Advertisement
ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ

ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು. ಆಚಾರ್ಯರಿಗೆ ಇನ್ನಷ್ಟು ಕೋಪ ಬಂದಿರಲೂ ಸಾಕು.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿಮೂರನೆಯ ಬರಹ

ನನಗೆ ತೆಪ್ಪಗೆ ಕೂರಲು ಆಗುವುದಿಲ್ಲವೋ ಏನೋ, ಮೂರು ದಿನದ ಧ್ಯಾನಶಿಬಿರಕ್ಕೆ ಮೈಸೂರಿಗೆ ಹತ್ತಿರುವಿರುವ ಕೇಂದ್ರಕ್ಕೆ ಹೋದೆ. ಹತ್ತಾರು ಕೆಲಸಗಳು ನನ್ನ ಮೊದಲು ಮುಗಿಸು ಎಂದು ಚೀರುತ್ತಿದ್ದರ ನಡುವೆಯೇ!

ಸುಮಾರು ಎರಡು ಗಂಟೆಯ ಹೊತ್ತಿಗೆ ತಲುಪಿ, ಕಾದಿರಿಸಿದ್ದ ರೂಮಿನಲ್ಲಿ ಮಡಿಸಿಟ್ಟಿದ್ದ ಹಾಸಿಗೆ ಸುರುಳಿಯನ್ನು ಬಿಡಿಸಿದರೆ ಐದಾರು ಪುಟ್ಟ ಇಲಿಗಳು! ಹುಟ್ಟಿ ದಿನವೆರಡು ಕಳೆದಿರಬಹುದು, ಅಷ್ಟೇ. ಬೆಚ್ಚಿಬಿದ್ದು ಪಕ್ಕದಲ್ಲಿದ್ದ ಇನ್ನೊಂದನ್ನು ಬಿಡಿಸಿದರೆ ಅದರಲ್ಲೂ ಸಂತಾನೋತ್ಪತ್ತಿಯ ವೈಭವ! ಸುಮ್ಮನೆ ಕಾರು ಹತ್ತಿ ವಾಪಸಾಗಬೇಕಿತ್ತು!

ಕತ್ತೆತ್ತಿದರೆ ಸೂರಿನಲ್ಲಿ ತೂತ ಕಾಣಿಸಿತು. ಓಹ್! ಇಲಿಗಳು ಅಲ್ಲಿಂದ ಇಳಿದು ಸುತ್ತಿಟ್ಟ ಸುರುಳಿಯಲ್ಲಿ ನುಸುಳಿ ಬೆಚ್ಚಗೆ ಮರಿಗಳನ್ನು ಹುಟ್ಟಿಸಿವೆ ಅಂತ ಗೊತ್ತಾಯಿತು. ಬುದ್ಧನನ್ನು ಅರಸಿ ಬಂದರೂ ಶನೀಶ್ವರನ ಕಾಟ ತಪ್ಪಿದ್ದಲ್ಲ!

ಹಾಸಿಗೆಯ ಹೊದಿಕೆಯನ್ನು ಕಿತ್ತೆಸೆದು ಬಿಸಿಲಲ್ಲಿ ಹಾಕಿಸಿದ ಮೇಲೆ  ಒಳಗೆ ತೆಗೆದುಕೊಂಡು ಮನೆಯಿಂದ ತಂದಿದ್ದ ದಿಂಬು ಚಾದರಗಳನ್ನು ಹೊದಿಸಿದ ಮೇಲೆ ಸ್ವಲ್ಪ ಸಮಾಧಾನವಾಯಿತು. ಮೊಟ್ಟ ಮೊದಲ ಅಡ್ಡಿಗೇ ಹೆದರಿ ಓಡುವುದು ತರವಲ್ಲ ಎಂದು ಪದೇ ಪದೇ ಹೇಳಿಕೊಂಡೆ.

