5 ಯಾಲ್ಟಾದಲ್ಲೊಂದು ಸಂಜೆ
ಒಣ ಲಾವಂಟೈನ್ ಮುಖವುಂಟು ಅವನಿಗೆ,
ಮೈಲಿ ಕಲೆಗಳು ಅವಿತು ಕೆನ್ನೆಕೂದಲ ಕೆಳಗೆ. ಪೊಟ್ಟಣದಲ್ಲಿ
ತಡಕಾಡುತಿರುವಂತೆ ಬೆರಳುಗಳು ಸಿಗರೇಟಿಗೆ,
ಬಲಗೈಯ ಮೇಲೊಂದು ಮಂಕಾದ ಉಂಗುರ ಫಕ್ಕನೇ
ಇನ್ನೂರು ವಾಲ್ಟುಗಳ ಬೆಳಕನ್ನೆಸೆವುದು; ನನ್ನ ಕಣ್ಣುಗಳ ಮಣಿ
ತಡೆಯಲಾರದು ಅಂಥ ಸೆಳಕು.
ರೆಪ್ಪೆ ಮುಚ್ಚುವುದು. ಬಾಯ್ತುಂಬ ನೀಲಿ ಹೊಗೆ
ಹೀರುತ್ತ ಆತ: “ದಯವಿಟ್ಟು ಕ್ಷಮಿಸಿ.”
ಕ್ರಿಮಿಯನ್ ಜನವರಿ. ಚಳಿಗಾಲದ ಆಗಮನ
ಕಪ್ಪು ಸಮುದ್ರದ ದಂಡೆಗೆ ಸಂಚಾರ ಬಂದಂತೆ,
ಕತ್ತಾಳೆ ವೃಕ್ಷಗಳ ಸೂಜಿಮೊನೆಗಳ ಮೇಲೆ
ಬರ್ಫ ಕಳಕೊಳ್ಳುವುದು ತನ್ನ ಹಿಡಿತವ.
ರೆಸ್ಟೊರಾಂಟುಗಳೆಲ್ಲ ಈಗ ಬರಿದು.
ಇಕ್ತಿಯೋಸಾರಗಳು ಕಪ್ಪು ಹೊಗೆ ತೇಗುವುವು
ಹಡಗು ನಿಲ್ಲುವ ಎಡೆಯ ಕೊಳಕು ಮಾಡುವುವು. ಕೊಳೆತ ಸೊಪ್ಪುಗಳು
ಗಾಳಿಗೆ ಗಂಧ ನೀಡುವುವು. “ಕುಡಿಯುತ್ತೀಯ ಈ ಕೆಟ್ಟ ಕಷಾಯ?”, “ಹೌದು.”
ಮುಗುಳುನಗೆ, ಮುಸ್ಸಂಜೆ, ನಂತರ ನೀರಿನ ಸೀಸೆ.
ಅಷ್ಟು ದೂರದಲಿ ಬಾರಿನ ವ್ಯಕ್ತಿ ಕೈ ಹಿಸುಕುತ್ತ
ವೃತ್ತಗಳ ಮೂಡಿಸುವಂತೆ, ಮೀನ ಹಡಗದ ಸುತ್ತ
ನೀರು ಹಂದಿಯ ಮರಿಗಳ ತೆರದಿ. ಕಿಟಕಿಗಳ
ಆಯತ. ಮಡಕೆಗಳಲ್ಲಿ ಹಳದಿ ಹೂ. ಅಲ್ಲದೇ
ಪಕ್ಕದಲೆ ಉರುಳಿಬೀಳುವ ಹಿಮದ ಪಕಳೆಗಳು.
ನಿನ್ನ ಕಾಲಿಗೆ ಬಿದ್ದು ಬೇಡುವೆನು: ನಿಮಿಷವೇ, ನಿಲ್ಲು!
ನೀನು ಪ್ರತ್ಯೇಕವಾಗಿ ರಮಣೀಯವೆಂದೇನಲ್ಲ
ಅನಾವರ್ತನೀಯವೆಂದು.
6 ಮಡಿವಾಳ್ತಿ ಸಂಕದ ಮೇಲೆ
ಮಡಿವಾಳ್ತಿ ಸಂಕದ ಮೇಲೆ, ಎಲ್ಲಿ ನೀನೂ ನಾನು
ಮಧ್ಯರಾತ್ರಿಯ ಗಂಟೆ ಮುಳ್ಳುಗಳಂತೆ ಪರಸ್ಪರ ಅಪ್ಪಿ
ನಿಂತಿದ್ದೆವೋ, ಮರುಕ್ಷಣವೆ ದೂರ ಸರಿವವರು,
ಒಂದು ದಿನಕ್ಕಲ್ಲ, ಎಲ್ಲ ದಿನಕ್ಕೂ—ಇಂದು ಮುಂಜಾನೆ ನಮ್ಮ
ಸಂಕದ ಮೇಲೊಬ್ಬ ಆತ್ಮರತಿಯ ಬೆಸ್ತ,
ಗಾಳದ ಬೆಂಡ ಮರೆತು, ಬಿಡುಗಣ್ಣಲ್ಲಿ ನೋಡುವನು ತನ್ನ
ಅಸ್ಥಿರ ನದೀಬಿಂಬದ ಕಡೆಗೆ.
ಅಲೆಗಳ ಮೇಲೊಬ್ಬ ಮುದುಕ, ಅಲೆಗಳ ಮೇಲೊಬ್ಬ ಯುವಕ;
ಹುಬ್ಬಿಂದ ಹುಬ್ಬಿಗೆ ಸುಕ್ಕುಗಳ ಬಲೆ ಹರಿದು
ಯೌವನದ ಚಹರೆಯಲಿ ಕರಗುವುದು.
ನಮ್ಮ ಜಾಗವ ಹಿಡಿದು—ಯಾಕಿರದು? ಅದು ಅವನ ಹಕ್ಕು.
ಈಚಿನ ವರ್ಷಗಳಲ್ಲಿ ಯಾವುದು ಏಕಾಕಿಯೋ
ಅದು ಬೇರೊಂದು ಕಾಲದ ಪ್ರತೀಕವೂ ಹೌದು.
ಅವನ ಕೋರಿಕೆಯೋ ಜಾಗದ ಕುರಿತು.
ನೋಡಲಿ.
ನೀರೊಳಗೆ, ಸ್ಥಿತಪ್ರಜ್ಞನಾಗಿ, ತನ್ನೊಳಗೆ,
ತನ್ನ ತಾನೇ ಅರಿವುದಾದರೆ ಅದೂ ಆಗಲಿ. ನದಿಯಂತೂ
ಇಂದು ಅವನಿಗೇ. ಹೊಸ ಒಕ್ಕಲು ಬಂದು
ಮನೆಯೊಳಗೆ ಕನ್ನಡಿ ಹೊಡೆದು
ಉಳಿದ ವಸ್ತುಗಳನಿನ್ನೂ ತಂದಿರದ ಹಾಗೆ.
7 ಸಾಲುಗಾಡಿಗಳು
ಹೆಚ್ಚೆಚ್ಚು ನೆರಳುಗಳು ಚೆಲ್ಲಿದ ಹಾಗೆಯೇ
ಹೆಚ್ಚೆಚ್ಚು ದೂರ ಸಾಗುವುವು ಗಾಡಿಗಳು
ಕೊಯ್ಲಾದ ಗದ್ದೆಗಳ ನೋವ ಹಿಂದಕೆ ಬಿಟ್ಟು
ತೊರಚುಗಳು ಕೂಡ ಕೀರುವುವು ಹಾಗೆಯೇ
ಓಳಿಯಿಂದೋಳಿಗೂ ವಾಲುತ್ತ ಹೋಗುವುವು
ಹಸಿರು ಹೆಚ್ಚೆಚ್ಚು ದಟ್ಟೈಸಿದಂತೆಯೇ
ಸಮತಟ್ಟು ಬಯಲುಗಳು ಮಾಸಿ ಹೋಗುವುವು.
ಗಾಡಿಗಳು ಕಿರುಚುವುವು ಇನ್ನಷ್ಟು ದೊಡ್ಡಕೆ.
ಭೂರ್ಜ ವೃಕ್ಷಗಳ ಬೆತ್ತಲೆ ತುದಿಗಳೂ
ಹಳದಿ ಬರ್ಚ್ ಕುಂಚಗಳೂ ನೋಡುವುವು—
ತಮ್ಮ ಮೈ ನಡುಕ ನಿಂತಾಗ—
ಕಟ್ಟಿರುವ ಕಂತೆಗಳು ಹೇಗೆ
ತೆರೆದ ಆಕಾಶದ ಹರವ ಆಸೆಯಲ್ಲಿ ದಿಟ್ಟಿಸುತ್ತವೆ ಎಂದು.
ಮತ್ತೊಮ್ಮೆ ತೊಡಕು ಗಾಲಿಗಳಿಗೇನೋ.
ಮರಗಳಿಗೆ ಕೇಳಿಸದು ಹಕ್ಕಿಗಳ ಚಿಲಿಪಿಲಿ.
ಕೇಳಿಸುವುದೊಂದೇ ಅರಗಾಲುಗಳ ಕೀರಾಟ.
ಗಾಡಿ ಹೊಡೆವವರ ಬೈಗುಳದ ಒದರಾಟ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.