Advertisement
ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ

ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ

ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು.
ವಿಜಯಶ್ರೀ ಹಾಲಾಡಿ ಪ್ರಬಂಧಗಳ ಸಂಕಲನ “ಕಾಡಿನ ಸಂಗೀತ” ಕೃತಿಯ ಒಂದು ಪ್ರಬಂಧ ನಿಮ್ಮ ಓದಿಗೆ

ಕುರುಚಲು ಪೊದೆ, ಸಣ್ಣ ಹಾಡಿ, ಬೆಟ್ಟ ಗುಡ್ಡ, ಬೆಣಚು ಕಲ್ಲುಗಳ ಮಧ್ಯೆ ಅಡಗಿರುವ ನಮ್ಮ ಪುಟಾಣಿ ಹೊಸ ಮನೆ ‘ನೆಲಸಂಪಿಗೆ’ಗೆ ಮೊತ್ತಮೊದಲು ಎಲ್ಲರನ್ನೂ ಸ್ವಾಗತಿಸಿದ್ದೇ ಕೆಂಪಿ! ಯಾಕೆಂದರೆ ನಾವೆಲ್ಲ ಅಲ್ಲಿಗೆ ಹೋಗಿ ವಾಸ ಮಾಡಲಾರಂಭಿಸುವುದಕ್ಕೆ ತಿಂಗಳುಗಳ ಮೊದಲೇ ಅವಳು ಠಿಕಾಣಿ ಹೂಡಿಯಾಗಿತ್ತು. ಠಿಕಾಣಿಯೇನು; ಎರಡು ಮರಿಗಳನ್ನಿಟ್ಟು ಸಂಸಾರವನ್ನೂ ಆರಂಭಿಸಿಯಾಗಿತ್ತು! ಹೌದು, ಕಟ್ಟುತ್ತಿರುವ ಮನೆಯೊಳಗೇ ಮರಿಗಳನ್ನಿಟ್ಟು ಕೆಲಸಗಾರರು, ಅಕ್ಕಪಕ್ಕದ ಮನೆಯವರು ಆಗೀಗ ನಾವು ಕೊಟ್ಟ ತಿಂಡಿ, ಅನ್ನ ತಿಂದು ಹೇಗೋ ಮರಿಗಳನ್ನು ದೊಡ್ಡ ಮಾಡಿಕೊಂಡಿದ್ದಳು. ಆಮೇಲೆ ನಾವು ನಮ್ಮ ‘ಮನುಷ್ಯ ಬುದ್ಧಿ’ ತೋರಿಸಿ ಅವಳನ್ನು ಸಿಟೌಟ್‌ಗೆ ವರ್ಗಾವಣೆ ಮಾಡಿ ನಮ್ಮ ಪಾತ್ರೆ ಸಾಮಾನು ಸರಂಜಾಮುಗಳನ್ನು ಒಳಗೆ ಜೋಡಿಸಿಟ್ಟುಕೊಂಡು ಅಡುಗೆ ಮಾಡಿದೆವು. ಆದರೆ ಅವಳಿಗೂ ಅವಳ ಮರಿಗಳಿಗೂ ಯಥೇಚ್ಛವಾಗಿ ಉಣಿಸು ತಿನಿಸನ್ನೂ ನೀಡಿದೆವು ಎನ್ನುವುದು ಸತ್ಯ. ಹೀಗೆ ಹೊಸ ಜಾಗದಲ್ಲಿ ನಮ್ಮೆಲ್ಲರ ಪ್ರಯಾಣ ಆರಂಭವಾಯಿತು.

