ಬಟ್ಟೆ ಅಂಗಡಿಯಲ್ಲಿದ್ದ ಸುಮುಖ ಪ್ಯಾಂಟೊಂದರ ಕಡೆಗೆ ಕೈ ತೋರಿಸಿದ್ದ. ಬಟ್ಟೆ ತೋರಿಸುತ್ತಿದ್ದ ಯುವತಿ ಇವನು ಕೈತೋರಿಸಿದೆಡೆಗೆ ನೋಡಿದಳು. ಆರು ಜೇಬುಗಳು, ಸುತ್ತಮುತ್ತೆಲ್ಲಾ ಉದ್ದುದ್ದ ಬಳ್ಳಿ ಬೆಳೆದಂತಿದ್ದ ಗಿಲಿಗಿಲಿ ಪ್ಯಾಂಟೊಂದು ಅಲ್ಲಿತ್ತು. ಅದು ಸುಮುಖ ಯಾವಾಗಲೂ ಹೋಗುತ್ತಿದ್ದ ಬಟ್ಟೆ ಅಂಗಡಿ. ಅದರ ಮಾಲೀಕರಿಂದ ಹಿಡಿದು ಎಲ್ಲರನ್ನೂ ಪರಿಚಯವಿತ್ತು ಸುಮುಖನಿಗೆ. ಈಗ ಬಟ್ಟೆ ತೋರಿಸುತ್ತಿದ್ದ ಯುವತಿಯೂ ಸಹ ಇವನ ಪರಿಚಯದವಳೇ. ಹಿಂದೆ ಅದೆಷ್ಟೋ ಸಲ ಇವನಿಗೆ ಫಾರ್ಮಲ್ ಪ್ಯಾಂಟನ್ನು ತೋರಿಸಿದ್ದಳು.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಕತೆ “ಸುಮುಖ ಮತ್ತು ಗಾಂಧಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಬೆಳಗ್ಗೆ ಎದ್ದಾಗ ಸುಮುಖ ಹಿಂದೆಂದಿಗಿಂತಲೂ ಉತ್ಸಾಹದಲ್ಲಿದ್ದ. ಕಾಲೇಜಿನ ಮೊದಲ ದಿನ ಎಂಬ ಭಾವವೇ ಅವನೊಳಗೆ ನೂತನ ಚೈತನ್ಯವನ್ನು ಹುಟ್ಟುಹಾಕಿತ್ತು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಮುಖ ರಾಜ್ಯಕ್ಕೆ ರ‍್ಯಾಂಕ್ ಪಡೆದು ಪಿ.ಯು.ಸಿ. ಮುಗಿಸಿದ್ದ. ಚೆನ್ನಾಗಿ ಹಾಡುವ, ಕವಿತೆ ಬರೆಯುವ ಕೌಶಲ್ಯವೂ ಅವನಿಗಿತ್ತು. ಅವನ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದರು. ಮಗ ಏನೇ ಕಲಿಯಲಿ ಅದಕ್ಕೆ ಜೊತೆನಿಲ್ಲುವ ಮನೋಭಾವ ಈ ಹೆತ್ತವರದ್ದು. ತನ್ನ ಅಪ್ಪ ಅಮ್ಮನಂತೆಯೇ ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಹೇಳುವವ ತಾನಾಗಬೇಕು ಎಂಬ ಕನಸು ಹೊತ್ತಿದ್ದ ಸುಮುಖ ಈಗ ಡಿಗ್ರಿ ಕಾಲೇಜು ಸೇರಿಕೊಂಡಿದ್ದ.

ಅರೆಬರೆ ಮನಃಸ್ಥಿತಿಯಲ್ಲಿಯೇ ಸ್ನಾನ ಮುಗಿಸಿದವನು ತಿಂಡಿಯನ್ನೂ ಅರೆಬರೆ ತಿಂದನಷ್ಟೇ. ಹೊಸದನ್ನು, ಹೊಸಬರನ್ನು ಎದುರುಗೊಳ್ಳುವ ತವಕ ಅವನೊಳಗಿತ್ತು. ಮನೆಯಿಂದ ಹೊರಟು, ಬಸ್‌ಸ್ಟ್ಯಾಂಡ್ ತಲುಪಿ, ವಿಪರೀತ ರಶ್ ಇದ್ದ ಬಸ್ಸಿನ ಮೆಟ್ಟಿಲಿನ ಮೇಲೆ ಕಾಲಿಟ್ಟಾಗ ಅವನೊಳಗೇನೋ ತಲ್ಲಣ. ಬಸ್ಸಿಳಿದ ಮೇಲೆ ಕಾಲೇಜು ತಲುಪಬೇಕಾದರೆ ಒಂದೈದು ನಿಮಿಷ ನಡೆಯಬೇಕಿತ್ತು. ಕಾಲೇಜು ಆರಂಭವಾಗುವುದು ಒಂಭತ್ತು ಗಂಟೆಗೆ. ಗಡಿಯಾರದ ಮುಳ್ಳು ಇನ್ನೂ ಎಂಟರ ಗಡಿಯಾಚೆಗೆ ಚಲಿಸಿರಲಿಲ್ಲ. ಆದರೆ ಸುಮುಖನ ಕಾಲುಗಳು ಕಾಲವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಆತುರಾತುರವಾಗಿ ಚಲಿಸುತ್ತಿದ್ದವು. ಮುನ್ನೂರು ಕ್ಷಣಗಳ ನಡಿಗೆ ಮುಗಿಸಿದ ಅವನಿಗೆ ಕಾಣಿಸಿದ್ದು ಕಾಲೇಜಿನ ಗೇಟು. ವಿಶಾಲವಾಗಿ ತೆರೆದುಕೊಂಡಿತ್ತು.

ತುಸುವೇ ದೂರದಲ್ಲಿ ಕಾಣಿಸುತ್ತಿದ್ದದ್ದು ಕಾಲೇಜು ಕಟ್ಟಡ. ಹೇಳಲಾಗದ ಭಾವವೊಂದು ಆತನೊಳಗೆ ಮೂಡಿ ಮರೆಯಾಯಿತು. ಒಳಹೋದವನು ತನಗೆದುರಾದ ವಿದ್ಯಾರ್ಥಿಯೊಬ್ಬನಲ್ಲಿ “ಫಸ್ಟ್ ಇಯರ್ ಬಿ.ಎಸ್ಸಿ. ಎಲ್ಲಿ?” ಎಂದು ಕೇಳಿದ. ಅವನು ನಗುತ್ತಾ ತರಗತಿ ಕೋಣೆಯೊಂದರ ಕಡೆಗೆ ಕೈ ತೋರಿಸಿದ. ಅದರೆದುರು ಹೋಗಿ ನಿಂತ ಸುಮುಖ. ತರಗತಿ ಕೋಣೆಯ ಬಾಗಿಲಿನ್ನೂ ತೆರೆದಿರಲಿಲ್ಲ. ನಿಮಿಷಗಳು ಉರುಳತೊಡಗಿದವು. ಏಳು ನಿಮಿಷ ಕಳೆಯುವಾಗ ಇನ್ನೊಬ್ಬ ವಿದ್ಯಾರ್ಥಿ ಬಂದು ಈತ ನಿಂತಿದ್ದ ಕೋಣೆಯೆದುರೇ ನಿಂತ. ಅವನ ಬೆನ್ನ ಹಿಂದೆ ಒಬ್ಬ ವಿದ್ಯಾರ್ಥಿಯೂ ವಿದ್ಯಾರ್ಥಿನಿಯೂ ನಗುತ್ತಾ ಜೊತೆಜೊತೆಗೆ ಬಂದರು. ಹೀಗೇ ಒಂದಷ್ಟು ಜನ ವಿದ್ಯಾರ್ಥಿಗಳು ಬರುತ್ತಲೇ ಇದ್ದರು. ಪರಿಚಯದ ಮುಖಗಳಾವುವೂ ಕಾಣದೆ ತಡಬಡಿಸುತ್ತಿದ್ದ ಸುಮುಖ ನಿರಾಳನಾದದ್ದು ಆದಿತ್ಯನ ಮುಖ ಕಂಡಾಗಲೇ. ಪಿ.ಯು.ಸಿ.ಯಲ್ಲಿ ಸುಮುಖನ ತರಗತಿಯಲ್ಲಿಯೇ ಇದ್ದ ಆದಿತ್ಯನೂ ಕಲಿಯುವುದರಲ್ಲಿ ಪ್ರತಿಭಾವಂತ. ಅವನ ಜೊತೆ ಮಾತು ಶುರು ಮಾಡುವಷ್ಟರಲ್ಲಿ ತರಗತಿಯ ಬಾಗಿಲು ತೆರೆದುಕೊಂಡಿತ್ತು. ಒಳಹೋದ ಸುಮುಖ ಹಾಗೂ ಆದಿತ್ಯ ಇಬ್ಬರೂ ಮೊದಲ ಬೆಂಚ್‌ನಲ್ಲಿ ಕುಳಿತುಕೊಂಡರು. ತರಗತಿಗೆ ಒಬ್ಬೊಬ್ಬರೇ ವಿದ್ಯಾರ್ಥಿಗಳು ಬರುತ್ತಾ ಬರುತ್ತಾ ಒಂಭತ್ತು ಗಂಟೆಯಾಗುವಾಗ ತರಗತಿ ಕೋಣೆ ನಲುವತ್ತು ಭಿನ್ನ ವಿಭಿನ್ನ ಮೆದುಳುಗಳಿಂದ ಭರ್ತಿಯಾಗಿತ್ತು.

ಬೆಳಗ್ಗೆಯ ಪ್ರಾರ್ಥನೆ ಮುಗಿದ ತಕ್ಷಣ ತರಗತಿಗೆ ಬಂದದ್ದು ನೋಡುವುದಕ್ಕೆ ಸಣಕಲಾಗಿದ್ದ, ಕಾಣುವಾಗಲೇ ಜೋರು ಜೋರು ಎನ್ನುವಂತಿದ್ದ ಒಬ್ಬ ಉಪನ್ಯಾಸಕರು. ಹಾಜರಿ ಪುಸ್ತಕವನ್ನು ಮೇಜಿನ ಮೇಲಿಟ್ಟವರು ತಮ್ಮ ಪರಿಚಯವನ್ನು ಹೇಳಿಕೊಂಡಾಗ ಅವರು ರಸಾಯನ ಶಾಸ್ತ್ರ ಉಪನ್ಯಾಸಕರೆನ್ನುವುದು ಸುಮುಖನಿಗೆ ತಿಳಿಯಿತು. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳಿ ಎಂದು ಅವರು ಸೂಚಿಸಿದಾಗ, ಒಬ್ಬೊಬ್ಬರೇ ಎದ್ದುನಿಂತು ಪರಿಚಯ ಹೇಳತೊಡಗಿದರು. “ನಾನು ಸಹನಾ…” ಎಂದು ನುಣುಪು ಕೆನ್ನೆಯ ಮುದ್ದು ಹುಡುಗಿಯೊಬ್ಬಳು ತನ್ನ ಪರಿಚಯ ಹೇಳಲು ಶುರುಮಾಡಿದಾಗ ಸುಮುಖನ ಮನಸ್ಸು ಆ ಕಡೆಗೇ ನೆಟ್ಟಿತ್ತು…

