ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು…
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕಾದಂಬರಿ “ಕರ್ವಾಲೋ”ದ ಮರು ಓದು, ದೇವಿಕಾ ನಾಗೇಶ್ ಬರಹ
“ನಾವು ಮೌನದ ಭಾಷೆ ಅರ್ಥ ಮಾಡಿಕೊಳ್ಳದಿದ್ದರೆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸೆನ್ಸಿಬಿಲಿಟಿ ಹೋಗಿ ಬಿಡುತ್ತದೆ” ಪೂರ್ಣಚಂದ್ರ ತೇಜಸ್ವಿಯವರ ಮಾತಿದು. ಸರಕಾರಿ ಉದ್ಯೋಗ ಪಡೆದು ನಿಶ್ಚಿಂತೆಯ ಬದುಕು ನಡೆಸಬಹುದಾದ ಸಾಧ್ಯತೆ ಅವಕಾಶಗಳು ಕಾಲಬುಡದಲ್ಲಿ ಇದ್ದರೂ ಕಾಡಿನ ಜೊತೆ ನಂಟು ಬೆಸೆದುಕೊಂಡು ಜೀವನೋಪಾಯಕ್ಕೆ ಮೂಡಿಗೆರೆಯಲ್ಲಿ ಕಾಫಿ ತೋಟ, ಗದ್ದೆ ಬೇಸಾಯ ಮಾಡಿದವರು ಪೂಚಂತೇ. ಆ ಕಾಲಕ್ಕೂ ಇವತ್ತಿಗೂ ನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ… ಹಲವು ವರ್ಷಗಳೇ ಸಂದಿವೆ. ಆಗ ಹರೆಯದವರಾಗಿದ್ದ ನಮ್ಮ ಕೂದಲೂ ಹಣ್ಣಾಗುತ್ತಿದೆ. ಕಾಫಿ ತೋಟಗಳು ರೆಸೋರ್ಟ್‌ಗಳಾಗಿ ಪರಿವರ್ತನೆ ಆಗುತ್ತಿರುವ ಹೊತ್ತಿದು. ಆಧುನಿಕತೆಗೆ ತೆರೆದುಕೊಂಡರೆ ಹೇಗೆಲ್ಲ ಹಣ ಮಾಡಬಹುದು ಎಂಬ ಭ್ರಮೆ ಮಲೆನಾಡಿನ ಉದ್ದಗಲ ತುಂಬಿಕೊಂಡಿದೆ. ಮಲೆನಾಡಿನಲ್ಲಿ ಹುಟ್ಟಿದ ನನಗೆ ಕಾಡು ಬೆಟ್ಟಗಳ ಜೊತೆ ಜೀವ ಭಾವದ ಸಂಬಂಧ. ಈಗ ಪ್ರತಿ ಸಲ ಮಲೆನಾಡಿಗೆ ಹೋದಾಗ ಒಂದಷ್ಟು ದುಗುಡಗಳನ್ನು ಹೊತ್ತು ಹಿಂತಿರುಗುತ್ತೇನೆ.
ಇಲ್ಲೂ ರಸ್ತೆಯಲ್ಲಿ, ತೋಟ ಗದ್ದೆಗಳಲ್ಲಿ ನಗರವನ್ನೂ ಮೀರಿಸುವಂತೆ ಪ್ಲಾಸ್ಟಿಕ್, ಬಾಟ್ಲಿ, ಶರಾಬು, ಪಾನ್ ಪರಾಗ್ ಪ್ಯಾಕೇಟ್‌ಗಳನ್ನು ನೋಡುವಾಗ ನಮ್ಮ ಮಕ್ಕಳು ವಿದ್ಯೆ ಕಲಿತರು ವಿದ್ಯಾವಂತರಾಗಲಿಲ್ಲ ಎನ್ನುವ ವಿಷಾದ ಕಾಡುತ್ತದೆ. ಮೂಲಭೂತ ಸೌಕರ್ಯಗಳ ಸಂದರ್ಭದಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಹಳ್ಳಿ ಪಟ್ಟಣಗಳನ್ನು ಜೋಡಿಸುವ ವಾಹನ ಸೌಕರ್ಯಗಳು ಹೆಚ್ಚಾಗಿವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳು ಹಳ್ಳಿಯ ಮೂಲೆ ಮೂಲೆಗಳಿಗೂ ದಾಪುಗಾಲು ಇಡುತ್ತಿದೆ. ಅನುಕೂಲತೆಗಳು ಹೆಚ್ಚಾದಂತೆ ಅಡ್ಡ ಮಾರ್ಗಗಳು, ಸುಲಭ ಹಣ ಗಳಿಕೆಯತ್ತ ಜನ ಆಕರ್ಷಿತರಾಗುತ್ತಿರುವುದು ಇಲ್ಲೂ ಕಾಣಿಸುತ್ತಿದೆ. ಆದರೂ ಕನಸು ಕಾಣುವುದು ತಪ್ಪಲ್ಲ ತಾನೇ. ಮಲೆನಾಡಿನ ಆ ನೆಲದ ಬಗ್ಗೆ ನನ್ನಲ್ಲಿ ಇನ್ನೂ ನಿರೀಕ್ಷೆ ಭರವಸೆಗಳಿವೆ.
ಆಗ ಹಿಂದೆ ಓದಿ ಮರೆತಿದ್ದ “ಕರ್ವಾಲೊ” ಕಾದಂಬರಿ ಅಚಾನಕ್ಕಾಗಿ ಕಥಾ ಪರಂಪರೆ ವಾಟ್ಸ್ ಆಪ್ ಗ್ರೂಪಿನಲ್ಲಿ ಪಿಡಿಎಫ್ ರೂಪದಲ್ಲಿ ನನಗೆ ಸಿಕ್ಕಿತು. ಪುಸ್ತಕದ ರೂಪದಲ್ಲಿ ಓದುವ ಸಂಭ್ರಮ ಸುಖ ಇಲ್ಲಿ ದಕ್ಕುವುದಿಲ್ಲನಿಜ. ಆದರೆ ಈ ಕೃತಿಯ ಮರು ಓದು ಆಗ ನಾನಿದ್ದ ಮನಸ್ಥಿತಿಯಲ್ಲಿ ತಾಯಿ ಮಡಿಲಿನ ಸಾಂತ್ವನದ ಹಾಗೆ ತಟ್ಟಿ ಮೈದಡವಿತು.
