ಇಲ್ಲೂ ಒಂದು ಭಾರೀ ತಪ್ಪು ಆಗಿಬಿಟ್ಟಿತು, ನಮ್ಮ ಯಾರ ನೆರವೂ ಇಲ್ಲದೆ… ಮೆಟ್ಟಲಿಗೆ ಅಂತ ಬಾರ್ ಬೆಂಡರ್ ಕಂಬಿ ಕಟ್ಟಿದ. ಕಾಂಕ್ರೀಟು ದಿವಸ ಅವನಿರಲಿ ಅಂತ ಮಲ್ಲಯ್ಯ ಹೇಳಲಿಲ್ಲ, ನಾನೂ ಅವನಿಗೆ ಹೇಳಲಿಲ್ಲ. ಕಾಂಕ್ರಿಟ್ ಹಾಕ್ತಾ ಇದಾರೆ. ಮೆಟ್ಟಲಿಗೆ ಅಂತ ಕಟ್ಟಿದ ಕಂಬಿ ಮುಂದಿನಿಂದ ಮೆಟ್ಟಲು ಏರುವ ರೀತಿ ಇರಬೇಕಿತ್ತು. ಅದು ಹೇಗೆ ಇಟ್ಟರೂ ಸರಿ ಬರ್ತಿಲ್ಲ! ನೋಡಿ ನಿಮ್ಮೋನು ಮಾಡಿರೋ ತಿರುಪತಿ ಕೆಲಸ. ಅವನಿಗೆ ಈಗಲೇ ಬರಕ್ಕೆ ಹೇಳಿ…! ಅವನನ್ನ ಹುಡುಕಿ ನಾನೆಲ್ಲಿ ಹೋಗಲಿ ಆ ಸಮಯದಲ್ಲಿ? ಫೋನ್ ಬೇರೆ ಇಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೇಳನೆಯ ಕಂತು
ಹಿಂದಿನ ಕತೆ ಹೀಗೆ ಮುಗಿದಿತ್ತು..
ಇಟ್ಟಿಗೆ ಕೆಲಸ ಶುರು ಆದಾಗ ಒಂದು ವಿಚಿತ್ರ ಸಂದಿಗ್ಧ ಹುಟ್ಟಿಬಿಡ್ತು. ಒಂದು ಚದರ ಅಂದರೆ ಹತ್ತಡಿ ಉದ್ದ ಅಗಲ ಎತ್ತರದ ಗೋಡೆ ನಾಲ್ಕು ಕಡೆ ಮಲ್ಲಯ್ಯ ಕಟ್ಟ ಬೇಕಿರುವುದು. ಬಾಗಿಲು ಕಿಟಕಿ ಇವೆಲ್ಲಾ ಬಂದರೆ ಅವನು ಹತ್ತು ಅಡಿ ಕಟ್ಟಿದ ಹಾಗೆ ಆಗುಲ್ಲವಲ್ಲ..?
ಇದನ್ನು ಮೊದಲು ಮಲ್ಲಯ್ಯನ ಹತ್ತಿರವೇ ಡಿಸ್ಕಸ್ ಮಾಡುವುದು ಅಂದು ಕೊಂಡೆ.
“ಮಲ್ಲಯ್ಯ ಈಗ ಚದರ ಅಂದರೆ ಹತ್ತಡಿ ಉದ್ದ ಅಗಲ ಎತ್ತರದ ಗೋಡೆ ನಾಲ್ಕು ಕಡೆ ನೀನು ಕಟ್ಟ ಬೇಕಿರುವುದು ಅಲ್ವಾ…” ಅಂತ ಪೀಠಿಕೆ ಹಾಕಿದೆ. ಮಲ್ಲಯ್ಯನಿಗೆ ಇದೇನೋ ಹೊಸಾ ಪ್ರಾಬ್ಲಂ ಬಂತು ಅಂತ ಹೆದರಿಕೆ ಶುರು ಆಯ್ತು ಅಂತ ಕಾಣುತ್ತೆ.
“ಹೂಂ ಹೌದು ಅದಕ್ಕೇನೀಗಾ….” ಅಂದ.
“ಹತ್ತಡಿ ಗೋಡೆ ಅಂದರೆ ಮಧ್ಯೆ ಬಾಗಿಲು ಕಿಟಕಿ ಇವೆಲ್ಲಾ ಬಂದು ಬಿಡುತ್ತಲ್ಲಾ……”
“ಅದಕ್ಕೇ ಕಿಟಕಿ ಬಾಗಿಲು ಇಲ್ಲದೇ ಬರೀ ಇಟ್ಟಿಗೆ ಇಟ್ಟು ಕಟ್ಟಿಬಿಡಲಾ? ನೀವೇನು ಮನೆ ಕಟ್ಟುತ್ತಾ ಇದೀರೋ ಅನಾರ್ಕಲಿ ಸಮಾಧಿ ಕಟ್ತಾ ಇದೀರೋ…….” ಅಂದ. ಅವನಿಗೆ ಅಷ್ಟು ಕೋಪ ಉಕ್ಕಿತ್ತು.
ಮರು ನಿಮಿಷದಲ್ಲೇ “ಮನೆ ಕಟ್ತಾ ಇದೀರಿ. ಸಮಾಧಿ ಮಾತು ಬರಬಾರದಿತ್ತು…..” ಅಂತ ಪೆಚ್ಚಾಗಿ ಬಿಟ್ಟ. ಮಲ್ಲಯ್ಯನ ಮತ್ತೊಂದು ಮುಖ ಅವತ್ತು ನೋಡಿದೆ. ಹಂತ ಹಂತವಾಗಿ ಅವನು ನನಗೆ ಅಡ್ಜಸ್ಟ್ ಆಗಿದ್ದು ಮತ್ತು ನಲವತ್ತು ವರ್ಷಗಳ ನಂತರವೂ ಅವನ ನೆನಪು ಹಸಿರು ಹಸಿರಾಗಿರುವುದು ನನಗೆ ಅಚ್ಚರಿಯ ಸಂಗತಿ. ಇದು ಮುಂದೆ ನಿಧಾನಕ್ಕೆ ತಮ್ಮೆದುರು ಹರವುತ್ತೇನೆ…
ಇನ್ನು ಮುಂದೆ..
ಬಾಗಿಲು ಕಿಟಕಿ ವ್ಯಾಪಾರ ಆಗಿತ್ತು. ಅದನ್ನು ತಂದು ಶೆಡ್‌ನಲ್ಲಿ ಇಡುವ ಹಾಗಿರಲಿಲ್ಲ. ಶೆಡ್ ಆಗಲೇ ಕೂಲಿ ಅವರ ಹಾರೆ, ಪಿಕಾಸಿ, ಮಮ್ಮಟೀ ಚೌರಿ ಬಟ್ಟೆ ಬ್ಯಾಗ್ ಮೊದಲಾದವುಗಳಿಂದ ತುಂಬಿಹೋಗಿತ್ತು. ಒಂದು ಮೂಲೆಯಲ್ಲಿ ಚೌರಿ ಬೆಡ್ ರೂಮ್ ಬೇರೆ! ಆಗ ವಾಚಮ್ಯಾನ್‌ಗಳಿಗೆ ಟಾಯ್ಲೆಟ್ ಕಟ್ಟಿಸಿ ಕೊಡುವ ಪ್ರಾಕ್ಟೀಸ್ ಇನ್ನೂ ಜಾರಿ ಆಗಿರಲಿಲ್ಲ. ಅದರಿಂದ ಟಾಯ್ಲೆಟ್ ಅವನ ಕರ್ಮ! ಈಗ ವಾಚ್ಮನ್ನುಗಳಿಗೆ ಮೊದಲು ಟಾಯ್ಲೆಟ್ ಕಟ್ಟಿಸಿ ಕೋಡಬೇಕಂತೆ. ಸದ್ಯ ನಾನು ಬೇಗ ಹುಟ್ಟಿದೆ ಅಂತ ಎಷ್ಟೋ ಸಲ ಅನಿಸಿದೆ! ಬೇರೆ ಜಾಗ ಇಲ್ಲದ್ದರಿಂದ ಅನಿವಾರ್ಯವಾಗಿ ನನ್ನ ಬಾಡಿಗೆ ಮನೆ ಮರ ಇಡಲು ಆಯ್ಕೆ ಆಯಿತು.
