ಚೇಳಿನಿಂದಲೇ ಹುಟ್ಟಿದ ಚೇಳಿನಿಂದಲೇ ಸತ್ತ ಎನ್ನುವ ತನ್ನಜ್ಜಿಯ ಮಾತುಗಳೊಂದಿಗೆ ತನ್ನ ತಂದೆಯನ್ನು ನೆನಪಿಸಿಕೊಳ್ಳುವ, ಪಂದ್ರಾ ಆಗಸ್ಟ್‌ನ ಸ್ವಾತಂತ್ರ್ಯ ನಿಜಕ್ಕೂ ಎಂತಹ ಸ್ವಾತಂತ್ರ್ಯ? ಯಾವ ಬಗೆಯ ಸ್ವಾತಂತ್ರ್ಯ? ಒಂದೇ ಒಂದು ಕೊಡದ ನೀರನ್ನು ಬಾವಿಯಲ್ಲಿ ಮೊಗೆಯಲಾರದೆ ಹೋದ ಕೆಳಗೇರಿಯ ಜನ ಅಂದು ಮೊಗೆಮೊಗೆದು ಸೇದಿದರು, ಮತ್ತೆ ಬಾವಿಗೆ ಸುರವಿದರು, ಮರುದಿನ ಆ ಬಾವಿಗಳಲ್ಲಿ ಇನ್ನಾರು ನೀರು ಮೊಗೆಯಬಾರದಂತೆ ಊರ ಜನರೇ ಶಾಶ್ವತವಾಗಿ ಮುಚ್ಚಿದ್ದರು ಎನ್ನುವಾಗ ಕರುಳು ಹಿಂಡಿದಂತಾಗುತ್ತದೆ.
ಪ್ರೊ. ಅರವಿಂದ ಮಾಲಗತ್ತಿ ಆತ್ಮಕತೆ “ಗೌರ್ಮೆಂಟ್ ಬ್ರಾಹ್ಮಣ”, ಹೇಗೆ ತಮ್ಮ ಬದುಕು ಬದಲಾಯಿಸಿತು ಎನ್ನುವುದರ ಕುರಿತು ಪ್ರಶಾಂತ್ ಬೆಳತೂರು ಬರಹ ಇಲ್ಲಿದೆ
ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ನನ್ನದೇ ಊರಿನ ನಮ್ಮ ಗಣಿತ ಮೇಷ್ಟ್ರೊಬ್ಬರು ಪಾಠದ ನಡುವೆ ಅವರು ಇತ್ತೀಚೆಗೆ ಓದಿದ ಗೌರ್ಮೆಂಟ್ ಬ್ರಾಹ್ಮಣ ಎಂಬ ಪುಸ್ತಕದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿದ್ದ ನೆನಪು ಬಿಟ್ಟರೆ ಅವರು ಆ ಪುಸ್ತಕದ ಲೇಖಕರನ್ನು ಹೆಸರಿಸಿದ್ದರೋ ಇಲ್ಲವೋ ಎಂಬುದು ಈಗಿನ ನನ್ನ ಯೋಚನೆಗೆ ನಿಲುಕುತ್ತಿಲ್ಲ. ಆದರೆ ಹದಿನೈದು ವರ್ಷಗಳ ಹಿಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಾನು ಎಂ.ಇಡಿ.ಗೆ ಸೇರಿದ್ದ ಸಮಯದಲ್ಲಿ ನನ್ನ ಗೆಳೆಯನ ಗೆಳೆಯನೊಬ್ಬ ಕವಿ ಅರವಿಂದ ಮಾಲಗತ್ತಿ ಅವರ ಪರಿಚಯ ಮತ್ತು ಸಂದರ್ಶನ ನಡೆಸುವುದಕ್ಕಾಗಿ ಅವರ ಮನೆಗೆ ಹೋಗಿದ್ದನಂತೆ. ತನ್ನನ್ನು ಪತ್ರಿಕೋದ್ಯಮದ ವಿದ್ಯಾರ್ಥಿಯೆಂದು ಪರಿಚಯಿಸಿಕೊಳ್ಳುತ್ತಿರುವಾಗ ಮಾತಿನ ನಡುವೆ ಮಾಲಗತ್ತಿ ಅವರು ನನ್ನ ಯಾವ್ಯಾವ ಕೃತಿಗಳನ್ನು ಓದಿಕೊಂಡು ಸಂದರ್ಶನಕ್ಕೆ ಬಂದಿದ್ದೀರಿ? ಎಂದು ಕೇಳಿದ್ದರಂತೆ. ಆ ಮಾತಿಗೆ ಅವನು ನಿರುತ್ತರನಾಗಿ ಕೂತಿದ್ದನ್ನು ಕಂಡು “ಅಲ್ರೀ ಒಬ್ಬ ವ್ಯಕ್ತಿಯ ಸಂದರ್ಶನಕ್ಕೆಂದು ಬರುವ ಮೊದಲೇ ಅವರ ಕುರಿತು ಸಣ್ಣ ಮಾಹಿತಿಯೂ ತಿಳಿದಿರದ ನಿಮ್ಮಂತಹವರಿಗೆ ಯಾವ ಸೀಮೆ ಸಂದರ್ಶನವನ್ನು ಕೊಡಲಾರೆ” ಎಂದು ಖಾರವಾಗಿ ಪ್ರತಿಕ್ರಿಯಿಸಿ ಗೇಟ್ ಪಾಸ್ ಕೊಟ್ಟಿದ್ದನ್ನು ಗೆಳೆಯನ ಬಾಯಲ್ಲಿ ಕೇಳಿದಾಗ “ಹೌದಾ!” ಎಂದು ತಲೆಯಾಡಿಸಿ ಸುಮ್ಮನಾಗಿದ್ದೆ.
ಇದನ್ನು ಏಕೆ ಹೇಳುತ್ತಿದ್ದೇನೆಂದರೆ ಓದಿನಲ್ಲಿ ಅಂತಹ ಆಸಕ್ತಿ ತೋರದೆ ಇದ್ದ ನಾನು ಒಂದು ಕಡೆಯಾದರೆ ಈ ನನ್ನ ಗೆಳೆಯನೋ ಬಹುಜನ ಚಳವಳಿಯ ಕಾರ್ಯಕ್ರಮವಿದೆಯೆಂದೂ, ಪ್ರೊ. ಮಹೇಶಣ್ಣನವರ ಭಾಷಣವಿದೆಯೆಂದೂ, ಅದನ್ನೊಮ್ಮೆ ನೀನು ಒಂದು ಸಲವಾದರೂ ಕೇಳಬೇಕೆಂದು ಒತ್ತಾಯ ಮಾಡಿ ಕರೆದೊಯ್ಯುತ್ತಿದ್ದ. ಆದರೆ ನನಗೆ ಆಗ ಇದು ಯಾವ ಚಳವಳಿ, ಯಾವುದೀ ಬಹುಜನ ವಿದ್ಯಾರ್ಥಿ ಸಂಘ? ಎಂಬ ಸಣ್ಣ ಹಿನ್ನೆಲೆಯೂ ತಿಳಿದಿರಲಿಲ್ಲ; ಮತ್ತದನ್ನು ತಿಳಿದುಕೊಳ್ಳಬೇಕೆಂಬ ಉತ್ಸಾಹವೂ ನನ್ನೊಳಗೆ ಇರಲಿಲ್ಲ. ಬರೀ ಪಠ್ಯದ ಓದಿಗೆ ಸೀಮಿತಗೊಂಡಿದ್ದ ನನಗೆ ಹೊರಗಿನ ಜಗತ್ತನ್ನು ಅರಿಯುವ ವ್ಯವಧಾನವೂ ಇರಲಿಲ್ಲ. ದಲಿತ, ಬಂಡಾಯ, ದೇವನೂರು, ಸಿದ್ದಲಿಂಗಯ್ಯ, ಮೂಡ್ನಾಕೂಡು, ಬರಗೂರು ರಾಮಚಂದ್ರಪ್ಪ ಎಂಬ ಹೆಸರುಗಳು ಪಠ್ಯದ ಕಾರಣಕ್ಕೆ ಪರಿಚಯವಿತ್ತೆ ವಿನಃ ಅವರ ಬರಹಗಳನ್ನು ಓದಬೇಕೆಂಬ ಹಂಬಲ ಮೂಡೇ ಇರಲಿಲ್ಲ. ಇಂತಹ ಹೊತ್ತಿನಲ್ಲಿಯೇ ನನ್ನ ಚಳವಳಿಯ ಗೆಳೆಯನ ಕೆ.ಜಿ.ಕೊಪ್ಪಲಿನ ರೂಮಿಗೆ ದಸರಾ ವಿಶೇಷತೆಯ ಅಂಗವಾಗಿ ಸರಸ್ವತಿ ಥಿಯೇಟರಿನಲ್ಲಿ ಹಳೆಯ ಸಿನಿಮಾವೊಂದರ ಪ್ರದರ್ಶನವಿದುದ್ದರ ನಿಮಿತ್ತ ಹೋಗಿದ್ದೆ. ಆದರೆ ಅವನು ಸಕಾಲಕ್ಕೆ ಆಗಮಿಸಲು ಆಗದೆ ಇದ್ದುದ್ದರಿಂದ ಮೂಲೆಯಲ್ಲಿ ಇಟ್ಟಿದ್ದ ರೂಮಿನ ಕೀ ತೆಗೆದು ಒಳಗೆ ಕೂರುವಂತೆ ಹೇಳಿದ್ದ. ತುಂಬಾ ಹೊತ್ತು ಕಾದು ಕೂತಿದ್ದ ನನಗೆ ಸಮಯದೂಡುವುದು ಕಷ್ಟವೆನಿಸಿ ಎದ್ದು ನಿಂತಾಗ ಅವನ ರೀಡಿಂಗ್ ಟೇಬಲ್ಲಿನ ಮೇಲಿದ್ದ ” ಗೌರ್ಮೆಂಟ್ ಬ್ರಾಹ್ಮಣ” ಎಂಬ ಪುಸ್ತಕ ನನ್ನ ಕಣ್ಣಿಗೆ ಬಿದ್ದು ಹಿಂದೊಮ್ಮೆ ನನ್ನ ಮೇಷ್ಟ್ರು ಇದರ ಕುರಿತು ಹೇಳಿದ್ದರು ಎಂಬ ಕಾರಣಕ್ಕೆ ಉದಾಸೀನ ಭಾವದಿಂದಲೇ ಟೈಂಪಾಸ್‌ಗೆಂದು ಕೈಗೆತ್ತಿಕೊಂಡು ಪುಟ ತೆರೆಯುತ್ತಾ ಹೋದೆ. ನಿಜಕ್ಕೂ ನಾನು ಮೊದಲು ಬಾರಿಗೆ ಅಷ್ಟೊಂದು ಗಂಭೀರವಾಗಿ ಯಾವುದರ ಪರಿವೆಯೂ ಇಲ್ಲದೆ ಪುಸ್ತಕದೊಂದಿಗೆ ಕಳೆದು ಹೋಗಿದ್ದೆ. ನನ್ನೊಳಗೆ ಆಳದಲ್ಲಿ ಗುರುತೇ ಇಲ್ಲದಂತೆ ಸುಪ್ತವಾಗಿದ್ದ ಭಾವಗಳಿಗೆಲ್ಲಾ ಮರುಜೀವ ಬಂದಂತಾಗಿತ್ತು. ಹೇಗೇಗೋ ಬದುಕಿನಲ್ಲಿ ಸುಖಾಸುಮ್ಮನೆ ಕಳೆದು ಹೋಗುತ್ತಿದ್ದ ನನ್ನಂತವನನ್ನು ‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕ ತನ್ನೆರಡು ಕೈಗಳಿಂದ ಬಾಚಿ ಅಪ್ಪಿಕೊಂಡಿತು. ನನ್ನೊಳಗಿನ ಆಳದ ನೋವುಗಳಿಗೆ ಸಾಂತ್ವನ ಹೇಳುವ ತಾಯಿಯ ಜೋಗುಳವಾಯಿತು. ಅದನ್ನು ಹತ್ತಾರು ಬಾರಿ ಓದಿ ಮನಸು ಮುದಗೊಂಡಿತು.

