ಅವಳ ಹೆಸರು
ಮರಳ ದಂಡೆಯ ಮೇಲೆ
ಅವಳ ಎರಡಕ್ಷರದ ಹೆಸರ
ಚೆಂದವಾಗಿ ಬರೆದು,
ಅಲ್ಲೇ ಚೆಲ್ಲಾಡಿದ್ದ ಕಪ್ಪೆಚಿಪ್ಪು
ನಕ್ಷತ್ರ ಮೀನುಗಳ ಹುಡುಕಿ,
ಸುತ್ತಲೂ ಪೋಣಿಸಿ ಕಣ್ಣು
ತುಂಬಿಕೊಂಡದ್ದು,
ಸಾಗರದಾಳದಷ್ಟು
ಇಳಿದಿದೆ, ಎದೆಯೊಳಗೆ
ಕೆಲವೇ ಹೊತ್ತಿಗೆ ಇವೆಲ್ಲವೂ
ಅಲ್ಲಿರಲೇ ಇಲ್ಲ ಎಂಬಂತೆ
ಅಳಿಸಿಹಾಕಿದ ಕಿಡಿಗೇಡಿ ಅಲೆ,
ಮತ್ತೆ ಮತ್ತೆ ದಡಕ್ಕೆ ಬರುತ್ತಿದೆ
ಅವಳ ಹೆಸರ ಹುಡುಕಿ..
ಕತ್ತಲಾದಾಗ ಕೈಹಿಡಿದು
ತಂಗಾಳಿಗೆ ಎದೆಯೊಡ್ಡಿ,
ದಡದಗುಂಟ ಓಡಾಡೋಣ
ಎಂದಿದ್ದವಳು..
ಅಂದಿನಿಂದಲೂ ನನಗೆ
ಸಿಕ್ಕೇ ಇಲ್ಲ ಎಂಬುದು
ಹೇಗೆ ಗೊತ್ತಾಗಬೇಕು ಅದಕ್ಕೆ?
ನನ್ನಂತೆಯೇ ದಡ್ಡನ ಹಾಗೆ
ದಿನವೂ ತಬ್ಬಲು ನೋಡುತ್ತದೆ
ಅಪ್ಪಳಿಸಿ ದಡಕ್ಕೆ..
ಹೇಮಂತ್ ಎಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು.
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ, ಬೆವಿಕಂ ನೆಲಮಂಗಲ ವಿಭಾಗದಲ್ಲಿ ಸಹಾಯಕ ಇಂಜಿನಿಯರ್(ವಿ.) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕಥೆ, ಕವಿತೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.
ಕಲಾಕೃತಿ : ಮೋನಿ (Monet)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಚೆನ್ನಾಗಿದೆ ಕವಿತೆ
ತಂಬಾ ಚೆನ್ನಾಗಿದೆ… ಶೀರ್ಷಿಕೆ ಕೂಡಾ.