ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್‍ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ “ಮಿಲ್ಕ್‌ಮ್ಯಾನ್” ಕಾದಂಬರಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ಈ ಕಾದಂಬರಿಯಲ್ಲಿ ಒಬ್ಬರಿಗೂ ಹೆಸರಿಲ್ಲ. ಸ್ವತಃ ಕಥಾನಾಯಕಿಯನ್ನೇ ಇಲ್ಲಿ ‘ಮಿಡಲ್ ಸಿಸ್ಟರ್’ ಎಂದು ಸಂಬೋಧಿಸಲಾಗಿದೆ. ಉಳಿದಂತೆ ಮೊದಲ ಅಕ್ಕ, ಎರಡನೆಯ ಬಾವ, ಸಂಭಾವ್ಯ (ಮೇ ಬಿ) ಬಾಯ್‌ಫ್ರೆಂಡ್, ಲಾಂಗೆಸ್ಟ್ ಫ್ರೆಂಡ್… ಹೀಗೆಯೇ ಸಾಗುತ್ತದೆ ಪಾತ್ರಗಳ ಹೆಸರು. 2018ರ ಬೂಕರ್ ಪ್ರಶಸ್ತಿ ಪಡೆದ ‘ಮಿಲ್ಕ್‌ಮ್ಯಾನ್’ ಕಾದಂಬರಿಯಲ್ಲಿ ಯಾವ ಹೆಸರನ್ನೂ ಧರಿಸಲು ಒಪ್ಪದ ಅನಾಮಧೇಯರ ದಂಡೇ ನೆರೆದಿದೆ. ಯಾರಿಗೂ ಹೆಸರು ಕೊಡದೇ ಇದು ಕಾಲ ದೇಶಗಳ ಗಡಿ ದಾಟಿ ಮನುಷ್ಯ ಲೋಕಕ್ಕೆ ಸೇರಿದ ಎಲ್ಲರ ಕಥನವಾಗಲಿ ಎನ್ನುವುದು ಕಾದಂಬರಿಗಾರ್ತಿ ಆನಾ ಬರ್ನ್ಸ್‌ರ ಆಶಯವಿರಬಹುದೇನೋ.

ಆನಾ ಬರ್ನ್ಸ್‌ ಕಡುಬಡತನದಲ್ಲಿ ಬದುಕಿದವರು. ಈ ಪುಸ್ತಕದ ಕೃತಜ್ಞತಾ ಪುಟದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ ಸ್ಥಳೀಯ ಫೂಡ್-ಬ್ಯಾಂಕುಗಳನ್ನು, ಸೇವಾಸಂಸ್ಥೆಗಳನ್ನು ಸ್ಮರಿಸಿದ್ದಾರೆ. ಜೀವ ಹಿಂಡುವಂಥ ‘ಬ್ಯಾಕ್ ಅಂಡ್ ನರ್ವ್ ಪೇನ್’ ನಡುವೆಯೇ ನಾಲ್ಕು ವರ್ಷಗಳ ದೀರ್ಘ ಅವಧಿ ತೆಗೆದುಕೊಂಡು ಈ ಕಾದಂಬರಿಯನ್ನು ಬರೆದಿದ್ದಾರೆ. ಅವರ ಕಾದಂಬರಿಗೆ ಬೂಕರ್ ಪ್ರಶಸ್ತಿ ಸಿಕ್ಕ ಮುಂಜಾನೆ “ಪ್ರಶಸ್ತಿಯ ಹಣವನ್ನು ಏನು ಮಾಡುತ್ತೀರಿ?” ಎಂದು ಬಿಬಿಸಿ ಕೇಳಿದ ಪ್ರಶ್ನೆಗೆ “ಮೊದಲು ಒಂದಿಷ್ಟು ಸಾಲ ತೀರಿಸಬೇಕಿದೆ” ಎಂದು ಹೇಳಿದ್ದರು.

