ನಕ್ಷತ್ರ ಮೋಹದಲ್ಲಿ
ನೀನು ನನಗೆ
ತುಂಬಾ ತಡವಾಗಿ ದಕ್ಕಿದೆ
ಆಗಲೇ ನನ್ನ ಎಲ್ಲ ಕನಸುಗಳು
ಬಿಕರಿಯಾಗಿದ್ದವು
ಗೋಡೆಯ ಮೇಲೆ ಅಕ್ಕ ಬಿಡಿಸಿದ್ದ
ನವಿಲು ಚಿತ್ರ
ಕೌಶಿಕನ ಕೈಯಲ್ಲಿ ಸಿಕ್ಕು
ಆತ್ಮ ಕಳೆದುಕೊಂಡಿತ್ತು
ಇಳೆಯೆಂಬ ಹೃದಯ
ಪೂರಾ ಬೆತ್ತಲಾಗಿ ಬಯಲಲ್ಲಿ ನಿಂತು
ಬಯಕೆಯ ಬಣ್ಣದುಡಿಗೆ
ಸುಟ್ಟುಕೊಂಡು ಬೂದಿಯಾಗಿತ್ತು
ಹಾಡು ಹೇಳಬೇಕಾಗಿದ್ದ ಬಾಳು
ಬವಣೆಯ ಉಕ್ಕಿನ ಸರಪಳಿಯ
ನಡುವೆ ಸಿಕ್ಕು
ವಿಲಿವಿಲಿ ಒದ್ದಾಡುತ್ತಿತ್ತು
ಮುಖ ತೋರದ ಮುಖವಾಡಗಳು
ನಕ್ಷತ್ರ ಮೋಹದಲಿ ಮುಗಿಲಿಗೆ ಜಿಗಿಯುವ ಪ್ರಯತ್ನದಲ್ಲಿ ನಿರ್ವೀರ್ಯರಾಗಿ
ಕಲ್ಲು, ಗಿಡ-ಪೊದೆಗಳ ಮೇಲೆ
ಮೂತ್ರ ವಿಸರ್ಜಿಸಿ
ತಮ್ಮ ಬಾಲವನ್ನು ತಾವೇ ಕಡಿದುಕೊಳ್ಳುತ್ತಿದ್ದವು!
ಇನ್ನೂ ಅರಳದ ಹೂಗಳನ್ನು
ಎಡಗೈಲಿ ಸ್ಪರ್ಶಿಸಿ ಉಷೆಯ ಬಿಸಿ ನೆಶೆ
ಉಸಿರಲಿ ತಾಕುತ್ತಿರಲು
ಸ್ವರ್ಗ ಕೈಗೆ ಎಟಕಿತ್ತೆಂಬ ಭ್ರಮೆಯಲ್ಲಿ
ನೆಲ ಕಚ್ಚಿದ್ದವು
ಉಚ್ಚಿ ಬಿದ್ದ ಉಡಾದಾರಕೆ ನುಶಿ, ಗೊರಲಿ
ಹತ್ತಿ ಹಾದಿ-ಬೀದಿಯಲಿ
ಶವ ಸಂಸ್ಕಾರಕ್ಕೆ ಫರ್ಮಾನು ಹೊರಡಿಸಿದವರು
ಪಳೆಯುಳಿಕೆಯ ಶೋಧಕೆ ಹಿಂಬಾಲಕರನ್ನು
ನೇಮಿಸಿದ್ದರು!
ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, ‘ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.