ನಾನಿದ್ದ ಬಾಡಿಗೆ ಮನೆ ಮಹಡಿ ಮೆಟ್ಟಿಲ ಮುಂಭಾಗದಲ್ಲಿ ಇವನ್ನು ಇಟ್ಟುಕೊಂಡು ಮರಗೆಲಸ ಮಾಡಿಸುವಷ್ಟು ಜಾಗ ಇತ್ತು. ಮಹಡಿ ನೆರಳು ಕೆಳಗೆ ಬೀಳುತ್ತಿತ್ತು. ಅಂದರೆ ಇದಕ್ಕಿಂತ ಹೇಳಿಮಾಡಿಸಿದ ಜಾಗ ಬೇರೆ ಇಲ್ಲ. ಇಷ್ಟಿದ್ದ ಮೇಲೆ ಇನ್ನೇನು? ಬಾಗಿಲು ಕಿಟಕಿ ತಂದು ಇಟ್ಟೆ. ಇದರ ಮಧ್ಯೆ ಸತ್ಯಣ್ಣ ಗೊತ್ತಿರುವ ಒಬ್ಬ ಕಾರ್ಪೆಂಟರ್‌ನ ಗೊತ್ತು ಮಾಡಿ ಆಗಿತ್ತು. ಸೈಟ್ ಏರಿಯಾದಲ್ಲಿ ಮನೆ ಕೆಲಸ, ಇಲ್ಲಿ ಮರದ್ದು ಅಂತ ತೀರ್ಮಾನ ಆಗಿತ್ತು. ಮೊದಲನೇ ದಿವಸ ಕಾರ್ಪೆಂಟರ್ ಬಂದು ಮರ ನೋಡಿ ಕಣ್ಣು ಬಾಯಿ ಆ ಅಂತ ತೆರೆದು ಹತ್ತುನಿಮಿಷ ಹಾಗೇ ನಿಂತು ಬಿಟ್ಟರು! ಅವರ ಹೆಸರು ರಾಮಾಚಾರಿ ಅಂತ ಹೇಳಿದ್ದೆ ತಾನೇ?
“ಯಾಕೆ ಆಚಾರ್ರೆ? ಹಾಗೆ ನಿಂತ್ರಿ? ಎನಿ ಪ್ರಾಬ್ಲಂ….?” ಅಂದೆ.
“ಸಾರ್ ಈ ಕಿಟಕಿ ಬಾಗಿಲು ನೀವು ತಂದ್ರಾ….?” ಅಂತ ಪ್ರಶ್ನೆ ಬಂತು.
ಅದನ್ನು ಕೊಂಡ ಕತೆ ಅರ್ಧ ದಿವಸ ಅವನಿಗೆ ವಿವರಿಸಿದೆ! ನಾವು ಅದನ್ನು ಕೊಳ್ಳುವ ಮೊದಲು ನೋಡಿಲ್ಲ ಅನ್ನುವುದನ್ನು ಆತ ಖಚಿತಪಡಿಸಿಕೊಂಡ.
“ಸತ್ಯಣ್ಣ ಅವರ ಹತ್ತಿರ ಮಾತಾಡಬೇಕು….” ಅಂತ ಅವನ ಮರಗೆಲಸ ಟೂಲ್ಸ್ ಇದ್ದ ಗೋಣಿ ಬ್ಯಾಗ್ ಸೈಕಲ್ ಹಿಂದೆ ಕಟ್ಟಿಕೊಂಡು ಹೊರಟು ಹೋದ. ಏನೋ ದೊಡ್ಡ ಸಮಸ್ಯೆ ಉದ್ಭವ ಆಗಿದೆ ಅನ್ನಿಸಿತು. ಈ ವೇಳೆಗೆ ಕೊಂಚ ಸ್ಥಿತ ಪ್ರಜ್ಞತೆ ಬೆಳೆಸಿಕೊಂಡಿದ್ದೆ. ಯಾವುದಕ್ಕೂ ತಲೆ ಮೇಲೆ ತಲೆ ಬಿದ್ದರೂ ಉದ್ವೇಗಕ್ಕೆ ಈಡಾಗತಕ್ಕದ್ದಲ್ಲ ಎನ್ನುವ ಮೈಂಡ್ ಸೆಟ್ ಮೊಳಕೆ ಒಡೆದಿತ್ತು! ಮುಂದಿನ ಆಗು ಹೋಗುಗಳಿಗೆ ಕಾಯೋಣ ಅಂತ ಕಾದೆ. ಮಾರನೇ ದಿನ ಸತ್ಯಣ್ಣ ನನ್ನ ಕೆಲಸದ ತಾಣಕ್ಕೆ ಬೆಳಿಗ್ಗೆ ಬೆಳಿಗ್ಗೆ ಬಂದರು. ಅವರ ಜತೆ ಅಲ್ತಾಫ್ ಸಹ ಇದ್ದ. ಸ್ವಲ್ಪ ಹೊತ್ತು ಇದ್ದು ಏನೋ ಕೆಲಸ ಇದೆ ಅಂತ ಅಲ್ತಾಫ್ ಹೊರಟು ಹೋದ. ಅವನ ಅನುಪಸ್ಥಿತಿಯಲ್ಲಿ ಮುಂದಿನ ಪುರಾಣ ಬಿಚ್ಚಿಕೊಂಡಿತು.
“ಗೋಪು (ಸತ್ಯಣ್ಣ ಕೆಲವು ಸಲ ಹೀಗೇ ನನ್ನನ್ನು ಕೂಗುತ್ತಾ ಇದ್ದದ್ದು) ಮೊದಲು ಹೋಗಿ ಕಿಟಕಿ ಬಾಗಿಲು ನೋಡಲಿಲ್ಲವಾ…?”
“ಇಲ್ಲ. ಇವರು ಸೇಲ್‌ಗೆ ಇದೆ ಅಂದಕೂಡಲೇ ನಿಮ್ಮ ಹತ್ತಿರ ಓಡಿ ಬಂದೆ ಅಲ್ಲವಾ….?”
ಸತ್ಯಣ್ಣ ಎರಡು ನಿಮಿಷ ಯೋಚಿಸಿದರು..
“ಒನ್ ಪ್ರಾಬ್ಲಂ ಹಾಸ್ ಕಮ್…”ಅಂದರು.
ಅದೇನು ಅಂದೆ..
“ಇವರ ಕಿಟಕಿ ಬಾಗಿಲು ನೋಡಲಿಲ್ಲವಲ್ಲಾ ನೌ ಇಟ್ ಈಸ್ ಪೋಸಿಂಗ್ ಬಿಗ್….” ಪ್ರಾಬ್ಲಂ ಅಂತ ಅವರು ಸೇರಿಸದೇ ಇದ್ದರೂ ಏನೋ ಆಗಿದೆ ಅಂತ ನನಗೆ ಅನಿಸಿತು.
“ಏನಾಯ್ತು….?”
ಅವನ ಹತ್ತಿರ ಇದ್ದ ಬಾಗಿಲು ಕಿಟಕಿ ಐದೂವರೆ ಅಡಿ ಎತ್ತರದವು. ಅಂದರೆ ಆಗಿನ ಮನೆಗಳಿಗೆ ಆರಡಿ ಇನ್ನರ್ ಎತ್ತರ ಬೇಕಾಗಿದ್ದು ಇದು ಸರಿ ಹೋಗ್ತಿಲ್ಲ. ಇದು ವಾಪಸ್ ತಗೋ ಬೇರೆ ಆರಡಿಯದು ಕೊಡು ಅಂತ ಕೇಳಿದ್ದಾರೆ. ಅವನು ಇದೇ ನನ್ನ ಹತ್ರ ಇರೋದು, ಇದ್ದದ್ದು ಅಂತ ಹೇಳಿದ್ದಾನೆ. ಮಾತು ಕತೆ ಮುಂದುವರೆದಾಗ ಅಲ್ತಾಫ್ ನಾನು ಮನೇ ಕಟ್ಟಲು ಮಾಡಿಸಿದ್ದು ಇದು ಎನ್ನುವ ಅವನ ಮಾತು ಸ್ಟ್ರೆಸ್ ಮಾಡಿದ್ದಾನೆ. ಅಂದರೆ ಅವರ ಜನಾಂಗದಲ್ಲಿ ಬಾಗಿಲು ಅಷ್ಟೇ ಎತ್ತರ ಇರೋದು! ಅವರ ಜನಾಂಗದ ಸುಮಾರು ಮನೆ ನಾನೂ ನೋಡಿದ್ದೆ. ತಲೆ ಭುಜ ಬಗ್ಗಿಸಿ ಒಳಗೆ ಹೋಗಬೇಕು. ನಮ್ಮ ಆ ಕಾಲದ ದೇವಸ್ಥಾನಗಳ ಗರ್ಭಗುಡಿ ಬಾಗಿಲು ಇದ್ದಹಾಗೆ! ನಾನು ಬ್ಯಾಚುಲರ್ ಆಗಿದ್ದಾಗ ಗೆಳೆಯರ ಜತೆ ವಿರಾಜಪೇಟೆಯಲ್ಲಿ ಒಂದು ಮನೆಗೆ ಹೋಗಿದ್ದೆ. ಮನೆ ಒಡತಿ ಬಾಗಿಲ ಬಳಿ ನಿಂತು ಹುಷಾರು ಹುಷಾರು ಬಾಗಿಲು ತಲೆಗೆ ಹೊಡೆಯುತ್ತೆ ಅಂತ ನಾವು ಅಲ್ಲಿದ್ದ ಮೂರೂ ದಿವಸ ಎಚ್ಚರಿಕೆ ಕೊಟ್ಟು ನಮ್ಮ ತಲೆ ಒಡೆಯುವುದನ್ನು ತಪ್ಪಿಸಿದ್ದರು! ಅಲ್ತಾಫ್ ಹತ್ತಿರ ದುಡ್ಡು ವಾಪಸ್ ಮಾಡಲು ಇಲ್ಲ, ಆಗಲೇ ಖರ್ಚಾಗಿಬಿಟ್ಟಿದೆ. ಕಿಟಕಿ ಬಾಗಿಲು ಅವನ ಮನೇಲೇ ಹಾಕಿ ಬುಡೋಣ ಅಂದರೆ ನಮ್ಮ ಕೆಲಸ ನಿಲ್ಲುತ್ತೆ. ಅಲ್ಲದೇ ಬೇರೆ ಮಾಡಿಸಬೇಕು ಅಂದರೆ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತೇಜಕ ಅಲ್ಲ!