ಮೂಡಿಗೆರೆಗೆ ಹತ್ತಿರದ ಹೇಮಾವತಿ ನದಿ ದಡದ ಊರು ಹೊಸಳ್ಳಿ. ಇಲ್ಲಿ ನಮ್ಮ ತಂದೆ ಕಾಡು ಕಡೆದು ಮಾಡಿದ ನಮ್ಮ ಪುಟ್ಟ ಕಾಫಿ ತೋಟವಿದೆ. ನಗರವಾಸಿಗಳಾದ ನಾವು ಈಗಲೂ ಭಾವನಾತ್ಮಕವಾಗಿ ಬೆಸೆದುಕೊಂಡ ಊರು ಇದು. ಅಮ್ಮ ಮತ್ತು ಆರು ಜನ ಒಡಹುಟ್ಟಿದವರಿರುವ ನಮ್ಮನ್ನು ಕರುಳ ಬಳ್ಳಿಯಾಗಿ ಜೋಡಿಸುವ ನೆಲೆ ಕೂಡ ಇದು ಎಂದು ನಾವು ಈ ನೆಲೆಯ ಬಗ್ಗೆ ಆಡಿಕೊಳ್ಳುತ್ತಿರುತ್ತೇವೆ. ಸಕಾರಣವಾಗಿ ಈ ಕಡೆ ಹೋದಾಗಲೆಲ್ಲ ಮೂಡಿಗೆರೆಯ ರಸ್ತೆಯಲ್ಲಿ ತಿರುಗಾಡುವ ಅವಕಾಶ ವಾಗುತ್ತದೆ. ಆಗ ಪೂರ್ಣಚಂದ್ರ ತೇಜಸ್ವಿಯವರ ತೋಟ “ನಿರುತ್ತರ” ದ ಗೇಟು ಕಣ್ಣಿಗೆ ಬೀಳುತ್ತದೆ. ಅದನ್ನು ಬೆರಗುಗಣ್ಣಿನಿಂದ ನೋಡುತ್ತಾ ಆಗಾಗ್ಗೆ ಅವರ ಬರಹಗಳನ್ನು ಅದೇ ವಿಸ್ಮಯದಿಂದ ಓದುತ್ತಾ ಬೆಳೆದವರು ನಾವು. ಆದರೆ ಯಾವತ್ತೂ ಅವರ ಮನೆ ಇರುವ ನಿರುತ್ತರದ ಗೇಟು ಪ್ರವೇಶಿಸಿ ಅವರನ್ನು ಭೇಟಿಯಾಗಿಲ್ಲ. ಜೀವಂತ ಇರುವಾಗಲೇ ನಿಗೂಢವಾಗಿ ಬದುಕಿದ, ದಂತಕತೆಯಾದ ಅವರನ್ನು ಆಗ ಭೇಟಿಯಾಗಲು ಒಂದು ರೀತಿಯ ಭಯ ಸಂಕೋಚ ಕಾಡುತ್ತಿತ್ತು. ಆದರೆ “ಕರ್ವಾಲೋ” ಓದಿದ ನಂತರ ಅವರ ಬಗ್ಗೆ ಬರೆಯದೇ ಇರುವುದು ಸಾಧ್ಯವೇ ಇಲ್ಲ ಅನ್ನಿಸುವ ಮಟ್ಟಿಗೆ ಅವರು ಕಾಡುತ್ತಿದ್ದಾರೆ.
ಮಲೆನಾಡಿನ ಹೆಚ್ಚಿನ ಮನೆಗಳನ್ನು ಮರಳು ಗಣಿಗಾರಿಕೆ, ಟಿಂಬರ್ ವ್ಯಾಪಾರ, ಹೊಲಸು ರಾಜಕಾರಣ, ಸಾರಾಯಿ ಮಾರಾಟ ಇದರ ಅಮಲು ಇನ್ನಿಲ್ಲದಂತೆ ಭಾದಿಸುತ್ತಿದೆ. ಇಲ್ಲಿರುವ ಹೆಚ್ಚಿನ ಹಿರಿಯರು, ಪುಟ್ಟ ಮಕ್ಕಳು ಗಂಡು ಹೆಣ್ಣು ಎನ್ನುವ ಭೇದವಿಲ್ಲದಂತೆ ಆರೋಗ್ಯವಂತ ಸಮಾಜದ ಪರಿಕಲ್ಪನೆಗಳಿಲ್ಲದೆ ಈ ಅಮಲಿಗೆ ಬಲಿ ಪಶುಗಳಾಗುತ್ತಿದ್ದಾರೆ. ಆಗ ನೆನಪಾಗುತ್ತಾರೆ ಮತ್ತೆ ಪೂಚಂತೇ.
ಮೂವತ್ತೆರಡು ಅಧ್ಯಾಯಗಳಿರುವ “ಕರ್ವಾಲೋ” ಕಾದಂಬರಿಯಲ್ಲಿ ಅವರು ಮೂಡಿಗೆರೆಯಲ್ಲಿ ಇದ್ದುಕೊಂಡು ಕಟ್ಟಿಕೊಂಡ ಜಗತ್ತಿನ ಸಂಕ್ಷಿಪ್ತ ಚಿತ್ರಣ ಇದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳಾದ ಪ್ರಭಾಕರ, ಮಂದಣ್ಣ, ಪ್ಯಾರ, ಬಿರಿಯಾನಿ ಕರಿಯಪ್ಪ ನಂತಹವರು ಅಲ್ಲೊಂದು ಇಲ್ಲೊಂದು ಎನ್ನುವಂತೆ ಮಲೆನಾಡಿನಲ್ಲಿ ಈಗಲೂ ಇದ್ದಾರೆ. ಆದರೆ ಅವರನ್ನು ಶರಾಬು ಎನ್ನುವ ಅಮಲು ಚಿಕ್ಕಪ್ರಾಯದಲ್ಲಿ ಬಲಿ ತೆಗೆದುಕೊಳ್ಳುತ್ತಿದೆ. ಪ್ರಜ್ಞಾವಂತರು ಅನ್ನಿಸಿಕೊಂಡವರು ದ್ವೀಪಗಳಂತೆ ಬದುಕುತ್ತಿರುವ ಈ ಊರಿನಲ್ಲಿ ಜಾತಿ, ವರ್ಗ, ಧರ್ಮ, ಲಿಂಗರಹಿತ ಪ್ರೀತಿ, ಸಮಾನತೆಯ ಬೆಳಕು ಹರಡಬೇಕು. ಮಾನವ ಪ್ರೀತಿಯಿಂದ ಇವರನ್ನು ಸಲಹುವಂತಹ ಕರ್ವಾಲೋ ಅಂತಹ ಅಪರೂಪದ ಸಂತರು ಇರಬೇಕು ಎಂದು ಯಾವಾಗಲೂ ಅನ್ನಿಸೋದಿದೆ. ಆದರೆ ಅವರಂತಹವರನ್ನು ನಕ್ಸಲ್ ಗಳೆಂದು ಲೇಬಲ್ ಹಚ್ಚಿ ಮಣ್ಣುಮುಕ್ಕಿಸುವ ಮಂದಿ ಅಂದಿನಂತೆ ಇಂದೂ ಇದ್ದಾರೆ. ಇವರಿಗೆ ಸಡ್ಡು ಹೊಡೆದು ನಿಲ್ಲುವಂತಹ ಸ್ಥಿತಪ್ರಜ್ಞರು, ಸಮತೂಕದ ಸರಳ ವ್ಯಕ್ತಿತ್ವ ಗಳು ಸುಲಭ ಲಭ್ಯವಿದೆಯೇ ಎನ್ನುವುದು ಈಗ ನಮ್ಮ ಎದುರು ಕಾಡುವ ಪ್ರಶ್ನೆ.

