ದಿನಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯೊಂದರ ಪ್ರಕಾರ 2019 ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ! ಇದೇ ವರ್ಷ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ!! ಇದರಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣವೇ ಹೆಚ್ಚು ಎಂಬ ವರದಿಯಿದೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣ ವಾರ್ಷಿಕ ತಲಾವಾರು 50 ಕೆಜಿಯಷ್ಟು ಎಂದು ಅಂದಾಜಿಸಲಾಗಿದೆಯಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ಮೂರನೆಯ ಕಂತು ನಿಮ್ಮ ಓದಿಗೆ
ನಾನು ರಸ್ತೆಯಲ್ಲಿ ಹೋಗೋ ಸಮಯದಲ್ಲಿ ಕೆಲವರು ಅವರ ಮನೆ ಮುಂದೆ ನೀರನ್ನು ವ್ಯರ್ಥ ಮಾಡುವುದನ್ನು ನೋಡಿದರೆ ತುಂಬಾ ಬೇಸರವೆನಿಸುತ್ತದೆ. ಅಲ್ಲದೇ ಮಳೆ ಬೀಳುತ್ತಿರುವ ಸಮಯದಲ್ಲೂ ತಮ್ಮ ಮನೆ ಸುತ್ತಲೂ ಮತ್ತೆ ನೀರು ಹಾಕುವುದನ್ನು ನೋಡಿದರೆ ಅವರ ಬುದ್ಧಿಗೇನು ಮಂಕು ಕವಿದಿದೆಯಾ? ಎನಿಸುತ್ತದೆ. ರಸ್ತೆಯ ಬೀದಿ ಬದಿಯ ನಲ್ಲಿಯಲ್ಲಿ ನೀರು ಸುರಿಯುತ್ತಿದ್ದರೂ ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಹೋಗುತ್ತಿರುವ ಸನ್ನಿವೇಶಗಳನ್ನು ಕಂಡಾಗಲೂ ಹೀಗೆ ಅನಿಸುತ್ತದೆ! ಯಾವುದಾದರೂ ಸಮಾರಂಭಗಳಲ್ಲಿ ಕುಡಿಯಲೆಂದು ಕೊಟ್ಟ ನೀರಿನ ಬಾಟಲ್‌ಗಳಲ್ಲಿರುವ ನೀರನ್ನು ಪೂರ್ತಿ ಕುಡಿಯದೇ, ಒಂದೊಮ್ಮೆ ಕುಡಿಯಲಾಗದಿದ್ದರೆ ಅದನ್ನು ತಮ್ಮ ಜೊತೆ ಕೊಂಡೊಯ್ಯದೇ ಹಾಗೆಯೇ ಬಿಟ್ಟು ಹೋಗುವುದನ್ನು ನೋಡಿದರೆ ಮನಸ್ಸಿಗೆ ಬೇಸರವೆನಿಸುತ್ತದೆ. ಅಷ್ಟಕ್ಕೂ ಹೀಗೆ ಬಿಟ್ಟು ಹೋಗುವವರು ಹೆಚ್ಚೆಚ್ಚು ಪದವಿಗಳನ್ನು ಪೂರೈಸಿದ ಪ್ರತಿಷ್ಟಿತರೆನಿಸಿಕೊಂಡವರು! ಈಗೀಗ ಬಿಡಿ, ಹೀಗೆ ಎಲ್ಲರೂ ಬಿಟ್ಟು ಹೋಗುವುದು ಕಾಮನ್ ಆಗಿಬಿಟ್ಟಿದೆ!