ಇಬ್ಬರೂ ಸುಮಾರು ಸಮಯ ತಲೆ ಕೆಡಿಸಿಕೊಂಡೆವು.
“ಬಾ ಊಟಕ್ಕೆ ಹೋಗಿ ಬರೋಣ….” ಅಂತ ಇಬ್ಬರೂ ಕ್ಯಾಂಟೀನ್ ಸೇರಿದೇವಾ… ಆಕಸ್ಮಿಕವಾಗಿ ನನ್ನ ಕಣ್ಣು ಅಲ್ಲಿದ್ದ ಅಗಲವಾದ ಬಾಗಿಲಿನ ಕಡೆ ಹರಿಯಿತು. ಏಳು ಆಡಿ ಎತ್ತರದ ಬಾಗಿಲಿಗೆ ಕೆಳಗಡೆ ನೀರು ಬಿದ್ದು ಹಾಳು ಆಗದಿರಲಿ ಎಂದಿರಬೇಕು ಎರಡಡಿ ಎತ್ತರದ ಶೀಟ್ ಹೊಡೆದಿದ್ದರು. ತಲೆಯಲ್ಲಿ ಒಂದು ವಿಚಿತ್ರ ಐಡಿಯಾ ನುಗ್ತಾ….!
ಸತ್ಯಣ್ಣ ನುಗ್ಗೆಕಾಯಿ ಸಿಪ್ಪೆ ಸೀಪುತ್ತಾ ಇದ್ದ. ನಮ್ಮ ಕ್ಯಾಂಟೀನ್‌ನಲ್ಲಿ ಆಗ ತಯಾರಾಗುತ್ತಿದ್ದ ಪದಾರ್ಥಗಳ ಬಗ್ಗೆ ಅದರಲ್ಲೂ ನುಗ್ಗೆಕಾಯಿ ಹುಳಿ ಮತ್ತು ಸುವರ್ಣಗಡ್ಡೆ ರೋಸ್ಟೆಡ್ ಪಲ್ಯದ, ಹಾಗಲ ಕಾಯಿ ಗೊಜ್ಜು ಬಗ್ಗೆ ನಿಮಗೆ ಇನ್ಯಾವಗಲಾದರೂ ಸಖತ್ ವಿವರ ಕೊಡುತ್ತೇನೆ, ಈಗ ಬೇಡಿ ಕೊಂಚ ತಡೆದುಕೊಳ್ಳಿ..
“ಸತ್ಯಣ್ಣ just ಎ ವೇಗ್ ತಾಟ್…..” ಅಂದೆ. ಅವಾಗವಾಗ ನಾನು ಈ ವೇಗ್ ತಾಟ್ ಕೊಡುವುದರಲ್ಲಿ ನನ್ನ ಸರ್ಕಲ್‌ನಲ್ಲಿ ಹೆಸರು ಮಾಡಿದ್ದೆ. ಯಾವುದಾದರೂ ಸಮಸ್ಯೆ ನಮ್ಮ ಬಾಸ್(ಮನೆ ಆಗಲಿ ಮನೆಯಿಂದ ಆಚೆ ಆಗಲಿ) ತಲೆ ತಿನ್ನುತ್ತಾ ಇದ್ದರೆ ಅವರು ನನ್ನ ಕರೆಯೋರು. ಅವರ ಸಮಸ್ಯೆ ವಿವರಿಸಿ ಗೀವ್ ಸಮ್ ಫನ್ನಿ ಐಡಿಯಾಸು ಅಂತ ರಿಕ್ವೆಸ್ಟ್ ಮಾಡಿಕೊಳ್ಳೋರು, ನಾನು ಯಥಾ ಪ್ರಕಾರ ಅವರು ಒಂದು ಕೇಳಿದ್ದರೆ ನೂರು ಕೊಡ್ತಾ ಇದ್ದೆ, ಅದರಲ್ಲಿ ಆಯ್ಕೆಗೆ ಅವರಿಗೆ ಚಾಯ್ಸ್ ಇರೋದು ಮತ್ತು ತಲೆ ನೋವು ಹೆಚ್ಚೋದು! ಫನ್ನಿ ಅಂತ ಕೇಳಿದಾಗ ಅನಿಸಿದರೂ ನಂತರ ಅದರ ಎಫೆಕ್ಟ್ ಭಾರೀ ಇರೋವು!
ಸತ್ಯಣ್ಣಗೆ ಇವನು ಇನ್ಯಾವುದೋ ಹೊಸ ಪ್ರಾಬ್ಲಂನಲ್ಲಿ ಸಿಕ್ಕಿಸ್ತಾ ಇದ್ದಾನೆ ಅನಿಸಿರಬೇಕು. ನುಗ್ಗೆ ಕಾಯಿ ಸಿಪ್ಪೆ ತಟ್ಟೆ ಪಕ್ಕ ಇದ್ದ ಆಗಲೇ ತಿಂದು, ಗೋರಿ, ಚೀಪಿ ಬರೇ ಕಸವಾಗಿದ್ದೆ ರಾಶಿಗೆ ಸೇರಿಸಿದ. ಮುಖ ಸಿಂಡರಿಸಿ ತಲೆ ಮೇಲೆ ಎತ್ತಿ “ಅಸಹನೆಯಿಂದ ಏನು ಹೊಸಾ ಪ್ರಾಬ್ಲಂ…” ಅಂದ!
“ನಾಟ್ ಎ ಪ್ರಾಬ್ಲಂ, ಐ ಥಿಂಕ್ ಎ ಸೋಲುಶನ್….” ಅಂದೆ. ಅದನ್ನ ವಿವರಿಸಿದೆ. ಆರು ಅಡಿ ಎತ್ತರದ ಬಾಗಿಲು ಫ್ರೆಮು ಬೇಕಾಗಿರೋದು. ಇನ್ನೊಂದು ಮರ ಕತ್ತರಿಸಿ ಇದಕ್ಕೆ ಸೇರಿಸಿ ಆರು ಅಡಿ ಎತ್ತರ ಮಾಡಬಹುದು ಅಲ್ವಾ….?”
ಸತ್ಯಣ್ಣ ಹತ್ತು ನಿಮಿಷ ಯೋಚನೆ ಮಾಡಿದ. ಕಾರ್ಪೆಂಟರ್ ಹತ್ರ ಮಾತಾಡೋಣ. ಈವರೆಗೆ ಎಲ್ಲೂ ಈ ಪ್ರಯೋಗ ನಡೆದ ಹಾಗಿಲ್ಲ…. ಕಾರ್ಪೆಂಟರ್‌ಗೂನು ಈ ಐಡಿಯಾ ಬಂದ ಹಾಗಿಲ್ಲ, ಐ ವಿಲ್ ಡಿಸ್ಕಸ್ ವಿತ್ ಹಿಮ್…. ಅಂದ.
ಬಾಗಿಲಿನ ಮತ್ತೊಂದು ಸಮಸ್ಯೆ ಇನ್ನೂ ನಿಮಗೆ ಹೇಳಿಲ್ಲ. ಆಗ ತಾನೇ ಇಡೀ ಬೆಂಗಳೂರಿನಲ್ಲಿ ಸಿಂಗಲ್ ಡೋರ್ ಕಾನ್ಸೆಪ್ಟ್ ಹುಟ್ಟಿತ್ತು. ಮುಂಬಾಗಿಲು ಮತ್ತು ಮಿಕ್ಕ ಎಲ್ಲಾ ಬಾಗಿಲುಗಳು ಸಿಂಗಲ್ ಆಗಿ ಇರುವ ಬಗ್ಗೆ ಥಿಂಕಿಂಗ್ ನಡೆದಿತ್ತು. ಅಲ್ಲಿಯವರೆಗೆ ಎರಡು ಬಾಗಿಲು ಇರ್ತಾ ಇದ್ದದ್ದು, ಆಗ ತಾನೇ ಈ ಹೊಸಾ ಐಡಿಯಾ ಇಂಪ್ಲಿಮೆಂಟ್ ಆಗಿತ್ತು. ಜಗತ್ತು ಬದಲಾವಣೆ ಕಾಣುತ್ತಿತ್ತು! ನಾನು ಕೊಂಡ ಮರದಲ್ಲಿ ಎಲ್ಲವೂ ಡಬಲ್ ಡೋರ್‌ನವು! (ಎರಡು ಸಾವಿರದಲ್ಲಿ ಅಂತ ಕಾಣುತ್ತೆ, ಬಂಧು ಒಬ್ಬರ ಮನೆಗೆ ಹೋಗಿದ್ದೆ. ಐವತ್ತು ವರ್ಷದ ಹಿಂದಿನ ಮನೆ ಅದು. ಅದರ ಮುಂಬಾಗಿಲು ಎರಡೂ ಕೈಗಳಿಂದ ದಬ್ಬಿ ಮುಚ್ಚುವ ರೀತಿಯದ್ದು. ನಾನು ಬಾಗಿಲು ನೋಡುತ್ತಿರುವುದನ್ನು ಮನೆಯಾಕೆ ನೋಡಿದರು.