(ಪೂರ್ಣಚಂದ್ರ ತೇಜಸ್ವಿ)
ಕರ್ವಾಲೋ ಸೇರಿದಂತೆ ಈ ಕಾದಂಬರಿಯಲ್ಲಿಬರುವ ನಾಯಿ ಕಿವಿ ಹಾಗೂ ಎಲ್ಲ ಪಾತ್ರಗಳು ಕಣ್ಣೆದುರು ಚಲನೆಯ ವೇಗ ಪಡೆದುಕೊಳ್ಳುವುದಕ್ಕೆ ಪೂರ್ವ ಪೀಠಿಕೆಯಂತೆ ಕಥೆ ಶುರು ಆಗೋದು ಲೇಖಕರು ಜೇನುತುಪ್ಪ ಕೊಳ್ಳಲು ಮೂಡಿಗೆರೆ ಜೇನು ಸೊಸೈಟಿಗೆ ಹೋದಾಗ. ಅಲ್ಲಿ ಅವರಿಗೆ ಪರಿಚಯವಾದವರು ಮಂದಣ್ಣ ಮತ್ತು ಲಕ್ಷ್ಮಣ. ಅಲ್ಲಿ ಲಕ್ಷ್ಮಣ ಮಂದಣ್ಣನನ್ನು ಬಿ ಮ್ಯಾನ್ ಎಂದು ಪರಿಚಯಿಸಿದ್ದ. ಪೂಚಂತೇಗೆ ಎರಡು ಬಾಟ್ಲಿ ಜೇನುತುಪ್ಪ ಕೊಳ್ಳುವ ಉದ್ದೇಶವಿತ್ತು. ಆದರೆ ಮಲೆನಾಡಿನಲ್ಲಿ ಎಂಟು ವರ್ಷಕ್ಕೆ ಒಮ್ಮೆ ಬಿಡುವ ಗುರಗಿ ಹೂ ಈ ಸಲ ಹೂ ಬಿಟ್ಟಿರುವುದರಿಂದ ಜೇನು ಅವಿಷ್ಕಾರ ಹೆಚ್ಚಾಗಿದೆ. ಸೊಸೈಟಿಯಲ್ಲಿ ದಾಸ್ತಾನು ಸಾಕಷ್ಟಿರುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಗೆ ತುಪ್ಪ ಲಭ್ಯವಿದೆ ಎಂದು ಹೇಳಿ ಮಂದಣ್ಣ ಲೇಖಕರು ಕೊಳ್ಳಲಿರುವ ಜೇನು ತುಪ್ಪದ ಬಾಟಲುಗಳ ಬೆಲೆಗೆ ಅಂದರೆ 78ರೂಪಾಯಿಗೆ ಬಹುಕಾಲ ಬಾಳಿಕೆ ಬರುವ ಗುರಗಿ ಹೂವಿನ ಜೇನುತುಪ್ಪ ಒಂದು ದೊಡ್ಡ ಡಬ್ಬ ಕೊಡುವುದಾಗಿ ಹೇಳಿದ. ವ್ಯಾಪಾರಸ್ಥರು ಕಲಬೆರಕೆ ಮಾಲುಗಳನ್ನು ಗ್ರಾಹಕರಿಗೆ ಮಾರುವುದು ತಿಳಿದಿದ್ದ ಲೇಖಕರಿಗೆ ಇದರಿಂದ ಸಂದೇಹ ಬಂದರೂ ಜೇನು ತುಪ್ಪದ ಡಬ್ಬವನ್ನು ಕೊಂಡರು. ಈ ಪ್ರಕರಣದಿಂದ ಲೇಖಕರಿಗೆ ಮಂದಣ್ಣನ ಸ್ನೇಹವಾಗಿ ಜೇನು ಹುಟ್ಟಿಗೆ ಹೆದರುತ್ತಿದ್ದವರು ಮಲೆನಾಡಿನ ಜೇನುಸಾಕಣೆಯ ಹಳೆಮಾದರಿ ಮಡಿಕೆಯಲ್ಲಿ ಜೇನು ವಿಧಾನ ಅರಿತರು. ಜೇನು ಸಾಕುವ ವಿವಿಧ ಪ್ರಭೇದಗಳನ್ನು ತಿಳಿದುಕೊಂಡರು. ಮಂದಣ್ಣ ಕೆಲವು ಜೇನು ಪೆಟ್ಟಿಗೆ ಇವರ ತೋಟದಲ್ಲೂ ಇಟ್ಟ.
ಒಮ್ಮೆ ಲೇಖಕರ ಭತ್ತದ ಪೈರಿಗೆ ಹತ್ತಿದ ಕೀಟ ಬಾಧೆ ಶುರುವಾಯಿತು. ಇದರ ನಿವಾರಣೆಯ ಉಪಾಯ ಅರಿತು ಮುದ್ದಿನ ಮಾಹಿತಿಗೆ ಮೂಡಿಗೆರೆ ಕೃಷಿ ಸಂಶೋಧನ ಕೇಂದ್ರಕ್ಕೆ ಲೇಖಕರು ಹೋದಾಗ ಕರ್ವಾಲೋ ಎಂಬ ವಿಜ್ಞಾನಿಯ ಪರಿಚಯವಾಯಿತು. ನಂತರ ಇದು ಸ್ನೇಹವಾಗಿ ಪದೋನ್ನತಿ ಪಡೆಯಿತು.
ಕರ್ವಾಲೋ ಹಾಗೂ ಮಂದಣ್ಣನ ಪರಿಚಯಕ್ಕೆ ಮುನ್ನ ನಿರೂಪಕರು ಕಾಡು ಕಡಿದು ತೋಟ ಮಾಡ ಹೋಗಿ ಒಂದು ರೀತಿ ಭ್ರಮಾನಿರಶನಗೊಂಡ ಮನ ಸ್ಥಿತಿಯಲ್ಲಿದ್ದರು. “ಈ ಕಾಡಿನಲ್ಲಿ ತೋಟ ಮಾಡಿ ಕೈಸುಟ್ಟುಕೊಂಡೆ, ಮಾರಿ ಇಲ್ಲಿಂದ ತೊಲಗಿ ಬಿಡಬೇಕು” ಎಂಬ ಭಾವದಲ್ಲಿ ತೊಳಲುತ್ತಿದ್ದ ಇವರಿಗೆ ಮೂಡಿಗೆರೆಯಲ್ಲೇ ಇದ್ದು ಪ್ರಕೃತಿಯೊಂದಿಗೆ ಒಡನಾಡುತ್ತ ಅರ್ಥಪೂರ್ಣ ಬದುಕು ನಡೆಸಲು ಸ್ಫೂರ್ತಿ ಆದವರು ಕರ್ವಾಲೋ. “ನನಗೆ ನನ್ನ ಸುತ್ತಲಿನ ಪರಿಸರ, ಜನ ಕಾನೂನು, ಪೊಲೀಸರು ಇವರೆಲ್ಲ ಎಂತಹ ಜಡತ್ವವನ್ನು ತಮಸ್ಸನ್ನು ಉಂಟು ಮಾಡಿದ್ದರೆಂದರೆ ಇವುಗಳಿಂದ ಮುಕ್ತನಾಗಲು ಅದು ಭ್ರಮೆಯಾದರೂ ಸರಿ ಕರ್ವಾಲೋರನ್ನು ಹಿಂಬಾಲಿಸಲು ತಯಾರಿದ್ದೆ” ಪೂಚಂತೇ ಮಾತುಗಳಿವು.
ಮಲೆನಾಡಿನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಲೇಖಕರಿಗೆ ಅಲ್ಲಿನ ಪ್ರಾಕೃತಿಕ ಸೊಬಗು ಮೂಲಧಾತುವಾದರೂ ಅವರು ನಂತರದಲ್ಲಿ ಅಲ್ಲಿ ಕಟ್ಟಿಕೊಂಡ ಜಗತ್ತು ಚೇತೋಹಾರಿಯಾದದ್ದು.
ತಾಯಿಯ ಹೊರತಾಗಿ ಬೇರೆ ನೇರ ಸಂಬಂಧಿಗಳು ಇಲ್ಲದ ಮಂದಣ್ಣನಿಗೆ ಮದುವೆ ಆಗಬೇಕು ಎನ್ನುವ ಅಭಿಲಾಷೆ ಹುಚ್ಚಾಗಿ ಪರಿವರ್ತನೆ ಆಗುವ ಸ್ಥಿತಿಯಲ್ಲಿದ್ದಾಗ ಅನಿವಾರ್ಯವಾಗಿ ಲೇಖಕರು ಮದುವೆ ದಲ್ಲಾಳಿಯಾಗುತ್ತಾರೆ. ಲಕ್ಷ್ಮಣ ತಂದೆಯ ಸ್ಥಾನದಲ್ಲಿ ನಿಲ್ಲುತ್ತಾನೆ. ಫೋಟೋಗ್ರಾಫರ್ ಪ್ರಭಾಕರ ಈ ಇಡೀ ಪ್ರಸಂಗ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನಡೆಯುವುದಕ್ಕೆ ಕಾರಣವಾಗುತ್ತಾನೆ. ಲೇಖಕರು ಮತ್ತು ಕರ್ವಾಲೋ ಮದುವೆ ಗಂಡಿನ ಪೋಷಕರಾಗಿ ಇಡೀ ವಾತಾವರಣವನ್ನು ಸಂಭಾಳಿಸುತ್ತಾರೆ.
“ಹುಳುಹುಪ್ಪಟೆ ಹಿಡಿದುಕೊಂಡು ಓಡಾಡುವ ಕಿರಾತಕ ಮಂದಣ್ಣ ಇವನ ಬಗ್ಗೆ ಯಾಕಪ್ಪ ಈ ದೊಡ್ಡವರಿಗೆಲ್ಲ ಇಷ್ಟೊಂದು ಉಸಾಬರಿ” ಮಂದಣ್ಣನ ಬಗ್ಗೆ ಊರು ಮಂದಿಗೆ ಇದ್ದ ಸಾಮಾನ್ಯ ಅಭಿಪ್ರಾಯ. ಮಂದಣ್ಣನನ್ನು ವಿಜ್ಞಾನಿ ಕರ್ವಾಲೋ ತಮ್ಮ ಶಿಷ್ಯನಾಗಿ ಸ್ವೀಕರಿಸಲು ಕಾರಣವಿತ್ತು. ಆದರೆ ಇವರ ಈ ಸ್ನೇಹವನ್ನು ಹೋಮೋ ಸೆಕ್ಸ್ ಜೋಡಿ ಇರಬಹುದು ಎಂದು ಸಂದೇಹ ಪಡುವವರು ಆ ಊರಿನಲ್ಲಿ ಇದ್ದರು. ತಮ್ಮ ಅಡ್ಡ ವ್ಯವಹಾರಗಳ ಅನುಕೂಲಕ್ಕೆ ಆಗದ ಸರಕಾರಿ ಅಧಿಕಾರಿಯಾಗಿದ್ದ ಕರ್ವಾಲೋ ಇವರಿಗೆ ನಕ್ಸಲ್ ಆಗಿಯೂ ಕಾಣುತ್ತಾರೆ. ನಮ್ಮ ದೃಷ್ಟಿಗೆ ಭಿನ್ನವಾದ ಲೋಕ ದೃಷ್ಟಿ ಒಂದು ಇದೆ. ಅದು ನಮ್ಮನ್ನು ತಪ್ಪಿಲ್ಲದೆಯೂ ಕೆಲವೊಮ್ಮೆ ಕಟ-ಕಟೆಗೆ ಏರಿಸುತ್ತದೆ ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಕಾದಂಬರಿಯಲ್ಲಿ ಬರುವ ಮಂದಣ್ಣನ ಕಳ್ಳಭಟ್ಟಿ ಸಾರಾಯಿ ಪ್ರಕರಣ. ನಿರಪರಾಧಿಯಾದ ಮಂದಣ್ಣನನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ, ಅಪರಾಧ ಮುಕ್ತನನ್ನಾಗಿಸುವುದಕ್ಕೆ ಕರ್ವಾಲೋ, ಲೇಖಕರು, ಪ್ರಭಾಕರ ನಡೆಸುವ ಪ್ರಾಮಾಣಿಕ ಪ್ರಯತ್ನಕ್ಕೆ ಅಡ್ಡಗಾಲು ಹಾಕುವವರೂ ಆ ಹಳ್ಳಿಯಲ್ಲಿ ಬಹಳಷ್ಟು ಇದ್ದರು.
“…ಗ್ರಾಫಿಕ್ ಫೋಟೋಗ್ರಾಫಿ ಅಂತ ಹೊಸ ರೀತಿಯ ಕೆಲಸಾನೇ ಕಲಿಸಿಕೊಟ್ರು ಸರ್. ಈಗಿಂದ ಈಗಲೇ ನಾನೇನಾದರೂ ಬಟ್ಟೆ ಗಿರಣಿಯ ಉದ್ಯಮಕ್ಕೆ ಹೋದರೆ ನನಗೆ ತಿಳಿದಿರುವ ಗ್ರಾಫಿಕ್ ವಿದ್ಯೆಯಿಂದ ನೂರಾರು ರೂಪಾಯಿ ದುಡಿಯ ಬಲ್ಲೆ ಸರ್. ಆದರೆ ಕರ್ವಾಲೋರನ್ನು ಬಿಟ್ಟು ಹೋಗೋಕೆ ಮನಸ್ಸು ಬರೋಲ್ಲ ಸರ್. ಅವರ ಜೊತೆ ಇದ್ದರೆ ದಿನ ದಿನಕ್ಕೂ ನಮ್ಮ ಬುದ್ಧಿ ವಿದ್ಯೆ ಬೆಳೆಯುತ್ತ ಹೋಗುತ್ತೆ ಸರ್” ಕರ್ವಾಲೋ ಬಗ್ಗೆ ಪ್ರಭಾಕರನ ಮಾತಿದು.