ಸಂಜೆ ಧ್ಯಾನಕೆಂದು ಬಂದ ಮಂದಿಗೆ ತಯಾರು ಮಾಡಿದ್ದ ಚಾಪೆ, ದಿಂಬನ್ನು ನೋಡಿದೆ. ಒಂದೆರಡು ಚೌಕದಂತಹ ಪೀಠಗಳೂ ಇದ್ದವು. ನನಗೆ ನೆಲದ ಮೇಲೆ ಕೂರಲು ಆಗುವುದಿಲ್ಲ ಎಂದೆ. ನೀವು ‘special request’ ಕಾಲಮ್ಮಿನಲ್ಲಿ ಮುಂಚೆಯೇ ಹೇಳಬೇಕಿತ್ತು ಎಂದು ಧಮ್ಮದ ‘ಮ್ಯಾನೇಜರು’ ಹೇಳಿದರು. ಕುರ್ಚಿ ಒಂದು ವಿಶೇಷವೇ? ಅದೂ ‘ಹಿರಿಯ’ ನಾಗರಿಕರಿಗೆ? ನೀವು ಮಲಗುವ ಹಾಸಿಗೆಯಲ್ಲಿ ಇಲಿಗಳು ಇರುತ್ತವೆ ಎಂದು ನೀವು ಮುಂಚೆಯೇ ಹೇಳಿದ್ದಿರಾ ಎಂದು ದಬಾಯಿಸಿದರೆ ಹೇಗೆ?  ಧ್ಯಾನಕ್ಕೆ ಎಂದು ಬಂದಿದ್ದೇನೆ. ಕಿರಿಕಿರಿ ಬೇಡ ಎಂದು ಮನಸ್ಸು ಎಚ್ಚರಿಸಿತು.

ಇಲ್ಲಿ ಬುದ್ಧನಿಲ್ಲ ಅಂತ ಎದೆಯಾಳದಲ್ಲೆಲ್ಲೊ ಅನ್ನಿಸಿತೆ!

ಸಂಜೆ ಬಂದಿಳಿದ ‘ಆಚಾರ್ಯ’ರನ್ನು, ಆದೇಶದ ಮೇರೆಗೆ ಭೇಟಿಯಾಗಿ ನನಗೆ ನೆಲದ ಮೇಲೆ ಕೂರಲು ಸಾಧ್ಯವಿಲ್ಲ, ದಯವಿಟ್ಟು ಕುರ್ಚಿಯನ್ನು ಕೊಡಿ ಎಂದು ಕೇಳಿಕೊಂಡೆ. ‘ಯಾಕೆ’ ಎಂಬ ವಿಚಾರಣೆ ನಡೆಯಿತು.

‘ಎಲ್ಲವೂ ಚಿತ್ತ ಮಾತ್ರವೇ. ಕೂರಲು ಆಗುತ್ತೆ ಎಂದರೆ ಆಗುತ್ತೆ, ಇಲ್ಲದಿದ್ದರೆ ಇಲ್ಲ!’

ಬುದ್ಧ ಹೀಗೆ ಹೇಳಿರುತ್ತಿದ್ದನೇ? ಬೇಕಿದ್ದರೆ ತಲೆ ಕೆಳಗಾದರೂ ಕೂರು, ನಿನ್ನದೇ ಉಸಿರನ್ನು ಏಕಾಗ್ರತೆಯಿಂದ ಗಮನಿಸುತ್ತಾ ಹೋಗು ಅಷ್ಟೇ, ಸತ್ಯ ಹೊಳೆಯುತ್ತದೆ ಎಂದಿದ್ದನಲ್ಲ? ನೆಲದ ಮೇಲೆ ಕೂತ ಕೆಲವೇ ನಿಮಿಷಗಳಲ್ಲಿ ಪದ ಹೇಳಲಾರಂಭಿಸುವ ಕಾಲು, ಬೆನ್ನುಗಳ ನೋವಿನ ಮೇಲೆ ಮನಸ್ಸು ಹೋದರೆ ಏಕಾಗ್ರತೆ ಹೇಗೆ ಸಾಧ್ಯ?

ಆಚಾರ್ಯೆಯ ಪ್ರವಚನ ಮುಂದುವರೆಯಿತು, ‘ಎರಡು ದಿನದ ಹಿಂದೆ ನಾನು ಆಸ್ಪತ್ರೆಯಲ್ಲಿದ್ದೆ. ಎದ್ದೇಳಲೂ ಆಗದಂತಹ ಸ್ಥಿತಿ. ಇವತ್ತು ನೂರೈವತ್ತು ಕಿಮೀ ಡ್ರೈವ್ ಮಾಡಿಕೊಂಡು ಬಂದಿದ್ದೇನೆ, ನೋಡಿ. ನೋವು ಇಲ್ಲ ಎಂದು ಮನಸ್ಸಿಗೆ ಹೇಳಿಕೊಳ್ಳಿ. ಸರಿಯಾಗುತ್ತದೆ.’

