ದೇವರು

ತೊಟ್ಟಿಲಲ್ಲಿ ಮಲಗಿದೆ
ಚಂದ್ರನ ತುಂಡೊಂದು
ಕನಸಲ್ಲಿ ಯಾರು ಬಂದ ಫಲವೋ
ಚೆಲ್ಲಿದೆ ಹೂ ನಗೆಯೊಂದು

ಅಂದುಕೊಳ್ಳದಿರಿ ಪಾಪ ಹಸುಗೂಸು
ಅದಕ್ಕೇನು ಗೊತ್ತು?
ಒಂದೇ ಎರಡೇ ಈ ಕೂಸಿನ
ಕರಾಮತ್ತು?

ಮನೆಯವರೆಲ್ಲರ ಚಿತ್ತ
ಸದಾ ಇರಬೇಕು ಇವನ ಸುತ್ತ
ಅಮ್ಮನಂತೂ ಇರಲೇಬೇಕು
ಪುಟ್ಟ ಕಿನ್ನರನ ಹತ್ರ

ಇವನ ಅಮ್ಮನಿಗೋ
ಹಗಲಿನ ಸೂರ್ಯನೂ ಇವನೇ
ಇರುಳ ಚಂದ್ರಮನೂ ಇವನೇ
ದಿನವಿಡೀ ತೊಟ್ಟಿಲು ತೂಗಿದ ಕೈಗಳು
ರಾತ್ರೆಯ ಅರೆ ನಿದ್ರೆಯಲ್ಲೂ
ತೂಗುತ್ತಲೇ ಇರುತ್ತವೆ
ಅದಕ್ಕೆಂದೇ ತಾವಿರುವುದೆಂಬಂತೆ

ಇವನು ಮಲಗಿದನೆಂದರೆ
ಇರಕೂಡದು ಒಂದಿನಿತೂ ಶಬ್ದ
ಗಾಳಿಯೂ ಇಲ್ಲಿ ಹೆದರಿಕೊಂಡೇ ಬೀಸುತ್ತದೆ
ಕಾಪಾಡಲೆಂದು ನಿಶ್ಯಬ್ದ

ನಿದ್ದೆಯಿಂದ ಎದ್ದನೆಂದರೆ
ಹೊದಿಸಿದ ಚಾದರದಲ್ಲಿನ
ಪುಟ್ಟ ಬೊಂಬೆಗಳೂ ಅಳತೊಡಗುತ್ತವೆ
ಇವನ ಕೂಡೆ

ಅಳುವು ತಾರಕಕ್ಕೇರಿದಂತೆಲ್ಲಾ
ತೊಟ್ಟಿಲು ಥರಥರಗುಟ್ಟುತ್ತದೆ
ಬೆಚ್ಚಿ ಬೀಳುತ್ತವೆ
ಮನೆಯ ಕಿಟಕಿ ಬಾಗಿಲುಗಳೂ

ಇದೀಗ ಹಾಜರಾಗಲೇಬೇಕು
ಸಮಸ್ತ ದಿಕ್ಪಾಲಕರೂ
ತಿಳಿಯಲೇ ಬೇಕು ಮಗುವಿನ
ಅಳುವಿಗೆ ಕಾರಣವೇನೆಂದು
ಹುಡುಕಬೇಕು ಮಣಿಸುವ ರಹದಾರಿಯನ್ನು

ಅದಾಗಲೇ ಎದೆಗೊತ್ತಿ
ಹಾಲೂಡಿಸಿದ್ದ ಅಮ್ಮ
ತೇಗು ತೆಗೆಸಿದ್ದಾಯಿತು
ಓಡೋಡಿ ಬಂದ ಅಪ್ಪ
ಡಯಪರು ಬದಲಿಸಿ ಕೂಸನ್ನೆತ್ತಿ
ಮನೆಗೊಂದು ರೌಂಡು
ಹೊಡೆಸಿದ್ದಾಯಿತು

ಗಡಗಡನೆ ನಡುಗಿ ನಿಂತಿದ್ದ
ಮೊಲ, ಬೆಕ್ಕು, ಆನೆ, ಕೋಳಿಗಳನ್ನೆಲ್ಲ ತಂದು
ಅಜ್ಜ ಪೀಮ್ ಪೀಮ್ ಶಬ್ದ
ಬರಿಸಿದ್ದಾಯಿತು
ಕಣ್ಣಾಮುಚ್ಚೇ ಆಡುತ್ತಿದ್ದ ಸೊಳ್ಳೆಯೊಂದನ್ನು
ಬ್ಯಾಟಿಂದ ಹೊಡೆದುರುಳಿಸಿದ್ದಾಯ್ತು

ಇಷ್ಟು ಹೊತ್ತು ರಾಮ ಕೃಷ್ಣರನ್ನೆಲ್ಲಾ
ಕರೆದ ಅಜ್ಜಿ ಕೊನೆಯ ಪ್ರಯತ್ನವೆಂಬಂತೆ
ದೃಷ್ಟಿ ತೆಗೆದು ಒಗೆದದ್ದಾಯಿತು
ಗೊತ್ತಿದ್ದ ಲಾಲಿ ಹಾಡುಗಳನ್ನೆಲ್ಲ
ಲಯಬದ್ಧವಾಗಿ ಹಾಡಿ
ಹಗೂರಕ್ಕೆ ಮತ್ತೆ ತೊಟ್ಟಿಲು
ತೂಗಿದ್ದೂ ಆಯಿತು

ಆದರೂ ನಿಲ್ಲುತ್ತಿಲ್ಲ ಅಳುವಿನಾಟ
ಬದಲಿಗೆ ಹೆಚ್ಚುತ್ತಲೇ ಇದೆ
ಪುಟ್ಟ ವರುಣನಾರ್ಭಟ
ಮನೆಯವರೆಲ್ಲರು ಪಟ್ಟರೂ ಹರಸಾಹಸ
ಆಗಲಿಲ್ಲ ಮೂಡಿಸಲು
ಕಂದನ ಮುಖದಲ್ಲೊಂದು ಮಂದಹಾಸ

ಇನ್ನೇನು ಮಾಡುವುದೆಂದು ತೋಚದೆ
ತಲೆ ಮೇಲೆ ಕೈ ಹೊತ್ತು
ಕುಳಿತಿರುವಾಗ ಎಲ್ಲರೂ
ಮೆಲ್ಲನೇ ನಕ್ಕುಬಿಟ್ಟ
ಇದುವರೆಗೂ ಥಕ ಥೈ ಕುಣಿಸಿದ
ದೇವರು
ಸುತ್ತಲೂ ಚೆಲ್ಲಿತು ಬೆಳ್ಳಿ ಬೆಳದಿಂಗಳು

 

ಡಾ. ಪ್ರೀತಿ ಕೆ. ಎ. ಬೆಂಗಳೂರಿನವರು
ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರೆ.
ಕರ್ನಾಟಕ ಆರ್ಥಿಕತೆಯ ಬಗ್ಗೆ ಪುಸ್ತಕ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.
ವೃತ್ತಿಯಿಂದ ಉಪನ್ಯಾಸಕಿಯಾದರೂ ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿಯಿದೆ