ನಮ್ಮ ಮೊಬೈಲ್‌ಗೆ ಈಗ ಫಿಂಗರ್ ಪ್ರಿಂಟ್ಸ್ ಲಾಕ್ ಇದೆಯಲ್ಲಾ ಹಾಗೆ ಅಜ್ಜಿ ತನ್ನ ಚೀಲಕ್ಕೆ ಹಾಕುತ್ತಿದ್ದ ನ್ನಾಟಿ ನ್ನಾಟ್ ಅನ್ನು ಯಾರಿಗು ಬಿಚ್ಚಲಾಗುತ್ತಿರಲಿಲ್ಲ. ಮುರಿದ ಆಭರಣದ ಚೂರುಗಳು ಬೆಳ್ಳಿಯ ಚೂರುಗಳನ್ನು ಚಿಕ್ಕ ಪ್ಲಾಸ್ಟಿಕ್‌ನಲ್ಲಿ ಹಾಕಿ ಚೀಲದ ಒಳ ಪದರದ ಒಳ ಪದರದಲ್ಲಿ ಇಡುವುದು, ಅವರ ಇವರ ತೋಟಕ್ಕೆ ಹೋದಾಗ ಅಪರೂಪದ ತರಕಾರಿ ಬೀಜ ಸಿಕ್ಕರೆ ಅದನ್ನು ಅದರಲ್ಲೆ ಇಡುವುದು, ಅಲ್ಲೇ ಬಿಡಿಸಿ ಅಲ್ಲೇ ಮುಡಿದುಕೊಳ್ಳಲು ಹೂ ಕಟ್ಟುವ ದಾರವೂ ಅಲ್ಲೇ ಇರುತ್ತಿತ್ತು. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದ, ಗಂಧ ಅದರಲ್ಲೇ ಇಡುವುದು. ತಲೆಸುತ್ತುವಿಕೆಗೆ, ಅಜೀರ್ಣಕ್ಕೆ, ಬಾಯಿ ವಾಸನೆ ಬರದಂತೆ ತಡೆಯಲು, ಹಲ್ಲು ನೋವಿಗೆ, ಶೀತಕ್ಕೆ ನಶ್ಯ ಎಲ್ಲಾ ಅದರಲ್ಲೇ ಇರುತ್ತಿತ್ತು.ಸುಮಾವೀಣಾ ಬರೆಯುವ “ಮಾತು ಖ್ಯಾತೆ” ಸರಣಿ ಸರಣಿ

 

