕರಣವಿದೆ.

ಇಲ್ಲೇ ಮುಂದೆ ಹತ್ತಾರು ಹೆಜ್ಜೆ ನಡೆದುಹೋದರೆ ಕಲ್ಲೇಶ್ವರನ ಗುಡಿ. ಕಲ್ಲೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪಗಳಲ್ಲದೆ ಎರಡು ಮುಖಮಂಟಪಗಳನ್ನೂ ಒಳಗೊಂಡಿದೆ. ಹೊರಗೋಡೆಗಳ ಮೇಲೆ ಸುತ್ತಲೂ ಕಂಬಗಳೂ ಗೋಪುರಗಳೂ ಇದ್ದು ಮೇಲುಸೂರಿನವರೆಗೂ ವಿಸ್ತರಿಸಿಕೊಂಡಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಅದಕ್ಕೆ ಅಭಿಮುಖವಾಗಿ ನಡುಮಂಟಪದಲ್ಲಿ ನಂದಿಯ ವಿಗ್ರಹ. ಗರ್ಭಗುಡಿಯ ದ್ವಾರದಲ್ಲಿ ಐದು ಪಟ್ಟಿಕೆಗಳ ಅಲಂಕರಣವಿದೆ. ನಡುವಿನ ಒಂದು ಪಟ್ಟಿಕೆಯ ಮೇಲೆ ಸಂಗೀತಗಾರರು, ವಾದ್ಯಗಾರರು ಹಾಗೂ ನರ್ತಕಿಯರನ್ನು ಕೆತ್ತಿರುವ ಬಗೆ ಕಣ್ಸೆಳೆಯುವಂತಿದೆ. ಅಂತೆಯೇ ಹೂಬಳ್ಳಿಗಳ ನಡುವೆ ಚಿತ್ರಿಸಿರುವ ನರ್ತಕರೂ ವಾದಕರೂ ಗಮನಸೆಳೆಯುತ್ತಾರೆ.

ಲಲಾಟದಲ್ಲಿ ಗಜಲಕ್ಷ್ಮಿಯನ್ನು ಚಿತ್ರಿಸಿದ್ದರೆ, ಬಾಗಿಲ ಇಕ್ಕೆಲಗಳಲ್ಲಿ ಪಟ್ಟಿಕೆಗಳ ಕೆಳಗೆ ದ್ವಾರಪಾಲಕರೂ ಚಾಮರಧಾರಿಣಿಯರೂ ಕಂಡುಬರುತ್ತಾರೆ. ನಡುಮಂಟಪದ ನಾಲ್ಕು ಕಂಬಗಳು ಬುಡದಲ್ಲಿ ಚತುರಸ್ರವಾಗಿದ್ದು, ಇಲ್ಲಿನ ಚೌಕಗಳಲ್ಲಿ ಮಹಾವಿಷ್ಣುವಿನ ವಿವಿಧ ರೂಪಗಳನ್ನು ಕಾಣಬಹುದು. ಮೇಲೆ ನಾಲ್ಕುಸ್ತರಗಳ ಗೋಪುರ. ಅನೇಕ ಕೀರ್ತಿಮುಖಗಳ ಸಿಂಗಾರದ ನಡುವೆ ಮಹಾವಿಷ್ಣು, ನರಸಿಂಹ, ಶಿವ ಮೊದಲಾದ ದೇವತಾಶಿಲ್ಪಗಳನ್ನು ಇರಿಸಲಾಗಿದೆ.

ಶಿವನ ಗುಡಿಗಿಂತ ಚಿಕ್ಕದಾದ ಕೇಶವನ ಗುಡಿ ಜನವಸತಿಗಳ ನಡುವೆ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಶಿವನ ಗುಡಿಯಲ್ಲಿರುವಂತೆಯೇ ಇಲ್ಲೂ ತಳಭಾಗದಲ್ಲಿ ಸರಳವಾದ ಅಧಿಷ್ಠಾನವಿದ್ದು ಮೇಲೆ ಗೋಡೆಯಲ್ಲಿ ಕಂಬಗಳನ್ನೂ ಗೋಪುರಗಳನ್ನೂ ರೂಪಿಸಿದೆ. ಮೇಲೆ ನಾಲ್ಕುಸ್ತರಗಳ ಗೋಪುರವನ್ನು ಕೀರ್ತಿಮುಖಗಳೂ ದೇವತಾಶಿಲ್ಪಗಳೂ ಅಲಂಕರಿಸಿವೆ. ಗರ್ಭಗುಡಿಯ ಬಾಗಿಲೆಡೆಯ ಪಟ್ಟಿಕೆಗಳು ಸುಂದರವಾಗಿವೆ.

(ಚಿತ್ರಗಳು: ಲೇಖಕರವು)

ಇಲ್ಲೂ ಹೂಬಳ್ಳಿಗಳೆಡೆಯಲ್ಲಿ ನರ್ತಕ, ವಾದ್ಯಗಾರರನ್ನು ಚಿತ್ರಿಸಲಾಗಿದೆ. ಗರ್ಭಗುಡಿಯಲ್ಲಿರುವ ಕೇಶವನ ಆಳೆತ್ತರದ ವಿಗ್ರಹವು ಚಾಲುಕ್ಯಕಾಲದ ಶಿಲ್ಪಕಲೆಯ ಉತ್ತಮ ಮಾದರಿಗಳಲ್ಲೊಂದು. ಮೇಲಿನ ಕೈಗಳಲ್ಲಿ ಶಂಖಚಕ್ರಗಳನ್ನೂ ಬಲಗೈಯಲ್ಲಿ ಪದ್ಮ, ಎಡಗೈಯಲ್ಲಿ ಗದೆಯನ್ನೂ ಧರಿಸಿರುವ ಕೇಶವನ ವಿಗ್ರಹ ಮಂದಸ್ಮಿತದೊಡನೆ ಶೋಭಾಯಮಾನವಾಗಿದೆ. ಪಾದಪೀಠದ ಮುಂದೆ ಗರುಡ ಉಪಸ್ಥಿತನಾಗಿದ್ದಾನೆ.

ಹೂವಿನ ಹಡಗಲಿಗೆ ಬರುವವರು ಸನಿಹದ ಹಿರೇ ಹಡಗಲಿ, ಬಾಗಳಿ, ನೀಲಗುಂದ, ಹೊಳಲು ಮೊದಲಾದ ಸ್ಥಳಗಳಲ್ಲಿರುವ ಪುರಾತನ ದೇಗುಲಗಳನ್ನೂ ಸಂದರ್ಶಿಸಬಹುದು.