ಮಂದಣ್ಣ ಸಿಕ್ಕಿಬಿದ್ದ ಕಳ್ಳ ಬಟ್ಟಿ ಸಾರಾಯಿ ಕೇಸಿಗೆ ಕರ್ವಾಲೋ ಅವರ ಸಹಾಯ ಪಡೆಯುವುದು ಬೇಡ; ಅವರಿಗೆ ತೊಂದರೆ ಆಗುತ್ತದೆ ಎನ್ನುವ ಕಾಳಜಿ ಪ್ರಭಾಕರನದ್ದು. ಅವನನ್ನು ಬಿಡಿಸಿಕೊಳ್ಳಲು ಅಗತ್ಯ ಬಿದ್ದರೆ ಕೋರ್ಟಿಗೆ ಸಾಕ್ಷಿ ಹೇಳಲು ತಾನು ಬರುವೆನೆಂದು ಹೇಳಿದ ಕರ್ವಾಲೋ ಹಳ್ಳಿಗಮಾರ ಮಂದಣ್ಣನನ್ನು ಒಳಗೊಂಡಂತೆ ಭೂಮಿಯಲ್ಲಿರುವ ಜೀವ ಜಂತುಗಳೆಲ್ಲ ಸಮಾನ ಎಂದು ಭಾವಿಸಿದ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಮಾನವೀಯತೆಯೇ ಮೈವೆತ್ತಸರಳ ಸಂತ. ಎನ್ನುವುದು ಲೇಖಕರಿಗೆ ಮತ್ತು ಪ್ರಭಾಕರನಿಗೆ ಈ ಹಿಂದೆಯೂ ಹಂತ ಹಂತವಾಗಿ ಮನದಟ್ಟಾಗಿತ್ತು. ಆದರೂ ಈ ಹಗರಣದಲ್ಲಿ ಅವರನ್ನು ಸಿಕ್ಕಿಸಲು ಹಿಂದೆ ಮುಂದೆ ನೋಡಿದ್ದ ಪ್ರಭಾಕರ. ಇದು ತಿಳಿದ ಕರ್ವಾಲೋ “ನಾನ್ಸೆನ್ಸ್, ನನ್ನ ಹತ್ತಿರ ಶಿಷ್ಯ ವೃತ್ತಿ ಮಾಡಿ ನೀನು ತರಬೇತಾಗಿರೋದು ಇಷ್ಟೇನೋ ಪ್ರಭಾಕರ… ನಾನು ಪ್ರೊಫೆಸರ್, ಮಂದಣ್ಣ ಹಳ್ಳಿ ಗಮಾರ. ಇವೆಲ್ಲ ಹೆಬ್ಬೆಟ್ಟು ನಿಜ ಅಂತ ತಿಳಿದರೆ ಏನಪ್ಪ ಕಲಿತಂತೆ ಆಯ್ತು. ಇದರಲ್ಲಿ ನಿನ್ನ ಆಯುಷ್ಯ ಮುಗಿದು ಹೋಗುತ್ತೆ ಸತ್ಯದ ಕಿಂಚಿತ್ ದರ್ಶನವೂ ಆಗಲ್ಲ. ಈ ಮಾಯೆಯೆಲ್ಲ ಮೀರಬೇಕು ನಾವು. ಆಗಲೇ ನಮಗೆ ಬೇರೆ ಬೇರೆ ಜಗತ್ತು ಪ್ರಪಂಚ ಕಾಣುತ್ತದೆ” ಎಂದು ಹೇಳುತ್ತಾರೆ. ಮಂದಣ್ಣನನ್ನು ಅದ್ಭುತ ಪ್ರಕೃತಿ ಶಾಸ್ತ್ರಜ್ಞ ಎಂದು ಕರ್ವಾಲೋ ಗುರುತಿಸಿದ್ದರು.
ಮಲೆನಾಡಿನ ದಟ್ಟ ಕಾಡಿನಲ್ಲಿ ಹಾರೋ ಓತಿ ಕ್ಯಾತನನ್ನು ಕಂಡಿರುವುದಾಗಿ ಮಂದಣ್ಣ ನೀಡಿದ ಮಾಹಿತಿಯನ್ನು ಅನುಸರಿಸಿ ಬೇರೆ ದೇಶಗಳ ವಿಜ್ಞಾನಿಗಳ ಜೊತೆ ಸಂಪರ್ಕದಲ್ಲಿದ್ದ ಕರ್ವಾಲೋ ಇದರದೇ ತಳಿ ಪ್ರಭೇದ ಒಂದು ನ್ಯೂಜಿಲ್ಯಾಂಡ್‌ನಲ್ಲಿ ಪತ್ತೆಯಾಗಿದೆ ಎನ್ನುವ ಸಂಗತಿ ತೆರೆದಿಟ್ಟರು. ಇಲ್ಲಿ ಮಂದಣ್ಣ ಗುರುತಿಸಿರುವ ಹಾರೋಓತಿ ಕ್ಯಾತ ನಾಮಾವಶೇಷ ಆಗಿದೆ ಎಂದು ಇಡೀ ಜಗತ್ತು ಭಾವಿಸಿತ್ತು. ಮತ್ತು ಇದು ಡೈನೋಸರ್ ಯುಗಕ್ಕಿಂತಲೂ ಪ್ರಾಚೀನವಾದ ಪ್ರಾಣಿ ಪ್ರಭೇದ ಆಗಿದ್ದೂ ಇದರ ಕಾಲ ಯಾವುದಿರಬಹುದು ಎಂದು ತಿಳಿಯಲು ಈಗಿರುವ ಹೊಸ ಹೊಸ ಕಾಲಮಾಪನ ಯಂತ್ರ ವಿಜ್ಞಾನ ತಂತ್ರಜ್ಞಾನವೂ ಸೋತಿದೆ. ಅಮೇರಿಕಾದ ಹಲವು ಜೀವ ವಿಜ್ಞಾನಿಗಳು ಮತ್ತು ಜೇವೊಸ್ಕಿ ಸೇರಿ ಆರರ ಮುಂದೆ ಒಂಬತ್ತು ಸೊನ್ನೆ ಸೇರಿಸಿ ಇಷ್ಟು ಇರಬಹುದು ಎಂದು ಒಂದು ಕಾಲಮಾನ ಅಂದಾಜಿಸಿದ್ದಾರೆ. ಆದರೂ ನಿಖರ ಯಾವುದು ಎನ್ನುವುದು ಈಗಲೇ ಹೇಳಲಾಗದು ಎನ್ನುವುದು ವಿಜ್ಞಾನಿ ಕರ್ವಾಲೋ ಅಭಿಪ್ರಾಯ. ಚರಿತ್ರಾಪೂರ್ವ ಪ್ರಾಚೀನ ಯುಗಗಳಿಗೆ ಸೇರಿದ ಈ ಜೀವಿಗಳು ಬೃಹದಾಕಾರವಾಗಿ ಬೆಳೆದು ಭೂ ಮಂಡಲದಲ್ಲಿ ವ್ಯಾಪಕವಾಗಿ ಒಂದು ಕಾಲದಲ್ಲಿ ಬದುಕುತ್ತಿತ್ತು. ಕಾಲ ಕ್ರಮೇಣ ಹಿಮ ಪಾತ, ಪ್ರಳಯ, ಜೀವವಿಕಾಸ ಹೀಗೆ ಏನೆಲ್ಲ ಕಾರಣಗಳಿಂದ ಇವು ನಾಮಾವಶೇಷವಾಗಿದೆ ಎಂದರೂ ನೀರಿನಲ್ಲೋ, ನೆಲದಲ್ಲೋ, ಕಾಡಿನಲ್ಲೋ ಅಪರೂಪದಲ್ಲಿ ಒಂದೆರಡು ಇರಬಹುದು ಎಂಬುದು ಕರ್ವಾಲೋ ಊಹೆ. ಬ್ರಿಟಿಷ್ ಜಿಯಾಲಜಿಕಲ್ ಮ್ಯೂಸಿಯಂನಲ್ಲಿ ಇದರ ಜೀರ್ಣವಾದ ಚರ್ಮವನ್ನು ಕಾದಿರಿಸಿದ್ದಾರೆ ನಾನು ಮತ್ತು ಇದನ್ನು ಜೇವೋಸ್ಕಿ ಒಮ್ಮೆ ಸಂದರ್ಶಿಸಿದ್ದೆವು ಎಂದು ಕರ್ವಾಲೋ ತಮ್ಮ ಅಧ್ಯಯನದ ಫಲಿತಾಂಶಗಳನ್ನು ಲೇಖಕರು ಮತ್ತು ಪ್ರಭಾಕರನ ಮುಂದೆ ತೆರೆದಿಟ್ಟರು.
ಮೂಡಿಗೆರೆಯಂತಹ ಹಳ್ಳಿಯಲ್ಲಿ ನೆಲೆಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಾವಿರುವ ಜೀವ ಜಗತ್ತಿಗೆ ಅನ್ಯಾಯವಾಗದಂತೆ ವೃತ್ತಿ ಧರ್ಮ ಮತ್ತು ಜೀವನ ಧರ್ಮವನ್ನು ಪ್ರಾಮಾಣಿಕ ವಾಗಿ ಪಾಲಿಸುತ್ತಿರುವ ಕರ್ವಾಲೊರಂತಹವರಿಗೂ ವಿರೋಧಿಗಳು ಹೇಗೆ ಹುಟ್ಟಿಕೊಳ್ಳುತ್ತಾರೆ ಎನ್ನುವುದನ್ನು ಕಾದಂಬರಿಯುದ್ದಕ್ಕೂ ಕೆಲವು ಉದಾಹರಣೆಗಳೊಂದಿಗೆ ತೆರೆದಿಡುತ್ತಾರೆ.
ಜೀವನ ಎಂಬ ಮಹಾಸಾಗರ ದಾಟಲು ಈಜು ಕಲಿಯಲೇಬೇಕು ಎಂದು ಮನದಟ್ಟು ಮಾಡುವ ಕಾದಂಬರಿ ಇದು. ಮಲೆನಾಡಿನ ಪುಟ್ಟ ಪರಿಸರದಲ್ಲೂ ಬೇರು ಬಿಟ್ಟಿರುವ ಮರ್ಯಾದಸ್ಥರು ದೊಡ್ಡ ಜನರು, ಅಧಿಕಾರಿಗಳು ಎಂದುಕೊಂಡವರ ಪೊಳ್ಳುತನ, ಕ್ರೌರ್ಯವನ್ನು ಸಕಾರಣವಾಗಿ ಲೇಖಕರು ಕಾದಂಬರಿಯಲ್ಲಿ ವಿವರಿಸುತ್ತಾರೆ. ಜನಸಾಮಾನ್ಯರನ್ನು ಯಾಮಾರಿಸುತ್ತಾ ಹಣ ಕೊಳ್ಳೆ ಹೊಡೆಯುವ ಇವರು ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲರು ಎನ್ನುವುದನ್ನು ಮಂದಣ್ಣನ ಕೇಸ್ ಮೆಟ್ಟಲು ಹತ್ತಿದ ನಂತರದ ವಿವಿಧ ವಿದ್ಯಮಾನ ಮೂಲಕ ಕಾದಂಬರಿ ನಿರೂಪಿಸುತ್ತದೆ. ನಾವಿರುವ ಸಮಾಜದಲ್ಲಿ ಪ್ರಾಮಾಣಿಕವಾಗಿ ನಿರುಪದ್ರವ ಜೀವಿಯಾಗಿ ಬದುಕುವ ಸಾಹಸವೂ ಕಡಿಮೆಯದಲ್ಲ.
