ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ, ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು. ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು.
ಡಾ. ಅಜಿತ್ ಹರೀಶಿ ಕವನ ಸಂಕಲನ “ತೇಲಿಬಿಟ್ಟ ಆತ್ಮಬುಟ್ಟಿ”ಗೆ ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ
ಡಾ.ಅಜಿತ್ ಹರೀಶಿಯವರು ನನ್ನ ಗಮನ ಸೆಳೆದಿದ್ದು ಕಥೆಗಾರನಾಗಿ. ಅವರ ‘ಉಪರಿ’ ಕಥಾ ಸಂಕಲನವನ್ನು ನಾನು ಇಷ್ಟಪಟ್ಟು ಓದಿದ್ದೆ. ಕಥೆಯ ನಿರೂಪಣೆಯಲ್ಲಿ ಅವರು ಬಳಸಿದ ಹೊಸ ತಂತ್ರಗಾರಿಕೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದೆ. ‘ಕಾವ್ಯಕೇಳಿʼ ಎಂಬ ವಾಟ್ಸಪ್ ಗುಂಪಿನಲ್ಲಿ ಅವರು ಆಗಾಗ ಬರೆಯುತ್ತಿದ್ದ ಕವಿತೆಗಳನ್ನು ಗಮನಿಸುತ್ತಿದ್ದುದರಿಂದ ನನಗೆ ಅವರು ಕವಿಯಾಗಿ ಕೂಡ ವಿಭಿನ್ನ ನೆಲೆಯನ್ನು ಹೊಂದಿರುವರು ಎನ್ನುವುದು ಗೊತ್ತಿತ್ತು. ಅನಿರೀಕ್ಷಿತವಾಗಿ ಅವರು ‘ತೇಲಿ ಬಿಟ್ಟ ಆತ್ಮಬುಟ್ಟಿʼ ಸಂಕಲನಕ್ಕೆ ಮುನ್ನುಡಿ ಅಪೇಕ್ಷಿಸಿರುವ ಹಿನ್ನೆಲೆಯಲ್ಲಿ ಅವರ ಕಾವ್ಯದ ಸೃಜನಶೀಲ ನೆಲೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ.

(ಡಾ. ಅಜಿತ್ ಹರೀಶಿ)
ಕಾವ್ಯದ ಭಾಷೆ ಹೇಗಿರಬೇಕು ಎನ್ನುವುದು ಬಹಳ ಮುಖ್ಯವಾದ ಅಷ್ಟೇ ಪುರಾತನವಾದ ಚರ್ಚೆ. ಭಾಷೆಯನ್ನು ವ್ಯಂಗ್ಯ-ಕಟಕಿಗಳ ನೆಲೆಯಲ್ಲಿ ವ್ಯಕ್ತ ಪಡಿಸುವ ಕ್ರಮದಂತೆ ಪ್ರತಿಮೆಗಳ ಮೂಲಕ ವ್ಯಕ್ತ ಪಡಿಸುವ ಕ್ರಮವೂ ನವ್ಯ ಕಾವ್ಯದ ಸಂದರ್ಭದಲ್ಲಿ ಮೂಡಿತು. ಇದು ನವೋದಯ ಕಾವ್ಯದ ಗ್ರಾಂಥಿಕ ಸ್ವರೂಪದ ಎದುರು ಮೂಡಿ ಬಂದ ಪ್ರಶ್ನೆಯಾಗಿತ್ತು. ಕವಿತೆ ನೇರವಾಗಿ ಮಾತನಾಡ ಬಾರದು ಎಂದೂ ಈ ಸಂದರ್ಭದಲ್ಲಿ ಭಾವಿಸಲಾಗಿತ್ತು. ಮುಂದೆ ಬಂದ ದಲಿತ-ಬಂಡಾಯ ಚಳವಳಿಗಳ ಸಂದರ್ಭದಲ್ಲಿ ಇದಕ್ಕೆ ಭಿನ್ನವಾಗಿ ಕವಿತೆ ಭಾವಾವೇಶದ ನೆಲೆಯಾಗಿ ಆಕ್ರೋಶದ ಕಡೆ ತಿರುಗಿತು.
