Advertisement
ಮರೆಯಾದ ಮತ್ತಷ್ಟು ಕೆರೆಗಳ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಮರೆಯಾದ ಮತ್ತಷ್ಟು ಕೆರೆಗಳ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಈ ಹಳ್ಳದಲ್ಲಿ ಅಥವಾ ಕೆರೆಯಲ್ಲಿ ನೀರು ಇದ್ದದ್ದು ಈಗ ಬದುಕಿರುವವರಲ್ಲಿ ಯಾರೂ ನೋಡಿದ ಹಾಗೇ ಇಲ್ಲ. ಒಂದು ಮಾಹಿತಿ ಪ್ರಕಾರ ೧೯೩೦ ರಲ್ಲಿ ಇಲ್ಲಿಗೆ ನೀರು ಬರುವುದು ನಿಂತು ಹೋಯಿತು. ಯಾತಕ್ಕೆ ನಿಂತು ಹೋಯಿತು, ಯಾರು ನಿಲ್ಲಿಸಿದರು ಎನ್ನುವುದನ್ನು ಪತ್ತೆ ಮಾಡಬೇಕು. ಅರವತ್ತರ ದಶಕದಲ್ಲಿ ಇಲ್ಲಿ ಈಗಿನ ಬೆಂಗಳೂರು ಬಸ್ ಸ್ಟಾಂಡಿನ ಜಾಗದಲ್ಲಿ ಕಾಂಗ್ರೆಸ್ ಎಕ್ಸಿಬಿಷನ್ ಅಂತ ಒಂದು ಎಕ್ಸಿಬಿಷನ್ ಆಗ್ತಾ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

ಬೆಂಗಳೂರು ವಿಸ್ತಾರ ಆದಂತೆ ಅದರ ಅಭಿವೃದ್ಧಿಯೂ ಸಹ ಅದೇ ಪ್ರಮಾಣದಲ್ಲಿ ಆಗಿದೆಯೇ ಅಂದರೆ ಅದಕ್ಕೆ ಉತ್ತರ ಬಹುತೇಕ ಇಲ್ಲ ಎಂದೇ ಹೇಳಬೇಕು. ನೀರಿನ ಸಮಸ್ಯೆ ಪ್ರತಿದಿವಸ ದೊಡ್ಡದಾಗುತ್ತಾ ಹೋಗಿದೆ. ಒಳಚರಂಡಿ ವ್ಯವಸ್ಥೆ ಇನ್ನೂ ಅಪೇಕ್ಷಿತ ಮಟ್ಟ ತಲುಪಿಲ್ಲ. ಇವು ಸಮಯ ತಗೊಳ್ಳತ್ತೆ, ಹೋಗಲಿ ನಮ್ಮ ಕಚೇರಿಗಳು ತಮ್ಮ ಕಾರ್ಯ ವಿಧಾನ ಹೇಗೆ ಕಾಪಾಡಿಕೊಂಡಿವೆ ಅಂದರೆ ಅದೇ ಒಂದು ಬಾರಿ ದೊಡ್ಡ ಕತೆ. ಅದಕ್ಕೆ ಹಾರುವ ಮೊದಲು ಬೆಂಗಳೂರು ಬಸ್ ಸ್ಟ್ಯಾಂಡ್ ಜಾಗ ಮೊದಲು ಹೇಗಿತ್ತು ಅಂತ ಹೇಳುತ್ತೇನೆ ಅಂತ ನಿಮಗೆ ಹಿಂದೆ ಯಾವಾಗಲೋ ಹೇಳಿದ್ದ ನೆನಪು. ಈಗ ಅದಕ್ಕೆ ಬರುತ್ತೇನೆ. ಮುಂದೆ ಅದರ ಬಗ್ಗೆ ಅಂದರೆ ನಮ್ಮ ಕಚೇರಿಗಳ ಕಾರ್ಯ ವಿಧಾನ ಆಗ ಹೇಗಿತ್ತು ಈಗ ಹೆಂಗಿದೆ ಅಂತ ನನ್ನ ಚಿಂತನೆ ಹರಿಸುತ್ತೇನೆ. ಮತ್ತೆ ಬಸ್ ಸ್ಟ್ಯಾಂಡ್ ಕಡೆಗೆ….

