Advertisement
“ಶೃಂಗ” : ಆನಂದ್ ಕುಂಚನೂರ ಬರೆದ ವಾರದ ಕಥೆ

“ಶೃಂಗ” : ಆನಂದ್ ಕುಂಚನೂರ ಬರೆದ ವಾರದ ಕಥೆ

ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು.ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ.ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ,ಬುಲ್ ಶಿಟ್! ತನ್ನನ್ನು ಯಾವಾಗಲೂ ಹುಡುಗನಂತೆಯೆ ಹುರಿದುಂಬಿಸಿ ಬೆಳೆಸಿದ್ದ ಅಪ್ಪ, ತನ್ನ ಎಲ್ಲ ಬೇಕು – ಬೇಡಗಳಿಗೆ ಕಿವಿಯಾಗಿದ್ದ ಅಪ್ಪ ಈ ರೀತಿಯಾಗಿ ಬದಲಾಗಿದ್ದು ಸರಿನಾ? ಆನಂದ್ ಕುಂಚನೂರ ಬರೆದ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ಎಷ್ಟೋ ಹೊತ್ತು ಹಾಗೆ ನಿಂತವಳು ಈಗ ಗೆಲುವಾದಂತೆ ತುಟಿ ಅಗಲಿಸಿ ನಕ್ಕಳು. ಆ ನಗುವಿನಿಂದ ಮೈ ಮನಸಿಗೊಂದು ಹೊಸ ಕಸುವು ಬಂದಂತೆನಿಸಿ ಹೊರಡಲು ಅಣಿಯಾಗತೊಡಗಿದಳು. ಇವತ್ತು ರಾತ್ರಿಯೇ ಊರು ಬಿಡಬೇಕು. ಹೆಚ್ಚು ಸಮಯ ಇಲ್ಲ. ಸಧ್ಯಕ್ಕೆ ಅಪ್ಪ ಅಥವ ಅವಳು ಯಾರೇ ಈಗ ನನ್ನ ಕೋಣೆಗೆ ಬಂದರೂ ಸುಳಿವು ಸಿಗಬಾರದು. ಅದೇ ಎಚ್ಚರಿಕೆಯಲ್ಲೇ ಬಟ್ಟೆ – ಬರೆ, ಅವಶ್ಯಕ ವಸ್ತುಗಳನೆಲ್ಲ ತುಂಬಿಕೊಂಡು, `ನಿಮ್ಮ ಗಮನಕ್ಕೆ’ ಎಂದು ಒಕ್ಕಣೆ ಹಾಕಿ ತನ್ನ ಪ್ರಯಾಣದ ಉದ್ದೇಶ, ವಿವರಗಳನೆಲ್ಲ ಒಂದು ಚೀಟಿಯಲ್ಲಿ ಬರೆದು ಮೇಜಿನ ಮೇಲಿಟ್ಟು, ಮನೆಯ ಹಿಂಬಾಗಿಲಿನಿಂದ ಹೊರಟಳು ಪೂರ್ಣಾ. ಮಧ್ಯರಾತ್ರಿಗೆ ಇನ್ನೂ ಹತ್ತೋ – ಹದಿನೈದೊ ನಿಮಿಷ ಇದ್ದಿರಬಹುದು. ಅವಳ ಕಳ್ಳ ಹೆಜ್ಜೆಗೂ ಕ್ಯಾರೆ ಎನ್ನದೆ ಒಣಗಿದ ಎಲೆಗಳು ಚರಚರ ಎಂದು ಕೂಗುತ್ತಿದ್ದರೂ ಅದು ನಾಯಿಯೊ ಬೆಕ್ಕೋ ಇರಬೇಕೆಂದು ಅಪ್ಪ ಕೇಳಿಯೂ ಕೇಳಿಸದಂತೆ ಮಗ್ಗಲು ಬದಲಾಯಿಸಿದ. ಅಥವ ‘ಅವಳ’ ತೆಕ್ಕೆಯ ಸುಖದಲ್ಲಿ ಮುಲುಗಿಕೊಂಡ. ಆ ದಿನದ ರಾತ್ರಿಗೆ ಇನ್ನೊಂದಿಷ್ಟು ನಿಶ್ಯಬ್ದ ಹಾಗೂ ಮೌನವನ್ನು ಕಾಣಿಕೆ ನೀಡಿ ಸದ್ದಿಲ್ಲದೆ ಸರಿವ ಚಂದ್ರನಂತೆ ಸರಿದು ಆಚೆ ಬಂದಳು ಪೂರ್ಣಾ.

ಡಿಸೆಂಬರ್ ತಿಂಗಳ ಕೊರೆವ ಚಳಿ. ಆ ಚಳಿಯಲ್ಲೂ ಪೂರ್ಣಳ ದೇಹ ಬಿಸಿಯಾಗಿ ಬೆವರು ಹಣಿದು ಬಟ್ಟೆ ಅಂಟಿಕೊಳ್ಳುತ್ತಿತ್ತು. ಹೇಳದೆ ಈ ರೀತಿ ಮನೆ ಬಿಟ್ಟು ಬಂದುದಕ್ಕೆ ಅವಳಲ್ಲಿ ಯಾವ ಅಳುಕೂ ಇರಲಿಲ್ಲ. ಬದಲಾಗಿ ಗುರಿ ಸ್ಪಷ್ಟವಾಗಿತ್ತು. ಮೊದಲಿನಿಂದಲೂ ಅಷ್ಟೇ – ಅವಳಲ್ಲಿ ದಿಟ್ಟತನವಿತ್ತೇ ಹೊರತು ಹುಂಬತನವಿರಲಿಲ್ಲ. ಅಂದುಕೊಂಡ ಗುರಿಯನ್ನು ಸಾಧಿಸುವ ಛಲಗಾರಿಕೆ ಅವಳ ಬದುಕಿಗೆ ಗತಿಯನ್ನು ಒದಗಿಸಿತ್ತು. ಥೇಟ್ ಅಥ್ಲಿಟ್ ನಂತೆ ಎತ್ತರದ ಸಪೂರ ದೇಹದವಳು ಅವಳು; ಅವಳ ಕಣ್ಣು, ನಗುವಿನಲ್ಲಿ ಸದಾ ಜಿನುಗುವ ಉತ್ಸಾಹ, ಆತ್ಮವಿಶ್ವಾಸ, ನಡೆಯಲ್ಲಿನ ರಭಸ ನೋಡಿದರೆ ಯಾರಿಗಾದೂ ಈಕೆ ಗಾಳಿಗೂ ಚಲನೆಯನ್ನು ಹೇಳಿಕೊಡಬಲ್ಲಳು ಎನಿಸುವುದು. ಪೂರ್ಣಳ ಶಕ್ತಿ, ಸಾಮರ್ಥ್ಯ ಅವಳ ಗೆಳತಿ ಉಷಾಗೆ ಚೆನ್ನಾಗಿ ಗೊತ್ತು.

ಪೂರ್ಣಾ ಮನೆಯಿಂದ ಹೊರಬರುತ್ತಲೆ ಮೊದಲೇ ಕ್ಯಾಬ್ ನಲ್ಲಿ ಕಾಯುತ್ತಿದ್ದ ಉಷಾ, `ಬಾರಮ್ಮ ಬೇಗ, ಫ್ಲೈಟ್ ಗೆ ಲೇಟಾಗುತ್ತೆ.’ ಎಂದು ಗಡಿಬಿಡಿ ಮಾಡಿದಳು. ಅಲ್ಲಿಂದ ಶುರುವಾದ ಗಡಿಬಿಡಿ ಏರ್ಪೋರ್ಟ್ ಗೆ ಹೊರಟು, ಚೆಕ್ – ಇನ್ ಆಗಿ, ಪ್ರಯಾಣದ ಎಲ್ಲ ಔಪಚಾರಿಕತೆಗಳನ್ನು ಪೂರೈಸಿ, ತನಗೆಂದೆ ಮೀಸಲಾದ ಸೀಟಿನಲ್ಲಿ ಕೂತು ‘ಉಫ್’ ಎಂದು ಕಣ್ಣುಮುಚ್ಚಿ ದೊಡ್ಡ ನಿಟ್ಟುಸಿರು ಬಿಟ್ಟು ದಣಿವಾರಿಸಿಕೊಳ್ಳುವಷ್ಟರಲ್ಲಿ, `ವಿಮಾನ ಇನ್ನೇನು ಹೊರಡಲಿದೆ, ದಯವಿಟ್ಟು ನಿಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ವಿಚ್ ಆಫ್ ಮಾಡಿ’ ಎಂಬ ಘೋಷಣೆಗೆ ಬೆಚ್ಚಿ ಬಿದ್ದು, ತನ್ನ ಮೊಬೈಲ್ ಗಾಗಿ ವ್ಯಾನಿಟಿ ಬ್ಯಾಗ್ ಹುಡುಕತೊಡಗಿದಳು. ಊಹ್ಞೂ… ಮೊಬೈಲ್ ತಪ್ಪಿಸಿಕೊಂಡಿತ್ತು. ಶೇ… ಅದು ತನ್ನ ಟೇಬಲ್ ಮೇಲೆಯೆ ಇತ್ತು. ಈ ಕೈಯಿಂದ ಚೀಟಿಯಿಟ್ಟು ಇನ್ನೊಂದು ಕೈಯಿಂದ ಮೊಬೈಲ್ ಎತ್ತುಕೊಳ್ಳಬೇಕು ಎಂದುಕೊಂಡವಳು, ಹೇಗೆ ಮರೆತುಹೋದೆನೋ ಎಂದು ಹಣೆಗೆ ಕೈಯಿಟ್ಟುಕೊಂಡು ಹಲುಬಿದಳಾದರೂ, ಸಂಪರ್ಕಕ್ಕೆ ಅದೊಂದು ಪೀಡೆ ಅಥವ ಅದೊಂದೇ ಇತ್ತು. ಈಗ ಅದೂ ತೊಲಗಿತು. ಸಧ್ಯ, ಇನ್ನು ನಿಶ್ಚಿಂತೆಯಾಗಿ ತನ್ನ ಪ್ರಯಾಣ ಅಂದುಕೊಂಡಂತೆ ಮುಗಿಸಿಕೊಳ್ಳಬಹುದೆಂದು ನಕ್ಕು ನಿರಾಳವಾದಳು. ವಿಮಾನ ಮೇಲಕ್ಕೆ ಏರುತ್ತಿದ್ದಂತೆ ಕೆಳಗೆ ಊರ ಕಾಂಕ್ರೀಟು ಗುಡಿಸಲಿನ ಬಲ್ಬು ದೀಪಗಳೆಲ್ಲ ಮಿಂಚುಹುಳುಗಳಂತೆ ಮಿಂಚಿ ಮರೆಯಾಗುತ್ತಿದ್ದುದನ್ನು ಹಿತವಾಗಿ ಅನುಭವಿಸತೊಡಗಿದಳು. ಬುದ್ಧಿ ವಿಶ್ರಾಂತಿ ಬೇಡುತ್ತಿತ್ತು. ಮೈ ಮನಸುಗಳು ಸಡಿಲಗೊಳ್ಳುತ್ತಿದ್ದವು. ಇದೇ ತಕ್ಕ ಸಮಯವೆಂದು ಸಮಯಸಾಧಕ ನೆನಪುಗಳು ಒಂದೊಂದಾಗಿ ಪೂರ್ಣಳ ತಲೆಯಲ್ಲಿ ನುಗ್ಗತೊಡಗಿದವು.

ಅವಳು ದಿವ್ಯಾ ಗುರುಂಗ, ನೇಪಾಳಿ. ಅವಳೇ ತನ್ನನ್ನು ಈ ಪರಿಯಾಗಿ ಕೆಣಕಿದ್ದು. ಹದಿಮೂರು ವರ್ಷಕ್ಕೇ ಮೌಂಟ್ ಎವರೆಸ್ಟ್ ಏರಿದ ದಕ್ಷಿಣ ಭಾರತದ ಅತಿ ಕಿರಿಯ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದ ತನ್ನನ್ನು ಆಫೀಸಿನಲ್ಲಿ ಎಷ್ಟೊಂದು ಗೌರವ, ಅಭಿಮಾನದಿಂದ ನೋಡುತ್ತಾರೆ. ಆಫೀಸ್ ಬಾಯ್ ನಿಂದ ಹಿಡಿದು ಸಿ.ಇ.ಒ.ವರೆಗೂ ಎಲ್ಲರಿಗೂ ತನ್ನ ಬಗ್ಗೆ ಹೆಮ್ಮೆ. ಆದರೆ ಈ ದಿವ್ಯಾ ಮಾತ್ರ, `ಇವಳೇನು ಮಹಾ?’ ಅನ್ನುವ ಧಾಟಿಯಲ್ಲಿ ಎಲ್ಲೆರೆದುರೇ ಮೂಗು ಮುರಿಯುತ್ತಾಳೆ. ಇದು ತೀರ ಅಸಹನೀಯವೆನಿಸಿ, ಅವಳದೇನು ಪ್ರಾಬ್ಲಮ್ ಕೇಳೆ ಉಷಾ ಎಂದಿದ್ದಕ್ಕೆ, ಉಷಾ ಅವಳನ್ನು ಆಫೀಸ್ ಕ್ಯಾಂಟೀನಿನಲ್ಲಿ ಕೇಳಿದಾಗ, `ಅವಳೇನು, ಒಂದು ಮೌಂಟ್ ಎವರೆಸ್ಟ್ ಏರಿ ಬಂದಿದ್ದಕ್ಕೆ ಏನಂಥ ಮಹಾ ಸಾಧನೆ ಮಾಡಿದಂತಾಯ್ತು? ಅದಕ್ಕೆ ಅವಳಿಗೆ ಅಷ್ಟೊಂದು ಮರ್ಯಾದೆ ಬೇರೆ! ನಮ್ಮ ನೇಪಾಳವನ್ನೊಮ್ಮೆ ಸುತ್ತಿ ನೋಡೋಕೆ ಹೇಳು, ಅಲ್ಲಿ ಇನ್ನೂ ಎಂಥೆಂಥ ದಟ್ಟ, ಘೋರ ಪರ್ವತಗಳಿವೆ. ಆ ಪರ್ವತಗಳ ಕಂಕುಳಲ್ಲಿ ದೈತ್ಯಾಕಾರದ ಜೇನುಗೂಡು ಕಟ್ಟುತ್ತವೆ. ಅವನ್ನು ನಮ್ಮ ಗುರುಂಗ ಬುಡಕಟ್ಟಿನವರು ಯಾವುದೇ ಗೈಡ್ ಇಲ್ಲದೆ, ಸುರಕ್ಷೆ ಇಲ್ಲದೆ, ಜೀವದ ಪರಿವೇ ಇಲ್ಲದಂತೆ ಪರ್ವತ ಏರುತ್ತಾರೆ. ಜೇನು ಬೇಟೆಯಾಡುತ್ತಾರೆ. ಅದಕ್ಕೆ ಎಂಟು ಗುಂಡಿಗೆ ಇರಬೇಕು. ಇವಳಿಗೆ ಅಂಥ ಧೈರ್ಯ ಇದೆಯಾ? ಚಿಕ್ಕಂದಿನಲ್ಲಿ ಯಾವುದೊ ಹುರುಪಿನಲ್ಲಿ, ಕೋಚ್ ಸಹಾಯದಿಂದ ಒಂದಿಷ್ಟು ದೂರ ಮೌಂಟ್ ಎವರೆಸ್ಟ್ ಏರಿದುದನ್ನೆ ಸಾಧನೆ ಅಂತಾಳಲ್ಲ, ನಮ್ಮ ಜನರ ಥರ ಒಂದು ಜೇನು ಬಿಡಿಸಲಿ ಸಾಕು, ಇವಳ ಜನ್ಮ ಜಾಲಾಡಿ ಹೋಗುತ್ತದೆ’ ಎಂದು ವಿಚಿತ್ರವಾಗಿ ನಕ್ಕು ಹೋಗಿದ್ದಳು. ಅದನ್ನು ಉಷಾ ತನಗೆ ಹೇಳಿದಾಗ ಮೈಯೆಲ್ಲ ಉರಿದುಹೋಗಿ, ಇಷ್ಟೊಂದು ಅನುಭವ ಸಾಮರ್ಥ್ಯ ಇರುವ ತನ್ನಿಂದ ಇದು ಆಗದ ಕೆಲಸವೇ? ನೋಡಿಯೇ ಬಿಡ್ತಿನಿ… `ಉಷಾ, ಅವಳಿಗೆ ಹೋಗಿ ಹೇಳು – ಅವಳ ಛಾಲೆಂಜ್ ಅನ್ನು ಒಪ್ಪಿದ್ದೇನೆ.’

ಛಾಲೆಂಜ್ ಏನೋ ಒಪ್ಪಿದಾಗಿತ್ತು. ಆದರೆ ಅದಕ್ಕೆ ಮಾರ್ಗದರ್ಶನ ಎಲ್ಲಿಂದ? ಯಾರಿಂದ? ಗೂಗಲ್ ಎಂಬ ಆಧುನಿಕ ಸರ್ವಜ್ಞನ ಮೊರೆ ಹೋಗಬೇಕಾಯಿತು. ಮಾಹಿತಿ ಕಲೆ ಹಾಕತೊಡಗಿದ್ದಳು. ಇದರ ಮಧ್ಯೆಯೆ ಅಪ್ಪ, `ಮುಂದಿನ ವಾರ ಗಂಡಿನ ಕಡೆಯವರು ಬರ್ತಾರೆ. ಆಫೀಸಿಗೆ ಒಂದು ದಿನ ರಜಾ ಹೇಳು. ನಿನಗೆ ಸೀರೆ ಉಡೋದಕ್ಕೆ, ಸಿಂಗಾರ ಮಾಡ್ಕೊಳ್ಳೋಕೆ ನಿಮ್ಮ ಚಿಕ್ಕಮ್ಮ ಹೆಲ್ಪ್ ಮಾಡ್ತಾರೆ. ಅವರು ಬಂದಾಗ ಸ್ವಲ್ಪ ಗಂಭೀರವಾಗಿ ಇರೋದನ್ನ ಕಲ್ತುಕೋ. ಹೋದ್ಸಲ ಮಾಡಿದ್ಹಾಗೆ ಚೆಲ್ಲು ಚೆಲ್ಲಾಗಿ ಆಡಿದ್ರೆ ಗ್ರಹಚಾರ ಬಿಡಸ್ತೀನಿ’ ಎಂದು ಏರುದನಿಯಲ್ಲಿ ಹೇಳಿಹೋಗಿದ್ದರು. ಅಪ್ಪ ಈಗ ಒಂಟಿ ಅಲ್ಲ. ಅವಳಿದ್ದಾಳೆ. ತನ್ನನ್ನು ಬೇಗೆ ಮದುವೆ ಮಾಡಿ ಕಳಿಸಬೇಕೆಂಬ ತುರ್ತು ಅವರಿಗೆ. ಇದನ್ನು ಒಪ್ಪಿಕೊಂಡರೆ ತನ್ನನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ಅಖಂಡ ಖೆಡ್ಡಾವೊಂದು ರೂಪುಗೊಂಡಿದೆಯೆಂದು ಸ್ಪಷ್ಟವಾಗಿತ್ತು. ತನ್ನ ಆಸೆ, ಕನಸುಗಳು ಹಿಡಿತದಲ್ಲಿರಬೇಕೆಂದರೆ ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು, ಅದೂ ಈ ಪ್ರಯಾಣದ ಮೂಲಕ.

