Advertisement
ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’. ಅವಳ ಮಾತೊಳಗಿದ್ದ ಗಟ್ಟಿತನಕ್ಕ ಅದೆಂಥಾ ದೊಡ್ಡೊರಾದರೂ ಅಂಜಿಕ್ಯಂತಿದ್ರು.
ಸುವರ್ಣ
ಚೆಳ್ಳೂರು ಬರೆಯುವ “ಆಕಿ” ಸರಣಿಯ ಎಂಟನೆಯ ಬರಹ

ಅವತ್ತು ಅತ್ತಿ ನಾನು ಹೊಲದಾಗ ರಾಶಿ ಕಾಯಾಕ ಮತ್ತೆ ಹೋದ್ವಿ, ಆಕಾಶದಾಗ ನಕ್ಷತ್ರಗಳೆಲ್ಲ ಪಳಾ ಪಳಾ ಹೊಳದು ನಗಾಕತಿದ್ವು, ಅತ್ತಿ ಹಾಡಾಕ ಶುರು ಮಾಡಿದ್ಲು.

‘ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?’
ಅತ್ತಿ ಇದು ನಮ್ಮ್ ಪಾಠದಾಗಿನ ಪದ್ಯ ಜಿ.ಎಸ್. ಶಿವರುದ್ರಪ್ಪ

ಬರದಿರಾದು ನೀ ಹೆಂಗ್ ಕಲತಿ?

ಅತ್ತಿ ನಗ್ತಾ ‘ಲೇ ಶಿವಮ್ಮ ನಾ ದಿನಾ ಹೊಲಕ್ಕ ಬರುವಾಗ ಆ ಮ್ಯಾಗಡೆ ಮನ್ಯಾಗ ರೇಡಿಯೊ ಹಾಕಿದ್ರು. ಇವತ್ತು ಅದರಾಗ ಈ ಹಾಡು ಬಂದಿತ್ತು ಕೇಳಿ ಕಲ್ತಿನಿ’ ಅಂದು ಹಾಡು ಮುಂದುವರಿಸಿದ್ಲು.

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಅತ್ತಿ ಹಾಡಾದು ಕೇಳ್ತಾ ಆಕಾಶದಾಗಿನ ನಕ್ಷತ್ರಗಳನ್ನ ನೋಡ್ತಾ ನಾನು ಅತ್ತಿ ಜೊತಿಗೆ ಧ್ವನಿ ಗೂಡಿಸಿದೆ, ಅದೆನೊ ಒಂಥರಾ ನಮ್ಮದೇ ಸ್ವಾತಂತ್ರ್ಯವನ್ನ ಪಡಕೊಂಡಂಗೆ, ಹೊಲದ ಬಯಲು, ಆಕಾಶದ ನಕ್ಷತ್ರ, ಸುತ್ತ ಸುಳದಾಡ್ತಿದ್ದ ತಣ್ಣನ ಗಾಳಿ, ಆ ಗಾಳಿಗೆ ತಲೆದೂಗ್ತಿದ್ದ ಜಾಲಿಗಿಡ ಮತ್ತ ನಾವು!

ಅತ್ತಿ ಹಿಂಗ ಹೊಲಕ್ಕ ಬಂದಾಗ ತುಂಬಾ ಖುಷಿಯಾಗಿರಾಕಿ, ತುಂಬಾ ಎತ್ತರ ಇದ್ದ ಲಸಮಮ್ಮತ್ತಿ, ಹಣಿಗೊಂದು ಬೊಟ್ಟು, ಕಂದು ಹಸರ ಬಣ್ಣದ ಕುಬ್ಬಸ, ಅದರ ಮ್ಯಾಗಿನ ಬಿಳಿ ಬಣ್ಣದ ಸಣ್ಣ ಸಣ್ಣ ಚಿತ್ರ, ಆಕಿ ಕಿವ್ಯಾಗಿನ ಬುಗುಡಿ ಕಡ್ಡಿ, ಕೈಯ್ಯಾಗ ಯಾವಾಗಲೂ ಇರ್ತಿದ್ದ ಬಳಿ, ಆಕಿ ಮುಖದಾಗಿದ್ದ ನಗು ಎಲ್ಲಾ ಸೇರಿ ಆಕಿ ಚೆಂದ ಕಾಣತಿದ್ಲು. ಅಕಿನ ನೋಡ್ತಾ ನೋಡ್ತಾ ಅತ್ತಿಗೆ ಕೇಳಿದೆ;
‘ಅತ್ತಿ… ನೀ ನೋಡಾಕ ಚೆಂದದಿ ನೋಡಬೇ!’
ಅತ್ತಿ ಗಲ್ಲ ಹಿಂಡಿ ‘ನೀನು ನನ್ನಂಗಾ ಅದಿ ಸುಂದ್ರಿ’

ಇಬ್ರೂ ಜೋರಾಗಿ ನಕ್ವಿ. ನಾನು ಮತ್ತೆ ಅವಳನ್ನ ನೋಡ್ತಾ

‘ಅತ್ತಿ ಊರಾಗ ಎಲ್ಲಾರೂ ಅಂತಾರ, ಗಂಡ ಸತ್ತಿರೊ ಹೆಣ್ಮಕ್ಕಳು ಕುಂಕುಮ ಇಡಬಾರದು, ಬಳಿ ಹಾಕಬಾರದು, ಹೂ ಇಟಗಬಾರದಂತ, ಆದ್ರ ನೀ ಹಂಗಿಲ್ಲಲಾ?’

ಅತ್ತಿ ನನ್ನನ್ನ ದಿಟ್ಟಿಸಿ ನೋಡ್ತಾ ‘ಲೇ ಶಿವು, ಅವೆಲ್ಲಾ ಗಂಡನ ಜೊತಿಗೆ ಬದುಕು ಬಾಳೆವು ಮಾಡಿರಾರಿಗೆ, ಅಷ್ಟಕ್ಕೂ ಗಂಡ ಸತ್ತ ಅಂದ್ರ ನಾವು ಅವರ ನೆನಪು ಮಾಡ್ಕೊಳ್ಳೋದು ಸಹಜ. ಆದ್ರ, ನಾವು ಕೂಡ ಸತ್ತಂಗ ಬದುಕಬೊಕು ಅಂತ ಯಾರೂ ಹೇಳಿಲ್ಲ ತಿಳಕಾ! ನಾವು ಹೆಣಮಕ್ಕಳು ಆಗಾಕೂ ಮುಂಚೆ ಮನಷ್ಯಾರದಿವಿ, ನಮಗ ಅನಿಸಿದಂಗ ನಾವೂ ಬದುಕಬೊಕು’

ಅತ್ತಿ ಹೇಳಿದ ಮಾತು ಸಟಕ್ಕನ ಸೀದಾ ಎದಿಯೊಳಾಗ ನಾಟಿದಂಗಾತು.

ಅತ್ತಿ ಮಾತು ಮುಂದುವರಿಸಿ ‘ನಿಮ್ಮ್ ಸಾಲ್ಯಾಗ ಇವನ್ನೆಲ್ಲ ಹೇಳಿ ಕೊಡಲ್ಲನು? ಬರೀ ಪಾಠ ಮಾಡಿ ಹೋಗ್ತಾರಾ ಹೆಂಗ್?’

‘ನಮ್ಮ್ ಸಾಲ್ಯಾಗಿವನೆಲ್ಲ ಹೇಳ್ತಾರ ಆದ್ರ ಅವು ಪರೀಕ್ಷೆ ಬರಿಯಾಕ ಅಷ್ಟೇ!’

ಅತ್ತಿ ತಲಿಮ್ಯಾಲ ಕೈ ಇಟ್ಟು ‘ಹಿಂಗಾದ್ರ ಉದ್ಧಾರ ನೀನು, ಬದುಕಿಗೆ ಅಕ್ಷರಗಳೂ ಬೇಕು ಶಿವಮ್ಮ, ನಿಮ್ಮ ಜೀವನ ನೀವು ಕಟ್ಟಿಗ್ಯನಾಕ, ಹಂಗ ಅದರಾಚೆಗೆ ಇರೊ ನಿಜವಾದ ಬದುಕಿನ್ಯಾಗ ಹೆಣಮಕ್ಕಳಾಗಿ ಹೆಂಗಿರಬೊಕು ಅನ್ನೋದನ್ನು ಕಲತಿರಬೊಕು’.