ಶ್ರೀರಾಮ ಪುರದ ಓವರ್ ಬ್ರಿಡ್ಜ್ ಬಗ್ಗೆ ಹೇಳುತ್ತಾ ಅಲ್ಲಿನ ಒಂದು ಆಂಜನೇಯನ ದೇವಸ್ಥಾನದ ಬಗ್ಗೆ ಹೇಳಿದ್ದೆ. ಆಂಜನೇಯ ದೇವಸ್ಥಾನ ಎದುರಿನ ಓವರ್ ಬ್ರಿಡ್ಜ್ ಹಾದರೆ ಎಡಗಡೆಗೆ ಒಂದು ರಸ್ತೆ ನೇರ ಮಲ್ಲೇಶ್ವರ ರೈಲು ನಿಲ್ದಾಣಕ್ಕೆ. ಎಡಗಡೆ ತಿರುಗದೆ ನೇರ ನಡೆದರೆ ಅದು ಸೀದಾ ನ್ಯೂ ಕೃಷ್ಣ ಭವನ ಹೋಟೆಲ್‌ಗೆ ಬಿಡುತ್ತೆ. ಈ ನ್ಯೂ ಕೃಷ್ಣ ಭವನ ಈಗ ಒಂದು ಎರಡು ತಿಂಗಳ ಹಿಂದೆ ತನ್ನ ಸುದೀರ್ಘ ವ್ಯವಹಾರ ಸ್ಥಗಿತಗೊಳಿಸಿತು. ಅದಕ್ಕೆ ಮೊದಲು ಅಂದರೆ ಎಂಬತ್ತರ ದಶಕದಿಂದ ಸುಮಾರು ಮೂರು ದಶಕಗಳ ಕಾಲ, ವಾರಕ್ಕೆ ಒಂದೆರೆಡು ಸಲವಾದರೂ ಇಲ್ಲಿಗೆ ಬಂದು ನಮ್ಮ ಕಪ್ಪ ಒಪ್ಪಿಸುತ್ತಿದ್ದೆವು. ಎರಡು ವರ್ಷದ ಹಿಂದೆ ಹೋಗಿದ್ದಾಗ ಮಧ್ಯಾಹ್ನವಾದರೆ ರಾಗಿ ಮುದ್ದೆ ಊಟ ಸಹ ಸಿಗುತ್ತಿತ್ತು ಅಲ್ಲಿ. ಮನೆಯಲ್ಲಿ ಮುದ್ದೆ ಮಾಡಲು ಬರದ, ಬಂದರೂ ಮಾಡದಿರುವ ಸುಮಾರು ಸಂಸಾರ ಇಲ್ಲಿ ಬಂದು ಮುದ್ದೆ ಉಣ್ಣುತ್ತಿದ್ದರು. ಅಲ್ಲಿನ ತಿಂಡಿ ತಿನಿಸೂ ಸಹ, ನಮ್ಮ ಕೈಗೆ, ಜೇಬಿಗೆ ಹೊರೆ ಆಗದಂತಿತ್ತು. ಸುಮಾರು ಮದುವೆ ಸಮಾರಂಭದ ಊಟ ಅಲ್ಲಿನ ಹಾಲ್‌ನಲ್ಲಿ ಮಾಡಿದ್ದೇನೆ. ಸುಮಾರು ನೂರು ಜನ ಕೂತು ಉಣ್ಣಬಹುದಾದ ಹಾಲ್ ಇತ್ತು. ನನ್ನ ಸಹೋದ್ಯೋಗಿ ಮತ್ತು ಸಾಹಿತ್ಯ ಮಿತ್ರೆ, ನಾವೆಲ್ಲರೂ ಪ್ರೀತಿಯಿಂದ ಅಕ್ಕ ಎಂದು ಕರೆಯುವ ಸಾಹಿತಿ ಶ್ರೀಮತಿ ಲಲಿತಾ ಉರುಫ್ ಭಾಷ್ಯಂ ತನುಜೆ ಅವರ ಮದುವೆ ಊಟ ಇಲ್ಲೇ ಮಾಡಿದ್ದು!

ಹೋಟೆಲ್ ಪಕ್ಕ ಒಂದು ಪಾರ್ಕು. ಅದರ ಹೆಸರು ಈ ಲೇಖನ ಬರೆದಾಗ ಮರೆತಿದ್ದೆ. ಈ ಲೇಖನ ಮತ್ತೆ ಓದ ಬೇಕಾದರೆ, ಕಾಗುಣಿತ ವ್ಯಾಕರಣ ಸರಿ ಪಡಿಸಬೇಕಾದರೆ ನೆನಪಿಗೆ ಬಂತು. ಅದರ ಹೆಸರು ಭಾಶ್ಯಂ ಪಾರ್ಕ್ ಅಂತ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಾಂಗ್ರೆಸ್ ನಾಯಕ ಭಾಶ್ಯಮ್ ಅವರ ಹೆಸರಲ್ಲಿ ಇದೊಂದು ಪಾರ್ಕು ಮತ್ತು ರಾಜಾಜಿನಗರದಲ್ಲಿ ಒಂದು ಸರ್ಕಲ್ ಇದೆ. ಬಹುಶಃ ಸ್ಥಳೀಯ ನಾಯಕರ ಹೆಸರಲ್ಲಿ ಆ ಕಾಲದಲ್ಲಿ ಇದ್ದ ಕೆಲವೇ ಪಾರ್ಕು, ಸರ್ಕಲ್ಲುಗಳಲ್ಲಿ ಇವೂ ಸಹ ಸೇರಿದೆ. ಅಂದ ಹಾಗೆ ಆಗ ಬೆಂಗಳೂರಿನಲ್ಲಿ ಸ್ಥಳೀಯ ನಾಯಕರ ಹೆಸರುಗಳು ಎಲ್ಲೋ ಒಂದೆರೆಡು ಅಪವಾದ ಹೊರತುಪಡಿಸಿ ಚಾಲ್ತಿಯಲ್ಲಿ ಇರಲಿಲ್ಲ! ಆಗಿನ ಮತ್ತು ಈಗಿನ ನಾಯಕರ ಹೆಸರು ಇರುವ ಯಾವ ಬಡಾವಣೆ ಆಗಲಿ ಸರ್ಕಲ್ ಆಗಲಿ ನೆನಪಿಗೆ ಊಹೂಂ ಊಹೂಂ ಊಹೂಂ ಖಂಡಿತ ನೆನಪು ಆಗ್ತಾ ಇಲ್ಲ. ಈಗಲೂ ಅಷ್ಟೇ ಯಾವುದಾದರೂ ನಮ್ಮ ರಾಜ್ಯದ ಖ್ಯಾತ ರಾಜಕಾರಣಿ ಹೆಸರು ನಮ್ಮ ಮನಸಿನಲ್ಲಿ ಉಳಿಯುವ ಹಾಗೆ ಎಲ್ಲೂ ಇಲ್ಲ. ಆದರೆ ಕಾಮರಾಜ್, ಜಯಪ್ರಕಾಶ ನಾರಾಯಣ, ಇಂದಿರಾ ಗಾಂಧಿ, ಸಂಜಯ ಗಾಂಧಿ, ರಾಜೀವ ಗಾಂಧಿ, ಕಾಂಶಿರಾಂ, ಜಗಜೀವನ ರಾಂ, ರಾಜಾಜಿ… ಮೊದಲಾದವರ ಹೆಸರು ಹೊತ್ತು ನಮ್ಮ ಬಡಾವಣೆಗಳು ಮತ್ತು ಇಲ್ಲಿನ ಸರ್ಕಾರೀ ಆಸ್ಪತ್ರೆಗಳು ಬೀಗುತ್ತವೆ! ಶಾಸ್ತ್ರಕ್ಕಾದರೂ ಒಂದು ನಿಜಲಿಂಗಪ್ಪ, ಒಂದು ದೇವರಾಜ ಅರಸು, ಒಂದು ಸಿದ್ದರಾಮಯ್ಯ, ಒಂದು ಡಿ ಕೆ ಶಿವಕುಮಾರ.. ಅಂತಹ ಹೆಸರಿನ ಆಸ್ಪತ್ರೆ ಪಾರ್ಕು ಬಡಾವಣೆ ನಮ್ಮ ಕಣ್ಣಿಗೆ ಕಾಣಿಸುತ್ತದೆಯೇ….! ನಮ್ಮ ನಾಯಕರಿಗೆ ಹೀಗೆ ಮೋಸ ಆಗಬಹುದೇ? ನಮ್ಮ ಆಗಿನ ಸ್ವಾತಂತ್ರ್ಯ ಪೂರ್ವದ ದಾಸ್ಯದ ಮೈಂಡ್ ಸೆಟ್ ಹಾಗೇ ಮುಂದುವರೆದಿದೆ ಅಂತ ಯಾರಿಗಾದರೂ ಅನಿಸಲೇ ಬೇಕು ತಾನೇ? ಇದು ಹಾಳಾಗಿ ಹೋಗಲಿ ನಮ್ಮ ರಾಜ್ಯದ ಒಬ್ಬನೇ ಒಬ್ಬ ನಾಯಕನ ಹೆಸರು ಬೇರೆ ರಾಜ್ಯದ ಯಾವುದಾದರೂ ನಗರದ ಗಲ್ಲಿಗೋ ಬಡಾವಣೆಗೆ ಅಥವಾ at least ಒಂದು ದನದ ಆಸ್ಪತ್ರೆಗಾದರೂ ಇಟ್ಟಿದ್ದಾರಾ..? ಯಾಕೆ ನಮ್ಮ ಹೋರಾಟಗಾರರು ಈ ಕಣ್ಣಿಗೆ ರಾಚುವ ಸಾಮಾಜಿಕ ಅನ್ಯಾಯ ಅಥವಾ ಶೋಷಣೆ ಬಗ್ಗೆ ಸೊಲ್ಲು ಎತ್ತಿಲ್ಲ? ಈ ಪ್ರಶ್ನೆ ನನ್ನನ್ನು ಸುಮಾರು ವರ್ಷಗಳಿಂದ ಕಾಡುತ್ತಾ ಬಂದಿದೆ. ಈ ಸಂಗತಿ ನನ್ನ ಆಪ್ತ ಹೋರಾಟಗಾರರೊಂದಿಗೆ ಹಂಚಿಕೊಂಡೆ. ಆತ ಬಿದ್ದು ಬಿದ್ದು ನಕ್ಕ. ಅಯ್ಯೋ ನಿಮ್ಮ ಜ್ಞಾನಕ್ಕೆ ಇಷ್ಟು… ಅಂತ ಮತ್ತೆ ನಕ್ಕ. ಕುಮಾರ ಸ್ವಾಮಿ ಲೇಔಟು ಯಾರ ಹೆಸರಲ್ಲಿ ಇಟ್ಟವ್ರೆ ಗೊತ್ತಾ….. ಅಂತ ಮತ್ತೆ ನನ್ನ ಮೌಢ್ಯಕ್ಕೆ ಮತ್ತಷ್ಟು ನಕ್ಕ…

ಮತ್ತೆ ಭಾಷ್ಯಂ ಪಾರ್ಕಿಗೆ..
