ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್‌ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು.
ಮಧು ವೈ.ಎನ್. ಬರೆದ ಹೊಸ ಕಾದಂಬರಿ “ಕನಸೇ ಕಾಡುಮಲ್ಲಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ
ನಾನು ಸಣ್ಣೋನಿದ್ದಾಗ್ಲೆ ಲವ್ ಮಾಡಿದ್ದೆ ಅಂದ್ರೆ ನಿಮಗೆಲ್ಲ ಆಶ್ಚರ್ಯವಾಗಬಹುದು. ನಂಗೆ ಆ ಇಮೇಜೇ ಸೂಟ್ ಆಗ್ತಿರಲಿಲ್ಲ. ಈಗ್ಲು ಇಲ್ಲ ಬಿಡಿ.
ಅದೇನಾಯ್ತಂದ್ರೆ-
ನಾನು ಓದ್ತಿದ್ದು ಒಂದು ರೆಸಿಡೆನ್ಶಿಯಲ್ ಸ್ಕೂಲಿನಲ್ಲಿ. ಆ ಸ್ಕೂಲು ಜಿಲ್ಲೆಗೊಂದರಂಗೆ ದೇಶಾದ್ಯಂತ ಹರಡಿಕೊಂಡಿತ್ತು. ಒಂದ್ ಸಲ ಹಾಸ್ನದ ಸ್ಕೂಲಲ್ಲಿ ಕ್ಲಸ್ಟರ್ ಮೀಟ್ ಅಂತ ಆಗಿತ್ತು. ಅಂತರಶಾಲಾ ಸ್ಪರ್ಧೆ. ಅದರಲ್ಲಿ ಸ್ಪೋರ್ಟ್ಸು, ಎಗ್ಸಿಬಿಶನ್ನು ಎಲ್ಲ ಇರ್ತಿತ್ತು. ನಾನು ನಮ್ ಸ್ಕೂಲಿಂದ ಬಯಾಲಜಿ ಮಾಡೆಲ್ ತಗಂಡೋಗೋಕೆ ಸೆಲೆಕ್ಟ್ ಆಗಿದ್ದೆ. ‘Effluent treatment’ ಅನ್ನೊ ಕಾನ್ಸೆಪ್ಟಲ್ಲಿ ಮಾಡೆಲ್ ಮಾಡಿದ್ದೆ. ಅಂಗಂದ್ರೆ ಇನ್ನೇನಲ್ಲ, ಕೊಚ್ಚೆಗುಂಡಿ ನೀರನ್ನ ಹೇಗೆ ಶುದ್ಧೀಕರಿಸಬಹುದು ಅಂತಷ್ಟೆ.
ಆ ಹುಡುಗಿ ಸಹ ಸ್ಪೋರ್ಟ್ಸ್ ಆಡೊಕೆ ಅಲ್ಲಿಗೆ ಬಂದಿತ್ತು.
ಸೋ, ಹುಡುಗ ಅಕಡೆಮಿಕ್ ವಿಭಾಗ. ಹುಡುಗಿ ಸ್ಪೋರ್ಟ್ಸ್ ವಿಭಾಗ.
ಹಾಸ್ನದ ಸ್ಕೂಲಲ್ಲು ಒಂದು ಟಾಪಾದ ಹುಡುಗಿ ಇತ್ತು. ಆ ಹುಡುಗಿ ಹೈಜಂಪ್ ಪ್ರವೀಣೆ. ಬಂದಿದ್ದ ಹತ್ತಾರು ಸ್ಕೂಲಿನ ಹುಡುಗರು ಆ ಹುಡುಗಿಗೇ ಲೈನ್ ಹೊಡಿತಿದ್ರು ಅಂದ್ರೆ ಲೆಕ್ಕ ಹಾಕ್ಕಳಿ ಅದಿನ್ನೆಂತ ಟಾಪ್ ಇದ್ದಿರಬೋದು ಅಂತ.
ಬಂದಿದ್ ಹುಡುಗ್ರೆಲ್ಲ ಆ ಟಾಪಾದ ಹುಡ್ಗಿ ಹಿಂದೆ ಬಿದ್ದಿದ್ರೆ ನಂಗೆ ಮಾತ್ರ ನಮ್ ಹುಡುಗಿ ಮೇಲೆನೇ ಕಣ್ಣು. ಅಂದ್ರೆ ಒನ್ ಸೈಡೆಡ್ಡು. ಅದು ಆಟ ಆಡ್ವಾಗೆಲ್ಲ ನಾನೋಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತ್ಗಂಡು ಚಪ್ಪಾಳೆ ತಟ್ತಿದ್ದೆ. ಪ್ರಾಬ್ಲಂ ಏನಾಗಿತ್ತಂದ್ರೆ ನನ್ ಸೀನಿಯರ್‌ಸೂ ನಮ್ ಹುಡುಗಿಗೇ ಲೈನ್ ಹೊಡಿತಿದ್ರು. ನನ್ ಮಕ್ಳು ನಾ ಚಪ್ಪಾಳೆ ಹೊಡೆಯೊಕೂ ಬಿಡದೆ ಹೆದರಿಸ್ತಿದ್ರು.