ಅತ್ತಿ ಮಾತಿಗೆ ನಗುತ್ತಾ ‘ಅತ್ತಿ ಹಂಗಂದ್ರ ನೀ ನಮ್ಮ್ ಸಾಲಿಗೆ ಟೀಚರ್ ಆಗಿ ಬಂದ್ಬುಡು, ಹೆಣ್ಮಕ್ಕಳ ಬಗ್ಗೆ ಮಾತಾಡುವಂತಿ’

‘ಅಲಲೇ ಹೆಣ್ಮಕ್ಕಳ ಬಗ್ಗೆ ಅಷ್ಟು ಹಗುರ ತಿಳಕಬಾಡ, ನಮಿಗೆ ಅಕ್ಷರ ಬರಂಗಿಲ್ಲ; ಆದ್ರ ಬದುಕು ಬಾಳೆವಿನ ಬಗ್ಗೆ ಅರಿವು ಐತಿ. ನಮ್ಮೂರಾಗ ಒಬ್ಬಾಕಿ ಜೂನಿ ಬೀರಮ್ಮ ಅಂತಿದ್ಲು ಆಕಿ ಹೆಸ್ರು ಕೇಳಿದನು?’

ಅತ್ತಿ ಹೇಳಿದ್ದು ಕೇಳಿ ಕಣ್ಣರಳಿದ್ವು.

‘ಅತ್ತಿ ಯಾರಬೇ ಆಕಿ ಜೂನಿ ಬೀರಮ್ಮ?
ಹೆಸರು ಹಂಗ್ಯಾಕೈತಿ?
ಆಕಿ ಜೂನಿ ಹಿಡಿತಿದ್ಲನು?
ನಮ್ಮೂರಾಕ್ಯಾ ಆಕಿ?
ಎಲ್ಲದಾಳಾಕಿ?
ಆಕಿ ಬಗ್ಗೆ ಹೇಳಾ…. ಹೇಳಾ…’ ಅಂದಾಗ,

‘ಹೇ ನಿನ ಖೋಡಿ ಸ್ವಲ್ಪ ತಡಿ, ನಾ ಎಲ್ಲಿ ಓಡಿ ಹೋಗಂಗಿಲ್ಲ. ಹಂಗ್ಯಾಕ ಆರ್ ತಿಂಗಳಿಗೆ ಹುಟ್ಟಿದಾರಂಗ ಆಡ್ತಿ.
ಆಕಿ ಕತಿ ಹೇಳ್ತಿನಿ ಕೇಳಿಲ್ಲಿ’

ಅತ್ತಿ ಕತಿ ಹೇಳಾಕ ಶುರು ಮಾಡಿದ್ಲು, ಎರಡೂ ಗಲ್ಲದ ಮ್ಯಾಗ ಕೈ ಇಟ್ಕೊಂಡು ಆಕಿ ಹೇಳಾದನ್ನ ಕೇಳ್ತಾ ಹೋದೆ.