ಆಗ ಭಾಷ್ಯಂ ಪಾರ್ಕಿನ ತುಂಬಾ ಮರಗಳು ಇದ್ದವು ಮತ್ತು ಒಂದು ತೆರೆದ ರಂಗ ಮಂಟಪ (ಇದಕ್ಕೆ open air theatre ಎಂದು ಹೆಸರಿಟ್ಟು ಕರೆಯುತ್ತಾ ಇದ್ದರು!) ಇತ್ತು. ಈ ಮಂಟಪದಲ್ಲಿ ಸಂಜೆಯ ಹೊತ್ತು ಅನೇಕ ರಾಜಕೀಯ ಭಾಷಣಗಳು ಆಗ್ತಾ ಇದ್ದವು. ರಾಜಕೀಯ ಭಾಷಣಗಳು ಅಂದರೆ ಆಗ ನನಗೇನೋ ವಿಶೇಷ ಆಕರ್ಷಣೆ. ಯಾವುದೇ ರಾಜಕೀಯ ಭಾಷಣ ಇರಲಿ, ಯಾವುದೇ ಪಕ್ಷದ್ದು ಆದರೂ ಸರಿ ನಾನು ಅಲ್ಲಿ ಹಾಜರು. ಸ್ಥಳೀಯ ನಾಯಕರಾದ ಕಾಮ್ ಸೂರಿ, ಕಾಮ್ ಎಂ ಎಸ್ ಕೃಷ್ಣನ್, ಪಿ. ರಾಮ್ದೇವ್, ರಾಮಕೃಷ್ಣ ಹೆಗಡೆ ಅವರಿಂದ ಹಿಡಿದು ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಾಜಪೇಯಿ, ಮುರಳಿ ಮನೋಹರ ಜೋಷಿ, ಜಾರ್ಜ್ ಫರ್ನಾಂಡಿಸ್.. ಮೊದಲಾದ ನಾಯಕರ ಭಾಷಣಗಳನ್ನು ಐದಡಿ, ಹತ್ತಡಿ ಅಷ್ಟು ಸಮೀಪ, ಹತ್ತಿರ ನಿಂತು ಕೇಳಿದ್ದೀನಿ. (ಕಾಮ್ ಅಂದರೆ ಕಾಮ್ರೇಡ್ ಅಂತ. ಕಮ್ಯುನಿಸ್ಟ್ ಗೆಳೆಯರು ಪರಸ್ಪರ ಸಂಬೋಧಿಸುವುದು ಕಾಮ್ರೇಡ್ ಯಾ ಕಾಮ್ ಅಂತ). ಜೆ ಪೀ ಜಯಪ್ರಕಾಶ ನಾರಾಯಣ ಅವರ ಭಾಷಣ ಅಂತೂ ಎರಡು ಅಡಿ ಹತ್ತಿರದಿಂದ ಗಾಂಧಿ ಭವನದಲ್ಲಿ ಕೇಳಿದ್ದು ಇನ್ನೂ ನನಗೆ ಕಣ್ಣಿಗೆ ಕಟ್ಟಿದ ಹಾಗಿದೆ. ಕೆಲವು ಸಲ ಅವರ ಅಂದರೆ ನೇತಾರರ ಮೈ ಕೈ ನನಗೆ ತಗುಲುವಷ್ಟು ಸಮೀಪ ಇದ್ದೇನೆ. ಇಂದಿರಾಗಾಂಧಿ ಅವರು ಪ್ರಧಾನ ಮಂತ್ರಿ ಆಗುವ ಮೊದಲು ಅವರು ಸಚಿವೆ ಆಗಿದ್ದಾಗ ಅವರ ಭಾಷಣ ಕೇಳಿದ್ದು. ಆಗ ರಾಜಕೀಯದವರಿಗೆ ಈಗಿರುವಷ್ಟು ಸೆಕ್ಯುರಿಟಿ ಇರಲಿಲ್ಲ. ಆಗ ಇವರೇ ನಮಗೆ ಭಗವಂತಾಗಳು. ಅವರಿಗೆ ಅಷ್ಟು ಜೀವ ಭಯ ಇರಲಿಲ್ಲ. ಈಗ ಜೀವ ಭಯ ಹೆಚ್ಚು ಮತ್ತು ಅದೇ ರೀತಿ ಸೆಕ್ಯುರಿಟಿ ಸಹ. ಜೀವಭಯಕ್ಕೂ ಸುತ್ತ ಇರುವ ಸೆಕ್ಯುರಿಟಿಗಳಿಗೂ ಡೈರೆಕ್ಟ್ ಪ್ರೋಪಾರ್ಷನ್ ಇದೆಯಂತೆ. ಕಡಿಮೆ ಸೆಕ್ಯುರಿಟಿ ಅಂದರೆ ಕಡಿಮೆ ಭಯ. ಹೆಚ್ಚು ಸೆಕ್ಯುರಿಟಿ ಅಂದರೆ ಹೆಚ್ಚು ಭಯ! (ಮೊರಾರ್ಜಿ ದೇಸಾಯಿ ಅವರ ಒಂದು ಮಾತು ನೆನಪಿಗೆ ಬರುತ್ತೆ.. more security is more