ಎಲೆ ಅಡಿಕೆ ಚೀಲ, ಸಂಚಿ, ತಿತ್ತಿ, ಝೊಣ್ಣಾ, ಎಂದೆಲ್ಲಾ ಕರೆಸಿಕೊಂಡಿದ್ದ ನಮ್ಮ ಹಿರಿಯ ಹೆಣ್ಣುಮಕ್ಕಳ ಪರ್ಸ್, ಕ್ಲಚ್, ಪೌಚ್, ಇಲ್ಲ ವ್ಯಾಲೆಟ್ ಈ ಬರಹದ ನಾಯಕಿ. ಸಿಟಿ ಬಸ್ಸಿನಲ್ಲಿ ಮೊನ್ನೆ ಬರುವಾಗ ಅಜ್ಜಿ ಒಬ್ಬರು ಅರಸೀಕರೆ ರಸ್ತೆ, ದುದ್ದಕ್ಕೆ ಹೋಗಬೇಕು. “ಟಿಕಿಟ್ ಕೊಡಿ ಕಂಡಕ್ಟ್ರೆ; ಕಾರ್ಡು ಐತೆ” ಎಂದರು ನಿರ್ವಾಹಕರು ಕಾರ್ಡ್ ನಂಬರ್‌ಗೊತ್ತಾ?” ಎಂದರು. “ಅದೆಲ್ಲ ನನ್ಗೇನು ಗೊತ್ತು? ಕಾರ್ಡ್ ಹುಡುಕತೀನಿ” ಅಂದು ಅಜ್ಜಿ ತನ್ನ ಎಲೆಅಡಿಕೆ ಚೀಲ ತೆಗೆದು ಅದಕ್ಕೆ ಕಟ್ಟಿದ್ದ ದಾರ ಬಿಚ್ಚಿ ಒಂದೊಂದೆ ಪದರದ ಒಳಗೆ ಕೈ ಹಾಕಿ ನೋಡುತ್ತ ಇದ್ದರು. “ಇದ್ದರೆ ಕಾರ್ಡ್ ಹುಡುಕಿ, ಬೇರೆಯವರಿಗೆ ಟಿಕೇಟ್ ಕೊಟ್ಟು ಬರುತ್ತೇನೆ” ಎಂದು ನಿರ್ವಾಹಕರು ಮುಂದೋದರು. ನಾನು ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ನೋಡುತ್ತಲೇ ಇದ್ದೆ ಮತ್ತೆ ನಿರ್ವಾಹಕರು ಬಂದರೂ ಅಜ್ಜಿಯ ಕೈಗೆ ಕಾರ್ಡ್ ಸಿಕ್ಕಿರಲಿಲ್ಲ. “ಕಾರ್ಡ್‌ಗೆ ಕಾಡಬೇಡಿ ಟಿಕೇಟ್ ಕೊಟ್ಟು ಬಿಡಿ” ಎಂದೆ ನಾನು. ಅದಕ್ಕೆ “ಮೇಡಮ್ ಇದು… ಈ ಚೀಲ…. ಅಂತಿಂಥದ್ದಲ್ಲ; ಇದರಲ್ಲಿ ಬ್ರಹ್ಮಾಂಡವೇ ಇರುತ್ತೆ.” ಎನ್ನುತ್ತಿದ್ದಾಗಲೆ ಅಜ್ಜಿಯ ಕೈಗೆ ಫೋಟೊವೊಂದು ಸಿಕ್ಕಿತು “ಆ ಫೋಟೊ ಯಾರದ್ದು ತೋರಿಸಿ” ಎಂದು ನಿರ್ವಾಹಕರು ಕೇಳಿದರೆ ಅಜ್ಜಿ ನಾಚಿ ನೀರಾದರು. “ನಿಮ್ಮ ಯಜಮಾನರದ್ದ ಫೋಟೋ ಎಂದರೆ ಮತ್ತೆ ತಲೆ ತಗ್ಗಿಸಿ ಅದೆಲ್ಲ ನಿನಗೇಕೆ ಕಾರ್ಡ್ ಕೊಟ್ಟರೆ ಸಾಕಲ್ಲ” ಎಂದು ಅಜ್ಜಿ ಹೇಳಿದರೆ ಸುತ್ತ ಮುತ್ತ ಇದ್ದವರೆಲ್ಲ ನಕ್ಕು ಬಿಟ್ಟರು. ನನಗೆ ಬೇಜಾರು! ಒಂದೊಳ್ಳೆ ಪ್ರಸಂಗ ಮಿಸ್ ಮಾಡಿಕೊಂಡೆ ಅನ್ನಿಸಿತು ಅಷ್ಟರಲ್ಲೆ ಆರ್. ಟಿ. ಓ. ಸ್ಟಾಪ್ ಬಂತು ಇಳಿದುಕೊಂಡೆ.

