ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು. ಇಲ್ಲಿ ಬಾಲಗೋಪಾಲ ಜೋಯಿಸರು, ಸುಬ್ರಾಯ ಶಾಸ್ತ್ರಿ, ಸಭಾಹಿತರು, ಹೇರಂಭ, ಜಟ್ಟಿ ಇವರೆಲ್ಲರೂ ಈ ಕಾಲದ ಪ್ರತಿನಿಧಿಗಳಾಗಿ ಮೂಡಿಬಂದಿದ್ದಾರೆ.
ರಾಜಶೇಖರ ಜೋಗಿನ್ಮನೆ ಕಾದಂಬರಿ “ಕೇಳು ಧನಂಜಯ..” ಕುರಿತು ನಾರಾಯಣ ಯಾಜಿ ಬರಹ
ಕಥೆ ಹುಟ್ಟಲು ಕಾರಣ ಬೇಕಿಲ್ಲ. ವಸ್ತುವಿನ ಕುರಿತು ಕುತೂಹಲ ಮಾತ್ರ ಇರಬೇಕು. ಕುತೂಹಲ ಉಗಮಿಸಲು ಮೂಲ ಕಾರಣ ಆ ವಿಷಯ ಸಂಬಂಧಿಸಿದ ವ್ಯಕ್ತಿಗಳಿಗೆ ಆ ವಿಷಯ ಆಸಕ್ತಿದಾಯಕವಾಗಿರಬೇಕು. ನಾನು ಯಾರು ಎನ್ನುವ ಪ್ರಶ್ನೆಯೇ ಬುದ್ಧಿ ಬರುವ ಹೊತ್ತಿನ ಮೊದಲ ಹುಡುಕಾಟವಾಗಿರುತ್ತದೆ. ಆಗ ಆತನಿಗೆ ಹೆಸರು ಎನ್ನುವ ಆವರಣವನ್ನು ತೊಡಿಸಿ ಅನಾವರಣಗೊಳಿಸಿ ಬಿಡುತ್ತೇವೆ. ಪ್ರಾಣಿಗಾದರೆ ಇದ್ಯಾವುದರ ಸಮಸ್ಯೆ ಇಲ್ಲ. ಅವುಗಳಿಗೆ ಹೆಸರೂ ಬೇಕಿಲ್ಲ, ಅವುಗಳಿಗೆ ವಿಶ್ಲೇಷಣಾ ಸಾಮರ್ಥ್ಯವಿಲ್ಲ. ಅವು ಕೇವಲ ಜೀವಿಗಳು; ಮನುಷ್ಯರು ಹಾಗಲ್ಲ, ಜೀವಿಸಿರುವುದರ ಜೊತೆಗೆ ಬದುಕಿರುವವರು. ಬದುಕು ಎಂದರೆ ಕಟ್ಟಿಕೊಳ್ಳುವುದು. ಜೀವ ಎಂದರೆ ಉಸಿರಿರುವವರೆಗೆ ಜೀವಿಸಿ ನಂತರ ಶವವಾಗುವುದು. ಈ ವಿಶ್ವದ ರಕ್ಷಕರು ನಾವು ಎನ್ನುವ ಬುದ್ಧಿಯನ್ನು ತಲೆಯೊಳಗೆ ತುಂಬಿಕೊಂಡಿರುವ ಮನುಷ್ಯರಿಗೆ ಎಲ್ಲದರ ಕುರಿತೂ ಉತ್ತರಬೇಕು. ಮನಸ್ಸಿನ ಕುತೂಹಲ ಮತ್ತು ಅದನ್ನು ವಿಶ್ಲೇಷಿಸುವ ಬುದ್ಧಿ ಇದಕ್ಕೆ ಮೂಲ. ಈ ಕುತೂಹಲ ಇಲ್ಲಿಂದ ಮುಂದೆ ಸಾಗಿ ತನ್ನೊಟ್ಟಿಗೆ ಇರುವವರ ಸಂಬಂಧಗಳಾದ ಅಮ್ಮ, ಅಪ್ಪ, ಅಣ್ಣ ಅಕ್ಕ-ತಮ್ಮ, ಬಾಂಧವರು ಮನೆ, ಊರು ಹೀಗೆ ಸಾಗುತ್ತದೆ. ಒಂದಕ್ಕೆ ಉತ್ತರ ಸಿಕ್ಕಿತೋ ಮತ್ತೊಂದನ್ನು ಅರಿಯುವುದಕ್ಕೆ ಅದು ನಾಂದಿಯಾಗುತ್ತದೆ. ಸಮನ್ವಿತ ಪ್ರಕಾಶನದಿಂದ ಪ್ರಕಟವಾದ ರಾಜಶೇಖರ ಜೋಗಿನ್ಮನೆಯವರ ಹೊಸ ಕಾದಂಬರಿ “ಕೇಳು ಧನಂಜಯ. . .” ಕೃತಿಯ ವಸ್ತುವಿರುವುದೇ ಈ ಕುತೂಹಲದಲ್ಲಿ.
