ಭಕ್ತಿ ಪಂಥವು ಸೇವೆಯ ಉದ್ದೇಶಕ್ಕಾಗಿ ದೇವಸ್ಥಾನ, ಗುರು ಶಾಲೆ ಅಥವಾ ಸಮುದಾಯಭವನಗಳಿವೆ ಎಂದು ತಿಳಿದಿತ್ತು. ಭಾರತದಲ್ಲಿ ದೇವಾಲಯ, ಮಠ, ಮಂದಿರಗಳು, ಚರ್ಚ್, ಮಸೀದಿಗಳು ನೈಸರ್ಗಿಕ ವಿಕೋಪದ ನಂತರ ಸಂತ್ರಸ್ತರಿಗೆ ಪರಿಹಾರ, ಬಡ ಮತ್ತು ಕನಿಷ್ಠ ರೈತರಿಗೆ ಸಹಾಯ ಮಾಡುವುದು, ಬಡವರಿಗೆ ಮನೆಗಳನ್ನು ನೀಡುವುದು, ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್… ಇತ್ಯಾದಿ ಸೇವಾ ಕೈಂಕರ್ಯ ಕ್ಕೆ ತೊಡಗಿಕೊಳ್ಳುವುದು ಇವತ್ತಿಗೂ ಮಾಡುತ್ತಿದೆ.
ಭಕ್ತಿ ಚಳವಳಿಯ ಕುರಿತು ದೇವಿಕಾ ನಾಗೇಶ್ ಬರಹ ನಿಮ್ಮ ಓದಿಗೆ
ಭಜನೆ ನಮ್ಮ ದೈನಂದಿನ ಜೀವನದ ಭಾಗವಾಗಿದ್ದ ಕಾಲವೊಂದಿತ್ತು. ಆಗ ನಾವು ಶಾಲೆಗೆ ಹೋಗುವ ಪುಡಿ ಮಕ್ಕಳು. ಮುಸ್ಸಂಜೆಗೆ ಮೊದಲು ಶಾಲೆಯಲ್ಲಿ ಟೀಚರ್ಸ್ ಹೇಳುತ್ತಿದ್ದ ದಿನಚರಿ ಕಾಪಿ ಬರೆಯುವುದು, ಮಗ್ಗಿ ಕಲಿಯುವುದು ಮುಗಿಸಿ ಮಿಂದು ಶುಚಿಯಾಗಿ ಬಂದು ದೇವರ ಪಟದ ಎದುರು ಚಕ್ಕರ ಮೂಟೆ ಹಾಕಿ ಕೂತು ಭಜನೆಗೆ ಶುರು ಹಚ್ಚಬೇಕಿತ್ತು. ಮನೆಯಲ್ಲಿದ್ದ ಎರಡೇ ಎರಡು ಜೋಡಿ ಹಿತ್ತಾಳೆ ತಾಳ ಒಂದು ಚಿಕ್ಕಿಗೆ ಮೀಸಲಿಟ್ಟು ಮಿಕ್ಕಿದ್ದ ಇನ್ನೊಂದು ತಾಳಕ್ಕೆ ನಾವು ಮಕ್ಕಳು ಜಗಳಕ್ಕೆ ನಿಲ್ಲುತ್ತಿದ್ದೆವು. ದೇವರ ನಾಮ ಹೇಳುವುದರಲ್ಲೂ ನಮ್ಮಲ್ಲೇ ಅಕ್ಕ, ತಂಗಿಯರಿಗೆ ನಾ ಮುಂದು ತಾ ಮುಂದು ಎಂಬ ಪೈಪೋಟಿ. ಭಜನೆಯಲ್ಲಿ ಕೆಲವೊಮ್ಮೆ ಶಾಲಾ ಪಠ್ಯದ ಪದಗಳನ್ನೂ ಹಾಡಿ ಗೆದ್ದ ಭಾವದಲ್ಲಿ ಬೀಗುವುದಿತ್ತು. ಆಗ ಬೆನ್ನ ಹಿಂದೆ ಕೂತ ಚಿಕ್ಕಿ ಮಕ್ಕಳ ತಲೆಗೊಂದು ಕುಟುಕುತ್ತ… ಬಿಟ್ಟ ಪದ ತುಂಬುವಂತೆ ತನ್ನ ಮನದ ಬತ್ತಳಿಕೆಯಿಂದ ಒಂದು ದೇವರ ನಾಮ ಎತ್ತಿಕೊಂಡು ಹಾಡುತ್ತಿದ್ದರು. ಅವರ ಹಾಡಿಗೆ ನಾವು ದ್ವನಿ ಸೇರಿಸುತ್ತಿದ್ದೆವು.
ಪ್ರತೀ ದಿನದ ಭಜನೆಯಲ್ಲಿ ಅಕ್ಕನ ಭಾಗ್ಯದ ಲಕ್ಷ್ಮಿ ಬಾರಮ್ಮ…. ನನ್ನ ಸ್ವಾಮಿ ದೇವನೆ ಲೋಕ ಪಾಲನೆ… ಪದಗಳು ಇದ್ದೇ ಇರುತ್ತಿತ್ತು. ಅದು ಎಷ್ಟರಮಟ್ಟಿಗೆ ಅಂದರೆ ತಮ್ಮ ತಂಗಿಯರಿಗೆ ಓದದೆಯೇ ಬಾಯಿ ಪಾಠ ಆಗಿ ಹೋಗಿತ್ತು. ಆಗ ನಮ್ಮ ಅಜ್ಜಿ ಅಡುಗೆಮನೆಯಲ್ಲಿ ರಾತ್ರಿ ಊಟಕ್ಕೆ ತಟ್ಟೆ ಇಡಬೇಕೆಂದರೆ ಭಜನೆಗೆ ಮಂಗಳ ಹಾಡಿದ ನಂತರವೇ ಎಂಬ ನಿಯಮವಿತ್ತು. ಆದರೆ ನಮಗೆ ಮಕ್ಕಳಿಗೆ ಆಗಲೇ ಹಸಿವಿನಿಂದ ಹೊಟ್ಟೆ ತಾಳ ಹಾಕುತ್ತಿತ್ತು. ಕಿವಿ ಅಡುಗೆ ಮನೆಯಲ್ಲಿ ಬಟ್ಟಲ ಸದ್ದಿಗೆ ಕಾಯುತ್ತಿತ್ತು. ಆಕ್ರೋಶ, ಸಿಟ್ಟು, ಅವಸರ, ಎಲ್ಲ ಒಟ್ಟಾಗಿ ಭಜನೆ ಬಾಯಿಯಲ್ಲಿ ಬಡ ಬಡಿಸುತ್ತ ಚಿಕ್ಕಿಯ ಬಾಯಿಯಿಂದ ಮಂಗಳ ಮೊಳಗುವ ಸ್ವರಕ್ಕಾಗಿ ಕಾಯುತ್ತಿದ್ದೆವು. ಆಗ ನೆನಪಾಗುತ್ತಿದ್ದದ್ದು ಕನಕದಾಸರ ಕೀರ್ತನೆ. “ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ.…” ವಚನಗಳು, ಕೀರ್ತನೆ, ಪದ ಯಾವುದಾದರೂ ಸರಿ ದೇವರ ಹೆಸರಿದ್ದರೆ ಸಾಕು ಭಕ್ತಿ ಗೀತೆಗಳು ಎಂದು ಭಾವಿಸಿ ನಾವು ಭಜನೆಯಲ್ಲಿ ಬಳಸಿಕೊಳ್ಳುತ್ತಿದ್ದೆವು.