ಮಿಲ್ಕ್‌ಮ್ಯಾನ್ ಕಾದಂಬರಿ ತೆರೆದುಕೊಳ್ಳುವುದು ಎಪ್ಪತ್ತರ ದಶಕದ ಉತ್ತರ ಐರ್ಲ್ಯಾಂಡಿನ ಬೆಲ್‌ಫಾಸ್ಟ್ ಪ್ರಾಂತ್ಯದಲ್ಲಿ. ಆಗ ಅಲ್ಲಿ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಗಳ ಕಾರಣವಾಗಿ ‘ದ ಟ್ರಬಲ್ಸ್’ ಎನ್ನುವ ಕಾಲಘಟ್ಟ ನಡೆಯುತ್ತಿತ್ತು. ಐರ್ಲ್ಯಾಂಡಿನೊಳಗಿನ ಘರ್ಷಣೆಗೆ ಇನ್ನೂರು ವರ್ಷಗಳ ಇತಿಹಾಸವಿದೆ. ತಾವು ವಾಸವಿರುವ ಉತ್ತರ ಐರ್ಲ್ಯಾಂಡ್ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆಯಬೇಕು, ದಕ್ಷಿಣ ಐರ್ಲ್ಯಾಂಡಿನ ಜೊತೆಗೆ ಒಂದಾಗಿ ಸಮಗ್ರ ಐರ್‍ಲ್ಯಾಂಡ್ ಸ್ಥಾಪನೆಯಾಗಬೇಕು ಎನ್ನುವುದು ಆ ಕಾಲಕ್ಕೆ ಆ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಾದ ಕ್ಯಾಥಲಿಕ್ ಪಂಥದವರ ಒಮ್ಮತದ ಅಭಿಪ್ರಾಯವಾಗಿತ್ತು. (ಇತ್ತೀಚಿನ ಗಣತಿಯ ಪ್ರಕಾರ ಈಗಿನ ಉತ್ತರ ಐರ್ಲ್ಯಾಂಡಿನಲ್ಲಿ ಕ್ಯಾಥಲಿಕ್ ಪಂಥದವರೇ ಬಹುಸಂಖ್ಯಾತರೆಂದು ವರದಿ ಬಂದಿದೆ.) ಆದರೆ ಪ್ರೊಟೆಸ್ಟಂಟ್ ಮತದವರು ಯುನೈಟೆಡ್ ಕಿಂಗ್‌ಡಂಗೇ ಸೇರಬೇಕೆನ್ನುವವರು. ಈ ಎರಡು ಮತದವರ ರಾಜಕೀಯ, ಧಾರ್ಮಿಕ ಕಲಹದ ಕಥನ ಈ ಕಾದಂಬರಿ. ಆದರೆ ಈ ರಾಜಕೀಯ ಕಥನವನ್ನು ಹೊರಗಿನಿಂದ ನೋಡದೇ ಹದಿಹರೆಯದ ಮನಸ್ಸೊಂದರ ಒಳಗಿನಿಂದ ನೋಡಿದಂತಿರುವುದು ಕಾದಂಬರಿಯ ಅತಿ ದೊಡ್ಡ ಪ್ಲಸ್ ಪಾಯಿಂಟ್.

ಈ ಅಂತರ್ಯುದ್ಧ ನಡೆಯುವಾಗ ಜನಸಾಮಾನ್ಯರ ಒಳ ಜೀವನದ ಕುರಿತು ಈ ಬರಹವಿದೆ. ಗೂಢಚಾರಿಗಳು, ಪ್ಯಾರಾಮಿಲಿಟರಿ ಆಫಿಸರ್‌ಗಳು, ಮಿಲಿಟರಿಯವರು ಸಾಮಾನ್ಯರ ಜೀವನವನ್ನು ಅನುಮತಿಯಿಲ್ಲದೇ ಹೇಗೆ ಆಕ್ರಮಿಸಿದ್ದರು, ರಸ್ತೆಯಲ್ಲಿ ನಡೆಯುವಾಗ ಮರಗಳಿಂದ, ಪೊದೆಗಳಿಂದ ಕ್ಯಾಮರಾದ ಕ್ಲಿಕ್‌ಗಳನ್ನು ಕೇಳುವುದು ಹೇಗೆ ಸಾಮಾನ್ಯವಾಗಿತ್ತು, ತಮ್ಮನ್ನು ಯಾರೋ ಹಿಂಬಾಲಿಸಿ ಬರುತ್ತಿದ್ದಾರೆ ಎನ್ನುವ ಭಾವ ಎಲ್ಲರ ಮನಸ್ಸಿನಲ್ಲೂ ಹೇಗೆ ಹಾಸುಹೊಕ್ಕಾಗಿತ್ತು ಎಂದು ಕ್ಯಾಥಲಿಕ್ ಮನೆತನದಲ್ಲಿ ಹತ್ತು ಜನ ಒಡಹುಟ್ಟಿದವರ ಜೊತೆಗೆ ಬೆಳೆದ ‘ಮಿಡಲ್ ಸಿಸ್ಟರ್’ ಎಂಬ ನಿರೂಪಕಿ ತೆರೆದಿಡುತ್ತಾಳೆ.

ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್‍ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.

ಹೀಗಿರುವಾಗ ಅವನು ಸಿಗುತ್ತಾನೆ. ಈಕೆ ‘ಐವನ್‌ಹೋ’ ಎಂಬ ಕಾದಂಬರಿ ಓದುತ್ತ ನಡೆಯುವಾಗ ರಸ್ತೆ ಮಧ್ಯದಲ್ಲಿ ಕಾರು ನಿಲ್ಲಿಸಿ ಲಿಫ್ಟ್ ಬೇಕೆ ಎಂದು ಕೇಳುತ್ತಾನೆ. ಈಕೆಗಿಂಥ ಇಪ್ಪತ್ಮೂರು ವರ್ಷ ದೊಡ್ಡವನು ಅವನು. ಹೆಸರು ಮಿಲ್ಕ್‌ಮ್ಯಾನ್. ಹಾಗಂತ ಅವನು ಯಾರಿಗೂ ಹಾಲು ಮಾರುವವನಲ್ಲ. ಈ ಊರಿನಲ್ಲಿ ಅಸಲಿ ಮಿಲ್ಕ್‌ಮ್ಯಾನ್ ಬೇರೆಯವನಿದ್ದಾನೆ. ಆತ ಈಕೆಯ ತಾಯಿಯ ಸ್ನೇಹಿತ. ಚಿಕ್ಕಂದಿನಿಂದಲೂ ಕಂಡು ಬಲ್ಲವನು. ಆತನ ಹತ್ತಿರವೇ ಇವರು ನಿತ್ಯ ಹಾಲು ಖರೀದಿಸುವುದು.

ಆದರೆ ಈಗ ರಸ್ತೆಯಲ್ಲಿ ಮಾತನಾಡಿಸಿದ ಮಿಲ್ಕ್‌ಮ್ಯಾನ್ ಒಬ್ಬ ಕ್ರಾಂತಿಕಾರಿ. ಅವನು ಗೂಢಚಾರಿಯಿದ್ದರೂ ಇರಬಹುದು ಎಂಬ ಶಂಕೆಯಿದೆ ಕಥಾ ನಾಯಕಿಗೆ. ಆಕೆ ಯಾವ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಾಳೆ, ಎಲ್ಲಿ ಕೆಲಸ ಮಾಡುತ್ತಾಳೆ, ಆಕೆಯ ಸ್ನೇಹಿತರ್ಯಾರು, ಯಾವ ಬಸ್ಸು ಹಿಡಿಯುತ್ತಾಳೆ ಎಂಬುದನ್ನೆಲ್ಲ ಚಾಚೂ ತಪ್ಪದೇ ಅವನು ಹೇಳಿದಾಗ ಈಕೆ ಬೆದರುತ್ತಾಳೆ. ಕೆಲವೊಮ್ಮೆ ತನ್ನ ಮನಸ್ಸಿನೊಳಗಿನ ಮಾತುಗಳನ್ನೂ ಇವನು ಓದುತ್ತಿದ್ದಾನೇನೋ ಎಂಬ ಭಯ ಆಕೆಗೆ ಕಾಡುತ್ತದೆ.