ಅನ್ವೇಷಣೆಯ ವಿಷಯದಲ್ಲಿ ರಾಜಶೇಖರ ಹೆಗಡೆಯವರಿಗೆ ಯಾವುದೋ ಒಂದು ಸೆಳೆತವಿದೆ. ಅವರ ಇನ್ನೊಂದು ಕಥಾಸಂಕಲನ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ಮತ್ತು ಆತ” ಎನ್ನುವ ಕಥೆಗಳಲ್ಲಿ ಈ ಗುಣಗಳನ್ನು ಕಾಣಬಹುದಾಗಿದೆ. ಮೂರ್ತ ಮತ್ತು ಅಮೂರ್ತದ ಎರಡರ ಪ್ರತಿನಿಧಿಗಳು ಆ ಕತೆಗಳು. ಉತ್ತರಕನ್ನಡದ ಎಲ್ಲಾ ಪ್ರಮುಖ ಬರೆಹಗಾರರಂತೆ ರಾಜಶೇಖರ ಹೆಗಡೆಯವರಿಗೂ ಸಹ ತನ್ನ ಹುಟ್ಟೂರಿನ ಕಾನು, ಗಮ್ಯ, ಮಾಸ್ತಿ, ಜಟಕ, ಮನೆದೇವರು. ಬಳಿ, ಗೋತ್ರ ಇವುಗಳಲ್ಲಿ ಅಪರಿಮಿತ ಆಸಕ್ತಿ. ಈ ಆಸಕ್ತಿ ಎನ್ನುವುದು ಮನಸ್ಸಿನಿಂದಾಳದಲ್ಲಿ ಹುಟ್ಟಿದಾಗ ಅದನ್ನು ತಿಳಿದುಕೊಳ್ಳಬೇಕೆನ್ನುವವ ಶಿಷ್ಯ ಭಾವದಲ್ಲಿರುತ್ತಾನೆ. ತನಗೇ ಎಲ್ಲವೂ ತಿಳಿದಿದೆ ಎನ್ನುವ ಅಹಂ ಆತನಲ್ಲಿ ಸುಳಿಯುವುದಿಲ್ಲ. ವಿಧೇಯ ವಿಧ್ಯಾರ್ಥಿಯಾಗಿ ತನ್ನ ಕಿವಿಯನ್ನು ತೆರೆದು ಆಲಿಸುತ್ತಾನೆ. “ಕೇಳು ಧನಂಜಯ” ದ ಧನಂಜಯನಲ್ಲಿ ಇರುವ ಕುತೂಹಲ ಇದೇ ಬಗೆಯದ್ದು.
ಕೊರೋನಾ ಕಾಲದ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಬದುಕೇ ಅನಿಶ್ಚಿತವಾದಾಗ ಉಸಿರಾಡಲು ಸ್ವಲ್ಪವಾದರೂ ಅವಕಾಶವಿರುವುದು ಹಳ್ಳಿಯಲ್ಲಿಯೇ. ಪ್ರಕೃತಿಯಲ್ಲಿನ ಸಹಬಾಳ್ವೆಯಲ್ಲಿ ಗಮಯವೇ ಇರಲಿ, ಹುಲಿಯೇ ಇರಲಿ ತಾನಾಗಿ ಮನುಷ್ಯರ ಮೈಮೇಲೆ ಬೀಳುವುದಿಲ್ಲ; ತನಗೆ ತೊಂದರೆಯಿಲ್ಲದಿರುವವರೆಗೆ ಎನ್ನುವುದರ ಅರಿವನ್ನು ಹಳ್ಳಿಯ ದಾಮುವಿನ ಮೂಲಕ ಅರ್ಥಮಾಡಿಸುತ್ತಾರೆ. ಪರೋಕ್ಷವಾಗಿ ಮಾನವನಿರ್ಮಿತ ಮಹಾಮಾರಿಯ ಕುರಿತು ಅಸಹನೆಯೂ ಇದೆ. ನೀರು ಕುಡಿಯಲು ಹೋಗುವ ಕಾಡುಕೋಣ ವಾಪಾಸು ಈ ಕಡೆಯೇ ಬರಬೇಕೆಂದಿಲ್ಲ; ಹಾಗೆಯೇ ಆಕಡೆಯೂ ಹೋಗಬಹುದು ಎನ್ನುವ ದಾಮುವಿನ ಮಾತು ಧನಂಜಯನಲ್ಲಿ “ಪ್ರಾಣಿಗಳಿಗೆ ಇಡೀ ಕಾನೇ ಮನೆ, ಅದು ತನ್ನೊಬ್ಬನದ್ದೇ ಅಲ್ಲ, ಎಲ್ಲರನ್ನೂ ಒಳಗೊಂಡ ಮನೆ ಎನ್ನುವ ವಿಚಾರ ಹೊಳೆಯುತ್ತದೆ. ಬೆಳೆದ ಕಾಡು ಅವರ ಮನೆಯಾದರೆ ಕಡಿದ ಕಾಡಿನಲ್ಲಿ ಹಚ್ಚಿದ ತೋಟ, ಕಟ್ಟಿದ ಮನೆ ತಮ್ಮದು ಎಂದುಕೊಂಡಿದ್ದೇವೆ. ಆದರೆ ಇಲ್ಲಿಗೆ ತಾವು ಹೊರಗಿನವರು ಒಳಗೆ ಆದವವರು ಎನ್ನುವ ಹೊಳಹು ಎಲ್ಲೋ ಅಸ್ಪಷ್ಟವಾಗಿ ಮೂಡುತ್ತದೆ. ಅದನ್ನು ತಿಳಿದುಕೊಳ್ಳುವ ಮಾನವಸಹಜ ಕುತೂಹಲ ಅವನಲ್ಲಿ ಮೂಡುತ್ತದೆ. ಅದಕ್ಕೆ ಆತ ಆಶ್ರಯಿಸುವುದು ತನ್ನಜ್ಜ ಅನಂತನಲ್ಲಿ. ಅನಂತಜ್ಜ ಕಾಲೇಜಿನ ಪ್ರಾಂಶುಪಾಲನಾಗಿ ನಿವೃತ್ತಿ ಹೊಂದಿದವ. ಆಧುನಿಕ ವಿಚಾರಧಾರೆ ಮತ್ತು ಹಳ್ಳಿಯ ಬೇರು ಎರಡೂ ಇರುವ ವ್ಯಕ್ತಿ. ಕಾಲ ಕೆಟ್ಟುಹೋಯಿತು ಎಂದು ಮೂಗು ಮುಚ್ಚಿ ಕುಳಿತ ಅಜ್ಜನಲ್ಲ, ಒಂಥರಾ ಮಾಡ್ರನ್ ಅಜ್ಜ. ಮೊಮ್ಮಗ ಓದಿಗಾಗಿ ಹಳ್ಳಿಬಿಟ್ಟು ನಗರಕ್ಕೆ ಹೋದರೂ ಕಾಲದ ಹೊಡೆತಕ್ಕೆ ಅನಿವಾರ್ಯವಾಗಿ ಹಳ್ಳಿಗೆ ಮರಳಿದವ. ಬೇರು ಅಜ್ಜ, ಚಿಗುರು ಮೊಮ್ಮಗ ಇಬ್ಬರೂ ಈ ಕಾರಣಕ್ಕೆ ಸಮಾನ ಪಾತಳಿಯಲ್ಲಿ ನಿಲ್ಲುತ್ತಾರೆ. ಇತಿಹಾಸವನ್ನು ಹೇಳಲು ಅಜ್ಜ ಎತ್ತಿಕೊಳ್ಳುವ ವಾಕ್ಯವೇ ಆಸಕ್ತಿಯನ್ನು ಕೆರಳಿಸುತ್ತದೆ. ಗದ್ದೆ, ಅಲ್ಲಿರುವ ಮಾಸ್ತಿ, ಅಲ್ಲಿದ್ದ ಅಡಿಕೆ ಮರ ಇವೆಲ್ಲ ಇದ್ದವು, ಇಂತಿಪ್ಪ ಇಲ್ಲಿ ಮನುಷ್ಯರು ಇಲ್ಲವಾಗಿತ್ತು, ಇದ್ದರೂ ಮತ್ತೆ ಇಲ್ಲವಾದರು. ಇರುವಿಕೆ ಮತ್ತು ಇಲ್ಲವಾಗುವಿಕೆ ಈ ಎರಡು ಭಾರತೀಯ ತರ್ಕಶಾಸ್ತ್ರದಲ್ಲಿ ಮಹತ್ವದ್ದು. ಇದ್ದಿತ್ತು ಎಂದರೆ ಮೊದಲು ಇಲ್ಲವಾಗಿತ್ತು, ಇಲ್ಲ ಎಂದರೆ ಆ ಮೊದಲು ಇದ್ದಿತ್ತು ಎಂದಾಗುತ್ತದೆ. ಸ್ಥಾಯಿಯಾದ ಪ್ರಕೃತಿಯಲ್ಲಿ ಕುಲವೆನ್ನುವುದು ಜಂಗಮವಾಗುತ್ತದೆ. ಅಂತಹ ಕುಟುಂಬದ ಕಥೆ ಇದು ಎನ್ನುವುದನ್ನು ಲೇಖಕರು ಹೇಳುತ್ತಾರೆ.
ಇತಿಹಾಸ ಅನಂತಜ್ಜನ ಬಾಯಿಯಿಂದ ಹೀಗೆ ಬಿಚ್ಚಿಕೊಳ್ಳಲು ಆರಂಭವಾಗುತ್ತದೆ. ಕುಲದ ತಳಿಯನ್ನು ವಿವರಿಸುವಾಗ ಅಲ್ಲಿ ಲಿಖಿತ ಮತ್ತು ಅಲಿಖಿತ ಮತ್ತು ಅಸ್ಪಷ್ಟವಾಗಿ ದೊರೆತಿರುವುದನ್ನು ಊಹಾತ್ಮಕವಾಗಿ ಹೇಳುವ ವಿಷಯ ಬರುತ್ತದೆ. ಊಹಾತ್ಮಕ ಎಂದರೆ ಕಟ್ಟುಕಥೆಯಲ್ಲ, ಓಲೆಗರಿಯ ದಾಖಲೆಗಳ ನಡುವೆ ತುಂಡಾದ ಸರಪಣಿಯನ್ನು ಜೋಡಿಸುವ ಹಾಗೂ ಅದು ಒಪ್ಪಿತ ನಿರೂಪಣೆಯಾಗಬೇಕು. ಅಜ್ಜ ಕಥೆಯನ್ನು ವಿವರಿಸುವಾಗ ಅನುಸರಿಸುವ ಮಾರ್ಗ ಇದು. ಇಲ್ಲಿ “ಕುಲದ ಬಳಿ” ಬೆಳೆದುಬಂದ ಬಗೆಯನ್ನು ವಿವರಿಸುವಾಗ ವಂಶವೃಕ್ಷವನ್ನು ಹೇಳುವ “ಹೆಳವರ” ವಿಷಯ ಬರುತ್ತದೆ. ಅವರು ಹೇಳುವ ವಿಷಯವೂ ಅವರ ಪರಂಪರೆಯಲ್ಲಿ ತಂದೆಯಿಂದ ಮಗನಿಗೆ ಬಂದಿರುವುದು, ಸದಾ ಸಂಚಾರಿಗಳಾದ ಹೆಳವರ ಮನೆತನದಲ್ಲಿ ಒಂದು ಕುಟುಂಬಕ್ಕೆ ಇಂತಿಷ್ಟು ಗ್ರಾಮವೆನ್ನುವುದು ನಿರ್ಧಾರವಾಗಿರುತ್ತದೆ. ಇವೆಲ್ಲವೂ ಒಂದರ್ಥದಲ್ಲಿ ದಾಖಲಾದವುಗಳು, ಇದಲ್ಲದೇ ದಾಖಲಾಗದ ಸಂಗತಿಗಳ ಕುರಿತು ರಾಜಶೇಖರ ಹೆಗಡೆಯವರು “ರಾಮನ ಕಥೆ ಮುಗಿದ ಮೇಲೆ ರಾಮಾಯಣವೇ ಮುಗಿಯಿತು ಎನ್ನುತ್ತೇವೆ, ಕುಶ ಏನು ಮಾಡಿದ, ಅವನ ಮಕ್ಕಳು ಏನು ಮಾಡಿದರು ಎಂದು ಯೋಚಿಸುವುದಿಲ್ಲ… (ಪು. 