ಅಮ್ಮ ತನಗೆ ದುಃಖವಾದಾಗ, ಅಧೀರಳಾದಾಗ ಅಥವ ಗೊಂದಲದಲ್ಲಿದ್ದಾಗ ಕನ್ನಡಿಯ ಮುಂದೆ ನಿಂತು ಮಾತಾಡುತ್ತಿದ್ದಳು. ಆಗ ತನ್ನ ಒಳದನಿಯೆ ಪ್ರತಿಬಿಂಬದ ಮೂಲಕ ಪರಿಹಾರ ಸೂಚಿಸುತ್ತಿತ್ತು. ಅದನ್ನು ನೆನೆದು ತಾನೂ ಕನ್ನಡಿಯ ಮುಂದೆ ನಿಂತು ದೃಢ ಮನಸಿನಿಂದ ಅಪ್ಪನ ಖೆಡ್ಡಾಕ್ಕೆ ಟಾಟಾ ಹೇಳಿ ಮನೆಬಿಟ್ಟು ಬಂದಿದ್ದೇನೆ. ಮತ್ತೊಮ್ಮೆ ಅಮ್ಮನ ನೆನೆದು ಕಣ್ಣು ನೀರಾದವು. ಅವಳಿದ್ದಿದ್ದರೆ ತನ್ನ ಕನಸು ಆಸೆಗಳಿಗೆಲ್ಲ ನೀರೆರೆದು ಪೋಷಿಸುತ್ತಿದ್ದಳು. ನಾನು ಎವರೆಸ್ಟ್ ಕನಸನ್ನು ಹೊತ್ತುಕೊಂಡು ಹೋದ ಕೆಲದಿನಗಳಲ್ಲೇ ಅಮ್ಮ ಹಾರ್ಟ್ ಅಟ್ಯಾಕ್ನಿಂದ ಹೋಗಿಬಿಟ್ಟಿದ್ದಳು. ವಿಷಯ ತಿಳಿದಿರಲಿಲ್ಲ. ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು. ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ. ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ, ಬುಲ್ ಶಿಟ್! ತನ್ನನ್ನು ಯಾವಾಗಲೂ ಹುಡುಗನಂತೆಯೆ ಹುರಿದುಂಬಿಸಿ ಬೆಳೆಸಿದ್ದ ಅಪ್ಪ, ತನ್ನ ಎಲ್ಲ ಬೇಕು – ಬೇಡಗಳಿಗೆ ಕಿವಿಯಾಗಿದ್ದ ಅಪ್ಪ ಈ ರೀತಿಯಾಗಿ ಬದಲಾಗಿದ್ದು ಸರಿನಾ? ಅಥವಾ ಅವಳು ಅದ್ಯಾವ ತನ್ನ ಕರುಣಾಜನಕ ಕಥೆ ಹೇಳಿ ಅಪ್ಪನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ? ಯಾರಿಗೆ ಯಾರು ಪೂರಕ, ಮಾರಕ? ಅಥವ ಅವರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ನನ್ನ ಮನಸು ಪಕ್ವವಾಗಿಲ್ಲವೇನೋ.
ಇತ್ಯಾದಿತ್ಯಾದಿ…

*************

ಬೆಳಗಿನ ಜಾವ ಉಷಾ ಎಬ್ಬಿಸಿದಾಗಲೆ ಪೂರ್ಣಾ ಎಚ್ಚರವಾಗಿದ್ದು. ಇಷ್ಟೊಂದು ಮೈಮರೆತು ನಿದ್ದೆ ಮಾಡುತ್ತಿದ್ದೆನಾ ಎಂದು ಅಚ್ಚರಿಯಾಯಿತು ಅವಳಿಗೆ. ವಿಮಾನದಿಂದ ಇಳಿಯುತ್ತಿದ್ದಂತೆಯೆ ಕಠ್ಮಂಡು ಎಂಬ ಫ್ರಿಜ್ಜಿನೊಳಗೆ ಕಾಲಿಟ್ಟಂತಾಯಿತು. ಆ ಚಳಿಗೆ ಚಿಮಣಿಯಂತೆ ಬಾಯಿ ಮೂಗಿನಿಂದ ಉಸಿರಿಗೊಂದಾವರ್ತಿ ಉಗಿ ಹೊರಬರುತ್ತಿತ್ತು. ಮೊದಲೇ ನಿಯೋಜಿಸಿದಂತೆ ಬೆಂಗಳೂರಿನಿಂದ ಹೊರಟ ಪೂರ್ಣಾ, ಉಷಾ ಮತ್ತು ಇದೇ ಪ್ಯಾಕೇಜ್ ಟೂರ್ನಲ್ಲಿ ಬಂದ ಇತರ ಹದಿಮೂರು ಸಹ ಪ್ರಯಾಣಿಕರ ದಂಡನ್ನು ಕಠ್ಮಂಡು ಏರ್ಪೋರ್ಟ್ ನಲ್ಲಿ ಇದಿರುಗೊಂಡು, ಎಲ್ಲರನ್ನೂ ಲಾಡ್ಜ್ ಒಂದರಲ್ಲಿ ಇಳಿಸಿ ಪ್ರತಿಯೊಬ್ಬರನ್ನೂ ಅವರವರ ಕೋಣೆಗೆ ಕಳುಹಿಸಲಾಯಿತು. ಕಳುಹಿಸುವ ಮೊದಲು ಬಿಜಯ್ ಎಂಬ ಹೆಸರಿನ ಗೈಡ್ ತನ್ನನ್ನು ಪರಿಚಯ ಮಾಡಿಕೊಂಡು ಆ ದಿನದ ಎಲ್ಲ ಚಟುವಟಿಕೆಗಳು ಹಾಗೂ ಎಲ್ಲರೂ ಸುರಕ್ಷಿತತೆಯಿಂದಿರಲು ವಹಿಸಬಹುದಾದ ಎಚ್ಚರಗಳು ಎಲ್ಲವನ್ನು ಬಿಡಿಸಿ ಹೇಳುತ್ತಿದ್ದ. ಮೊದಲನೆ ದಿನ `ಕಠ್ಮಂಡು ದರ್ಶನ’ ಟೂರ್ ಹೊಡೆಸುವುದರ ಬಗ್ಗೆ ಹೇಳುವಾಗ ಪೂರ್ಣಾ, `ಹನಿ ಹಂಟಿಂಗ್ ಯಾವಾಗ ಹೋಗೋದು? ನನಗೆ ಸಿಟಿ ಟೂರ್ ಬೇಡ. ಅಲ್ಲಿಗೇ ಮೊದಲು ಹೋಗೋಣವೇ?’ ಎಂದು ತನ್ನ ಆತುರ ವ್ಯಕ್ತಪಡಿಸಿದಾಗ, ಬಿಜಯ್ ಮುಗುಳ್ನಕ್ಕು, `ಮೇಡಮ್, ಈ ಟೂರ್ ಪ್ಯಾಕೇಜ್ ಹೇಗಿದೆಯೊ ಹಾಗೆ ನಾವು ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ. ಹನಿ ಹಂಟಿಂಗ್ ಗೆ ನಾಳೆ ಹೋಗೋಣ’ ಎಂದ. ಪೂರ್ಣಳ ಮುಖ ಪೆಚ್ಚಾಯಿತು.

ಹದಿಮೂರು ವರ್ಷಕ್ಕೇ ಮೌಂಟ್ ಎವರೆಸ್ಟ್ ಏರಿದ ದಕ್ಷಿಣ ಭಾರತದ ಅತಿ ಕಿರಿಯ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದ ತನ್ನನ್ನು ಆಫೀಸಿನಲ್ಲಿ ಎಷ್ಟೊಂದು ಗೌರವ, ಅಭಿಮಾನದಿಂದ ನೋಡುತ್ತಾರೆ. ಆಫೀಸ್ ಬಾಯ್ ನಿಂದ ಹಿಡಿದು ಸಿ.ಇ.ಒ.ವರೆಗೂ ಎಲ್ಲರಿಗೂ ತನ್ನ ಬಗ್ಗೆ ಹೆಮ್ಮೆ. ಆದರೆ ಈ ದಿವ್ಯಾ ಮಾತ್ರ, `ಇವಳೇನು ಮಹಾ?’ ಅನ್ನುವ ಧಾಟಿಯಲ್ಲಿ ಎಲ್ಲೆರೆದುರೇ ಮೂಗು ಮುರಿಯುತ್ತಾಳೆ.

