Advertisement
ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ: ಸುಭದ್ರಾ ಹೆಗಡೆ ಬರಹ

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ: ಸುಭದ್ರಾ ಹೆಗಡೆ ಬರಹ

ಕಾದಂಬರಿಯನ್ನು ಓದುತ್ತಾ ಹೋದಂತೆ ಶೌರ್ಯ, ಸಾಹಸಕ್ಕೆ ಹೆಸರಾಗಿ ನಿಂತ ವೀರವನಿತೆ ಜೀವ ತಳೆದು ನಮ್ಮೆದುರು ನಿಲ್ಲುವಂತೆ ರಾಣಿಯ ಪಾತ್ರವನ್ನು ಅಷ್ಟು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಜೈನ ಧರ್ಮದವಳಾದ ರಾಣಿ ಸಾಳುವ ವಂಶದ ಕೊನೆಯ ಕುಡಿ, ಸರ್ವಧರ್ಮ ಸಮನ್ವಯವನ್ನು ಸಾರಿದವಳು. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಗುರುಗಳಾದ ಭಟ್ಟಾಕಳಂಕರು, ಪ್ರಧಾನಿಯಾದ ಸಭಾಹಿತರು, ಶಬಲೆ, ಜಿನದತ್ತ, ಸತ್ಯಾಶ್ರಯ ಇವರೆಲ್ಲರೂ ಕಳೆದುಹೋದ ಸಮೃದ್ಧವಾದ ಸಾಮ್ರಾಜ್ಯವೊಂದರ ಸಾಕ್ಷಿಯಾಗಿ ನಿಲ್ಲುತ್ತಾರೆ. ರಾಣಿಗೆ ಬೆಂಗಾವಲಾಗಿ ನಿಂತು ನಾಡ ಪ್ರೇಮವನ್ನು ತೋರಿಸುತ್ತಾರೆ.
ಗಜಾನನ ಶರ್ಮಾ ಬರೆದಿರುವ ಐತಿಹಾಸಿಕ ಕಾದಂಬರಿ ‘ಚೆನ್ನಭೈರಾದೇವಿʼ ಕುರಿತು ಸುಭದ್ರಾ ಹೆಗಡೆ ಬರಹ