ನಾನಿಲ್ಲಿ ನೋವು ನಿಭಾಯಿಸುವುದನ್ನು ಕಲಿಯಲು ಬಂದಿಲ್ಲ. ಅದೂ ಕೇವಲ ಮೂರು ದಿನಗಳಲ್ಲಿ? ನಾನು ನೀವಲ್ಲ. ಆಗುವ ಆಸೆಯೂ ಇಲ್ಲ. ನನ್ನ ಶರೀರದ ಮಿತಿಗಳು ನಿಮಗೆ ಗೊತ್ತಾಗುವುದು ಅಪ್ಪರಾಣೆ ಸಾಧ್ಯವಿಲ್ಲ. ಹೀಗೆಲ್ಲಾ ವಟವಟಿಸುವ ಬದಲು ಬುದ್ಧನ ಕರುಣೆಯ ಮೌನದಲ್ಲಿ ಕಣದಷ್ಟಾದರೂ ಆವಾಹಿಸಿಕೊಂಡು ಕೇವಲ ಒಂದು ಕುರ್ಚಿಯನ್ನು ನನಗೆ ದಯಪಾಲಿಸಬಾರದೆ ಆಚಾರ್ಯರೇ?

ತಲೆಯಲ್ಲಿ ನಡೆದ ಮಾತು ಮುಖದ ಮೇಲೆ ಸ್ವಲ್ಪವಾದರೂ ಕಾಣಿಸಿಕೊಂಡಿತೋ ಏನೋ, ‘ನಿಮಗೆ ಕುರ್ಚಿ ಕೊಡಬಾರದು ಅಂತೇನೂ ಇಲ್ಲ. ನಾನೇನೂ ನಿಮ್ಮನ್ನು ಶಿಕ್ಷಿಸುತ್ತಿಲ್ಲ. ಆದರೂ ನೋವು ನಿಭಾಯಿಸುವುದನ್ನು ನೀವು ಕಲಿತರೆ ನಿಮಗೇ ಒಳ್ಳೆಯದು.’

ಮತ್ತೊಮ್ಮೆ ಇಲ್ಲಿ ಬುದ್ಧನಿಲ್ಲ ಅಂತನ್ನಿಸಿತ್ತು!

ಮರುದಿನ ಬೆಳಗಿನ ಜಾವದ ಧ್ಯಾನಕ್ಕೆಂದು ಹೋದಾಗ ನನ್ನ ಚಾಪೆಯ ಪಕ್ಕದಲ್ಲಿ ಇಟ್ಟಿದ್ದ ಕಿರಿದಾದ ಬೋಳು ಪ್ಲಾಸ್ಟಿಕ್ ಕುರ್ಚಿಯನ್ನು ನೋಡಿ ಬೆಚ್ಚಿಬಿದ್ದಿದ್ದೆ. ವಿಶೇಷ ಚೌಕಿಯ ಮೇಲೆ ಹಾಸಿದ್ದ ಮೆತ್ತೆಯ ಮೇಲೆ ಕೆಲವರು ಕೂತಿದ್ದರು. ಅರ್ಜಿಯಲ್ಲೇ ವಿಶೇಷ ಸವಲತ್ತಿಗೆ ಬೇಡಿಕೆಯನ್ನು ಇಟ್ಟಿದ್ದವರು. ಧ್ಯಾನಮಂದಿರದ ಮೂಲೆಯಲ್ಲಿ ಇದ್ದ ಹಲವಾರು ಖಾಲಿ ಚೌಕಿ, ಮೆತ್ತೆಗಳತ್ತ ಒಮ್ಮೆ ಕಣ್ಣು ಹಾಯಿಸಿದೆ.

ಇಲ್ಲಿ ಬುದ್ಧ ಇರಲು ಸಾಧ್ಯವೇ ಇಲ್ಲ ಅಂತನ್ನಿಸಿತು!

ಹಾಗೆ ನೋಡಿದರೆ ಹಿಂದೊಮ್ಮೆ ನಾನು ಹತ್ತು ದಿನಗಳ ಶಿಬಿರಕ್ಕೆಂದು ಬೇರೊಂದು ಕೇಂದ್ರಕ್ಕೆ ಹೋದಾಗಲೂ ಇಂಥದ್ದೇ ಅನುಭವವಾಗಿತ್ತು. ಕೇಳಿದ ಪ್ರಶ್ನೆಯನ್ನೂ  ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದ ಆ ‘ಆಚಾರ್ಯೆ’ ಮಹಾ ದುರಹಂಕಾರದವಳು ಅಂತನ್ನಿಸಿತ್ತು. ಆಮೇಲೂ ನನ್ನ ನೋಡಿದಾಗೆಲ್ಲ ಗುರಾಯಿಸುತ್ತಿದ್ದಳು.

ಅದು ಸುಮಾರು ಎಂಟು ವರ್ಷಗಳ ಹಿಂದೆ. ಮಾನಸಿಕ ಸಂಕಷ್ಟದಲ್ಲಿ ಸಿಕ್ಕಿ ಬಳಲಿದ್ದಾಗ ಈ ಧ್ಯಾನರೀತಿಯಿಂದ ಸ್ವಲ್ಪವಾದರೂ ಸಾಂತ್ವನ ಸಿಗಬಹುದೆಂಬ ಆಸೆಯ ಎಳೆಯನ್ನು ಹಿಡಿದು ಹೋಗಿದ್ದೆ. ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧನ ಮಹಾವಾಕ್ಯವನ್ನು ಮರೆತು!