ಒಟ್ಟು ಕಥನಕದ ಅಂತಿಮ ಗುರಿ ಹಾರೋ ಓತಿಕ್ಯಾತ ಹುಡುಕುತ್ತ ಎತ್ತಿನ ಗಾಡಿಯಲ್ಲಿ ಹೊರಟ ತಂಡದಲ್ಲಿದ್ದ ಕಿವಿ, ಕರಿಯಪ್ಪ ಮಂದಣ್ಣ ಬೇಟೆಯಾಡಬಹುದಾದ ಪ್ರಾಣಿಗಳು ಕಣ್ಣೆದುರು ಬಂದಾಗ ಅವರ ಸ್ವಭಾವ ಸಹಜ ವರ್ತನೆಗಳು ದುತ್ತೆಂದು ಎಚ್ಚೆತ್ತುಬಿಡುತಿತ್ತು. ಪೇಟೆ ಮಂದಿಯ ನಯ ನಾಜೂಕು ಅರಿಯದ ಇವರ ಮುಗ್ಧತೆಯಿಂದ ಹಾರೋ ಓತಿಕ್ಯಾತ ಹುಡುಕುತ್ತಾ ಹೊರಟ ತಮ್ಮ ಉದ್ದೇಶಕ್ಕೆ ಧಕ್ಕೆಯಾಗುತ್ತದೆ ಎನ್ನುವ ಭಯವಿದ್ದರೂ ಭೂಮಿ ತಾಯಿಯ ಸಹನೆಯನ್ನು ಕರ್ವಾಲೋ ಈ ಪಯಣದುದ್ದ ಅವರ ಮೇಲೆ ತೋರಿಸುತ್ತ ಬರುತ್ತಾರೆ. ಲೇಖಕರ ಎಚ್ಚರಿಕೆ ನುಡಿಯ ಗ್ರಾಮೀಣ ಬೈಗಳಗಳನ್ನು ಮಂದಣ್ಣ, ಕರಿಯಪ್ಪ, ನಾಯಿ ಕಿವಿಯಂತೆ ಹೊಟ್ಟೆಗೆ ಹಾಕಿಕೊಂಡು ತಮ್ಮ ಸ್ವಭಾವದಲ್ಲಿ ಕಿಂಚಿತ್ತೂ ಬದಲಾವಣೆ ಮಾಡಿಕೊಳ್ಳದೆ ನಡೆದುಕೊಳ್ಳುತ್ತಾರೆ. ಕಾಡಿನ ಕ್ಯಾಂಪಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಈಚಲ ಬಡ್ಡೆಗಳಿಗೆ ಉಚ್ಛೆ ಹೊಯ್ದು ಕಿವಿ ಗಡಿ ಗುರುತು ಹಾಕುತ್ತಾನೆ. ಕಿವಿಯ ಕಾಡಿನ ಹಾದಿಯಲ್ಲಿ ಎತ್ತಿನ ಗಾಡಿಯ ಪಯಣ ಸ್ವಾರಸ್ಯವಾಗಿದೆ. ಕಾದಂಬರಿಯಲ್ಲಿ ಕಿವಿಯನ್ನೂ ಒಳಗೊಂಡಂತೆ ತಂಡದ ಪ್ರತಿಯೊಬ್ಬರ ಪ್ರಾಮುಖ್ಯತೆಯನ್ನು ಲೇಖಕರು ಲಘು ಹಾಸ್ಯದ ದಾಟಿಯಲ್ಲಿ ಪರಿಣಾಮಕಾರಿಯಾಗಿದೆ. ಆ ಶೈಲಿಯಲ್ಲಿ ನಮ್ಮ ಕಣ್ಣ ಮುಂದೆಯೇ ಘಟನೆ ನಡೆಯುತ್ತಿದೆಯೆನ್ನುವ ಸಹಜತೆ ಇದೆ. ಮೂಡಿಗೆರೆಯಲ್ಲಿ ಮನೆ ಮನೆ ತಿರುಗಿ ಹಾವು, ಚೇಳು ವಿಷ ಹೀರುವ ನಾಗರ ಮಣಿ ಮಾರುವ ಹಾವು ಗೊಲ್ಲರ ಎಂಕ್ಟ ಅವನ ಹೆಂಡ್ತಿ ಮಗುವಿನೊಡನೆ ದಟ್ಟ ಕಾನನದಲ್ಲಿ ಇದ್ದಕ್ಕಿದ್ದಂತೆ ಇವರಿಗೆ ಪ್ರತ್ಯಕ್ಷ ನಾಗುತ್ತಾರೆ. ಮಂದಣ್ಣ ಅವನೊಡನೆ ಹಳೆ ತಗಾದೆ ತೆಗೆದು ಮಾತಿಗೆ ತೊಡಗಿದ. ಹೊಟ್ಟೆ ಪಾಡಿನ ಅನ್ವೇಷಣೆಗಾಗಿ ಕಾಡಿಗೆ ಬಂದವ ಎಂಕ್ಟ. ಪುಂಗಿ ಊದಿ ಹಾವು ಹಿಡಿಯೋದು, ಹಾವು ಕಚ್ಚಿದ್ದಕ್ಕೆ ಔಷಧಿ ಕೊಡುವುದು ಇವನ ಉದ್ಯೋಗ. ಜೊತೆಗೆ ಉಪಕಸುಬು ಹಾವು, ನೀರ್‌ನಾಯಿ ಇತ್ಯಾದಿ ಪ್ರಾಣಿಗಳ ಚರ್ಮ ಪೇಟೆಯಲ್ಲಿ ಮಾರುವುದು. ಮುಂಗುಸಿ ನರಿ ಹೀಗೆ ಪ್ರಾಣಿಗಳ ಪ್ರತಿ ಕೃತಿಗಳನ್ನೂ ಮಾಡಿ ಮಾರುವುದು ಮಾಡುತ್ತಿದ್ದ. ಮರ ಹತ್ತುವುದರಲ್ಲಿ ನಿಪುಣನಾದ ಇತನೂ ಇವರ ಜೊತೆಗೂಡುತ್ತಾನೆ.

ದಟ್ಟಕಾನನದ ನಡುವೆ ಕಾಡಿನ ಮೌನ ವನ್ನು ನಿಶಬ್ದವಾಗಿ ಆಲಿಸುತ್ತ ಒಂದು ಕಲ್ಲು ಬಂಡೆಯ ಮೇಲೆ ಕೂತಿದ್ದ ಲೇಖಕರಿಗೆ ತುಸು ದೂರದಲ್ಲಿದ್ದ ಮರದ ಬುಡದಲ್ಲಿ ಚಗುಳಿ ಕೆಂಪಿರುವೆ ಕಾಣಿಸಿತು. ಮರದ ಮೇಲಿನಿಂದ ಕೆಳಗೆ ಉದುರುತ್ತಿದ್ದ ಈ ಇರುವೆಗಳ ಮೂಲ ಅರಸಿ ಬೆನ್ನು ಹತ್ತಿ ತದೇಕ ಚಿತ್ತರಾಗಿ ನೋಡುತ್ತಿದ್ದಾಗ ಮರದ ಪೊಟರೆಯಲ್ಲಿದ್ದ ಈ ಚಗುಳಿ ಇರುವೆಯ ಗುಪ್ಪೆಗೆ ಮೂತಿಯಲ್ಲಿ ತಿವಿದು ಈ ಇರುವೆಗಳನ್ನು ಬಕಬಕ ಕಬಳಿಸುತ್ತಿದ್ದ ಓತಿಕ್ಯಾತ ಕಣ್ಣಿಗೆ ಬಿತ್ತು. ಆಗ ಇರುವೆಗಳು ಸಮಾರೋಪಾದಿಯಲ್ಲಿ ಓತಿಕ್ಯಾತದ ದೇಹವಿಡಿ ಆಕ್ರಮಿಸತೊಡಗಿತು. ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು… ಕರ್ವಾಲೋ ಜೊತೆ ಕ್ಯಾಮೆರಾ ಮ್ಯಾನ್ ಪ್ರಭಾಕರ ಹಾರೋ ಓತಿಕ್ಯಾತದ ಫೋಟೋ ಹೊಡೆಯಲು ತಯಾರಾಗಿ ಬಂದ. ಕರ್ವಾಲೋಗೆ ವೀಕ್ಷಕರ ವಿವರಣೆಯನ್ನು ಕೊಡುತ್ತಾ ಅವರು ಹುಡುಕುತ್ತಿರುವ ಪ್ರಾಣಿ ಇದೇ ಎನ್ನುವುದನ್ನು ಲೇಖಕರು ಅವರಿಗೆ ಪಕ್ಕಾ ಮಾಡಿಕೊಳ್ಳುತ್ತಾರೆ. ತನ್ನ ಪಕ್ಕೆಲುಬನ್ನು ರೆಕ್ಕೆಯಾಗಿ ಹಾರಲು ಬಳಸುವ ಈ ಹಾರೋ ಓತಿಕ್ಯಾತವನ್ನು ಜೀವಂತ ಹಿಡಿಯುವ ಪ್ರಯತ್ನ ಇಡೀ ತಂಡ ಮರುದಿನವೂ ಮುಂದುವರಿಸತೊಡಗಿತು. ಆದರೆ ಈ ಹಾರೋ ಓತಿಕ್ಯಾತ ಇವರ ಯಾವ ಉಪಾಯಗಳಿಗೂ ಮಣಿಯದೆ ಗುಡ್ಡದ ತಪ್ಪಲಿನಲ್ಲಿ ಮರೆಯಾಯಿತು. ವಿವಿಧ ಕೋನಗಳಲ್ಲಿ ಅದರ ಫೋಟೋ ತೆಗೆಯುವುದರಲ್ಲಿ ಯಶಸ್ವಿಯಾದ.