‘ಮಿಲ್ಕ್‌ಮ್ಯಾನ್’ ಕಾದಂಬರಿಯಲ್ಲಿ ಯಾವ ಹೆಸರನ್ನೂ ಧರಿಸಲು ಒಪ್ಪದ ಅನಾಮಧೇಯರ ದಂಡೇ ನೆರೆದಿದೆ. ಯಾರಿಗೂ ಹೆಸರು ಕೊಡದೇ ಇದು ಕಾಲ ದೇಶಗಳ ಗಡಿ ದಾಟಿ ಮನುಷ್ಯ ಲೋಕಕ್ಕೆ ಸೇರಿದ ಎಲ್ಲರ ಕಥನವಾಗಲಿ ಎನ್ನುವುದು ಕಾದಂಬರಿಗಾರ್ತಿ ಆನಾ ಬರ್ನ್ಸ್‌ರ ಆಶಯವಿರಬಹುದೇನೋ.

ದಿನಗಳೆದಂತೆ ಇನ್ನೆರಡು ಬಾರಿ ಈ ಮಿಲ್ಕ್‌ಮ್ಯಾನ್ ಆಕೆಗೆ ರಸ್ತೆಯಲ್ಲಿ ಸಿಗುತ್ತಾನೆ. ಒಮ್ಮೆಯೂ ಮುಟ್ಟದೇ, ಮಧುರ ಭಾವವನ್ನೂ ತೋರಿಸದೇ ಹಿಂಬಾಲಿಸಿ ಹಿಂಸೆ ಕೊಡುವವರ ಮನಸ್ಥಿತಿಯನ್ನು ಹದಿನೆಂಟು ವರ್ಷದ ಯುವತಿಯ ಕಣ್ಗಳಲ್ಲಿ ಕಾಣಿಸುತ್ತಲೇ ಆಕೆಯನ್ನು ಹತ್ತಿರಕ್ಕೆ ಕರೆತರುತ್ತಾರೆ ಆನಾ ಬರ್ನ್ಸ್‌. ಒಮ್ಮೆ ಈಕೆಯ ಸಂಭಾವ್ಯ ಬಾಯ್‌ಫ್ರೆಂಡನ್ನು ಕೊಲೆ ಮಾಡಿಸುವ ಸಾಧ್ಯತೆಯ ಬಗ್ಗೆ ಸಹಜ ದನಿಯಲ್ಲೇ ಸುಳುಹು ಕೊಟ್ಟು ಇನ್ನಷ್ಟು ಹೆದರಿಸುತ್ತಾನೆ ಆತ. ಊರಿನಲ್ಲಿ, ಸಂಬಂಧಿಕರ ನಡುವೆ ಈಕೆಗೂ, ಆ ವಯಸ್ಕ ಮಿಲ್ಕ್‌ಮ್ಯಾನ್‌ನಿಗೂ ಅನೈತಿಕ ಸಂಬಂಧವಿದೆ ಎಂದು ಗಾಳಿಸುದ್ದಿಯೊಂದು ತೇಲುತ್ತದೆ. ಈಗಾಗಲೇ ಮದುವೆಯಾಗಿ ಹೆಂಡತಿಯಿರುವ ಮಿಲ್ಕ್‌ಮ್ಯಾನ್‌ನನ್ನು ಮರಳು ಮಾಡಿದ ಈಕೆಯ ಮೇಲೆಯೇ ಎಲ್ಲರ ತಾತ್ಸಾರ, ಕೊಂಕು.

ಲಿಂಗ ರಾಜಕಾರಣ, ದೇಹ ರಾಜಕಾರಣದ ಕುರಿತ ಚರ್ಚೆಯನ್ನು ಈ ಪುಸ್ತಕದಲ್ಲಿ ಹೆಸರು ತೆಗೆದುಕೊಳ್ಳದೇ ಪ್ರಸ್ತಾಪಿಸಲಾಗಿದೆ. ಕಥಾ ನಾಯಕಿ ಮಿಡಲ್ ಸಿಸ್ಟರ್, ಸಮೀಪಿಸಿದ ಗಂಡಸಿನೊಟ್ಟಿಗೆ ತಾನು ಹೆಣ್ಣೆಂಬ ಒಂದೇ ಕಾರಣಕ್ಕಾಗಿ ಯಾವ ಧಾಟಿಯಲ್ಲಿ ಮಾತನಾಡಬಹುದು, ಹೇಗೆ ಮಾತನಾಡಲೇ ಬಾರದು, ಹೇಗೆ ವರ್ತಿಸಬಹುದು ಮತ್ತು ಹೇಗೆ ವರ್ತಿಸಲೇಬಾರದು ಎಂಬ ಸಂಗತಿಗಳ ಕುರಿತು ಬುದ್ಧಿಪೂರ್ವಕವಾಗಿ ನಡವಳಿಕೆಗಳನ್ನು ಬದಲಿಸಿಕೊಳ್ಳುವ ಒತ್ತಡವನ್ನು ತನ್ನ ಮೇಲೆಯೇ ತಾನು ಹೇರಿಕೊಳ್ಳುತ್ತಾಳೆ. ಸಮಾಜ ಹಾಕಿದ ಚೌಕಟ್ಟುಗಳನ್ನು ಮೀರಲೇ ಆಗದ ಕ್ಲೇಶ ಅದು.

