ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ಮೂರನೆಯ ಕಂತು
ಹಿಂದಿನ ಸಂಚಿಕೆಗೆ ಹೀಗೆ ಮುಕ್ತಾಯ ಹೇಳಿದ್ದೆ..
“ಫೀಸ್ ವರ್ಕ್ ಮಾಡಿಸಕ್ಕೆ ಮೊದಲು ಒಂದು ಟೇಪ್ ಕೊಂಡ್ಕೋ, ಟೇಪ್ ರಸಮಟ್ಟ ಎರಡೂ ಇಟ್ಕೋಬೇಕು….” ಅಂತ ಮತ್ತೊಬ್ಬ ಗೆಳೆಯ ಸೂಚನೆ ಇತ್ತ. ಟೇಪ್ ಎರಡು ತರಹ ಬರುತ್ತೆ, ಒಂದು ಸ್ಟೀಲ್‌ದು ಮತ್ತೊಂದು ಬಟ್ಟೆ ಮೇಕ್ ಅಂತ ಮೊದಲ ಬಾರಿಗೆ ಗೊತ್ತಾಯಿತು. ಸ್ಟೀಲ್ ಟೇಪ್ ಅಂದರೆ ಜೇಬಿನಲ್ಲಿ ಇಡಬಹುದಾದ ಎರಡು ಮೂರು ಇಂಚಿನ ವ್ಯಾಸದ್ದು. ಬಟ್ಟೆ ಟೇಪ್ ಅಂದರೆ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವಂತಹದ್ದು. ಕೈಯಲ್ಲಿ ಬ್ಯಾಗ್ ಹಿಡಿದು ಓಡಾಡೋದು ಆಗ ನನಗೆ ಅಭ್ಯಾಸ ಇಲ್ಲ. ಕೈ ಬೀಸಿಕೊಂಡು ಓಡಾಡಿ ಅಭ್ಯಾಸ (ಈಗ ಕೈಯಲ್ಲಿ ಬ್ಯಾಗ್ ಇಲ್ಲದೇ ನಾನು ಹೊಸಲು ದಾಟುವುದಿಲ್ಲ. ಸಂಸಾರ ಕಟ್ಟಿಕೊಂಡ ಮೇಲೆ ಹೊರಬೇಕಾದ ಹಲವು ಸಹಸ್ರ ಜವಾಬ್ದಾರಿ ಗಳಲ್ಲಿ ಕೈಯಲ್ಲಿ ಬ್ಯಾಗ್ ಹಿಡಿಯುವುದೂು ಒಂದು). ಅದರಿಂದ ಒಂದು ಸ್ಟೀಲ್ ಟೇಪ್ ಕೊಂಡೆ, ಒಂದೂವರೆ ರುಪಾಯಿ ಅದಕ್ಕೆ ಆಗ. ಒಂದೇ ತೊಂದರೆ ಅಂದರೆ ಸ್ಟೀಲ್ ಟೇಪ್ ಬರೀ ಹತ್ತು ಅಡಿ ಅಳೆಯಬಹುದು, ಬಟ್ಟೆಯದ್ದು ಆದರೆ ಐವತ್ತು ನೂರು ಇನ್ನೂರು… ಅಡಿ ಅಳೆಯಬಲ್ಲದ್ದು. ಸತ್ಯಣ್ಣ ಅವನ ಹತ್ತಿರ ನೂರಾ ಐವತ್ತು ಅಡಿಯ ಟೇಪ್ ಇಟ್ಟುಕೊಂಡಿದ್ದ, ಅದನ್ನು ಒಂದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬರುತ್ತಿದ್ದ. ಅವನಿಗೆ ಅದು ಭೂಷಣ, ನನಗೆ ಜೇಬಲ್ಲಿನ ಸ್ಟೀಲ್ ಟೇಪ್ ಇದು ನನಗೆ ಭೂಷಣ!
ಮುಂದಕ್ಕೆ….
ಸ್ಟೀಲ್ ಟೇಪ್ ಜತೆಗೆ ರಸಮಟ್ಟ ಬರುತ್ತೆ ಅಂತ ತಿಳಿದುಕೊಂಡೆ. ಸ್ಟೀಲ್ ಟೇಪ್ ಮೇಲ್ಭಾಗದಲ್ಲಿ ಒಂದು ಪಾರದರ್ಶಕ ಹೈಪರ್ ಗೋಲ ಇದ್ದು ಅದರಲ್ಲಿ ಗಾಳಿ ಗುಳ್ಳೆ ಓಡಾಡುತ್ತೆ. ಅದು ಯಾವಾಗ ಮಧ್ಯದಲ್ಲಿ ಸ್ಥಿರವಾಗಿ ನಿಲ್ಲುತ್ತದೆಯೋ ಆಗ ನೆಲಕ್ಕೆ ಸಮಾನಾಂತರದಲ್ಲಿ ನಾವು ರಸಮಟ್ಟ ಇಟ್ಟಿರುವ ಜಾಗ ಸಹ ಸಮನಾಂತರದಲ್ಲಿ ಇದೆ ಎಂದು ಅರ್ಥ. ರಸಮಟ್ಟ ಅಂದರೆ ಸ್ಪಿರಿಟ್ ಲೆವೆಲ್! ಗಾಜಿನ ಟ್ಯೂಬ್ ನಲ್ಲಿ ಸ್ಪಿರಿಟ್ ತುಂಬಿರುತ್ತಾರೆ, ಅದರಿಂದ ಅದು ಸ್ಪಿರಿಟ್ ಲೆವೆಲ್! ಸ್ಪಿರಿಟ್ ಒಂದು ರೀತಿ ಕಿಕ್ ಕೊಡುವ ಹೆಂಡದ ಹಾಗಿರುವ ದ್ರವ ಮತ್ತು ಇದನ್ನು ಹೆಂಡದ ಬದಲಿಗೆ ಕುಡಿದು ಆಗಾಗ ಜನ ಸಾಯುವುದುಂಟು.
ನಮ್ಮ ಏರಿಯಾ ಸುತ್ತಿ ಹಲವು ಮನೆ ನೋಡಿಕೊಂಡು ಬಂದೆ, ಸತ್ಯಣ್ಣ ಸೂಚಿಸಿದ ಹಾಗೆ. ಕೆಲವರು ಮೇಸ್ತ್ರಿಗಳನ್ನೂ ಮಾತಾಡಿಸಿದೆ. ಒಬ್ಬ ಮೇಸ್ತ್ರಿ ಹತ್ತಿರ ಮಾತಾಡಬೇಕಾದರೆ ಒಬ್ಬರು ಮನೆ ಯಜಮಾನ್ರು ನಿಂತಿದ್ದ.. ಮೇಸ್ತ್ರಿ ಹತ್ತಿರ ಮಾತಾಡಿ ಎರಡು ದಿವಸದ ನಂತರ ಮತ್ತೊಬ್ಬ ಅದೇ ಏರಿಯಾದ ಗೆಳೆಯ ಸಿಕ್ಕಿದ.
“ಅದೇನರೀ ನಿಮ್ಮ ಫ್ರೆಂಡು ಮೇಸ್ತ್ರಿ ಹತ್ರ ಹಂಗೇ ದೈನ್ಯವಾಗಿ ಮಾತಾಡ್ತಾ ಇದ್ದರು ಅದೂ ಉಗುರು ಕಚ್ಚಿಕೊಂಡು? ಅವರ ಹತ್ತಿರ ರೊಫಾಗಿ ಇರಬೇಕ್ರೀ… ಅಂತ ಉಪಾಧ್ಯಾಯ ಕೇಳಿದ. ಹೌದಾ….” ಎಂದು ಕೇಳಿದ.
“ಮೇಸ್ತ್ರಿ ಸಹ ನಮ್ಮ ಹಾಗೆ ಮನುಷ್ಯ ಅಲ್ವಾ? ಗೌರವ ಕೊಟ್ಟು ಮಾತಾಡ್ತಾ ಇದ್ದೆ…..” ಅಂದೆ. ಈ ಡೈಲಾಗು ಉಪಾಧ್ಯಾಯನ ಕಿವಿಯಲ್ಲಿ ಬಿತ್ತು. ಅವತ್ತಿಂದ ನಾನು ಉಪಾಧ್ಯಾಯನ ಗುಂಪಿಗೆ ಒಂದು ನಗೆ ಹನಿ ವಿಷಯ ಆದೆ! ನಾನು ಎಂದಿನಹಾಗೆ ಡೊಂಟ್ ಕೇರ್ ಮಾಸ್ತರು.