ಆದರೆ ಈಗ ಬದುಕು ಬದಲಾಯಿಸಿತ್ತು. ಯಾವುದರ ಹಂಗೇನು ಎಂಬ ದಿವ್ಯ ಉಡಾಫೆ ಸ್ಥಾಯಿಭಾವವಾಗಿಬಿಟ್ಟಿತ್ತು.

ಧ್ಯಾನಮಂದಿರದ ಹೊರಗೆ ‘ಶಾಸ್ತ್ರ ಹೇಳಿತು, ಗುರುವು ಹೇಳಿದ, ಸಂಪ್ರದಾಯ ಹೇಳಿತು ಎಂಬೆಲ್ಲ ನೆಪಗಳಲ್ಲಿ ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳಬೇಡ,’ ಎಂಬೆಲ್ಲ ಬುದ್ಧತತ್ವದ ಫಲಕಗಳಿದ್ದವು. ಒಳಗೆ ಪ್ರೈಮರಿ ಸ್ಕೂಲ್ ಟೀಚರರ ಬೆತ್ತವನ್ನೂ ನಾಚಿಸಬಲ್ಲ ಆಚಾರ್ಯರು ತಮ್ಮ ಪೀಠದಲ್ಲಿ ವಿರಾಜಮಾನರಾಗಿದ್ದರು!

ಕೆಳಗೆ ಕೂರಲು ಪ್ರಯತ್ನಿಸಿದೆ. ಕಿರಿದಾದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಸಹ ಕೂತು ಹೇಗೋ ನಿಭಾಯಿಸಲು ಪ್ರಯತ್ನಿಸಿದೆ. ಅಪ್ಪರಾಣೆ ಧ್ಯಾನ ಸಾಧ್ಯವಾಗಲಿಲ್ಲ. ಉಸಿರನ್ನೂ ಸಹ ಮರೆಯುವಷ್ಟು ನೋವು!

ಎರಡನೆಯ ದಿನ ಆಚಾರ್ಯೆಯನ್ನು ಎದುರಿಸಿದೆ. ಸೌಜನ್ಯದಿಂದಲೇ. ಇನ್ನಷ್ಟು ಪ್ರವಚನ ಸಿಕ್ಕಿದ್ದಷ್ಟೇ ಲಾಭ. ಸರಿ, ಓಡಿ ಹೋಗುವುದಿಲ್ಲ. ಮೂರು ದಿನಗಳ ಶಿಕ್ಷೆಯನ್ನು ಮುಗಿಸಿಯೇ ಹೋಗುತ್ತೇನೆ. ಆಮೇಲೆ ನೀನ್ಯಾರೋ, ನಾನ್ಯಾರೋ ಎಂದುಕೊಳ್ಳುತ್ತಾ ಗಂಟೆಗಳನ್ನು ಲೆಕ್ಕ ಹಾಕಲಾರಂಭಿಸಿದೆ. ಮರಳಿ ಹೋದ ಮೇಲೆ ಏನೆಲ್ಲಾ ಕೆಲಸವಿದೆ, ಹೇಗೆ ಮಾಡಬೇಕು ಎಂದು ಯೋಚಿಸುವುದೇ ಧ್ಯಾನವಾಗಿಬಿಟ್ಟಿತ್ತು.

ಈ ಶಿಬಿರಗಳಲ್ಲಿ ನಡೆಯುವ ಪ್ರವಚನಗಳು ಮುಂಚೆಯೇ ರೆಕಾರ್ಡ್ ಮಾಡಿದಂಥವು. ಆಚಾರ್ಯರುಗಳಿಗೆ ಕೇವಲ ಬಟನ್ ಒತ್ತಿ ಕೂರುವ ಕೆಲಸ. ಪ್ರಶ್ನೆಗಳೇನಾದರೂ ಇದ್ದರೆ ಕೇಳಬಹುದು ಎಂದೇನೋ ಹೇಳುತ್ತಾರೆ. ಇನ್ನಷ್ಟು ಪ್ರವಚನವನ್ನು ಕೇಳುವ ಸಹನೆ ಸಾಮಾನ್ಯವಾಗಿ ಯಾರಿಗೂ ಇದ್ದಂತೆ ಕಾಣಿಸುವುದಿಲ್ಲ.