ಊರಿನಲ್ಲಿ ಪದೇ ಪದೇ ಹೇರುತ್ತಿದ್ದ ಕರ್ಫ್ಯೂವನ್ನು ಮಹಿಳೆಯರು ಹೇಗೆ ನಿರ್ಲಕ್ಷಿಸುತ್ತಿದ್ದರು ಎಂಬ ಬಗ್ಗೆ ಸ್ವಾರಸ್ಯಕರ ಕತೆಯಿದೆ. ಆರು ಘಂಟೆಯಿಂದ ಕರ್ಫ್ಯೂ ಜಾರಿಯಿದೆ ಎಂದು ಗೊತ್ತಾಗಿದ್ದರೆ ಎಲ್ಲ ಹೆಂಗಸರು ತಮ್ಮ ಒಟ್ಟೂ ಮಕ್ಕಳ- ಸಾಕು ಪ್ರಾಣಿಗಳ ಸೈನ್ಯದೊಂದಿಗೆ ರಸ್ತೆಗಳಲ್ಲಿ “ಕರ್ಫ್ಯೂ ಮುಗಿದಿದೆ, ಎಲ್ಲರೂ ಹೊರಗೆ ಬರಬಹುದು” ಎಂದು ಕೂಗುತ್ತ ನಡೆಯುತ್ತಾರೆ. ನೂರಾರು ಹೆಂಗಸರು, ಅವರಿಗೆ ಅಂಟಿಕೊಂಡ ನಾನಾ ವಯಸ್ಸಿನ ಮಕ್ಕಳು, ಜೊತೆಗೆ ನಾಯಿ, ಬೆಕ್ಕು, ಮಂಗ, ಪಾರಿವಾಳ ಮುಂತಾದ ಸಾಕುಪ್ರಾಣಿಗಳ ಗುಂಪಿನ ಮೇಲೆ ಗುಂಡು ಹಾರಿಸಲಾಗದೇ ಮಿಲಿಟರಿಯವರು ಮೌನವಾಗಿ ನಿಂತು ನೋಡಲೇ ಬೇಕಾಗುತ್ತದೆ.