ಇದು ಬರೀ ನೀರಿನ ವಿಷಯದಲ್ಲಷ್ಟೇ ಅಲ್ಲದೇ ಆಹಾರದ ವಿಷಯದಲ್ಲೂ ಹೀಗೆಯೇ ನಡೆದುಕೊಳ್ಳುತ್ತಾರೆ. ಬಡಿಸಿಕೊಂಡದ್ದೆಲ್ಲವನ್ನೂ ತಿನ್ನದೇ ಹಾಗೆಯೇ ಬಿಟ್ಟು ಹೋಗುತ್ತಾರೆ. ಕೆಲವರು ಹೀಗೆ ಬಿಟ್ಟು ಹೋಗುವುದನ್ನು ಪ್ರತಿಷ್ಟೆ ಎಂದುಕೊಂಡಿರುತ್ತಾರೆ!!?? ಎಂಬುದನ್ನು ನನ್ನ ಜೀವನದಲ್ಲಿ ನಡೆದ ಒಂದು ಘಟನೆಯ ಉದಾಹರಿಸಿ ಹೇಳುತ್ತೇನೆ ಕೇಳಿ. ಒಮ್ಮೆ ನಾನು ನನ್ನ ಸಹೋದ್ಯೋಗಿಯೊಬ್ಬರು ವಿದ್ಯಾರ್ಥಿಯ ಮನೆಗೋಗಿದ್ವಿ. ಅವರು ನಮಗೆ ತಿನ್ನಲೆಂದು ಖಾರ, ಬಾಳೆಹಣ್ಣು, ಸ್ವೀಟ್ಸ್ ಕೊಟ್ಟಿದ್ದರು. ನಾನು ಅವರು ಕೊಟ್ಟಿದ್ದನ್ನು ಒಂಚೂರು ಬಿಡದೇ ತಿಂದೆ. ಆದರೆ ನನ್ನ ಜೊತೆಗೆ ಬಂದ ಮಹಾಶಯರೊಬ್ಬರು ಸ್ವೀಟ್ಸ್, ಖಾರವನ್ನು ಹಾಗೆಯೇ ಬಿಟ್ಟಿದ್ದರು. ಆ ಮನೆಯಿಂದ ವಾಪಸ್ ಬರುವಾಗ ಆ ಮಹಾಶಯರು ನನಗೆ “ಅಲ್ರೀ ಸರ್, ಕೊಟ್ಟಿದ್ದನ್ನೆಲ್ಲಾ ಒಂಚೂರು ಬಿಡದೇ ತಿನ್ನೋಕೆ ಗತಿ ಇಲ್ಲದವರಂತೆ ತಿಂದಿರಲ್ಲ. ಹಾಗೆ ತಿನ್ನುವುದು ಸ್ಟ್ಯಾಂಡರ್ಡ್ ಅಲ್ಲ. ಆ ಮನೆಯವರು ಏನಪ್ಪಾ ಹೀಗೆ ಬರಗೆಟ್ಟವರ ತರಹ ತಿಂದರು” ಎಂದುಕೊಳ್ಳುತ್ತಾರೆ. ಸ್ವಲ್ಪ ತಿಂದು ತಟ್ಟೆಯಲ್ಲಿ ಹಾಗೆಯೇ ಬಿಟ್ಟು ಬರುವುದು ಇಲ್ಲಿ ಘನತೆಯ ಸಂಕೇತ ಎಂದರು!! ನನಗೆ ಅವರ ಮಾತು ಕೇಳಿ ಶಾಕ್ ಆಯ್ತು. ಆಹಾರವನ್ನು ಹಾಗೆಯೇ ಬಿಡುವುದರಲ್ಲೂ ನಮ್ಮ ಪ್ರತಿಷ್ಟೆ ಇರುತ್ತದೆ ಎಂದು ಅವರಿಂದಲೇ ನಾನು ಕೇಳಿದ್ದು. ನಾವು ಯಾವುದಾದರೂ ಮನೆಗೆ ಹೋದಾಗ ಆಹಾರವನ್ನು ಹೀಗೆ ಬಿಟ್ಟು ಬಂದರೆ ಅವರು ಮನೆಯವರಾದರೂ ಅದನ್ನು ಏನು ಮಾಡಿಯಾರು? ಎಂಜಲಾದ ಆ ಆಹಾರವನ್ನು ಅವರು ಬಿಸಾಡುತ್ತಾರಲ್ಲವೇ? ಹೀಗೆ ಬಿಸಾಡಿದರೆ ಅದನ್ನು ತಯಾರು ಮಾಡಲು ಬಳಸಿದ ಸಂಪನ್ಮೂಲಗಳನ್ನು ನಾವು ವ್ಯರ್ಥ ಮಾಡಿದಂತಲ್ಲವೇ! ಆಹಾರದ ಬಗ್ಗೆ ಅನಾದರ ತೋರುವುದು ಇಂದು ತುಸು ಹೆಚ್ಚಾಗಿದೆ.