*****

ಸುಮುಖ ಕಾಲೇಜಿಗೆ ಸೇರಿಕೊಂಡು ಒಂದು ತಿಂಗಳು ಕಳೆದಿತ್ತು. ಕಾಲೇಜಿನ ಸಾಂಸ್ಕೃತಿಕ ಸಂಘ ಪ್ರತಿಭಾ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಒಂದೊಂದು ತರಗತಿಗೆ ಅರ್ಧಗಂಟೆಯ ಪ್ರದರ್ಶನದ ಅವಕಾಶ. ಅದರಲ್ಲಿ ಉತ್ತಮ ಪ್ರದರ್ಶನ ಕೊಡುವ ಐದು ತರಗತಿಗಳಿಗೆ ಬಹುಮಾನ. ಇದು ಪ್ರತಿಭಾ ದಿನಾಚರಣೆಯ ಒಟ್ಟು ಸ್ವರೂಪ. ಈಗಷ್ಟೇ ಕಾಲೇಜಿನ ಮೂಲೆ ಮೂಲೆಯನ್ನೂ ಪರಿಚಯ ಮಾಡಿಕೊಳ್ಳುತ್ತಿದ್ದ ಸುಮುಖನಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಉತ್ಸಾಹವಿತ್ತು. ತರಗತಿ ಪ್ರತಿನಿಧಿಯಾಗಿದ್ದ ಅಖಿಲಾ ಈತನಲ್ಲಿ ಕೇಳಿ, ಹಾಡುವವರ ಗುಂಪಿಗೆ ಈತನನ್ನು ಸೇರಿಸಿದ್ದಳು. ಅರ್ಧಗಂಟೆಯ ಪ್ರದರ್ಶನದಲ್ಲಿ ನಾಲ್ಕು ನಿಮಿಷಗಳ ಅವಕಾಶ ಸುಮುಖನ ತಂಡಕ್ಕೆ. ಈಗಾಗಲೇ ಹಲವು ಸಲ ವೇದಿಕೆ ಮೇಲೆ ಹಾಡು ಹಾಡಿದ ಅನುಭವ ಇದ್ದ ಅವನೇ ಈ ತಂಡದ ನಾಯಕನಂತಿದ್ದ. ಹಾಡಿನ ಆಯ್ಕೆ, ಅದನ್ನು ಕಲಿಸಿಕೊಡುವುದು, ತಪ್ಪಿದ್ದರೆ ಸರಿಪಡಿಸುವುದು ಇದೆಲ್ಲದರಲ್ಲಿಯೂ ಅವನದೇ ಉಸ್ತುವಾರಿ ಇದ್ದುದರಿಂದ ಅವನಿಗೆ ಬಹಳ ಸಂತಸವಾಗಿತ್ತು. ತರಗತಿಯವರ ಜೊತೆ ಸೇರಿ ಪ್ರ್ಯಾಕ್ಟೀಸ್ ಮಾಡುವಾಗ ಸಹನಾಳ ಜೊತೆಗೆ ಈತನಿಗೆ ಒಂದಷ್ಟು ಸಲುಗೆ ಬೆಳೆಯತೊಡಗಿತ್ತು. ಸ್ಕಿಟ್ ಒಂದರಲ್ಲಿ ಅವಳು ಪಾತ್ರ ನಿರ್ವಹಿಸುತ್ತಿದ್ದಳು.

ಪ್ರತಿಭಾ ದಿನಾಚರಣೆಗೆ ನಾಲ್ಕು ದಿನವಷ್ಟೇ ಬಾಕಿ ಇತ್ತು. ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡಲು ನಿರ್ಧರಿಸಿದ ಸುಮುಖನ ತರಗತಿಯವರು ಪ್ರಾಂಶುಪಾಲರ ಅನುಮತಿ ಪಡೆದು ಭಾನುವಾರ ಪ್ರ್ಯಾಕ್ಟೀಸ್‌ಗೆ ಬಂದಿದ್ದರು. ಯಾವಾಗಲೂ ಕಾಲೇಜು ಸಮವಸ್ತ್ರದಲ್ಲಿ ಸಹನಾಳನ್ನು ಕಂಡಿದ್ದ ಸುಮುಖ ಈ ದಿನ ತಿಳಿನೀಲಿ ಬಣ್ಣದ ಚೂಡಿದಾರ್‌ನಲ್ಲಿ ಅವಳನ್ನು ನೋಡಿ ಖುಷಿಯಾಗಿದ್ದ.