ಇದೆಲ್ಲವೂ ನಡೆದು ಅರ್ಧಶತಮಾನಗಳೇ ಕಳೆದಿವೆ. ಈ ಕುರಿತ ಚರ್ಚೆಗಳೂ ಬೇರೆ ಬೇರೆ ನೆಲೆಗಳನ್ನು ತಲುಪಿವೆ. ಕ್ರಮೇಣ ಕವಿತೆಯಲ್ಲಿ ಭಾಷೆಯ ಮಹತ್ವ ಹಿನ್ನೆಲೆಗೆ ಸರಿದಿರುವ ಪ್ರಯೋಗಗಳೂ ಕಂಡು ಬಂದಿವೆ. ನಾನು ಅಜಿತ್ ಅವರ ಕವಿತೆಗಳ ಚರ್ಚೆಯನ್ನು ಇಲ್ಲಿಂದಲೇ ಆರಂಭಿಸಲು ಕಾರಣ ಅವರಿಗೆ ಭಾಷೆಯ ಕುರಿತು ಎಚ್ಚರ ಮತ್ತು ಅದರ ಸಾಧ್ಯತೆಗಳ ಕುರಿತು ಇರವ ಅರಿವು. ಸಾರ್ವತ್ರಿಕ ನೆಲೆಗಳನ್ನು ಬಲ್ಲ ಭಾಷೆಯನ್ನು ಬಳಸುವ ಅವರು ಇದರ ಸೂಕ್ಷ್ಮತೆಗಳನ್ನು ಗಮನಿಸ ಬಲ್ಲರು. ಮೇಲ್ನೋಟಕ್ಕೆ ಗ್ರಾಂಥಿಕ ಎನ್ನಿಸುವ ಇಲ್ಲಿನ ಭಾಷೆ. ಪ್ರತಿಮೆಗಳನ್ನು ಜೋಡಿಸುವ ಕ್ರಮದಲ್ಲಿ ತನ್ನ ವಿಭಿನ್ನತೆಯನ್ನು ಕಂಡುಕೊಳ್ಳುತ್ತದೆ. ಜಾಣತನದಿಂದ ಮೋಹಕಗೊಳಿಸುವ ಬದಲು ಇಲ್ಲಿನ ಭಾಷೆ ಚಿಕಿತ್ಸಕ ನೆಲೆಯಲ್ಲಿ ಬೆಳೆಯುತ್ತದೆ. ಅವರ ‘ಬತ್ತಿ ಹೋಗುವ ಮುನ್ನʼ ಕವಿತೆಯಲ್ಲಿ ಮಾತಿನ ಸುರಿಮಳೆಯೇ ಬಂದಿದೆ ಎನ್ನಿಸಿದರೂ ಕ್ರಮೇಣ ಅದೇ ಭಾವ ಶರೀರಕ್ಕೆ ದಾರಿ ಮಾಡಿ ಕೊಡುತ್ತದೆ. ‘ಪಂಜರದ ಗಿಳಿಯೊಳಗೆ ಪ್ರಾಣʼ ಕವಿತೆಯಲ್ಲಿ ವಿಶಿಷ್ವವಾದ ತುರ್ತನ್ನು ನಾವು ಭಾಷೆಯ ಕಾರಣದಿಂದ ಪಡೆದುಕೊಳ್ಳುತ್ತೇವೆ. ‘ಸುಳ್ಳು ಹೇಳುತ್ತಿದ್ದ ಹುಡುಗʼ, ‘ದೃಷ್ಟಿಕೋನʼ ‘ನೂತನ್ ಗೈಡ್ʼನಂತಹ ಕವಿತೆಗಳಲ್ಲಿ ಭಾಷೆಯ ಭಾವಗಳ ಮುಖಾಮುಖಿಯಾಗುತ್ತದೆ. ‘ದೃಷ್ಟಿಕೋನʼ ಕವಿತೆಯಲ್ಲಿ ಅಸಂಗತ ನೆಲೆಯಲ್ಲಿಯೇ ಬೆಳೆಯುತ್ತಾ ಹೋಗುವ ಭಾಷೆ ನನ್ನ ರೆಟರಿಕ್ ಗುಣದಲ್ಲಿಯೇ ಬೆಚ್ಚಿ ಬೀಳಿಸುತ್ತದೆ. ‘ವರ್ತನೆಯ ಆದ್ಯತೆಯ ಆಟʼ ಎನ್ನುವ ಕಡೆ ಕವಿತೆಯ ಕೇಂದ್ರ ಲಭಿಸಿಬಿಡುತ್ತದೆ.