ಕಠ್ಮಂಡು ಸಿಟಿ ರೌಂಡ್ ಅಪ್ ನಲ್ಲಿ ಪೂರ್ಣಳಿಗೆ ಕೊಂಚವೂ ಉತ್ಸಾಹವಿರಲಿಲ್ಲ. ಜೊತೆಗೆ ಬಂದ ಉಷಾನೋ ಒಂಥರಾ ಸಾಧುಪ್ರಾಣಿ. ಅವಳಿಗೆ ತಾನು ಬಾಯ್ ಫ್ರೆಂಡ್, ಇಲ್ಲ ತನಗೆ ಅವಳು. ಅಷ್ಟೇ ಹಚ್ಚಿಕೊಂಡಿದ್ದಾಳೆ, ಪ್ರೀತಿಸುತ್ತಾಳೆ. ತಾನು ಕರೆದಲ್ಲೆಲ್ಲ ಯಾವ ಮುಲಾಜೂ ಇಲ್ಲದೆ ಓಡಿ ಬರುತ್ತಾಳೆ. ಈಗಲೂ ಅಷ್ಟೇ. ತನ್ನ ಕೈ ಹಿಡಿದುಕೊಂಡೇ ಕೂತಿದ್ದಾಳೆ. ಇಲ್ಲಿ ಬಂದಿರುವ ಸಹಪ್ರಯಾಣಿಕರಲ್ಲಿ ಎಲ್ಲರೂ ಯುವಕರೇನಿಲ್ಲ. ನಮ್ಮನ್ನೂ ಸೇರಿಸಿ ಐದಾರು ಜನ ಇರಬಹುದಷ್ಟೇ. ಮಧ್ಯವಯಸ್ಕರೇ ಹೆಚ್ಚಾಗಿ ತುಂಬಿದ್ದಾರೆ. ಅವರೊಂದಿಗೆ ಅವರ ಹೆಂಡತಿಯರು, ಐದಾರು ಮಕ್ಕಳು ನೇಪಾಳಕ್ಕೆ ಯಾವುದೋ ಕುತೂಹಲದ ಚುಂಗು ಹಿಡಿದು ಬಂದವರಂತೆ ತೋರುತ್ತಿದ್ದರು. ಸುಮ್ಮನೆ ಮೈದಡವಿ ಪರಿಚಯ ಮಾಡಿಕೊಂಡರೆ? ಒಬ್ಬೊಬ್ಬರೂ ಒಂದೊಂದು ಕತೆ ಹೇಳಿ ನಿರುಮ್ಮಳರಾಗುವರಂತೆ ಕಾಣುತ್ತಿದ್ದರು. ಸಧ್ಯ, ಅಂಥ ಸಾಹಸ ಬೇಡವೆಂದು ಪೂರ್ಣಾ ಅನ್ಯಮನಸ್ಕಳಾಗಿದ್ದಳು. ಆದರೂ ಪ್ರಯಾಣದ ಮಧ್ಯೆ ಅನಗತ್ಯ ಅಂತಾಕ್ಷರಿಗಳೂ, ಅಸಹ್ಯ ವಾಂತಿಗಳು, ಅನವಶ್ಯಕ ಜೋಕುಗಳು, ಒಂದಿಷ್ಟು ಪರಿಚಯ, ಡಾನ್ಸೂ ಎಲ್ಲ ನೆರವೇರುವುದರೊಳಗೆ ಎಲ್ಲರ ಮಧ್ಯೆಯೂ ಎಂಥದೊ ಭಾವಬಂಧ ಏರ್ಪಟ್ಟಿತು. ಇಷ್ಟು ವರ್ಷ ಕಳೆದುಹೋಗಿದ್ದ ಸಂಬಂಧವೊಂದು ಈಗ, ಇಷ್ಟು ದೂರದಲ್ಲಿ ಮತ್ತೆ ದೊರಕಿತೆನೊ ಎಂಬಂತೆ ಎಲ್ಲರೂ ಅರೆಕಾಲಿಕ ಆತ್ಮೀಯರಾಗಿಬಿಟ್ಟಿದ್ದರು. ಬರಿ ಅನಾಸಕ್ತಿಯನ್ನೆ ಪ್ರದರ್ಶಿಸುತ್ತಿದ್ದ ಪೂರ್ಣಳನ್ನು ಬಿಜಯ್ ಗಮನಿಸಿ ಅವಳನ್ನು ತಮ್ಮ ಮಾತಿನ ಮಧ್ಯೆ ಎಳೆದು ತರುತ್ತಿದ್ದ. ಪಶುಪತಿನಾಥ ದೇವಸ್ಥಾನಕ್ಕೆ ಹೋದಾಗಲಂತೂ, `ನೋಡಿ, ನೇಪಾಳವನ್ನು ಸುಮಾರು ಹದಿಮೂರು – ಹದಿನಾಲ್ಕನೆ ಶತಮಾನದಲ್ಲಿ ಕರ್ನಾಟಕದ ರಾಜರು ಆಳಿದರು. ಆಗ ಯಕ್ಷಮಲ್ಲನೆಂಬ ರಾಜ, ಈ ಪಶುಪತಿನಾಥನ ಪೂಜೆ ಪುನಸ್ಕಾರಕ್ಕೆ ಕರ್ನಾಟಕದ ಕರಾವಳಿ ಕಡೆಯ ಬ್ರಾಹ್ಮಣರೇ ಆಗಬೇಕೆಂದು ನಿಯಮ ವಿಧಿಸಿದ. ಅಲ್ಲಿಂದ ಇಲ್ಲಿಯವರೆಗೂ ಅದೇ ನಡೆದುಕೊಂಡು ಬಂದಿದೆ. ಬೇಕಾದರೆ ಇಲ್ಲಿಯ ಭಟ್ಟರನ್ನು ಮಾತಾಡಿಸಿ ಅವರು ಕನ್ನಡದಲ್ಲಿ ಮಾತಾಡುತ್ತಾರೆ’ ಎಂದು ಹುರಿದುಂಬಿಸಿದ. ಎಲ್ಲರೂ ನಾಮುಂದು – ತಾಮುಂದು ಎಂದು ಮಾತಾಡಿಸಲು ಮುಗಿಬಿದ್ದರು. ಈ ಐತಿಹ್ಯವನ್ನೆಲ್ಲ ಮೊದಲೇ ಗೂಗಲ್ ನಲ್ಲಿ ಓದಿದ್ದರಿಂದ ಪೂರ್ಣಾ ಅತ್ತಕಡೆ ಕಿವಿಗೊಡದುದಕ್ಕೆ ಬಿಜಯ್ ತಾನು ರೋಮಾಂಚಕಾರಿ ವಿಷಯದಿಂದ ಇವಳನ್ನು ಉಲ್ಲಾಸಗೊಳಿಸಬೇಕೆಂದಿದ್ದ ಆಶೆಗೆ ತಣ್ಣೀರು ಸುರಿದಂತಾಗಿತ್ತು. ಪೂರ್ಣಳ ಸಂಪೂರ್ಣ ಮನಸು ಬುದ್ಧಿ ಎಲ್ಲ ಜೇನುಗೂಡು ಮತ್ತು ಅವನ್ನು ಹೊತ್ತು ಅನ್ನಪೂರ್ಣ ಪರ್ವತಗಳ ಸುತ್ತಲೇ ಸುತ್ತುತ್ತಿದ್ದವು. ಹೇಗೂ ನಾಳೆ ಬೆಳಿಗ್ಗೆಯೆ ಅಲ್ಲಿಗೆ ಹೊರಡುವುದಿದೆ. ಇವತ್ತಿನಂತೆ ಈ ಬಿಜಯನ ಬೆನ್ನುಬಿದ್ದು ಅವಳು ತೋರಿಸಿದ್ದಷ್ಟನ್ನೇ ನೋಡಿ, ಹೇಳಿದ್ದನ್ನಷ್ಟೇ ಕೇಳಿ ಹೋಗುವುದಕ್ಕೆ ತಾನಿಲ್ಲಿ ಬಂದಿಲ್ಲ. ಬದಲಾಗಿ ಈ ಸಂತೆಯಿಂದ ಹೊರಬಂದು ಗುರುಂಗ ಜನರೊಡನೆ ಬೆರೆತು, ಸ್ವತಃ ಪರ್ವತ ಅವರೋಹಣ ಮಾಡಿ ಜೇನು ಸವಿಯಬೇಕು. ಅದನ್ನು ಗರ್ವದಿಂದ ದಿವ್ಯಳಿಗೆ ಒಪ್ಪಿಸಬೇಕು. ಆಗಲಾದರೂ ಅವಳು ತನ್ನ ಸಾಮರ್ಥ್ಯವನ್ನು ಒಪ್ಪಿಕೊಳ್ಳಬಹುದೆಂದು ಪೂರ್ಣ ಲೆಕ್ಕ ಹಾಕುತ್ತಲೇ, ನಾಳೆ ತಾನು ಸಂತೆಯಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆಂದು ಚಿಂತಿಸತೊಡಗಿದಳು.

ತನ್ನ ಕಣ್ಣನ್ನು ತಾನೇ ನಂಬಲಾಗುತ್ತಿಲ್ಲ. ಇಷ್ಟು ದಿನ ಫೋಟೋಗಳಲ್ಲಿ, ಕಲ್ಪನೆಯಲ್ಲಿ ಕಂಡಿದ್ದ ಜೇನುಗೂಡುಗಳು ಇಲ್ಲಿ ನೋಡಿದರೆ ರಾಕ್ಷಸನಾಕಾರ! ಹೌದು, ಬೆಳಿಗ್ಗೆಯೆ ಕಠ್ಮಂಡುವಿನಿಂದ ಹೊರಟು ಅನ್ನಪೂರ್ಣ ಪರ್ವತಗಳ ತಪ್ಪಲಲ್ಲಿರುವ ಈ ಖುಡಿ ಎಂಬ ಗ್ರಾಮಕ್ಕೆ ಬಂದು, ಅಲ್ಲಿಂದ ಈ ಜೇನು ಬೇಡರ ಹಿಂಡನ್ನು ಹಿಂಬಾಲಿಸಿಕೊಂಡು ಬಂದು ಈ ದೃಶ್ಯವನ್ನು ನೋಡುವವರೆಗೂ ಪೂರ್ಣಳ ಮೈಮನಸು ಯಾವುದೋ ಅಮೂರ್ತದ ಕಡೆಗೆ ನೆಟ್ಟಂತಿತ್ತು. ಅದು ಇಲ್ಲಿ ಈಗ ಮೂರ್ತಗೊಂಡು ತನ್ನೊಳಗೆಲ್ಲಾ ವ್ಯಾಪಿಸುತ್ತಿದ್ದಂತೆ ರೋಮಾಂಚನಗೊಳ್ಳುತ್ತಿತ್ತು. ಗೈಡ್ ಬಿಜಯನಿಗೆ ಇವಳ ಆತುರ, ಉತ್ಸಾಹ ಕಂಡು ಸಂತೋಷವಾಗಿತ್ತಾದರೂ, ಇವಳಿಗೇಕೆ ಈ ವಿಷಯದಲ್ಲಿ ಇಷ್ಟೊಂದು ಆಸಕ್ತಿ? ಬೇರೆ ಉದ್ದೇಶವೇನಾದರೂ ಇರಬಹುದೇ? ಎಂದು ಸಂದೇಹಪಟ್ಟಿದ್ದ. ಅದಕ್ಕೆ ಕಾರಣವೂ ಇತ್ತು. ಇತ್ತೀಚಿಗೆ ಇಲ್ಲಿ ಅಧ್ಯಯನಕ್ಕೆಂದು ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿತ್ತು. ಇನ್ನು ಕೆಲವರು ಇಲ್ಲಿ ಸಿಗುವ ಕೆಂಪು ಜೇನಿಗಾಗಿ ಆಸೆಪಟ್ಟು ಅದನ್ನು ಮಾರುವ ಇಲ್ಲವೆ ದುಶ್ಚಟಕ್ಕಾಗಿ ಬಳಸುವ ದುರಾಶೆ ಹೊಂದಿದ್ದಾರೆ. ಇದರಿಂದ ಇಲ್ಲಿನ ಗುರುಂಗ ಜನಾಂಗಕ್ಕೆ, ಅವರ ಆಚರಣೆ, ಸಂಸ್ಕೃತಿಗಳಿಗೆ ಧಕ್ಕೆಯಾಗುತ್ತಿದೆ. ಬೇಡಬೇಡವೆಂದರೂ ಈ ಜೇನುಬೇಟೆಯನ್ನು ಕಲಿತುಕೊಳ್ಳಲೋ, ಅದನ್ನು ತಮ್ಮ ಅಧ್ಯಯನದ ತೀಟೆಗೆ ಬಳಸಿಕೊಳ್ಳಲೋ ಅಥವ ಕುತೂಹಲಕ್ಕೋ ಇಲ್ಲಿಗೆ ಬರುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಗುರುಂಗ ಅಥವಾ ಟ್ಯಾಮುಗಳು ಪಹಾಡಿಗಳು. ಆದರೆ ಕಾಡೆಲ್ಲ ಕರಗಿಹೋಗಿ ಈಗವರು ಹಳ್ಳಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮೂಲದಿಂದ ಬಂದ ತಮ್ಮ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ. ವರ್ಷಕ್ಕೆ ಎರಡು ಬಾರಿ, ಅಂದರೆ ಚಳಿಗಾಲ ಮತ್ತು ಚೈತ್ರಕಾಲದಲ್ಲಿ ಇವರು ಜೇನುಬೇಟೆಗಿಳಿಯುತ್ತಾರೆ. ಅವರ ಇಡೀ ಸಮುದಾಯ ಇದನ್ನು ತಾವು ತಮ್ಮ ದೈವಕ್ಕೆ ಮಾಡುವ ಮಹಾಪೂಜೆಯೆಂದೇ ಬಗೆಯುತ್ತಾರೆ. ಸಮುದಾಯದ ಪ್ರತಿ ಕುಟಂಬವೂ ಈ ಬೇಟೆಗೆ ಸಹಾಯ ಮಾಡುತ್ತದೆ. ಸುಮಾರು ಮೂರು ತಿಂಗಳು ಮುಂಚೆಯೆ ನಾರಿನ ಹಗ್ಗ ಹೊಸೆಯುವುದು, ಜೇನು ಸಂಗ್ರಹಣೆಯ ಬುಟ್ಟಿ ಹೆಣೆಯುವುದು, ಹಗ್ಗದ ಏಣಿಯನ್ನು ನಿರ್ಮಿಸುವುದು, ಭರ್ಚಿ ತಯಾರಿಸುವುದು ಇವುಗಳಲ್ಲಿ ತೊಡಗುತ್ತಾರೆ. ಈ ಬೇಟೆಯನ್ನು ಅವರು ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ. ಸುಮಾರು ಏಳೆಂಟು ಜನರ ತಂಡದಲ್ಲಿ ಒಂದಿಬ್ಬರು ಹಿರಿಯರು ಜೊತೆಗಿರುತ್ತಾರೆ. ಅವರು ಮಾರ್ಗದರ್ಶನ ಮಾಡುವುದಷ್ಟೇ ಅಲ್ಲದೆ ಈ ಕೆಲಸಕ್ಕೆ ಮುಂಚೆ ಕಾಡಿನ ದೇವಿಗೆ ಪೂಜೆ ಮಾಡಿ, ನೈವೇದ್ಯಕ್ಕೆ ಕುರಿ ಅಥವಾ ಕೋಳಿಯನ್ನು ಬಲಿ ಕೊಡುತ್ತಾರೆ. ‘ನೋಡಿ, ಮೇಲೆ ಆ ಯುವಕ ಹೇಗೆ ಜೇನು ಬಿಡಿಸುತ್ತಾನೆಂದು…’ ಬಿಜಯ್ ಅಲ್ಲಿನ ಸ್ಥಳ ಮಹಿಮೆಯ ಸಮೇತ ಗುರುಂಗರ ಬಗೆಗಿನ ಚಿತ್ರಣವನ್ನು ಕೊಡಲಾರಂಭಿಸಿದ್ದ.