(ಪ್ರೊ. ಅರವಿಂದ ಮಾಲಗತ್ತಿ)
ಊರಿನಲ್ಲಿ ಯಾರಾದರೂ ಸತ್ತರೆ ಹೆಣದ ಮೇಲೆ ಎಸೆಯುವ ಚಿಲ್ಲರೆ ಕಾಸನ್ನು ಎತ್ತಿಕೊಳ್ಳಲು ಏರ್ಪಡುತ್ತಿದ್ದ ಸ್ಫರ್ಧೆ ನನ್ನದೇ ಬಾಲ್ಯವನ್ನು ಒಮ್ಮೆಲೇ ಕಣ್ಮುಂದೆ ತಂದು ನಿಲ್ಲಿಸಿತು. ಜಾತಿಯ ಕಾರಣಕ್ಕೆ ಅನುಭವಿಸಿದ ನೂರಾರು ಅವಮಾನಗಳನ್ನು ತಣ್ಣಗೆ ಬಿಚ್ಚಿಡುವ ಈ ಆತ್ಮಕತೆಯ ಪುಸ್ತಕ ಮಾತ್ರ ನಿಂತ ನೀರಾಗದೆ ಓದಿದಂತೆಲ್ಲಾ ನನ್ನೊಳಗೆ ಗಾಢವಾಗಿ ಸಂಚರಿಸುವ ನದಿಯಾಯಿತು. ಇಲ್ಲಿನ ಹಂಡ್ಯಾ ಎಂಬ ಅವರ ಸಾಕು ನಾಯಿಯೊಂದು ಮೇಲ್ಜಾತಿ ಎಂದು ಕರೆಯಲ್ಪಡುವವರ ಬೀದಿಯ ನಾಯಿಯೊಂದಿಗೆ ಸಂಭೋಗದಲ್ಲಿ ಸಹಜವಾಗಿ ತೊಡಗಿದ್ದಕ್ಕೆ ಅದರ ಶಿಶ್ನ ಕತ್ತರಿಸಿದ ಪ್ರಸಂಗವನ್ನು ಓದಿ ಒಮ್ಮೆಲೇ ಅವಾಕ್ಕಾದೆ. ಏಕೆಂದರೆ ಅಂತಹದೊಂದು ಪ್ರಸಂಗ ಈ ನೆಲದಲ್ಲಿ ಜರುಗಿದೆ ಎಂಬುದರ ಸಣ್ಣ ಊಹೆ ಕೂಡ ಇರದ ನನ್ನ ಬೋಳೇತನಕ್ಕೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಜಾತಿಯ ದರ್ಪ ವೈಷಮ್ಯಗಳು ಹೇಗೆಲ್ಲಾ ಘಟಿಸುತ್ತದೆ ಮತ್ತು ಅವು ಎಷ್ಟು ವಿಚಿತ್ರ ರೀತಿಯಲ್ಲಿ ಪ್ರಕಟಗೊಳ್ಳುತ್ತವೆ ಎಂಬುದನ್ನು ನೆನೆದಾಗಲೆಲ್ಲಾ ದೇಹ ಕಂಪಿಸುತ್ತದೆ. ಬೆದೆಗೆ ಬಿದ್ದ ಎಮ್ಮೆ ಕೆಳಗಿನ ಜಾತಿಯವರಿಗೆ ಸೇರಿದ್ದೆಂಬ ಕಾರಣಕ್ಕೆ ಕೋಣವನ್ನು ಬಿಡದೆ ಹೋಗುವ ಇಲ್ಲಿನ ಜಾತಿ ಮನಸ್ಥಿತಿ ಮತ್ತು ಅದನ್ನು ಮೀರಿ ಸಹಜ ಬಯಕೆಯಲ್ಲಿ ಓಡಿಬರುವ ದೇಸಾಯಿಯವರ ಕೋಣದ ನೆನಪಾದಾಗೆಲ್ಲಾ ಮನುಷ್ಯ ಮನುಷ್ಯನಂತೆ ನಡೆದುಕೊಳ್ಳುವುದು ಇಲ್ಲಿ ಎಷ್ಟು ಕಷ್ಟದ ಕೆಲಸವೆಂದೆನಿಸುತ್ತದೆ.
ಚೇಳಿನಿಂದಲೇ ಹುಟ್ಟಿದ ಚೇಳಿನಿಂದಲೇ ಸತ್ತ ಎನ್ನುವ ತನ್ನಜ್ಜಿಯ ಮಾತುಗಳೊಂದಿಗೆ ತನ್ನ ತಂದೆಯನ್ನು ನೆನಪಿಸಿಕೊಳ್ಳುವ, ಪಂದ್ರಾ ಆಗಸ್ಟ್‌ನ ಸ್ವಾತಂತ್ರ್ಯ ನಿಜಕ್ಕೂ ಎಂತಹ ಸ್ವಾತಂತ್ರ್ಯ? ಯಾವ ಬಗೆಯ ಸ್ವಾತಂತ್ರ್ಯ? ಒಂದೇ ಒಂದು ಕೊಡದ ನೀರನ್ನು ಬಾವಿಯಲ್ಲಿ ಮೊಗೆಯಲಾರದೆ ಹೋದ ಕೆಳಗೇರಿಯ ಜನ ಅಂದು ಮೊಗೆಮೊಗೆದು ಸೇದಿದರು, ಮತ್ತೆ ಬಾವಿಗೆ ಸುರವಿದರು, ಮರುದಿನ ಆ ಬಾವಿಗಳಲ್ಲಿ ಇನ್ನಾರು ನೀರು ಮೊಗೆಯಬಾರದಂತೆ ಊರ ಜನರೇ ಶಾಶ್ವತವಾಗಿ ಮುಚ್ಚಿದ್ದರು ಎನ್ನುವಾಗ ಕರುಳು ಹಿಂಡಿದಂತಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂದು ಹೋಳಿಗೆ ಮಾಡಿ ಹಂಚುವ ತನ್ನಪ್ಪನ ಸ್ವಾತಂತ್ರ್ಯದ ಕಲ್ಪನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಅದನ್ನು ನುಚ್ಚು ನೂರಾಗಿಸುವ ಜಾತಿವ್ಯವಸ್ಥೆಯ ಕೂಪ ಎಷ್ಟು ಆಳವಾದದ್ದು ಎಂಬುದನ್ನು ತೋರಿಸಿರುವ ಅವರ ಜೀವನಾನುಭವದ ಪರಿ ಬಹಳ ದೊಡ್ಡದು. ತನ್ನ ತಂದೆ ಮೇಷ್ಟ್ರು ನೌಕರಿಗೆ ಸೇರಿದರು ಕೂಡ ಜಾತಿಯ ಕಾರಣಕ್ಕೆ ಅಲ್ಲಿಯ ಮುಖ್ಯೋಪಾಧ್ಯಾಯನೊಬ್ಬ ಇತರ ಶಿಕ್ಷಕರಗಳೊಂದಿಗೆ ಸಭೆ ನಡೆಸಿ ಬೇರೆ ಊರಿಗೆ ನಿಯೋಜಿಸಿಕೊಳ್ಳುವಂತೆ ಒತ್ತಡ ತರುವ, ಎಷ್ಟು ಬೇಡಿದರೂ ಕರುಣೆ ತೋರದೆ ಹೋದ, ಕನಿಷ್ಠ ಕೂರಲು ಹೇಳದೆ ಹೋದ ಆ ಕಾಲಘಟ್ಟದ ವಿದ್ಯಾವಂತ ವರ್ಗ ಕೂಡ ಜಾತಿಯ ಕೂಪದಲ್ಲಿ ಹೇಗೆ ಕೊಳಕು ಮಂಡಲದಂತೆ ವಿಷಕಾರಿಯಾಗಿ ವಿಲವಿಲ ಒದ್ದಾಡುತ್ತಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಮತ್ತು ಇನ್ನಾವುದೋ ಶಾಲೆಗೆ ವಿಧಿಯಿಲ್ಲದೆ ತನ್ನ ತಂದೆ ಕಾಲಿಟ್ಟರೂ ಜನ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಹೋದದ್ದರ ಪರಿಣಾಮ ಶಾಲೆಯ ಜವಾನನಿಂದ ಹಿಡಿದು ಎಲ್ಲವೂ ಆಗುವ ನಾನಾ ಬಗೆಯ ಜಾತಿ ಅವಮಾನಗಳನ್ನು ಅನುಭವಿಸಿದ ಪ್ರಸಂಗಗಳನ್ನು ಹೇಳುತ್ತಲೇ ಭಾವುಕರಾಗುವ ಅವರ ಎದೆಯೊಳಗೆ ಕಾಣದೆ ಹೋದ ತಂದೆಯ ಹಂಬಲ ಒಂದು ಅನನ್ಯ ರೀತಿಯಲ್ಲಿ ವ್ಯಕ್ತವಾಗುವುದು ನಮ್ಮನ್ನು ಕಣ್ಣೀರಾಗಿಸುವುದು ಅವರು ಹೇಳಹೊರಡುವ ಬಾಲ್ಯ ಕಾಲದ ಘಟನೆಗಳಿಂದ.
ಗೆಳೆಯರೊಂದಿಗೆ ಹುಣಸೆಕಾಯಿಗಾಗಿ ಅಲೆಯುತ್ತಾ ತನ್ನಪ್ಪ ನೌಕರಿ ಮಾಡುತ್ತಿದ್ದ ಹಳ್ಳಿಗೆ ಹೋಗುವುದು ಆ ಹಳ್ಳಿಯ ದೇವಸ್ಥಾನದಲ್ಲಿ ತನ್ನಪ್ಪನ ಸಮೂಹ ಭಾವಚಿತ್ರವನ್ನು ಕಂಡು ಸ್ನೇಹಿತನ ಹೆಗಲ ಮೇಲೆ ನಿಂತು ಅಪ್ಪನ ಭಾವಚಿತ್ರದ ಭಾಗವನ್ನು ಮುಟ್ಟಿ ಪುಳಕಗೊಳ್ಳುವ ಸನ್ನಿವೇಶ ಮತ್ತು ಆ ಸ್ನೇಹಿತನ ಬೆನ್ನು ಈಗಲೂ ತನ್ನ ಕಾಲಡಿಯಲ್ಲಿದ್ದಂತೆ ಭಾಸವಾಗುತ್ತದೆನ್ನುವ ಅವರೊಳಗಿನ ಮನುಷ್ಯ ಪ್ರೇಮ ಎಷ್ಟೊಂದು ಅದಮ್ಯವೆನಿಸುತ್ತದೆ.
ಬಾಲ್ಯ ಕಾಲದಿಂದ ಅವರು ಪ್ರಾಧ್ಯಾಪಕರಾಗುವ ತನಕ ತಾವು ಜಾತಿಯ ಕಾರಣಕ್ಕೆ ಕಂಡುಂಡ ಅನುಭವಗಳನ್ನೆಲ್ಲಾ ದಾಖಲಿಸಿರುವ ಅವರ ಒಂದೊಂದು ಬರಹ ಕೂಡ ಅತ್ಯಮೂಲ್ಯ. ತನಗೆ ಶಾಲೆಯಲ್ಲಿ ಜಾತಿಯ ಕಾರಣಕ್ಕೆ ಕೂರಲು ಮಣೆಯಿರದೆ ಹೋದದ್ದನ್ನು, ಕಸದ ಪಾಳಿಗೆ ಮೇಷ್ಟ್ರು ಕೆಳಜಾತಿ ಹುಡುಗರನ್ನೇ ನೇಮಿಸುತ್ತಿದ್ದದನ್ನು, ಮಾಲಗತ್ತಿ ಎಂಬ ಹೆಸರನ್ನು ಗೇಲಿ ಮಾಡುತ್ತಾ ಬೋರ್ಡಿನಲ್ಲಿ ‘ಮಾಲಕತ್ತಿ’ ಎಂದು ಬರೆಯುತ್ತಿದ್ದಕ್ಕೆ ಸರಿಪಡಿಸಲು ಹೋಗಿ ಅಲ್ಲಿಯ ಮೇಷ್ಟ್ರುಗಳಿಂದ ಕುಂಡೆಯ ಮೇಲೆ ಹೊಡೆತ ತಿಂದ ಹಸಿ ಹಸಿ ನೆನಪುಗಳನ್ನು ಎದೆಯೊಳಗೆ ಕಾಪಿಟ್ಟುಕೊಂಡು ದಾಖಲಿಸಿರುವುದು ಕಣ್ಣಿನಲ್ಲಿ ಮನೆ ಮಾಡಿಕೊಂಡಿದೆ. ನಾನು ಈವರೆಗೆ ನೋಡಲಾಗದೆ ಉಳಿದಿರುವ ದೂರದ ಉತ್ತರ ಕರ್ನಾಟಕದ ಮುದ್ದೇಬಿಹಾಳದ ಯಾವುದೋ ಮೂಲೆಯಲ್ಲಿ ಘಟಿಸಿರುವ ಇಲ್ಲಿಯ ಘಟನೆಗಳು ನನ್ನೆದುರೇ ನಡೆದಿವೆ ಎಂದೆನಿಸಿ ನನ್ನ ಜೀವನದಲ್ಲಿ ಈ ಬರಹ ಬರೆದ ವ್ಯಕ್ತಿಯನ್ನೊಮ್ಮೆ ಕೈ ಮುಟ್ಟಿ ನಮಸ್ಕರಿಸಿ ಬಂದರೆ ಸಾಕು ಜನ್ಮ ಸಾರ್ಥಕವೆನಿಸುವಷ್ಟರ ಮಟ್ಟಿಗೆ ನನ್ನ ಮನಸು ಅವರನ್ನು ಕಾಣಲು ತುಡಿಯತೊಡಗಿದ್ದು ಮಾತ್ರ ಸುಳ್ಳಲ್ಲ. ಇದರಿಂದಾಗಿಯೇ ಅವರ ಬರಹಗಳನ್ನು ಓದಿಕೊಳ್ಳಲು ಶುರು ಮಾಡಿದೆ. ಕಾಲಾನಂತರ ನನ್ನೊಳಗಿನ ಅವರ ಓದು ಮುಂದೆ ಬರಹಕ್ಕೆ ಪ್ರೇರೆಪಿಸಿತು. ಏಕಲವ್ಯ ದ್ರೋಣರನ್ನು ತನ್ನ ಮಾನಸ ಗುರುವಿನಂತೆ ಸ್ವೀಕರಿಸಿ ಮಣ್ಣಿನ ಪ್ರತಿಮೆಯ ಮೂಲಕ ಪ್ರತಿಷ್ಟಾಪಿಸಿ ಅದರೆದುರು ಬಾಗಿ ಬಿಲ್ವಿದ್ಯೆ ಕಲಿತಂತೆ ನಾನು ಚೂರು ಪಾರು ಒಂದಷ್ಟು ಕವಿತೆ ಕತೆ ಅಂತ ಗೀಚಿದ್ದರೆ ಅದರ ಹಿಂದಿನ ಪ್ರೇರಣಾ ಶಕ್ತಿ ಅರವಿಂದ ಮಾಲಗತ್ತಿ ಎಂಬಂತಹ ದೈತ್ಯ ಪ್ರತಿಭಾವಂತ ಬರಹಗಾರರ ಬರಹಗಳಿಗೆ ಹೆಚ್ಚಿನ ಪಾಲು ಸಲ್ಲಬೇಕು.
ಅವರು ಎಂದೋ ಬರೆದು ಪ್ರಕಟಿಸಿದ “ಗೌರ್ಮೆಂಟ್ ಬ್ರಾಹ್ಮಣ” ನೆಂಬ ಪುಸ್ತಕವನ್ನು ಒಂದೂವರೆ ದಶಕಗಳ ಅನಂತರದಲ್ಲಿ ನಾನು ಓದಿಕೊಂಡದ್ದು ಉಳಿದ ನನ್ನ ಬದುಕನ್ನು ರೂಪಿಸಿಕೊಳ್ಳಲು ಹೆಚ್ಚಿನ ಶಕ್ತಿ ನೀಡಿತು ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಮೈಸೂರಿನಂತಹ ಸಮೃದ್ಧ ಜಾತಿಪೀಡಿತರ ಜಿಲ್ಲೆಯಲ್ಲಿ ಎಸ್.ಸಿ. ಅಂದರೆ ಅದರೊಳಗಿನ ಹತ್ತಾರು ಒಳಜಾತಿಗಳು ಎದುರು ನಿಂತವನ ಕಣ್ಮುಂದೆ ಬಂದು ಹೋಗುವುದರಿಂದ ಅದರ ಸಂಪೂರ್ಣ ಶೋಧಕಾರ್ಯ ನಡೆಸಿ ಹೇಗೋ ಅವರ ಮೂಲ ಜಾತಿಗಳನ್ನು ಪತ್ತೆಹಚ್ಚಿ ತಾತ್ಸಾರ ಭಾವನೆಗಳಿಂದಲೇ ನೋಡುತ್ತಾ ದೂರ ಸರಿಯುವವರು ಒಂದು ಕಡೆಯಾದರೆ ನನ್ನದೇ ಜಾತಿ ಹೆಸರಿನ ಕೆಲ ಸಹಪಾಠಿಗಳು “ಬಡ್ಡಿಮಗಂದು ಆ ಕಾಲ್ದಿಂದಲೂ ಒಂದ್ಗೂಂಡ್ರು ಅವರೆಕಾಳು ತಿನ್ಬೇಡ ಅನ್ನೋ ಜಾತಿ ಅದು” ಎಂದು ಮೂಗು ಮುರಿಯುತ್ತಾ ಅನ್ಯ ದಲಿತ ಜಾತಿಗಳನ್ನು ಅನುಮಾನದ ಕಂಗಳಲಿ ನೋಡುತ್ತಾ ವಿಷಕಾರುವ ಕೆಲಸ ಮಾಡುತ್ತಿದ್ದರು. ಇಂತಹವರೆಲ್ಲಾ ನನ್ನ ಅಕ್ಕಪಕ್ಕದಲ್ಲಿ ಇದ್ದಾಗ ಬದುಕನ್ನು ಹೇಗೆ ನೋಡಬೇಕೆಂಬ ನನ್ನ ಅರಿವಿನ ಲೋಕವನ್ನು ಎಚ್ಚರಿಸಿ ಕೈ ಹಿಡಿದು ನಡೆಸಿದ ಮಾಲಗತ್ತಿ ಅವರ ಗೌರ್ಮೆಂಟ್ ಬ್ರಾಹ್ಮಣ ಎಂಬ ಆತ್ಮಕತೆ ಅಸ್ಪೃಶ್ಯತೆಯ ಅವಮಾನಗಳ ವಿವಿಧ ಆಯಾಮಗಳನ್ನು ನೋಡುವ ಹೊಸಕಣ್ಣನ್ನು ನನ್ನೊಳಗೆ ತೆರೆಸಿತು. ಅವರೇ ಹೇಳುವಂತೆ ಎಡ ಬಲ ಜಾತಿಯಲ್ಲದ ಎಸ್ ಸಿ ಯೊಳಗಿನ ನೂರಾರು ಜಾತಿ ಪಟ್ಟಿಯಲ್ಲಿ ಅಂಬೇಡ್ಕರ್ ಜಾತಿಯವನೋ? ಜಗಜೀವನರಾಂ ಜಾತಿಯವನೋ? ಎನ್ನುವ ಪ್ರತ್ಯೇಕತೆಯ ಕಂಗಳಲಿ ನೋಡುವ ಹತ್ತಾರು ದಲಿತ ಒಳಜಾತಿಗಳು ಇದನ್ನೇ ಗುರಿ ಮಾಡಿಕೊಂಡು ವೇದಿಕೆಯಲ್ಲಿನ ಅವರ ಭಾಷಣಗಳಿಗೆ ಕೊಂಕು ಮಾತುಗಳನ್ನಾಡಿದ್ದನ್ನು ಸ್ವತಃ ಅವರೇ ಕಿವಿಯಾರೆ ಕೇಳಿಸಿಕೊಂಡು ವಿಷಾದದಲ್ಲಿ ನಕ್ಕು ಸುಮ್ಮನಾದದ್ದನ್ನು, ಮುಂದೆ ಇದೇ ಕಾರಣಕ್ಕೆ ಅವರಿಗೆ ಹಲವು ಕಾರ್ಯಕ್ರಮಗಳಿಗೆ ಬೇಕಂತಲೇ ವೇದಿಕೆಗಳಿಗೆ ಕರೆಯದೆ ಹೋದದ್ದೆಲ್ಲವನ್ನು ಬಿಚ್ಚು ಮನಸ್ಸಿನಿಂದ ಮುಕ್ತ ಬಯಲಿನಂತೆ ತಮ್ಮಿಡೀ ಬದುಕನ್ನು ಓದುಗರೆದುರಿಗೆ ಆ ತೆರನಾಗಿ ತೆರೆದಿಡಲು ಎದೆಗಾರಿಕೆ ಬೇಕು. ಅಂತಹ ಎದೆಗಾರಿಕೆಯನ್ನು ಅವರು ಹೊಂದಿರುವ ಕಾರಣಕ್ಕೆ ಇಷ್ಟು ವರ್ಷಗಳ ನಂತರವೂ ಆ ಪುಸ್ತಕವಿನ್ನೂ ನನ್ನಂತಹ ನೂರಾರು ಓದುಗರ ಎದೆಯೊಳಗೆ ನಿತ್ಯ ಜೀವಂತಿಕೆಯಿಂದ ಉಸಿರಾಡುತ್ತಿದೆ..!
ಈ ನೆಲದ ಅಸ್ಪೃಶ್ಯತೆಯ ನೋವು ಮತ್ತು ಅವಮಾನಗಳು ವೈಯಕ್ತಿಕತೆಯ ಗಡಿದಾಟಿ ಸಾರ್ವತ್ರೀಕರಣಗೊಳ್ಳುವ ಅನನ್ಯ ಗುಣವಿರುವುದರಿಂದ, ಅದು ಒಂದು ಸಮುದಾಯದ ನೋವು ಅವಮಾನಗಳಾಗಿ ಮಾರ್ಪಾಟು ಹೊಂದುವುದರಿಂದ ನಮ್ಮ ನರನಾಡಿಗಳಲ್ಲೂ ಆ ನೋವು ಮಿಡಿಯುತ್ತದೆ, ಹಾಡುತ್ತದೆ, ಕಣ್ಣೀರಾಗುತ್ತದೆ ಎನ್ನುವ ಕಾರಣಕ್ಕೆ ನನ್ನ ಬಾಲ್ಯ ಕಾಲದಲ್ಲಿ ಘಟಿಸಿದ ಒಂದು ಘಟನೆಯನ್ನು ಉದಾಹರಣೆಯಾಗಿ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಈಗಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಪ್ರಾಯಶಃ ಅದು ತೊಂಬತ್ಮೂರು ಅಥವಾ ತೊಂಬತ್ನಾಲ್ಕನೇಯ ಇಸವಿ ಇರಬಹುದು. ನಾನಾಗ ಮೂರನೇ ತರಗತಿಯಲ್ಲಿದ್ದೆ. ನನ್ನದೇ ಊರಿನ ಒಂದು ಸಣ್ಣ ಖಾಸಗಿ ಶಾಲೆ. ಅದರ ಸಂಸ್ಥಾಪಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರು ತಮ್ಮ ಹತ್ತಿರದ ಸಂಬಂಧಿಕರನ್ನು ಶಾಲೆಯನ್ನು ನಿರ್ವಹಿಸುವುದಕ್ಕಾಗಿ ಶಿಕ್ಷಕರಾಗಿ ನೇಮಿಸಿದ್ದರು. ಹಾಗೆ ನೇಮಿಸಿದವರು ದಂಪತಿಗಳಾಗಿದ್ದು ಪಾಠ ಪ್ರವಚನಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಆ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮೇಲ್ಜಾತಿ ಎಂದು ಕರೆದುಕೊಳ್ಳುವ ಗುಂಪುಗಳಿಗೆ ಸಂಬಂಧಿಸಿದ್ದರಿಂದ ಹಾಗೂ ದಲಿತರಲ್ಲಿ ನಾನು ಮತ್ತು ನನ್ನಣ್ಣ ಬಿಟ್ಟರೆ ಮತ್ತಾರೂ ಇಲ್ಲದ ಕಾರಣ ಆ ದಂಪತಿಗಳಿಗೆ ಕುಡಿಯಲು ನೀರು ಬೇಕಾದರೆ ಅಥವಾ ಮಜ್ಜಿಗೆ ಬೇಕಾದರೆ ಅಥವಾ ಇನ್ನಾವುದೇ ಅಗತ್ಯತೆಗಳಿದ್ದರೂ ಅವರು ನಮಗೆ ಮನೆಯಿಂದ ತಂದುಕೊಡುವಂತೆ ಹೇಳಿ ಕಳುಹಿಸುತ್ತಿದ್ದರು. ಎಷ್ಟೋ ಬಾರಿ ಅವರಿಗೆ ಹೀಗೆ ಕೇಳಿದಾಗಲೆಲ್ಲಾ ನಾನು ಮನೆಯಿಂದ ತಾಯಿಯ ಕೈಯಲ್ಲಿ ನೀರು ಕಾಯಿಸಿಕೊಂಡು ತಂದು ಕೊಟ್ಟದ್ದು, ಮೊಸರು, ಮಜ್ಜಿಗೆ ಕೊಟ್ಟದ್ದು ಈಗಲೂ ನೆನಪಿದೆ. ಸಹಜವಾಗಿ ಹೆಚ್ಚಿನ ತಿಳುವಳಿಕೆ ಇರದ ಆ ವಯೋಮಾನದಲ್ಲಿ ನಮ್ಮ ಮನೆಯಿಂದ ಕೊಟ್ಟಿದ್ದನ್ನು ಆ ದಂಪತಿಗಳಿಬ್ಬರು ಪ್ರೀತಿಯಿಂದ ತಿನ್ನುತ್ತಿದ್ದನ್ನು ಕಂಡು ನನಗೆ ಅವರ ಮೇಲೆ ಹೆಚ್ಚಿನ ಪ್ರೀತಿ ಇತ್ತು. ಇದೇ ಕಾರಣಕ್ಕೆ ಆ ವರ್ಷ ಶಾಲೆಯಲ್ಲಿ ಏರ್ಪಡಿಸಿದ್ದ ಒಂದು ದಿನದ ಪ್ರವಾಸಕ್ಕೆ ನಮ್ಮನ್ನು ಮನೆಯಲ್ಲಿ ಒಪ್ಪಿಸಿ ತಮ್ಮೊಂದಿಗೆ ಕರೆದೊಯ್ದರು.