ಅಜಿತ್ ಅವರ ಕವಿತೆಗಳಲ್ಲಿ ಲಯ ಗೇಯಕ ಶಕ್ತಿಯಲ್ಲ. ಭಾವವಾಹಕ ಎನ್ನುವುದು ಹಲವು ಕಡೆ ಸಾಬೀತಾಗಿದೆ. ಮಾಯಕಶಕ್ತಿಯ ಭಾಷೆಯನ್ನು ಅಜಿತ್ ಬಳಸಲು ಹೋಗಿದ್ದರೆ ದೃಷ್ಟಿ, ನಿಲುವು, ಕೇಂದ್ರಪ್ರಜ್ಞೆ ಎಲ್ಲದರಲ್ಲಿಯೂ ಬೇರೆ ನೆಲೆಯನ್ನು ಪಡೆದುಕೊಳ್ಳುತ್ತಿದ್ದರೇನೋ, ಆದರೆ ಎಂದಿಗೂ ಎಚ್ಚರವನ್ನು ಕಳೆದುಕೊಳ್ಳದ ಮಾನವತಾವಾದಿಯಾಗಿ ಗೋಚರಿಸುವ ಇವರು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಾರೆ. ಈಗಿನ ಕಾವ್ಯಲೋಕದಲ್ಲಿ ಈ ಧೈರ್ಯ ನಿಜಕ್ಕೂ ದೊಡ್ಡದು.
ಅಜಿತ್ ತಮ್ಮ ಕವನ ಸಂಕಲನದ ಮೊದಲ ಭಾಗವನ್ನು ‘ಬಾಲ್ಯ, ಬದುಕು, ವೇದಾಂತʼ ಎಂದು ಕರೆದಿದ್ದಾರೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸೃಷ್ಟಿಕ್ರಿಯೆಗೆ ಸಂಬಂಧಿಸಿದ ಸಂಗತಿಗಳೇ! ಅಜಿತರಿಗೆ ಕಾವ್ಯ ಕವಿಯ ಅಭಿವ್ಯಕ್ತಿ ಮಾತ್ರವಲ್ಲ ಸಹೃದಯರ ಮನದಲ್ಲಿ ಮರುಸೃಷ್ಟಿಯಾಗ ಬೇಕಾಗಿದ್ದು. ‘ದೀಪದೆಣ್ಣೆಗೆ ತಾಕದ ಬತ್ತಿʼ ಕವಿತೆಯಲ್ಲಿ
‘ನಿಷ್ಕ್ರಿಯತೆ ನಿದ್ದೆಯಲ್ಲ
ನಿದ್ದೆಯಾದರೂ ಯುದ್ಧವೊಂದರ ಸಿದ್ಧತೆ
ವಿಶ್ರಾಂತಿ ಶತ್ರುಗಳಿಗೆ ಎಚ್ಚರಿಕೆ
ಹಿತಶತ್ರುಗಳಿಗೆ ಸಂದೇಶ
ವಿರಾಮ ಹಿತೈಷಿಗಳಿಗೆ ಸಮಾಧಾನ
ಅಪ್ಪುಗೆಗೆ ಸಂಭ್ರಮಕ್ಕೆ ಸಜ್ಜಾಗುವ ಸಮಯʼ
ಎನ್ನುವ ಸಾಲುಗಳು ಬರುತ್ತವೆ. ಇದು ಜೀವನದ ವಿವಿಧ ಮುಖಗಳನ್ನು ನಿರ್ಲಿಪ್ತವಾಗಿ ನೋಡಬಲ್ಲ ಹದವನ್ನು ಇವರ ಕಾವ್ಯ ಪಡೆದುಕೊಂಡಿದ್ದನ್ನು ಸೂಚಿಸುತ್ತದೆ. ಅವರ ಕವಿತೆ ಕಟ್ಟುವ ಕ್ರಮದಲ್ಲಿ ನಿರ್ಲಿಪ್ತವಾದ ಪ್ರಬುದ್ಧಶಕ್ತಿಯ ನಾಟಕೀಯತೆ ಇರುವುದನ್ನು ನಾವು ನಿರಂತರವಾಗಿ ಗಮನಿಸಬಹುದು. ‘ಪೀಸಾ ಗೋಪುರʼ, ‘ಬತ್ತಿ ಹೋಗುವ ಮುನ್ನʼ ಇಂತಹ ಸಾಧ್ಯತೆಯನ್ನು ಪಡೆದ ಕವಿತೆಗಳು. ‘ಕ್ರೆಡಿಟ್ ಕಾರ್ಡ್ʼನಂತಹ ಕವಿತೆ ಕಥನ ಶೈಲಿಯಲ್ಲಿದ್ದರೂ ಮಾತಿನ ಮೇಲಿನ ಹತೋಟಿಯಿಂದ ವಾಚಾಳಿಯಾಗುವ ಅಪಾಯವನ್ನು ತಪ್ಪಿಸಿಕೊಂಡಿದೆ.
‘ಒಂದು ಸತ್ಯ ಕವಿತೆ’ಯಲ್ಲಿನ ಕೊನೆಯ ಸಾಲು ‘ಶಾಸ್ತ್ರಕ್ಕೆ ಮೀರಿದ ದರ್ಶನ’ ನನ್ನ ಗಮನವನ್ನು ಸೆಳೆಯಿತು. ಶಾಸ್ತ್ರ ಮತ್ತು ದರ್ಶನದ ಕುರಿತು ಮೀಮಾಂಸಕಾರರ ಕಾಲದಿಂದಲೂ ಚರ್ಚೆ ನಡೆದಿದೆ. ಕುವೆಂಪು ತಮ್ಮ ಚಿಂತನೆಗಳನ್ನು ದರ್ಶನ ಮೀಮಾಂಸೆ ಎಂದೇ ಕರೆದಿದ್ದಾರೆ. ತಮ್ಮ ಕಾವ್ಯವನ್ನು ರಾಮಾಯಣ ದರ್ಶನವೆಂದಿದ್ದಾರೆ.
ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ, ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು. ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು. ಈ ದಾರಿಯ ತೋರುವ ಕ್ರಿಯೆಗೂ ಸಾವಿಗೂ ಇರುವ ಸಂಬಂಧವನ್ನು ಗಮನಿಸಬೇಕು. ಪ್ರತಿ ಸೃಷ್ಟಿ ಕೂಡ ಸಾವಿಗೆ ಹತ್ತಿರವಾಗುವ ಕ್ರಿಯೆ. ಇಲ್ಲಿ ಕವಿ ಸಾಯುತ್ತಿರುವುದು ದಾರಿಯನ್ನು ತೋರಲು ಎನ್ನುವುದನ್ನು ಗಮನಿಸಬೇಕು.
ಈಗ ಶಾಬ್ದಿಕ ಕ್ರಿಯೆ ಜರುಗುತ್ತದೆ. ಹೇಳಿ ಹೋಗು ಕಾರಣ ಬರುತ್ತದೆ. ಸೃಷ್ಟಿಯ ಹಿಂದೆ ಒಂದು ಕೆಟ್ಟ ಸಂಯೋಗದ ಕಾರಣವಿದೆ. ಶಬ್ದ ಎಂದರೆ ಮಾತು. ಅದು ಎರಡು ವಿಧ. ಪೌರುಷೇಯ ಮತ್ತು ಅಪೌರುಷೇಯ. ಪೌರುಷೇಯ ಲೌಕಿಕ ವಿಷಯಕ್ಕೆ ಸಂಬಧಿಸಿದ ಪ್ರಮಾಣ. ಅದನ್ನು ಆಪ್ತ ವಾಕ್ಯವೆಂದು ಕರೆಯಬಹುದು. ಆದರೆ ಅದು ಸಾಪೇಕ್ಷ ಸತ್ಯ. ಕವಿತೆ ಇಂತಹ ಭಾವನಾತ್ಮಕವಾದ ಆಪ್ತ ವಾಕ್ಯದಲ್ಲಿ ಬೆಳೆಯುತ್ತದೆ.