ನಾನು ಅರ್ಧ ಕಟ್ಟಿದ, ಮುಕ್ಕಾಲು ಕಟ್ಟಿದ, ಪೂರ್ತಿ ಕಟ್ಟಿ ಇನ್ನೂ ಯಾರೂ ವಾಸವಿಲ್ಲದ ಹಲವಾರು ಮನೆ ಮನೇ ಮನೇ ನೋಡಿಕೊಂಡು ಬಂದ ವರದಿ ಒಪ್ಪಿಸಿದೆ. ವರದಿ ಪೂರ್ತಿ ಕೇಳಿದ ಸತ್ಯ “ಸರಿ ನಿನಗೆ ಈಗೊಂದು ಐಡಿಯಾ ಬಂದಿದೆ…. ಒಬ್ಬ ಒಳ್ಳೆ ಮೇಸ್ತ್ರಿ ಸಿಕ್ಕಿದ್ದಾನೆ. ನಾಳೆ ಬರುಕ್ಕೆ ಹೇಳಿದೀನಿ… ಸಂಜೆ ಬಾ.”
ಹೀಗೆ ನನಗೆ ಮೇಸ್ತ್ರಿ ಮಲ್ಲಯ್ಯ ಮನೆ ಕಟ್ಟಲು ಪೀಸ್ ಕoಟ್ರಾಕ್ಟರ್ ಆಗಿದ್ದು.
ಮಲ್ಲಯ್ಯನ ಜತೆ ಮಾತುಕತೆ ಆಯ್ತು. ಸಾವಿರದ ನೂರು ರುಪಾಯಿಗೆ ಚದುರ ಅಂತ ಸ್ವಲ್ಪ ಜಗ್ಗಾಟದ ನಂತರ ಒಪ್ಪಿಕೊಂಡ. ಈ ಚದರದ ವಿವರ ನಿಮಗೆ ಕೊಡಬೇಕು. ಹತ್ತಡಿ ಉದ್ದ, ಹತ್ತಡಿ ಅಗಲ, ಅದರ ಮೇಲೆ ತಾರಸಿ, ನೆಲದ ಸಿಮೆಂಟ್ ಫ್ಲೋರಿಂಗ್ ಇದಕ್ಕೆ ಒಂದು ಚದರ. ನನಗೆ ಕನ್ ಫ್ಯೂಶನ್ ಈ ಹಂತದಲ್ಲೆ ಶುರು.
“ಹತ್ತಡಿ ಉದ್ದ ಹತ್ತಡಿ ಅಗಲ ಅಂತ ಹೇಳ್ತೀರಿ, ಅಕಸ್ಮಾತ್ ಅದು ಒಂಬತ್ತು ಅಡಿನೋ ಆರಡಿನೋ ಆಗಿಬಿಟ್ರೆ….”
“ಇದು ಮನೆ ಮುಗಿದಮೇಲೆ ಒಟ್ಟಾರೆ ಲೆಕ್ಕ ಹಾಕ್ತೀವಿ ಆಗ ನಿನಗೆ ಗೊತ್ತಾಗುತ್ತೆ…..” ಈಗ ತೆಪ್ಪಗಿರಿ ಅಂತ ಅವರು ಹೇಳಲಿಲ್ಲ, ನಾನೇ ಅರ್ಥ ಮಾಡಿಕೊಂಡೇ. ಆದರೆ ಹತ್ತಡಿ ಉದ್ದ ಅಗಲ ಓಕೆ ಎತ್ತರ? ಎತ್ತರ ನಾರ್ಮಲ್ ಆಗಿ ಒಂಬತ್ತು ಅಡಿ, ಅದಕ್ಕಿಂತ ಎತ್ತರ ಯಾರೂ ಕಟ್ಟುಲ್ಲ.. ಇದು ಸಮಜಾಯಿಷಿ. ಅಕಸ್ಮಾತ್ ನಾನು ನೂರಡಿ ಎತ್ತರ ಕಟ್ಟಿದರೆ…? ಈ ಸಮಸ್ಯೆ ಯಾರ ಹತ್ತಿರವೋ ಹೇಳಿದೆ. ಅವರು ನೀನೇನು ಮನೆ ಕಟ್ಟಿಸ್ತಿಯೋ ಅಥವಾ ಉಬ್ಬೆ ಕಟ್ಟಡವನ್ನೋ ಅಂದರು! ಉಬ್ಬೆ ಕಟ್ಟಡ ಅಂದರೆ ಆ ಕಾಲದಲ್ಲಿ ದೋಬಿಗಳು ಬಟ್ಟೆ ಒಗೆಯಲು ಒಂದು ದೊಡ್ಡ ತೊಟ್ಟಿ ಕಟ್ಟಿರುತ್ತಿದ್ದರು. ಅದರಲ್ಲಿ ಬಟ್ಟೆ, ನೀರು ಸೋಪು ಹಾಕಿ ಕೆಳಗಿನಿಂದ ಬೆಂಕಿಯಲ್ಲಿ ಮಳ ಮಲಿಸುತ್ತಿದ್ದರು. ಕೊಳೆ ಬಿಟ್ಟು ಬಟ್ಟೆ ತುಂಬಾ ಸೊಗಸಾಗಿ ಕಾಣುತ್ತಿತ್ತು. ಈ ವ್ಯವಸ್ಥೆಗೆ ಉಬ್ಬೆ ಎನ್ನುವ ಹೆಸರಿಟ್ಟು ಕರೆಯುತ್ತಿದ್ದರು!
ನನ್ನ ಈ ರೀತಿಯ ಸಮಸ್ಯೆ ಕೇಳಿದ ಸತ್ಯಣ್ಣ
“ಗೋಪಿ, ನಾನು ಇರ್ತೆನೆ, every solution has a problem. ನನ್ನ ಗಲಿಬಿಲಿ ಮುಖ ನೋಡಿದ. every problem has a solution” ಅಂದ!
ಮಲ್ಲಯ್ಯ ಬಂದು ಸೈಟ್ ನೋಡಿದ ಮತ್ತು ಒಂದು ಅಗ್ರಿಮೆಂಟ್ ಮಾಡ್ಕೋ ಅವನ ಜತೆ ಅಂತ ಸತ್ಯಣ್ಣ ಹೇಳಿ ಏನೇನು ಬರೀಬೇಕು ಅಂತ ಐಡಿಯಾ ಕೊಟ್ಟ. ತೆಳು ಗಿಳಿ ಹಸಿರು ಬಣ್ಣದ ಕಾಗದ ತಗೊಂಡು ಅದರಲ್ಲಿ ಎಲ್ಲಾ ಬರೆದೆ. ಅಗ್ರಿಮೆಂಟ್ ಪತ್ರ ಈ ರೀತಿಯ ಪೇಪರ್‌ನಲ್ಲಿ ಬರೀಬೇಕು ಅಂತ ತಿಳಿದುಕೊಂಡಿದ್ದೆ.
ಮಲ್ಲಯ್ಯನ ಕರೆದು ಕೆಲಸ ಯಾವಾಗ ಶುರು ಮಾಡಬೇಕು ಅಂತ ಹೇಳಿ ಅವನ ಮುಂದೆ ಪೇಪರ್ ಇಟ್ಟೆ.
“ಇದು ಓದು, ಸೈನ್ ಮಾಡು….”
“ಏನ್ ಸೋಮಿ ಇದು.. ನಂಗೆ ಓದಾಕ್ ಬರಕಿಲ್ಲ.?”
ಅದೇನು ಅಂತ ವಿವರಿಸಿದೆ.
“ಇಲ್ಲಿಗಂಟ ನಾನು ಇದು ಈ ರೀತಿ ಸೈನ್ ಮಾಡೋದು ಕೇಳೆ ಇಲ್ಲ……”
“ಈಗ ಕೇಳ್ತಾ ಇದ್ದಿ, ಇದಕ್ಕೆ ಸೈನ್ ಹಾಕು, ಕೆಲಸ ಶುರು ಹಚ್ಕೋ…’
“ಪೆನ್ ತಣ್ರಿ” ಅಂತ ಪೆನ್ ಇಸ್ಕೊಂಡ.