ನಮ್ಮ ಬಾಲ್ಯದ ದಿನಗಳಲ್ಲಿ ಎಕ್ಕ ಭಜನೆ ತಂಡ ರಾತ್ರಿ ಹೊತ್ತು ಮನೆ ಮನೆ ತಿರುಗಾಟಕ್ಕೆ ಬರುತ್ತಿತ್ತು. ಈ ತಂಡ ಒಳ್ಳೆಯ ಮುಹೂರ್ತ ನೋಡಿ ಊರಿನ ದೇವಾಲಯದಲ್ಲಿ ಮುಸ್ಸಂಜೆ ಹೊತ್ತು ಮೊದಲ ಭಜನೆಯನ್ನು ಪ್ರಾರಂಭಿಸಿ ನಂತರ ವರ್ಷದುದ್ದ ಊರಿನ ಪ್ರತಿ ಮನೆಗೆ ಹೋಗಿ ಅಂಗಳದಲ್ಲಿ ದೇವರ ಪಟವಿಟ್ಟು ಭಜನೆ ಮಾಡಿ ಮನೆಯವರಿಗೆ ಗಂಧ ಪ್ರಸಾದ ನೀಡಿ ಮುಂದುವರಿಯುತಿತ್ತು. ಮನೆಯವರು ತಮ್ಮ ಸತ್ಯನ ಭಕ್ತಿ ದಕ್ಷಿಣೆ ನೀಡುತ್ತಿದ್ದರು.
ನಾವು ಅಮಾಯಕರಾಗಿದ್ದ ಬಾಲ್ಯದ ಆ ದಿನಗಳು ಚೆನ್ನಾಗಿತ್ತಲ್ಲ ಎಂದು ಈಗ ಅನ್ನಿಸೋದಿದೆ. ಹುಲುಮಾನವರಲ್ಲವೇ ನಾವು. ನಮಗೆ ನಾವೇ ಉತ್ತರದಾಯಿಗಳಾಗ ಬೇಕಾದಾಗ ಬದುಕಿನಲ್ಲಿ ಅನಿಶ್ಚಿತತೆ ಕಾಡುತ್ತದೆ. ಆಗ ದೇವರ ಸ್ಮರಣೆ ನೀಡುವ ಶಕ್ತಿ ಅತೀತವಾದದ್ದು. ಈ ಹೊತ್ತು ವೇದ, ಶಾಸ್ತ್ರ, ಪುರಾಣಗಳ ಹಂಗಿಲ್ಲದಂತೆ ಸುಲಭದಲ್ಲಿ ಒದಗಿ ಬರುವುದು ಭಜನೆ ಕೀರ್ತನೆಗಳು.
“ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ….. ಬಾಯಾರಿತು ಎಂದು ಬಾವಿ ನೀರಿಗೆ ಪೋದೆ, ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೇ” ಪುರಂದರದಾಸರ ಕೀರ್ತನೆ ಇದು.
ಸ್ತುತಿ ನಿಂದೆಗಳೆರಡನ್ನೂ ಒಳಗೊಂಡಂತಹ ಕೀರ್ತನೆಯ ಪದಗಳು ಪಲ್ಲವಿ ಅನುಪಲ್ಲವಿಯನ್ನು ಒಳಗೊಂಡಿದ್ದು ಸಂಗೀತದಲ್ಲಿ ಅಳವಡಿಸಲು ಪೂರಕವಾಗಿದೆ. ಸಂಗೀತಕ್ಕೆ ಒತ್ತು ಕೊಟ್ಟು ಕೀರ್ತನೆಗಳನ್ನು ಬರೆದ ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ತಾಳ, ತಂಬೂರಿ ಹಿಡಿದು ಕೀರ್ತನೆಗಳನ್ನು ಮನೆ ಮನೆಗೆ ಮುಟ್ಟಿಸುತ್ತಿದ್ದವರು ದಾಸ ಪರಂಪರೆಯವರು. ಇವರು ಹಾಡುತಿದ್ದ ಕೀರ್ತನೆಗಳಿಗೆ ಕಿವಿಯಾಗುತ್ತಿದ್ದವರು ಮನೆಯಲ್ಲಿದ್ದ ಮಕ್ಕಳು, ಮಹಿಳೆಯರು. ಇದೇ ಮಹಿಳೆಯರು, ಮಕ್ಕಳು ಮುಂದಿನ ದಿನಗಳಲ್ಲಿ ತಮ್ಮ ಮನೆಗಳಲ್ಲಿಯೂ ಮುಸ್ಸಂಜೆಯ ಹೊತ್ತು ದೇವರ ಸ್ಮರಣೆಯಾಗಿ ಈ ಭಜನೆಗಳನ್ನು ಹಾಡತೊಡಗಿದರು. ಇದು ಮಹಿಳೆಯರ ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣವಾದಂತೆ ಮಕ್ಕಳ ಮನೆಯ ದಿನಚರಿಗೆ ಒಂದು ರೀತಿಯ ಶಿಸ್ತನ್ನು ತಂದಿತು. ಮುಂದಿನ ದಿನಗಳಲ್ಲಿ ಈ ಭಜನೆ, ಕೀರ್ತನೆಗಳಲ್ಲಿರುವ ಒಳನೋಟಗಳು ಸಾಮಾಜಿಕ ಚಿಂತನೆಯನ್ನು ಬೆಳೆಸುವುದಕ್ಕೂ ಸಮುದಾಯದ ಮಾನಸಿಕ ಆರೋಗ್ಯ ಕಾಪಾಡುವುದಕ್ಕೂ ಕಾರಣವಾಯಿತು.