ಮೌನವ್ರತ ಶಿಬಿರದ ಒಂದು ಭಾಗ. ಆದರೂ ಒಂದು ರೂಮಿಗೆ ಇಬ್ಬರನ್ನು ಹಾಕುತ್ತಾರೆ.  ಪಿಸಪಿಸ ಎಂದು ಮಾತಾಡುವುದನ್ನು ಯಾರಿಗೂ ಹೇಳಿಕೊಡಬೇಕಿಲ್ಲ. ಆಮೇಲೆ ಯಾರಾದರೂ ಮಾತಾಡುತ್ತಿದ್ದಾರಾ ಎಂದು ನೋಡಲು ‘ಸೇವಾ’ ಮಾಡಲು ಬಂದಿರುವ ಉಸ್ತುವಾರರು ಗಸ್ತು ತಿರುಗುತ್ತಾರೆ. ನಮ್ಮ ದೇಶದಲ್ಲಿ ಮಾಡಲು ಕೆಲಸವಿಲ್ಲದೆ ಇರುವವರು ತುಂಬ ಮಂದಿ ಇದಾರೆನೋ! ನಾನು ಓದಿದ ಬೋರ್ಡಿಂಗ್ ಶಾಲೆಯಲ್ಲಿ ಸ್ಟಡಿ ಟೈಮಿನಲ್ಲಿ ಮಾತಾಡುವ ಭ್ರಷ್ಟರನ್ನು ಹಿಡಿಯಲು ಸಿಸ್ಟರಿನಿಯರು ಮೆಲ್ಲನೆ ಹಿಂಬದಿಯಿಂದ ಅವತರಿಸುವುದನ್ನು ನೋಡಿದ್ದೆ. ಆಗ ನಾವು ಮಕ್ಕಳು, ಈಗ?

ಇದು ವಯಸ್ಕರನ್ನು ನಡೆಸಿಕೊಳ್ಳುವ ರೀತಿಯೇ? ಮಂದಿಯೇನು ಮಾಡಲು ಕೆಲಸವಿಲ್ಲ ಎಂದು ಅಲ್ಲಿಗೆ ಬಂದಿರುತ್ತಾರೆಯೇ?

(ನಮಗೆ ವಯಸ್ಸಿನ ತಾರತಮ್ಯವಿಲ್ಲ! ನಾವು ಚಿತ್ತಮಾತ್ರರು!)

ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು. ಆಚಾರ್ಯರಿಗೆ ಇನ್ನಷ್ಟು ಕೋಪ ಬಂದಿರಲೂ ಸಾಕು.

ಪಾಪ, ಏನೋ ತಾಂತ್ರಿಕ ತೊಂದರೆಯಿಂದ ಪ್ರವಚನದ ದನಿ ಸ್ಪೀಕರಿನಲ್ಲಿ ಬಾರದೆ ‘ಸ್ವಯಂ ಸೇವಕಿ’ ಒದ್ದಾಡುತ್ತಿದ್ದಳು. ಏನಾಗುತ್ತಿದೆ ಎಂದು ನೋಡಲು ಹಿಂದಿ-ಯ ಕಡೆಗೆ ಬಂದ ಆಚಾರ್ಯರು ಆಕೆಯನ್ನು ನೋಡಿದ ನೋಟದಲ್ಲಿ ಅದೆಂತ ಬಿರುಸಿತ್ತು ಎಂದರೆ! ಸೇವಿಕೆಯ ಮುಖ ಬಾಡಿ ಕುಸಿದಿದ್ದನ್ನು ಗಮನಿಸಿದ ನನಗೆ ಬುದ್ಧ ಅಳುತ್ತಿದ್ದಾನೆ ಅಂತನ್ನಿಸಿತ್ತು.

ಇನ್ನರ್ಧ ಗಂಟೆ ಅಷ್ಟೇ, ಸಾವಧಾನ!

ದೇಣಿಗೆಯ ಮೇಲೆ ನಡೆಯುವ ಇಂತಹ ಶಿಬಿರ ಮುಗಿದು ಹೊರಡುವಾಗ ಅರೆಕಾಸು ದೇಣಿಗೆಯನ್ನೂ ಕೊಡಬಾರದು ಅಂತನ್ನಿಸಿದ್ದು ಮಾತ್ರ ನಿಜವೇ. ಆದರೆ ಮೂರು ದಿನಗಳ ಮಟ್ಟಿಗೆ ಊಟ ವಸತಿಗಳನ್ನು ಪಡೆದುಕೊಂಡಿದ್ದೆನಲ್ಲ? ಋಣಭಾರವೇಕೆ ಎಂದು ಲೆಕ್ಕ ಹಾಕಿದ್ದಕ್ಕಿಂತಲೂ ಹೆಚ್ಚು ತೆತ್ತು ಬಂದಾಗ ಮನಸ್ಸಿಗೆ ಆರಾಮೆನ್ನಿಸಿತ್ತು.