ತೋರಿಸಿದ ಕಡೆ ಸೈನ್ ಹಾಕಿದ, ಅಂದರೆ ಅದೇನೋ ಗೀಚಿದ!
ಕೆಲಸ ಇಷ್ಟು ಸುಲಭವಾಗಿ ಆಗಿ ಹೋದರೆ ಯಾರಿಗೆ ಆಶ್ಚರ್ಯ ಆಗೊಲ್ಲ ಹೇಳಿ?
“ಥ್ಯಾಂಕ್ಸ್ ಮಲ್ಲಯ್ಯ, ನಾಳೆಯಿಂದ ಕೆಲಸ ಶುರು ಮಾಡ್ಕೋ…” ಅಂದೆ.
ಮಲ್ಲಯ್ಯ ಕಣ್ಣು ಬಾಯಿ ಬಿಟ್ಟ.
“ಅದು ಹೇಗೆ ಶುರು ಮಾಡ್ತೀರಿ? ಪೂಜೆ ಮಾಡಬೇಕು…”
ಇದು ನನಗೆ ಹೊಸದು. ನಮ್ಮ ಕಾಂಟ್ರಾಕ್ಟ್‌ನಲ್ಲಿ ಪೂಜೆ ವಿಷಯ ಬರಲ್ಲ! ಪೂಜೆ ದುಡ್ಡು ಅವನು ಹಾಕಬೇಕೋ ನಾನೋ? ಸತ್ಯಣ್ಣ ಹತ್ತಿರ ತಿರುಗ ಓಡಬೇಕಾ…
ಅದೂ ಅಲ್ಲದೇ ನಾನು ನಿರೀಶ್ವರವಾದಿ ಅನಿಸಿಕೊಂಡೋನು. ಹೇಗೆ ಈ ಸಮಸ್ಯೆಯಿಂದ ಪಾರಾಗೋದು? ನನ್ನಾಕೆ ಎದುರು ಈ ಮಾತುಕತೆ ಆಗಿದ್ದು.
“ಒಂದು ಕೆಲಸ ಮಾಡು, ಪೂಜೆ ನೀನೇ ಮಾಡಿಬಿಡು…” ಅಂದೆ. ಅವನು ನಕ್ಕ. ಸೈಟ್ ಓನರ್ ಸಾರು ಅದನ್ನ ಮಾಡೋದೂ…” ಅಂತ ನಗೆ ವಿಸ್ತರಿಸಿದ. ಹೆಂಡತಿ ಕಾಣಿಸಿಕೊಂಡಳು.
“ಅಮ್ಮಾವ್ರೇ, ಸಾರ್‌ಗೆ ಸ್ವಲ್ಪ ಅರ್ಥ ಆಗೋ ತರಹ ಹೇಳಿ…” ಅಂತ ಸಮಸ್ಯೆ ವಿವರಿಸಿದ.
“ನೀನೇನೂ ಯೋಚನೆ ಮಾಡಬೇಡಪ್ಪ. ಅದೇನೇನು ಬೇಕೋ ಎಲ್ಲಾ ರೆಡಿ ಮಾಡ್ಕೋ. ಬೆಳಿಗ್ಗೆ ಅಲ್ಲಿಗೆ ಹೂವು ಹಣ್ಣು ಕಾಯಿ ತರ್ತೀವಿ…” ಅಂದಳು.
ಸರಿ ಅಂತ ತಲೆ ಆಡಿಸಿದ. ಕೂಲಿಯವರು, ಮಮಟೇ ಹಾರೆ ಕರಣೆ.. ಇವುಕ್ಕೂ ಪೂಜೆ ಆಗಬೇಕು, ಸ್ವೀಟ್ ತರಬೇಕು, ಅಯ್ಯನವರು ಬೇಕು…” ಅಂತ requirement list ಹೇಳಿದ. ಅಯ್ಯನವರು ಅಂದರೆ ಪುರೋಹಿತರು!
“ಅಯ್ಯನವರು ಅವರನ್ನೆಲ್ಲ ಈಗ ಹುಡುಕೋಕ್ಕೆ ಆಗೊಲ್ಲ. ನೀನೇ ನಮಗೆ ಅಯ್ಯನವರು. ಅದೇನು ಮಾಡಬೇಕೋ ನೀನೇ ಮಾಡಿಸು…..” ಅಂದೆ.
ಮಲ್ಲಯ್ಯ ಬಹುಶಃ ಅವನ ಈ ಕೆಲಸದಲ್ಲಿ ಮೊಟ್ಟಮೊದಲ ಬಾರಿಗೆ ನನ್ನ ರೀತಿಯ ಓನರ್‌ನ ಕಂಡ ಅಂತ ಕಾಣ್ಸುತ್ತೆ.
“ಸರಿ ಅದೆಂಗೋ ಮಾಡೋಣ. ಬೆಳಿಗ್ಗೆ ಬನ್ನಿ ಹಂಗೇ ನಂಗೆ ಸ್ವಲ್ಪ ಅಡ್ವಾನ್ಸು ತಕೊಂಬಣ್ಣಿ…..” ಅಂದ.
ಇದು ಮೊದಲ ಹಂತ ಅಂದರೆ ಮನೆ ಕಟ್ಟುವ ಪೂರ್ವಭಾವಿಕೆ ಅಂತ ತಿಳಿದದ್ದು ಎಷ್ಟೋ ವರ್ಷದ ನಂತರ.
ದೊಡ್ಡ ದೊಡ್ಡ ಕಟ್ಟಡ ಆದರೆ ಶಾಮಿಯಾನ ಹಾಕಿ, ಲೌಡ್ ಸ್ಪೀಕರ್ ಸಿಕ್ಕಿಸಿ, ಐದಾರು ಜನ ಹೆಸರುವಾಸಿ ಪುರೋಹಿತರು ಬಂದು ಹೋಮ ಹವನ ಮಾಡಿ ಶಂಕು ಸ್ಥಾಪನೆ ಕಲ್ಲಿಗೆ ಪೂಜೆ ಮಾಡುತ್ತಾರೆ. ನೆರೆದವರಿಗೆ ಊಟ ಫಲ ತಾಂಬೂಲ ಕೊಡ್ತಾರೆ ಮತ್ತು ಇದು ಸರ್ಕಾರಿ ಕಾರ್ಯಕ್ರಮ ಆದರೆ ಪ್ರೆಸ್ ಜನ ಒಂದೆರೆಡು ಬಸ್ಸಿನ ತುಂಬಾ ಬಂದು ಫೋಟೋ ವಿಡಿಯೋ ತೆಗೆದು ವಿಸ್ತೃತ ಪಬ್ಲಿಸಿಟಿ ಕೊಡ್ತಾರೆ. ಕೆಲವು ಸಲ ಅದು ಲೈವೂ ಇರುತ್ತೆ. ಶಂಕು ಸ್ಥಾಪನೆ ಕಲ್ಲಿನಲ್ಲಿ ನನ್ನ ಹೆಸರಿಲ್ಲ ಅಂತ ಧರಣಿ ಮುಷ್ಕರ ಬಾಯ್ಕಾಟ್ ಮೊದಲಾದ ಜನಹಿತ ಪ್ರೋಗ್ರಾಂ ಇರ್ತಾವೆ ಮತ್ತು ಅದಕ್ಕೆ ಸಮಾಜಾಯಿಸಿಯನ್ನು ಮುಮ ಗಳು, ಉಪ ಮುಮ, ಪಕ್ಷದ ಸಣ್ಣಪುಟ್ಟ ಲೀಡರ್ ಕೊಡ್ತಾರೆ.