‘ಅದೊಂದು ದೊಡ್ಡ ಊರು, ಮ್ಯಾಗಡೆ ಕೇರಿ ಅಂತ, ನಮ್ಮಂಗ ಅಲ್ಲಿ ಕೂಡ ನೆಲ್ಲು ಬೆಳಿ‌ ಇತ್ತು, ಊರಾಗ ಕೇರಿ, ಊರ ಮಧ್ಯ ದುರ್ಗಮ್ಮನ ಗುಡಿ, ಊರಸುತ್ತ ಹೊಲಗಳು, ಊರೊಳಾಗ ಓಣಿಗಳು ಇದ್ವು. ಇಲ್ಲಿ ಕೇರಿ ಸ್ವಲ್ಪ ಊರಿಂದ ಹೊರಾಗಿತ್ತು, ಅದರ ಹತ್ರಾನ ಊರು ಮಂದಿಯೆಲ್ಲಾ ಬಯಲಿಗೆ ಹೋಗ್ತಿದ್ರು, ಆ ಬಯಲಿನ ವಾಸನಿ, ಅಲ್ಲೆ ಇರ್ತಿದ್ದ ತಿಪ್ಪಿಗುಂಡಿ, ಆ ಕೇರಿಯೊಳಗಿನ ಮನಿಯೊಳಾಗ ಹೋಗ್ತಿತ್ತು, ಆ ಕೇರಿ ಕೊನಿಗೆ ತಿಪ್ಪಿಗೆ ಹತ್ತರ ಆಗಂಗ ಬೀರಮ್ಮನ ಮನಿ ಇತ್ತು, ಆಕಿ ನೋಡಾಕ ದೊಡ್ಡಾಳು, ಯಾವಾಗಲೂ ಮನಿ ಸ್ವಚ್ಛ ಮಾಡಾದು, ಮನಿನೆಲ್ಲಾ ಹಸನ ಮಾಡಾದು, ತಿಕ್ಕಿದ ಪಾತ್ರೆನ ಮತ್ತೆ ಮತ್ತೆ ತಿಕ್ಕಾದು, ಒಂದು ಸ್ವಲ್ಪ ಕಸ ಬಿತ್ತಂದ್ರ ಮತ್ತೆ ಕಸ ಗೂಡಸಾದು ಮಾಡ್ತಿದ್ಲು, ಯಾವಾಗನ ನೋಡು ಕೆಲಸ ಮಾಡಾದು, ಹೊಲದ ಕೂಲಿ ಕೆಲಸ ಮಾಡಾದು, ಮನಿಗೆ ಬಂದು ಮತ್ತೆ ಮನಿ ಸ್ವಚ್ಛ ಮಾಡಾದು ಇದಾ ಮಾಡ್ತಿದ್ಲು, ಆಕಿ ಒಂಚೂರು ಕುಂತಗಂಡು ಉಸುರು ತಗೊಂಡಿದ್ದು ಆ ಊರಾಗ ಯಾರೂ ನೋಡಿರಲಿಲ್ಲ, ಯಾವಾಗಲೂ ಜೂನಿ ಹಾರಾಡಿದಂಗ ಹಾರಾಡ್ಯಾಕಿ ಅದಕಾ ಅಕಿಗೆ ಜೂನಿ ಬೀರಮ್ಮ ಅಂತ ಹೆಸರಿಟ್ಟಿದ್ರು, ಊರಮಂದಿಗೆ ಆಕಿ ಅಂದ್ರ ಅದೊಂತರಾ ಆಡಿಕೊಂಡು ನಗೊರು, ಆಕಿ ಇದ್ಯಾವುದಕ್ಕೂ ತಲಿ ಕೆಡಸ್ಕೊತಿರಲಿಲ್ಲ ತಾನಾಯಿತು ತನ್ನ ಕೆಲಸಾ ಆಯ್ತು ಅನ್ನಂಗ ದುಡಿತಿದ್ಲು.

‘ಜೂನಿ ಬೀರಮ್ಮ ಬಂದ್ಲು, ಜೂನಿ ಬೀರಮ್ಮ ಬಂದ್ಲು…

ನೀ ಎಷ್ಟು ಮನಿ ತಿಕ್ಕಿ ತೊಳದ್ರು ಆ ತಿಪ್ಪಿ ವಾಸನಿ ನಿಮ್ಮನ್ಯಾಕ ಬರಾದು ನಿಲ್ಲಂಗಿಲ್ಲ’ ಅಂತ ಓಣ್ಯಾಗೆಲ್ಲ ನಗೋರು.

ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’

ಅವಳ ಮಾತೊಳಗಿದ್ದ ಗಟ್ಟಿತನಕ್ಕ ಅದೆಂಥಾ ದೊಡ್ಡೊರಾದರೂ ಅಂಜಿಕ್ಯಂತಿದ್ರು. ಹಿಂಗ ಒಮ್ಮಿ ಊರಾಗ ದೊಡ್ಡ ನಾಗರ ಹಾವು ಸುಳಿದಾಡಕತೈತಿ ಅನ್ನೊ ಸುದ್ದಿ ಹಬ್ಬಿತ್ತು, ಕೇರಿ ಹೊರಾಗ ಬೀರಮ್ಮನ ಮನಿ ಇದ್ದಿದ್ದರಿಂದ, ಬಯಲಿನ ತಿಪ್ಪಿಯೊಳಾಗಿದ್ದ ಹಾವು ಇಕಿ ಮನ್ಯಾಗ ಹೋಗಿ ಅದನ್ನ ಹೋರಾಗ ತೆಗ್ಯಾಕ ಯಾರೂ ಮುಂದ‌ ಬರಲಿಲ್ಲ.

ಊರಾಗಿನ ಜನ ಎಲ್ಲಾ ಇದರ ಬಗ್ಗೆ ಆಡಿಕ್ಯನಾಕ ಚಾಲೂ ಮಾಡಿದ್ರು.

‘ಯವ್ವೋ… ಜೂನಿ ಬೀರಮ್ಮನ ಮನ್ಯಾಗ ನಾಗರ ಹಾವು ಬಂದೈತಂತ, ಇಕಿ ಇಷ್ಟು ಎಗರ್ಯಾಡಾಕ ಅದು ಬಂದಿರಾದು, ಹಾವು ಕಡೀಲಿ ಗೊತ್ತಾಕೈತಿ. ಜೂನಿ ರೆಕ್ಕಿ ಮುರದಂಗ ಮೂಲ್ಯಾಗ ಕುಂದ್ರತಾಳ ಮುದುಕಿ. ಕೆಳಜಾತ್ಯಾಕಾದ್ರು ಎಷ್ಟು ಸೊಕ್ಕಿಲೆ ಮೇರಿತಿದ್ಲು ಇಕಿ! ಯಾರ್ ಯಾರ್ ಜಾಗ ಎಲ್ಲಿ ಅಂತ ಗೊತ್ತಿರಬೋಕು, ಇಲ್ಲಂದ್ರ ಆ ದೇವರು ಗೊತ್ತು ಮಾಡಿಸ್ತಾನ’ ಅಂತ ಆಡಿಕೊಳ್ಳೋದನ್ನ ಕೇಳಿ, ಮನೆ ಅಂಗಳಕ್ಕ ಕಾಲಿಡಾಕ ಅಸಹ್ಯ ಪಡಾದು, ಇವರ್ ಮನ್ಯಾಕ ನಾವೆಲ್ಲ ಹೊಗಂಗಿಲ್ಲ ಅನ್ನಾದು ಕೇಳಿ, ಅವಳಿಗದೊಂತರಾ ಆಯ್ತು. ಊರ್ ಬಗ್ಗೆ ಊರಲ್ಲಿರೊರ ಬಗ್ಗೆ ಹೇಸಿಗೆ ಅನ್ನಿಸಿ, ತಾನೆ ಬಡಾಬಡಾ ಮನ್ಯಾಗಿದ್ದ ನಾಗರ ಹಾವನ್ನ ಹಿಡದು, ಬಿಗಿಯಾಗಿ ಅದರ ರುಂಡ ಹಿಡ್ಕೊಂಡು, ತಲೆ ಎತ್ತಿ ಧೈರ್ಯದಿಂದ ನಡೀತಾ ಊರೊಳಗಿನ ದುರ್ಗಮ್ಮನ ಗುಡಿ ಮುಂದೆ ನಿಂತಳು, ಊರಾಗಿನ ಮಂದಿ ಎಲ್ಲಾ ಬಾಯಿ ಮ್ಯಾಗ ಬೆರಳಿಟ್ಟು ನೋಡ್ತಾ ನಡದ್ರು, ಬೀರಮ್ಮ ಹಾವನ್ನ ಗುಡಿಯೊಳಾಕ ಬಿಟ್ಟು, ಊರಮಂದಿನೆಲ್ಲಾ ದಿಟ್ಟಿಸಿ ನೋಡಿ