93) ಎನ್ನುತ್ತಾ ನದಿಯ ಪ್ರವಾಹದಂತೆ ಕುಟುಂಬದ ಕಥೆಗಳೂ ಕೆಲವು ಕಡೆ ಗುಪ್ತಗಾಮಿನಿ ಇನ್ನು ಕೆಲವುಕಡೆ ವ್ಯಕ್ತವಾಗಿ ಹರಿಯುತ್ತಿರುತ್ತವೆ. “ನಮ್ಮ ಇತಿಹಾಸವೇ ಹಾಗಲ್ಲವೇ? ಒಮ್ಮೆ ವೈಭವ-ಮಗದೊಮ್ಮೆ ವಿನಾಶ, ಊರುಗಳು ಸೃಷ್ಟಿಯಾಗುತ್ತದೆ. ಕೋಟೆಕೊತ್ತಲಗಳು ಮೇಲೇಳುತ್ತವೆ. ಒಂದಷ್ಟುದಿನ ಮುತ್ತು ರತ್ನಗಳನು ಅಳೆವಂಥ ಸುಖೀರಾಜ್ಯ ಮೈದೆಳೆದಿರುತ್ತದೆ. ಆದರೆ ಅದಕ್ಕೂ ಒಂದಿನ ಸಾವು ಬರುತ್ತದೆ (ಪು 13)” ಎನ್ನುವ ಅನಂತಜ್ಜನ ಮಾತುಗಳಲ್ಲಿ ಜಂಗಮಪುರದ, ಆ ಮೂಲಕ ಅಲ್ಲಿನ ಮೂಲ ಪುರುಷನಾದ ಗೋವಿಂದ ಹೆಗಡೆಯ ಕಥೆ ಮೊದಲ ಭಾಗದಲ್ಲಿ ತೆರೆದುಕೊಳ್ಳುತ್ತದೆ.
ಭಗವದ್ಗೀತೆಯನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದಾದರೂ ಅದನ್ನು ಕೇಳಿಸಿಕೊಂಡು ಧೃತರಾಷ್ಟ್ರನಿಗೆ ತಿಳಿಸಿದವ ಸಂಜಯನ ಹಾಗೇ ಇಲ್ಲಿನ ವೆಂಕಟೇಶ ಹೆಗಡೆ ಎನ್ನುವವನ ಮನೆಯ ಚರಿತ್ರೆಯನ್ನು ಅನಂತಜ್ಜನಿಗೆ ಮೊದಲು ತಿಳಿಸುವುದು ವಾರಣಾಸಿಯ ಸಣ್ಣಪ್ಪಜನ ಮೂಲಕವಾಗಿ. ತಾಳೆಗರಿ, ವಂಶಾವಳಿಯನ್ನು ಹೇಳುವ ಹೆಳವರು, ಸಣ್ಣಪ್ಪಜ್ಜ ದೈವ, ಜ್ಯೋತಿಷ್ಯ, ಬುಡಬುಡಿಕೆ ಹಾಗೂ ಜೋಗಿಬೆಟ್ಟದ ಅವಧೂತರ ಕಾರಣಿಕ ನುಡಿಗಳು ಇವೆಲ್ಲವೂ ಚರಿತ್ರೆಯನ್ನು ಹೇಳುವ ಸಾಧನಗಳಾಗಿವೆ. ಒಂದಕ್ಕೊಂದು ಪೂರಕವಾಗಿ ಬರುತ್ತದೆ. ಕುಟುಂಬವೆನ್ನುವುದು ಗ್ರಾಮ ಮತ್ತು ರಾಜ್ಯದ ಭಾಗವಾಗುವುದರಿಂದ ಈ ಮನೆಯ ಇತಿಹಾಸ ಆ ಕಾಲದ ಆಡಳಿತಗರರಾದ ಸೋದೆ, ಗೇರುಸೊಪ್ಪೆಯ ರಾಣಿ, ಕೇಳದಿ ಇಕ್ಕೇರಿ ಹಾಗೇ ವಿಜಾಪುರದ ಪೋರ್ಚುಗೀಸರ ಕಾಲದ ವಿವರಗಳಲ್ಲಿ ಹಾಸುಹೊಕ್ಕಾಗಿದೆ. ಅವೆಲ್ಲವೂ ಇಲ್ಲಿ ಕಥನ ಕಟ್ಟಲು ಪೂರಕವಾಗಿದೆಯೇ ಹೊರತೂ ಅವ್ಯಾವುದೂ ಜಂಗಮಪುರದ ಚರಿತ್ರೆಯಮೇಲೆ ಬಂದು ಕುಳಿತುಕೊಳ್ಳುವುದಿಲ್ಲ.
ನೀರು ಕುಡಿಯಲು ಹೋಗುವ ಕಾಡುಕೋಣ ವಾಪಾಸು ಈ ಕಡೆಯೇ ಬರಬೇಕೆಂದಿಲ್ಲ; ಹಾಗೆಯೇ ಆಕಡೆಯೂ ಹೋಗಬಹುದು ಎನ್ನುವ ದಾಮುವಿನ ಮಾತು ಧನಂಜಯನಲ್ಲಿ “ಪ್ರಾಣಿಗಳಿಗೆ ಇಡೀ ಕಾನೇ ಮನೆ, ಅದು ತನ್ನೊಬ್ಬನದ್ದೇ ಅಲ್ಲ, ಎಲ್ಲರನ್ನೂ ಒಳಗೊಂಡ ಮನೆ ಎನ್ನುವ ವಿಚಾರ ಹೊಳೆಯುತ್ತದೆ. ಬೆಳೆದ ಕಾಡು ಅವರ ಮನೆಯಾದರೆ ಕಡಿದ ಕಾಡಿನಲ್ಲಿ ಹಚ್ಚಿದ ತೋಟ, ಕಟ್ಟಿದ ಮನೆ ತಮ್ಮದು ಎಂದುಕೊಂಡಿದ್ದೇವೆ. ಆದರೆ ಇಲ್ಲಿಗೆ ತಾವು ಹೊರಗಿನವರು ಒಳಗೆ ಆದವವರು ಎನ್ನುವ ಹೊಳಹು ಎಲ್ಲೋ ಅಸ್ಪಷ್ಟವಾಗಿ ಮೂಡುತ್ತದೆ.
ಕೊರೋನಾ ಕಾಲಘಟ್ಟದಲ್ಲಿ ಪ್ರಪಂಚವೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಚಡಪಡಿಸುತ್ತಿರುವಾಗ ಅನೇಕ ಕುಟುಂಬಗಳೇ ನಾಶವಾಗಿರುವ ಘಟನೆಯನ್ನು ಗಮನಿಸಿದ್ದೇವೆ. ಅಂಥ ಸಂಕೀರ್ಣದ ಹೊತ್ತಿನಲ್ಲಿ ಅನಂತಜ್ಜ ಹೇಳುವ ಹದಿನಾಲ್ಕನೆಯ ಶತಮಾನದಲ್ಲಿ ಕಾಡಿದ ಪ್ಲೇಗ್ ಮಹಾಮಾರಿ ಸುಮಾರು ಹದಿನೈದನೆಯ ಶತಮಾನದ ಕೊನೆಯವರೆಗೂ ಈ ದೇಶವನ್ನು ಕಾಡಿತ್ತಂತೆ. ಅಂತಹ ಯಾವುದೋ ದುರಂತಕ್ಕೆ ಒಳಗಾಗಿ ನಾಶವಾದ ಕುರುಹಿರುವ ಜಂಗಮಪುರದ ತೋಟವೊಂದಕ್ಕೆ ಸಾಗರದ ಜಂಬಗಾರಿನಿಂದ ಬದುಕನ್ನು ಅರಸುತ್ತಾ ಬಂದು ತಳ ಊರಿದ ಗೋವಿಂದ ಹೆಗಡೆಯ ಮುಂದಿನ ತಲೆಮಾರು ಹೊಸತಾಗಿ ನಿರ್ಮಿಸಿದ ವೈಭವದ ಕಾಲ ಮತ್ತೊಮ್ಮೆ ಪ್ಲೇಗಿಗೆ ಬಲಿಯಾಗಿ ಸಮೂಲ ನಾಶವಾಗುವ ಕಥೆ ಮೊದಲ ಭಾಗದಲ್ಲಿ ಬರುತ್ತದೆ. ಗೋವಿಂದ ಮತ್ತು ಸವಿತಾ ದಂಪತಿಗಳ ಸಾಹಸದೊಟ್ಟಿಗೆ ಈ ಕುಟುಂಬದ ವಿವರದ ತೆರೆದುಕೊಳ್ಳುವುದು. ರಾಜಶೇಖರ ಜೋಗಿನ್ಮನೆಯವರಿಗೆ ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಮುಖ್ಯವಲ್ಲ; ಅವರು ಕಟ್ಟಿಕೊಟ್ಟ ಬದುಕು ಮುಖ್ಯ. ಹಾಗಾಗಿ ಇಲ್ಲಿ ಪ್ರಮುಖ ಪಾತ್ರ ಎಂದು ಯಾವುದೂ ಇಲ್ಲ. ಗೋವಿಂದ ಹೆಗಡೆಯ ಮಕ್ಕಳಾದ ಗೋಪಾಲ, ಶ್ರೀಧರ, ಈಶ್ವರ ನಂತರ ಕಮಲಾಕರ ಹೀಗೆ ಇವರೆಲ್ಲರಿಂದ ತೊಡಗಿ ಮತ್ತೆ ಪ್ರಮುಖ ಪಾತ್ರಧಾರಿಯಾಗಿ ಗಜಾನನ ಹೆಗಡೆ ಕಾಣಿಸಿಕೊಳ್ಳುತ್ತಾರೆ.