(ವಿಜಯಶ್ರೀ ಹಾಲಾಡಿ)

ಸುತ್ತಮುತ್ತ ಸಣ್ಣ, ದೊಡ್ಡ ಹಾಡಿಗಳಿಂದ ಸುತ್ತುವರೆದು ಸಪೂರ ರಸ್ತೆಯೊಂದನ್ನು ಒಳಗೊಂಡ ಪ್ರಶಾಂತ ಏರಿಯಾ ಇದಾದರೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಮನೆ ಇರುವುದರಿಂದ ಹೆಚ್ಚಿನ ಭದ್ರತೆಯನ್ನೊಳಗೊಂಡ ಪ್ರದೇಶ. ಆದರೆ ಕಾಡಿನ ಪ್ರಾಣಿ ಪಕ್ಷಿಗಳಿಗೆ ಇದೆಲ್ಲದರ ಅರಿವಿಲ್ಲದೆ ಆರಾಮವಾಗಿ ತಿರುಗಾಡಿಕೊಂಡಿವೆ. ಹಾಗೆ ಹಿಂಡು ಹಿಂಡು ನವಿಲುಗಳು, ಕೆಲವು ಕಾಡುಕೋಳಿಗಳು, ಹುಂಡು ಕೋಳಿಗಳು, ಕಾಡು ಪಾರಿವಾಳಗಳು, ಹತ್ತಾರು ಜಾತಿಯ ಹಕ್ಕಿಗಳು ಈ ಪರಿಸರದಲ್ಲಿ ಇವೆ. ಅದಲ್ಲದೆ ‘ಇಲ್ಲಿ ಚಿರತೆ ತಿರುಗಾಡುತ್ತದೆ ರಾತ್ರಿ ಹೊತ್ತು ವಾಕ್ ಮಾಡಬೇಡಿ’ ಎಂದು ಹಿತೈಷಿಗಳು ಆರಂಭದಲ್ಲೇ ಎಚ್ಚರಿಸಿದಾಗ ಭಯವೇ ಆಯಿತು “ಎಂಥಾ ಜಾಗಕ್ಕೆ ಬಂದೆವಪ್ಪಾ” ಎಂದು! ಅಂತಹ ದಿನಗಳಲ್ಲೇ ಪರಿಚಯಸ್ಥರಾದ ಜಮೀಲಾ “ನಾನು ರಾತ್ರಿ ಎಚ್ಚರವಾಗಿ ಕಿಟಕಿಯಲ್ಲಿ ನೋಡುವಾಗ ಚಿರತೆ ರಸ್ತೆಯಲ್ಲಿ ನಡೆದುಹೋಗುತ್ತಿತ್ತು!” ಎಂದದ್ದು. ‘ಅಬ್ಬಾ ನಮ್ಮ ಗತಿ, ನಾಯಿಗಳ ಗತಿಯೇನು? ದೇವರೇ ಕಾಪಾಡಬೇಕು’ ಎಂಬ ಉದ್ಗಾರ ಹೊರಬಂದದ್ದಂತೂ ನಿಜ!

ಕೆಂಪಿ ಇಟ್ಟದ್ದು ಎರಡೇ ಮರಿ. ಎರಡೂ ಹೆಣ್ಣುಮರಿ. ಒಂದು ಬಿಸ್ಕಿಟ್ ಕಲರ್, ಇನ್ನೊಂದು ಕಪ್ಪು. ನಾವು ಮನೆಗೆ ಬರುವ ಮುಂಚೆಯೇ ಬಿಸ್ಕಿಟ್ ಬಣ್ಣದ ಮರಿಯನ್ನು ಯಾರೋ ಕೊಂಡೊಯ್ದಿದ್ದರು. ನಮಗೆ ಉಳಿದದ್ದು ಕರಿಯ ಮಾತ್ರ. ಆರಂಭದಲ್ಲಿ ಎಲ್ಲಾ ಮರಿಗಳಂತೆಯೇ ಇದ್ದ ಈ ಕರಿಯ ಆಮೇಲಾಮೇಲೆ ಜೋರಾದದ್ದೆಂದರೆ ಅಷ್ಟಿಷ್ಟಲ್ಲ. ಇದುವರೆಗೆ ಎಷ್ಟೇ ನಾಯಿಗಳನ್ನು ನೋಡಿದ್ದರೂ ಇಂಥಾ ಹಟಮಾರಿಯನ್ನು ನಾನಂತೂ ಕಂಡದ್ದಿಲ್ಲ. ಈ ಮಧ್ಯೆ ಇನ್ನೊಂದು ಘಟನೆ ನಡೆಯಿತು. ಒಂದು ಬೆಳಿಗ್ಗೆ ಮುದ್ದು ಮುದ್ದು ಪೆದ್ದು ಪೆದ್ದಾಗಿದ್ದ ಕಪ್ಪು-ಬಿಳಿ ನಾಯಿಮರಿಯೊಂದು ಹೊಡೆತ ತಿಂದುಕೊಂಡು ಬಂದದ್ದು ನನಗೆ ಗೊತ್ತಾಯಿತು. ಹಿಂದೆ ಮುಂದೆ ನೋಡದೆ ಅದನ್ನು ಎತ್ತಿಕೊಂಡು ಬಂದೆ. ಯಾರೋ ಬೀದಿಯಲ್ಲಿ ಬಿಟ್ಟು ಹೋದ ಹೆಣ್ಣುಮರಿ. ಹಣೆಯಲ್ಲಿ ಬಿಳಿಯ ಡಿಸೈನ್ ಇದ್ದುದರಿಂದ ಅದಕ್ಕೆ ‘ದಾಸು’ ಎಂದು ಹೆಸರಿಟ್ಟದ್ದಾಯಿತು. ಅದು ಎಷ್ಟು ಪೆದ್ದು, ಕ್ಯೂಟ್ ಇತ್ತೆಂದರೆ ನಾನಂತೂ ಅದನ್ನು ಓಡಿಸಲು ಸಾಧ್ಯವೇ ಇರಲಿಲ್ಲ. ಮನೆಯಲ್ಲಿ ಆರಂಭದಲ್ಲಿ ವಿರೋಧ ಬಂದರೂ ಅದರ ಮುಖ ಕಂಡು ಎಲ್ಲರೂ ‘ಇನ್ನು ಅದು ನಮ್ಮದೇ’ ಎಂದು ಒಪ್ಪಿಕೊಂಡರು. ಹೀಗೆ ದಾಸು, ಕರಿಯ, ಕೆಂಪಿ ಮೂರು ಜನರಾದರು. ಇವರ ಜೊತೆಗೆ ಹತ್ತಿರದ ಮನೆಯ ಸ್ಮಾರ್ಟ್ ನಾಯಿ ಟಾಮಿ ಖಾಯಂ ನೆಂಟನಾಯಿತು. ಟಾಮಿಯಂತೂ ಯಾರೇ ಆದರೂ ಬಯಸಿ ಬಯಸಿ ಕರೆಯಬಹುದಾದ ಅತಿಥಿ. ತುಂಬಾ ಸ್ನೇಹಮಯಿ ವ್ಯಕ್ತಿತ್ವದ ನಾಯಿ. ಆದರೆ ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು. ಮನೆಯ ಸದಸ್ಯರೆಲ್ಲರ ಚಪ್ಪಲಿಗಳನ್ನು ಕದ್ದುಕೊಂಡು ಹೋದದ್ದಾಯಿತು. ಅವನ್ನು ಕಚ್ಚಿ ತುಂಡು ಮಾಡಿ ಎಸೆದದ್ದಾಯಿತು; ಒಬ್ಬೊಬ್ಬರದು ಎರಡೆರಡು ಜೊತೆ! ಅದಲ್ಲದೆ ಪಕ್ಕದ ಮನೆಯವರ ಚಪ್ಪಲಿ, ಶೂ! ಅವರೆದುರು ತಲೆತಗ್ಗಿಸುವ ಸರದಿ ನಮ್ಮದು. ನೆಟ್ಟ ಹೂಗಿಡಗಳನ್ನು ಕಿತ್ತು ಒಗೆಯುವುದು, ತಾವರೆ ಗಿಡದಲ್ಲಿ, ಬಿಟ್ಟ ಹೂವನ್ನೇ ಕೊಯ್ದು ತಿನ್ನುವುದು… ಒಂದೇ ಎರಡೇ! ಹೊಡೆಯಲು ಹೋದರೆ ಓಡಿಸಿ ಸುಸ್ತು ಮಾಡುವುದು. ಆದರೂ ಇವೆಲ್ಲ ಮಜವಾಗಿತ್ತು ಎನ್ನುವುದೂ ನಿಜ. ದಾಸುವಂತೂ ಮುದ್ದು ಮಗುವಿನಂತೆ ಮನೆಯ ಎಲ್ಲರ ಹೃದಯವನ್ನು ಆವರಿಸಿದ್ದ ಪರಿ ಅದ್ಭುತ! ಅಮ್ಮ ಕೆಂಪಿಗಂತೂ ಕರಿಯನ ಕೀಟಲೆ ಅತಿಯಾದರೂ ಒಂದೇ ಮಗುವಾದ್ದರಿಂದ ಭಾರೀ ಮುದ್ದು. ಅದು ಅನ್ನ ತಿಂದು ಮುಗಿಸದೇ ತಾನು ತಿನ್ನುತ್ತಿರಲಿಲ್ಲ! ಆದರೆ ಅದೇ ತಾಯ್ತನವನ್ನು ದಾಸುಮರಿಗೆ ತೋರಿಸಲೇ ಇಲ್ಲ ಕೆಂಪಮ್ಮ! ದಾಸು ಹತ್ತಿರ ಬಂದರೆ ಗುರ್ ಎಂದು ಹೆದರಿಸುತ್ತಿದ್ದಳು. ಆದರೆ ಕರಿಯ ದಾಸು ಒಟ್ಟು ಸೇರಿ ಆಡಿದ್ದೇ ಆಡಿದ್ದು. ಅಷ್ಟೊತ್ತಿಗೆ ಮತ್ತೆ ಮರಿಯಿಡಲು ಕೆಂಪಿಯ ತಯಾರಿ ಶುರುವಾಗಿ ಹೊಸ ನಾಯಿಗಳ ಮುಖ ಮನೆಯ ಹತ್ತಿರ ಕಾಣಲು ತೊಡಗಿ ಜಗಳಗಳೂ ಆಗಿ ದೊಡ್ಡ ರಗಳೆಯೇ ಆಗಿತ್ತು.

ಹೀಗಿರುವಾಗ ಒಂದು ರಾತ್ರಿ ನಾಯಿಗಳ ವಿಪರೀತ ಬೊಗಳು ಕೇಳಿತಂತೆ. ಮಗನ ಹೊಸ ಸ್ಕೂಟಿಯ ಮೇಲೆ ಯಾವುದೋ ಪ್ರಾಣಿ ಬಿದ್ದು ಒದ್ದಾಡಿ ಅದು ಹಾರ್ನ್ ಹಾಕಿ ಕೂಗಾಡಿತಂತೆ. ಗಾಢ ನಿದ್ದೆಯಲ್ಲಿದ್ದ ನನಗಂತೂ ಏನೂ ಕೇಳಲಿಲ್ಲ. ಬೆಳಗ್ಗೆ ಎದ್ದಾಗ ಮಾತ್ರ ಕರಿಯ ಇರಲಿಲ್ಲ! ಸುತ್ತಮುತ್ತಲಿನ ಹಾಡಿ, ರಸ್ತೆ, ಮನೆ ಎಲ್ಲೆಲ್ಲೂ ಇಲ್ಲ. ಕರೆಕರೆದು ಸಾಕಾಯಿತು. ಹತ್ತಿರದ ಮನೆಯವರು ಸುದ್ದಿ ಮುಟ್ಟಿಸಿದರು. ರಾತ್ರಿ ‘ಚಿರತೆ’ ಬಂದು ಕರಿಯನನ್ನು ಎತ್ತಿಕೊಂಡು ಹೋದದ್ದನ್ನು ಅವರೇ ನೋಡಿದರಂತೆ. ಬೆಳದಿಂಗಳೇನೋ ಇತ್ತು; ಆದರೂ ಅವರಿಗೆ ಅಷ್ಟು ಸ್ಪಷ್ಟವಾಗಿ ಕಂಡಿತಾ? ತರ್ಕಿಸಿದ್ದಾಯಿತು, ವಿಷಾದದಿಂದ, ದುಗುಡದಿಂದ ಚಿಂತಿಸಿದ್ದೂ ಆಯಿತು. ಕೊನೆಗೆ ನಾವು ಅಂದುಕೊಂಡದ್ದೆಂದರೆ ಕರಿಯನನ್ನು ಕುರ್ಕ ಅಂದರೆ ನಾಯಿಕುರ್ಕ ಬಂದು ಹೊತ್ತೊಯ್ದಿದೆ. ಅದಕ್ಕೆ ಸಾಕ್ಷಿಯಾಗಿ ಕೆಂಪಿ ಐದಾರು ದಿನ ಬೇಜಾರಲ್ಲಿ ಜಾನಿಸುತ್ತ ಕುಳಿತಲ್ಲೇ ಕುಳಿತಿತು. ದಾಸುವೂ ಸಪ್ಪೆ ಮುಖ ಹಾಕಿಕೊಂಡಿತ್ತು. ಹೌದು. ಇದು ಕುರ್ಕನದ್ದೇ ಕೆಲಸವಿರಬೇಕು. ನಮ್ಮೂರು ಮುದೂರಿಯಲ್ಲೂ ಇದರ ಕಾಟ ಈಗೀಗ ಅತಿಯಾಗಿ ಎಲ್ಲರೂ ನಾಯಿಗಳನ್ನು ರಾತ್ರಿ ಹೊತ್ತು ಗೂಡಿನೊಳಗೆ ಬಂಧಿಸಿ ಇಡುವ ಕಾಲ ಬಂದಿದೆ. ಬೆಕ್ಕುಗಳನ್ನೂ ಕೋಣೆಯೊಳಗೆ ಕೂಡಿ ಹಾಕುತ್ತಾರಂತೆ. ಈಗ ನಮ್ಮ ಕರಿಯನ ಸರದಿ!

ಕುರ್ಕ ಎಂದರೆ ನಾಯಿಕುರ್ಕ. ಪಶ್ಚಿಮ ಘಟ್ಟದ ತಪ್ಪಲಿನ ಮನೆಗಳಿಗೆ ರಾತ್ರಿಹೊತ್ತು ದಾಳಿ ಮಾಡಿ ನಾಯಿಗಳನ್ನು ಹೊತ್ತೊಯ್ಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಪ್ರಾಣಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣವೆಂದು ಹುಡುಕಿದರೆ ಸಿಗುವುದಿಲ್ಲ. ಆದರೆ ಅಳಿವಿನಂಚಿನಲ್ಲಿರುವ ಪ್ರಾಣಿ, ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ತಿಳಿದು ಬರುತ್ತದೆ. ನಾಯಿಹುಲಿ, ಕತ್ತೆಕಿರುಬ, ಕುರ್ಕ, ಶಿವಂಗಿ ಮುಂತಾದುವೆಲ್ಲವೂ ಒಂದೇ ಪ್ರಾಣಿಯ ಹೆಸರು ಎಂದು ಸೂಚಿಸಲಾಗಿದೆ. ಚಿರತೆಯ ಗಾತ್ರ, ಹುಲಿಯ ಹಾಗೆ ಪಟ್ಟೆ ಪಟ್ಟೆ ದೇಹ ಮತ್ತು ನಾಯಿಯಂತಾ ಮುಖವನ್ನು ಹೊಂದಿದ ವಿಚಿತ್ರ ಪ್ರಾಣಿಯಿದು. ಕೆದಂಬಾಡಿ ಜತ್ತಪ್ಪರೈಗಳ ‘ಬೇಟೆಯ ನೆನಪುಗಳು’ ಪುಸ್ತಕದಲ್ಲಿ ಮತ್ತು ಶಿವರಾಮ ಕಾರಂತರ ‘ಪ್ರಾಣಿ ಪ್ರಪಂಚ’ ಕೃತಿಯಲ್ಲಿ ನಾಯಿಹುಲಿಯ ವಿವರಣೆ ಇದೆ.  ಪೂರ್ಣಚಂದ್ರ ತೇಜಸ್ವಿ ಅವರ ಜಾಲಹಳ್ಳಿಯ ಕುರ್ಕ ಇದೇ ಕುರ್ಕದ ಜಾತಿಗೆ ಸಂಬಂಧಪಟ್ಟದ್ದೋ ಅಥವಾ ಅದು ಬೇರೆಯೋ ತಿಳಿದಿಲ್ಲ. ಇದನ್ನು ಕಂಡವರು ಹೆಚ್ಚು ಜನರಿಲ್ಲ ಮತ್ತು ಎಲ್ಲಾ ಪ್ರದೇಶದಲ್ಲಿಯೂ ಇದು ವಾಸವಾಗಿಯೂ ಇಲ್ಲ. ಹಾಗಾಗಿ ಒಂದು ಸೀಮಿತ ಪ್ರದೇಶದಲ್ಲಿ ಮಾತ್ರ ಪರಿಚಯವಿರುವ ಪ್ರಾಣಿಯಿದು. ಇತ್ತೀಚೆಗೆ ನಾಯಿಕುರ್ಕಗಳ ಸಂಖ್ಯೆಯೇ ಜಾಸ್ತಿಯಾಗಿದೆಯೋ ಅಥವಾ ಅವು ಊರಿಗೆ ನುಗ್ಗುವುದು ಜಾಸ್ತಿಯಾಗಿದೆಯೋ ತಿಳಿಯುತ್ತಿಲ್ಲ! ಏಕೆಂದರೆ ನಮ್ಮ ಕುಂದಾಪುರದ ಕೆಲವು ಹಳ್ಳಿಗಳ ಪರಿಸರದಲ್ಲಿ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇವು ಕಾಣಿಸಿಕೊಳ್ಳುತ್ತಿವೆ. ಬಯಲಿನಲ್ಲಿರುವ ಮನೆಗಳ ಹತ್ತಿರಕ್ಕೂ ಬಂದು ನಾಯಿ, ಬೆಕ್ಕುಗಳನ್ನು ಕದ್ದೊಯ್ಯುತ್ತಿವೆ. ಅಲ್ಲಿನ ಜನರಿಗೆ ಇವುಗಳ ದಾಳಿ ತೀವ್ರ ಸಮಸ್ಯೆಯಾಗಿದೆ; ತಮ್ಮ ನಾಯಿ, ಬೆಕ್ಕುಗಳನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ. ವಿಪರ್ಯಾಸವೆಂದರೆ ರಾತ್ರಿ ಮನೆ ಕಾಯಬೇಕಾದ ನಾಯಿ, ಬೆಕ್ಕುಗಳನ್ನು ಅದೇ ಹೊತ್ತಿನಲ್ಲಿ ಗೂಡಿನೊಳಗೆ ಹಾಕಿ ಭದ್ರಪಡಿಸಿ ಇಡಬೇಕಾಗಿದೆ. ನನ್ನ ಬಾಲ್ಯದ ಎಂಬತ್ತು ತೊಂಬತ್ತರ ದಶಕದಲ್ಲಿ ಕುರ್ಕಗಳ ಉಪದ್ರ ಇತ್ತು. ಆಮೇಲೆ ಕಡಿಮೆಯಾಗಿತ್ತು. ಆದರೀಗ ಮತ್ತೆ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅವು ಮರಳಿ ಬಂದಿವೆ!

ಇಲ್ಲಿ ನಮ್ಮ ಮೂಡಬಿದ್ರೆಯ ಪರಿಸರದಲ್ಲೂ ನಾಯಿಕುರ್ಕ ಇದೆಯೆಂಬ ಅನುಮಾನ ಬಲವಾಗಿದೆ. ಕರಿಯ ಕಾಣೆಯಾದ ಸ್ವಲ್ಪ ಸಮಯದ ಹಿಂದೆ ಹತ್ತಿರದ ಮನೆಯ ವಯಸ್ಕ ನಾಯಿಯೊಂದು ನಾಪತ್ತೆಯಾಗಿತ್ತು. ಕಾಡುಗಳೆಲ್ಲ ಕುರುಚಲಾಗಿ ಆಹಾರ ದೊರೆಯದೆ ಪ್ರಾಣಿಗಳು ಊರಿನ ಕಡೆ ವಲಸೆ ಬರುತ್ತಿರುವುದು ಈಚಿನ ದಶಕಗಳಲ್ಲಿ ನಡೆಯುತ್ತಿರುವ ವಿದ್ಯಮಾನ. ನಾಯಿಕುರ್ಕ ಕೂಡಾ ಹೀಗೇ ಬರುತ್ತಿರಬೇಕು ಅಥವಾ ಯಾವುದೋ ಕಾರಣದಿಂದ ಇದರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ನವಿಲುಗಳ ಸಂಖ್ಯೆ ಇದ್ದಕ್ಕಿದ್ದಂತೆ ಆರೇಳು ಪಟ್ಟು ಜಾಸ್ತಿಯಾಗಿ ನರಿಗಳ ಸಂಖ್ಯೆ ಅದೇ ವೇಗದಲ್ಲಿ ಕುಸಿದಂತೆ! ಇನ್ನೂ ಎಷ್ಟೋ ಅಸಮತೋಲನಗಳು ಮನುಷ್ಯನ ಮಧ್ಯ ಪ್ರವೇಶದಿಂದಾಗಿ ಕಾಡಿನ ಬದುಕಿನಲ್ಲಿ ನಡೆಯುತ್ತಲೇ ಇವೆ. ಅಥವಾ ಸಹಜವಾಗಿಯೇ ಕುರ್ಕಗಳ ಸಂಖ್ಯೆ ಹೆಚ್ಚಾಗಿದೆಯೋ ತಿಳಿದಿಲ್ಲ.