ಆದರೆ ನಂದೋ ಪುಟಾಣಿ ಸೈಟು, ಸಾಲದಲ್ಲಿ ಕಟ್ಟುತ್ತಿರೋ ಗೂಡು. ಇದಕ್ಕೆಲ್ಲಾ ಪ್ರಚಾರ ಬೇಕಾ? ಅದರಿಂದ ಯಾವ ಮುಖ್ಯ ಮಂತ್ರಿಯನ್ನೂ, ಯಾವ ಉಪ ಮುಖ್ಯಮಂತ್ರಿಯನ್ನು, ಹೋಗಲಿ ಒಂದು ಎಂ ಎಲ್ ಎ ನ ಸಹ ಕರೆಸಿರಲಿಲ್ಲ, ಶಾಮಿಯಾನ ಇಲ್ಲ, ಶಂಕು ಸ್ಥಾಪನೆ ಕಲ್ಲು ಇಲ್ಲ, ಫಲ ಇಲ್ಲ, ತಾಂಬೂಲ ಇಲ್ಲ, ಪುರೋಹಿತರು ಇಲ್ಲ, ಊಟ ಊಹೂಂ ಅದೂ ಇಲ್ಲ… ಹೀಗೆ ಇನ್ನೂ ಎಷ್ಟೋ ಇಲ್ಲದವುಗಳ ನಡುವೆ ಮಾರನೇ ಬೆಳಿಗೆ ಸೈಟ್ ಹತ್ತಿರ ಹೋದೆವು. ಸೈಕಲ್ ತುಳಿಯುವ ನಾನು, ಹಿಂದಿನ ಕ್ಯಾರಿಯರ್ ಮೇಲೆ ಹೆಂಡತಿ ಅವಳ ಹತ್ತಿರ ಪೂಜಾ ಸಾಮಗ್ರಿ ಇರುವ ವೈರ್ ಬುಟ್ಟಿ ಮುಂದಿನ ಬಾರ್ ಮೇಲೆ ಜೋಡಿಸಿದ್ದ ಪುಟ್ಟ ಸೀಟ್ ಮೇಲೆ ಮಗ.. ಆಗ ವೈರ್ ಬುಟ್ಟಿ ಬಹಳ ಜನಪ್ರಿಯ ಮತ್ತು ಅದು ಸಂಪೂರ್ಣ ಮಡಿಗೆ ಬರುತ್ತೆ ಎನ್ನುವ ನಂಬಿಕೆ ಇತ್ತು, ಈಗಲೂ ಇದೆ. ಆದರೆ ಈಚೆಗೆ ವೈರ್ ಬುಟ್ಟಿಗಳು ಅಷ್ಟು ಕಣ್ಣಿಗೆ ಬೀಳುತ್ತಿಲ್ಲ.
ಹೀಗೆ ನಮ್ಮ ಮೆರವಣಿಗೆ ಸೈಟ್ ಹತ್ತಿರ ಬಂದು ಸೇರಿದೆವಾ…. ಮಲ್ಲಯ್ಯ ಆಗಲೇ ಕೆಲವು ಕೂಲಿ ಅವರ ಜತೆ ಅಲ್ಲಿದ್ದ. ಮಂಕರಿ, ಮಮಟಿ, ಹಾರೆ, ಬಾಂಡಲಿ.. ಇವೆಲ್ಲಾ ಒಂದು ಕಡೆ ಇತ್ತು.
“ಚೊಂಬು ತಂದಿದ್ದೀರಾ….” ಅಂದ. ಚೊಂಬು ಬೇಕು ಅಂತ ನೀನೆಲ್ಲಿ ಬೊಗಳಿದ್ದೆ.. ಅಂತ ಬಾಯಿ ತೆರೆದಿದ್ದೆ. ನನ್ನಾಕೆ ತಂದಿದ್ದೀನಿ ಎಲ್ಲಾ ಇದರಲ್ಲಿದೆ ಅಂತ ವೈರ್ ಬ್ಯಾಗ್ ಮುಂದೆ ಇಟ್ಟಳು…!
ಪೂಜೆ ಮಾಡಲು ಚೊಂಬು ಬೇಕು ಅಂತ ಅವತ್ತು ತಿಳಕೊಂಡೆ. ಇಷ್ಟುವರ್ಷ ಇಂತಹ ಸ್ಮಾಲ್ ತಿಂಗ್ಸ್ ತಿಳಿಯಲಿಲ್ಲ ಅಂತ ನನ್ನ ಮೇಲೇ ನನಗೆ ಕೋಪ ಬಂತು.
“ಹೋಗಿ ಸೊಮಿ ಚೊಂಬುನಲ್ಲಿ ನೀರು ಇಡ್ಕ ಬನ್ನಿ..” ಅಂದ.
ನಮ್ಮ ಸೈಟ್ ಹಿಂದೆ ಒಂದು ಬಾವಿ ಇತ್ತು. ಅದರ ಪಕ್ಕ ಒಂದು ಅರೆಬರೆ ಕಟ್ಟಿದ ಮನೆ, ಕಿಟಕಿಗಳಿಗೆ ಗೋಣಿಚೀಲದ ಪರದೆ ಮತ್ತು ಅದರಲ್ಲಿ ಜನ ಓಡಾಡ್ತಾ ಇರೋದು ಕಾಣಿಸೋದು. ಈ ಮನೆಯದ್ದು ಒಂದು ವಿಚಿತ್ರ ಹೃದಯ ಹಿಂಡುವ ಕತೆ. ಮುಂದೆ ಯಾವಾಗಲಾದರೂ ಅದನ್ನು ತಿಳಿಸುತ್ತೇನೆ, ನೀವು ನೆನಪಿಸಬೇಕು ಅಷ್ಟೇ….
ಚೆಂಬು ತಗೊಂಡು ಬಾವಿ ಹತ್ತಿರ ನಡೆದು ಬಾವಿಯಿಂದ ಬಕೆಟ್‌ನಲ್ಲಿ ನೀರು ಸೇದಿ ಅದನ್ನು ಚೊಂಬಿಗೆ ತುಂಬಿ ತಂದೆ.
“ಒಂದು ದಿಂಡು ಬೇಕಲ್ಲಾ….” ಅಂದ.
ಬಡ್ಡಿ ಮಗ ದೊಡ್ಡ ಸ್ಕೇಲಿನ ಪೂಜೆ ಪ್ಲಾನ್ ಮಾಡಿದಾನೆ ಅನ್ನಿಸಿತು.
“ದಿಂಡು ಗಿo ಡೂ ಎಲ್ಲಾ ಮೊದಲೇ ಹೇಳಬೇಕಿತ್ತು. ಇಲ್ಲಿ ಹತ್ತಿರ ಯಾವ ಅಂಗಡಿನೂ ಇಲ್ಲ. ಬಾಳೆ ಎಲೇನೆ ಸಿಗೋಲ್ಲ, ಇನ್ನು ದಿoಡೆಲ್ಲಿ…..” ಅಂತ ಸಿಡುಕಿದೆ.
“ಸೋಮಿ, ಸೊಲ್ಪ ಸುಮ್ಕಿರಿ….” ಅಂದ. ಅವನೇ ಅಕ್ಕ ಪಕ್ಕ ನೋಡಿ ಎರಡು ಅಕ್ಕಪಕ್ಕ ಅಂಟಿಸಿದ ಹಾಗಿದ್ದ ಸೈಜ್ ಕಲ್ಲು ತಂದ. ಮುಂದೆ ನನ್ನ ಜ್ಞಾನ ಭಂಡಾರ ಮತ್ತು ಶಬ್ದ ಭಂಡಾರ ವೃದ್ಧಿಸಿದ ಹಲವು ವಸ್ತುಗಳಲ್ಲಿ ಈ ದಿಂಡು ಮೊಟ್ಟ ಮೊದಲನೆಯದು.
ದಿಂಡು ತಂದು ಒಂದು ಕಡೆ ಇಟ್ಟ. ಅದನ್ನು ನೀರಿನಲ್ಲಿ ತೊಳೆದ.
“ದೇವ ಮೂಲೆ ಯಾವುದು ಸೋಮಿ….” ಅಂದ.
“ಇಡೀ ಪ್ರಪಂಚ, ಈ ಭೂಮಿ ದೇವರು ಸೃಷ್ಟಿಸಿದ್ದು. ಎಲ್ಲಾನೂ ದೇವ ಮೂಲೆನೆ….” ಅಂದೆ.