ಮನೆ, ದೇವಾಲಯ, ಮರದ ಕೆಳಗೆ, ನದಿ ದಂಡೆ, ಐತಿಹಾಸಿಕ ಮಹತ್ವದ ಸ್ಥಳಗಳಲ್ಲಿ ಭಜನೆ, ಕೀರ್ತನೆಗಳನ್ನು ಹಾಡುವುದು ಶತ ಶತಮಾನಗಳಿಂದ ಸಮಾಜದಲ್ಲಿ ರೂಢಿಯಿದ್ದ ಪದ್ಧತಿ. ಭಜನೆ ಸಾಮಾಜಿಕ ಒಳಗೊಳ್ಳುವಿಕೆಯೊಂದಿಗೆ ಸಾಮೂಹಿಕ ತನ್ಮಯತೆಯನ್ನು ತಂದು ಕೊಡುತ್ತದೆ. ‘ಮಾನಸಿಕ ಆರೋಗ್ಯದ ಸ್ವಾಸ್ತ್ಯಕ್ಕೆ ಮಾದಕ ದ್ರವ್ಯ ವ್ಯಸನ ಮುಕ್ತರಾಗಿ ಬದುಕುವುದಕ್ಕೆ ಭಜನೆ ಉತ್ತಮ ಪರ್ಯಾಯʼ ಹೀಗೆ ಅಂದವರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಕೊರಗರ ಹಾಗೂ ಬುಡಕಟ್ಟು ಜನರ ಜೊತೆ ಸುಮಾರು ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ಅಶೋಕ ಶೆಟ್ಟಿ. ಇದು ಗಾಳಿಯಲ್ಲಿ ತೇಲ ಬಿಡುವ ಮಾತಲ್ಲ… ಎಂದು ನನಗೆ ಅನ್ನಿಸಿದ್ದು ಮಾತ್ರ ಇತ್ತೀಚಿಗೆ.
ನನ್ನ ನಾದಿನಿ ನಾನು ಕಂಡಂತೆ ಊಟದ ಜೊತೆ ಉಪ್ಪಿನಕಾಯಿಯ ಹಾಗೆ ದೇವರಲ್ಲಿ ಭಕ್ತಿ ಇದ್ದವಳು. ಈಗ ಆಕೆ ತನ್ನ ಐವತ್ತು ವರ್ಷದ ನಂತರ ಮಠ ಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಹಿಳೆಯರ ಭಜನೆ ತಂಡದೊಡನೆ ತಾನು ತಿರುಗಾಡಕ್ಕೆ ತೊಡಗಿದ್ದಾಳೆ. ಈಗ ಅವಳಲ್ಲಿ ಉಕ್ಕುತ್ತಿರುವ ಯೌವ್ವನದ ಗುಟ್ಟು ಏನು ಎಂದು ವಿಚಾರಿಸತೊಡಗಿದಾಗ ನಾನು ಕಂಡು ಹಿಡಿದ ಸತ್ಯವಿದು. ಮಹಿಳಾ ಮಂಡಲ, ಯುವಕ ಮಂಡಲ, ಯುವತಿ ಮಂಡಲ, ಭಜನಾ ಮಂದಿರಗಳು ಒಂದು ಕಾಲದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವು. ಇಂದಿಗೂ ಅವು ದೇವಸ್ಥಾನ, ಜಾತ್ರೆ, ಸಾರ್ವಜನಿಕ ಗಣೇಶೋತ್ಸವ ಇತ್ಯಾದಿ ಸಮಾರಂಭಗಳಲ್ಲಿ ಭಜನಾ ಸಪ್ತಾಹಗಳನ್ನು ಸಮಾಜಮುಖಿ ಚಟುವಟಿಕೆಗಳ ಜೊತೆಗೆ ನಡೆಸಿಕೊಂಡು ಬರುತ್ತಿವೆ.

ಸಾಮವೇದದಲ್ಲಿ ಭಜನೆಯ ಬಗ್ಗೆ ಉಲ್ಲೇಖವಿದೆ. ‘ಭಜ್’ ಎಂಬ ಸಂಸ್ಕೃತ ಮೂಲ ಪದದ ಉತ್ಪತ್ತಿಯಾದ ಭಜನೆ ಎಂದರೆ ಹಂಚಿಕೊಳ್ಳು, ಭಾಗವಹಿಸು, ವಿಭಜಿಸು ಎಂಬ ಸಾಮಾನ್ಯ ಅರ್ಥವಿದೆ. ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗೆ ಒಗ್ಗಿಕೊಂಡು ಇಂದಿಗೂ ಉಳಿದಿರುವ ಭಜನೆಗೆ ಸುದೀರ್ಘವಾದ ಇತಿಹಾಸವಿದೆ. ಕ್ರಿ.ಶ. 6ನೇ ಶತಮಾನದಿಂದ 17ನೇ ಶತಮಾನದವರೆಗಿನ ಭಾರತದ ಇತಿಹಾಸದಲ್ಲಿ ಭಕ್ತಿ ಪಂಥ ಬೀರಿದ ಪ್ರಭಾವ ಮಹತ್ತರವಾದದ್ದು. ವೈದಿಕ ಸಂಸ್ಕೃತಿಯ ಮಡಿ ಮೈಲಿಗೆ, ಯಜ್ಞ ಯಾಗ, ಪ್ರಾಣಿಬಲಿ ಒಂದೆಡೆಯಾದರೆ ಉಳಿಗಮಾನ್ಯ ಪದ್ಧತಿಯ ಪಾಳೇಗಾರಿಕೆ, ಹಿಂಸೆ ದೌರ್ಜನ್ಯಗಳಿಂದ ಜನಸಾಮಾನ್ಯರ ಬದುಕು ಹೈರಾಣವಾಗಿತ್ತು. ಸಮಾಜದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆ, ಅಸ್ಪೃಶತೆಯ ಆಚರಣೆ, ವರ್ಣಾಶ್ರಮ ಧರ್ಮಗಳ ಕಪಿ ಮುಷ್ಟಿಯಲ್ಲಿ ಜನ ಬಳಲಿದ್ದರು. ಯುದ್ಧಗಳು ಸಾಮಾನ್ಯವಾಗಿತ್ತು. ನೆಮ್ಮದಿಯ ಬದುಕಿಗೆ ಜನ ಹಾತೊರೆಯುತ್ತಿದ್ದರು. ಹರಿದು ಹಂಚಿಹೋಗಿದ್ದ ಭಾರತವನ್ನು ಆಗ ತುಂಡರಸರು, ಸಾಮಂತರು ಆಳುತ್ತಿದ್ದರು. ಮಹಿಳೆಯರ, ಬಡವರ ಅಸ್ಪೃಶ್ಯರ, ಸ್ಥಿತಿ ಚಿಂತಾಜನಕವಾಗಿತ್ತು. ಶ್ರೇಣೀಕರಣ ವ್ಯವಸ್ಥೆ ಇಡೀ ಸಮಾಜವನ್ನು ಶಾಪದಂತೆ ಕಾಡುತ್ತಿದ್ದ ಸರಿ ಹೊತ್ತಿನಲ್ಲಿ ಭಕ್ತಿ ಪಂಥ ಮುನ್ನೆಲೆಗೆ ಬಂತು. ಸಂತ ಚಳುವಳಿಗಳು ಸಮಾನತೆಯ ತಳಹದಿಯಲ್ಲಿ ಜೀವಪರ ಧ್ವನಿಯಾಗಿ ಹೊರ ಹೊಮ್ಮಿತು.
ತುಳಸಿದಾಸ, ಕಬೀರ, ಮೀರಾಬಾಯಿ, ವೇನಾಬಾಯಿ, ಸೂರದಾಸ, ಶಿಶುನಾಳ ಷರೀಫ, ಬಸವ, ಅಲ್ಲಮ, ಕರೈಕ್ಕಲ್ ಅಮ್ಮಯ್ಯರ್, ಲಲ್ಲೇಶ್ವರಿ, ಅಂಡಾಳ್, ಕರೂರಮ್ಮ ಅಕ್ಕಮಹಾದೇವಿ ಮೊದಲಾದ ಅನುಭಾವಿ ಸಂತರು, ಸೂಫಿಗಳು ಜನರ ನಡುವಿನಿಂದ ಎದ್ದು ಬಂದರು. ಇವರ ಅರಿವಿಗೆ ದಕ್ಕಿದ ಜೀವನ ಸಂದೇಶಗಳು ಜನ ಜೀವನದ ನಾಡಿಮಿಡಿತವಾಗಿ ಮೌಖಿಕ ಪರಂಪರೆಯಾಗಿ ಹರಿದು ಬಂತು.
ಭಕ್ತಿ, ಪ್ರೀತಿ, ಗೌರವ, ನಂಬಿಕೆ, ಬಾಂಧವ್ಯ ಮುಂತಾದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಕೀರ್ತನೆ ಭಜನೆಗಳ ಪಾತ್ರ ಹಿರಿದಾದುದು. ಹಾಡುತ್ತ ಕುಣಿಯೋದು ಭಕ್ತಿಯ ಒಂದು ಸಹಜ ಅಭಿವ್ಯಕ್ತಿ. ಈ ಅಭಿವ್ಯಕ್ತಿ ಕುಣಿತ ಭಜನೆಯ ತಂಡಗಳಾಗಿ ಇಂದು ಸಾಂಘಿಕ ರೂಪ ಪಡೆದಿದೆ.
ಭಕ್ತಿಯೇ ಪ್ರಧಾನವಾದ ಈ ಕೀರ್ತನೆಯಲ್ಲಿ ಕನಕದಾಸರು ಆತ್ಮಪರಮಾತ್ಮ ಸಾಂಗತ್ಯವನ್ನು ಸಮೀಕರಿಸಿ ಹೀಗೆ ಹೇಳುತ್ತಾರೆ. ತನುವನ್ನು ನೇಗಿಲು ಮಾಡಿ ಹೃದಯ ಹೊಲ ಮಾಡಿ ತನ್ವಿರಾ ಎಂಬ ಎರಡೆತ್ತ ಹೂಡಿ ಜ್ಞಾನವೆಂಬೊ ಮಿಣೆಯ ಕಟ್ಟು ಹಗ್ಗವ ಮಾಡಿ ಧ್ಯಾನವೆಂಬ ಧ್ಯಾನವ ನೋಡಿ ಬಿತ್ತಿರಯ್ಯ ನಿಮ್ಮ ಮನದೊಳಗಿನ ಚಂಚಲವೆಂಬ ಹಕ್ಕಿಯನ್ನು ಓಡಿಸಿರಯ್ಯ”.
ಒಂದು ಕಾಲದಲ್ಲಿ ಭಕ್ತಿ ಪಂಥವು ಚಳುವಳಿಯ ಸ್ವರೂಪ ಪಡೆದಿತ್ತು. ಪ್ರಭುತ್ವವೂ ಇದಕ್ಕೆ ಹೆದರುತ್ತಿತ್ತು. ಪ್ರಾರಂಭದಲ್ಲಿ ಏಕವ್ಯಕ್ತಿಯಿಂದ ಪ್ರಾರಂಭವಾಗಿ ಸಾಮೂಹಿಕ ಸ್ವರೂಪ ಪಡೆದ ಈ ಭಕ್ತಿ ಚಳುವಳಿಯ ಕಾವು ಉತ್ತುಂಗಕ್ಕೆ ಏರಿ ಅನುಭಾವದೆಡೆಗೆ ಸಾಗಿತು. ಆಗ ಸ್ತ್ರೀ ಪುರುಷರಿಬ್ಬರೂ ಲಿಂಗ, ವರ್ಗ, ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಅಧ್ಯಾತ್ಮದ ಈ ಯಾನದಲ್ಲಿ ಜೊತೆಗೆ ನಡೆದರು. ಭಜನೆ, ಶೋತ್ರ, ಸಲತ್, ದೇವರ ನಾಮ ಸ್ಮರಣೆ, ಕೀರ್ತನೆ, ಹಾದಿಫ್… ಇತ್ಯಾದಿಗಳು ದೇವರ ಜೊತೆಗಿನ ಇವರ ಸಂವಹನದ ಮಾದರಿಯಾಗಿತ್ತು.
ಭಾರತದಲ್ಲಿ ಜಾತಿ ಮತ್ತು ಲಿಂಗಭೇದದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಭಕ್ತಿ ಪಂಥ. ಪುರೋಹಿತಶಾಹಿ ವ್ಯವಸ್ಥೆ ಜಮೀನ್ದಾರಿ ಪದ್ಧತಿ ಜಾರಿಯಲ್ಲಿದ್ದ ಸಮಾಜದಲ್ಲಿ ರೈತರು, ಶೂದ್ರರು ಗುಲಾಮರು ಮಹಿಳೆಯರು ಲೈಂಗಿಕ ಕಾರ್ಯಕರ್ತರು… ವಿಧವೆಯರು, ಅವಿವಾಹಿತೆಯರು ಹೀಗೆ ಧ್ವನಿ ಇಲ್ಲದ ಒಂದಷ್ಟು ಜೀವಗಳು ಈ ಸಮಾಜದಲ್ಲಿ ಉಳ್ಳವರ ಚಾಕರಿ ಮಾಡುತ್ತ ಉಸಿರಾಡುತ್ತಿತ್ತು. ಹಾಗಂಥ ಸತ್ಯವನ್ನು ಕಾಣುವ ಹಂಬಲ ಇವರ ಮನದಾಳದ ಕತ್ತಲಲ್ಲಿ ಮಿಸುಕಾಡುತ್ತಿತ್ತು. ಭಕ್ತಿ ಚಳವಳಿ ಲಿಂಗ ಮತ್ತು ಧರ್ಮದ ಗಡಿ ರೇಖೆಗಳನ್ನು ಮೀರಿ ತನ್ನ ಅರಿವಿನ ಲೋಕ ವಿಸ್ತರಿಸಿ ಮಹಿಳೆ ಸೃಜನಶೀಲ ಕಾವ್ಯ ಕಟ್ಟುವ ಮೂಲಕ ಏಕಾಂತದಿಂದ ಲೋಕಾಂತಕ್ಕೆ ತೆರೆದುಕೊಳ್ಳಲು ಅನುವುಮಾಡಿ ಕೊಟ್ಟಿತು. ಇಲ್ಲಿ ಆಕೆ ದೇವರನ್ನು ಪತಿಯಾಗಿ, ತಂದೆಯಾಗಿ ಸಂಬಂಧದ ನೆಲೆಯಲ್ಲಿ ನಿರ್ವಹಿಸಿದ ರೀತಿ ಅದ್ಭುತವಾದದ್ದು. ಸಮಾಜದಿಂದ ಹೇರಲ್ಪಟ್ಟ ಸ್ತ್ರೀ ಸಹಜ ಲಜ್ಜೆಯನ್ನು ದೇವರ ಜೊತೆಗಿನ ಅನುಸಂಧಾನದಲ್ಲಿ ಆಕೆಮೀರಲು ಸಾಧ್ಯವಾಯಿತು…. ಅನುಭವ ಮಂಟಪ, ಬೌದ್ಧ ಸಂಘ ಸಮಾಜದ ಎಲ್ಲ ಸ್ಥರದ ಮಹಿಳೆಯರಿಗೆ ಒಂದು ಮಟ್ಟದ ಮುಕ್ತ ವೇದಿಕೆಯಾಗಿತ್ತು. ಇವು ಹುಟ್ಟು ಹಾಕಿದ ಚರ್ಚೆಗಳಿಂದ ಸಮಾಜದ ಕೆಲವರ ಕಣ್ಣಾದರೂ ತುಸು ತೆರೆಯಲು ಸಾಧ್ಯವಾಯಿತು…. ಆರ್ಯ ಸಮಾಜ, ಬ್ರಹ್ಮ ಸಮಾಜದಂತಹ ವ್ಯವಸ್ಥೆಗಳು ನಂತರ ಹುಟ್ಟಿಕೊಂಡವು. ಇದರಿಂದ ಮಹಿಳೆಯರ ಬದುಕಿನ ಉನ್ನತೀಕರಣಕ್ಕೆ ತುಸುವಾದರೂ ದಾರಿ ಸುಗಮವಾಯಿತು ಎನ್ನುವುದು ಸ್ವಾತಂತ್ರ್ಯ ಭಾರತದ ಇತಿಹಾಸದಿಂದ ಅರಿವಿಗೆ ಬರುತ್ತದೆ.
ಜೈನಧರ್ಮದಲ್ಲಿ ಜಿನ ತೀರ್ಥಂಕರರನ್ನು ಸ್ತುತಿಸುವ ಅಹೋರಾತ್ರಿ ಭಜನೆಗಳನ್ನು ಸವನ್ ಎಂದು ಕರೆಯುತ್ತಾರೆ. ಈ ಸವನ್ ವ್ರತದ ಮಾದರಿಯಲ್ಲಿ ಅವರ ಹಬ್ಬ ಹರಿದಿನಗಳಲ್ಲಿ ಬಸದಿಗಳಲ್ಲಿ ನಡೆಯುತ್ತವೆ. ಮಹಿಳೆಯರು ಪುರುಷರು ಇದರಲ್ಲಿ ಭಾಗವಹಿಸುತ್ತಾರೆ. ಆತ್ಮ ಶುದ್ಧಿಯ ಪ್ರತೀಕ ಈ ಆಚರಣೆ ಎಂದು ಇವರು ನಂಬುತ್ತಾರೆ.
ಬೌದ್ಧ ಧರ್ಮದಲ್ಲಿ ಭಜನೆಯು ಕೀರ್ತನೆ ರೂಪದಲ್ಲಿ ಇಲ್ಲದೆ ಇದ್ದರೂ ಧ್ಯಾನ, ಜಪ ಮತ್ತು ಬುದ್ಧನ ಗುಣಗಾನಗಳು ಇಲ್ಲಿ ಮಹತ್ವದ್ದಾಗಿದೆ. ಇದು ಮನಸ್ಸನ್ನು ಶುದ್ಧೀಕರಿಸುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಅಶಾಂತಿಯನ್ನು ಹೋಗಲಾಡಿಸಿ ಮಾನಸಿಕ ಶಾಂತಿ ನೀಡುತ್ತದೆ. ಸಮುದಾಯವನ್ನು ಒಟ್ಟುಗೂಡಿಸುತ್ತದೆ. ಅರಿವಿಗೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆ ಇದೆ. ಬೌದ್ಧ ಸಂಘದಲ್ಲಿ ಸಮಾಜದ ಎಲ್ಲಾ ಸ್ತರದ ಸ್ತ್ರೀ ಪುರುಷರು ಇದ್ದರು ಸಮಾನತೆಯ ಆಶಯದಲ್ಲಿ ಇವರು ಒಂದು ಗೂಡಿದ್ದರು. ಜಾತಿಯ ಕಟ್ಟುಪಾಡುಗಳನ್ನು ಸಂಘ ತನ್ನ ನಿಯಮಗಳ ಮೂಲಕ ಮುರಿಯುತ್ತಿತ್ತು. ಹುಟ್ಟು, ವೃತ್ತಿ, ಲಿಂಗ, ಸಾಮಾಜಿಕ ಅಂತಸ್ತು ಜಾತಿ ಇವು ಯಾವುದೂ ಬೌದ್ಧ ಸಂಘಕ್ಕೆ ಸೇರಲು ಅಡ್ಡಿಯಾಗಿರಲಿಲ್ಲ. ಬುದ್ಧನ ಕಾಲದಲ್ಲಿ ಬದುಕಿದ್ದ ಬೌದ್ಧಿನಿಯರ ಅನುಭವ ಕಥನ ಥೇರಿ ಗಾಥದಲ್ಲಿ ದಾಖಲಾಗಿದೆ.
ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯವನ್ನು ಸಾಧಿಸಲು ಪ್ರಯತ್ನಿಸಿದವರು ಸಿಖ್ ಧರ್ಮಗುರು ನಾನಕ್. ಮಾನವ ಭ್ರಾತೃತ್ವ, ಪ್ರೇಮ ಸಹನೆಗಳ ಸಂದೇಶಗಳನ್ನು ಪರಿಚಯಿಸಿದ ಇವರು ಎಲ್ಲ ಮಾನವರು ಒಬ್ಬ ದೇವನ ಸಂತತಿ ಎಂದು ನಂಬಿದವರು. ಇವರು ದೇವರ ನಾಮಸ್ಮರಣೆ ಮಾಡುವ ಒಂದು ಕ್ರಮ ಭಜನ್. ದಾದು ದಯಾಳ್‌ರಂತಹ ಸಂತರು ಭಕ್ತಿಯನ್ನು ಸಾಮಾಜಿಕ ಚಳುವಳಿಯಾಗಿ ಪರಿಗಣಿಸಿ ಸೇವೆಗೆ ವಿಸ್ತರಿಸಿದರು, ಅಹಿಂಸೆಯಲ್ಲಿ ನಂಬಿಕೆಯಿರುವ ಈ ಸಮುದಾಯ, ಸಾಮಾಜಿಕ ಸಮಾನತೆ ಸಾರಲು ಸಮುದಾಯದ ಅಡುಗೆಮನೆ ಸಾಮೂಹಿಕ ಭೋಜನ ವ್ಯವಸ್ಥೆ ಬೇಕು ಎಂದು ಮನಗಂಡಿತು. ಈ ಹಿನ್ನೆಲೆ ಯಲ್ಲಿ ‘ಗುರು ಕಾ ಲಂಗರ್ʼ ಇವರ ಸ್ಥಾಪಿತ ಸಂಸ್ಥೆ. ಇದು ವಾಯುವ್ಯ ಭಾರತದಿಂದ ಪ್ರಾರಂಭವಾಗಿ ಸಿಖ್ ಸಮುದಾಯಗಳು ಕಂಡುಬರುವ ಎಲ್ಲೆಡೆ ವಿಸ್ತರಿಸಿತು. ಸಿಖ್ ಜನಾಂಗದವರಲ್ಲಿ ಸಾಮಾಜಿಕ ಸೇವಾ ಪರಿಕಲ್ಪನೆಗಳಿಗೆ ನಾಂದಿ ಹಾಡಿತು.
ಸೂಫಿ ಸಂತರು ಜಾತ್ಯತೀತ ಸಮಾಜದ ತಾಯಿಬೇರಾಗಿ, ಸಾಮರಸ್ಯದ ಮಂತ್ರ ಶತ ಶತಮಾನಗಳಿಂದ ಜಪಿಸುತ್ತ ಬಂದಿದ್ದಾರೆ. ದೇವರೊಂದಿಗೆ ನೇರ ಪ್ರೀತಿಯ ಸಂಬಂಧ ಬೆಸೆಯುವ ಗುರಿಹೊಂದಿರುವ ಈ ಸಂತರು ಭಕ್ತಿ ಪ್ರೀತಿ ಸರಳತೆ ಮಾನವೀಯತೆಯ ಸಂದೇಶಗಳನ್ನು ತಮ್ಮ ದೋಹಾಗಳಲ್ಲಿ ಸಾರುತ್ತಾರೆ. ಗಂಭೀರ ಭಾಷಣಗಳಿಗಿಂತ, ವೈಚಾರಿಕ ಬರಹಗಳಿಗಿಂತ ಇವು ಬೀರುವ ಪರಿಣಾಮ ಮಹತ್ತರವಾದದ್ದು.
ಭಕ್ತಿ ಪಂಥವು ಸೇವೆಯ ಉದ್ದೇಶಕ್ಕಾಗಿ ದೇವಸ್ಥಾನ, ಗುರು ಶಾಲೆ ಅಥವಾ ಸಮುದಾಯಭವನಗಳಿವೆ ಎಂದು ತಿಳಿದಿತ್ತು. ಭಾರತದಲ್ಲಿ ದೇವಾಲಯ, ಮಠ, ಮಂದಿರಗಳು, ಚರ್ಚ್, ಮಸೀದಿಗಳು ನೈಸರ್ಗಿಕ ವಿಕೋಪದ ನಂತರ ಸಂತ್ರಸ್ತರಿಗೆ ಪರಿಹಾರ, ಬಡ ಮತ್ತು ಕನಿಷ್ಠ ರೈತರಿಗೆ ಸಹಾಯ ಮಾಡುವುದು, ಬಡವರಿಗೆ ಮನೆಗಳನ್ನು ನೀಡುವುದು, ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್… ಇತ್ಯಾದಿ ಸೇವಾ ಕೈಂಕರ್ಯ ಕ್ಕೆ ತೊಡಗಿಕೊಳ್ಳುವುದು ಇವತ್ತಿಗೂ ಮಾಡುತ್ತಿದೆ.
ತಾಯಿ ಪುತ್ತಳಿ ಭಾಯಿಯ ಭಜನೆಗಳ ಪ್ರಭಾವ ಮಹಾತ್ಮಗಾಂಧಿಯವರ ಮೇಲೆ ಬೀರಿದ ಪರಿಣಾಮ ಅದ್ಭುತವಾದದ್ದು. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿ ಇರಿಸಿದ ಗಾಂಧಿ “ನಗು ಮತ್ತು ಸಂಗೀತ ಇರದೆ ಹೋಗುತ್ತಿದ್ದರೆ ಈ ಬದುಕಿನ ಜಂಜಾಟಗಳಿಂದ ನಾನು ಸತ್ತೆ ಹೋಗುತ್ತಿದ್ದೆ” ಎಂದಿದ್ದರು. ತಾವು ಹುಟ್ಟು ಹಾಕಿದ ಆಶ್ರಮಗಳಲ್ಲಿ ಎಲ್ಲೆಡೆ ಮುಸ್ಸಂಜೆಯ ಪ್ರಾರ್ಥನಾ ಸಭೆಗಳಲ್ಲಿ ಭಜನೆಗಳನ್ನು ತಪ್ಪದೆ ಹಾಡುವ ವ್ಯವಸ್ಥೆ ಮಾಡಿದ್ದರು. ತನ್ನ ಬದುಕೇ ತನ್ನ ಸಂದೇಶ ಎಂದಿದ್ದ ಗಾಂಧಿಯವರ ನೆಚ್ಚಿನ ಭಜನೆಗಳಲ್ಲಿ ಒಂದಾದ ‘ವೈಷ್ಣವ ಜನತೋ’ 15ನೇ ಶತಮಾನದ ಗುಜರಾತಿ ಸಂತ ಕವಿ ನರಸಿಂಹ ಮೆಹ್ತಾ ಅವರ ರಚನೆ. ಇದು ಮಾನವೀಯತೆ, ಪರಾನುಭೂತಿ, ಸತ್ಯಸಂಧತೆ ಯ ಸಾರ್ವಕಾಲಿಕ ಮಹತ್ವವನ್ನು ಸಾರುವ ಭಜನೆ. ಸಂತ ತುಳಸಿದಾಸರ ರಾಮಚರಿತ ಮಾನಸದ “ರಘುಪತಿ ರಾಘವ ರಾಜಾರಾಮ್ ಈಶ್ವರ ಅಲ್ಲಾ ತೇರೇನಾಮ್ ಸಬುಕೋ ಸನ್ಮತಿ ದೇ ಭಗವಾನ್….” ಸರ್ವ ಧರ್ಮ ಸಮಭಾವ ತತ್ವವನ್ನು ಪ್ರತಿಪಾದಿಸುವ ಭಜನೆ ಇನ್ನೊಂದು ಗಾಂಧಿಯ ಅಚ್ಚು ಮೆಚ್ಚಿನ ಭಜನೆ. ಇಂತಹ ಭಜನೆಗಳು ನಿತ್ಯದ ಬದುಕನ್ನು ಋಜು ಮಾರ್ಗದಲ್ಲಿ ನಡೆಯಲು ಹಚ್ಚಿ ಆತ್ಮಾವಲೋಕನಕ್ಕೆ ಅನುವು ಮಾಡಿಕೊಡುತ್ತ ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುತ್ತವೆ. ಗಾಂಧಿ ಆಶ್ರಮಗಳಲ್ಲಿ ಇಂದಿಗೂ ಮುಸ್ಸಂಜೆಯ ಪ್ರಾರ್ಥನಾ ಸಭೆಗಳು ನಡೆಯುತ್ತಿರುತ್ತದೆ. ಇಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಸಾರುವ ಮಾನವ ಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ರಚನೆಗಳನ್ನು, ಭಜನೆಗಳನ್ನು ಅಲ್ಲಿಗೆ ಭೇಟಿ ನೀಡುವ ವಿವಿಧ ಭಾಷೆ, ಜಾತಿ, ಮತ, ಧರ್ಮಕ್ಕೆ ಸೇರಿದ ಪ್ರವಾಸಿಗಳು ಬಂದು ತಂಡವಾಗಿ ಹಾಡುತ್ತಾರೆ. ಉಳಿದವರು ಮೌನವಾಗಿ ಕುಳಿತು ಆಲಿಸುತ್ತಾರೆ. ಸಾಧ್ಯವಾದರೆ ಧ್ವನಿಗೂಡಿಸುತ್ತಾರೆ.
ಕೆಲವು ವರ್ಷಗಳ ಹಿಂದೆ ನಾವು ಮಹಾರಾಷ್ಟ್ರದಲ್ಲಿರುವ ವಾರ್ಧದ ಸೇವಾ ಗ್ರಾಮ ಆಶ್ರಮದಲ್ಲಿ ನಾವು ಮಹಿಳೆಯರು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಅಂಗವಾಗಿ ಒಟ್ಟುಗೂಡಿದ್ದೆವು. ಅಲ್ಲಿ ಕಳೆದ ಎರಡು ದಿನವೂ ಗಾಂಧಿ ಕುಟೀರದ ವಿಸ್ತಾರ ಬಯಲಿನ ಅಂಗಳದಲ್ಲಿ ಮುಸ್ಸಂಜೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದೆವು. ಆ ಹೊತ್ತು ಹಾಡಿದ ಭಜನೆಗಳಲ್ಲಿ ವೈವಿದ್ಯಮಯ ಭಾರತದ ಬಹು ಭಾಷೆಗಳಿತ್ತು. ನಾವು ಕನ್ನಡ ಪದ ಹಾಡಿದ್ದೆವು. ಡಾ. ಎಚ್. ಎಸ್. ಅನುಪಮಾ ಅವರು ಪ್ರಾರಂಭಿಸಿ ನಾವು ಜೊತೆಯಾಗಿ ಭಜನೆಯಲ್ಲಿ ಹಾಡಿದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರ “ನನ್ನ ಎಲುಬಿನ ಹಂದರದೊಳಗೊಂದು ಮಂದಿರವಿದೆ ಅಲ್ಲಿ ಉಚ್ವಾಸ ನಿಚ್ವಾಸಗಳ ಓಂಕಾರವಿದೆ….” ಕವಿತೆ ಆ ವಾತಾವರಣದಲ್ಲಿ ಮೊಳಗಿಸಿದ ರಿಂಗಣ ಗಾಂಧಿ ಸದಾ ಬಯಸಿದ್ದ ಸಮನ್ವಯತೆ, ಸಾಮರಸ್ಯ, ಸಹಬಾಳ್ವೆಯ ಮಂತ್ರ ಆಗು ಮಾಡಲು ಸಾಧ್ಯವಿದೆ ಎನ್ನುವ ಧನಾತ್ಮಕ ಭಾವ ಅಲ್ಲಿದ್ದ ಎಲ್ಲರಲ್ಲೂ ಮೂಡಿಸಿತ್ತು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಅರಳಿದ ವಾರ್ಧದ ಸೇವಾ ಗ್ರಾಮಾಶ್ರಮದ ಭೇಟಿ ನಮಗೆ ನೀಡಿದ ಜೀವನ ದರ್ಶನ ಅಪೂರ್ವವಾದದ್ದು.
ಜೀವನ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ, ಮಕ್ಕಳಲ್ಲಿ ನೀತಿ ಕಥೆಗಳ ಮೂಲಕ ಬಿತ್ತುವುದಕ್ಕಿಂತಲೂ ಪರಿಣಾಮಕಾರಿಯಾದ ಮಾಧ್ಯಮವೆಂದರೆ ಭಜನೆ ಕೀರ್ತನೆಗಳು. ಈ ಪರಂಪರೆಯ ಕೊಂಡಿಯಲ್ಲಿ ಸದ್ಯ ನಮ್ಮ ನಡುವಿರುವ ಕೀರ್ತನಕಾರರಾದ ಮೊದಲು ಸುಬ್ರಮಣ್ಯ ಸ್ವಾಮೀಜಿಯಾಗಿದ್ದು ನಂತರ ಸಂಸಾರಿಯಾದ ವಿದ್ಯಾಭೂಷಣರು ಮುಖ್ಯರು. ಭಜನೆ ಕೀರ್ತನೆಗಳಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಈ ಮಹಾನುಭಾವರ ಕೀರ್ತನೆಗಳಿಗೆ ಜನಸಾಮಾನ್ಯರು, ಹಿರಿಯ ಮುತ್ಸದ್ದಿಗಳೂ ಫಿದಾ ಆದವರೇ. ಇಂದು ತಬಲ, ದೋಲಕ್, ತಂಬೂರಿ, ತಾಳ ವಾದ್ಯ, ಸಣ್ಣ ಕರತಾಳ, ಹಾರ್ಮೋನಿಯಂ ಇತ್ಯಾದಿ ವಿವಿಧ ಸಂಗೀತ ಸಾಧನಗಳ ಬಳಕೆ ಭಜನೆ, ಕೀರ್ತನೆಗಳಿಗೆ ಸಂಗೀತ ಕಚೇರಿಗಳ ಘನತೆ ಗಂಭೀರತೆಯನ್ನು ತಂದಿದೆ.
ಆತ್ಮ ಪರಮಾತ್ಮ ಪರಿಕಲ್ಪನೆಗಳಿಲ್ಲದ ಹರಿ ಹರ ಬೇಧವಿಲ್ಲದೆ ತತ್ವ ಸಿದ್ಧಾಂತಗಳ ಹಂಗಿಲ್ಲದೆ ಬದುಕನ್ನು ಬಂದಂತೆ ಸ್ವೀಕರಿಸುತ್ತ ನಡೆವವರು ಜನಸಾಮಾನ್ಯರು. ಇವರಿಗೆ “ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಯ್ಯಾ. ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಹೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದ ಬಸವಣ್ಣನೂ ಪ್ರಿಯ. ಕಾಯಕವೇ ಕೈಲಾಸ ಎನ್ನುವ ಜೀವನ ದರ್ಶನಕ್ಕಿಂತ ಹಿರಿದಾದುದು ಯಾವುದಿದೆ ಅಲ್ಲವೇ.

ಧರ್ಮ ಜೀವನವಾಗದೆ ಮಾನವೀಯ ಮೌಲ್ಯಗಳೇ ಜೀವನ ಧರ್ಮವಾದಾಗ ಪ್ರೀತಿ, ಶಾಂತಿ, ಸಮಾನತೆ, ಸಾಮರಸ್ಯದ ನಡಿಗೆ ಬದುಕನ್ನು ಬೆಳಕಾಗಿಸಬಹುದು. ಈ ಜಗತ್ತಿನಲ್ಲಿ ಆಗಿ ಹೋದ ಮಹನೀಯರು, ದಾರ್ಶನಿಕರು ಜಾತಿ, ಮತ, ವರ್ಣ, ವರ್ಗ ತಾರತಮ್ಯ ಅಳಿಸಿ ಲಿಂಗಸಮಾನತೆಯ ತತ್ವಗಳನ್ನು ಜಾತ್ಯಾತೀತ ನೆಲೆಯಲ್ಲಿ ಮಾನವೀಯತೆಯ ಹೆಣಿಗೆಯಾಗಿ ಬೆಸೆಯಲು ಪ್ರಾರ್ಥನೆ, ಭಜನೆಗಳಿಂದ ಸಾಧ್ಯ ಎನ್ನುವುದನ್ನು ಬಹಳಷ್ಟು ಹಿಂದೆಯೇ ಮನಗಂಡಿದ್ದರು. ಅನುಭವವು ಅನುಭಾವವಾದಾಗ ಅಧ್ಯಾತ್ಮದ ಹಂತ ಪಡೆಯುತ್ತದೆ. ಜನರ ಬಾಯಿಂದ ಬಾಯಿಗೆ ಹರಡುವ ಭಜನೆ, ಕೀರ್ತನೆ, ದೇವರ ನಾಮಗಳು ಮೌಖಿಕ ಪರಂಪರೆಯಾಗಿ ಈ ನೆಲದ ತಾಯಿ ಬೇರಾಗಿ ಸಾಮರಸ್ಯದಿಂದ ಸಮಾಜವನ್ನು ಕಾದ ಶಕ್ತಿ. ಆದ್ದರಿಂದಲೇ ವರ್ತಮಾನದ ಬಿಕ್ಕಟ್ಟುಗಳನ್ನು ಮೀರಿ ಸಮಾಜವನ್ನು ಮುನ್ನಡೆಸುವ ಶಕ್ತಿ ಎಲ್ಲ ಧರ್ಮಗಳ ದೇವರ ನಾಮ, ಕೀರ್ತನೆ, ಭಜನೆಗಳಿಗೆ ಇವೆ. ಆದರೆ ಇವುಗಳಿಗೆ ಪ್ರಜ್ಞಾವಂತ ಮನಸ್ಸುಗಳಿಂದ ಕಾಯಕಲ್ಪ ಬೇಕಾಗಿದೆ

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.