ನಿಜಕ್ಕೂ ಆ ಪ್ರವಾಸದಲ್ಲಿ ನಾನು ಏನೇನು ನೋಡಿದೆ ಮತ್ತು ಆ ದಿನ ನನ್ನ ಜೇಬಿನಲ್ಲಿ ಹಣವಿತ್ತೇ ಯಾವುದು ಸರಿಯಾಗಿ ನೆನಪಿಲ್ಲ. ಆದರೆ ಪ್ರವಾಸ ಮುಗಿಸಿ ಹಿಂದಿರುಗುವ ಹೊತ್ತಿಗೆ ತಡರಾತ್ರಿ ಆಗಿತ್ತು. ಪ್ರವಾಸಕ್ಕೆಂದು ಬಂದಿದ್ದ ವಾಹನದ ಮಾಲೀಕನಿಗೂ ಮತ್ತು ಶಿಕ್ಷಕರಿಗೂ ಯಾವ ಮನಸ್ತಾಪ ಬಂತೋ ತಿಳಿಯದು ಆತ ನಮ್ಮೂರಿನ ಶಾಲೆಯವರೆಗೆ ಬಿಡದೆ ಆ ದಂಪತಿಗಳಿದ್ದ ಹಿಂದಿನ ಊರಿನಲ್ಲೇ ವಾಹನ ನಿಲ್ಲಿಸಿಬಿಟ್ಟ. ಸುಮಾರು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ನಮ್ಮಲ್ಲಿ ಬೆಳತೂರಿನಿಂದ ಬಂದವರು ಅರ್ಧ ಭಾಗವಾದರೆ ಇನ್ನುಳಿದ ಭಾಗ ಆ ಊರಿನ ವಿದ್ಯಾರ್ಥಿಗಳೇ ಆದುದರಿಂದ ಅವರಿಗೆ ಯಾವುದೇ ರೀತಿಯ ತೊಂದರೆಗಳಾಗಲಿಲ್ಲ. ಇನ್ನುಳಿದ ವಿದ್ಯಾರ್ಥಿಗಳನ್ನು ಆ ದಂಪತಿಗಳು ತಾವಿದ್ದ ಮನೆಗೆ ಕರೆತಂದರು. ಅಲ್ಲಿ ನಾನು ಮತ್ತು ನನ್ನಣ್ಣನನ್ನು ಹೊರತುಪಡಿಸಿದರೆ ಉಳಿದೆಲ್ಲಾ ವಿದ್ಯಾರ್ಥಿಗಳು ಮೇಲ್ಜಾತಿ ಎಂದು ಕರೆದುಕೊಳ್ಳುವವರ ಸಾಲಿಗೆ ಸೇರಿದ್ದರಿಂದ ಅವರೆಲ್ಲಾ ಸಲೀಸಾಗಿ ಅವರ ನಡುಮನೆಯಲ್ಲಿ ಓಡಾಡಿಕೊಂಡು ಚಾಪೆ ಹೊದ್ದುಕೊಂಡು ಮಲಗಲು ಸಿದ್ಧತೆ ಮಾಡಿಕೊಂಡರು. ಆದರೆ ನಮ್ಮನ್ನು ಮನೆಯಾಚೆಯೇ ನಿಲ್ಲಿಸಿ ಮನೆಯೊಳಗೆ ಬಿಟ್ಟುಕೊಳ್ಳುವುದು ಬೇಡವೋ ಎನ್ನುವ ಗೊಂದಲಗಳಲ್ಲಿ ಮೀನಾಮೇಷ ಎಣಿಸುತ್ತಾ ಏನೇನೋ ನೆಪಗಳ ಹುಡುಕುತ್ತಾ ಆ ದಂಪತಿಗಳು ಹತ್ತಾರು ನಿಮಿಷ ಪರಸ್ಪರ ಚರ್ಚಿಸುತ್ತಾ ಕೊನೆಗೆ ಅವರ ಮನೆಯಾಚೆ ಪಡಸಾಲೆಯ ಮೂಲೆಯಲ್ಲಿ ಹರಿದ ಹಳೆ ಚಾಪೆಯೊಂದನ್ನು ಹಾಸಿ ಮಲಗುವಂತೆ ಹೇಳಿದರು. ಕೆಲ ಹೊತ್ತಿನ ನಂತರ ಆ ಮನುಷ್ಯನಿಗೆ ಏನನ್ನಿಸಿತೋ ಏನೋ ತಾನು ಕೂಡ ನಮ್ಮೊಂದಿಗೆ ಬಂದು ಮಲಗಿದ. ಆದರೆ ನನ್ನ ಎಳೆಯ ಮನಸ್ಸಿಗೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಬೆಳಗಾಗುವುದನ್ನೇ ಕಾಯುತ್ತಾ ಎದೆಯೊಳಗೆ ಮಡುಗಟ್ಟಿದ ದುಃಖದ ಭಾವವನ್ನು ಎಲ್ಲೂ ಹೊರಹಾಕಲಾಗದೆ ಅವುಡುಗಚ್ಚಿ ತೆಪ್ಪಗೆ ಮನೆ ಸೇರಿಕೊಂಡೆ. ಈಗಲೂ ಡಿಸೆಂಬರ್ ಚಳಿಯು ನನ್ನ ಮೈಗೆ ತಟ್ಟಿದಾಗಲೆಲ್ಲಾ ಈ ಘಟನೆ ನೆನಪಾಗುತ್ತದೆ. ಏಕೆಂದರೆ ದಲಿತರೆಂದಾಕ್ಷಣ ಶೋಷಿತರೆಂಬ ಅರ್ಥ ಹೊಮ್ಮುವ ಈ ಸಮಾಜದಲ್ಲಿ ದಲಿತರಲ್ಲೇ ದಲಿತರಾದ, ದನಿಯಿರದೇ ಹೋದ ಅದೆಷ್ಟೋ ಸಮುದಾಯದ ನೋವುಗಳು ಇಲ್ಲಿ ಬೆಳಕಿಗೆ ಬರಬೇಕಿದೆ.