ಮನೆಗೆ ಬರುವಾಗ ಈ ಚೀಲದ ಬಗ್ಗೆ ನಾನು ಚಿಕ್ಕವಳಿದ್ದಾಗ ನೋಡಿದ ಚೀಲಗಳ ನೆನಪುಗಳು ಬಂದವು. ನನ್ನಜ್ಜನ ಮನೆಗೆ ಬರುತ್ತಿದ್ದದ್ದು ನೆನಪಾಯಿತು. ಅವರ ಮಕ್ಕಳು ಬರೆದ ಕಾಗದವನ್ನು ಓದಿ ಹೇಳಿ ಎಂದು ಇದೇ ಎಲೆ ಅಡಿಕೆ ಚೀಲದಲ್ಲಿ ಮಡಿಚಿಟ್ಟುಕೊಂಡು ಬರುತ್ತಿದ್ದರು. ಆಗ ಸಂತೆಗಳಲ್ಲಿ ಇದನ್ನು ಹೊಲೆದು ಮಾರಾಟ ಮಾಡುತ್ತಿದ್ದರಂತೆ. ನಿಜಕ್ಕೂ ಎಲೆಅಡಿಕೆ ಚೀಲ ಬ್ರಹ್ಮಾಂಡವೇ. ಅನಕ್ಷಸ್ಥರ ಹಣದ ಚೀಲ, ಆಭರಣ ಪೆಟ್ಟಿಗೆ, ಫಸ್ಟ್ಏಡ್ ಬಾಕ್ಸ್, ಎಮರ್ಜೆನ್ಸಿ ಟೈಲರಿಂಗ್ ಕಿಟ್, ಬೀಜ ಬ್ಯಾಂಕ್, ಪ್ರಸಾದ ಪೆಟ್ಟಿಗೆ, ಮೇಕಪ್ ಕಿಟ್, ದಾಖಲೆಗಳ ಫೈಲ್, ಮೊಬೈಲ್ ಪರ್ಸ್ ಎಲ್ಲಾ ಇದೇನೆ. ಹೆಸರಿಗೆ ಎಲೆ ಅಡಿಕೆ ಚೀಲ ಅವಕಾಶ ಎಲ್ಲಾ ವಸ್ತುಗಳಿಗೆ. ಎಲೆಗೇ ಬೇರೆ ಜಾಗ, ಸುಣ್ಣದ ಡಬ್ಬಿಗೆ ಬೇರೆ ಜಾಗ, ಹಲ್ಲು ಕಡ್ಡಿಗೆ ಬೇರೆ ಜಾಗ, ಅಡಿಕೆ ಪುಡಿ ಹೊಗೆ ಸೊಪ್ಪಿಗೆ ಬೇರೆ ಬೇರೆ ಜಾಗ ಇರುತ್ತಿತ್ತು. ಮತ್ತೆ ಚಿಲ್ಲರೆ, ನೋಟುಗಳನ್ನು ಇರಿಸಿಕೊಳ್ಳಲು ಬೇರೇ ಜಾಗವೇ. ಇವೆಲ್ಲವನ್ನು ಸೇರಿಸಿ ಒಂದು ದಾರದಿಂದ ಸುತ್ತಿ ಅದಕ್ಕೆ ಗಂಟು ಹಾಕಿ ಸೊಂಟಕ್ಕೆ ಸಿಕ್ಕಿಸಿಕೊಂಡು ಸೆರಗು ಸರಿಮಾಡಿಕೊಳ್ಳುವುದು. “ನನ್ನಜ್ಜಿಯ ಕಳವಳದ ಸಂಚಿ ನೋಡಿದೆ” ಎಂದು ಹೊಂಚು ಹಾಕಿ ಈ ಚೀಲವನ್ನು ತೆರೆಯಬೇಕೆಂದರೆ ಅದನ್ನು ಅಷ್ಟು ಸುಲಭಕ್ಕೆ ತೆಗೆಯಲಾಗದು. ನಮ್ಮ ಮೊಬೈಲ್‌ಗೆ ಈಗ ಫಿಂಗರ್ ಪ್ರಿಂಟ್ಸ್ ಲಾಕ್ ಇದೆಯಲ್ಲಾ ಹಾಗೆ ಅಜ್ಜಿ ತನ್ನ ಚೀಲಕ್ಕೆ ಹಾಕುತ್ತಿದ್ದ ನ್ನಾಟಿ ನ್ನಾಟ್ ಅನ್ನು ಯಾರಿಗು ಬಿಚ್ಚಲಾಗುತ್ತಿರಲಿಲ್ಲ. ಮುರಿದ ಆಭರಣದ ಚೂರುಗಳು ಬೆಳ್ಳಿಯ ಚೂರುಗಳನ್ನು ಚಿಕ್ಕ ಪ್ಲಾಸ್ಟಿಕ್‌ನಲ್ಲಿ ಹಾಕಿ ಚೀಲದ ಒಳ ಪದರದ ಒಳ ಪದರದಲ್ಲಿ ಇಡುವುದು, ಅವರ ಇವರ ತೋಟಕ್ಕೆ ಹೋದಾಗ ಅಪರೂಪದ ತರಕಾರಿ ಬೀಜ ಸಿಕ್ಕರೆ ಅದನ್ನು ಅದರಲ್ಲೆ ಇಡುವುದು, ಅಲ್ಲೇ ಬಿಡಿಸಿ ಅಲ್ಲೇ ಮುಡಿದುಕೊಳ್ಳಲು ಹೂ ಕಟ್ಟುವ ದಾರವೂ ಅಲ್ಲೇ ಇರುತ್ತಿತ್ತು. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದ, ಗಂಧ ಅದರಲ್ಲೇ ಇಡುವುದು. ತಲೆಸುತ್ತುವಿಕೆಗೆ, ಅಜೀರ್ಣಕ್ಕೆ, ಬಾಯಿ ವಾಸನೆ ಬರದಂತೆ ತಡೆಯಲು, ಹಲ್ಲು ನೋವಿಗೆ, ಶೀತಕ್ಕೆ ನಶ್ಯ ಎಲ್ಲಾ ಅದರಲ್ಲೇ ಇರುತ್ತಿತ್ತು. (ಅರಿಶಿಣ, ಲವಂಗ, ಏಲಕ್ಕಿ, ಜಾಕಾಯಿ, ಸೌತೆ ಬೀಜ, ಬೀನ್ಸ್ ಬೀಜ, ಬಜೆ, ನಿಂಬೆ ಹಣ್ಣು, ತಾಯಿತ, ಸೂಜಿ ದಾರ, ಬಟನ್ಸ್, ಹುಕ್ಸ್ ಇತ್ಯಾದಿ ವಸ್ತುಗಳ ಆಗರ) ಬಟ್ಟೆಗೆ ಹಾಕಿಕೊಳ್ಳುವ ಸೇಫ್ಟಿ ಪಿನ್‌ಗಳು ಅದರಲ್ಲೇ ಇರುತ್ತಿದ್ದವು. ಯಾರಾದರು ಎಲೆ ಅಡಿಕೆ ಚೀಲಕ್ಕೆ ಕೈ ಹಾಕಿದರೆ “ಈಗ ತೆಗಿತಾಳೆ ನೋಡು ಸಂತೆ ಕೊಳ್ಳುವಷ್ಟು ಹಣ” ಎನ್ನುತ್ತ ಇದ್ದರು. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿದೆ, ಹಣದ ಮೌಲ್ಯ ಕಡಿಮೆಯಾಗಿದೆ. ಯಾವುದೇ ಅಕ್ಷರ ಜ್ಞಾನ ಇಲ್ಲದ ನಮ್ಮ ಹೆಣ್ಣು ಮಕ್ಕಳು ಎಲ್ಲಾ ಅಡ್ವಾನ್ಸ್ ಆಗಿಯೇ ಇಟ್ಟುಕೊಳ್ಳುತ್ತಿದ್ದರು. ಎಲೆ ಎಂದರೆ ಅದರ ಉಪಯೋಗ ಹೇಳಬೇಕಲ್ಲವೇ ಇದನ್ನು ವೀಳ್ಯ ಎನುತ್ತಾರೆ. ಜೀರ್ಣಕ್ರಿಯೆಗೆ, ಆರೋಗ್ಯಕ್ಕೆ ಎಲೆ ತುಂಬಾ ಒಳ್ಳೆಯದು. ಸರ್ವಜ್ಙ ತನ್ನತ್ರಿಪದಿಗಳಲ್ಲಿ ವೀಳ್ಯದ ಬಗ್ಗೆ ಚೆನ್ನಾಗಿ ಉಲ್ಲೇಖ ಮಾಡಿ,