ತಲೆ ಎತ್ತಿ ನನ್ನ ಮುಖ ನೋಡಿದ. ಏನೋ ಹೇಳಲು ಹೊರಟಿದ್ದ ಅನಿಸಿತು. ಅವನ ಬಾಯಿ ಮುಚ್ಚಿಸಿದ್ದೀನಿ ಅನಿಸಿತು, ನನಗೆ ನಾನೇ ಭೇಷ್ ಅಂದುಕೊಂಡೆ. ದಿಂಡು ತೊಳೆದ, ಅದರ ಮೇಲೆ ಎಲೆ ಅಡಿಕೆ ಬಾಳೆಹಣ್ಣು ಜೋಡಿಸಿದ.. ಅದರ ಪಕ್ಕ ಕರ್ಪೂರ ಇಟ್ಟ. ಮಂಗಳಾರತಿ ತಟ್ಟೆ ಪಕ್ಕದಲ್ಲಿ ಇಟ್ಟುಕೊಂಡ.
“ಅಮ್ಮಾವ್ರೇ ಬೆಂಕಿ ಪೊಟ್ಟಣ….” ಅಂದ. ಅಮ್ಮಾವ್ರೇ ಬೆಂಕಿ ಪೊಟ್ಟಣ ಮರೆತಿದ್ದರು.
“ಬೆಂಕಿ ಪೊಟ್ಟಣ ಬೇಕಂತೆ, ಜೇಬಿನಿಂದ ತೆಗೆದು ಕೊಡಿ…” ಅಂತ ಆರ್ಡರ್ ಆಯ್ತು. ಆಗ ನನ್ನ ಕ್ಲೋಸೆಸ್ಟ್ ಸಂಗಾತಿ ಅಂದರೆ ನಿಕೋಟಿನ್ ಮತ್ತು ಬೆಂಕಿ ಪೆಟ್ಟಿಗೆ. ಸರಿ ರಾತ್ರಿ ಕೇಳಿದರೂ ಇದು ನನ್ನ ಜೇಬಲ್ಲಿ ಇರ್ತಿತ್ತು. ನಿಕೋಟಿನ್‌ಗೆ ಕಾನ್ಸರ್ ಎನ್ನುವ ಹೆಸರು ಇನ್ನೂ ಬಂದಿರಲಿಲ್ಲ. ಜೇಬಿನಿಂದ ಬೆಂಕಿ ಪೊಟ್ಟಣ ತೆಗೆದು ಕೊಟ್ಟೆ. ಅಷ್ಟರಲ್ಲಿ ನಮ್ಮರಸ್ತೆಯ ಆ ತುದಿಯಲ್ಲಿ ಅವರ ಮನೆ ಮುಂದೆ ನಿಂತು ನಮ್ಮ ಚಟುವಟಿಕೆ ನೋಡುತ್ತಿದ್ದ ಒಬ್ಬರು ಹತ್ತಿರ ಬಂದರು. ಪರಿಚಯ ಆಯಿತು.
“ಸೈಟ್ ನಂಬರು ಇದೆಲ್ಲಾ ಕನ್ಫರ್ಮ್ ಆಗಿದೆಯಾ…” ಅಂತ ಕೇಳಿದರು.
“ಅಯ್ಯೋ ಅದೇನೂ ಗೊತ್ತಿಲ್ಲವಲ್ಲಾ ಇವರೇ..” ಅಂದೆ .
“ನೀವು ಮನೆ ಕಟ್ಟೋಕ್ ಹೊರಟಿರೋ ಸೈಟ್ ನಿಮ್ಮದೇ ಅಂತ certify ಆಗಬೇಕು. ಅದು ಆಗಲಿಲ್ಲ ಅಂದರೆ ದೊಡ್ಡ ಪ್ರಾಬ್ಲಂ ಆಗುತ್ತೆ. ಬೇರೆಯವರ ಸೈಟ್‌ನಲ್ಲಿ ನಿಮ್ಮ ಮನೆ ಬರುತ್ತೆ. ಆಮೇಲೆ ಕೋರ್ಟು ಕಚೇರಿ…….” ಅವರ ಮಾತು ಮುಗಿದ ಮೇಲೆ ಈ ವಿಷಯ ಸತ್ಯಣ್ಣ ಹೇಳಲಿಲ್ಲವೇ ಅನಿಸಿತು.
“ಸರಿ ಸಾರ್, ನಾಳೆ ಕನ್ಫರ್ಮ್ ಮಾಡಿಕೊಂಡು ಬಂದು ಪೂಜೆ ಮಾಡ್ತೀನಿ….” ಅಂದೆ.
ಮಲ್ಲಪ್ಪ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾ ಇದ್ದ. ನನ್ನವಳ ಮುಖದಲ್ಲಿ ಇದೊಳ್ಳೆ ಅಪಶಕುನ ಆಯ್ತಲ್ಲಾ ಅನ್ನುವ ಭಾವನೆ, ಅದರ ಜತೆಗೆ ನನ್ನ ಮೇಲೆ ಕೋಪ ಎದ್ದು ಕಾಣಿಸಬೇಕೇ?
ಇಂತಹ ನಮ್ಮ ಕೆಲಸಗಳಿಗೆ ಅಡೆತಡೆ ಆದಾಗ ಒಂದು ಡೈಲಾಗ್ ಉದುರಿಸುತ್ತಿದ್ದೆ, ನನಗೆ ದೇವರಲ್ಲಿ ನಂಬಿಕೆ ಇಲ್ಲದೇ ಇದ್ದರೂನು. ಆ ಡೈಲಾಗ್ ಏನೂ ಅಂದರೆ man proposes, God disposes!
ಈ ಡೈಲಾಗ್ ಹೇಳಿ ಮನೆಗೆ ಹೋಗೋಣ ಅಂತ ಮಾನಸಿಕವಾಗಿ ಒಂದು ಪ್ಲಾಟ್ ರೆಡಿ ಮಾಡ್ಕೋತಾ ಇದ್ದೆ.
ವೇಣುಗೋಪಾಲ್ “ಒಂದು ಕೆಲಸ ಮಾಡೋಣ ಗೋಪಾಲ್..” ಅಂದರು. ಇದ್ಯಾರು ವೇಣುಗೋಪಾಲ್, ಲೂಸ್ ನನ್ಮಗ ಯಾವ್ಯಾವುದೋ ಪಾತ್ರ ಮಧ್ಯೆ ತಂದು ನಮ್ಮ ತಲೆ ಕೆಡಿಸ್ತಾನೆ ಅಂತ ಯೋಚನೆ ನಿಮ್ಮ ತಲೇಲಿ ಬಂತು ತಾನೇ?
ಈಗ ಅದಕ್ಕೇ ಬಂದೆ. ರಸ್ತೆಯ ಕೊನೆಯಿಂದ ನನ್ನ ಬಳಿ ಬಂದರು ಅಂದೆ ನೋಡಿ, ಅವರೇ ಇವರು, ವೇಣುಗೋಪಾಲ್! ನಮ್ಮ ಫಾಕ್ಟರಿಲೇ ಕೆಲಸ. ನನಗಿಂತ ಒಂದು ವರ್ಷ ಮೊದಲು ಬಂದು ಇಲ್ಲಿ ನೆಲೆಸಿದ್ದರು.
“ನಿಮ್ಮ document ತೋರಿಸಿ…” ಅಂದರು. ಬ್ಯಾಗ್‌ನಿಂದಾ ಫೈಲ್ ತೆಗೆದು ಅವರ ಮುಂದೆ ಹಿಡಿದೆ.
ಅಲ್ಲೇ ಇದ್ದ ಒಂದು ಪುಟ್ಟ ಬಂಡೆ ಮೇಲೆ ನನ್ನ ಡಾಕ್ಯುಮೆಂಟ್ ಹರಡಿದರು. ಸೈಟ್ ನಂಬರು ಅದರ ಆ ಪಕ್ಕ ಏನು ಈ ಪಕ್ಕ ಏನು ಮನೆ ಹಿಂದೆ ಏನು ಅಂತ ಚೆಕ್ ಮಾಡಿದರು.
“ಚಕ್ಕುಬಂದಿ ಸರಿಯಿದೆ…..” ಅಂದರು! ಮೊದಲನೇ ಬಾರಿ ಈ ಚಕ್ಕುಬಂದಿ ಅನ್ನುವ ಪದ ಕೇಳಿದ್ದೆ. “ಹಾಗಂದರೆ ಏನು ಇವರೇ….” ಅಂದೆ.