ಅಲ್ಲಿದ್ದ ಎಲ್ಲರಿಗೂ ಒಂದು ರೀತಿಯ ರೋಮಾಂಚನ ಹಾಗೂ ಆ ಜೇನನ್ನು ಮನಸಾರೆ ಸವಿಯಬೇಕೆಂಬ ಬಯಕೆ. ಪೂರ್ಣಳ ಲಕ್ಷ್ಯ ಮಾತ್ರ ಬೇರೆಡೆಗೆ ಇತ್ತು. ಅವಳು ಜೇನು ಬಿಡಿಸುವ ಯುವಕನ ಬಲಾಢ್ಯ ತೋಳು, ಪರ್ವತ ಹತ್ತಿ ಇಳಿಯುವಾಗಿನ ಅವನ ಗಾಂಭೀರ್ಯ, ನಡೆ ಇವನ್ನೇ ಗಮನಿಸುತ್ತಿದ್ದಳು. ಅವನು ಯಾವುದೇ ಜಾಕೆಟ್ ತೊಟ್ಟಿಲ್ಲ. ಅಷ್ಟು ಕಟುಜೇನುಗಳು ಅವನನ್ನು ಮುತ್ತಿ ಕಚ್ಚುತ್ತಿದ್ದರೂ ತನಗೇನೂ ಆಗಿಲ್ಲವೆಂಬಂತೆ ಕೆಲಸ ಮುಗಿಸಿ ಸರಸರನೆ ಜೇನುಗೂಡಿನ ಬುಟ್ಟಿಯನ್ನು ತುಂಬಿಸಿ ಕೆಳಗಿಳಿಸಿ, ತಾನೂ ಇಳಿದು ಬಂದ. ಬಿಜಯ್ ಮತ್ತೆ ತನ್ನ ಕೆಲಸ ಮುಂದುವರೆಸಿದ, ನೋಡಿ, ಇದರಲ್ಲಿ ಎರಡು ತರಹದ ಜೇನು. ಒಂದು ಸಾದಾ ಜೇನು. ಅದನ್ನು ಇವರು ಸಕ್ಕರೆ ಅಥವ ಬೆಲ್ಲದಂತೆ ಚಹಾಕ್ಕೊ ಅಥವ ಅಡಿಗೆಗೋ ಬಳಸುತ್ತಾರೆ. ಅದಕ್ಕೇ ಅವರ ಆಯಸ್ಸು ನೂರಕ್ಕಿಂತ ಜಾಸ್ತಿ. ಇದೋ ನೋಡಿ ಇನ್ನೊಂದು ಥರದ ಜೇನು – ಕೆಂಪು ಜೇನು. ತುಂಬಾ ಪವರ್ ಫುಲ್ ಹಾಗೂ ಡೇಂಜರಸ್. ಇದನ್ನು ಸ್ವಲ್ಪ ತಿಂದರೂ ಸಾಕು. ಮನುಷ್ಯ…’ ಎನ್ನುವಷ್ಟರಲ್ಲಿ ಪೂರ್ಣಾ ಮುಗಿಬಿದ್ದು ಒಂದಿಷ್ಟು ಕೆಂಪುಜೇನು ಬಾಯಿಗೆ ಹಾಕಿಕೊಂಡಳು. ಅಷ್ಟೇ, ಅಲ್ಲಿದ್ದವರಿಗೆಲ್ಲ ಆಶ್ಚರ್ಯ! ಆತಂಕ ಕೂಡ. ಬಿಜಯ್ ಗೆ ಕೋಪ ನೆತ್ತಿಗೇರಿ ಅವಳನ್ನು ಹೊಡೆಯಬೇಕೆಂದೇ ಹೊರಟ. ಪೂರ್ಣಾ ತನ್ನ ಸ್ವಾಧೀನ ಕಳೆದುಕೊಂಡವಳಂತೆ ಉಷಾಳ ಮೈಗೊರಗಿ ವಾಂತಿ ಮಾಡಿಕೊಂಡಳು; ಕಣ್ಣು ನೆತ್ತಿಗೇರಿ ಜ್ಞಾನ ಕಳೆದುಕೊಂಡು ಬಿದ್ದುಬಿಟ್ಟಳು. ಅಲ್ಲಿದ್ದವರೆಲ್ಲ, `ಛೇ, ಇದೇನು ಈ ಹುಡುಗಿಗೆ ಇಷ್ಟು ಆತುರ? ಏನಾಗಿತ್ತಿವಳಿಗೆ?’ ಎಂದು ಹಲುಬುತ್ತಿದ್ದರೆ, ಗುರುಂಗರಿಗೆ ಹೊರಗಡೆಯಿಂದ ಬಂದ ಇಂಥವರು ಮಾಡಿಕೊಳ್ಳುವ ಎಡವಟ್ಟುಗಳನ್ನು ನೋಡಿ ನೋಡಿ ಸಾಕಾಗಿಹೋಗಿತ್ತು. ಈಚಿನ ವರ್ಷಗಳಲ್ಲಿ ಅವರು ಇಂಥ ಆಭಾಸಗಳನ್ನು ಹಲ್ಲುಕಚ್ಚಿ ಸಹಿಸಿಕೊಂಡು ಬಂದಿದ್ದಾರೆ. ಅವರಲ್ಲಿದ್ದ ಹಿರಿಯ ನಾನ್ಯಾ, `ಇಂಥವರಿಂದಲೇ ನಮ್ಮ ದೇವಿ ನಮಗೆ ಸರಿಯಾಗಿ ಜೇನು ಕೊಡುತ್ತಿಲ್ಲ. ನನ್ನ ಎರಡು ಮಕ್ಕಳನ್ನು ಜೇನುಹುಳುಗಳಿಂದ ಕಚ್ಚಿಸಿ ಕೊಂದಳು. ಲಾಮಾ ಗುರುವಿನ ಆಶೀರ್ವಾದದಿಂದ ಈಗ ಮೂರನೆ ಮಗ ಸ್ವಲ್ಪ ಕೈಗೆ ಬಂದಿದ್ದಾನೆ. ನಿಮ್ಮಂಥೋರು ನಮ್ಮ ಕಾಡೊಳಗೆ ಬರುವುದೇ ತಪ್ಪು. ಯಾಕೆ ಬರ್ತೀರಿ, ನಮ್ಮ ಪಾಡಿಗೆ ನಮ್ಮನ್ನು ಬಿಡಿ…’ ಎಂದು ಒದರುತ್ತಿದ್ದ. ಆ ಮುದುಕನ ಮೂರನೇ ಮಗ ಹೇಮನ್ ಸಂದರ್ಭ ಅರಿತು ಪೂರ್ಣಳಿಗೆ ಮದ್ದು ತರಲು ಓಡಿಹೋದ. ಅವು ಯಾವುದೋ ಗಿಡದ ಎಲೆಗಳು. ಅವನ್ನು ಅರೆದು ಬಾಯಿಗೆ ರಸ ಬಿಟ್ಟ. ಅಂಗೈ, ಅಂಗಾಲನ್ನು ಇನ್ನಿಬ್ಬರು ತಿಕ್ಕುತ್ತಿದ್ದರು. ಪೂರ್ಣಾ ಸಂಪೂರ್ಣ ಪ್ರಜ್ಞಾಹೀನಳಾಗಿದ್ದಳು. ಸಂಜೆಯಾಯಿತು. ಅವಳಿಗೆ ಪ್ರಜ್ಞೆ ಬರಬಹುದೆಂದು ಕಾದು ಜನ ಸುಸ್ತಾದರು. ಆ ಕಾಡಿನಿಂದ ಅವಳನ್ನು ಎತ್ತಿಕೊಂಡು ಹೋಗಿ ಕಠ್ಮಂಡುವಿನ ಯಾವುದಾದರೂ ಆಸ್ಪತ್ರೆಗೆ ಸೇರಿಸಬಹುದಲ್ಲ ಎಂದು ಎಲ್ಲರೂ ಒತ್ತಡ ಶುರು ಮಾಡಿದರು. ಅಷ್ಟರಲ್ಲಿ ಮುದುಕ ನಾನ್ಯಾ, `ಆಸ್ಪತ್ರೆಗೆ ಕರೆದುಕೊಂಡು ಹೋದರೆ ಏನೂ ಪ್ರಯೋಜನ ಇಲ್ಲ. ನಾವೇ ಸರಿಮಾಡ್ತೀವಿ. ನೀವು ಬೇಕಾದರೆ ನಾಳೆ ಬನ್ನಿ. ಈಗ ಹೊರಡಿ’ ಎಂದಿದ್ದಕ್ಕೆ ಯಾರೂ ಒಪ್ಪಲು ತಯಾರಾಗಲಿಲ್ಲ. ಬಿಜಯ್ ಹಾಗೂ ನಾನ್ಯಾರ ನಡುವೆ ಎಷ್ಟೋ ಹೊತ್ತು ಚರ್ಚೆ ನಡೆಯಿತು. ಆಮೇಲೆ ಬಿಜಯ್ ಅವಳನ್ನು ಅವರ ಹತ್ತಿರವೆ ಬಿಟ್ಟು ಉಳಿದ ಪ್ರಯಾಣಿಕರು ಕಠ್ಮಂಡುವಿಗೆ ತಲುಪಿಸುವ ವ್ಯವಸ್ಥೆ ಮಾಡತೊಡಗಿದ. ಉಷಾ ಕೂಡ ಅವರೊಟ್ಟಿಗೆ ಹೊರಟಿದ್ದನ್ನು ನೋಡಿ ಬಿಜಯ್ ಗೆ ಸಂದೇಹದ ವಾಸನೆ ಅತಿಯಾಯಿತು. ಉಷಾ ಅವನ ಸಂದೇಹವನ್ನು ಕಣ್ಣಿನಲ್ಲೇ ಗ್ರಹಿಸಿ, ಅರ್ಧ ತುಟಿಯಲ್ಲಿ ನಕ್ಕಳು.