insecurity) ಈಚಿನ ಒಬ್ಬ ಮೈ ತುಂಬಾ ಗಡ್ಡ ಬಿಟ್ಟಿರೋ ಯೂತ್ ಲೀಡರ್ ಅನ್ನು ಗಮನಿಸಿ. ಹಿಂದೆ ಮುಂದೆ ಒಂದು ಪಟಾಲಂ ಹಿಡಕೊಂಡು ಅವನ ಹಾರಾಟ. ಬಡ್ಡಿ ಮಗ ಇನ್ನೂ ಯೂತ್, ಇನ್ನೂ ಚಿಗುರೆ ಇಲ್ಲ, ಆಗಲೇ ಅವನಿಗೆ ಅಷ್ಟು ಭಯ ಅಂದರೆ ಅವನಿಗೆ ಅಷ್ಟು ಭಯ ಅಂತ. ಒಟ್ಟಾರೆ ಅದು ಹುಟ್ಟಾ ಪುಕ್ಕಲು ಮುಂಡೇದು..! ಸುಮಾರು ಸಣ್ಣ ಪುಟ್ಟ ನಾಯಕರ ಭಾಷಣದ ಚಟ ಹುಟ್ಟಿದ್ದು ಮತ್ತು ಹೆಮ್ಮರವಾಗಿ ಬೆಳೆದದ್ದು ಇಲ್ಲಿ. ಅವರ ಮೊದಲ ಸಾರ್ವಜನಿಕ ತೊದಲ್ನುಡಿ ಇಲ್ಲೇ ಉದ್ಭವ ಆಗಿದ್ದು. ಅದಕ್ಕೆ ಹಾಲು ಹಣ್ಣು ಮುದ್ದೆ ನೀರು ಬೀರು ಗೊಬ್ಬರ ಹಾಕಿ ಉಣಿಸಿ ಬೆಳೆಸಿದ ಜನ ನಾವು! ಶ್ರೀ ಆರ್ ಕೆ ಲಕ್ಷ್ಮಣ್ ಅವರು ಹೇಳುವ ಹಾಗೆ ನಾವು ಮಿಸ್ಟರ್ ಸಿಟಿಜನ್‌ಗಳು, ಅರ್ಥಾತ್ ಶ್ರೀ ಸಾಮಾನ್ಯರು!

ಮತ್ತೊಂದು ತಮಾಷೆ ಈಗ ನೆನಪಿಗೆ ಬಂದಿದ್ದು ಅಂದರೆ ಈ ಭಾಷ್ಯಂ ಪಾರ್ಕ್‌ನಲ್ಲಿ ರಾಜಕೀಯ ಭಾಷಣ, ಆರ್ಕೆಸ್ಟ್ರಾ ಇವೆಲ್ಲಾ ನಡೆದ ಹಾಗೇ ಯಾವುದೂ ಸಾಹಿತ್ಯದ ಕಾರ್ಯಕ್ರಮ ನಡೆದ ನೆನಪೇ ಇಲ್ಲ! ಬಹುಶಃ ರಾಜಕೀಯದವರು ಕಾಲಿಟ್ಟ ಕಡೆ ನಾವು ಕಾಲು ಇಡಲ್ಲ ಅಂತ ಆಗಿನ ಸಾಹಿತಿಗಳು ತೀರ್ಮಾನಿಸಿದ್ದರೋ ಏನೋ…! ಈಗಿನ ಸಾಹಿತಿಗಳು ರಾಜಕಾರಣಿಗಳ ಬಗಳು ಬಗಲು ಕೂಸುಗಳಾಗಿ ಅವತ್ತಿನದನ್ನೂ ಬಡ್ಡಿ ಸಮೇತ ಈಗ ವಸೂಲಿ ಮಾಡ್ತಾ ಇದ್ದಾರೆ! ಒಬ್ಬೊಬ್ಬ ರಾಜಕಾರಣಿ ಹಿಂದೆ ಸಾಹಿತಿಗಳ ದಂಡೇ ಇರ್ತವೆ! ಅವನ ಒಂದೊಂದು ಬಾಲಿಶ ಹೇಳಿಕೆಗಳ ವ್ಯಾಖ್ಯಾನ ಮಾಡುವ ಬುದ್ಧಿಜೀವಿಗಳ ಹಿಂಡ್ ಹಿಂಡು ಇವೆ. ಯಾರೋ ಒಬ್ಬ ತಲೆ ಕೆಟ್ಟ ರಾಜಕಾರಣಿ ಏನೋ ಬುರುಡೆ ಬಿಟ್ಟ ಅನ್ನಿ; ಅವನ ಸಪೋರ್ಟ್‌ಗೆ ಅಂತಲೇ ಒಂದು ಹಿಂಡು ಸಾಹಿತಿಗಳು ಟೌನ್ ಹಾಲ್ ಮುಂದೆ ಸೇರಿ ಸಭೆ ಮಾಡ್ತವೆ! ತಮಾಷೆ ಅಂದರೆ ಇದೇ ಗುಂಪು ಯಾವಾಗಲೂ ಇಂತಹ ಚಟುವಟಿಕೆಗಳ ಹಿಂದೆ ತುಂಬಾ ಸಕ್ರಿಯವಾಗಿರುತ್ತದೆ. ಇದು ತೀರಾ ಈಚಿನ ಬೆಳವಣಿಗೆ. ಪ್ರತಿವಾರ ಟೌನ್ ಹಾಲ್ ಮುಂದೆ ಹೀಗೆ ಸಪೋರ್ಟ್ ಸಭೆ ಒಂದು ರೂಟೀನ್ ಕಾರ್ಯಕ್ರಮ.