“ನಮ್ಮ ಮಾವ ಅದೇ ಇದರ ಅಪ್ಪ ಕಟ್ಟಿಸಿದ ಮನೆ. ಮುಂಬಾಗಿಲು ಸ್ಟ್ರಾಂಗ್ ಇರಲಿ ಅಂತ ಎರಡು ಬಾಗಿಲು ಅಂಟಿಸಿದ್ದಾರೆ. ಅದಕ್ಕೇ ಅದು ಅಷ್ಟು ದಪ್ಪ. ಬಾಗಿಲು ಮುಚ್ಚ ಬೇಕಾದರೆ ಮನೇಲಿ ಇರೋ ಎಲ್ಲರೂ ಸೇರಿಸಿ ಮುಂದಕ್ಕೆ ನೂಕುತ್ತೀವಿ ….” ಅಂದರು! ನನಗೆ ರಾಜಮಹಾರಾಜರ ಕೋಟೆ ಬಾಗಿಲನ್ನು ಸೈನಿಕರು ಗುಂಪಾಗಿ ಸೇರಿ ಮುಚ್ಚುವ ದೃಶ್ಯ ಮನಸಿಗೆ ಬಂತು!)
“ಡಬಲ್ ಡೋರ್ ಇದ್ದರೆ ಇರಲಿ. ಬಾಗಿಲು ಎತ್ತರ ಆರು ಅಡಿ ಬರೋದು ಮೊದಲು ನೋಡೋಣ….” ಅಂತ ತೀರ್ಮಾನಿಸಿದೆವು. ರಾಮಾಚಾರಿ ಮುಂದೆ ಈ ಐಡಿಯಾ ಇಟ್ಟೆವು. ಅವನು ನನ್ನ ಹೆಸರು ಕೆಟ್ಟುಹೋಗುತ್ತೆ, ನಾನು ಈ ತಿರುಪತಿ ಕೆಲಸ ಮಾಡೋದಿಲ್ಲ… ಅಂತ.
ತಿರುಪತಿ ಕೆಲಸ ಅಲ್ಲ ಇದು. ನಿನ್ನ ಸ್ಕಿಲ್, ಜಾಣತನದ ಕೆಲಸ. ನೀನು ಮನಸು ಇಟ್ಟು ಮಾಡು ಅಂತ ನಾವು. ಅವನು ಜಗ್ಗಲ್ಲ ಅಂದಾಗ ಸತ್ಯಣ್ಣ ಒಂದು ಡೈಲಾಗ್ ಬಿಟ್ಟ.
“ಸರಿ ಹಾಗಿದ್ರೆ ನಾವು ಬೇರೆ ಮರಗೆಲಸದವರನ್ನು ಗುರುತು ಮಾಡ್ತೀವಿ. ನಿನಗೆ ಇನ್ನೂ ಆರು ಮನೆ ಕೊಡಬೇಕು, ಪಾಪ ಬಡವ ಬದುಕಲಿ ಅಂತ ಯೋಚಿಸಿದ್ದೆ. ಬೇಡ ಬಿಡು…. ಗೋಪಾಲ್ ಐ ವಿಲ್ ಆರೆಂಜ್ ಎ ನ್ಯೂ ಮ್ಯಾನ್….
ಸರಿಯಪ್ಪ ರಾಮು….” ಅಂತ ಮೇಲೆದ್ದ. ನಾನೂ ಮೇಲೆದ್ದೆ. ರಾಮಾಚಾರಿ ಪೂರ್ತಿ ಕನ್ಫ್ಯೂಸ್ ಆಗಿದ್ದ.
“ಇರಿ ನಾನೇ ಪ್ರಯತ್ನ ಮಾಡ್ತೀನಿ…….” ಅಂದ.
ಹೀಗೆ ರಾಮಾಚಾರಿ ನನಗೆ ಕಾರ್ಪೆಂಟರ್ ಅಂತ ಆಗಿದ್ದು.
ನನ್ನ ಬಾಡಿಗೆ ಮನೆಗೆ ಈ ಮರಗಳು ಬಂದು ಕೆಳಗಿನ ಅಂಗಳದಲ್ಲಿ ತಮ್ಮ ತಾತ್ಕಾಲಿಕ ನೆಲೆ ಕಂಡುಕೊಂಡವು. ಇದು ತಿಂಗಳ ಕೊನೇ ವಾರ ಆಗಿದ್ದು. ಮರು ತಿಂಗಳ ಮೊದಲನೇ ತಾರೀಖು ಓನರಿಣಿ ಬಾಡಿಗೆ ವಸೂಲಿಗೆ ಬಂದಿದ್ದಾಳೆ. ನಾನು ಒಳಗೆ ಇದ್ದವನು ಬಾಡಿಗೆ ಕೊಡು ಅಂತ ಹೆಂಡತಿಗೆ ಹೇಳಿದೆ. ಐದಾರು ನಿಮಿಷದಲ್ಲಿ ಏನೋ ಬಿರುಸು ಮಾತು ಕೇಳಿಸಿತು. ಏನೋ ಜಗಳ ಹತ್ತಿದೆ ಅನಿಸಿತು. ಅಂಗಿ ತೂರಿಸಿಕೊಂಡು ಬಾಗಿಲು ತೆರೆದು ಆಚೆ ಬಂದೆ.
ಓನರಿಣಿ ಕೋಪಿಸಿಕೊಂಡು ದಡ ದಡದಡದಡ ಹೆಜ್ಜೆ ಹಾಕುತ್ತಾ ಹೋಗುತ್ತಾ ಇದ್ದಳು. ಕಚ್ಚೆ ಪಂಚೆಯ ಪೀತಾಂಬರ ಉಟ್ಟ ಭೀಮಸೇನ ಕೋಪದಲ್ಲಿ ಕೈಯಲ್ಲಿ ಗದೆ ಹಿಡಿದು ನಿಮಗೆ ಬೆನ್ನು ಮಾಡಿ ಹೋಗೋದು ಇಮ್ಯಾಜಿನ್ ಮಾಡ್ಕೊಳ್ಳಿ, ನಿಮ್ಮ ಇಮ್ಯಾಜಿನೇಶನಲ್ಲಿ ಅವನ ಕೈಲಿ ಗದೆ ಬೇಡಿ. ಹಾಗೇ ಕಚ್ಚೆ ಕೂಡ ಡಿಲೀಟ್ ಮಾಡಿ. ಓನರಿಣಿ ಹೋಗುತ್ತಾ ಇದ್ದ ದೃಶ್ಯ ಹಾಗಿತ್ತು ಮತ್ತು ಇವತ್ತಿನವರೆಗೂ ಅಲ್ ಮೋಸ್ಟ್ ನಲವತ್ತು ಪ್ಲಸ್ ವರ್ಷಗಳ ನಂತರವೂ ಈ ಚಿತ್ರ ಮನಸಿನಲ್ಲಿ ಪ್ರಿಂಟ್ ಆಗಿಬಿಟ್ಟಿದೆ!
ಅದೇನಾಗಿತ್ತು ಅಂದರೆ ಓನರಿಣಿ ಬಾಡಿಗೆ ವಸೂಲಿಗೆ ಬಂದಿದ್ದಾಳೆ. ಮನೆ ಕೆಳಗೆ ಮರಗೆಲಸ ನಡೆಯುತ್ತಾ ಇದೆ. ಅವಳಿಗೆ ಮನೆ ಕಟ್ಟುತ್ತಾ ಇದ್ದಾರೆ ಅನ್ನುವ ಸಂಶಯ ಬಂದಿದೆ. ನಾನು ಯಾರನ್ನೂ ಗುದ್ದಲಿ ಪೂಜೆಗೆ ಅಂತ ಕರೆದಿರಲಿಲ್ಲ(ಅಂತ ನಿಮಗೆ ಮೊದಲೇ ಹೇಳಿದ್ದೆ ತಾನೇ)ಅದರಿಂದ ಈ ವಲಯದಲ್ಲಿ ನಾನು ಮನೆ ಕಟ್ಟುತ್ತಿರುವ ವಿಷಯ ಅಷ್ಟಾಗಿ ಪ್ರಚಾರ ಆಗಿದ್ದಿಲ್ಲ. ಗುದ್ದಲಿ ಪೂಜೆಗೆ ಕೂಗುವುದು ಬಿಡುವುದು ನನ್ನ prerogative ತಾನೇ. ಅದರಿಂದ ನಮ್ಮನ್ನು ಕೂಗಿಲ್ಲ ಅಂತ ಅವರು ಅರ್ಥ ಮಾಡಿಕೊಂಡಿದ್ದರಾ? ತಿಳಿಯದು. ಆದರೆ ಒಂದು ರೀತಿ ಗೊಂದಲ ಹುಟ್ಟಿತ್ತು ಅಂತ ನನ್ನ ಭಾವನೆ. ಇದು ಇನ್ನೊಂದು ರೂಪದಲ್ಲಿ ಹೊರಟಿದೆ.
“ನಿಮ್ ದಾ ಮರ…?” ಇದು ಓನರಿಣಿ.
ಇದು ನಾನು ಹೆಂಡತಿಯನ್ನು ಕೂಗಾಟದ ಕಾರಣ ಕೇಳಿ ಅವಳು ವಿವರಿಸಿದ ನಂತರ ರಿ ಬಿಲ್ಡ್ ಮಾಡಿದ್ದು, ಪೊಲೀಸು ಮಾಡ್ತಾರಲ್ಲ ಹಾಗೆ..
“ಹೌದು…!” ಇದು ನಮ್ಮದು(ಅಂದರೆ ನಮ್ಮ ಬಾಸು)
“ಯಾಕೆ ಇಲ್ಲಿ ಇಟ್ಟಿದ್ದೀಯಾ….?” ಇದು ಓನರಿಣಿ.
“ಮನೆ ಕೆಲಸ ಆಗ್ತಾ ಇದೆ ಅದಕ್ಕೆ ಇಲ್ಲಿದೆ…!” ಇದು ನಮ್ಮದು
“ಹಾಗೆಲ್ಲಾ ಇಡಬಾರದು… ಮನೆಗೆ ಡ್ಯಾಮೇಜ್ ಆಗುತ್ತೆ…!” ಇದು ಓನರಿಣಿ.
“ಡ್ಯಾಮೇಜ್ ಆಗದ ಹಾಗೆ ಇಟ್ಟಿರೋದು, ಡ್ಯಾಮೇಜ್ ಮಾಡಬಾರದು ಅಂತ ನಮಗೂ ಗೊತ್ತು. ಡ್ಯಾಮೇಜ್ ಆದರೆ ಅದನ್ನ ರಿಪೇರಿ ಮಾಡಿಸಿಕೊಡ್ತೀನಿ…..!” ಇದು ನಮ್ಮದು.
ಸತ್ಯಣ್ಣಗೆ ಇವನು ಇನ್ಯಾವುದೋ ಹೊಸ ಪ್ರಾಬ್ಲಂನಲ್ಲಿ ಸಿಕ್ಕಿಸ್ತಾ ಇದ್ದಾನೆ ಅನಿಸಿರಬೇಕು. ನುಗ್ಗೆ ಕಾಯಿ ಸಿಪ್ಪೆ ತಟ್ಟೆ ಪಕ್ಕ ಇದ್ದ ಆಗಲೇ ತಿಂದು, ಗೋರಿ, ಚೀಪಿ ಬರೇ ಕಸವಾಗಿದ್ದೆ ರಾಶಿಗೆ ಸೇರಿಸಿದ. ಮುಖ ಸಿಂಡರಿಸಿ ತಲೆ ಮೇಲೆ ಎತ್ತಿ “ಅಸಹನೆಯಿಂದ ಏನು ಹೊಸಾ ಪ್ರಾಬ್ಲಂ…” ಅಂದ!
ಇದು ಈ ಮಾತು ಓನರಿಣಿಗೆ ರೇಗಿಸಿದೆ. ಓನರಿಣಿ ನನ್ನಾಕೆಗೆ ತ್ರಿಬ್ಬಲ್ ಅಲ್ಲ ನಾಲ್ಕು ಪಟ್ಟು ತೂಕ ಹೊತ್ತವಳು. ಒಂದು ಸಣಕಲು ಕಡ್ಡಿ ನನಗಿಂತ ಮೂವತ್ತು ವರ್ಷ ಚಿಕ್ಕವಳು ಹೀಗೆ ಮಾತಾಡುತ್ತಾಳೆ ಅಂದರೆ? ಓನರಿಣಿಗೆ ಕೋಪ ಉಕ್ಕಿ ಹರಿದಿದೆ. ಅದೇ ಕೋಪದಲ್ಲಿ ಓನರಿಣಿ ಹೀಗಂದಿರಬೇಕು.
“ನನ್ನ ಮನೇಲಿ ಹೀಗೆಲ್ಲಾ ಇಡಬಾರದು…..!”
ಇದು ಪೀಕ್ ಗೆ ಹೋಗಿದೆ.
ಪ್ರತ್ಯುತ್ತರ ಹೀಗೆ ಹೋಯಿತು, ನಮ್ಮಾಕೆಯಿಂದ.
“ಮನೇಲಿ ಇರೋ ಅಷ್ಟು ದಿವಸ ಮನೆ ಅದರ ಅಂಗಳ ಇದೆಲ್ಲವನ್ನೂ ಸಂಪೂರ್ಣ ಉಪಯೋಗಿಸುವ ಹಕ್ಕು ನನಗಿದೆ. ನೀನ್ಯಾವಳು ಅದನ್ನ ಕೇಳೋಕ್ಕೆ…?” ಈ ವೇಳೆಗೆ ಇಬ್ಬರಿಗೂ ಏಕವಚನದ ರುಚಿ ಸ್ವಲ್ಪ ಹೆಚ್ಚಾಗಿ ಅಂಟಿದೆ.
ಇದು ಪರಾಕಾಷ್ಠೆ ತಲುಪಿತಾ?
“ಬಾಡಿಗೆಗೆ ಅಂತ ಹೊತ್ತಲ್ಲದ ಹೊತ್ತಲ್ಲಿ ಬರ್ತೀಯಾ, ಆವಾಗ ನಿನಗೆ ಕಾನೂನು ಗೊತ್ತಿರಲ್ವಾ? ಆ ಸಮಯದಲ್ಲೂ ಬಾಯಿ ಮುಚ್ಚಿಕೊಂಡು ತೆಪ್ಪಗೆ ಬಾಡಿಗೆ ಕೊಡ್ತಾನೋ ಇಲ್ವೋ ನನ್ನ ಗಂಡ? ಈಗೇನು ಮರ ಏನು ನಿನ್ನ ತಲೆ ಮೇಲಿದೆಯಾ ಭಾರ ಅನ್ನೋಕೆ….?”
ಈ ಧಾಟಿಯಲ್ಲಿ ಮಾತು ಮುಂದುವರೆದು “ನಾವು ಇಲ್ಲಿ ಎಷ್ಟು ದಿವಸ ಬಾಡಿಗೆ ಕೊಟ್ಕೊಂಡು ಇರ್ತಿವೋ ಅಷ್ಟು ದಿವಸ ನೀನೇನೂ ನನ್ನ ಕೇಳೋ ಹಾಗಿಲ್ಲ. ಬಾಡಿಗೆಗೆ ಸಹ ನೀನು ಸಾಲ ವಸೂಲಿಗೆ ಬಂದಹಾಗೆ ಬರಬೇಡ. ನನ್ನ ಗಂಡ ತಂದು ಕೊಡುತ್ತೆ…..”
ಓನರಿಣಿಗೆ ಅವರ ಒನ್ ಫೋರ್ಥ್ ಅಂದರೆ ಕಾಲುಭಾಗ ಇರೋ ಸಣಕಲು ಕಡ್ಡಿ ಹೀಗೆ ಮಾತಾಡಿದ್ದು ಪಾಪ ಫಸ್ಟ್ ಟೈಮ್ ಅಂತ ಕಾಣುತ್ತೆ. ಮೋಸ್ಟ್ಲಿ ಈ ಕೊನೇ ಮಾತು ಮುಗಿಸಿ ಆಕೆ ಹೋದಳಲ್ಲಾ ಆಗ ನಾನು ಅವಳನ್ನ ನೋಡಿರಬೇಕು ಮತ್ತು ಭೀಮನ ಛಾಯೆ ಮನಸಿನಲ್ಲಿ ಪ್ರಿಂಟ್ ಆಗಿರಬೇಕು.
ಹೆಂಡತಿ ಬುಸ್ ಬುಸ್ ಅಂತ ಒಳಗೆ ಬಂದಳು…
“ಹಾಳು ಆದೋಳು ನನಗೆ ಪಾಠ ಹೇಳ್ತಾಳೆ..” ಅಂತ ವಿವರ ಒಪ್ಪಿಸಿದಳು. ಇದೂ ಒಂದು ಅಂಶ ಕಾರಣ ನಾನು ಬೇಗ ಮನೆ ಮುಗಿಸಿ ಓಡಿ ಬರಲು!