ಪತಿಗೆ ಸಹಾಯಕರಾಗಿ ಹೆಗಲುಕೊಟ್ಟ ಸವಿತಾ, ಶಾಮಲಾ, ವನಜಾ, ತಿಮ್ಮಕ್ಕ, ಸಣ್ ಸುಬ್ಬಿ, ರಾಧಕ್ಕ ಇವರೆಲ್ಲರ ಕೊಡುಗೆಗಳೂ ಬಹು ಮುಖ್ಯವಾಗಿವೆ. ಇಡೀ ಕಾದಂಬರಿಯಲ್ಲಿ ಪಾತ್ರಗಳು ಮುಖಾಮುಖಿಯಾಗುವುದಿಲ್ಲ. ಅವು ಪರಸ್ಪರ ಸಹಕಾರಿ ಭಾವದಿಂದ ಮುಂದುವರಿಯುತ್ತದೆ. ಗೋವಿಂದ ಮನೆಯಲ್ಲಿ ಮಲತಾಯಿಯಿಂದ ತೊಂದರೆಗೊಳಗಾದಾಗ ಅಲ್ಲಿಂದ ಹೊರಟು ಬಂದರೂ ಆತನ ಅಪ್ಪ ವೆಂಕಟೇಶ ಹೆಗಡೆ ಮಗನಿಗೆ ನೆರವಾಗುತ್ತಾನೆ. ಪರಸ್ಪರ ನೆರವಾಗುವ ಗ್ರಾಮೀಣ ಅಪ್ಪಟ ಹವ್ಯಕ ಸಂಸ್ಕೃತಿಯ ಜೀವನ ಇಲ್ಲಿದೆ. ಶಿವಪ್ಪ ಸುಕ್ರಿ ದಂಪತಿಗಳು ಈ ಮನೆಯ ಜೊತೆ ಹೊಂದಿರುವ ಸಹಯಾನವನ್ನು ಚಿದಾನಂದ ಅವಧೂತರು “ದೇವರು ಮನುಷ್ಯನ ಜೊತೆಗೇ ಇದ್ದಾನೆ ಎನ್ನುವುದು ಗೋವಿಂದ-ಶಿವಪ್ಪರ ಬಾಂಧವ್ಯ ನೋಡಿದಾಗ ಗೊತ್ತಾಯಿತು” ಎನ್ನುವ ಮಾತಿನಲ್ಲಿ ಅರ್ಥವಾಗುತ್ತದೆ.. ಕೆಲವೊಮ್ಮೆ ಧನಂಜಯನಾಗಿ ಇನ್ನು ಕೆಲವೊಮ್ಮೆ ಅವರೇ ಅನಂತಜ್ಜನಾಗಿ ನಮ್ಮೆದುರು ಕಾಣಿಸಿಕೊಳ್ಳುತ್ತಾರೆ. ಗೋವಿಂದ ಹೆಗಡೆಯ ನಂತರ ಅದೇಪಾರಿ ಸಜ್ಜನನಾಗಿ ಬದುಕುವ ಗಜಾನನ ಹೆಗಡೆಗೆ ಹಾವು ಕಚ್ಚಿದಾಗ ಆ ವಿಷವನ್ನು ಬಾಯಿಯಿಂದ ಕಚ್ಚಿ ತೆಗೆಯುವ ಮಲ್ಲಿಗೆಯ ವಿಷಯದಲ್ಲಿ ಜಾರಬಹುದಾದ ಎಲ್ಲ ಸಂದರ್ಭಗಳಿದ್ದರೂ ಅವಧೂತರ ವಾಣಿಯಂತೆ ಸಂಭಾವಿತರದ ಕುಟುಂಬದವರು ಹೀಗೆ ಮಾಡಲಾರು ಎನ್ನುವುದನ್ನು ಆತನ ನಡವಳಿಕೆ ತೋರಿಸುತ್ತದೆ. ಕಾಶಿಯಲ್ಲಿ ಕಮಲಾಕರ ಹೆಗಡೆ ದೇಹತ್ಯಾಗ ಮಾಡುವದರೊಂದಿಗೆ ಕಥಾನಕ ಇನ್ನೊಂದು ಮಜಲು ಪ್ರವೇಶಿಸುತ್ತದೆ.
ಯಾವ ಕರಿಮೆಣಸಿನ ವ್ಯಾಪಾರ ಇವರನ್ನು ರಾಜಸ್ಥಾನದವರೆಗೆ ಕೊಂಡೊಯ್ದಿತ್ತೋ ಅದೇ ವ್ಯಾಪಾರದ ಸಂಪರ್ಕದಿಂದ ಬಂದ ಪ್ಲೇಗು ಇಡೀ ಕುಟುಂಬ ಸರ್ವನಾಶವಾಗುವದು ಮಾತ್ರ ದುರಂತ. ಕನಿಷ್ಟ ಹೆಣ ಎತ್ತುವವರೂ ಇಲ್ಲದೇ ಹೋಗುವ ಘಟನೆ ಮನಸ್ಸನ್ನು ಮಿಡಿಯುತ್ತದೆ. ಸತ್ಯಸಂಧರಾದರೂ ಸಹ ಸಾಮ್ರಾಜ್ಯದ ಇತಿಶ್ರೀ ಆಗಬಾರದೆಂದೇನೂ ಇಲ್ಲವಲ್ಲ. ಗೇರುಸೊಪ್ಪಾದ ಚನ್ನಭೈರಾದೇವಿಗೂ ಕೊನೆಯ ದಿನಗಳೂ ಸಹ ದುರಂತವಾಯಿತು. ಬಹುಶಃ ವ್ಯಾಪಾರ ಮತ್ತು ಲಾಭ ಈ ಕುಟುಂಬವನ್ನು ಕಾಡಿತ್ತೋ ಏನೋ! ಆಕಾಶರಾಹುವಿನ ಪ್ರಕರಣವೇ ಇರಲಿ, ರಾತ್ರಿ ಕಾಲದಲ್ಲಿ ಕೂಗಿದ ಅರಿಷ್ಟದ ಕಾಗೆ ಅನ್ಯಾಯದ ಗೋವು ಇಲ್ಲೆಲ್ಲ ಶಕುನ ಮತ್ತು ಅತೀಂದ್ರಿಯ ಶಕ್ತಿಗಳು ಈ ಕುಟುಂಬವನ್ನು ಆಗಾಗ ಎಚ್ಚರಿಸುವ ಕೆಲಸ ಮಾಡುತ್ತಿರುವುದನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಯಕ್ಷಗಾನ, ತಾಳಮದ್ದಳೆ, ಹಿಂದುಸ್ಥಾನೀ ಸಂಗೀತ ಶಾಸನಗಳು ಇವೆಲ್ಲವೂ ಕಥಾನಕಕ್ಕೆ ಪುಷ್ಟಿಕೊಡುತ್ತವೆ.
ಎರಡನೇ ಭಾಗದ ನಾಯಕ ಅನಂತಜ್ಜನ ಅಪ್ಪ ಚಿದಂಬರ ಹೆಗಡೆಯದು. ಗೋವಿಂದ ಹೆಗಡೆಗೂ ಚಿದಂಬರ ಹೆಗಡೆಗೂ ಸಾಮ್ಯವಿದೆ. ಅಲ್ಲಿ ಅವಧೂತರು ಗೋವಿಂದನಿಗೆ ಆತನ ಮೂಲವನ್ನು ತೋರಿಸಿಕೊಟ್ಟರೆ ಇಲ್ಲಿ ಶಾಮಾ ಜೋಯಿಸರು ಮತ್ತು ಸಾಕ್ಷಾತ್ ಕೊಲ್ಲೂರು ಮೂಕಾಂಬಿಕೆಯೇ ಆತನ ಬೆಂಬಲಕ್ಕಿದ್ದಾರೆ. ಹಿರಿಯರು ಮಾಡಿರುವ ಸತ್ಕರ್ಮಗಳು ಅವರ ಸಂತಾನವನ್ನು ಪೊರೆಯುತ್ತವೆ. ಅದಕ್ಕೆ ಸಾಕ್ಷಿ ಚಿದಂಬರ ಸತ್ಯವನ್ನೇ ನುಡಿದು ಅಪ್ರಾಯಸ್ಥಳಾದ ಗಿರಿಜೆಯನ್ನು ಮದುವೆಯಾದ “ಗಿರ್ಜೆ ನಂಬ್ರ” ಕೇಸನ್ನು ಗೆದ್ದಿದ್ದು. ಗೋವಿಂದನಿಗಾದರೆ ಜಮೀನು ಮಾಡಲು ರಿಕಾರ್ಡ್‌ಗಳನ್ನೆಲ್ಲ ನೋಡಬೇಕೆಂದಿರಲಿಲ್ಲ. ಜಾಗದ ಗುರುತು ಹಾಕಿಕೊಂಡರಾಗಿತ್ತು. ಅರವತ್ತರ ದಶಕದಲ್ಲಿ ಸ್ವಾತಂತ್ರ್ಯ ಬಂದ ಕಾರಣ ಜಾಗವನ್ನು ಸರಕಾರದಿಂದ ಮಂಜೂರಿ ಮಾಡಿಸಿಕೊಳ್ಳಬೇಕಾಗಿತ್ತು. ಗೋವಿಂದ ಜಂಗಮಪುರಕ್ಕೆ ಬಂದು ತನ್ನ ಮನೆ ಕಟ್ಟಿಕೊಂಡಿರುವುದೂ ಅಲ್ಲಿದ್ದ ಗೋವಿಂದ ಹೆಗಡೆಯ ಗುಂದದಮೇಲೆಯೇ. ಮತ್ತೊಮ್ಮೆ ಚಿದಂಬರ ಹೆಗಡೆಯ ಮನೆಯೂ ಅದೇ ಗುಂದದಲ್ಲಿ ಎದ್ದಿರುವುದನ್ನು ಗಮನಿಸಿದರೆ ಆ ಜಾಗವನ್ನು ಕಾಯುತ್ತಿರುವ ಮಾಸ್ತಿ, ಜಟಕಗಳೆಲ್ಲ ಯಾವುದೋ ಕಾರಣಕ್ಕೆ ಅವರನ್ನು ಕರೆತಂದಿದೆ ಎಂದು ಅನಿಸುತ್ತದೆ.
ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು. ಇಲ್ಲಿ ಬಾಲಗೋಪಾಲ ಜೋಯಿಸರು, ಸುಬ್ರಾಯ ಶಾಸ್ತ್ರಿ, ಸಭಾಹಿತರು, ಹೇರಂಭ, ಜಟ್ಟಿ ಇವರೆಲ್ಲರೂ ಈ ಕಾಲದ ಪ್ರತಿನಿಧಿಗಳಾಗಿ ಮೂಡಿಬಂದಿದ್ದಾರೆ. ಆದರೂ ಗೋವಿಂದ ಹೆಗಡೆಯ ಮನೆತನವನ್ನು ಸಾತ್ವಿಕ ಶಕ್ತಿ ಸದಾ ಕಾಯುತ್ತದೆ. ಈ ಕುಟುಂಬವೆನ್ನುವುದು ದೂರ್ವೆಜಡ್ಡಿನಂತೆ. ಬರಬಂದು ಒಣಗಿದ್ದಾಗ ಸಿಗದ ಅದು ಒಂದು ತುಂತುರು ಮಳೆ ಬಂದರೆ ಸಾಕು, ಹುಲುಸಾಗಿ ಎದ್ದು ನಿಲ್ಲುವಂತೆ ಅದೇ ಗುಂದದಲ್ಲಿ ಮತ್ತೆ ತಲೆಯೆತ್ತಿ ನಿಂತಿದೆ. ಇಡೀ ಕಾದಂಬರಿಯುದ್ದಕ್ಕೂ ಅಲೌಕಿಕ ಶಕ್ತಿಗಳು ಪ್ರಭಾವವನ್ನು ಬೀರುತ್ತವೆ. ಅದನ್ನು ನಿರೂಪಿಸುವಾಗ ಅವೆಲ್ಲವೂ ಗ್ರಾಮೀಣ ಬದುಕಿನ ಭಾಗವಾಗಿ ಸಹಜವಾದ ರೀತಿಯಲ್ಲಿ ಚಿತ್ರಿಸಿದ್ದಾರೆಯೇ ಹೊರತು ಅದನ್ನು ವೈಭವಿಸಿಲ್ಲ. ಆದರೆ ಮಾಟಮಂತ್ರದ ಹೆಸರಿನಲ್ಲಿ ಸುಬ್ರಾಯ ಶಾಸ್ತ್ರಿ ತೋರಿಸಿದ ಗೊಂಬೆಯ ಪವಾಡವನ್ನು ಹೊರತೆಗೆದಿದ್ದಾರೆ. ನಿಧಿಯು ವಿಷಯದಲ್ಲಿಯೂ ಇದೇ ಕಾಳಜಿಯನ್ನು ಇಟ್ಟು ಅದನ್ನು ನೆಲದಲ್ಲಿ ಭದ್ರವಾಗಿ ಇಟ್ಟಿದ್ದಾರೆ. ಈ ನೆಲದಲ್ಲಿ ದೈವವೆನ್ನುವುದು ಪೂರಕವಾಗಿ ಇರುತ್ತದೆಯೇ ಹೊರತೂ ಅದು ಬದುಕನ್ನು ಹಾಳುಮಾಡಲಲ್ಲ ಎನ್ನುವುದರ ಕಾಳಜಿಯನ್ನು ಕಥಾರೂಪಕದಲ್ಲಿ ಸಹಜವಾಗಿ ಬರುವಂತೆ ನೋಡಿಕೊಂಡಿದ್ದಾರೆ. ಲೇಖಕರು ಸಂಭಾಷಣೆಗಿಂತ Narration ನ ಮೂಲಕ ಕಥನವನ್ನು ಅಭಿವ್ಯಕ್ತಿಸುತ್ತಾರೆ.