ಭಾಷ್ಯಂ ಪಾರ್ಕ್‌ನ ನೆನಪು ಇನ್ನೂ ಆಳವಾಗಿ ಬೇರೂರಿರಲು ಮತ್ತೊಂದು ಕಾರಣ ಅಂದರೆ ನನ್ನ ಸಹೋದ್ಯೋಗಿ ಗೆಳೆಯ, ಕಲಾವಿದ ಶ್ರೀ ಗುರುಲಿಂಗ ಮೂರ್ತಿ ಅವನ ಕ್ಯಾಮೆರಾ ಹೊತ್ತು ತಂದು ನನ್ನ ಹಲವಾರು ಫೋಟೋ ಅಲ್ಲಿ ತೆಗೆದದ್ದು. ಆಗಿನ್ನೂ (೧೯೭೪/೭೫) ಫೋಟೋಶೂಟ್ ಎನ್ನುವ ಹೆಸರು ನಮ್ಮೂರಿನಲ್ಲಿ ಯಾರೂ ಕೇಳಿರಲಿಲ್ಲ. ಗುರು ಖುಷಿಗೆ ನನ್ನನ್ನು ಅಲ್ಲಿ ಇಲ್ಲಿ ಮರದ ಕೆಳಗೆ ಮರದ ಮೇಲೆ ಹೀಗೆ ಎಲ್ಲೆಲ್ಲೋ ಕೂಡಿಸಿ ಯಾವ ಯಾವುದೋ ಆಂಗಲ್‌ಗಳಲ್ಲಿ ಅವನ ಹೊಸಾ ಕ್ಯಾಮೆರಾದಲ್ಲಿ ಫೋಟೋ ತೆಗೆದ. ಒಂದೊಂದು ಫೋಟೋ ತೆಗೆಯಬೇಕಾದರೂ ಅದರ ಆರ್ಟಿಸ್ಟಿಕ್ ಸ್ಕಿಲ್ ಬಗ್ಗೆ, ಲೆನ್ಸ್ ಬಗ್ಗೆ, ಅಪರ್ಚರ್ ಬಗ್ಗೆ ವಿವರವಾಗಿ ಹೇಳಿದ್ದ. ಗುರು ಅವತ್ತು ತೆಗೆದ ಫೋಟೋ ಇನ್ನೂ ನನ್ನ ಬಳಿ ಇದೆ, ಆದರೆ ಮಿಕ್ಕ ವಿವರ ತಲೆಯಿಂದ ಮಾಯವಾಗಿದೆ. ಅದನ್ನು ಅಂದರೆ ಅಂದು ತೆಗೆದ ಫೋಟೋ ಆಲ್ಬಂ ನೋಡುತ್ತಿದ್ದ ಹಾಗೇ ನನ್ನ ಬ್ಯಾಚುಲರ್ ಜೀವನ ಕಣ್ಣಮುಂದೆ ಓಡುತ್ತದೆ. ಹಾಗೇ ಕಣ್ಣಂಚಿನಲ್ಲಿ ಸ್ವತಂತ್ರ ಜೀವನದ ನೆನಪು ಮರುಕಳಿಸಿ ಕಣ್ಣು ತೇವ ಆಗುತ್ತೆ. ಒಂದೆರೆಡು ಹನಿ ಕೆಳಗೂ ಬೀಳುತ್ತೆ. ಬಿಸಿ ತುಪ್ಪ ಹೇಳಿಕೊಳ್ಳಲು ಆಗದ್ದು ಇದು, ನಿಮ್ಮ ಕತೆ ಸಹಾ ಬೇರೆ ಅಲ್ಲ ಅಂತ ನನಗೆ ಗೊತ್ತು.. ಇದು ಹಳ್ಳಕ್ಕೆ ಬಿದ್ದ ಎಲ್ಲಾ ಹುಲು ಮಾನವರ ಕತೆ ಅಂತ ಅಂದುಕೊಳ್ಳಿ! (ಒಂದು ಪಟ್ಟೆ ಪಟ್ಟೆ ಹುಲಿಯ ಅಗಲವಾದ ಮುಖ, ಅದರ ಕಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿದೆ.. ಅದರ ಕೆಳಗೆ ಶೀರ್ಷಿಕೆ “ಹುಲಿ ಅಣ್ಣ ಮದುವೆಗೆ ಮೊದಲ ದಿನಗಳನ್ನು ನೆನಪು ಮಾಡಿಕೊಂಡಿದೆ “. ಇದು, ಈ ಫೋಟೋ ಫೇಸ್ ಬುಕ್‌ನಲ್ಲಿ ಸುಮಾರು ಸಾವಿರಾರು ಸಲ ಕಾಣಿಸಿಕೊಂಡಿದೆ. ಈ ಹುಲಿ ನಾವು ಎಂದು ಎಷ್ಟೋ ಸಲ ಮನಸಿನಲ್ಲಿ ರೋಧಿಸಿದ್ದೇವೆ, ಜೋರಾಗಿ ಹೇಳಿಕೊಳ್ಳಲು ಆಗದೆ ದುಃಖ ಪಟ್ಟಿದ್ದೇವೆ).