“ನಿಮ್ಮ ಸೈಟಿನ ಅಕ್ಕ ಪಕ್ಕ ಹಿಂದೆ ಮುಂದೆ ಎಲ್ಲಾ ದಾಖಲೆ ಆಗಿರುತ್ತೆ. ಅವೆಲ್ಲಾ ದಾಖಲೆ ಪ್ರಕಾರ ಇದ್ದರೆ ಸೈಟು ಸರಿ ಅಂತ …”, ಅಂತ ವಿವರಿಸಿದರಾ..
“ಏನಪ್ಪಾ ಏನು ನಿನ್ನ ಹೆಸರು…” ಇದು ಮಲ್ಲಯ್ಯನ ಕಡೆ ತಿರುಗಿ.
“ಮಲ್ಲಯ್ಯ ಅಂತ ಸೋಮಿ….”
“ಸೈಟು ಅಳತೆ ಮಾಡಿದಿಯ….”
“ಇಲ್ಲ ಸೋಮಿ……”
“ಅದೆಲ್ಲಾ ಮೊದಲೇ ಮಾಡಿರಬೇಕು ತಾನೇ” ಮಲ್ಲಯ್ಯ ನೆಲ ನೋಡ್ತಾ ನಿಂತ.
“ಹೀಗೆ ಕನ್ಫ್ಯೂಸ್ ಆಗಬಾರದು ಅಂತ ಒಂದೊಂದು ಬ್ಲಾಕ್‌ಗೂ ಒಬ್ಬೊಬ್ಬರನ್ನ ಇಟ್ಟಿದ್ದಾರೆ. ಅವರು ಬಂದು ಸೈಟ್ ನಿಮ್ಮದೇ ಅಂತ ಸೈನ್ ಮಾಡ್ತಾರೆ. ಆಮೇಲೆ ಕೆಲಸ ಶುರು ಮಾಡಬೇಕು……”
ತಲೆ ಆಡಿಸಿದೆ. ಈ ಬಗ್ಗೆ ವಿವರ ಯಾರೂ ನಮ್ಮ ಸತ್ಯಣ್ಣ ಸಹಾ ಕೊಟ್ಟಿರಲಿಲ್ಲ.
ಸರಿ ಇವರೇ ಸಿಕ್ಕಿದರಲ್ಲ, ನಮ್ಮ ಬ್ಲಾಕ್‌ಗೆ ಯಾರು ಸರ್ಟೈಫೈ ಮಾಡೋರು ಅಂತ ತಿಳ್ಕೊಂಡು ಅವರ ಹತ್ರ ಹೋಗೋಣ ಆಂತ ಮನಸಿಗೆ ಹೊಳೀತು.
“ಈ ಬ್ಲಾಕ್ ಅನ್ನು ಯಾರು ಸಾರ್ ನೋಡಿಕೊಳ್ಳೋವರು? ಅವರ ಹತ್ತಿರ ಹೋಗಿ ಸರ್ಟ್ಟಿಫೈ ಮಾಡಿಸಿ ಆಮೇಲೆ ಕೆಲಸ ಶುರು ಮಾಡ್ತೀನಿ…..” ಅಂದೆ. ಇಷ್ಟು ಹೊತ್ತಿಗೆ ನನ್ನ ರೋಫ್ ಮೂಡು ಕರಗಿತ್ತು ಮತ್ತು ಯಾರದ್ದೋ ಸೈಟ್‌ನಲ್ಲಿ ಮನೆ ಬಂದುಬಿಟ್ಟಿದ್ದರೆ.. ಅನ್ನುವ ಒಳ ಭಯ ಊಹೂಂ ಭಯ ಅಲ್ಲ ತವಕ ಶುರು ಆಗಿತ್ತು.
“ನಮ್ಮ ಬ್ಲಾಕ್‌ಗೆ ನಾನೇ ಈ ಕೆಲಸ ಮಾಡೋದು. ಸೆಕೆಂಡ್ ಶಿಫ್ಟ್ ನಿನ್ನೆ. ಬೆಳಿಗ್ಗೆ ನಿಮ್ಮ ಸೌಂಡ್ ಕೇಳಿಸ್ತು. ಸರಿ ರೂಲ್ ಗೊತ್ತಿಲ್ಲ ನಿಮಗೆ ಅನ್ನಿಸಿತು. ಅದಕ್ಕೇ ನಾನೇ ಬಂದೆ……” ಅಂದರು.
“ಸರಿ ಸಾರ್. ನೀವು ಫ್ರೀ ಇದ್ದಾಗ ಬರ್ತೀನಿ ಸರ್ಟಿಫಿಕೇಟ್‌ಗೆ….” ಅಂತ ಹೇಳಿ ಹೊರಡುವ ಸೂಚನೆ ಕೊಟ್ಟೆ ನನ್ನಾಕೆಗೆ.
“ಸ್ವಲ್ಪ ಇರಿ..” ಅಂದರು ನನಗೆ.
“ಬಾರಯ್ಯ ಮಲ್ಲಪ್ಪ, ಟೇಪ್ ತಂದಿದೀಯಾ….”
ಮಲ್ಲಯ್ಯ ಟೇಪ್ ಇಲ್ಲದಿದ್ದರೆ ಆಗುತ್ತಾ ಸೋಮಿ. ನಮ್ಮ ಅನ್ನ ಕೊಡೋ ದೇವರು…..” ಅಂತ ಟೇಪ್ ಬಿಚ್ಚಿದ. ಸೈಟಿನ ಉದ್ದ ಅಗಲ, ಪಕ್ಕದ ಸೈಟುಗಳ ಉದ್ದ ಅಗಲ ಇದನ್ನು ಅಳೆದರು. ಒಂದು ಇಟ್ಟಿಗೆ ಚೂರು ತಗೊಂಡು ಎಲ್ಲಿಂದ ಎಲ್ಲಿಗೆ ಅಂತ ಮಾರ್ಕ್ ಹಾಕಿದರು.
“ನೋಡಿ ಇದು ನಿಮ್ಮ ಸೈಟ್ ಬೌಂಡರಿ. ಅತ್ತ ಇತ್ತಾ ಡಿವಿಯೇಟ್ ಮಾಡಬೇಡಿ…..”
ಜೇಬಿನಿಂದ ಒಂದು ಪ್ರಿಂಟೆಡ್ ಕಾಗದ ತೆಗೆದರು. ಅದರಲ್ಲಿ ನನ್ನ, ನಮ್ಮ ಸೈಟಿನ ವಿವರ ತುಂಬಿಸಿ ಎಲ್ಲಾ ಸರಿಯಿದೆ ಅಂತ ಸಹಿ ಹಾಕಿ ಪತ್ರ ಕೊಟ್ಟು ಶುಭ ಹಾರೈಸಿದರು.
“ಇರಿ ಸಾರ್, ಪೂಜೆ ಮಾಡಿಬಿಡ್ತೀವಿ…” ಅಂತ ಅವರನ್ನೂ ನಿಲ್ಲಿಸಿಕೊಂಡೆ. ಹೀಗೆ ಶ್ರೀ ವೇಣುಗೋಪಾಲ್ ಅವರ ಮೊದಲ ಪರಿಚಯ ಆಗಿದ್ದು. ನಂತರ ಸುಮಾರು ಇಪ್ಪತ್ತು ವರ್ಷ ಅವರು ನನ್ನ ಸ್ನೇಹಿತರು. ಇಪ್ಪತ್ತು ಯಾಕೆ ಅಂದರೆ ಅವರು ದೇವರ ಪಾದ ಸೇರಿದರು. ಅವರ ಶ್ರೀಮತಿ ನನ್ನಾಕೆಗೆ ಫ್ರೆಂಡು ಮತ್ತು ಅವರ ಮಕ್ಕಳು ನಮ್ಮ ಮುಂದೆ ಬೆಳೆದವರು. ಈಗೊಂದು ಹತ್ತು ಹದಿನೈದು ವರ್ಷ ಹಿಂದೆ ಮನೆ ಮಾರಾಟ ಮಾಡಿ ಬೇರೆಡೆ ಸೆಟಲ್ ಆದರು ಮಕ್ಕಳು.