*************

ಕಣ್ಣು ಬಿಟ್ಟಾಗ ಪೂರ್ಣಾ ಭಾರವಾಗಿದ್ದಳು. ಇಡೀ ದೇಹ ತೊಯ್ದು ತೊಪ್ಪೆಯಾದ ಹಸಿ ತೊಲೆಯಂತೆ ಬಿದ್ದಂತಾಗಿತ್ತು. ಆದರೆ ಮನಸು ಮಾತ್ರ ತೃಪ್ತಿಯ ನಗೆ ನಗುತ್ತಿತ್ತು. ಹೃದಯ ಹಸಿ ಜೇನಿನಲ್ಲಿ ಅದ್ದಿದಂತೆ ಮಿದುವಾಗಿತ್ತು. ಬುದ್ಧಿ ಜೇನು, ಭಾವ ಜೇನು, ಇಡಿಯ ಅಂತರಂಗವೆ ಜೇನಿನ ಗೂಡಾಗಿ ಸ್ನಿಗ್ಧ ಚೆಲುವಾಗಿತ್ತು. ಅವಳು ಕೊಸರಾಡುತ್ತಿದ್ದಂತೆ ಮನೆಯಲ್ಲಿನ ನಾನ್ಯಾ, ಮಗ ಹೇಮನ್ ಓಡಿಬಂದು ಆತ್ಮೀಯ ನಗೆ ನಕ್ಕರು. ಕುಶಲ ವಿಚಾರಿಸಿದ ಮೇಲೆ ನಾನ್ಯಾ ಅವನ ಮೊಮ್ಮಗನಿಗೆ, `ಕಾಂಛಾ, ಚಹಾ ತಗೊಂಡು ಬಾ’ ಎಂದು ಅವರ ಭಾಷೆಯಲ್ಲಿ ಹೇಳಿದ. ಅದು ಹಿಂದಿ ಮಿಶ್ರಿತವಾದ್ದರಿಂದ ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು. ಮನೆಯಲ್ಲಿನ ಚಿಕ್ಕಮಕ್ಕಳಿಗೆಲ್ಲ ಅವರು ಕಾಂಛಾ ಅಂತಲೆ ಕರೆಯೋದು. ತಾಜಾ ಜೇನಿನಿಂದ ಮಾಡಿದ್ದ ಚಹಾವನ್ನು ಹೀರುತ್ತಲೇ, ಆಹಾ, ಜನುಮದಲ್ಲೆ ಇಂಥ ಚಹಾ ಕುಡಿದಿರಲಿಲ್ಲ ಎಂದು ಕಣ್ಮುಚ್ಚಿ ಅನುಭವಿಸಿದಳು ಪೂರ್ಣಾ. ಆ ಮನೆಯನ್ನು ನೋಡುತ್ತಿದ್ದಂತೆ ತಾನು ಆಗಾಗ ಅಪ್ಪನೊಡನೆ ಅಜ್ಜಿಯ ಊರಿಗೆಂದು ಬೆಟ್ಟದೂರಿಗೆ ಹೋಗುತ್ತಿದ್ದುದು ನೆನಪಾಯಿತು. ಕೊಳ್ಳೆಗಾಲದ ಸಮೀಪ ಬೆಟ್ಟದ ತಪ್ಪಲಿನಲ್ಲಿ ಇಲ್ಲಿಯಂತೆಯೆ ಬೆಟ್ಟದೂರಿನ ಚಿಕ್ಕ ಚಿಕ್ಕ ಗೂಡಿನಂತಹ ಮನೆಗಳು, ಸುತ್ತಲೂ ದಟ್ಟ ಗಿಡಮರಗಳ ಸಾಂದ್ರ ವಾತಾವರಣ, ಬೆಳಗಿನ ಘಾಟು ಹೊಗೆ, ಜನರ ಮಾತು, ಗಲಿಬಿಲಿ ಎಲ್ಲವೂ ಥೇಟ್ ಹಾಗೆಯೇ ಇದೆ. ಇದನ್ನು ನೆನೆಯುತ್ತಿದ್ದಂತೆಯೆ ಏನೋ ವಿಚಾರ ಹೊಳೆಯಿತು – ನಮ್ಮನ್ನು ಮೂಲತಃ ಜೇನುಕುರುಬರೆನ್ನುತ್ತಾರೆ. ಅಂತೆಯೇ ನಾವೂ ಜೇನು ಬಿಡಿಸುವುದು ಮತ್ತು ಕುರಿ ಕಾಯುವ ಕೆಲಸಗಳಲ್ಲಿ ತೊಡಗಿರುವಂಥವರು. ಇಲ್ಲಿ ಇವರದಾದರೂ ಅದೇ ಕೆಲಸವೇ. ಅಂದ ಮೇಲೆ ಎರಡೂ ಸಂಸ್ಕೃತಿಗಳು ಹೆಚ್ಚೂ ಕಮ್ಮಿ ಒಂದೇ ಎಂತಾಯ್ತು. ಸ್ಥಳವಷ್ಟೇ ಬೇರೆ. ಹಾಗಾದರೆ ನಾನೂ ಇವರಲ್ಲಿ ಒಬ್ಬಳು ಎಂದು ಖುಷಿಗೊಳ್ಳುತ್ತಲೇ ಅವಳಿಗೆ ಮೈ ರೋಮಾಂಚನವಾಯಿತು. ಅಪ್ಪ ಏನೋ ನಾಲ್ಕಕ್ಷರ ಓದಿ ಬೆಂಗಳೂರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರೇನಾಯಿತು, ಬೆಟ್ಟದೂರಿನ ನಂಟು ಹೋಗುವುದೇ? ನನ್ನ ಪೂರ್ವಜರ ವಂಶವಾಹಿಗಳು ಇನ್ನೂ ರಕ್ತದಲ್ಲಿ ಹಾಗೇ ಇವೆ ಎಂದುಕೊಂಡಳು.

ಅವನಿಗೆ ತಾನು ವಿಶೇಷವಾಗಿ ಕಂಡಿರಬೇಕು. ಕಾಂಛಾ ಬಾಗಿಲ ಮರೆಯಲ್ಲಿ ನಿಂತು ಪೂರ್ಣಳನ್ನು ಬಹಳ ಆತ್ಮೀಯವಾಗಿ ನೋಡಿ ನಗುತ್ತಿದ್ದ. ಆ ಮುಗ್ಧ ಮೋಡಿಯ ನಗು ಆ ಕ್ಷಣಕ್ಕೆ ತುಂಬಾ ಅಪ್ಯಾಯವೆನಿಸಿತು. ಅವನನ್ನು ಹತ್ತಿರ ಕರೆದಳು. ಅವನು ಅದೇ ನಗುಮೊಗದಿಂದ ಕುಂಟುತ್ತ ಬಂದು ನಿಂತ. ಕಾಲು ನೋಡಿ, ಏನಾಯಿತು ಎಂದಳು. ಮಾತಾಡಲಿಲ್ಲ. ನಿನ್ನ ಹೇಸರೇನೆಂದಳು. ಉತ್ತರಿಸಲಿಲ್ಲ. ಹೇಳೋ, ಏನು ನಿನ್ನ ಹೆಸರು ಎಂದ ಎರಡೂ ಮುಂಗೈ ಹಿಡಿದು ಎಳೆದಳು. ಅವನು ಮತ್ತೆ ನಗುತ್ತಲೆ ಪೂರ್ಣಳನ್ನು ಕೈ ಹಿಡಿದು ಎಳೆದು ತಂದು ತಾಯಿಯ ಹತ್ತಿರ ತಂದು ನಿಲ್ಲಿಸಿದ. ತುಂಬು ಗರ್ಭಿಣಿಯಿದ್ದ ಅವಳು ಸಂದರ್ಭವರಿತವರಂತೆ, `ಅವನ ಹೆಸರು ದೀಪಕ್. ಮೊದಲನೆ ಮಗ.