ಮಧ್ಯಾಹ್ನದ ಹೊತ್ತಿಗೆ ಪ್ರ್ಯಾಕ್ಟೀಸ್ ಒಂದು ಹಂತಕ್ಕೆ ಬಂದಿತ್ತು. ಊಟ ಮುಗಿಸಿ ಬಂದಿದ್ದ ಎಲ್ಲರೂ ತರಗತಿಯೆದುರಿನಲ್ಲಿ ಒಂದಷ್ಟು ಸಮಯ ಹಾಗೆಯೇ ಹರಟುತ್ತಾ, ನಗಾಡುತ್ತಾ ಕುಳಿತಿದ್ದರು. ಸುಮುಖನ ಬಳಿಬಂದ ಅವನದೇ ತರಗತಿಯ ಸ್ನೇಹಾ “ಏನೋ ಸುಮುಖ, ಯಾವತ್ತಿನಂತೆ ಬಂದಿದ್ದೀಯಲ್ಲೋ. ಒಂದಷ್ಟು ಸ್ಟೈಲ್ ಆಗಿ ಬರಬಾರದಿತ್ತಾ?” ಎಂದಳು. ಅದು ಅವಳ ಜಾಯಮಾನ. ಪರಿಚಯವೇ ಇರದವರ ಜೊತೆಗೂ ಕೂಡಾ ಜನ್ಮಜನ್ಮದ ಋಣಾನುಬಂಧ ಇರುವಂತೆ ಮಾತನಾಡುವ ಈ ಸ್ನೇಹಾ ಮಹಾನ್ ವಾಚಾಳಿ. ಸುಮುಖನಿಗೆ ಅವಳ ಮಾತು ಅರ್ಥವಾಗಲಿಲ್ಲ. ಹಾಗೆಯೇ ತಾನು ಧರಿಸಿದ್ದ ಅಂಗಿ, ಪ್ಯಾಂಟಿನ ಕಡೆಗೆ ಕಣ್ಣನ್ನು ಓಡಿಸಿದ. ಮಾಮೂಲಿ ಅಂಗಿ, ತೀರಾ ಸಹಜವಾಗಿದ್ದ ಪ್ಯಾಂಟು.
ಯಾವತ್ತಿನಂತೆಯೇ ಸೀದಾ ಸಾದಾ ಉಡುಪಿನಲ್ಲಿ ಬಂದಿದ್ದ ಆತ, ಉಳಿದವರಿಗಿಂತ ತುಸು ಕಮ್ಮಿಯಾಗಿ ಕಾಣುತ್ತಿದ್ದ. ಆದರೆ ಆತನಿಗದು ಅರ್ಥವಾಗಿರಲಿಲ್ಲ. ಕಣ್ಣರಳಿಸಿಕೊಂಡು ಅವಳ ಮುಖ ನೋಡುತ್ತಿದ್ದಾಗಲೇ ಅವಳು “ನೀನೊಬ್ಬ ಗಾಂಧಿ” ಎಂದು ಹೇಳಿ ನಗುತ್ತಾ, ಈತನ ತಲೆಗೆ ಮೆದುವಾಗಿ ಮೊಟಕಿದಳು. ಅವಳ ಹಿಂದೆಯೇ ನಿಂತಿದ್ದ ಹುಡುಗಿಯರ ಗುಂಪು ಇದನ್ನು ಕಂಡು ದೊಡ್ಡದಾಗಿ ಕೇಕೆ ಹಾಕಿ ನಕ್ಕಿತು. ಆ ಗುಂಪಿನಲ್ಲಿ ಸಹನಾಳೂ ಇದ್ದುದನ್ನು ಕಂಡ ಸುಮುಖ ಒಂದು ಕ್ಷಣ ಬೆಪ್ಪಾಗಿದ್ದ. ಆದರೂ ನಗು ಬಂದಂತೆ ನಟಿಸುವಲ್ಲಿ ಯಶಸ್ವಿಯಾಗಿದ್ದ.

ಬಸ್ಸು ಹತ್ತಿ ಕುಳಿತಾಗ ಅದೇ ಮಾತು ಆತನ ತಲೆಯನ್ನು ಕುಟುಕಲಾರಂಭಿಸಿತು. “ನೀನು ಗಾಂಧಿ” ಎಂಬ ಮಾತು ಅಸಹಜತೆಯ ಭಾವವನ್ನು ಆತನಲ್ಲಿ ಮೂಡಿಸಿತ್ತು. ಉಳಿದವರಿಗಿಂತ ಅತೀತನಾದವನು ತಾನೆಂಬ ಧ್ವನಿ ಆ ಮಾತಿನಲ್ಲಿದ್ದಂತೆ ಆತನಿಗೆ ಭಾಸವಾಯಿತು. ಮನೆ ತಲುಪಿದ ಮೇಲೂ ಅವನಲ್ಲಿ ಅದೇ ಯೋಚನೆ. ಸ್ನೇಹಾಳ ಮಾತಿನ ಸಂಪೂರ್ಣ ಅರ್ಥ ಅವನಿಗೆ ಸ್ಪಷ್ಟವಾಗಿರಲಿಲ್ಲ. ಅವಳ ಒಂದು ಮಾತು ಸುಮುಖನೊಳಗೆ ಭರಪೂರ ಅಸಮಾಧಾನ, ಅತೃಪ್ತಿ ಮೂಡಿಸಿದ್ದಂತೂ ಸುಳ್ಳಲ್ಲ.

*****

ಗಾಂಧಿಯನ್ನು ಮರೆತೇಬಿಟ್ಟಿದ್ದ ಸುಮುಖನೊಳಗೆ ಮತ್ತೆ ಗಾಂಧಿ ಹೊಕ್ಕಿದ್ದು ಕನ್ನಡ ಪಂಡಿತರಾಗಿದ್ದ ಲಕ್ಷ್ಮೀನಾರಾಯಣ ಸರ್ ತರಗತಿಗೆ ಬಂದು ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಪರ್ಧೆಗಳ ಬಗ್ಗೆ ತಿಳಿಸಿದಾಗಲೇ. ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವನ ಸ್ಪರ್ಧೆ ಇರುವುದಾಗಿ ತಿಳಿಸಿದ ಅವರು ಯಾರಾದರೂ ಈಗಲೇ ಹೆಸರು ಕೊಡುವುದಿದ್ದರೆ ಕೊಡಬಹುದು ಎಂದರು. ಲಕ್ಷ್ಮೀನಾರಾಯಣ ಸರ್ ಭಾಷಣ ಸ್ಪರ್ಧೆ ಇದೆ ಎಂದಾಗಲೇ ಸುಮುಖನ ಕಿವಿ ಚುರುಕಾಗಿತ್ತು. ಡಿಗ್ರಿಗೆ ಸೇರಿಕೊಳ್ಳುವಾಗಲೇ ಆತ ನಿರ್ಧರಿಸಿದ್ದ, ಡಿಗ್ರಿ ಮುಗಿಯುವುದರೊಳಗೆ ತಾನೊಬ್ಬ ಒಳ್ಳೆಯ ಭಾಷಣಕಾರ ಆಗಬೇಕು. ಮಾತುಗಾರಿಕೆಯ ಕೌಶಲ್ಯ ಬೆಳೆಸಿಕೊಂಡರೆ ಮಾತ್ರ ತಾನು ಮುಂದೆ ಒಳ್ಳೆಯ ಉಪನ್ಯಾಸಕ ಆಗಬಹುದು ಎಂಬ ಯೋಚನೆ ಆತನಲ್ಲಿತ್ತು. ಹೆಸರು ಕೊಡಲು ಎದ್ದುನಿಂತವನೊಳಗೆ ಅದೇನೋ ಗೊಂದಲ. ಗಾಂಧಿ ಎಂದರೆ ಉಳಿದೆಲ್ಲರಿಗಿಂತ ಅತೀತ ವ್ಯಕ್ತಿ ಎಂಬ ಯೋಚನೆ ಅವನೊಳಗೆ. ತನ್ನನ್ನು ನೋಡಿ ತರಗತಿಯ ಎಲ್ಲರೂ ನಕ್ಕಂತೆ ಅವನಿಗೆ ಭಾಸವಾಗಿ ದಿಢೀರನೆ ಕುಳಿತುಬಿಟ್ಟ. ಹೆಸರು ಕೊಟ್ಟಿದ್ದ ಹುಡುಗಿಯೊಬ್ಬಳ ಹೆಸರನ್ನು ಬರೆದುಕೊಳ್ಳುತ್ತಿದ್ದ ಲಕ್ಷ್ಮೀನಾರಾಯಣ ಸರ್ ಅವರ ಗಮನಕ್ಕೆ ಇದು ಬಂದಿರಲಿಲ್ಲ. “ಇನ್ನೂ ಆರು ದಿನ ಸಮಯ ಇದೆ. ಆಸಕ್ತಿ ಇದ್ದವರು ಹೆಸರು ಕೊಡಬಹುದು” ಎಂದ ಅವರು ತರಗತಿಯಿಂದ ಹೊರಟುಹೋದರು.

ತಾನಿದ್ದ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆಯ ತಯಾರಿ ನಡೆಸುತ್ತಿದ್ದ ಸುಮುಖನ ಅಮ್ಮನಿಗೆ ಮಗನ ಕಾಲೇಜಿನಲ್ಲಿಯೂ ಸ್ಪರ್ಧೆಗಳಿರಬಹುದು ಎನ್ನುವ ಅಂದಾಜಿತ್ತು. ಮಗನಲ್ಲಿ ವಿಚಾರಿಸಿದರು. “ಭಾಷಣ ಸ್ಪರ್ಧೆಗೆ ಸೇರಬೇಕೆಂದಿದ್ದೆ. ಆದರೆ ನನಗೇಕೋ ಆಗುತ್ತಿಲ್ಲ” ಎಂದ. “ನಾಳೆಯೇ ಹೋಗಿ ಹೆಸರು ಕೊಡು. ನಾಳೆ ಸಂಜೆ ನಾನು ಬರುವಾಗ ಗಾಂಧೀಜಿಯವರಿಗೆ ಸಂಬಂಧಪಟ್ಟ ಪುಸ್ತಕವೊಂದನ್ನು ನಮ್ಮ ಶಾಲೆಯ ಲೈಬ್ರೆರಿಯಿಂದ ತರುತ್ತೇನೆ. ಅದನ್ನು ಓದಿ, ಭಾಷಣ ಮಾಡಿದರಾಯಿತು” ಎಂದರು. ತನ್ನಮ್ಮ ಒಮ್ಮೆ ಹೇಳಿದರೆ ಮತ್ತೆ ಏನೆಂದರೂ ಬದಲಾಗುವವಳಲ್ಲ ಎನ್ನುವುದು ಸುಮುಖನಿಗೆ ಗೊತ್ತಿತ್ತು. ಮರುದಿನವೇ ಕನ್ನಡ ವಿಭಾಗ ಹೊಕ್ಕವನು ಲಕ್ಷ್ಮೀನಾರಾಯಣ ಸರ್ ಅವರಲ್ಲಿ ಹೆಸರು ಕೊಟ್ಟ.

ಸಂಜೆ ಮನೆಗೆ ಬಂದಾಗ ಟೀಪಾಯಿ ಮೇಲೆ ಗಾಂಧೀಜಿಯವರ ಜೀವನ ಮತ್ತು ವಿಚಾರಧಾರೆಗಳನ್ನು ತಿಳಿಸಿಕೊಡುವ ಪುಸ್ತಕವಿತ್ತು. ಅವನಮ್ಮ ತಂದಿಟ್ಟದ್ದು. ಎತ್ತಿಕೊಂಡವನು ಓದತೊಡಗಿದ. ಇಡೀ ಪುಸ್ತಕ ಓದಿ ಮುಗಿಸಿದವನಿಗೆ ಅನಿಸಿದ್ದಿಷ್ಟೇ- ಸರಳತೆ ಎನ್ನುವುದು ಗಾಂಧೀಜಿಯವರ ಆಯ್ಕೆಯಾಗಿತ್ತೇ ಹೊರತು ಅನಿವಾರ್ಯತೆಯಲ್ಲ. ಈಗ ಸುಮುಖ ಯೋಚಿಸತೊಡಗಿದ- ತಾನೂ ಸಹ ಶ್ರೀಮಂತನೇ. ತಾನು ಸಾದಾ ಸೀದಾ ಬಟ್ಟೆ ಧರಿಸುತ್ತಿರುವುದೇ ತನಗೆ ಖುಷಿ ಕೊಡುತ್ತಿದೆ ಎಂದಾದಮೇಲೆ ಅದರಲ್ಲಿ ತಪ್ಪೇನಿದೆ? ತಾನು ಸರಳವಾಗಿರುವುದು ಬೇರ‍್ಯಾರಿಗೋ ಇಷ್ಟವಾಗುತ್ತಿಲ್ಲ ಎಂದಮಾತ್ರಕ್ಕೆ ತಾನ್ಯಾಕೆ ಅದನ್ನು ಬಿಟ್ಟುಬಿಡಬೇಕು? ಅವನೀಗ ಮೊದಲಿಗಿಂತ ನಿರಾಳನಾಗಿದ್ದ.

ಭಾಷಣ ಮಾಡುವುದಕ್ಕೆಂದು ವೇದಿಕೆ ಮೇಲೆ ಹೋಗಿನಿಂತ ಸುಮುಖ ಚೆನ್ನಾಗಿಯೇ ಮಾತು ಆರಂಭಿಸಿದ. ಇದ್ದ ಐದು ನಿಮಿಷಗಳಲ್ಲಿ ಎರಡು ನಿಮಿಷ ಮುಗಿದಿತ್ತು. ಹಾಗೆಯೇ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆಯೇ ಗೊಂದಲಕ್ಕೊಳಗಾದಂತೆ ಕಂಡುಬಂದ. ಗಾಂಧಿ ಎಂಬ ಹೆಸರನ್ನೇ ಹೇಳಲಾರದಮಟ್ಟಿಗೆ ಅವನು ತಲ್ಲಣಕ್ಕೊಳಗಾಗಿದ್ದ. ಯಾರೋ ಲೇವಡಿ ಮಾಡಿದಂತೆ, ಅಪಹಾಸ್ಯದ ನಗೆ ಬೀರಿದಂತೆ ಅವನಿಗೆ ಭಾಸವಾಯಿತು. ಚೆನ್ನಾಗಿಯೇ ಮಾತನಾಡುತ್ತಿದ್ದವನು ಇದ್ದಕ್ಕಿದ್ದ ಹಾಗೆಯೇ ‘ಬ್ಬೆಬ್ಬೆಬ್ಬೆ’ ಮಾಡತೊಡಗಿದ್ದನ್ನು ಕಂಡ ಎದುರು ಸಾಲಿನಲ್ಲಿದ್ದ ಉಪನ್ಯಾಸಕರು ಕೈಸನ್ನೆ ಮಾಡಿ ಇವನನ್ನು ಹುರಿದುಂಬಿಸುವ ಪ್ರಯತ್ನ ಮಾಡತೊಡಗಿದರು. ಮಾತೇ ಹೊಳೆಯದವನಂತಾದ ಸುಮುಖ ಅರ್ಧಕ್ಕೇ ಮಾತು ನಿಲ್ಲಿಸಿ, ವೇದಿಕೆಯಿಂದ ಕೆಳಗಿಳಿದಾಗ ಸೇರಿದ್ದ ಎಲ್ಲರ ಮುಖದಲ್ಲಿಯೂ ಸಹಾನುಭೂತಿಯ ಭಾವವಿತ್ತು.

ಬಟ್ಟೆ ಅಂಗಡಿಯಲ್ಲಿದ್ದ ಸುಮುಖ ಪ್ಯಾಂಟೊಂದರ ಕಡೆಗೆ ಕೈ ತೋರಿಸಿದ್ದ. ಬಟ್ಟೆ ತೋರಿಸುತ್ತಿದ್ದ ಯುವತಿ ಇವನು ಕೈತೋರಿಸಿದೆಡೆಗೆ ನೋಡಿದಳು. ಆರು ಜೇಬುಗಳು, ಸುತ್ತಮುತ್ತೆಲ್ಲಾ ಉದ್ದುದ್ದ ಬಳ್ಳಿ ಬೆಳೆದಂತಿದ್ದ ಗಿಲಿಗಿಲಿ ಪ್ಯಾಂಟೊಂದು ಅಲ್ಲಿತ್ತು. ಅದು ಸುಮುಖ ಯಾವಾಗಲೂ ಹೋಗುತ್ತಿದ್ದ ಬಟ್ಟೆ ಅಂಗಡಿ. ಅದರ ಮಾಲೀಕರಿಂದ ಹಿಡಿದು ಎಲ್ಲರನ್ನೂ ಪರಿಚಯವಿತ್ತು ಸುಮುಖನಿಗೆ. ಈಗ ಬಟ್ಟೆ ತೋರಿಸುತ್ತಿದ್ದ ಯುವತಿಯೂ ಸಹ ಇವನ ಪರಿಚಯದವಳೇ. ಹಿಂದೆ ಅದೆಷ್ಟೋ ಸಲ ಇವನಿಗೆ ಫಾರ್ಮಲ್ ಪ್ಯಾಂಟನ್ನು ತೋರಿಸಿದ್ದಳು.