 

ಅಡಿಕೆ ಇಲ್ಲದ ವೀಳ್ಯ ಕಿಟಕಿ ಇಲ್ಲದ ಮನೆ

ಹೋಳಿಗೆ ತುಪ್ಪಲೇಸು, ಬಾಯಿಗೂ ವೀಳ್ಯವೇ ಲೇಸು

ವೀಳ್ಯವಿಲ್ಲದ ಬಾಯಿ ಕೂಳು ಇಲ್ಲದ ನಾಯಿ ಎಂದು ಹೇಳಿದ್ದಾನೆ.

ಇಲ್ಲಿ ತಾಂಬೂಲದಿಂದ ಆಗುವ ಲಾಭವನ್ನು ಇಲ್ಲಿ ಹೇಳಬಹುದು. ಊಟ ತಿಂಡಿ ಸೇವಿಸಿದ ಬಳಿಕ ದಿನಕ್ಕೆ ಒಂದರಿಂದ ಮೂರು ಬಾರಿಯವರೆಗೆ ವೀಳ್ಯದೆಲೆ ಅಡಿಕೆ, ಏಲಕ್ಕಿ, ಲವಂಗ ಇತ್ಯಾದಿ ಸೇವಿಸಿದರೆ ಕಫ ಆಗುವುದಿಲ್ಲ. ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ. ಸುಣ್ಣವು ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ.

“ಒಂದಡಕೆಗೂ ಕೊಂಬವರಿಲ್ಲ” ಎಂದು ವಚನಗಳಲ್ಲಿ ಬರುತ್ತದೆ ಅಂದರೆ ಕಡಿಮೆ ಬೆಲೆ ಎಂದು. “ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು” ಎಂಬ ಗಾದೆಯಿದೆ. ಆದರೆ ಅಡಿಕೆ ಪದದ ಇತಿಹಾಸದ ಕಡೆಗೆ ಹೊರಳಿದರೆ ಅಡಗು+ಕಾಯ್=ಅಡಕ್ಕಾಯ್>ಅಡಕೆ ಎಂದಾಗಿದೆ, ‘ಅಡಗಿಕೊಳ್ಳುವ ಕಾಯಿ ಅಡಿಕೆ’ ಎನ್ನುತ್ತಾರೆ. ಅಂದರೆ ಹಣ್ಣಾದ ಅಡಿಕೆ ಸಿಪ್ಪೆಯಲ್ಲಿ ಅಡಗಿರುವ ಕಾಯಿ ಎಂದು. ‘ಅಡರ್’ ಎಂಬ ಪದದ ಹಿನ್ನೆಲೆಯಿಂದ ನೋಡಿದರೆ ಅಡಿಕೆ ಮರದಲ್ಲಿ ಕಾಯಿ ಬಿಟ್ಟರೆ ಗೊನೆ ಹರಡಿಕೊಂಡಂತೆ ಬೆಳೆಯುತ್ತದೆ. ಹಾಗಾಗಿ ಅಡರ್+ಕೆ=ಅಡರ್ಕೆ> ಅಡಕ್ಕೆ >ಅಡಕೆ ಎಂದಾಗಿದೆ ಎಂಬ ಮಾಹಿತಿಯನ್ನು ಶಬ್ಬ ಚರಿತ್ರೆ ಕೊಡುತ್ತದೆ.