ಒಮ್ಮೆ ಮಾತ್ರ ಊರಿನ ನಾಯಿಗಳನ್ನೆಲ್ಲ ಧಾರುಣವಾಗಿ ಮಿಲಿಟರಿಯವರು ಹತ್ಯೆ ಮಾಡಿರುತ್ತಾರೆ. ಕುತ್ತಿಗೆ ಮುರಿದುಕೊಂಡು ನಿಶ್ಚಲವಾಗಿ ಬಿದ್ದುಕೊಂಡ ನೂರಾರು ನಾಯಿಗಳಲ್ಲಿ ತಮ್ಮ ನಾಯಿಯನ್ನೂ ಹುಡುಕುವ ಮಕ್ಕಳ ದೃಶ್ಯ ಅಸಾಧಾರಣ ಶೋಕವನ್ನು ತಂದೊಡ್ಡುತ್ತದೆ.
ಮೊದಲೇ ಪ್ರಸ್ತಾಪಿಸಿದಂತೆ, ಈ ಕಾದಂಬರಿಯಲ್ಲಿ ಇನ್ನೊಬ್ಬ ಮಿಲ್ಕ್‌ಮ್ಯಾನನೂ ಇದ್ದಾನೆ. ಮಿಡಲ್ ಸಿಸ್ಟರ್‌ಳ ತಂದೆ ತೀರಿಕೊಂಡ ನಂತರ ಆಕೆಯ ತಾಯಿಗೆ ಹತ್ತಿರವಾದವನು ಅವನು. ಅವರ ಬಾಲ್ಯಕಾಲದ ಸ್ನೇಹ ಮೆಲ್ಲನೆ ಇಳಿವಯಸ್ಸಿನ ಪ್ರೇಮವಾಗಿ ರೂಪಾಂತರಗೊಳ್ಳುತ್ತಿದೆ. ಈ ಪ್ರೇಮ ಪ್ರಕರಣದಿಂದಾಗಿ ತಾಯಿ ಮಗಳ ಸಂಬಂಧವೂ ಕ್ರಮೇಣ ಬದಲಾಗುತ್ತಿದೆ. ಬೇಗನೊಂದು ಮದುವೆಯಾಗೆಂದು ಪೀಡಿಸುತ್ತಿದ್ದ ತಾಯಿ ಈಗ ತನ್ನ ದೇಹ- ಮನಸ್ಸುಗಳ ಶೃಂಗಾರದಲ್ಲಿಯೇ ಕಳೆದು ಹೋಗಿದ್ದು ಮಿಡಲ್ ಸಿಸ್ಟರ್‌ಳಿಗೆ ನೆಮ್ಮದಿ ತಂದಿದೆ. ಇಷ್ಟೆಲ್ಲ ವರ್ಷ ಮಕ್ಕಳ ಆರೈಕೆಯಲ್ಲಿ ಉದಾಸೀನ ಮಾಡಿದ ದೇಹ ಸೌಂದರ್ಯದ ಕುರಿತು ತಾಯಿಗೆ ವಿಶೇಷ ಕಾಳಜಿ ಮೂಡುತ್ತಿದೆ. ಮಗಳ ಒಳ ಉಡುಪುಗಳನ್ನು ತೊಟ್ಟು ನಿಂತು ಹೇಗೆ ಕಾಣುತ್ತೇನೆ ಎಂದು ಕೇಳುವ ತಾಯಿಯ ಕುರಿತು ಈಕೆಗೂ ಮಮತೆ ಮೂಡಿದೆ.

ಕಿರುಕುಳ ಕೊಡುತ್ತಿದ್ದ ಮಿಲ್ಕ್‌ಮ್ಯಾನ್ ಒಮ್ಮೆ ಬಂದು ಡೇಟ್‌ಗೆ ಕರೆಯುತ್ತಾನೆ. ಮಿಡಲ್ ಸಿಸ್ಟರ್ ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಇವರು ಸಿಗಬೇಕಿದ್ದ ದಿನವೇ ಅವನು ಕೊಲೆಯಾಗಿಹೋಗುತ್ತಾನೆ. ಮಿಲ್ಕ್‌ಮ್ಯಾನ್‌ನನ್ನು ಮಿಲಿಟರಿಯವರು ಶೂಟ್ ಮಾಡಿದ ನಂತರವಷ್ಟೇ ಮಿಡಲ್ ಸಿಸ್ಟರ್‌ಳಿಗೆ ಅವನಿಂದ ಮುಕ್ತಿ ಸಿಗುವುದು. ಕಾದಂಬರಿಯ ಕೊನೆಯಲ್ಲಿ ಆಪ್ತ ಸ್ನೇಹಿತನಂತಿರುವ ತನ್ನ ಮೂರನೆಯ ಬಾವನೊಂದಿಗೆ ಜಾಗ್ ಮಾಡಲು ಶುರುಮಾಡುತ್ತಾಳೆ ಮಿಡಲ್ ಸಿಸ್ಟರ್.

ರಾಜಕೀಯ ಅಸ್ಥಿರತೆಯ ನಾಡಿನಲ್ಲಿ ಓಟವೇ ಸ್ಥಾಯಿಯಾದಂತೆ, ಚಲನೆಯಲ್ಲಿ ಮಾತ್ರ ಚೈತನ್ಯ ಕಂಡುಕೊಳ್ಳುವುದು ಅನಿವಾರ್ಯವಾದಂತೆ ಕಾದಂಬರಿ ಸಂಚಾರದಲ್ಲಿಯೇ ಮುಗಿಯುತ್ತದೆ.