ಬುದ್ಧನಿದ್ದರೆ ನನ್ನ ಎದೆಯೊಳಗೆ ಮಾತ್ರ ಅಂತ ಅಂದುಕೊಳ್ಳುತ್ತಾ ಕಾರನ್ನು ಗೇಟಿನಾಚೆಗೆ ಹೊರಳಿಸಿದೆ.

*****

ಕೆಲವೊಂದು ಪದಗಳನ್ನು ಭಾಷಾಂತರ ಮಾಡಲು ಹೋಗಬಾರದು. ವ್ಯಕ್ತಿಯ ಹೆಸರನ್ನು ಭಾಷಾಂತರ ಮಾಡುತ್ತೇವೆಯೆ? ಹೆಸರೆಂದರೆ ಅನನ್ಯತೆ. ಹಾಗೆಯೇ ಉಳಿಸಿಕೊಳ್ಳಬೇಕು. ಕೆಲವು ತಿಂಗಳುಗಳ ಹಿಂದೆ ಬೌದ್ಧಧಮ್ಮದ ಮಹತ್ವವಾದ ಸಂದರ್ಭವನ್ನು ಉದ್ಘಾಟಿಸಿದ ನಾಡಿನ ಸುಪ್ರಸಿದ್ಧ ಚಿಂತಕ ರಹಮತ್ ತರೀಕೆರೆ ಈ ಅಂಶದ ಬಗ್ಗೆ ಗಮನ ಸೆಳೆದಿದ್ದರು.

ಹಾಗೆ ನೋಡಿದರೆ ಭಾರತೀಯ ಧರ್ಮ ಎಂಬ ಪರಿಕಲ್ಪನೆಯನ್ನು ರಿಲಿಜಿಯನ್ ಅಂತಲೂ ಭಾಷಾಂತರಿಸಲು ಆಗುವುದಿಲ್ಲ. ಪಶ್ಚಿಮದ ‘ರಿಲಿಜಿಯನ್’ ಪರಿಕಲ್ಪನೆ ಪರೋಕ್ಷವಾಗಿ ಕ್ರಿಶ್ಚಿಯಾನಿಟಿಯನ್ನು ತಳಹದಿಯಾಗಿ ಉಳ್ಳದ್ದು. ಆದರೆ ಇಂಗ್ಲೀಷನ್ನು ಅಂತರಾಷ್ಟ್ರೀಯ ಭಾಷೆಯಾಗಿ ಒಪ್ಪಿಕೊಂಡ ಮೇಲೆ ಪರಿಕಲ್ಪನೆಗಳ ಒಳಾರ್ಥದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮೇಲ್ಪದರದ ಅನುವಾದದಲ್ಲೇ ನಿಂತು ಬಿಡುತ್ತೇವೆ. ಏನನ್ನು ಬೇಕಾದರೂ ಅನುವಾದಿಸಬಹುದು ಎನ್ನುವುದು ಭೋಳೇತನ ಮಾತ್ರವೇ ಅಲ್ಲ, ಅಪಾಯಕಾರಿಯೂ ಹೌದು.

ಧಮ್ಮವನ್ನು ಧರ್ಮವಲ್ಲದ ಧಮ್ಮ ಎಂದು ವ್ಯಾಖ್ಯಾನಿಸಲಾಗುತ್ತದೆ. ಜಗತ್ತಿನ ಮುಖ್ಯ ಧರ್ಮಗಳನ್ನು ಗಮನಿಸಿದರೆ ಧಮ್ಮ ದಲ್ಲಿ ದೇವರ ಪರಿಕಲ್ಪನೆಯಿಲ್ಲದಿರುವುದು ಗಮನಕ್ಕೆ ಬರುತ್ತದೆ. ದುಃಖಂ ದುಃಖಂ ಸರ್ವಂ ದುಃಖಂ ಎಂದು ಜಗತ್ತಿನ ಬಗ್ಗೆ ಮರುಗಿದ ಬುದ್ಧ ಹೊರಟಿದ್ದು ದುಃಖವನ್ನು ಭರಿಸುವ, ಪರಿಹರಿಸಿಕೊಳ್ಳುವ ರೀತಿಯನ್ನು ಕಂಡು ಹಿಡಿಯಲೇ ಹೊರತು ಮೋಕ್ಷವನ್ನು ತೋರಿಸುವ ಆಶ್ವಾಸನೆಯಿಂದಲ್ಲ. ಅದಕ್ಕೇ ಅಲ್ಲಿ ಭಕ್ತಿಯ ಬಡಿವಾರವಿಲ್ಲ.