ಮತ್ತೆ ಸೈಟ್ ಕತೆಗೆ…
“ಅಕಸ್ಮಾತ್ ನೀವು ಸಿಕ್ಕದೇ ಹೋಗಿದ್ದರೆ ನಾನು ಕೆಲಸ ಶುರು ಮಾಡಿ ಬಿಡ್ತಾ ಇದ್ದೆ…” ಅಂದೆ ಅವರಿಗೆ ನಿಮ್ಮಿಂದ ಉಪಕಾರ ಆಯ್ತು ಎಂದು ಹೇಳುವ ಹಿನ್ನೆಲೆಯಲ್ಲಿ. ನಾವು ನೀರು ತಗೊಂಡೆವಲ್ಲ ಆ ಬಾವಿ ಕಡೆ ಕೈ ತೋರಿಸಿದರು..
“….. ನೋಡಿ ಅವರದ್ದು ಸಮಸ್ಯೆ ಆಗಿ ಹೋಯ್ತು. ಅವರು ಮನೆ ಶುರು ಮಾಡಿದಾಗ ಈ ಸರ್ಟಿಫಿಕೇಷನ್ ತಪ್ಪಾಯ್ತು ಅಂತ ಕಾಣುತ್ತೆ. ಅವರೂ ಸಾಲ ಸೋಲ ಮಾಡಿ ಮನೆ ಶುರು ಮಾಡಿದರು. ನೀರಿಗೋಸ್ಕರ ಮೊದಲು ಬಾವಿ ತೋಡಿಸಿದರು. ಹದಿನೈದು ಅಡಿಗೆ ನೀರುಬಂತು. ಒಳ್ಳೇ ಸಿಹಿ ನೀರೂ.. ಮನೆ ಶುರು ಮಾಡಿದರು, ಫೌಂಡೇಶನ್ ಆಯ್ತು, ಇಟ್ಟಿಗೆ ಕೆಲಸ ಶುರು ಆಯ್ತು, ವಾಸ್ಕಲ್ ಇಟ್ಟರು, ಜನಲ್ ಇಟ್ಟರು, ಲಿಂಟಲ್ ಆಯ್ತು, ರೂಫ್ ಮೌಲ್ಡ ಸಹ ಆಯ್ತು.(ವಾಸ್ಕಳ್ ಪಾಸ್ಕಲ್, ಜನಲ್ , ಗಿನಲ್ ಲಿಂಟಲ್ ಪಂಟಲ್…. ಮೊದಲಾದ ಪಾರಿಭಾಷಿಕ ಪದಗಳಿಗೆ ಮುಂದೆ ವಿವರ ಕೊಡುತ್ತೀನಿ). ಇವರು ಯೋಚನೆ ಇಲ್ಲದೇ ಕೆಲಸ ಮುಂದುವರೆಸಿಕೊಂಡು ಹೋಗ್ತಾ ಇದಾರೆ. ಅವರೂ ಪಾಪ ಬ್ಯಾಂಕ್ ಸಾಲ ಬೇಗ ಮನೆ ಮುಗಿಸಿ ಒಳಗೆ ಸೇರಿಕೊಂಡು ಸಾಲ ತೀರಿಸಬೇಕು ಅಂತ ಅವರ ಪ್ಲಾನು. ಇವರ ಪಕ್ಕದವರು ಅವರ ಸೈಟ್ ನೋಡೋಕ್ಕೆ ಬಂದರು. ಅವರಿಗೇನೋ ಡೌಟ್ ಬಂದು ಸೈಟ್ ಮೇಷರಮೆಂಟು, ಕ್ರಯಪತ್ರ ಹೀಗೆ ಎಲ್ಲಾ ಡಾಕ್ಯುಮೆಂಟ್ ಚೆಕ್ ಮಾಡಿದ್ದಾರೆ.
ಅವರ ಡೌಟು ನಿಜ ಆಗಿಬಿಟ್ಟಿದೆ! ಅವರ ಸೈಟಿನಲ್ಲಿ ಇವರ ಮನೆ ಬಂದುಬಿಟ್ಟಿದೆ! ಆಕಸ್ಮಿಕವಾಗಿ ಆಗಿರೋ ತಪ್ಪು ಇದು, ಇಲ್ಲೇ ಸರಿಪಡಿಸಿಕೊಳ್ಳೋಣ ಅನ್ನುವುದರ ಬದಲು ಕೋರ್ಟಿಗೆ ಹೋದರು. ಮನೆ ಮುಂದೆ ಕಟ್ಟುವುದು ಬೇಡ, ಕೇಸ್ ತೀರ್ಮಾನ ಆಗುವವರೆಗೆ ಸ್ಟೇಟಸ್ ಕೊ ಮೈನ್ ಟೈನ್ ಮಾಡಿ ಅಂತ ಕೋರ್ಟ್ ಆರ್ಡರ್ ಆಗಿ ಬಿಡ್ತು. ಇವರು ಮನೆ ಹೇಗಿತ್ತೋ ಹಾಗೇ ಬಂದು ವಾಸ ಶುರು ಮಾಡಿದರು….” ಅಂತ ಕತೆ ವಿವರಿಸಿದರು. ಅವರ ಮನೆ ಕಿಟಕಿಗಳಿಗೆ ಗೋಣಿಚೀಲ ಕಟ್ಟಿದ್ದರು, ಬಾಗಿಲಿಗೆ ಒಂದು ಮರದ ಪೀಸ್ ಅಡ್ಡ ಇತ್ತು….
ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು. ಬೇರೆ ಸೈಟು ಅವರಿಗೆ ಸಿಕ್ಕಿ ಇವರಿಗೆ ಇದೇ ಸೈಟು ಅಂತ ಆಯಿತು. ಆದರೂ ಇಷ್ಟೊಂದು ದೀರ್ಘ ಕಾಲ ಕೋರ್ಟ್‌ಗೆ ಅಲೆದಾಡುವ ಮೆಂಟಲ್ ಟೆನ್ಶನ್ ಕೊಡುವ ಕೆಲಸ ಶತ್ರುವಿಗೂ ಸಹ ಬೇಡ ಅನಿಸುತ್ತದೆ. ಮಾನಸಿಕ ನೆಮ್ಮದಿ ಹೋದರೆ ಸ್ವಂತ ಮನೆಯ ಸುಖ ಸಿಕ್ಕೀತೇ? ಈಗೊಂದು ಐದಾರು ವರ್ಷದ ಹಿಂದೆ ಮನೆ ಮಾಲಿಕರು ದೇವರ ಬಳಿ ಹೋದರು. ಈಗ ಮನೆಯಲ್ಲಿ ಅವರ ಹೆಂಡತಿ ಮಕ್ಕಳು ಮೊಮ್ಮಕ್ಕಳು.. ಹೀಗೆ ನಂದ ಗೋಕುಲ ಆಗಿದೆ.
ಮತ್ತೆ ಪೂಜೆಯ ಕಡೆಗೆ ದಿಂಡು ಇಟ್ಟ ಅದರ ಮೇಲೆ ನೀರು ಸುರಿದು ತೊಳೆದ, ಅರಿಶಿಣ ಕುಂಕುಮ ಹಚ್ಚುವ ಅದರ ಮೇಲೆ ಹೂವಿನ ಹಾರ ಹಾಕಿದ. ತೆಂಗಿನ ಕಾಯಿಯನ್ನು ನನ್ನಾಕೆ ಅಲ್ಲೇ ಹತ್ತಿರದಲ್ಲಿದ್ದ ಕಲ್ಲಿಗೆ ಬಡಿದು ಕೊಟ್ಟಳು. ಹಿಂದಿನ ದಿವಸ ರಾತ್ರಿ ಪೂಜೆ ಮಾಡುವ ನಿರ್ಧಾರ ಮಾಡಿದ್ದು, ಮನೆ ಬಳಿ ಯಾವುದೂ ಸ್ವೀಟ್ ಅಂಗಡಿ ಇಲ್ಲ, ಮಲ್ಲೇಶ್ವರಕ್ಕೇ ಹೋಗಬೇಕು. ಅದರಿಂದ ಮನೆಯಲ್ಲೇ ಸ್ವೀಟ್ ತಯಾರಿಸಿ ತೆಗೆದುಕೊಂಡು ಹೋಗುವುದು ಎಂದು ನಿರ್ಧರಿಸಿದ್ದೆವು. ನಿರ್ಧರಿಸಿದ್ದೆವು ಎಲ್ಲಿ? ಹೆಂಡತಿ ಹೇಳಿದಳು, ನಾನೂ ಕೋಲೆ ಬಸವನ ಹಾಗೆ ತಲೆ ಆಡಿಸಿ ಒಪ್ಪಿಗೆ ಕೊಟ್ಟಿದ್ದೆ.
ಪೂಜೆ ಕೊನೆ ಹಂತಕ್ಕೆ ಬಂತಾ. ಮಲ್ಲಯ್ಯ ಅಮ್ಮಾವ್ರೇ ಸೀಟೂ ಅಂದ. ಅಮ್ಮಾವ್ರೇ ಒಂದು ಸ್ಟೀಲ್ ಡಬ್ಬಿ ಮುಚ್ಚಳ ತೆಗೆದು ಅವನಿಗೆ ಡಬ್ಬಿ ಕೊಟ್ಟರು. ಡಬ್ಬಿ ಒಳಗೆ ಭರತಿ ಸ್ವೀಟ್ ಕಾಣಿಸಿತು. ಅವನ ಮುಖ ಹುಳ್ಳಗೆ ಆಯ್ತು ಅಂತ ನನಗೆ ಭಾಸವಾಯಿತು.
ಅವನು ಏನಾದರೂ ಹೇಳುವ ಮೊದಲೇ ನಾನು ಹೇಳಿಬಿಟ್ಟೆ ಸಾರ್ವಜನಿಕವಾಗಿ..
“ನಿನ್ನೆ ರಾತ್ರಿ ಪೂಜೆ ಇವತ್ತು ಅಂತ ಡಿಸೈಡ್ ಮಾಡಿದ್ದು. ಆ ಸಮಯದಲ್ಲಿ ಸ್ವೀಟ್‌ಗೆ ಅಂದರೆ ಮಲ್ಲೇಶ್ವರ ಹೋಗಬೇಕಿತ್ತು. No time. ಅದಕ್ಕೇ ಮನೇಲೇ ಮಾಡಿದರು ಅಮ್ಮಾವ್ರು. ಇದರ ಹೆಸರು ಗೊತ್ತಾ? ತಿಂದು ನೋಡಿ ಏನ್ ಸಖತ್ತಾಗಿದೆ….” ನಮ್ಮ ದೇವರನ್ನು ನಾವಲ್ಲದೇ ಬೇರೆಯವರು ಹೊಗಳುತ್ತಾರೆಯೇ…?
ಮನೆ ಕಟ್ಟಲು ಮೊದಲ ಹಂತವಾಗಿ ಮಾಡುವ ಈ ಪೂಜೆಗೆ ಗುದ್ದಲಿ ಪೂಜೆ ಎಂದು ಕೆಳ ಮಧ್ಯಮ ವರ್ಗದವರು, ಶಂಕು ಸ್ಥಾಪನೆ ಅಂತ ಅಪ್ಪರ್ ಮಧ್ಯಮ ವರ್ಗದವರು ಲೆಯಿಂಗ್ ಫೌಂಡೇಶನ್ ಸ್ಟೋನ್ ಅಂತ ಮೇಲ್ವರ್ಗದ ಜನ ಹೇಳುತ್ತಾರಂತೆ, ಈಗ ಅದರ ವಿಷಯ ಬೇಡಿ.
ನನ್ನಾಕೆ ಮಾಡಿದ್ದ ಸ್ವೀಟ್ ಫೈವ್ ಕಪ್ಸ್ ಅಂತಲೋ ಸೆವೆನ್ ಕಪ್ಸ್ ಅಂತಲೋ ಹೆಸರಿಂದು. ಆಗ ತಾನೇ ತುಂಬಾ ಪಾಪ್ಯುಲರ್ ಆಗುತ್ತಿದ್ದ ಸ್ವೀಟ್ ಅದು. ಆಗಿನ್ನೂ ಬೆಂಗಳೂರು ಡೈರಿಯ ಯಾವ ಸ್ವೀಟೂ ಹುಟ್ಟಿರಲಿಲ್ಲ. ಆಗಿನ ಪಾಪುಲರ್ ಸ್ವಿಟ್ಸ್ ಅಂದರೆ ಮೈಸೂರ್ ಪಾಕ್, ಜಾಮೂನು, ಜಿಲೇಬಿ ಜಾಂಘಿರ್.. ಇಂತಹವು. ಮಧ್ಯಮ ವರ್ಗದ ಮನೆಗಳಿಗೆ ಅಂಗಡಿಯಿಂದ ಮನೆ ಹಿರಿಯ ಒಯ್ಯುತ್ತಿದ್ದ ಸ್ವೀಟ್ ಎಂದರೆ ಮೈಸೂರ್ ಪಾಕ್ ಮತ್ತು ಅದರೊಂದಿಗೆ ಖಾರಾ ಸೇವೆ.. ಮಿಕ್ಸ್ಚರು!
ಈ ಫೈವ್ ಕಪ್ಸ್ ಅಥವಾ ಸೆವೆನ್ ಕಪ್ಸ್ ಅಂದರೆ ಐದು ಅಥವಾ ಏಳು ಬೇರೆ ಬೇರೆ ಇಂಗ್ರೇಡಿಯಂಟ್ಸ್ ಹಾಕಿ ತಯಾರಿಸುವ ಒಂದು ಸಿಹಿ. ಅದನ್ನು ಮೈಸೂರ್ ಪಾಕ್ ರೀತಿ ಬಿಲ್ಲೆ ಮಾಡಿ ಇಡುತ್ತಿದ್ದರು. ಚಚ್ಚೌಕ ಅಥವಾ ರೆಕ್ಟಾಂಗಲ್ ಶೇಪು…!
ಮುಂದೆ ಯಾವಾಗಲಾದರೂ ಸೆವೆನ್ ಕಪ್ ಬಗ್ಗೆ ವಿವರವಾಗಿ ತಿಳಿಸುತ್ತೇನೆ. ಮತ್ತೆ ಮನೆ ಕತೆಗೆ ನಿಮ್ಮನ್ನು ಕರೆದೊಯ್ಯ ಬೇಕು ಮತ್ತು ಎಷ್ಟೊಂದು ವಿಷಯ ತಿಳಿಸಬೇಕು ಅಂದರೆ ಒಂದರ ಹಿಂದೆ ಮತ್ತೊಂದು ನೆನಪುಗಳು ಲಾರಿ ಲಾರಿ ಲೋಡೂ ತಲೆ ತುಂಬುತ್ತಿವೆ. ಅವನ್ನೆಲ್ಲಾ ಇಳಿಸಿಕೊಂಡು ತಮ್ಮ ಮುಂದೆ ಒಂದೊಂದಾಗಿ ಹರವುತ್ತೇನೆ, ಕೊಂಚ ತಡೆಯಿರಿ…..
(ಮುಂದುವರೆಯುವುದು….)

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
It is a natural flow of incidents generally happens and experienced by many are nicely narrated. Your meticulous narration is appreciable. Anna you are great to sketch the events making others to recall their experience.
ಹರಿ,ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಿಮ್ಮ ಲೇಖನ ಓದಿದಾಗ ೨೦೦೨ ನಂತರ ಬೆಂಗಳೂರಿಗೆ ಕಾಲಿಟ್ಟು ಈಗ ಇಲ್ಲೇ ನೆಲಸಿರುವ ನನಗೆ , ನನ್ನ ಸುತ್ತ ಮುತ್ತಲಿನ ಜಾಗದ ಮೂಲ ಊಹಿಸಿಕೊಂಡು ಆಪ್ತತೆ ಜಾಸ್ತಿಯಾಗಿದೆ. ಹೀಗೆ ಮುಂದುವರೆಯಲಿ. ಧನ್ಯವಾದ
ಧನ್ಯವಾದಗಳು, ಶ್ರೀ ಪ್ರದೀಪ್ ಅವರೇ