ಶಬ್ದ ಪ್ರಕಟವಾದ ನಂತರ ಜಗತ್ತು ಜಾಗೃತವಾಗುತ್ತದೆ. ಅಪೌರುಷೇಯ ವಾಕ್ಯಗಳು ವೇದಗಳು ವೇದಗಳು ಈಶ್ವರನಿಂದ ಬಾರದಿದ್ದರೂ, ಅವು ಸ್ವತಃ ಸಿದ್ಧ ವಾಕ್ಯಗಳು. ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ವೇದವನ್ನು ಒಪ್ಪುತ್ತಾರೆ. ಸೃಷ್ಟಿ ಕ್ರಿಯೆಯನ್ನೂ ಸಾವಿನ ಸಿದ್ಧತೆಯನ್ನೋ ನಾಟಕ ಎಂದು ಜರೆಯುತ್ತಾರೆ. ಋಷಿಗಳು ಸ್ವತಃ-ಸಿದ್ಧ ವಾಕ್ಯಗಳನ್ನು ಕಂಡವರು. ದೃಷ್ಠಾರರು ಅವರು ಕರ್ತೃಗಳಲ್ಲ. ಶಬ್ದ- ಅರ್ಥ, ಅದರ ಸಂಬಂಧಗಳು ನಿತ್ಯವಾದದ್ದು. ವರ್ಣ(ಅಕ್ಷರ)(ಲಿಪಿ) ರೂಪವುಳ್ಳದ್ದು. ವರ್ಣಗಳ ಸಮೂಹವೇ ಪದ. ಧ್ವನಿಯು ಮತ್ತು ರೂಪಗಳು ವರ್ಣದ ಅಭಿವ್ಯಕ್ತಿ ರೂಪ. ಧ್ವನಿಯು ಅನಿತ್ಯ ವರ್ಣವು ನಿತ್ಯ. ಈ ಹಿನ್ನೆಲೆಯಲ್ಲಿಯೇ ಕವಿತೆಯಲ್ಲಿ ಪರಿಸ್ಥಿತಿಯ ಶಿಶು ಎನ್ನುವ ಮಾತು ಬಂದಿದೆ.
ಕವಿ ಬಯಸಿದಂತೆ ಆಗುವುದಿಲ್ಲ ಅಂತ್ಯ… ಏಕೆಂದರೆ ಈ ಶಬ್ದಗಳು ತಿಳಿಸುವ ಅರ್ಥವೂ ನಿತ್ಯವೇ. ಶಬ್ದ ಮತ್ತು ಅರ್ಥಗಳ ಸಂಬಂಧವೂ ನಿತ್ಯ. ಕಾರಣ, ‘ದನ’, ಎಂಬ ಶಬ್ದಕ್ಕೆ ಅದೇ ಅರ್ಥಬರಲು ಮಾನವೇಚ್ಛೆ ಅಥವಾ ಈಶ್ವರೇಚ್ಛೆ ಕಾರಣವಲ್ಲ. ಅದು ಸ್ವತಃಸಿದ್ಧ. ಭಾಷೆ ಸಹಜವಾದದ್ದು. ಶಬ್ಧಾರ್ಥಗಳ ಸಂಬಂಧವು ತನ್ನಿಂದತಾನೆ ಹುಟ್ಟಿಕೊಂಡಿದೆ. ರೂಢಿ -ಅರ್ಥವನ್ನು ತಿಳಿಸುವ ಸಾಧನ ಮಾತ್ರಾ. ವಸ್ತುವನ್ನು ತಿಳಿಯಲು ಬೆಳಕಿದ್ದಂತೆ. ಅದಕ್ಕಾಗಿ ‘ತಪ್ಪು ಮಾಡಿದವರಿಗೆ ಸಂದೇಶ ಹೋಗಲಿʼ ಎನ್ನುವ ಮಾತು ಬರುತ್ತದೆ.