ಈಗ ಸುಮುಖ ಹೊಸ ಬಗೆಯ ಪ್ಯಾಂಟಿನೆಡೆಗೆ ಕೈತೋರಿಸಿರುವುದಕ್ಕೆ ಕಾರಣವಿತ್ತು. ಅವನ ಮನಸ್ಸನ್ನು ಸೆಳೆದಿದ್ದ ಸಹನಾ ಈಚೀಚೆಗೆ ಅವನ ಜೊತೆಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಕೆಲವೊಮ್ಮೆ ಈತನೇ ನಗಾಡಿದರೆ ಮಾತ್ರ ಒಂದು ನಗು, ಅದೂ ಬೇಕೋ ಬೇಡವೋ ಎನ್ನುವಂತೆ. ಅವಳು ಬೇಕೆಂದೇ ತನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ ಎಂದು ಅನಿಸತೊಡಗಿತ್ತು ಸುಮುಖನಿಗೆ. ಅವಳ ಬಗ್ಗೆ ಇವನಿಗೆ ಅದೆಂತಹ ಆಕರ್ಷಣೆ ಬೆಳೆದಿತ್ತೆಂದರೆ ಅವಳಿಗಾಗಿ ಏನನ್ನೂ ಮಾಡಲು ಸಿದ್ಧನಾಗಿದ್ದ. ಅವಳನ್ನು ಒಲಿಸಿಕೊಳ್ಳುವ ಬಗೆ ಹೇಗೆ ಎಂದು ಯೋಚಿಸಿದವನಿಗೆ ಹೊಳೆದದ್ದು ಸ್ಟೈಲಾದ ಅಂಗಿ ಪ್ಯಾಂಟನ್ನು ಧರಿಸುವುದು. ಹಾಗೆ ಅಂದುಕೊಂಡವನು ಈಗ ಬಟ್ಟೆ ಅಂಗಡಿಗೆ ಬಂದು ಚಂದ ಕಂಡ ಪ್ಯಾಂಟಿನ ಕಡೆಗೆ ಕೈ ತೋರಿಸುತ್ತಾ ನಿಂತಿದ್ದ.

“ಯಾವುದು ಅದಾ?” ಎಂದು ಪ್ಯಾಂಟಿನೆಡೆಗೆ ಕೈತೋರಿ ಕೇಳುತ್ತಿದ್ದ ಆ ಯುವತಿಯ ಮುಖದಲ್ಲಿ ನಗುವಿತ್ತು. ಅವಳು ಮಾಮೂಲಿಯಾಗಿಯೇ ನಗುತ್ತಿದ್ದಳು. ಆದರೆ ಸುಮುಖನಿಗೆ ಆ ನಗು ವಿಚಿತ್ರವಾಗಿ ಕಂಡಿತು. ತನ್ನನ್ನೇ ನೋಡಿ ಆಕೆ ಅಪಹಾಸ್ಯ ಮಾಡಿ ನಕ್ಕಂತೆ ಈತನಿಗೆ ಅನಿಸಿತು. ಅವಳು ಪ್ಯಾಂಟು ತರಲೆಂದು ಆಚೆ ಹೋಗುತ್ತಿದ್ದಂತೆ ಈತ ಅಲ್ಲಿಂದ ಹೊರಟುಬಂದಿದ್ದ, ಅವಳಿಗೆ ಒಂದು ಮಾತನ್ನೂ ಹೇಳದೆ.