ಕೃಷ್ಣ ಭವನ ಎಡಕ್ಕೆ ಹೋದರೆ ಪೂರ್ತಿ ಮಲ್ಲೇಶ್ವರ. ಮಲ್ಲೇಶ್ವರ ಅಂದರೆ ಕನ್ನಡ ಸಾರಸ್ವತ ಲೋಕದ ಹೆಡ್ ಆಫೀಸ್ ಆಗ. ಮಲ್ಲೇಶ್ವರದ ಪ್ರತಿ ಅಡ್ಡ ರಸ್ತೆಯಲ್ಲೂ ಪ್ರತಿ ಮನೆಯಲ್ಲೂ ಒಬ್ಬೊಬ್ಬರೂ ಸಾಹಿತಿಗಳು ಆಗ. ಬಹುಶಃ ಚಾಮರಾಜಪೇಟೆಯ ಮತ್ತು ಬಸವನಗುಡಿಯ ಸಾಹಿತಿಗಳ ಗುಂಪು ಮಲ್ಲೇಶ್ವರದ ಸಾಹಿತಿಗಳ ಗುಂಪಿನ ಸರಿಸಮ ಇತ್ತೇನೋ! ಈ ಭಾಗದ ಕತೆ ಮುಂದೆ ವಿವರಿಸುತ್ತೇನೆ.

ಕೃಷ್ಣ ಭವನ ರಸ್ತೆಯ ಬಲಕ್ಕೆ ತಿರುಗಿದರೆ, ಬಂದರೆ ಭಾಷ್ಯಮ್ ಪಾರ್ಕ್. ಅದನ್ನೂ ದಾಟಿ ಬನ್ನಿ. ಇದು ಆ ಕಾಲದ್ದು, ಒನ್ ವೇ ಕೇಳಿಲ್ಲದ ಕಾಲದ್ದು ಇದೇ ರಸ್ತೆಯಲ್ಲಿ ಒಂದು ಹತ್ತು ಹದಿನೈದು ನಿಮಿಷ ನಡೆದರೆ ಕೊಂಚ ಎಡಕ್ಕೆ ಕೊಂಚ ಬಲಕ್ಕೆ ತಿರುಗಿದರೆ ನಿಮಗೆ ಸಿಟಿ ರೈಲ್ವೆ ಸ್ಟೇಶನ್ ಸಿಗುತ್ತೆ. ಅರವತ್ತರ ದಶಕದಲ್ಲಿ ಈ ರೈಲ್ವೆ ಸ್ಟೇಶನ್ ಹೇಗಿತ್ತು ಅಂತ ನಿಮಗೆ ಹೇಳಿದೀನಿ ಅಂತ ಕಾಣುತ್ತೆ. ಅದಕ್ಕೆ ಅಂದರೆ ರೈಲ್ವೆ ಸ್ಟೇಶನ್‌ಗೆ ಸಮಾನಾಂತರ (parallel) ಒಂದು ರಸ್ತೆ ಎಡಭಾಗಕ್ಕೆ ಇದ್ದರೆ ಅದೇ ರಸ್ತೆಯ ಎರಡು ತುದಿಗೆ ಲಂಬಕ್ಕೇ (perpendicular) ಎರಡು ಉದ್ದನೆ ಗೆರೆ ಸೇರಿಸಿ. ನಿಮಗೆ ಒಂದು (rectangle) ರೆಕ್ಟ್ಯಾಂಗಲ್ ಅಂದರೆ ಆಯಾತ ಚೌಕ ಸಿಗುತ್ತೆ. ಒಂದು ಸೆಕೆಂಡು ಕಣ್ಣು ಮುಚ್ಚಿ ಇಡೀ ಚೌಕ ಖಾಲಿ ಖಾಲಿ ಅಂತ ಮನಸಿಗೆ ತನ್ನಿ! ಅಲ್ಲಿರುವ ಸಿಟಿ ಬಸ್ ಸ್ಟ್ಯಾಂಡ್ ಮಾಯ ಆಗಲಿ, ಅಲ್ಲಿರುವ ಕರ್ನಾಟಕ ರಾಜ್ಯ ಸಾರಿಗೆ ಸ್ಟ್ಯಾಂಡ್ ಖಾಲಿ ಆಗಲಿ, ಬಸ್ ಮಾಯ ಆಗಲಿ ಮತ್ತು ಇಡೀ ಜನ ಸಮೂಹ ಮಾಯ ಆಗಲಿ, ಅಲ್ಲಿನ ಗಜಿ ಬಿಜಿ, ಕಿವಿ ತೂತು ಮಾಡುವ ಶಬ್ದ ಎಲ್ಲವೂ ಮಾಯ ಅಂದರೆ ಮಾಯವೇ ಆಗಲಿ.