“ಕಳಚ್ಕೊಳಮ ಕಳಚ್ಕೋ, ಬುಕ್ಕು ಗಿಕ್ಕು ಮಾಡೆಲ್ಲು ಗೀಡೆಲ್ಲು ನೊಡ್ಕೊ ಓಗು. ನಿನ್ನ ಏರಿಯಾದಲ್ಲಿ ನೀನಿರು” ಅಂತೆಲ್ಲ ಅವಾಜು ಹಾಕೋರು. ನಂಗೆ ಯಷ್ಟು ಸಂಕಟ ಆಗೋದು ಅಂದ್ರೆ ಎಡೆಮಟ್ಟೆ ತಗೊಂಡು ಬೀಸಿಬಿಡೋಣ ಅನಿಸೋದು. ಆದ್ರೆ ಅನ್ಸದಷ್ಟೆ.
ಉಗುಳು ನುಂಕೊಂಡು ಚಪ್ಪಾಳೆನೂ ತಟ್‌ದೆ ಸುಮ್ನೇ ನೋಡ್ತಾ ನಿಂತಿರ್ತಿದ್ದೆ. ನಿಲ್ಲೋಕೆನು ಟ್ಯಾಕ್ಸ್ ಕಟ್ಟಬೇಕಿಲ್ವಲ್ಲ. ಸುಮ್ನೆ ನಿಂತು ನೋಡೊದ್ರಲ್ಲು ಒಂಥರ ಸುಖ ಇದೆ.
ಅಷ್ಟೇ ಆಗಿದಿದ್ರೆ ಚನ್ನಾಗಿರ್ತಿತ್ತು.
ಏನಾಯ್ತಂದ್ರೆ-
ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್‌ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು.
ಬಂದಿದ್ದೇ ಸೀದಾ ನನ್ ಕಡೆಗೆ ನುಗ್ಗಿ ಬಿಡೋದೇ!
ಥೋ ಇದೊಳ್ಳೆ ಸಾವಾಸ ಆಯ್ತಲ್ಲಪ್ಪ ಅಂತ ನಂಗೆ. ಪಕ್ಕದಲ್ಲಿ ಯಾರೊಬ್ಬ ಪರಿಚಯಸ್ಥನೂ ಇಲ್ಲ ಸಹಾಯಕ್ಕೆ. ಹುಡುಗಿ ಬಂದು ಮೊದಲು “ಆಲ್ ದ ಬೆಸ್ಟ್” ಹೇಳ್ತು. ಅದು ಸ್ವೀಟಾಗಿತ್ತು. ಆಮೇಲೆ “ಎಲ್ಲಿ ಇನ್ವಿಜಲೇಟರಿಗೆ ಏನೇನ್ ಹೇಳ್ಬೇಕು ಅಂದ್ಕೊಂಡಿದೀರ ಹೇಳಿ” ಅಂತು. ನಂಗೆ ತಲೆ ಸುತ್ ಬಂತು. “ಹೇ ಅಂಗೆಲ್ಲ ಹೇಳಕಾಗಲ್ಲ” ಅಂದ್ಬಿಟ್ಟೆ. “ಅರೆ ಹೇಳ್ರಿ ಪ್ರಾಕ್ಟೀಸಾಗತ್ತೆ” ಅಂತ ಅದು. “ಹೇಳಕಾಗಲ್ಲ” ಅಂತ ನಾನು.
ಈ ಜಗ್ಗಾಟದಾಗೆ ಇನ್ವಿಜಿಲೇಟರು ಬಂದೇ ಬಿಟ್ರು. “ಸರಿ ಸರಿ ಆಲ್ ದ ಬೆಸ್ಟ್” ಅಂತಂತ ಇನ್ನೊಮ್ಮೆ ವಿಶ್ ಮಾಡಿ ಓಡೊಯ್ತು. ಪ್ರೈಜು ನೀಲಗಿರಿ ಎಣ್ಣೆಯವನಿಗೆ ಬಂತು. ನಮ್ದು ಹೈಜಂಪ್ ನಲ್ಲಿ ಟಾಪಲ್ಲಿ ಟಾಪಾದ ಹುಡುಗೀನ ಹಿಂದಿಕ್ಕಿ ಮುಂದಿನ ಹಂತಕ್ಕೆ ಸೆಲೆಕ್ಟ್ ಆಗಿತ್ತು. ನಮ್ಮನ್ನೆಲ್ಲ ವಾಪಸ್ ಕಳಿಸೋಕಂತ ಕೆಂಪು ಬಸ್ಸಿಗೆ ಹತ್ಸಿದ್ರು. ಅವಾಗೆಲ್ಲ ಪ್ರೈವೇಟ್ ಬಸ್ಸಂದ್ರೆ ನರಕದ ರೂಟು ಅಂತ ಪ್ರಚಲಿತ. ಗೌರ್ಮೆಂಟ್ ಬಸ್ಸಂದ್ರೆ ಸರೀ ಕಬ್ಣ ಸುರಿದಿರ್ತಾರೆ, ಗುದ್ಕಂಡ್ರೂ ಏನಾಗಲ್ಲ ಅಂತ ಲೆಕ್ಕಾಚಾರ.
ನಾನು ಕಡೇ ಸೀಟಲ್ಲಿ ಕೂತಿದ್ದೆ. ಅಂದ್ರೆ ಬಸ್ ತುಂಬ ಇದ್ವಿ. ಎಲ್ಲ ಸೋತವರೇ, ಬೆರಳೆಣಿಕೆಯಷ್ಟು ಗೆದ್ದೋರು ನಮಗೆ ಟಾಟಾ ಮಾಡಲು ಬಂದಿದ್ದರು.
ಯಪ್ಪಾ ಅವಾಗ ನನ್ ಗೋಳು ಹೇಳತೀರದು. ಪೆಯಿನ್ ಅಂದ್ರೇನು ಅಂತ ನಿಜ ಗೊತ್ತಾಗಿದ್ದೆ ಆವಾಗ. ದಾರುಣ ಅಂದ್ರೆ ಭೀಕರ ದಾರುಣ. ಒಂದು ನೂರು ಕೇಜಿ ತೂಕದ ಕಲ್ಲನ್ನ ಎದೆಗೆ ಮೊಳೆ ಹೊಡ್ದಂಗೆ.
ಅಲ್ಲಿಗೆ ಮುಗಿದಿದ್ರೂ ಏನೂ ಆಗ್ತಿರ್ಲಿಲ್ವೇನೋ. ನಾ ಇಲ್ಲಿ ಕೂತ್ಗಂಡು ಇಷ್ಟೂದ್ದ ಕತೆ ಹೊಡಿಬೇಕರ್ಲಿಲ್ವೇನೊ. ಏನಾಯ್ತಂದ್ರೆ-
ಬಸ್ಸಲ್ಲಿ ದಾರಿ ಉದ್ಕೂ ಸೋತ ಹುಡುಗೀರೆಲ್ಲ ಹರಟೆ ಹೊಡಿತಿದ್ರ, ನಾ ಅದನ್ನ ಕೇಳಿಸ್ಕೊತಿದ್ನ, ನಿಮ್ಮುಡುಗಿ ಬಗ್ಗೆ ಯಾರಾದ್ರು ಚೂರು ಮಾತಾಡಿದ್ರು ಅದೇ ದೇವರ ಪ್ರಸಾದ ಅನ್ನಂಗಿರ್ತದೆ ಅಲ್ವ. ಅವರೆಲ್ಲ ಏನಂತಿದ್ರು ಅಂದ್ರೆ ಅವತ್ತು ಎಗ್ಸಿಬಿಶನ್ ದಿವಸ ಅವರೆಲ್ಲ ಗೊರೂರ್ ಹೇಮಾವತಿ ಡ್ಯಾಮ್ ನ ನೋಡಕ್ಕೆ ಹೋಗಿದ್ರಂತೆ. ಇದು ಮಾತ್ರ ನಂಗೆ ಹುಷಾರಿಲ್ಲ ನಾ ಬರಲ್ಲ ನೀವ್ ಓಗ್ ಬನ್ನಿ ಅಂತೇಳಿ ಡಾರ್ಮಿಟರಿನಲ್ಲೇ ಉಳಕಂಡಿತ್ತಂತೆ.
ಇಷ್ಟು ಸಾಕಲ್ಲವೇ ಮನ್ಷ ಬರಬಾದ್ ಆಗೋಕೆ!
(ಕೃತಿ: ಕನಸೇ ಕಾಡುಮಲ್ಲಿಗೆ (ಕಾದಂಬರಿ), ಲೇಖಕರು: ಮಧು ವೈ.ಎನ್., ಪ್ರಕಾಶಕರು: ನೆಲಮುಗಿಲು ಪ್ರಕಾಶನ, ಬೆಲೆ: 300/-)
ಪುಸ್ತಕ ಕೊಳ್ಳಲು: https://amzn.eu/d/1EC8wbA
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