ಮರದ ಕತೆ ಹೇಳ್ತಾ ಇದ್ದೆ ತಾನೇ? ಪುನಃ ಅದಕ್ಕೆ….
ರಾಮಾಚಾರಿ ಮರಗೆಲಸ ಶುರು ಮಾಡಿದ.
“ಸಾರ್ ಇದು ಒಂದು ವರ್ಷ ಹಳೆದಲ್ಲ, ಕನಿಷ್ಠ ಅಂದರೆ ಮೂರು ವರ್ಷ ಹಳೇದು….” ಇದು ಮೊದಲನೇ ಕಂಪ್ಲೇಂಟ್.
“ಹೌದಾ? ಬರೀ ಒಂದ್ವರ್ಷ ಅಂತ ಹೇಳಿದ್ದು ಅವರು….”
“ಇಲ್ಲ ಸಾಮಿ ಜಾಸ್ತಿ ಆಗೈತೆ. ನಂದು ಉಳಿ ತೋಪಡ ಎಲ್ಲಾ ಮೊಂಡು ಆಗಿವೆ ಒಂದೇ ಸಲಕ್ಕೆ….”
“ಇದು ಯಾವ ಮರ ಅಂತ ಹೇಳಿದರಾ ಮಾರಿದಾಗ…?”
“ಇಲ್ಲ ಅವರೂ ಹೇಳಲಿಲ್ಲ, ನಾನೂ ಕೇಳಲಿಲ್ಲ. ಯಾವ ಮರ ಆದರೇನು? ಬಾಗಿಲು ಕಿಟಕಿ ಇದೆಯಲ್ಲಾ….” ಅಂತ ಮಾತು ಮುಗಿಸಿದ್ದೆ. ಮುಂದೆ ಇದೊಂದು ಇಶ್ಯೂ ಆಗುತ್ತೆ ಅಂತ ಊಹೆ ಸಹ ಇರಲಿಲ್ಲ. ಇದರ ವಿಷಯಕ್ಕೆ ಆಮೇಲೆ ಬರ್ತೀನಿ.
ಮರ ಹಳೇದು ಅಂದ ಮೇಲೆ ಮೇಲಿನ ಚರ್ಮ ಆದರೂ ತೋಪಡ ಮಾಡಬೇಕಲ್ಲಾ… ಅದಕ್ಕೇ ಅವನಿಗೆ ಹೆಚ್ಚು ಶ್ರಮ ಹಿಡಿಯಿತು. ಒಂದು ಚೂರು ಹೊಸದರ ಲುಕ್ ಬಂತು. ಈಗ ಕುಳ್ಳ ಬಾಗಿಲು ಫ್ರೇಮ್‌ನ ಉದ್ದ ಮಾಡಬೇಕಲ್ಲ….?
ಹಿಂಜಸ್ ಹೊಡೆದವರೆ. ಅದರಿಂದ ಮೇಲೆ ಕೆಳಗೆ ಎರಡೂ ಕಡೆ ಜಾಯಿಂಟ್ ಮಾಡಬೇಕು. ಅಂದ ಅಂದರೆ ಲುಕ್ ಇರೋಲ್ಲ.. ಆಮೇಲೆ ನನ್ನ ಬೈಕೋಬಾರದು…. ಅಂತ ಎರಡನೆ ಕಂಪ್ಲೇಂಟ್ ಹೇಳಿದ. ತಲೆ ಆಡಿಸಿದೆ. ನನ್ನ ಐಡಿಯ ಇದ್ದದ್ದು ಬಾಗಿಲ ಹಿಂದೆ ಅಥವಾ ಮುಂದೆ ಒಂದು ಪೀಸು ಹೊಡೆದು ಉದ್ದ ಮಾಡೋದು ಮತ್ತು ಫ್ರೇಮ್‌ಗು ಒಂದು ಪಟ್ಟಿ ಕೊಡೋದು ಅಂತ. ರಾಮಾಚಾರಿ ಇನ್ನೂ ಮುಂದೆ ಹೋದ. ಅದು ಹೇಗೆ ಅಂದರೆ ಒಂದು ಬಾಗಿಲು ವಿತ್ ಫ್ರೇಮ್ ಬಿಚ್ಚಿದ. ಐದು ಬಾಗಿಲು, ಅದಕ್ಕೆ ಫ್ರೇಮ್ ಮತ್ತು ನಾಲ್ಕು ಕಿಟಕಿ ಅಲ್ತಾಫ್ ಮಾರಿದ್ದು. ಮನೆ ಮುಂಬಾಗಿಲಿಗೆ ಮೊದಲೇ ಒಂದು ಫ್ರೇಮ್ ತಂದಿದ್ದೆ. ಅದು ಆಸ್ಟ್ರೇಲಿಯನ್ ಟೀಕ್ ಅಂತ ಅಂಗಡಿಯವರು ಕೊಟ್ಟಿದ್ದರು. ಅಂದರೆ ನಮ್ಮ ಇಂಡಿಯಾ ಟೀಕ್‌ಗಿಂತ ಕಡಿಮೆ ದುಡ್ಡು ಆದರೆ ಲುಕ್ ಸೇಮ್! ಇದು ಆರಡಿ ಉದ್ದ ಇತ್ತು. ಇದಕ್ಕೆ ಸರಿಸಮನಾಗಿ ಮಿಕ್ಕ ಬಾಗಿಲು ಇರಬೇಕಿತ್ತು. ಬಿಚ್ಚಿದ ಬಾಗಿಲನ್ನು ಮೂರು ಮೂರು ಇಂಚಿನ ಅಗಲದ ಪೀಸು ಮಾಡಿದ. ಫ್ರೇಮ್ ಅನ್ನೂ ಒಂದೂವರೆ ಅಡಿಗೆ ಕತ್ತರಿಸಿದ. ಮೂರು ಇಂಚಿನ ಅಗಲದ ಒಂದು ಇಂಚು ದಪ್ಪದ ಹಲಗೆಗೆ ತೂತು ಕೊರೆದ. ಅದೇ ರೀತಿ ಬಾಗಿಲಿಗೂ ಮಾಡಿದ. ಒಂದು ಮರದ ಗಟ್ಟ ಮಾಡಿಕೊಂಡು ಎರಡನ್ನೂ ಸೇರಿಸಿ ಫೆವಿಕಲ್ ಹಾಕಿ ಅಂಟಿಸಿಬಿಟ್ಟ!
ಬಾಗಿಲು ಕೂಡಿಸಿದಾಗ ಎದ್ದು ಕಂಡ ಸಣ್ಣ ಪುಟ್ಟ ಗ್ಯಾಪ್ ಅಂದರೆ ಸಂದಿಗಳಿಗೆ ಮರವಜ್ರ ಕಲಸಿ ಮೆತ್ತಿದ್ದ…
ಹಿಂದೆ ಮುಂದೆ ಕಾಣಿಸಿದ ಸಣ್ಣ ಸಣ್ಣ ಗ್ಯಾಪ್‌ಗಳನ್ನೂ ಸಹ ಮರದ ತುಂಡು ಜೋಡಿಸಿ ಕೂಡಿಸಿದ್ದ! ಈಗ ಮನೆ ಕಟ್ಟಿ ನಲವತ್ತು ಪ್ಲಸ್ ವರ್ಷ ಆಗಿದೆ ಮತ್ತು ನಮ್ಮ ಸಿಟ್ಟಿಂಗ್ ರೂಮಿಗೆ ಸೇರಿದ ಹಾಗಿರುವ ಬಾಗಿಲುಗಳು ಅದೇ ರೂಪದಲ್ಲೇ ಇವೆ! ಇದರಿಂದ ಉಂಟಾದ inferiority complex ಬಗ್ಗೆ ಮುಂದೆ ತಿಳಿಸುವೆ… ಹಳೇ ಕಿಟಕಿ ಬಾಗಿಲು ಚೀಪಾಗಿ ಸಿಗ್ತು ಅಂತ ತಂದ, ಈಗ ಅವನ ಪಾಡು ನೋಡು ಅಂತ ಗೊತ್ತಿರೋರು ಹಿಂದೆ ಆಡಿಕೊಳ್ಳೋರು, ಎದುರಿಗೇ ಮಾತಾಡುವ ಹಾಗಿಲ್ಲ. ನಾನೋ ನನ್ನ ಬಜೆಟ್‌ನಲ್ಲಿ ಮನೆ ಮುಗಿಸಿ ವಾಸಕ್ಕೆ ಹೋಗಲೇಬೇಕು ಅನ್ನುವ ಹಟ ಹೊತ್ತ ವಿಶ್ವಾಮಿತ್ರ.
ಸೈಟ್ ಏರಿಯದಲ್ಲಿ ಗೋಡೆ ಕಟ್ಟಲು ಶುರು ಮಾಡಿದರು. ಮುಂದಿನ ಬಾಗಿಲಿಗೆ ಬೇಕಾದ ವಾಸ್ಕಾಲ್ ರೆಡಿ ಆಗಿತ್ತು. ಮೌಲ್ಡು ಅಂದರೆ ರೂಫ್ ನಂತರ ಈ ರಿಪೇರಿ ಆದ ಫ್ರೇಮೂ ಬಾಗಿಲು ಕೂಡಿಸುವ ಪ್ಲಾನ್ ಮಾಡಿದ್ದೆವು. ಲಿಂಟಲ್ ಅಂದರೆ ಕಿಟಕಿ ಮೇಲ್ಮಟ್ಟದವರೆಗೆ ಬಂದಾಗ ಮತ್ತೊಂದು ಜಿಜ್ಞಾಸೆ ಹುಟ್ಟಿತು. ಮಲ್ಲಯ್ಯ ಪೂರ್ತಿ ಲಿಂಟಲ್ ಬೇಕು ಅಂತ. ಲಿಂಟಲ್ ಅಂದರೆ ಕಂಬಿ ಕಟ್ಟಿ ಗೋಡೆ ಮೇಲೆ ಕೂಡಿಸಿ ಅದಕ್ಕೆ ಕಾಂಕ್ರೀಟು ತುಂಬೋದು. ಅಂದರೆ ಕಬ್ಬಿಣ ಸಿಮೆಂಟ್ ಹೆಚ್ಚು ಸುರಿಯಬೇಕು. ನಾನು ಎಲ್ಲಾ ಕಡೆ ಲಿಂಟಲ್ ಬೇಡ. ಬರೀ ಕಿಟಕಿ ಬಾಗಿಲು ಬರೋ ಕಡೆ ಮಾತ್ರ ಇರಲಿ ಅಂತ ನಾನು, ಕಾಸ್ಟ್ ಕಡಿಮೆ ಮಾಡುವುದು ನನ್ನ ಪ್ಲಾನು, ಮನೆ ಕಟ್ಟಿಸೋದೆ ಜೀವನದಲ್ಲಿ ಒಮ್ಮೆ ಸರಿಯಾಗಿ ಕಟ್ಟಿಬಿಡಿ ಇದು ಮಲ್ಲಯ್ಯನ ಲಾಜಿಕ್!
ಕಟ್ ಲಿಂಟಲ್ ಅಂತ ತುಂಡು ಲಿಂಟಲ್‌ಗೆ ಹೆಸರು ಕೊಟ್ಟಿದ್ದೆ. ಕಟ್ ಲಿಂಟಲ್ ಆದರೆ ಏನು ತೊಂದರೆ? ಇದು ನನ್ನ ಪ್ರಶ್ನೆ. ಮಾಡಿ ಕಟ್ಟಬೇಕಾದರೆ ಗೋಡೆ ಭಾರ ತಡೀಬೇಕು ಅದಕ್ಕೋಸ್ಕರ ಪೂರ್ತಿ ಲಿಂಟಲ್ ಬೇಕು ಅಂತ ಮಲ್ಲಯ್ಯನ ವಾದ.
ನನಗೆ ಮಾಡಿ ಕಟ್ಟೋ ಯೋಚನೆ ಇಲ್ಲ ಅದರಿಂದ ಬೇಡ….
ಮಲ್ಲಯ್ಯನ ಮನಸು ಈ ವಾದ ಒಪ್ಪಲು ರೆಡಿ ಇಲ್ಲ. ಸತ್ಯಣ್ಣ ಹತ್ತಿರ ದೂರಿದ.
ಗೋಪು ಗೊ ಫಾರ್ ಫುಲ್ lintal… ಅಂತ ಸತ್ಯಣ್ಣ ಒಂದೂವರೆ ಗಂಟೆ ನನಗೆ ಕನ್ವಿನ್ಸ್ ಮಾಡಿದ್ದು ಈಗ ನಿನ್ನೆ ಮೊನ್ನೆ ಮಾಡಿದ ಹಾಗಿದೆ!
ಲಿಂಟಲ್ ಹಂತ ತಲುಪಿದೆವು, ಮತ್ತೊಂದು ಸಮಸ್ಯೆ ಉದ್ಭವ ಆಯಿತು. ಮಲ್ಲಯ್ಯನ ಜತೆ ಯಾರೋ ಬಂದು ಅವನ ಕೆಲಸಕ್ಕೆ ಸಹಕಾರ ಕೊಡ್ತಾ ಇದ್ರು. ನಾನು ಅದು ಮಲ್ಲಯ್ಯನ ನಂಟ ಅಂತ ತಿಳಿದಿದ್ದೆ. ಲಿಂಟಲ್ ಆಗಬೇಕಾದರೆ ಒಬ್ಬ ಬಾರ್ ಬೆಂಡರ್ ಬೇಕು. ಅವನು ಅಳತೆಗೆ ತಕ್ಕ ಹಾಗೆ ಕಬ್ಬಿಣದ ರಾಡ್ ಕತ್ತರಿಸಿ ಅದನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ಇಡುತ್ತಾನೆ. ಕಬ್ಬಿಣದ ಉದ್ದನೆ ಕಂಬಿಯಿಂದ ಯಾವ ಆಕಾರಕ್ಕೆ ಬೇಕೋ ಆಯಾ ಆಕಾರದಲ್ಲಿ ತಂತಿ ಬಿಗಿದು ಲಿಂಟಲ್‌ನ ಒಂದು ಸ್ಕೆಲಿಟನ್ ತಯಾರು ಆಗುತ್ತೆ. ಅದನ್ನ ಗೋಡೆ ಮೇಲೆ ಇರಿಸಿ ಅದಕ್ಕೆ ಸಿಮೆಂಟ್ ಕಾಂಕ್ರೀಟು ತುಂಬಬೇಕು. ಇದೇ ಸಮಯದಲ್ಲೇ ಮನೆ ಮುಂದೆ ಕಿಟಕಿ ಎತ್ತರಕ್ಕೆ ಬರುವ ಹೊರ ಸಜ್ಜೆ ಒಳ ಅಟ್ಟ ಇವುಗಳಿಗೂ ಸ್ಕೆಲಿಟನ್ ತಯಾರು ಆಗುವುದು. ಕಬ್ಬಿಣ ಬಂದಮೇಲೆ ನಮ್ಮ ಕಾರ್ಖಾನೆಯಲ್ಲಿ ಇದ್ದ ಒಬ್ಬ ಕೆಲಸಗಾರ (ಬಾರ್ ಬೆಂಡಿಂಗ್ ನಾನೇ ಮಾಡ್ತೀನಿ ಅಂತ ದುಂಬಾಲು ಬಿದ್ದಿದ್ದ ) ಬಾರ್ ಬೆಂಡಿಂಗ್‌ಗೆ ಬಂದ. ಸಾಮಿ ನಮ್ಮ ಆಳು ಇದ್ದ ಈ ಕೆಲಸಕ್ಕೆ ನೀವ್ಯಾಕೆ ಇವನನ್ನ ಕರ್ಕೊಂಡು ಬಂದ್ರಿ ಅಂತ ರೇಗಿದ, ಮಲ್ಲಯ್ಯ!
ಅಲ್ಲಯ್ಯಾ ನೀನು ಮೊದಲೇ ಹೇಳಬೇಕೋ ಬೇಡವೋ ನನಗೆ ಅಂತ ನಾನೂ ರೇಗಿದೆ. ಕೊನೆಗೆ ನಾನು ಹಿಡಿದವನೆ ಬಾರ್ ಬೆಂಡಿಂಗ್ ಸಹ ಮಾಡಿದ. ಅವನ ಕೆಲಸ ಇವನಿಗೆ ಸರಿಬರದು. ಅವನ ಮೇಲೆ ಕೋಪ! ಯಾರ ಹತ್ತಿರವೂ ಹೇಳಿಕೊಳ್ಳಲೂ ಆಗದು…! ಈಗ ಮಲ್ಲಯ್ಯನ ನೆನೆದರೆ ಅಯ್ಯೋ ಪಾಪ ಅನಿಸುತ್ತೆ! ಇಲ್ಲೂ ಒಂದು ಭಾರೀ ತಪ್ಪು ಆಗಿಬಿಟ್ಟಿತು, ನಮ್ಮ ಯಾರ ನೆರವೂ ಇಲ್ಲದೆ… ಮೆಟ್ಟಲಿಗೆ ಅಂತ ಬಾರ್ ಬೆಂಡರ್ ಕಂಬಿ ಕಟ್ಟಿದ. ಕಾಂಕ್ರೀಟು ದಿವಸ ಅವನಿರಲಿ ಅಂತ ಮಲ್ಲಯ್ಯ ಹೇಳಲಿಲ್ಲ, ನಾನೂ ಅವನಿಗೆ ಹೇಳಲಿಲ್ಲ. ಕಾಂಕ್ರಿಟ್ ಹಾಕ್ತಾ ಇದಾರೆ. ಮೆಟ್ಟಲಿಗೆ ಅಂತ ಕಟ್ಟಿದ ಕಂಬಿ ಮುಂದಿನಿಂದ ಮೆಟ್ಟಲು ಏರುವ ರೀತಿ ಇರಬೇಕಿತ್ತು. ಅದು ಹೇಗೆ ಇಟ್ಟರೂ ಸರಿ ಬರ್ತಿಲ್ಲ! ನೋಡಿ ನಿಮ್ಮೋನು ಮಾಡಿರೋ ತಿರುಪತಿ ಕೆಲಸ. ಅವನಿಗೆ ಈಗಲೇ ಬರಕ್ಕೆ ಹೇಳಿ…! ಅವನನ್ನ ಹುಡುಕಿ ನಾನೆಲ್ಲಿ ಹೋಗಲಿ ಆ ಸಮಯದಲ್ಲಿ? ಫೋನ್ ಬೇರೆ ಇಲ್ಲ! ಕೆಲಸ ನಿಲ್ಲಿಸು ಅಂದರೆ ಕಲಸಿದ ಸಿಮೆಂಟು ವೇಸ್ಟು!