ವೇದಗಳಲ್ಲಿ ಐದು ಪ್ರಕಾರದ ವಿಷಯಗಳಿವೆ : ವಿಧಿ, ಮಂತ್ರ, ನಾಮಧೇಯ, ನಿಷೇಧ, ಮತ್ತು ಅರ್ಥವಾದ; ಮಾಡಬೇಕಾದ್ದು, ‘ವಿಧಿ’; ಮಾಡಬಾರದ್ದು ‘ನಿಷೇಧ’; ಅನುಷ್ಠಾನಕಾರಕಗಳು, ‘ಮಂತ್ರಗ’ಳು (ಅರ್ಥಸ್ಮಾರಕ) , ಯಜ್ಞದ ಹೆಸರು, ‘ನಾಮಧೇಯ’. ಇವೆಲ್ಲವೂ ಶಾಸ್ತ್ರಗಳು. ಆದರೆ ಸೃಜನಶೀಲ ಕ್ರಿಯೆ ಅದನ್ನು ಮೀರಿದ್ದು. ಸಿದ್ಧಾರ್ಥ ವಾಕ್ಯವೆಂದರೆ ಇದ್ದದ್ದನ್ನು ಇದ್ದ ಹಾಗೆ ಹೇಳುವುದು ‘ಸತ್ಯಂ ಜ್ಞಾನಮನಂತಂ ಬ್ರಹ್ಮ’ ಎನ್ನುತ್ತದೆ ಕಠೋಪನಿಷತ್. ಇದನ್ನು ಮೀರಿದ್ದೇ ದರ್ಶನ. ಈಗ ದೇವದತ್ತನು ಹಗಲಿನಲ್ಲಿ ಊಟ ಮಾಡುವುದಿಲ್ಲ ಎನ್ನುವ ವಾಕ್ಯವಿದೆ. ಇದು ಸುಳ್ಳು ಎಂದು ಹೇಳಬಹುದೆ? ಅವನಿನ್ನೂ ಕೃಶಕಾಯನಾಗದೆ ಬದುಕಿರುವುದರಿಂದ ರಾತ್ರಿಯಲ್ಲಿ ಊಟ ಮಾಡುತ್ತಿರಬಹುದಲ್ಲವೆ? ಅದು ದರ್ಶನ.
ಕವಿತೆಯನ್ನು ಸೃಷ್ಟಿ ಕ್ರಿಯೆಯ ಸ್ವರೂಪದ ಬಗ್ಗೆ ನಡೆದ ಚರ್ಚೆಗಳ ಹಿನ್ನೆಲೆಯಲ್ಲಿ ಹೀಗೆ ಓದಬಹುದು ಎನ್ನಿಸಿತು. ಕವಿಯ (ಕವಿತೆಯ ಸಾವು) ಇಲ್ಲಿನ ವಸ್ತು ಎನ್ನಿಸಿದರೂ ಅದರ ಸಂರಚನೆ ಬೇರೆಯದನ್ನೇ ಹೇಳುತ್ತದೆ. ಇಲ್ಲಿ ಜ್ಞಾನ ಮತ್ತು ಸೃಜನಶೀಲತೆಯ ಸಮೀಕರಣವನ್ನೂ ಗಮನಿಸಬಹುದು. ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. (ಪ್ರಮಾಣಂ ಸ್ವತಃ ಉತ್ಪದ್ಯತೇ)
ಜ್ಞಾನವು ಹುಟ್ಟಿದ ಕ್ಷಣದಲ್ಲಿಯೇ ಅದರ ಪ್ರಮಾಣ್ಯದ ಜ್ಞಾನವೂ ಉಂಟಾಗುತ್ತದೆ. ಅದಕ್ಕೆ ಇತರ ಪ್ರಮಾಣದ ಅವಶ್ಯಕತೆ ಇಲ್ಲ. (ಪ್ರಮಾಣ ಸ್ವತಃ ಜ್ಞಾಯತೇ); ಇದು ಮೀಮಾಂಸಕರ ಸ್ವತಃ ಪ್ರಾಮಾಣ್ಯವಾದ.