ಆಹಾರದ ಕುರಿತು ಹಿಂದಿನವರು ತುಂಬಾ ಗೌರವ ಭಾವನೆ ಹೊಂದಿದ್ದರು. “ತಿನ್ನುವ ಪ್ರತೀ ಕಾಳಿನ ಮೇಲೂ ತಿನ್ನುವವರ ಹೆಸರು ಬರೆದಿರುತ್ತಂತೆ”, “ಒಂದು ಕಾಳು ಪ್ರಾಣಿಯ ಹೊಟ್ಟೆ ಸೇರಬೇಕು ಎಂದು ನೂರಾರು ವರ್ಷ ತಪಸ್ಸು ಮಾಡಿರುತ್ತಂತೆ” ಎಂಬ ಮಾತುಗಳನ್ನು ಹೇಳುತ್ತಿದ್ದರು. ಅಲ್ಲದೇ ಆಹಾರವನ್ನು ಕೇವಲ ಭೌತಿಕ ವಸ್ತು ಎಂದಷ್ಟೇ ಪರಿಗಣಿಸದೇ ಅದನ್ನು ‘ಅನ್ನ ಪರಬ್ರಹ್ಮ ಸ್ವರೂಪ’ ಎಂದು ನಂಬಿದ್ದರು. “ಈ ಜನ್ಮದಲ್ಲಿ ಅನ್ನ ಚೆಲ್ಲಿದರೆ ಮುಂದಿನ ಜನ್ಮದಲ್ಲಿ ಅನ್ನ ಸಿಗದೇ ಭಿಕ್ಷಕನಾಗಿ ಹುಟ್ಟುತ್ತಾರಂತೆ” ಎಂದು ನನ್ನ ಅಜ್ಜಿ ಹೇಳುತ್ತಿದ್ದ ಮಾತುಗಳು ನನಗೆ ಯಾರಾದರೂ ಅನ್ನ ಚೆಲ್ಲುವುದನ್ನು ನೋಡಿದಾಗ ನೆನಪಿಗೆ ಬರುತ್ತೆ. ಏನೂ ಓದದೇ ಅನಕ್ಷರಸ್ಥಳಾಗಿದ್ದ ನನ್ನಜ್ಜಿಯು ಆಹಾರದ ಬಗ್ಗೆ ಈ ಮನೋಭಾವ ಹೊಂದಿದ್ದರೆ, “ಸಂಪನ್ಮೂಲಗಳಿರುವುದು ಮಾನವನ ಆಸೆಯನ್ನು ಪೂರೈಸಲೇ ಹೊರತು ಮಾನವನ ದುರಾಸೆಯನ್ನಲ್ಲ” ಎಂಬ ವಾಕ್ಯ ತಿಳಿದವರೂ ಆಹಾರವನ್ನು ವ್ಯರ್ಥ ಮಾಡುತ್ತಾರಲ್ಲ ಇಂಥವರನ್ನು ನೋಡಿದರೆ ತುಂಬಾ ಬೇಸರವೆನಿಸುತ್ತದೆ. “ನಿನಗೆ ತಿನ್ನುವ ಹಕ್ಕಿದೆ, ಆದರೆ ಚೆಲ್ಲುವ ಹಕ್ಕಿಲ್ಲ” “ಜಗತ್ತಿನಲ್ಲಿ ಹಸಿದವರು ಬಹಳ ಮಂದಿ ಇದ್ದಾರೆ. ದಯಮಾಡಿ ಅನ್ನ ಚೆಲ್ಲಬೇಡಿ” ವಾಕ್ಯಗಳ ಕೆಳಗಡೆಯೇ ನಿಂತು ಆಹಾರ ಚೆಲ್ಲುತ್ತಾರಲ್ಲ ಇಂಥವರ ಮಾನಸಿಕ ಪ್ರಜ್ಞೆಯೇ ಬಗ್ಗೆ ನನಗೆ ಅನುಮಾನ ಮೂಡುತ್ತೆ!!