ಮೊನ್ನೆ ಅವನಪ್ಪನಂತೆ ತಾನೂ ಬೆಟ್ಟ ಹತ್ತೋಕೆ ಹೋಗಿ ಕಾಲು ಮುರಿದುಕೊಂಡಿದ್ದಾನೆ. ಎಷ್ಟು ಹೇಳಿದರೂ ಕೇಳಲ್ಲ. ತುಂಬಾ ಹಟ. ನಾನಿರೊ ಪರಿಸ್ಥಿತಿಲಿ ಇನ್ನೂ ಎಷ್ಟು ನನ್ನ ಹೊಟ್ಟೆ ಉರಸ್ತಾನೋ’ ಎಂದು ಕಣ್ಣೀರಾಗುತ್ತಿದ್ದಂತೆ ದೀಪಕ್ ಹಣೆ ಚಚ್ಕೊಂಡು ಪೂರ್ಣಳನ್ನು ಹೊರಗೆ ಕರೆದುಕೊಂಡು ಬಂದ. ಓಣಿಯವರ ಕಣ್ಣು ತಪ್ಪಿಸಿ ತಾನೇ ಕಂಡು ಹಿಡಿದ ದಾರಿಯೊಂದರಿಂದ ಕಾಡೊಳಗೆ ನುಗ್ಗಿ ಪೂರ್ಣಳನ್ನು ಕೆಳಗೆ ನಿಲ್ಲಿಸಿ ಬೆಟ್ಟ ಹತ್ತತೊಡಗಿದ. ಪೂರ್ಣ ಎಷ್ಟು ಕೂಗಿಕೊಂಡರೂ ಕೇಳದೆ ಏದುಸಿರು ಬಿಡುತ್ತಾ ಸಿಟ್ಟಿನಲ್ಲಿ ಮೇಲೆ ಏರುತ್ತಿದ್ದ. ಸ್ವಲ್ಪ ಎತ್ತರ ಏರುತ್ತಲೇ ಮುಗ್ಗರಿಸಿ ಬಿದ್ದ ಪೆಟ್ಟಿಗೆ ಮೊದಲೇ ಊನವಾಗಿದ್ದ ಕಾಲಲ್ಲಿ ರಕ್ತ ಸುರಿಯಲಾರಂಭಿಸಿತು. ಪೂರ್ಣಳ ಕರುಳು ಮೊದಲ ಬಾರಿಗೆ ಚುರುಕ್ ಎಂದಿರಬೇಕು. ಅವನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಮಗುವಂತೆ ಆರೈಕೆ ಮಾಡತೊಡಗಿದಳು. ಆಗ ಅವನ ಸನ್ನೆಯಿಂದ ತಿಳಿಯಿತು. ಅವನ ಮಾತನ್ನು ದೇವರು ತನ್ನ ಮೌನದಲ್ಲಿ ಹುದುಗಿಸಿಟ್ಟುಕೊಂಡಿದ್ದಾನೆಂದು. ಪೂರ್ಣಳಿಗೆ ಹೃದಯವೆ ಬಾಯಿಗೆ ಬಂದಂತಾಯ್ತು.

ಆ ಮನೆಯನ್ನು ನೋಡುತ್ತಿದ್ದಂತೆ ತಾನು ಆಗಾಗ ಅಪ್ಪನೊಡನೆ ಅಜ್ಜಿಯ ಊರಿಗೆಂದು ಬೆಟ್ಟದೂರಿಗೆ ಹೋಗುತ್ತಿದ್ದುದು ನೆನಪಾಯಿತು. ಕೊಳ್ಳೆಗಾಲದ ಸಮೀಪ ಬೆಟ್ಟದ ತಪ್ಪಲಿನಲ್ಲಿ ಇಲ್ಲಿಯಂತೆಯೆ ಬೆಟ್ಟದೂರಿನ ಚಿಕ್ಕ ಚಿಕ್ಕ ಗೂಡಿನಂತಹ ಮನೆಗಳು, ಸುತ್ತಲೂ ದಟ್ಟ ಗಿಡಮರಗಳ ಸಾಂದ್ರ ವಾತಾವರಣ, ಬೆಳಗಿನ ಘಾಟು ಹೊಗೆ, ಜನರ ಮಾತು, ಗಲಿಬಿಲಿ ಎಲ್ಲವೂ ಥೇಟ್ ಹಾಗೆಯೇ ಇದೆ.

ಅಷ್ಟರಲ್ಲಿ ದೂರದಲ್ಲಿ ಒಂದಿಷ್ಟು ಜನ ಎದ್ದು ಬಿದ್ದು ಓಡುತ್ತಿದ್ದರು. ಪೂರ್ಣ ದೀಪಕ್ ನನ್ನು ಮನೆಗೆ ಕರೆದುಕೊಂಡು ಬಂದು ಕೇಳಿದಾಗ ನಾನ್ಯಾ ಹೇಳಿದ, `ಅದು ಚಿನ್ನದ ಹೊಗೆ.’ `ಹಾಗೆಂದರೆ?’ `ಅವನ್ಯಾರೊ ಫಾರಿನರ್ ವಿನ್ಸೆಂಟ್ ಅಂತೆ. ಅವನಿಗೆ ನಮ್ಮ ಬಗೆಗಿನ ಎಲ್ಲ ವಿವರ ಬೇಕಂತೆ. ಇಲ್ಲಿಯ ಯಾವನೋ ಒಬ್ಬ ಅವನ ಹತ್ರ ದುಡ್ಡು ತಗೊಂಡು ಕಳ್ಳತನದಿಂದ ಇರಿಸಿಕೊಂಡಿದ್ದ. ಆದರೆ ಆ ಬಡ್ಡಿಮಗ ಅವನ ಹೆಂಡತಿಯ ಮೇಲೆಯೆ ಕಣ್ಣು ಹಾಕಿದ್ದ. ಈಗ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಅವನ ದುಡ್ಡನ್ನೆಲ್ಲಾ ಬೆಂಕಿ ಹಚ್ಚಿ ಬರುತ್ತಾರೆ. ಅದಕ್ಕೆ ಓಡುತ್ತಿದ್ದಾರೆ. ಇಂಥ ಅಸಹ್ಯಗಳು ನಮ್ಮಲಿ ಯಾವಾಗ ಮುಗಿಯುತ್ತೋ’ ಎಂದು ನಿಟ್ಟುಸಿರಾದ. ಒಳಗೆ ಹೇಮನ್ ದೀಪಕ್ನನ್ನು ಮನಬಂದಂತೆ ಹೊಡೆಯುತ್ತಿದ್ದ. ಅವನ ಹೆಂಡತಿ ಬೇಡವೆಂದು ಚೀರುವ ಸದ್ದು ಕೇಳಿ, ಪೂರ್ಣ ಬಂದು ತಡೆದಳು. `ಅಯೋಗ್ಯ ಇವನು. ಮೊದಲೇ ಮಾತು ಬರೋದಿಲ್ಲ. ಹೇಳಿದ್ದು ಕೇಳಲ್ಲ. ಇವನಿಂದ ಯಾವ ಕೆಲಸವೂ ಆಗಲ್ಲ. ಶುದ್ಧ ನಾಲಾಯಕ್. ಇವನು ನಮ್ಮ ವಂಶದಲ್ಲಿ ಹುಟ್ಟಿರೋದೆ ಕಳಂಕ’ ಎಂದು ಹೇಮನ್ ಬೆಂಕಿಯುಗುಳುತ್ತಿದ್ದರೆ, ಅವನ ಹೆಂಡತಿ, `ನೋಡಮ್ಮ, ಅಪ್ಪನೆ ಈ ರೀತಿ ಬೈತಾನೆ. ಇವರಂತೆಯೇ ಓಣಿಯ ಉಳಿದವರೆಲ್ಲ ಇವನನ್ನು ಆಡಿಕೊಂಡು ಗೇಲಿ ಮಾಡುತ್ತಾರೆ. ಸುಮ್ಮನೆ ಇವನನ್ನು ಎಲ್ಲಾದರೂ ದೂರ ಕರೆದುಕೊಂಡು ಹೋಗು. ಅಲ್ಲಾದರೂ ಆರಾಮಾಗಿ ಇರಲಿ’ ಎಂದು ಪೂರ್ಣಳ ಹೆಗಲಿಗೊರಗಿ ಅಳಹತ್ತಿದಳು.