ಜ್ಞಾನವೆಲ್ಲವೂ ಸತ್ಯವಾದುದು ಎಂಬುದು ಮೀಮಾಂಸಕರ ನಿಲುವು. ಒಮ್ಮೆ ಅದು ತಪ್ಪಾಗಿದ್ದರೆ, ಸರಿಪಡಿಸಿಕೊಂಡಿದ್ದು ಸತ್ಯ ಜ್ಞಾನ. ಅಲ್ಲಿಯವರೆಗೆ ಅದು ಸತ್ಯ. (ಕಪ್ಪೆ ಚಿಪ್ಪು -ಬೆಳ್ಳಿಯಂತೆ) (ಅಪ್ರಾಮಣ್ಯಂ ಪರತಃ) ಇತರೆ ಪ್ರಮಾಣಗಳಿಂದ ಜ್ಞಾನದ ಪ್ರಾಮಾಣಿಕತೆಯನ್ನು ತಿಳಿಯುತ್ತೇವೆ.

(ಎನ್.ಎಸ್. ಶ್ರೀಧರ ಮೂರ್ತಿ)
ಪರತಃ ಪ್ರಾಮಾಣ್ಯವನ್ನು ನ್ಯಾಯದಂತೆ ಇವರು ಒಪ್ಪುವುದಿಲ್ಲ. ನೀರನ್ನು ಕುಡಿದಾಗ ಮಾತ್ರ ಪ್ರಮಾಣವೆಂದು ಒಪ್ಪುವುದು ನ್ಯಾಯದ ನಿಲುವು. ನೋಡಿದರೆ ಸಾಕೆಂದು ಮೀಮಾಂಸಕರು. ಏಕೆಂದರೆ ಅದು ಅವ್ಯವಹಾರಿಕ. ಎಲ್ಲವನ್ನೂ ದೃಢಪಡಿಸುವುದೇ ಬೇರೆ. ನೀರನ್ನು ಕುಡಿದದ್ದರಿಂದ ತಿಳಿಯಿತೋ ದೃಢಪಟ್ಟಿತೋ? ಲೋಕವ್ಯವಹಾರವು ನಡೆಯುವುದು ನಾವು ತಿಳಿದಿದ್ದು ಸತ್ಯವೆಂಬ ನಂಬುಗೆಯಿಂದ. ಅಂದರೆ ಜ್ಞಾನವು ಸ್ವತಃ ಸಿದ್ಧವಾಗಿದೆ.
ಮೀಮಾಂಸಕರ ಈ ವಾದಕ್ಕೆ ಕಾರಣವೇನೆಂದರೆ- ಪರತಃ ಜ್ಞಾನವನ್ನು (ಪರೀಕ್ಷಿಸದ) ಒಪ್ಪಿದರೆ, ವೇದ ವಾಕ್ಯಗಳ, ಸ್ವತಃ ಸಿದ್ಧ ಸತ್ಯತೆಯನ್ನು ಸಂದೇಹಿಸಬೇಕಾಗುತ್ತದೆ. ಸ್ವತಃ ಪ್ರಾಮಾಣ್ಯ ವಾದವನ್ನು ಅವಲಂಬಿಸಿದರೆ ಸಂದೇಹಿಸುವ ಅಗತ್ಯವಿಲ್ಲ. ಪೌರುಷೇಯ ಪ್ರಾಮಾಣ್ಯವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ಅಪೌರುಷೇಯ ವೇದ ವಾಕ್ಯಗಳು ಸ್ವತಃ ಸಿದ್ಧವಾದ್ದರಿಂದ ಪರೀಕ್ಷಿಸದೆ ನಂಬಬೇಕಾಗುತ್ತದೆ. ಆದರೆ ಕವಿತೆ ಹಾಗಲ್ಲ ದರ್ಶನ ಮೀಮಾಂಸೆಯಲ್ಲಿ ಬರುವುದು ಅದನ್ನು ಸುಳ್ಳ ಎಂದು ಅನುಮಾನಿಸಿಯೇ ನೋಡುವುದೇ ಸರಿಯಾದ ಕ್ರಮ.