ಇಷ್ಟೆಲ್ಲಾ ಆಹಾರ ಹಾಗೂ ನೀರಿನ ಬಗ್ಗೆ ಜಾಗರೂಕ ಪ್ರಜ್ಞೆ ಬೆಳೆಯೋಕೆ ನನಗೆ ನಾನು ಬೆಳೆದ ವಾತಾವರಣವೂ ಕಾರಣ ಇರಬಹುದು. ಏಕೆಂದರೆ ಇವೆರಡಕ್ಕೂ ಪರದಾಡಿದ ಸಂದರ್ಭಗಳನ್ನು ನಾನು ಅನುಭವಿಸಿದ್ದೇನೆ. ಅದರಲ್ಲೂ ಮಲ್ಲಾಡಿಹಳ್ಳಿಯಲ್ಲಿ ಪ್ರೌಢ ಶಾಲೆ ಓದುವಾಗಲಂತೂ ನೀರಿನ ಸಮಸ್ಯೆ ಸಾಕಷ್ಟಿರುತ್ತಿತ್ತು. ಹಾಸ್ಟೆಲ್ಲಿನಲ್ಲಿ ಇದ್ದ 15 ರಿಂದ 20 ನಲ್ಲಿಗಳಿಗೆ ಇದ್ದದ್ದು 300 ಹುಡುಗರು!! ನಮಗೆ ಆಗ ಬರೀ ರಾಗಿ ಮುದ್ದೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿತ್ತು. ಅನ್ನವನ್ನು ಬರೀ ಒಂದೇ ಸೌಟು ಮಾತ್ರ ಬಡಿಸುತ್ತಿದ್ದರು. ಪಿಯುಸಿಯಲ್ಲಿ ಬೆಂಗಳೂರಿನಲ್ಲಿ ಉಚಿತ ಹಾಸ್ಟೆಲ್ ಒಂದರಲ್ಲಿ ಓದುವಾಗಲೂ ಅಲ್ಲಿ ಮಧ್ಯಾಹ್ನದ ಊಟವನ್ನು ಕೊಡುತ್ತಿರಲಿಲ್ಲ. ಉಪವಾಸ ತಡೆದುಕೊಳ್ಳೋಕೆ ಆಗ್ತಾನೆ ಇರಲಿಲ್ಲ. ಕೆಲವೊಮ್ಮೆ ಕೇವಲ 3 ರೂಪಾಯಿಗೆ ಸಿಗುತ್ತಿದ್ದ ಕ್ರೀಂ ಬನ್ನನ್ನು ತಿಂದು ದಿನದೂಡಿದ ಅನೇಕ ದಿನಗಳಿವೆ. ದ್ವಿತೀಯ ಪಿಯುಸಿಯಲ್ಲಿದ್ದಾಗಲೂ ದಾವಣಗೆರೆಯ ಹಾಸ್ಟೆಲ್ಲಿನಲ್ಲಿ ಬೆಳಗಿನ ತಿಂಡಿಯೇ ಇರಲಿಲ್ಲ. ಉಪವಾಸವಿರಬೇಕಿತ್ತು. ಆದರೆ ಟಿಸಿಹೆಚ್ ವ್ಯಾಸಂಗ ಮಾಡುವಾಗ ಆಹಾರದ ಸಮಸ್ಯೆ ಇರದಿದ್ರೂ ನೀರಿನ ಸಮಸ್ಯೆ ಹೇಳತೀರದಾಗಿತ್ತು. ಹೊರಗಡೆ ರೂಂ ಮಾಡಿಕೊಂಡಿದ್ದ ನಮಗೆ ಸ್ನಾನ ಮಾಡಲೂ ಸಹ ನೀರಿನ ಅಭಾವವು ಕೆಲವೊಮ್ಮೆ ತಲೆದೋರುತ್ತಿತ್ತು. ನಾನು ಪಕ್ಕದ ಶಿವಪುರದ ಯಾರದ್ದೋ ತೋಟಕ್ಕೆ ಹೋಗಿ ಅಲ್ಲಿದ್ದ ಡ್ರಿಪ್‌ನಿಂದ ಬಕೆಟ್‌ನಲ್ಲಿ ನೀರನ್ನು ಸಂಗ್ರಹಿಸಿಕೊಂಡು ಬಟ್ಟೆಗಳನ್ನು ತೊಳೆದುಕೊಂಡು, ಸ್ನಾನ ಮಾಡಿದ್ದ ಬಂದಿದ್ದ ಘಟನೆಗಳಿವೆ. ಚಿಕ್ಕಬಳ್ಳಾಪುರದಲ್ಲಿದ್ದಾಗ ಪ್ರತಿದಿನ ಕುಡಿಯುವ ನೀರಿಗೆ ಹಣ ಕೊಟ್ಟು ಕುಡಿದ ದಿನಗಳು ನನ್ನ ಜೀವನದಲ್ಲಿವೆ. ಟಿಸಿಹೆಚ್‌ನಲ್ಲಿ ನಮ್ಮ ಸಮವಸ್ತ್ರವಾಗಿದ್ದ ಬಿಳಿ ಜುಬ್ಬಾ ಬಿಳಿ ಕಚ್ಚೆ ಪಂಜೆ ಕೊಳೆಯಾದಾಗ ತೊಳೆಯಲು ನೀರಿನ ತೊಂದರೆ ಇದ್ದ ಕಾರಣ ಆ ಕೊಳೆಯು ಕಾಣಬಾರದೆಂದು ಅದಕ್ಕೆ ಸಾಕಷ್ಟು ಉಜಾಲ ನೀಲಿ ಹಾಕಿಕೊಂಡು ಹೋಗುತ್ತಿದ್ದೆ. ಇದನ್ನು ನೋಡುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬಳು “ಬಸವನಗೌಡ ನೀನು ಹಾಕಿಕೊಂಡು ಬರುವ ಜುಬ್ಬವು ಬಿಳಿ ಜುಬ್ಬವೋ ಅಥವಾ ನೀಲಿಯದ್ದೋ” ಎಂದು ಕೇಳಿದ್ದಳು!!