ದೀಪಕ್ ನನ್ನು ಅಪ್ಪಿ ಹಿಡಿದಿದ್ದ ಪೂರ್ಣಳ ಮನಸು ಆರ್ದ್ರಗೊಂಡಿತ್ತು. ತಂತಾನೆ ಜಿಜ್ಞಾಸೆಗಿಳಿಯಿತು. ನಾನಿಲ್ಲಿ ಬಂದ ಉದ್ದೇಶವಾದರೂ ಏನು? ಅದನ್ನು ಬಿಟ್ಟು ಬೇರೊಂದಕ್ಕೆ ನಾನು ಒಳಗಾಗಿದ್ದೇನೆ. ಒಂದಂತೂ ಸತ್ಯ – ಈ ಜೇನು ಬೇಟೆಯಂತೂ ನನ್ನಿಂದ ಸಾಧ್ಯವಿಲ್ಲ. ಇಷ್ಟಕ್ಕೂ ಪರ್ವಗಳನ್ನು ಏರಿ ಖುಷಿಯಿಂದ ಬೀಗುತ್ತೇವೆಂಬ ಭ್ರಮೆಯೆ ಬಾಲಿಶವೆನಿಸತೊಡಗಿತ್ತು. ನಾವು ಏರಿದ ಮಾತ್ರಕ್ಕೆ ಪರ್ವತ ಕಿರಿದಾಗುತ್ತದೆಯೆ ಅಥವ ನಾವು ದೊಡ್ಡವರಾಗುತ್ತೆವೆಯೆ? ಎವರೆಸ್ಟ್ ಏರಿಬಂದ ಗರ್ವ ನನ್ನಲ್ಲೆ ಒಂದು ಪರ್ವತವಾಗಿ ನಿಂತಿದೆ. ಅದನ್ನು ಏರಲು, ಮೆಟ್ಟಿ ನಿಲ್ಲಲು ಸಾಧ್ಯವಾಗಿಲ್ಲ. ನನ್ನಂತೆಯೆ ಬಹುಶಃ ಎಲ್ಲರಲ್ಲೂ ಅಹಮ್ಮಿನ, ಹೊಟ್ಟೆಕಿಚ್ಚಿನ, ದ್ವೇಷದ, ಲೋಭದ ಪರ್ವತಗಳು ಎಷ್ಟಿಲ್ಲ? ಅವನ್ನು ಮೆಟ್ಟಲಾಗದೆ ಒದ್ದಾಡುತ್ತಿಲ್ಲವೆ? ಜಗತ್ತಿನ ಮಹಾನುಭಾವರೆಲ್ಲ ಭೌತಿಕ ಪರ್ವತಗಳನ್ನು ಏರುವ ಗೋಜಿಗೆ ಹೋಗದೆ ಮಾನಸಿಕ ಪರ್ವತಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿಯೆ ತಪಸ್ಸು ಮಾಡುತ್ತಿದ್ದಿರಬೇಕು. ಇಲ್ಲದಿದ್ದರೆ ಎಲ್ಲರೂ ಇವತ್ತು ಎವರೆಸ್ಟ್ ಸುತ್ತವೆ ಮನೆ ಮಾಡಿಕೊಂಡು ಅದನ್ನು ದಿನವೂ ಏರುವ ಪ್ರಯತ್ನ ಮಾಡುತ್ತಿದ್ದರೇನೊ! ಮನುಷ್ಯರಲ್ಲಿ ಎಷ್ಟೇ ಹಮ್ಮು – ಬಿಮ್ಮುಗಳಿದ್ದರೂ ಅದರಡಿಯಲ್ಲಿ ಪ್ರೀತಿಯ ಜೇನು ಕಟ್ಟಿರುತ್ತದೆ. ಅದನ್ನು ಬಿಡಿಸಿ ತಿನ್ನಬೇಕು. ಅದನ್ನೇ ಎಲ್ಲರಿಗೂ ಹಂಚಬೇಕು. ಅದೇ ಸಾರ್ಥಕ್ಯವಲ್ಲೆ? ಹೌದು, ನಾನು ನಿಜವಾಗಿಯೂ ಏರಬೇಕಾದ ಪರ್ವತದ ಸ್ಪಷ್ಟತೆ ಈಗ ಗೋಚರಿಸುತ್ತಿದೆ. ಅದನ್ನು ಏರಬೇಕು. ಈ ವಿಷಯದಲ್ಲಿ ದಿವ್ಯಾನೆ ನನಗೆ ಗುರು.
ಅಂದು ಧೋ ಎಂದು ಸುರಿದ ಅಕಾಲಿಕ ಮಳೆಯಿಂದಾಗಿ ಬಿಜಯ್ ಬರಲಿಲ್ಲ. ಮರುದಿನ ಬರುವವನಿರಬೇಕು. ಆದರೆ ರಾತ್ರಿ ಮನೆಯ ಮುಂದೆ ದೊಡ್ಡ ಗಲಾಟೆಯೆ ಶುರುವಾಗಿತ್ತು. ವಿನ್ಸೆಂಟ್ ನನ್ನು ಸಾಯುವಂತೆ ಹೊಡೆದಿದ್ದಾನೆಂದು ಹೇಮನ್ ವಿರುದ್ಧ ಪೊಲೀಸಿನವರಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಆಗಿತ್ತು. ನಾಳೆ ಅವನು ಅರೆಸ್ಟ್ ಆಗುತ್ತಾನೆಂದು, ಹೇಮನ್ ಗೆ ಆಗದ ಗುಂಪೊಂದು ಸುಳ್ಳುಸುಳ್ಳೆ ಮನೆಯ ಮುಂದೆ ಗಲಾಟೆ ಶುರುಮಾಡಿತ್ತು. ಇದನ್ನು ಕೇಳುತ್ತಲೇ ಪೂರ್ಣಳಿಗೆ ಆತಂಕ ಶುರುವಾಯಿತು. ಪೊಲೀಸು ಬಂದರೆ ತನ್ನನ್ನೂ ವಿಚಾರಣೆಗೊಳಪಡಿಸಿ ಇಲ್ಲಿಂದ ಓಡಿಸಬಹುದು. ಅದಕ್ಕೂ ಮುಂಚೆಯೆ ಇಲ್ಲಿಂದ ಕಾಲ್ಕೀಳಬೇಕು ಎಂದು ಬೆಳಗಿನ ಜಾವವೇ ಅಲ್ಲಿಂದ ಹೊರಟಳು, ಯಾರಿಗೂ ಗೊತ್ತಾಗದಂತೆ. ಪಕ್ಕದಲ್ಲೇ ಮಲಗಿದ್ದ ದೀಪಕ್ ಎಚ್ಚರಗೊಂಡು ಅವಳನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಎಷ್ಟೋ ದೂರ ಹೋದ ಮೇಲೆ ಪೂರ್ಣ ಅವನನ್ನು ಕಂಡಳು. ಅವನಿಗೆ ವಾಪಸ್ ಮನೆಗೆ ಹೋಗು, ನಿನ್ನ ತಂದೆ ತಾಯಿ ಕಾಯ್ತಾ ಇರ್ತಾರೆ, ಇಲ್ದೆಹೋದ್ರೆ ಗಾಬರಿಯಾಗುತ್ತಾರೆ ಎಂದು ಎಷ್ಟೋ ಪರಿಪರಿಯಾಗಿ ಬೇಡಿಕೊಂಡಳು. ದೀಪಕ್ ಅದ್ಯಾವುದನ್ನೂ ಕೇಳಿಸಿಕೊಳ್ಳದೆ ಅವಳನ್ನು ತಬ್ಬಿಹಿಡಿದಿದ್ದ. ಬಹುಶಃ ಈ ಜೀವಕೂ ನನ್ನಂತೆ ಇಲ್ಲಿಂದ ಬಿಡುಗಡೆಯ ಬಯಕೆಯಾಗಿರಬೇಕು. ಆಯಿತು, ಮುಂದಿನದು ದೇವರಿಚ್ಛೆ ಎಂದು ಅವನ ಕೈ ಹಿಡಿದು ಹೆಜ್ಜೆ ಹಾಕತೊಡಗಿದಳು. ಅಲ್ಲಿಂದ ಲಾರಿಯೊಂದರಲ್ಲಿ ಹತ್ತಿ ಕಠ್ಮಂಡುವಿಗೆ ಬಂದು ಮನೆಯ ಹಾದಿ ಹಿಡಿದಳು.

ದೀಪಕ್ ಎದುರುಗಡೆಯ ಸೀಟಿನಲ್ಲಿ ಕಿಟಕಿಗೊರಗಿ ಹೊರಗೆ ಮುಖ ಮಾಡಿ ಕುಳಿತಿದ್ದ. ಮನಸು ನಿರಾಳವಾಗಿತ್ತು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್ ತೆಗೆದುಕೊಂಡು ಕಾಲ್ ಮಾಡಿದಳು, `ಹಲೋ ಅಪ್ಪಾ, ನಾನು ಪೂರ್ಣಾ…’ ಆ ಕಡೆಯಿಂದ ಬೈಗುಳಗಳ ಸುರಿಮಳೆ. `ಎಲ್ಲಿದ್ದೀಯ ನೀನು? ಎಷ್ಟು ಗಾಬರಿಯಾಗಿತ್ತು ಗೊತ್ತಾ ನಮಗೆಲ್ಲಾ? ನೀನು ಹೋದಾಗಿನಿಂದ ನಿಮ್ಮ ಚಿಕ್ಕಮ್ಮ ಸರಿಯಾಗಿ ಊಟ ಕೂಡ ಮಾಡಿಲ್ಲ. ಗಂಡಿನ ಕಡೆಯವರಿಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ. ನಿನ್ನ ವಿಷಯ ನಿನ್ನೆ ರಾತ್ರಿ ಬಿಜಯ್ ಅನ್ನೋನು ಫೋನ್ ಮಾಡಿ ಹೇಳಿದ. ಬೇಕಾದರೆ ನಾನೇ ಅಲ್ಲಿಗೆ ಬರ್ತೀನಿ ಹೇಳು, ಎಲ್ಲಿದ್ದೀಯಾ…’ ರೈಲು ಮುಂದೆ ಓಡುತ್ತಿತ್ತು. ಅಪ್ಪನ ಮಾತುಗಳು ಗಾಳಿಗೆ ಹಿಂದೆ ಹೋಗುತ್ತಿದ್ದವು. ಯಾವೂ ಕಿವಿಗೆ ಬೀಳುತ್ತಿರಲಿಲ್ಲ. ಅಪ್ಪನ ಅವೇ ಮದುವೆಯ ಮಾತು, ಚಿಕ್ಕಮ್ಮನ ಮಾತು ಮುಂದುವರೆಯುತ್ತಲೇ ಇತ್ತು. ಪೂರ್ಣಾ ದೀಪಕ್ ನ ಕಣ್ಣುಗಳನ್ನೇ ನೋಡುತ್ತಿದ್ದಳು. ಅಲ್ಲಿ ಏನನ್ನೋ ಓದುತ್ತ ಸಾಗಿದ್ದಳು.

ಅವನ ಕಣ್ಣೂ ಅದನೆ ಹೇಳಿದವು.
ತುಟಿಯಗಲಿಸಿ ತೃಪ್ತಿಯಿಂದ ನಕ್ಕಳು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಆನಂದ್ ಕುಂಚನೂರ

ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಇವರ ಊರು. ಓದಿದ್ದು ಎಮ್. ಫಾರ್ಮಸಿ. ಸದ್ಯ ಬೆಂಗಳೂರಿನ ಖಾಸಗಿ ಔಷಧಿ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ. ಪ್ರಕಟಿತ ಕೃತಿಗಳು: ಕರಿನೆಲ (ಕವನ ಸಂಕಲನ), ವ್ಯೋಮ ತಂಬೂರಿ ನಾದ (ಕವನ ಸಂಕಲನ) ಮತ್ತು ಪಾದಗಟ್ಟಿ (ಕಥಾ ಸಂಕಲನ).

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