“ಭಗವಂತ ಒಂದೇ ಹೆಜ್ಜೆ ದೂರದಲ್ಲಿದ್ದಾನೆ, ಆದರೂ ಆತ ಸಿಗುವುದಿಲ್ಲ; ಯಾಕೆಂದರೆ ಆತನೆಡೆಗೆ ಹೋದೆವು ಅಂತಾದರೆ ಆತ ಮತ್ತೊಂದು ಹೆಜ್ಜೆ ದೂರದಲ್ಲಿ ಇರುತ್ತಾನೆ. ಹಾಗಾಗಿ ಆತನಿಗಾಗಿ ಹುಡುಕಾಡುವುದಲ್ಲ. ಆತನ ಇರವನ್ನು ಗಮನಿಸಿ ನಮ್ಮ ಸುತ್ತಲೂ ತಿರುಗಬೇಕು. ಆಗ ಆತ ನಮ್ಮ ಸುತ್ತಲೂ ವ್ಯಾಪಿಸುತ್ತಾನೆ” ಎನ್ನುವ ಗಿರಿಜೆಯ ಮಾತು ಕಾದಂಬರಿಯ ನೆಲೆಗಟ್ಟು. ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕಾದಂಬರಿಯಾಗಿ ಈ ಕೃತಿ ಮೂಡಿಬರುವುದು ಇಂತಹ ಕಾರಣಕ್ಕೆ. ತಲೆಮಾರಿನ ಕಥೆಗಳನ್ನು ಹೇಳುವ ಕಥೆಗಳು ಬೇಕಾದಷ್ಟಿದೆ. ಆದರೆ ಇವೆರಡರಲ್ಲಿ ವಿಶಿಷ್ಟರೀತಿಯಲ್ಲಿ ಗಮನ ಸೆಳೆದಿರುವುದು ಈಗ ಕೆಲ ವರ್ಷಗಳ ಹಿಂದೆ ವಿ. ಟಿ. ಹೆಗಡೆ ಶೀಗೆಹಳ್ಳಿಯವರ “ತಲೆಮಾರು”. ಇದು ಸಿರಸಿ ಭಾಗದ ಕುಟುಂಬದ ಪರಿಚಯವನ್ನು ಸಶಕ್ತವಾಗಿ ಮಾಡಿತ್ತು. ಅದರ ನಂತರ ಬಂದಿರುವುದು “ಕೇಳು ಧನಂಜಯ”. ಇದು ತಲೆಗಳಿಯಂತೆ ಸಾಗುವುದಿಲ್ಲ. ಕಾಡಿನಲ್ಲಿ ಸಣ್ಣದಾಗಿ ಹುಟ್ಟಿದ ಅಬ್ಬಿ ತೊರೆಯಾಗಿ ನಂತರ ಸ್ವಾತಿಹೊಳೆಯಾಗಿ ಅಘನಾಶಿನಿಯಲ್ಲಿ ಸೇರಿ ಸಾಗರಕ್ಕೆ ಸಾಗುವಾಗ ಅಡ್ಡಲಾಗಿ ಕಟ್ಟಿದ ಬಾಂಧಾರಗಳಲ್ಲಿ ವಿಶ್ರಮಿಸಿ, ಕಠಿಣವಾದ ಬಂಡೆಯನ್ನು ಬಳಸಿ ತನ್ನ ಗುರಿ ಮುಟ್ಟುವಂತೆ ತಣ್ಣಗೆ ಹರಿಯುತ್ತದೆ.
ಕಾಲ ಸರಿಯುತ್ತಾ ದಿನ ವಾರ ತಿಂಗಳು ಶತಮಾನಗಳಾಗಿ ಅಳೆತೆಗೋಲಿಗೆ ಸಿಗುತ್ತದೆ. ಆದರೆ ಋತವೆನ್ನುವುದು ಶಾಶ್ವತ ಸತ್ಯ; ಕಾಲನ ಹೊಡೆತಕ್ಕೆ ಸಿಕ್ಕಿದರೂ ಮಳೆ ಬಂದಾಗ ಹುಟ್ಟುವ ಗರಿಕೆ ಜಡ್ಡಿನಂತೆ ತಲೆಮಾರನ್ನು ಜತನದಿಂದ ಕಾಪಿಟ್ಟು ಮೌಲ್ಯಗಳನ್ನು ನೆಲೆಗೊಳ್ಳುವಂತೆ ಮಾಡುತ್ತದೆ “ಕೇಳು ಧನಂಜಯ”.
(ಕೃತಿ: ಕೇಳು ಧನಂಜಯ (ಕಾದಂಬರಿ), ಲೇಖಕರು: ರಾಜಶೇಖರ ಜೋಗಿನ್ಮನೆ, ಪ್ರಕಾಶಕರು: ಸಮನ್ವಿತ, ಬೆಂಗಳೂರು, ಬೆಲೆ: ರೂ. 200/-)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.