ಭೂಮಿಯಲ್ಲಿ ಜೀವವಿಕಾಸದ ವಿವಿಧ ಹಂತಗಳ ಬಗ್ಗೆ ಕಾದಂಬರಿಯಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಚರ್ಚೆಗಳಿವೆ. ಆದರೆ ಇವುಗಳಲ್ಲಿ ಕೆಲವು ಮೂಲಸ್ವರೂಪದಲ್ಲಿ ಉಳಿಯಲು ಕಾರಣ ಏನು? ಎಂಬ ಕುತೂಹಲ ಈ ಭೂಮಿಯ ಉಗಮದಷ್ಟೇ ನಿಗೂಢ ಹಾಗೂ ವಿಸ್ಮಯದ್ದು ಎನ್ನುವ ಸತ್ಯ ನಮ್ಮನ್ನು ಮೌನವಾಗಿಸುತ್ತದೆ.
ಪ್ರಕೃತಿಯ ಅಧ್ಯಯನ ಕ್ಕೆ ಯಾವುದೇ ವಿಶ್ವವಿದ್ಯಾನಿಲಯಗಳು ಬೇಕಾಗಿಲ್ಲ… ನಮ್ಮ ಪಂಚೇಂದ್ರಿಯಗಳು ಸೂಕ್ಷ್ಮವಾಗಿದ್ದರೆ ಒಡನಾಡುವ ವಿಶ್ವವೇ ಒಂದು ವಿಶ್ವವಿದ್ಯಾನಿಲಯ ಎನ್ನುವ ಸೂಕ್ಷ್ಮಪ್ರಜ್ಞೆಯನ್ನು ಈ ಕೃತಿ ಮೂಡಿಸುತ್ತದೆ.
ಇಡೀ ಕಾದಂಬರಿಯ ಓದು ಗ್ರಾಮೀಣ ವಾತಾವರಣ ನಮ್ಮದೇ ಜಗತ್ತಿನ ನಾವು ಒಡನಾಡುವ ವ್ಯಕ್ತಿ ಚಿತ್ರಗಳಾಗಿ ಕೆಲವೊಮ್ಮೆ ನಾವೇ ಪಾತ್ರಗಳಾಗಿ ಜೊತೆಗೆ ಹೆಜ್ಜೆ ಹಾಕುತ್ತಿದ್ದೆವೇನೋ ಎನ್ನುವ ತನ್ಮಯತೆ ಮೂಡಿಸುತ್ತದೆ.

ಪೂಚಂತೇಗೆ ಮೂಡಿಗೆರೆಯಲ್ಲಿ ಇದ್ದು ಪ್ರಕೃತಿಯೊಂದಿಗೆ ಒಡನಾಡುತ್ತ ಅರ್ಥಪೂರ್ಣ ಬದುಕು ನಡೆಸಲು ಸ್ಫೂರ್ತಿ ಆದವರು ಕರ್ವಾಲೋ. ಕಾದಂಬರಿಯಲ್ಲಿ ನಿರೂಪಕರು ಸ್ವತಃ ತನ್ನನ್ನು ತಾನೇ ಲೇವಡಿ ಮಾಡಿಕೊಳ್ಳುತ್ತ ಜೊತೆಗೆ ಒಡನಾಡುವ ಪಾತ್ರಗಳನ್ನು ಸಂಭಾಷಣೆಯ ಮೂಲಕ ಕಟ್ಟುತ್ತ ಸಾಗುತ್ತಾರೆ. ಲಘು ಹಾಸ್ಯದೊಂದಿಗೆ ಸಾಗುವ ಕಾದಂಬರಿಯ ಓದಿನ ಲಹರಿ ನೀಡುವ ಆಪ್ತಭಾವ ಕುಟುಂಬ ಪ್ರೀತಿಯ ಜೀವನ ಪ್ರೀತಿಯ ಪರಿಸರ ಪ್ರಜ್ಞೆಯ ಹೂರಣವಾಗಿ ಮಾರ್ಧ್ವನಿಸುತ್ತದೆ. ಇಲ್ಲಿ ಕಿವಿ, ಪ್ಯಾರ, ಮಂದಣ್ಣ, ಬಿರಿಯಾನಿ ಕರಿಯಣ್ಣ, ಪ್ರಭಾಕರ ಮುಖ್ಯ ಪಾತ್ರಗಳೇ. ಅವರ ಎಡವಟ್ಟುಗಳನ್ನೆಲ್ಲ ಸಹಿಸುತ್ತ ಸಂಭಾಳಿಸುತ್ತಾ ಸಾಗುವ ನಿರೂಪಕರು ಕರ್ವಾಲೋರನ್ನು ಓರ್ವ ಹಿರಿಯ ಮೇಧಾಮಿ ಸಂತನಾಗಿ ರೂಪಿಸಿದ್ದಾರೆ. ಕರ್ವಾಲೋರ ತಾಯ್ತನ ತುಂಟ ಮಕ್ಕಳನ್ನು ಪೊರೆಯುವ ಕುಟುಂಬ ಶಕ್ತಿಯಾಗಿದೆ. ಯಾವುದೇ ಸಮಾಜದಲ್ಲಿ ಒಳ್ಳೆಯವರು ಇರುವಂತೆ ಕೆಟ್ಟವರು ಇರುತ್ತಾರೆ. ಬದುಕು ಕಟ್ಟುವ ಪ್ರಕ್ರಿಯೆಯಲ್ಲಿ ಆಯ್ಕೆಯ ವೈವಿಧ್ಯತೆಗಳು ಇದ್ದಾಗ ಪ್ರಕೃತಿಯೇ ನಮಗೆ ಜೀವಪಾಠವಾಗುತ್ತದೆ ಎನ್ನುವ ಅಂತಿಮ ಸತ್ಯವನ್ನು ಒಟ್ಟಾರೆಯಾಗಿ ಕಾದಂಬರಿ ತೆರೆದಿಡುತ್ತದೆ.

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.