ಅಜಿತ್ ಅವರ ಎರಡನೆಯ ಭಾಗದ ಕವಿತೆಗಳು ‘ಪ್ರೀತಿ ತೊರೆ ಕಡಲಾಗಿʼ ಎಂದು ಕರೆಸಿಕೊಂಡಿವೆ. ಮೊದಲ ಭಾಗಕ್ಕಿಂತಲೂ ಬಹು ಚಿಕ್ಕದಾದ ಭಾಗ ಇದು. ಇಲ್ಲಿ ಪ್ರೀತಿ ಮತ್ತು ವಾತ್ಸಲ್ಯದ ಭಾವದ ಕವಿತೆಗಳಿವೆ. ಉದಾತ್ತವಾದ ಭಾವವೊಂದು ಇಲ್ಲಿನ ಎಲ್ಲಾ ಕವಿತೆಗಳಲ್ಲಿಯೂ ಮಿಡಿದರೂ ಬದುಕಿನ ಕುರಿತ ಎಚ್ಚರ ಉಳಿದುಕೊಳ್ಳುತ್ತದೆ. ‘ಜಲನಭಗಳ ತೆಕ್ಕೆಯಲ್ಲಿʼ ಕವಿತೆಯಲ್ಲಿ ಪ್ರೀತಿಯ ರಹಸ್ಯಪೂರ್ಣ ಭಾವ ಮನದಲ್ಲಿ ಉಳಿಯುತ್ತದೆ. ಈ ಭಾಗದ ಕವಿತೆಗಳಲ್ಲಿ ಅಜಿತರು ಜೀವನಾನುಭವದ ಆಘಾತಕ್ಕೆ ಎಷ್ಟು ಸತ್ವಪೂರ್ಣವಾಗಿ ತಮ್ಮನ್ನು ಒಡ್ಡಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಬಹುದು.
ಅಜಿತರ ಕಾವ್ಯದ ಹುಡುಕಾಟ ಸುಲಭಕ್ಕೆ ಗ್ರಹಿಕೆಗೆ ಬರುವಂಥದಲ್ಲ. ಅವರ ಜೀವನ ಪ್ರೀತಿ, ಮಾನವತಾವಾದದ ನಿಲುವು, ತಾತ್ವಿಕತೆಯ ತೆಕ್ಕೆಯಲ್ಲಿಯೇ ಹುಟ್ಟುವ ವಾತ್ಸಲ್ಯ ಒಂದು ಧೀರೋದ್ಧಾತ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಕಾವ್ಯದ ಎಲ್ಲಾ ನೆಲೆಗಳೂ ಪೊಳ್ಳಾಗಿ ಕಾಣುತ್ತಿರುವ ಈ ದಿನಗಳಲ್ಲಿ ಡಾ.ಅಜಿತ್ ಹರೀಶಿಯವರ ಕಾವ್ಯ ನೀಡಿದ ಕೊಡುಗೆ ಮಹತ್ತರವಾದದ್ದು ಎಂದೇ ನಾನು ಭಾವಿಸುತ್ತೇನೆ.
(ಕೃತಿ: ತೇಲಿಬಿಟ್ಟ ಆತ್ಮಬುಟ್ಟಿ (ಕವನ ಸಂಕಲನ), ಲೇಖಕರು: ಡಾ. ಅಜಿತ್ ಹರೀಶಿ, ಪ್ರಕಾಶಕರು: ವಿಜಯಲಕ್ಷ್ಮಿ ಪ್ರಕಾಶನ, ಬೆಲೆ: 120/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