ಶ್ರೀ ಗಜಾನನ ಶರ್ಮಾ ಅವರು ಬರೆದಿರುವ ಐತಿಹಾಸಿಕ ಕಾದಂಬರಿ ‘ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ’ ಅತ್ಯುತ್ತಮವಾದ ಕೃತಿ. ಇತಿಹಾಸದ ಕಾಲಗರ್ಭದಲ್ಲಿ ಅಡಗಿರುವ ಕನ್ನಡ ನಾಡಿನ ವೀರರಾಣಿಯರಾದ ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ, ಕೆಳದಿಯ ಚೆನ್ನಮ್ಮಾಜಿ ಇವರೆಲ್ಲರೂ ತಮ್ಮ ಕ್ಷಾತ್ರ ತೇಜಸ್ಸಿನಿಂದ, ಶೌರ್ಯ ಹೋರಾಟದಿಂದ ಇಂದಿಗೂ ಅಮರರು. ಹಾಗೆಯೇ ರಾಣಿ ಚೆನ್ನಭೈರಾದೇವಿಯು ತಾನು ಹುಟ್ಟಿದ ನಾಡಿನ ಮಣ್ಣಿನ ಋಣವನ್ನು ತೀರಿಸಲು ಬದುಕನ್ನು ಮುಡಿಪಾಗಿ ಇಟ್ಟವಳು. ಕರಿಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಇವಳು ನಮ್ಮ ಉತ್ತರಕನ್ನಡದ ಕರಾವಳಿ ಭಾಗವನ್ನು, ಘಟ್ಟದ ಕೆಲಭಾಗಗಳನ್ನು 54 ವರ್ಷಗಳ ಕಾಲ ಅಂದರೆ 1502-1606ರ ತನಕ ಸುವ್ಯವಸ್ಥಿತವಾಗಿ ಆಳಿದವಳು. ಹೊನ್ನಾವರ, ಗೇರುಸೊಪ್ಪೆ, ಭಟ್ಕಳ, ನಗಿರೆ, ಹಾಡುವಳ್ಳಿ ಮುಂತಾದ ಕಡೆ ಆಡಳಿತ ನಡೆಸಿ, ನಾಡನ್ನು ಸುಭೀಕ್ಷವಾಗಿರಿಸಿ, ಪೋರ್ಚುಗೀಸರನ್ನು ಎದುರಿಸಿ ಸೋಲಿಸಿ ನಾಡನ್ನು ಉಳಿಸಿಕೊಂಡವಳು. ಈ ಕಾದಂಬರಿಯನ್ನು ಓದುತ್ತಾ ಹೋದಂತೆ ಶೌರ್ಯ, ಸಾಹಸಕ್ಕೆ ಹೆಸರಾಗಿ ನಿಂತ ವೀರವನಿತೆ ಜೀವ ತಳೆದು ನಮ್ಮೆದುರು ನಿಲ್ಲುವಂತೆ ರಾಣಿಯ ಪಾತ್ರವನ್ನು ಅಷ್ಟು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಜೈನ ಧರ್ಮದವಳಾದ ರಾಣಿ ಸಾಳುವ ವಂಶದ ಕೊನೆಯ ಕುಡಿ, ಸರ್ವಧರ್ಮ ಸಮನ್ವಯವನ್ನು ಸಾರಿದವಳು. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಗುರುಗಳಾದ ಭಟ್ಟಾಕಳಂಕರು, ಪ್ರಧಾನಿಯಾದ ಸಭಾಹಿತರು, ಶಬಲೆ, ಜಿನದತ್ತ, ಸತ್ಯಾಶ್ರಯ ಇವರೆಲ್ಲರೂ ಕಳೆದುಹೋದ ಸಮೃದ್ಧವಾದ ಸಾಮ್ರಾಜ್ಯವೊಂದರ ಸಾಕ್ಷಿಯಾಗಿ ನಿಲ್ಲುತ್ತಾರೆ. ರಾಣಿಗೆ ಬೆಂಗಾವಲಾಗಿ ನಿಂತು ನಾಡ ಪ್ರೇಮವನ್ನು ತೋರಿಸುತ್ತಾರೆ. ಶ್ರೀ ಗಜಾನನ ಶರ್ಮಾರವರು ಗತವನ್ನು ಬಗೆದು, ವರ್ತಮಾನದ ಕಣ್ಣಿನಲ್ಲಿ ನೋಡಿ ಎಲ್ಲಿಯೂ ಚ್ಯುತಿ ಬರದಂತೆ ಕಾದಂಬರಿಯನ್ನು ರಚಿಸಿರುವುದು ಹೆಮ್ಮೆಯ ಸಂಗತಿ. ರಾಣಿ ತನ್ನ ಆಡಳಿತದ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಉಳಿಸಿಕೊಳ್ಳುವಲ್ಲಿ ಪಟ್ಟ ಪಾಡು ವರ್ಣನಾತೀತ. ಬದುಕನ್ನು ಮುಡಿಪಾಗಿಟ್ಟ ಶ್ರಾವಕಿ ವಿದೇಶಿಯರೊಡನೆ ವ್ಯಾಪಾರ, ವ್ಯವಹಾರ ನಡೆಸಿ ಅವರಿಂದಲೇ ಹೊಗಳಿಸಿಕೊಂಡ ಧೀರೆ, ಜಾಣೆ, ಮಹಾಮಂಡಿಲೇಶ್ವರಿ ಚೆನ್ನಭೈರಾದೇವಿಯ ಘನವ್ಯಕ್ತಿತ್ವದ ಅನಾವರಣ ಈ ಕಾದಂಬರಿಯಲ್ಲಿದೆ.