ನಮ್ಮ ದಾಸು ಮರಿಯೂ ಕರಿಯನ ಜೊತೆಗೇ ಮತ್ತೆ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದು ಇನ್ನೊಂದು ದುರಂತ ಕತೆ. ಮನೆಯೆದುರಿನ ರಸ್ತೆ ಅಗಲೀಕರಣಕ್ಕೆಂದು ಬಂದ ಜೆ.ಸಿ.ಬಿ. ದಾಸುವಿಗೆ ಹೊಡೆದು ಕಂಯ್ಯಂಯ್ಯೋ ಎಂದು ಕೂಗಿದ್ದು ಕೇಳಿ ಏನೆಂದು ನಾನು ಓಡಿ ಬರುವಷ್ಟರಲ್ಲಿ ಅದೇ ಮನೆಯೆಡೆಗೆ ಧಾವಿಸಿ ಬಂದಿತು. ಓಡೋಡಿ ಬಂದು ಮನೆ ಹತ್ತಿರ ಆರಾಮ ಮಲಗುವಂತೆ ಹುಲ್ಲಿನ ಮೇಲೆ ಬಿದ್ದುಬಿಟ್ಟಿತು. ಏನಾಯಿತೆಂದು ತಿಳಿಯದೆ ಕರೆಯುತ್ತಾ ಹತ್ತಿರ ಹೋಗಿ ಕಾಲಿನ ಮೇಲೆ ಮಲಗಿಸಿಕೊಂಡ ಅರೆ ಕ್ಷಣದಲ್ಲೇ ದಾಸುವಿನ ಜೀವ ಹೋಯಿತು. ಏನೆಂದು ಹೇಳುವುದು! ಎಷ್ಟು ಅತ್ತು ಕರೆದರೂ ದಾಸು ಮರಳಲಿಲ್ಲ. ಅಂತಹ ಮುದ್ದು ಮಗುವನ್ನು ಕಳೆದುಕೊಂಡ ನಮ್ಮ ದುರದೃಷ್ಟವನ್ನು ಹಳಿಯುವುದನ್ನು ಬಿಟ್ಟು ಬೇರೆ ಏನೂ ತೋಚುತ್ತಿಲ್ಲ. ಹೀಗೆ ದೊಡ್ಡದಾಗುವ ರಸ್ತೆಗಳು, ಮತ್ತೆ  ರೂಪುಗೊಳ್ಳುವ ಹೊಚ್ಚಹೊಸ ರಸ್ತೆಗಳು, ಯಂತ್ರಗಳು, ಆಧುನೀಕರಣ, ಜಾಗತೀಕರಣ ಇವೆಲ್ಲ ಪ್ರತ್ಯಕ್ಷ, ಪರೋಕ್ಷವಾಗಿ ಪಡೆಯುತ್ತಿರುವ ಬಲಿಗಳು ಅಸಂಖ್ಯ….

ಹೌದು, ಬದುಕು ನೋವು ನಲಿವುಗಳ ಮಿಶ್ರಣ!

(ಕೃತಿ: ಕಾಡಿನ ಸಂಗೀತ (ಕಾಡಂಚಿನ ಊರಿನ ಕಥನ:ಪ್ರಬಂಧಗಳು), ಲೇಖಕರು: ವಿಜಯಶ್ರೀ ಹಾಲಾಡಿ, ಪ್ರಕಾಶಕರು: ಮಳೆಕೋಂಗಿಲ ಪ್ರಕಾಶನ, ಬೆಲೆ:160/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