ವಿಪಶ್ಯನ ಎಂದರೆ ಉಸಿರಾಟವನ್ನು ಕೇವಲ ಸಾಕ್ಷಿಭಾವದಿಂದ ಗಮನಿಸುವ ರೀತಿ. ಅದು ಹೀಗೆಯೇ ಉಸಿರಾಡಬೇಕು ಎಂದು ಸಹ ಹೇಳುವುದಿಲ್ಲ. ಅದಕ್ಕೇ ಅದನ್ನು ಸಂಪ್ರದಾಯವೆಂಬ ಷಟತ್ವಕ್ಕೆ ಇಳಿಸುವುದು ಸಲ್ಲ ಎಂದು ಕೇಳಿದ್ದೇವೆ. ಧಮ್ಮ ಎಂದರೆ ಕರುಣೆ. ಧಮ್ಮದ ಗುರಿ ಆತ್ಮ ಸ್ವಾತಂತ್ರ್ಯ. ಮಹಾ ಮೇಧಾವಿ ಅಂಬೇಡ್ಕರ್ ಧಮ್ಮವನ್ನು ಸ್ವೀಕರಿಸಿದ್ದು ಕೇವಲವೆ?

ಧರ್ಮ ಎನ್ನುವುದು ಅತೀತಕ್ಕೆ ಕೈಚಾಚುವ ಒಂದು ಪ್ರಾಮಾಣಿಕ ಪ್ರಯತ್ನ. ಅನಿಷ್ಟಗಳು ಹೊಮ್ಮುವುದು ಅದು ಸಂಸ್ಥೆಯಾದಾಗ ಮಾತ್ರ. ಧರ್ಮ ಎನ್ನುವುದು ಎದೆಯಾಳದ ವೈಯುಕ್ತಿಕವಾಗದೆ, ಮನೆಯೊಳಗಿನ ಆಪ್ತತೆಯಾಗದೆ, ಸಾರ್ವಜನಿಕ ರೂಪವನ್ನು ಹೊತ್ತು ಬೀದಿಗೆ ಬಂದಾಗ ಅಧಿಕಾರವನ್ನು ಹೊಸೆದುಕೊಳ್ಳುವ ಹುನ್ನಾರದ ಕ್ರಿಮಿ ಕೀಟಗಳೆಲ್ಲ ಏನೇನೋ ನೆಪದಲ್ಲಿ ಅವತರಿಸುತ್ತವೆ. ವಿಧಿ ವಿಧಾನಗಳು ಸಂಪ್ರದಾಯದ ಹೆಸರಿನಲ್ಲಿ ಆವೇಶವನ್ನು ದಯಪಾಲಿಸುತ್ತವೆ. ಕೆಲವು ‘ಶಕ್ತಿ’ಗಳು ಅದನ್ನೇ ಹಿಡಿದು ಅಧಿಕಾರದ ಗದ್ದುಗೆಯನೇರಿ ಬೀಗುತ್ತವೆ.

ಮೂರು ದಿನದ ಶಿಬಿರದ ನೆಪದಲ್ಲಿ ಆಚಾರ್ಯರು ಬಂದು ಪೀಠವನ್ನು ಅಲಂಕರಿಸಿದಂತೆ! ಪ್ರವರ್ತಕರಂತೆ! ‘ಇಸ್ವ ಧರ್ಮದ’ ನಾಯಕರಂತೆ! ಅವರನ್ನೇ ಬುದ್ಧ, ಬ್ರಹ್ಮ, ಪ್ರವಾದಿ ಎಂದೆಲ್ಲಾ  ನಂಬುವ ಹುಂಬತನ ನಮ್ಮಂಥ ಸಾಮಾನ್ಯರಿಗೆ.

ವಿಧಿ ವಿಧಾನಗಳು ಧರ್ಮದ ಒಂದು ಭಾಗ ಅಷ್ಟೇ. ಧಮ್ಮ ಮಂದಿರಗಳು, ದೇವಸ್ಥಾನ ಆಶ್ರಮಗಳು, ಮಸೀದಿ ಚರ್ಚು ಇತ್ಯಾದಿಗಳನ್ನೇ ಧರ್ಮ ಎಂದುಕೊಂಡಾಗ; ಅದನ್ನು ನಡೆಸುವ ಹೊಣೆ ಹೊತ್ತವರಿಗೆ ಬೇಷರತ್ತಿನಿಂದ ಭೋ ಪರಾಕು ಹೇಳುತ್ತಾ ಕಾಲಿಗೆ ಬೀಳುವಾಗ; ನಾವು ಹಾದಿ ತಪ್ಪಿದ್ದೇವೆ ಅಂತಲೇ ಲೆಕ್ಕ.