ಕಂಬಿ ಹಿಂದಿನಿಂದ ಇಟ್ಟು ನೋಡು ಸರಿ ಇದ್ದರೆ ಮೆಟ್ಟಲು ಅಲ್ಲಿಂದಲೇ ಬರಲಿ ಅಂತ ಐಡಿಯಾ ಕೊಟ್ಟೆ. ಕಂಬಿ ಹಾಗೇ ಅಡ್ಜಸ್ಟ್ ಆಯ್ತಾ? ಮೆಟ್ಟಲು ಮಾತ್ರ ಇಡೀ ವಿದ್ಯಾರಣ್ಯಪುರದಲ್ಲೇ ಒಂದು ವಿಶೇಷ ಆಗಿ ಬಿಡ್ತು. ಹಿಂದಿನಿಂದ ಹತ್ತುವ ಮೆಟ್ಟಲಿನ ಏಕಮೇವ ಮನೆ ಅಂತ ಹೆಸರು ಮಾಡಿತ್ತು!
ಇಷ್ಟೆಲ್ಲಾ ಪಾಡು ಪರಿಪಾಟಲು ಇದ್ದರೂ ಮನೆ ಕಟ್ಟುವಿಕೆ ವೇಗದಲ್ಲೇ ಇತ್ತು! ಕಿಟಕಿ ಮಟ್ಟಕ್ಕೆ ಗೋಡೆ ಎದ್ದು ನಿಂತಿತು. ಲಿಂಟಲ್ ಆಯ್ತಲ್ಲಾ. ಸಾಲದ ಎರಡನೇ ಕಂತು ಕೇಳಬೇಕಿತ್ತು. ಮರಗೆಲಸ ಮೇಜರ್ ವರ್ಕ್ ಸಹ ಆಗಿತ್ತು. ಮರ ತಂದು ಸೈಟ್ ಹತ್ತಿರ ನಮ್ಮ ಶೆಡ್ ಮುಂದೆ ಜೋಡಿಸಬೇಕು.
“ಕೂಲಿ ಅವರನ್ನ ಮನೆ ಹತ್ರ ಕಳಿಸು. ನಾಳೆ ಮರ ಬರತ್ತೆ….” ಅಂದೆ.
“ಮನೆ ಹತ್ರ ಯಾಕೆ? ಮರದ ಅಂಗಡಿಗೆ ತಾನೇ ಮರ ತರಕ್ಕೆ ಹೋಗೋದು…?” ಅಂದ ಮಲ್ಲಯ್ಯ. ಇವನಿಗೆ ಮರದ ಕೆಲಸ ಆಗಲೇ ಮುಗಿದಿರೋದು ನಾನು ಹೇಳಿಲ್ಲ ಅಂತ ನೆನಪಾಯಿತು!
“ಇಲ್ಲಪ್ಪಾ ಮರ ಫ್ರೆಂಡ್ ಮನೇಲಿ ಇತ್ತು. ಅದು ನಮ್ಮ ಮನೇಲಿದೆ ಈಗ……”
“ಯಾಕೆ ಸಾಮಿ ಹೇಳದೇ ಕೇಳದೆ ತೀರ್ಮಾನ ತಗೋತೀರಿ? ನಮ್ಮವನೇ ಒಬ್ಬ ಒಳ್ಳೆ ಮರಾಗೆಲಸದವನು ಇದ್ದ……..” ಅಂದ ಮಲ್ಲಯ್ಯ.
“ಅಯ್ಯೋ ನೀನು ಮೊದಲೇ ಹೇಳೋದು ಬೇಡವೇನಯ್ಯಾ? ಯಾವುದೇ ಮಾಡಿದರೂ ಒಂದು ಇಟ್ಟಿರ್ತಿಯಾ…….” ಅಂತ ರೇಗಿದೆ. ಕೋಪದಲ್ಲಿ ಎದ್ದು ಶೆಡ್ ಹಿಂದೆ ಹೋದ!
ಮಾರನೇ ದಿವಸ ಮರ ಹೊತ್ತ ಮಿನಿ ಲಾರಿ ಜತೆ ನಾನೂ ಸೈಟ್ ಹತ್ತಿರ ಹೋದೆ. ಮಲ್ಲಯ್ಯ ಅಲ್ಲೇ ಇದ್ದ. ಮರ ನೋಡಿದ. ನನ್ನನ್ನು ನೋಡಿದ. ಇದು ಎರಡು ಮೂರು ಸಲ ರಿಪೀಟ್ ಆಯ್ತು. ಅವನ ಮೂಗಿನ ಹೊರಳೆಗಳು ಅರಳಿದವು. ಕಷ್ಟಪಟ್ಟು ಎಮೋಷನ್ಸ್ ತಡೆದುಕೊಳ್ತಾ ಇದ್ದಾನೆ ಅನಿಸಿತು. ಅರ್ಧ ನಿಮಿಷದ ನಂತರ ಮಲ್ಲಯ್ಯ ಸ್ಫೋಟಗೊಂಡ!
“ಸೋಮೀ… ಯಾವ ಜನ ನೀವು……?” ಅಂದ! ಅದುವರೆವಿಗೆ ನನ್ನ ಬಾಹ್ಯ ನೋಟದಲ್ಲಿ ನಾನು ಯಾವ ಜನ ಅಂತ ಗೊತ್ತಾಗದ ಹಾಗೆ ಇತ್ತು. ದೇವರ ಕುಂಕುಮ, ಅಕ್ಷತೆ, ವಿಭೂತಿ, ಮುದ್ರೆ, ಕಿವಿಗೆ ಕಣಿಗಳೇ…. ಮೊದಲಾದ ಯಾವ ಅಲಂಕಾರ ಇರಲಿಲ್ಲ. ಆಗಾಗ ನಿಕೋಟಿನ್ ಸೇವನೆ ಇತ್ತಾದರೂ ಅದರಿಂದ ನಾನು ಯಾವ ಜನ ಎಂದು ತಿಳಿಯುವ ಸಣ್ಣ ಗುರುತು ಸಹ ಇರಲಿಲ್ಲ. ಎಲ್ಲರೂ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೇ ತಿಳಿದಿದ್ದರು…!
ಹಾಗೆ ನೋಡಿದರೆ ನಾನು ರಿಟೈರ್ ಆಗುವ ಒಂದುವಾರ ಮೊದಲು ಅದ್ಯಾರೋ ಹರಸಾಹಸ ಪಟ್ಟು ನಾನು ಯಾವಪೈಕಿ ಅಂತ ಕಂಡುಹಿಡಿದ್ದಿದ್ದರಂತೆ……! ಇನ್ನು ಮಲ್ಲಯ್ಯಂಗೆ ನಾನು ಯಾರು ಎಂದು ಹೇಗೆ ಗೊತ್ತಿರಬೇಕು? ನಾನು ಯಾರೂ ಅಂತ ತಿಳಿದಿರಲು ಹೇಗೆ ಸಾಧ್ಯ?
ಮುಂದುವರೆಯುವುದು…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಇದು ಒಂದು ಮನೆಯ ಕಥೆಯಲ್ಲ. ಮನೆ ಕಟ್ಟಿಸುವವರ ಮನೆಮನೆಯ ಕಥೆ. ಸಕಲವನ್ನೂ ಸವಿಸ್ತಾರವಾಗಿ, ಸರಸವಾಗಿ, ಸ್ವಾರಸ್ಯಕರವಾಗಿ ಹೇಳಿದ್ದಾರೆ ತಮ್ಮ ಎಂದಿನ ಪಾದರಸದ ಶೈಲಿಯಲ್ಲಿ ‘ಪ್ರಭಾ’ ಕಾವ್ಯನಾಮಾಂಕಿತ ಗೋಪಾಲಕೃಷ್ಣ ಅವರು.
-ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಆನಂದರಾಮ ಶಾಸ್ತ್ರೀ ಅವರೇ, ಧನ್ಯವಾದಗಳು. ತಮ್ಮ ಅನಿಸಿಕೆ ನನಗೆ ಟಾನಿಕ್!
As usual a good Harate.
ಹರಿ ಧನ್ಯವಾದಗಳು