*****

ಇತ್ತೀಚೆಗೆ ಮಂಕು ಬಡಿದವನಂತಾಗಿದ್ದ ಸುಮುಖ ಕಾಲೇಜಿಗೆ ಹೊರಡುವುದರಲ್ಲಿ ತೀರಾ ಉದಾಸೀನ ಮಾಡತೊಡಗಿದ್ದ. ಬೆಳಗ್ಗೆ ಕಾಲೇಜಿನ ಬಸ್‌ಸ್ಟ್ಯಾಂಡಿನಲ್ಲಿ ಆತ ಬಸ್ಸಿನಿಂದ ಇಳಿದಾಗಲೇ ಎಂಟೂ ಮುಕ್ಕಾಲು ಕಳೆದಿತ್ತು. ಅವತ್ತು ಹಬ್ಬದ ದಿನ. ಕಾಲೇಜಿಗೆ ರಜೆಯಿತ್ತು. ಆದರೆ ಒಂಭತ್ತು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಇಂಗ್ಲಿಷ್ ಉಪನ್ಯಾಸಕರ ಸ್ಪೆಶಲ್ ಕ್ಲಾಸ್ ಇತ್ತು. ಅವರು ಮಹಾ ಶಿಸ್ತಿನ ವ್ಯಕ್ತಿ. ಐದು ನಿಮಿಷ ತಡವಾದರೂ ಸಹ ತರಗತಿಗೆ ಬಿಡುತ್ತಿರಲಿಲ್ಲ. ಅದರ ಅರಿವಿದ್ದ ಸುಮುಖ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ನಡೆಯುತ್ತಿದ್ದ. ಇದ್ದಕ್ಕಿದ್ದ ಹಾಗೆಯೇ “ಹಾಯ್ ಸುಮುಖ” ಎಂಬ ಜೋರು ಧ್ವನಿ ಅವನ ಕಿವಿಗೆ ಬಂದು ಬಡಿಯಿತು. ಧ್ವನಿ ಬಂದತ್ತ ನೋಡಿದರೆ ಸ್ನೇಹಾಳ ಜೊತೆಗೆ ಒಂದೈದು ಜನ ಹುಡುಗಿಯರು ಅಂಗಡಿ ಎದುರು ನಿಂತಿದ್ದರು. ಸಹನಾಳೂ ಸಹ ಆ ಗುಂಪಿನಲ್ಲಿದ್ದಳು. ಎಲ್ಲರ ಮುಖದಲ್ಲಿಯೂ ಚಂದದ ನಗುವಿತ್ತು. ಅದು ಅಪಹಾಸ್ಯದ ನಗುವಾಗಿರಲಿಲ್ಲ. ಕೆಲವು ದಿವಸಗಳಿಂದ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದನ್ನೇ ಬಿಟ್ಟಿದ್ದ ಈ ಹುಡುಗಿಯರೆಲ್ಲಾ ಈಗ ಅಷ್ಟು ಸೊಗಸಾಗಿ ವಿಶ್ ಮಾಡಿದ್ದರಿಂದಾಗಿ ಸುಮುಖನೊಳಗೆ ಅದೇನೋ ಸಂತಸ, ಅದೇನೋ ಪುಳಕ. “ಹಾಯ್” ಎಂದು ಹೇಳಿ, ಅವರೆಡೆಗೆ ನೋಡಿ ನಗಾಡಿದ ಆತ ಮೊದಲಿಗಿಂತ ನೂರು ಪಟ್ಟು ಉಲ್ಲಾಸದಿಂದ ನಡೆಯತೊಡಗಿದ.

ಆದದ್ದಿಷ್ಟೇ, ಸುಮುಖ ಅವತ್ತು ಬೆಳಗ್ಗೆ ಏಳುವಾಗ ಯಾವತ್ತಿಗಿಂತ ತಡವಾಗಿತ್ತು. ಗಡಿಬಿಡಿಯಲ್ಲಿ ಸ್ನಾನ, ತಿಂಡಿ ಮುಗಿಸಿದವನು ಕೈಗೆ ಸಿಕ್ಕಿದ ಜೀನ್ಸ್‌ಪ್ಯಾಂಟೊಂದನ್ನು ಹಾಕಿಕೊಂಡಿದ್ದ. ಸ್ಪೆಶಲ್ ಕ್ಲಾಸ್ ಇದ್ದ ಕಾರಣ ಸಮವಸ್ತ್ರ ಹಾಕಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಸುಮುಖ ಎತ್ತಿಕೊಂಡ ಆ ಪ್ಯಾಂಟು ಇಲಿ ಕಚ್ಚಿದ್ದರಿಂದಾಗಿ ಮೊಣಗಂಟಿನ ಭಾಗದಲ್ಲಿ ಅಡ್ಡಕ್ಕೆ ಹರಿದುಹೋಗಿತ್ತು. ಹೊರಡುವ ಗಡಿಬಿಡಿಯಲ್ಲಿ ಸುಮುಖ ಇದನ್ನು ಗಮನಿಸಿರಲಿಲ್ಲ. ಆದರೆ ಸ್ಪೆಶಲ್ ಕ್ಲಾಸ್‌ಗೆ ತಡವಾಗಿ ಹೋದರೆ ಸಾಕು ಎಂದುಕೊಂಡು ಅಂಗಡಿಯೆದುರು ನಿಂತಿದ್ದ ಅವನ ತರಗತಿಯ ಹುಡುಗಿಯರು ಇದನ್ನು ಗಮನಿಸಿದ್ದರು. ಅವರಿಗೆ ಅದು ಇಲಿ ಕಚ್ಚಿದ್ದರಿಂದಾಗಿ ಹರಿದದ್ದು ಎನ್ನುವುದು ಗೊತ್ತಿಲ್ಲ. ಸುಮುಖ ಹೊಸ ಸ್ಟೈಲಿನ ಪ್ಯಾಂಟ್ ಹಾಕಿಕೊಂಡಿದ್ದಾನೆ ಎಂಬ ಊಹೆ ಅವರದ್ದು. ಅದರಿಂದಲೇ ಖುಷಿಖುಷಿಯಿಂದ ಸುಮುಖನಿಗೆ ವಿಶ್ ಮಾಡಿದ್ದರು.

ಸಂತಸದಿಂದ ಕಾಲೇಜಿನ ಕಡೆಗೆ ನಡೆಯುತ್ತಿದ್ದ ಸುಮುಖನಿಗೆ ತನ್ನೊಳಗಿನ ಗಾಂಧಿ ತನಗರಿವೇ ಇಲ್ಲದಂತೆ ಅಪ್‌ಡೇಟ್ ಆದುದರ ಪರಿವೆಯೇ ಇರಲಿಲ್ಲ.