‘ಜಾತಿ ಜಿಡ್ಡು, ಹೊಲಸ್ ವಾಸನಿ ಎಲ್ಲಾ ನಿಮ್ಮ್ ಒಳಾಗೈತಿ. ಮೊದ್ಲು ಅದನ್ನ ತೊಳಕಂಡು ಸ್ವಚ್ಛ ಆಗ್ರಿ’ ಅಂತ ಅಂದವಳೇ ಗಟ್ಟಿಯಾದ ಹೆಜ್ಜೆಗಳನ್ನ ಇಟ್ಟು ಮನಿ ಕಡೆಗೆ ನಡದ್ಲು’

ಅಂತ ಹೇಳ್ತಾ ಅತ್ತಿ ‘ಶಿವಮ್ಮ ಇಕಿನಾ ನೋಡು ಜೂನಿ ಬೀರಮ್ಮ!’ ಅಂದ್ಲು.

‘ಯವ್ವೋ ಯತಿ… ಬಾರಿ ನೋಡಾ ಆಕಿ ಧೈರ್ಯ, ನಾ ಬರಿ ಆ‌ ಕುದುರಿ ಓಡ್ಸೊ ರಾಜಕುಮಾರ, ಅವರ ಯುದ್ಧ, ಅಂತ ಕತಿಗಳ್ನ ಹೇಳೋದು ಕೇಳಿದ್ದೆ, ಈ ತರ ತಮ್ಮ್ ಬದುಕನ್ನ ತಾವೇ ಅಂಜಿಕಿರಲಾರದಂಗ ನಡಸೊ ಗಟ್ಟಿಗಿತ್ಯಾರ ಬಗ್ಗೆ ಕೇಳಿರಲಿಲ್ಲ’

ಅತ್ತಿ ತಲಿ ಸವರ್ತಾ.. ‘ನೋಡ್ ಶಿವು ಇಂತಾ ಅದೆಷ್ಟೋ ಗಟ್ಟಿಗಿತ್ಯಾರದಾರ, ಯಾರಗೂ ಗೊತ್ತಿಲ್ಲ, ಹಂಗ ಅವರ ಬಗ್ಗೆ ಯಾರೂ ಅಷ್ಟು ಮಾತಾಡಂಗಿಲ್ಲ, ಆಕಿ ಎನ್ ಒಬ್ಬಾಕೆ ಇದ್ಲು ಅಂತಾರಷ್ಟ!’

ಅತ್ತಿ ಹೇಳಾದು ಸರಿ ಅನ್ನಿಸ್ತು, ಆಕಿ ಮಕ ನೋಡಿ ಹೇಳಿದೆ ‘ಅತ್ತಿ… ನಾ ನಿಂಗೊಂದು ಗುಟ್ಟು ಹೇಳ್ಲಿ? ನಂಗೂ ಒಬ್ಬಾಕಿ ಗಟ್ಟಿಗಿತ್ತಿ ಕತಿ ಗೊತೈತಿ, ಯಾರು ಅಂತ ಹೇಳ್ಲಾ?’

‘ಹೌದಾ… ಯಾರವ ಆಕಿ?’

‘ಆಕಿ ಯಾರಂದ್ರ….. ನಮ್ಮ್ ಅತ್ತಿ ಲಸಮಮ್ಮ!’ ಅಂತ ಜೋರಾಗಿ ಹೊಲದ ಬಯಲಿಗೆಲ್ಲ ಕೂಗಿ ಹೇಳಿದೆ.

ಅತ್ತಿ ಮತ್ತೆ ನಾನು ಖುಷಿಯಿಂದ ನಕ್ವಿ.
ನಕ್ಷತ್ರಗಳು ಮತ್ತಷ್ಟು ಹೊಳದ್ವು!

About The Author

ಸುವರ್ಣ ಚೆಳ್ಳೂರು

ಸುವರ್ಣ ಚೆಳ್ಳೂರು  ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ 'ಕಂಬದ ಹಕ್ಕಿ' ಕಥೆಗೆ  'ಸಂಗಾತ ಕಥಾ ಪುರಸ್ಕಾರ ' (2021), 'ಕನಕಾಂಬರ' ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ 'ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ' ದೊರಕಿದೆ (2022). 'ಕನಕಾಂಬರ' ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts' India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