ಇಕೊ ಫ್ರೆಂಡ್ಲಿ ಎಂದು ನಾವು ಕರೆಯಬಹುದಾದ ಈ ಕೈ ಚೀಲಗಳು 8-9 ಇಂಚು ಉದ್ದ, 5-6 ಇಂಚು ಅಗಲ, 10-12 ಪದರಗಳನ್ನು ಒಳಗೊಂಡಿರುತ್ತಿತ್ತು. ‘ಮೇಕ್ ಇನ್ ಇಂಡಿಯಾ’ ಪರಿ ಭಾಷೆಗೆ ಪೂರಕವಾಗಿರುವ ಜಿ಼ಪ್ ಇಲ್ಲದ, ಬಟನ್ಸ್ ಇಲ್ಲದ, ಹುಕ್ಸ್ ಇಲ್ಲದ, ಓನ್ಲಿ ಟ್ಯಾಗ್ ಇರುವ ಈ ಎಲೆಅಡಿಕೆಚೀಲಗಳು. ಆಧುನಿಕರಿಗೆ ವಸ್ತು ಭಂಡಾರವಿದ್ದಂತೆ. ‘ಸಂಚಿ’ ಎಂದರೆ ‘ಸಂಚಯ’, ‘ಕಲೆಹಾಕುವುದು’, ‘ಕೂಡಿಡುವುದು’, ‘ಸಂಗ್ರಹಿಸುವುದು’ ಎಂಬೆಲ್ಲಾ ಅರ್ಥ ಬರುತ್ತದೆ. ಮಲೆಯಾಳಿ ಭಾಷೆಯಲ್ಲಿ ‘ಸಂಚಿ’ ಎಂದರೆ ‘ಕೈ ಚೀಲ’ ಎಂಬ ಅರ್ಥವೇ ಬರುತ್ತದೆ. ಹೊನ್ನಮ್ಮ ಎಂಬ ನಡುಗನ್ನಡ ಸಾಹಿತ್ಯದ ಕವಿ ಸಂಚಿ (ಸಂಚಿಯ ಹೊನ್ನಮ್ಮ) ಎಂಬ ಹೆಸರಿನಿಂದಲೆ ಗುರುತಿಸಿಕೊಂಡವಳು. ಎಲೆ ಅಡಿಕೆ ಚೀಲವನ್ನು ಕಳವಳದ ಸಂಚಿ ಎನ್ನುವುದೂ ಇದೆ. ಅಂದರೆ ಒಳಸಂಚು, ಉಪಾಯಗಳಿಗೆ ಐಡಿಯಾ ಕೊಡುವ ಎಲೆ ಅಡಿಕೆ ಅದರಲ್ಲಿ ಇರುತ್ತದೆ ಎಂದೋ? ಏನೋ? ಕಾಂಗರೂ ತನ್ನ ಮರಿಗಳನ್ನು ಹೊರಲು ಎದೆಯಲ್ಲಿ ಚೀಲ ಹೊಂದಿರುವ ಕಾರಣದಿಂದ ಅದನ್ನು ಸಂಚಿ ಸಸ್ತನಿ ಎನ್ನುತ್ತಾರೆ. ಮೊಮ್ಮಕ್ಕಳಿಗೆ ಆರೋಗ್ಯ ತಪ್ಪಿದಾಗ ಮನೆ ಮದ್ದು ನೀಡಲು, ಕತೆ ಹೇಳಲು ಪ್ರಾರಂಭಿಸುವಾಗ ಅಜ್ಜಿಯ ಎಲೆ ಅಡಿಕೆ ಚೀಲ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತ ಇದ್ದದು ಈಗ ನೇಪಥ್ಯಕ್ಕೆ ಸರಿದಿದೆ.. ಯಾವುದೇ ನಾಜೂಕಿಲ್ಲದೆ ಎಲೆ ಅಡಿಕೆ ಹಾಕಿ ಬಾಯಿ ಕೆಂಪಾದರೂ ಈ ಚೀಲ ಬಿಡದಿದ್ದ ಗ್ರಾಮೀಣರಿಗೆ ಬದಲಾಗಿ ಈಗ ತುಟಿ ರಂಗಲ್ಲಿ ಕಂಗೊಳಿಸುವ ಆಧುನಿಕರು ಮೊಬೈಲ್ ಸಿಕ್ಕಿಸುವ ಪರ್ಸ್‌ಗಳನ್ನು ಫ್ಯಾಷನ್ನಿಗೆ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದೇವೆ.

ಈಗ ಪ್ರಾಣಿಗಳ ಚರ್ಮದಿಂದ, ಬೇರೆ ಬಟ್ಟಗಳಿಂದ ಮಾಡಿದ ಕೈ ಚೀಲಗಳು ಬಂದಿವೆ ರಿದು ಹೋದರೆ, ಹಳತಾದರೆ, ಹೊಸ ವಿನ್ಯಾಸ ಬಂದರೆ ಸುಲಭವಾಗಿ ಎಸೆದು ಬೇರೆ ಕೊಳ್ಳುತ್ತೇವೆ ಆದರೆ ಎಲೆ ಅಡಿಕೆ ಚೀಲಗಳು ಹಾಗಲ್ಲ! ಪಕ್ಕ ದೇಸಿ! ಜೊತೆಗೆ ಭಾಂದವ್ಯದ ಸಂಕೇತವಾಗಿತ್ತು. ಕುತೂಹಲದ ಗಣಿಯಾಗಿದ್ದ ಇದು, ಗ್ರಾಮೀಣರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಈ ಸಂಚಿ ಕೈ ಜಾರಿ ಈಗ ಎಡಗೈ ಸೇರಿ ಹ್ಯಾಂಡ್ ಪರ್ಸ್‌ಗಳಾಗಿವೆ, ಹ್ಯಾಂಡ್ ಬ್ಯಾಗುಗಳಾಗಿವೆ ಹೆಗಲೇರಿ ಬ್ಯಾಗುಗಳಾಗಿ, ವ್ಯಾನಿಟಿಗಳಾಗಿವೆ.