ನಾನು ನಿತ್ಯ ಹೋಗುವ ಧ್ಯಾನ ಕೇಂದ್ರದಲ್ಲಿ ಕೇವಲ ಆರತಿ-ಪ್ರಸಾದಗಳನ್ನು ಕೊಡುವಾಕೆ ಯಾವ ಕಾರಣಕ್ಕೊ  ಠೇಂಕಾರಿಯಂತೆ ವರ್ತಿಸಿದ್ದಳು. ನನಗೆ ಪ್ರಸಾದ ಕೊಡುವುದು ಬೇಡ ಎಂದು ಅವಳ ಸ್ನೇಹಿತೆಗೆ ಹೇಳಿದ್ದೆ. ‘ಅದನ್ನು ನನಗೇ ಹೇಳಬಹುದಿತ್ತಲ್ಲ?’ ಎಂದು ಕೇಳಿದ್ದ ನನ್ನ ಅರ್ಧ ವಯಸ್ಸಿನ ಈಕೆ ಬಂದು ಕೇಳಲಿ ಎಂದೇ ಒಮ್ಮೆ ಆರತಿಯನ್ನೂ ಕೊಡದೆ ನಡೆದಿದ್ದಳು. ಈ ಅಹಂಕಾರದ ಮೂಲ ಆರತಿ-ಪ್ರಸಾದ ಎಂಬ ವಿಧಿ ವಿಧಾನದಲ್ಲೇ  ಎಂದು ಅರ್ಥವಾಗುವುದು ಕಷ್ಟವೇನಲ್ಲ. ಗುರುವಿಗೆ ಆರತಿ ಬೆಳಗುವಾಗಲೇ ನನ್ನ ಕಣ್ಣುಗಳು ಹೀರಿಕೊಂಡರೆ? ನಾನು ತಿನ್ನುವುದೆಲ್ಲ ಪ್ರಸಾದವೇ ಎಂಬ ಅರಿವು ಇದ್ದರೆ?

ಯಾವುದೋ ಮಠದಲ್ಲಿ ಅಬ್ರಾಹ್ಮಣರಿಗೆ ಊಟದ ಎಲೆಯನ್ನು ದೂರದಿಂದಲೇ ಎಸೆಯುವ ಅಭ್ಯಾಸ ಎಂದು ಕೇಳ್ಪಟ್ಟೆ. ಮರಳಿ ಮುಖಕ್ಕೆ ಬಿಸಾಕಿ ಬರಲು ಸಾಧ್ಯವಿಲ್ಲವೇ? ಧರ್ಮ ಎನ್ನುವುದು ದಾಸ್ಯವನ್ನು ಕಲಿಸುವ ಉದ್ದೇಶದಿಂದ ಸಾಂಸ್ಥಿಕ ರೂಪವನ್ನು ಹೊತ್ತಿದ್ದರೆ ಧಿಕ್ಕಾರ ಎಂಬ ಪ್ರತ್ಯಸ್ತ್ರವೂ ಇದೆಯಲ್ಲ? ಆತ್ಮಗೌರವವನ್ನು ಕಲಿಸದ ಮತ್ತು ಸ್ವಾತಂತ್ರ್ಯದ ಹಾದಿಯನ್ನು ತೋರದ ಯಾವುದೇ ಧರ್ಮದ ಸಾಂಸ್ಥಿಕ ರೂಪವೂ ಗೌರವಕ್ಕೆ ತಕ್ಕುದಲ್ಲ ಎನ್ನುವುದು ಸಾಮಾನ್ಯ ಬುದ್ಧಿಗೆ ಹೊಳೆಯದಂತ ಗೂಢವೆ?

‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ವಿಶ್ವಮಾನವ ಪ್ರಜ್ಞೆಯನ್ನು ಸಾರಿದ ನಮ್ಮ ಕುವೆಂಪು ಇನ್ನೊಂದು ಕಡೆ ಸಹ ಹೇಳಿದ್ದಾರಲ್ಲ?

‘ಜೀವನವನಿತುಂ ಜಪವೆನಗಾಗಿರೆ
ಜಪಮಣಿ ಗಿಪಮಣಿ ಮಾಲೆಯದೇಕೆ?
ಸುಂದರ ಜಗ ಶಿವಮಂದಿರವಾಗಿರೆ
ಅಂಧತೆ ಕವಿದಿಹ ದೇಗುಲವೇಕೆ?

ರಾಷ್ಟ್ರಕವಿಯಿಂದ ಕಲಿಯಲಾಗದ್ದನ್ನು ಪುರೋಹಿತಶಾಹಿ ಕಲಿಸಲು ಸಾಧ್ಯವೇ?

 

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