ಟಿಸಿಹೆಚ್ ಓದುವಾಗ ನಮ್ಮ ಅಧೀಕ್ಷಕರಾಗಿದ್ದ ಅಪುನಾರವರು ಆಹಾರವನ್ನು ಪೋಲು ಮಾಡದಿರುವ ಬಗ್ಗೆ ತುಂಬಾ ಹೇಳುತ್ತಿದ್ದರು. ಜೊತೆಗೆ ಅದನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ನಮ್ಮ ಎನ್.ಎಸ್.ಎಸ್ ಶಿಬಿರದಲ್ಲಿ ಮಾಡಿದ್ದರು. ನಾವು ಊಟ ಮಾಡುವಾಗ ನಮ್ಮ ತಟ್ಟೆಯಲ್ಲಿ ಒಂದು ಅಗುಳನ್ನೂ ಬಿಡುವಂತಿರಲಿಲ್ಲ. ಹಾಗೆ ಬಿಟ್ಟರೆ ಅದನ್ನು ತಿನ್ನುವವರೆಗೂ ನಮಗೆ ಹೊರಗೆ ಕಳಿಸುತ್ತಿರಲಿಲ್ಲ. ನಿಜ, ಈ ರೀತಿಯ ಘಟನೆಗಳು ಹಾಗೂ ಹೀಗೆ ತಿದ್ದಿ ತೀಡಿದ ಗುರುಗಳು ನನಗೆ ಸಿಕ್ಕಿದ್ದರಿಂದ ಆಹಾರದ ಬಗ್ಗೆ ತುಂಬಾ ಗೌರವವಿದೆ. ದಿನಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯೊಂದರ ಪ್ರಕಾರ 2019 ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ! ಇದೇ ವರ್ಷ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ!! ಇದರಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣವೇ ಹೆಚ್ಚು ಎಂಬ ವರದಿಯಿದೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣ ವಾರ್ಷಿಕ ತಲಾವಾರು 50 ಕೆಜಿಯಷ್ಟು ಎಂದು ಅಂದಾಜಿಸಲಾಗಿದೆಯಂತೆ!! ಜರ್ಮನ್ ದೇಶದಲ್ಲಿ ರತನ್ ಟಾಟಾರವರಿಗೆ ಆದ ಅನುಭವ ಕೇಳಿದರೆ ಆಹಾರದ ಬಗ್ಗೆ ಅಲ್ಲಿನ ಪ್ರಜೆಗಿದ್ದ ಮನೋಭಾವ ಎಂಥಹದ್ದು ಎಂದು ನಾವು ತಿಳಿಯಬಹುದು. ಅದು ಹೀಗಿದೆ: ಒಮ್ಮೆ ರತನ್ ಟಾಟಾ ರವರು ಜರ್ಮನಿಗೆ ಹೋದಾಗ ಹೋಟೆಲ್‌ನಲ್ಲಿ ಅಹಾರವನ್ನು ಹಾಗೆಯೇ ಬಿಟ್ಟು ಅದನ್ನು ಎಸೆಯಲು ಹೋಗುತ್ತಿದ್ದಾಗ ಅಲ್ಲೊಬ್ಬ ತಡೆದು ‘ನೀವು ಆಹಾರ ಏಕೆ ಚೆಲ್ಲುವಿರಿ?’ ಎಂದು ಪ್ರಶ್ನಿಸಿದನಂತೆ. ಆಗ ಅವರು ‘ಇದು ನಾನು ದುಡ್ಡು ಕೊಟ್ಟು ಖರೀದಿಸಿದ ಆಹಾರ’ ಎಂದಾಗ ಆ ವ್ಯಕ್ತಿಯು ತಕ್ಷಣ ‘ಹಣ ನಿಮ್ಮದಿರಬಹುದು. ಆದರೆ ಈ ಸಂಪನ್ಮೂಲಗಳು ನಮ್ಮ ದೇಶದ್ದು ಎಂದನಂತೆ’!! ನಾವು ನಮ್ಮ ಮಕ್ಕಳಿಗೆ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕಾದ ಜರೂರತ್ತು ಹಿಂದಿಗಿಂತ ಇಂದು ಹೆಚ್ಚಿದೆ.
ಒಮ್ಮೆ ನಾನು ರಸ್ತೆಯಲ್ಲಿ ಹೋಗುತ್ತಿರುವಾಗ ಪಿಯುಸಿಯ ಮಕ್ಕಳು ರಸ್ತೆಯ ಬದಿಯೊಂದರಲ್ಲಿ ನಿಂತು ಬರ್ತ್ ಡೇ ಯನ್ನು, ಬರ್ತ್ ಡೇ ಹುಡುಗನ ಮುಖಕ್ಕೆ ಕೇಕ್ ಬಳಿಯುವ, ಅವನ ತಲೆಯ ಮೇಲೆ ಮೊಟ್ಟೆ ಹೊಡೆಯುವ ಮೂಲಕ ಆಚರಿಸಿಕೊಳ್ಳುತ್ತಿದ್ದರು!! ರಸ್ತೆಯಲ್ಲಿ ಅನೇಕರು ಸಂಚರಿಸುತ್ತಿದ್ದರೂ ಯಾರೂ ಇವರ ನಡೆಯನ್ನು ಪ್ರಶ್ನಿಸಲಿಲ್ಲ. ಈಗೀಗ ಬರ್ತ್ ಡೇ ದಿನದಂದು ತಿನ್ನುವ ಕೇಕನ್ನು ಬರ್ತ್ ಡೇ ಬಾಯ್ /ಗರ್ಲ್ ನ ಮುಖಕ್ಕೆ ಬಳಿಯುವುದು ಒಂದು ಟ್ರೆಂಡ್ ಆಗುತ್ತಿದೆ!! ಆಹಾರದ ಪ್ರಾಮುಖ್ಯತೆಯ ಬಗ್ಗೆ ಪೋಷಕರು ಜಾಗೃತಿ ಮೂಡಿಸಬೇಕು. ಒಂದು ಕಾರ್ಯಕ್ರಮವೊಂದರಲ್ಲಿ ಬಡಿಸಿಕೊಂಡು ಹೆಚ್ಚಾದ ಆಹಾರವನ್ನು ಒಂದು ನಿರ್ದಿಷ್ಟ ಡಬ್ಬಿಯಲ್ಲಿ ಹಾಕಲು ಹೇಳಲಾಗಿತ್ತು. ಎಲ್ಲರೂ ಅದೇ ರೀತಿ ಮಾಡಿದ್ದರು. ಆ ಡಬ್ಬಿಯ ಕೆಳಗೆ ಒಂದು ತೂಕದ ಯಂತ್ರವನ್ನು ಇಡಲಾಗಿತ್ತು. ಕಾರ್ಯಕ್ರಮದ ಕೊನೆಗೆ ತೂಕದ ಯಂತ್ರದಲ್ಲಿ ತೋರಿಸಿದ ವ್ಯರ್ಥವಾದ ಆಹಾರವನ್ನು ಅಲ್ಲಿ ಹೀಗೆ ಬರೆಯಲಾಗಿತ್ತು. “ಇಂದು ವ್ಯರ್ಥವಾದ ಆಹಾರ 15 ಕೆಜಿ. ಇದು 80 ರಿಂದ 90 ಜನರ ಹೊಟ್ಟೆ ತುಂಬುತ್ತಿತ್ತು.” ಬಹುಷಃ ಸೂಕ್ಷ್ಮ ಪ್ರಜ್ಞೆಯಿದ್ದವನು ಇದನ್ನು ಓದಿದರೆ ಮುಂದೆಂದೂ ಆಹಾರವನ್ನು ವ್ಯರ್ಥ ಮಾಡಲು ಹೋಗುವುದಿಲ್ಲ.