ಇಂತಹ ದಲಿತರೊಳಗಿನ ಜಾತಿಯ ವಿರೋಧಾಭಾಸಗಳು ನನ್ನ ಮನೆಯಲ್ಲಿ ಇರಲಿಲ್ಲವೆಂದಲ್ಲ. ನನ್ನಜ್ಜಿ ಕೂಡ ಅಂಗನವಾಡಿಗೆ ಹೋಗುವ ನನಗೆ ಮತ್ತು ಅಣ್ಣನಿಗೆ ಅಲ್ಲಿಯ ಉಪ್ಪಿಟ್ಟನ್ನು ತಿನ್ನಬಾರದೆಂದು ತಾಕೀತು ಮಾಡುತ್ತಿದ್ದಳು. ನಾವೇಕೆ ಅದನ್ನು ತಿನ್ನಬಾರದೆಂಬ ಪ್ರಶ್ನೆಗೆ? ಅವಳು ಕೊಡುತ್ತಿದ್ದ ಉತ್ತರ ಅಲ್ಲಿ ಉಪ್ಪಿಟ್ಟು ಮಾಡುವವಳು ನಮ್ಮಂತೆ ದಲಿತರಾದರೂ ನಮ್ಮ ಒಳಜಾತಿಗಳಲ್ಲಿನ ಭಿನ್ನತೆಯ ಕಾರಣಕ್ಕೆ ಅವಳು ಮಾಡಿದ್ದನ್ನು ನಾವು ತಿನ್ನಬಾರದೆಂದು ಮನೆಯಿಂದ ಹೊರಡುವಾಗಲೇ ಎಚ್ಚರಿಕೆ ಕೊಡುತ್ತಿದ್ದಳು. ಆದರೆ ನಾನು ಆಸೆಗೆ ಒಮ್ಮೊಮ್ಮೆ ತಿಂದು ಬಿಡುತ್ತಿದ್ದೆ. ಆಗೆಲ್ಲಾ ಇದೇ ನನ್ನಜ್ಜಿ ಬುಳು ಬುಳನೇ ತಲೆಯ ಮೇಲೆ ನೀರು ಹುಯ್ಯುವ ಮುನ್ನ ಸಗಣಿಯ ನೀರನ್ನು ತೀರ್ಥದಂತೆ ತಲೆಯ ಮೇಲೆ ಚಿಮುಕಿಸಿ ಸ್ನಾನ ಮಾಡಿಸಿ ಶುದ್ಧೀಕರಣ ಮಾಡುತ್ತಿದ್ದಳು. ಇಂತಹ ಶುದ್ಧೀಕರಣದ ಪಾಠವನ್ನು ಅವಳಿಗೆ ಯಾರು ಹೇಳಿದ್ದರೋ ನನಗೆ ತಿಳಿಯದು. ಆದರೆ ದಲಿತರೆನಿಸಿಕೊಳ್ಳುವ ಹತ್ತಾರು ಒಳಜಾತಿಗಳೊಳಗೆ ಇಂತಹ ಎಷ್ಟೋ ವಿರೋಧಾಭಾಸಗಳಿರುವುದು ಮಾತ್ರ ಸುಳ್ಳಲ್ಲ..! ಹಾಗಾಗಿ ಅಂತಹ ಸ್ಪಷ್ಟ ಚಿತ್ರಣಗಳನ್ನು ಯಾವುದೇ ಅಳುಕಿಲ್ಲದೆ ನೇರಾನೇರವಾಗಿ ಕಟ್ಟಿಕೊಡುವ ‘ಗೌರ್ಮೆಂಟ್ ಬ್ರಾಹ್ಮಣ’ ದ ಬರಹಗಳು ನನಗೆ ಅತ್ಯಂತ ಆಪ್ತವಾಗಿವೆ. ಹಾಗೂ ಅವುಗಳ ಮೇಲೆ ನನಗೆ ಎಲ್ಲಿಲ್ಲದ ಪ್ರೀತಿ ಮತ್ತು ಒಂದು ರೀತಿಯ ಮೋಹ ಈ ಮೇಲಿನ ಕಾರಣಗಳಿಗಾಗಿ ಸಹಜವಾಗಿಯೇ ಬಂದಿದೆ..!



ಓದಿಸಿಕೊಂಡ ಹೋದ ಬರಹ ಮತ್ತು ಗೌ ರ್ಮೆಂಟ್ ಬ್ರಾಹ್ಮಣ ಪುಸ್ತಕ ಓದಲೇಬೇಕು ಎನ್ನುವ ಒತ್ತಾಸೆ ಮೂಡಿದೆ