ನಮ್ಮ ನೆಲವನ್ನಾಳಿದ ರಾಣಿಯ ಕುರಿತಾಗಿ ನಮಗೆ ತಿಳಿದಿರದ ಅನೇಕ ಮಾಹಿತಿಗಳು ನಮಗಿಲ್ಲಿ ಸಿಗುತ್ತವೆ. ರಾಣಿಯ ಬಾಲ್ಯ, ಯೌವ್ವನ, ವಿದ್ಯಾಭ್ಯಾಸ, ಸಿಂಹಾಸನ ಏರುವ ಸಮಯ ಎಲ್ಲಾ ಕಾಲಘಟ್ಟದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಅವಳದು ತಾಯಾಡಳಿತ ಪದ್ಧತಿ, ಅವಳಕ್ಕ ಚೆನ್ನಾದೇವಿಯ ಮರಣದ ನಂತರ ಅವಳ ಸೋದರಮಾವ ಕೃಷ್ಣದೇವರಸನ ಆಡಳಿತಕ್ಕೆ ಒಳಪಟ್ಟ ಅನೇಕ ಪ್ರದೇಶಗಳು ಚೆನ್ನಭೈರಾದೇವಿ ಸಿಂಹಾಸನವನ್ನೇರಿದ ಬಳಿಕ ಅವಳ ಆಡಳಿತಕ್ಕೆ ಒಳಪಟ್ಟವು. ಚೆನ್ನಭೈರಾದೇವಿ ವಿವಾಹವಾಗಿ ತಾನೇ ಅರಸನಾಗಬೇಕೆಂದಿದ್ದ ಕೃಷ್ಣದೇವರಸನ ಕನಸು ಅವಳ ನಿರಾಕರಣೆಯಿಂದ ಭಗ್ನವಾಯ್ತು. ಅದರಿಂದ ಕುಪಿತನಾದ ಅವನು ಅವಳ ವಿರುದ್ಧ ಪಿತೂರಿ ನಡೆಸಿ, ಷಡ್ಯಂತ್ರ ರೂಪಿಸಿದನು. ಭಟ್ಟಾಕಳಂಕರಂತಹ ಗುರುಗಳು, ಸಭಾಹಿತರಂತಹ ಸಜ್ಜನ ಪ್ರಧಾನಿ, ಶಬಲೆಯಂತಹ ಆತ್ಮಸಖಿ, ಜಿನದತ್ತನಂತಹ ಸಾಧುವ್ಯಕ್ತಿ, ಅವಳನ್ನು ಕೊಂಡಾಡುವ ಪ್ರಜೆಗಳೆಲ್ಲರೂ ಅವಳ ಸುತ್ತಲಿದ್ದರೂ ದ್ವೇಷಿಸುವವರೂ, ದ್ವೇಷಿಸುವವರೂ ಜೊತೆಗಿದ್ದುದರಿಂದ ಕೆಳದಿಯ ವೆಂಕಟಪ್ಪನಾಯಕರಿಗೆ ಸಹಾಯ ಮಾಡಿ ರಾಣಿ ಸೋಲುವಂತೆ ವ್ಯೂಹ ರಚಿಸಿದರು. ಸಂಪದ್ಭರಿತವಾದ ರಾಜ್ಯವನ್ನು ಕಳೆದುಕೊಂಡ ರಾಣಿ ತನ್ನ ೭೪ನೇ ವಯಸ್ಸಿನಲ್ಲಿ ಸೆರೆಮನೆ ವಾಸ ಅನುಭವಿಸುವಂತಾಯ್ತು.

ಯುದ್ಧದ ಸಂದರ್ಭದಲ್ಲಿ ಅವಳು ತೋರಿಸಿದ ಸಮಯಪ್ರಜ್ಞೆ, ಪ್ರಜಾವಾತ್ಸಲ್ಯದಿಂದ ಹೋರಾಡಿದ ಸಾಹಸಗಳು ಅವಳನ್ನು ಅಸಾಮಾನ್ಯ ವ್ಯಕ್ತಿತ್ವದ ರಾಣಿಯೆಂದು ಸಾಬೀತುಪಡಿಸುತ್ತದೆ. ವ್ಯಾಪಾರ, ವ್ಯವಹಾರ ಮಾಡುತ್ತಲೇ ಪೋರ್ಚುಗೀಸರ ಕುತಂತ್ರ ಅರಿತು ಗೋವಾದಲ್ಲಿನ ಸಾರಸ್ವತರಿಗೆ ತನ್ನ ನೆಲದಲ್ಲಿ ನೆಲೆಯನ್ನು ಕಲ್ಪಿಸಿ, ಬದುಕಲು ಅವಕಾಶಕೊಟ್ಟ ಕರುಣಾಮಯಿ ಅವಳು. ಸಾಮಾನ್ಯ ಹಳ್ಳಿಯ ಹೆಣ್ಣುಮಗಳು ರಾಣಿಯಾಗಿ ವಿದೇಶಿಯರೊಂದಿಗೆ ವ್ಯವಹರಿಸಿ, ಜಾಣ್ಮೆ ತೋರಿಸಿ ಅವರನ್ನು ಚಾಣಾಕ್ಷತೆಯಿಂದ ಸೋಲಿಸಿ ತನ್ನ ನೆಲವನ್ನು ಉಳಿಸಿಕೊಂಡವಳು. ಆದರೆ ತನ್ನ ಇಳಿವಯದಲ್ಲಿ ಸೆರೆಸಿಕ್ಕು, ಸೆರೆಮನೆಯಲ್ಲಿಯೇ ಸಲ್ಲೇಖನ ವ್ರತ ಕೈಗೊಂಡು ತನ್ನ ಪ್ರಾಣ ತ್ಯಜಿಸಿದಳು. ಗತಕಾಲದ ಘಟನೆಗಳನ್ನು ವರ್ತಮಾನದ ಕಣ್ಣಿನಿಂದ ನೋಡಿ, ಅದಕ್ಕೆ ಮರುಜೀವಕೊಟ್ಟು ಅಷ್ಟು ಸಶಕ್ತವಾಗಿ ಬರೆಯುವುದು ಸುಲಭದ ಮಾತಲ್ಲ. ಕರಿಮೆಣಸಿನರಾಣಿ, ನಮ್ಮ ನೆಲದ ಕಣ್ಮಣಿ, ಸಿರಿಮಣಿ ಚೆನ್ನಭೈರಾದೇವಿಯ ಭವ್ಯ ವ್ಯಕ್ತಿತ್ವವನ್ನು ಮತ್ತೆ ಮತ್ತೆ ಮೆಲುಕು ಹಾಕುವ ಈ ಕಾದಂಬರಿ ರಚಿಸಿದ ಶ್ರೀ ಗಜಾನನ ಶರ್ಮಾರವರ ಈ ಕಾರ್ಯ ಸುತ್ಯಾರ್ಹವಾದುದು.

(ಕೃತಿ: ಚೆನ್ನಭೈರಾದೇವಿ, ಲೇಖಕರು: ಡಾ. ಗಜಾನನ ಶರ್ಮ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 395/-)

About The Author

ಸುಭದ್ರಾ ಹೆಗಡೆ

ಸುಭದ್ರ ಹೆಗಡೆ ಮೂಲತಃ ಹೊನ್ನಾವರದ ಕೆರೆಕೋಣದವರು, ಪ್ರಸ್ತುತ ಇಂಗ್ಲೆಂಡ್ ನಿವಾಸಿ. 30 ವರ್ಷಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡದ ಅನೇಕ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಒಲವು ಹೊಂದಿರುವ ಇವರು ಕಥೆ ಕವನ ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಇದೀಗ ತಮ್ಮ ಬಿಡುವಿನ ಸಮಯವನ್ನು ಓದಿಗೆ, ಬರವಣಿಗೆಗೆ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಅನೇಕ ಲೇಖನಗಳು, ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

3 Comments

  1. ಗಜಾಙ ಭಟ್ಟ

    ಈ ಕಾದಂಬರಿ ಬಗ್ಗೆ ಅಭಿಪ್ರಾಯ ಚೆನ್ನಾಗಿ ಮೂಡಿ ಬಂದಿದೆ. ಈ ಕಾದಂಬರಿಯನ್ನು ನಾನು ಕೊಂಡು ಓದಿದ್ದೆನೆ.

    Reply
  2. ಸದಾನಂದ ಪಾಟೀಲ

    ತುಂಬಾ ಚನ್ನಾಗಿ ಬಂದಿದೆ. ಅವರಿಂದ ಇನ್ನಷ್ಟು ಬರಹಗಳು ಬರಲಿ.

    Reply
  3. ರಾಧಾ ಕೃಷ್ಣ

    ವಿಮರ್ಶೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಮೇಡಂ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