ಹಲವರು ಇಂದು ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ನಲ್ಲಿ ಕೆಲವೊಂದು ಆಹಾರದ ಐಟಂಗಳನ್ನು ಕೊಡುತ್ತಾರೆ. ಬಿಟ್ಟ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಸಮೇತ ಹಾಗೆಯೇ ಎಸೆಯುತ್ತಾರೆ. ಇದನ್ನು ಬಿಡಾಡಿ ಹಸುಗಳು ತಿನ್ನಲು ಹೋದಾಗ ಆಹಾರದ ಜೊತೆಗೆ ಪ್ಲಾಸ್ಟಿಕ್ ಸಹ ಅದರ ಹೊಟ್ಟೆ ಸೇರುತ್ತದೆ!! ಒಮ್ಮೆ ನಾನು ಕೂಡಲಿಯ ತುಂಗ ಭದ್ರಾ ನದಿಯಲ್ಲಿ ನೀರಿನಲ್ಲಿ ಇಳಿದಿದ್ದಾಗ ಅಲ್ಲಿಗೆ ಒಬ್ಬರು ಸಮಾರಂಭದಲ್ಲಿ ಊಟ ಮಾಡಿದ್ದ ಎಂಜಲೆಲೆ, ಎಸೆದ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತುಂಬಿದ್ದ ಟ್ರಾಕ್ಟರ್‌ನಲ್ಲಿ ಬಂದು ಅವನ್ನು ನದಿಯ ತಟದ ಬಳಿ ಸುರಿದು ಹೋದರು. ಇದನ್ನು ನೋಡಿ ತುಂಬಾ ಬೇಸರವೆನಿಸಿತು. ಅದು ನದಿ ಸೇರುತ್ತೆ. ಆ ಪ್ಲಾಸ್ಟಿಕ್ ಜಲಜೀವಿಗಳ ಹೊಟ್ಟೆ ಸೇರುತ್ತೆ. ನದಿ ನೀರು ಮಲಿನವಾಗುತ್ತೆ. ಪ್ಲಾಸ್ಟಿಕ್ ಸಂಗ್ರಹದಿಂದ ಹೂಳು ತುಂಬುತ್ತೆ. ನೀರಿನ ಸಂಗ್ರಹ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಮ್ಮಿಯಾಗುತ್ತೆ. ಆ ನೀರನ್ನು ನಂಬಿ ಬದುಕುವ ರೈತರಿಗೆ ಮುಂದಿನ ದಿನಮಾನಗಳಲ್ಲಿ ನೀರು ಸಿಗದೇ ಕಷ್ಟವಾಗುತ್ತೆ ಎಂಬ ಮುಂದಾಲೋಚನೆಯೇ ಇಲ್ಲದೇ ತಮ್ಮ ತೀಟೆ ತೀರಿದರೆ ಸಾಕು, ಮುಂದೆ ಏನಾದರೂ ಆಗಲಿ ಎಂಬಂತೆ ವರ್ತಿಸುವ ಮನೋಭಾವದ ಜನರಿರುವವರೆಗೂ ನಮ್ಮ ಪರಿಸರಕ್ಕೆ ಕಷ್ಟ!
ಹಿಂದೆ ತಾಯಂದಿರು ತಮ್ಮ ಮಕ್ಕಳಿಗೆ ‘ಕೆರೆಯಂ ಕಟ್ಟಿಸು, ದೇವಾಗಾರಮಂ ಮಾಡಿಸು’ ಎಂದು ಹೇಳುತ್ತಿದ್ದರಂತೆ. ಒಬ್ಬ ರಾಜನ ಸಾಧನೆಯನ್ನು ಅವನು ಕಟ್ಟಿಸಿದ ಕೆರೆ, ದೇಗುಲಗಳ ಆಧಾರದ ಮೇಲೆ ಅಳೆಯುತ್ತಿದ್ದರಂತೆ. ತಮ್ಮ ಊರಿನ ಕೆರೆ ಕಟ್ಟಿಸುವಾಗ ಅದರಲ್ಲಿ ನೀರು ಬಾರದಿದ್ದಾಗ ಜ್ಯೋತಿಷಿಯೊಬ್ಬರ ಸಲಹೆಯಂತೆ ತಮ್ಮ ಮನೆಯ ಹಿರಿಸೊಸೆ ಭಾಗೀರಥಿಯನ್ನು ಬಲಿ ಕೊಟ್ಟ ಜಾನಪದೀಯ ಕಥೆಗಳು ನಮ್ಮ ದೇಶದಲ್ಲಿವೆ. ಕೆರೆ ನದಿ ತುಂಬಿದಾಗ ಬಾಗಿನ ಕೊಡುವ ಮೂಲಕ ಅವನ್ನು ರಕ್ಷಿಸುವ ಅವುಗಳ ಬಗ್ಗೆ ಪೂಜ್ಯನೀಯ ಭಾವನೆ ಬೆಳೆಸುವಂತಹ ಕ್ರಮಗಳನ್ನು ಹಿಂದಿನವರು ರೂಢಿಸಿಕೊಂಡಿದ್ದರು. ಹಣ ಗಳಿಕೆಯೇ ನಮ್ಮ ಜೀವನದ ಪರಮ ಧ್ಯೇಯವಾಗಬೇಕು, ಹಣವಿದ್ದರೆ ಬೇಕಾದ್ದು ಸಿಗುತೈತಿ ಎಂಬ ಮನೋಭಾವವುಳ್ಳವರೇ ಹೆಚ್ಚುತ್ತಿರುವ ಈ ಕಾಲದಲ್ಲಿ ನೀರು ಮತ್ತು ಆಹಾರವನ್ನು ಒಂದು ಪೂಜ್ಯನೀಯ ಭಾವನೆಯಲ್ಲಿ ನೋಡುವಂತಹ ಮನೋಭಾವ ಬೆಳೆಯುದಾದರೂ ಹೇಗೆ? ನೀರು ಆಹಾರಾದಿಗಳು ಅವರಿಗೆ ತಮ್ಮ ಆಸೆ ಈಡೇರಿಸುವ ಭೌತಿಕ ವಸ್ತುಗಳಷ್ಟೇ!!??

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಎಷ್ಟು ನಿಜ ! ನಾನು ಸಹ ಊಟ-ನೀರು ಸುಮ್ಮನೆ ಎಸೆಯಬಾರದೆಂಬ ಮನೋಭಾವನೆ ಹೊಂದಿದವಳು. ನಿಮ್ಮ ಲೇಖನ ಮನಸ್ಸು ಮುಟ್ಟಿತು.
ತುಂಬಾ ಚೆನ್ನಾಗಿದೆ. ಇನ್ನೂ ಉತ್ತಮವಾದ ಬರವಣಿಗೆ ಬರಲಿ.
ಗೌಡರೇ, ನಿಮ್ಮ ಹಾಗೇ ಯೋಚಿಸುವವರಲ್ಲಿ ನಾನೂ ಒಬ್ಬ.ನಾನು ಯಾವ ಕಾರ್ಯಕ್ರಮಕ್ಕೆ ಹೋದರೂ ಊಟ ಮಾಡುವಾಗ ಒಂದೇ ಒಂದು ಅಗುಳು ಅನ್ನವನ್ನು ಬಿಡುವುದಿಲ್ಲ.ನನಗೆ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಳ್ಳುತ್ತೇನೆ.ಮತ್ತು ನನಗೆ ಸೇರದೇ ಇರುವುದನ್ನು ಹಾಕಿಸಿಕೊಳ್ಳುವುದಿಲ್ಲ.ಅಂತಹ ಸಮಯದಲ್ಲಿ ನನ್ನ ಸ್ನೇಹಿತರು ಜೊತೆಗೆ ಇದ್ದರೆ ಆ ಎಲೆ ಯಾಕೆ ಬಿಟ್ಟದ್ದೀಯಾ ಎಂದು ಕೇಳಿದ ಪ್ರಸಂಗಗಳಿವೆ.ಇದರ ಬಗ್ಗೆ ಜನರಲ್ಲಿ ವಯಕ್ತಿಕ ಪ್ರಜ್ಞೆ ಬೆಳೆಯಬೇಕು.ಬೆಳಗಳನ್ನು ಬೆಳೆದ ಕಷ್ಟ ಗೊತ್ತಿಲ್ಲದಿದ್ದರೆ ಇಂತಹ ಸನ್ನಿವೇಶಗಳಿಗೆ ಎಡೆಮಾಡಿಕೊಡುತ್ತದೆ.ಇದನ್ನು ಒಂದು ಆಂದೋಲನದಂತೆ ಮಾಡಬೇಕು.
ಇದೊಂದು ಅರ್ಥಪೂರ್ಣ ಲೇಖನ ಗೌಡ್ರೆ ಇದನ್ನು ಮೊದಲು ಬುದ್ದಿಜೀವಿಗಳು ಅರ್ಥ ಮಾಡಿಕೊಳ್ಳಬೇಕು