ಇಡೀ ಏರಿಯಾ ಖಾಲಿ ಆಯ್ತಾ? ಈಗ ನೀವು ಅರವತ್ತರ ದಶಕಕ್ಕೆ ಬಂದಿರಿ. ಆಗ ಈ ಏರಿಯಾ ಪೂರ್ತಿ ಬಯಲು ಬಯಲು. ಹರಿದ ಹುಲ್ಲಿನ ಹಳೆಯ ಬೆಡ್ ಶೀಟ್ ನೆಲದ ಉದ್ದಗಲಕ್ಕೂ ಹಾಸಿದ ಹಾಗಿತ್ತು. ಮಧ್ಯೆ ಮಧ್ಯೆ ಹುಲ್ಲು ಬಣ್ಣ ಬಳಿದ ಹಾಗೆ. ಉಜ್ಜಿ ಉಜ್ಜಿ ಸವೆದ ಕಾರ್ಪೆಟ್ ಹಾಗೆ ಮುಖ ಮುಸುಡಿ ಕಿತ್ತ ಕಾರ್ಪೆಟ್. ಒಂದು ಕಾಲದಲ್ಲಿ ಅಲ್ಲಿ ಕೆರೆ ಇತ್ತು ಅಂತ ನಮ್ಮ ಹಿರಿಯರು ಹೇಳುತ್ತಿದ್ದರು. ಬೆಂಗಳೂರಿನ ಎರಡು ಸುಪ್ರಸಿದ್ಧ ಕೆರೆಗಳಲ್ಲಿ ಒಂದು ಇಲ್ಲಿ ಇತ್ತಂತೆ. ಇಲ್ಲಿ ಇದ್ದದ್ದು ಧರ್ಮಾಂಬುಧಿ ಕೆರೆ. ಕೆಂಪೇಗೌಡರ ಕಾಲದಲ್ಲಿ ನಿರ್ಮಿತವಾದ ಹಲವು ಸಾವಿರ ಕೆರೆಗಳಲ್ಲಿ ಇದೂ ಸಹ ಒಂದು. ಇದಕ್ಕೆ ನೀರು ಹೇಗೆ ಬರುತ್ತಿತ್ತು ಅಂದರೆ ಹಿಂದಿನ ಕೆರೆ ತುಂಬಿ ಅದರ ಹೆಚ್ಚುವರಿ ನೀರು ಈ ಕೆರೆಗೆ ಬರುತ್ತಿತ್ತು. ಈ ಕೆರೆ ತುಂಬಿದ ನಂತರ ಇದರ ಹೆಚ್ಚುವರಿ ನೀರು ಕೆಂಪಾಂಬುದಿ ಕೆರೆಗೆ ಹೋಗುತ್ತಿತ್ತು. ಅದರ ನಂತರ ಮುಂದಿನ ಕೆರೆಗೆ… ಹೀಗೆ ಇಡೀ ಬೆಂಗಳೂರಿನ ಕೆರೆಗಳು ತುಂಬಿಕೊಳ್ಳುತ್ತಿದ್ದವು. ನೀರು ತುಂಬಿ ಮತ್ತೊಂದು ಕೆರೆ ಸೇರುತ್ತಿದ್ದದ್ದು ಗ್ರಾವಿಟಿ gravity ಮೂಲಕ ಅಂತೆ. ಮೋಟಾರ್ ಗಿಟರ್ ಇಲ್ಲದ ಆ ಕಾಲದಲ್ಲಿ gravity ಕಲ್ಪನೆ ಅದ್ಭುತ ಅನಿಸಿತ್ತು. ಕೆಲವು ವರ್ಷಗಳ ಹಿಂದೆ ನಮ್ಮ ವಿದ್ಯಾರಣ್ಯ ಪುರಕ್ಕೆ ಹತ್ತಿರದ ಸಿಂಗಾಪುರದಲ್ಲಿ ಒಂದು ಸ್ಟೋರೇಜ್ ಟ್ಯಾಂಕ್ ಕಟ್ಟಿದರು. ಅಲ್ಲಿಂದ ಎರಡೂವರೆ ಕಿಮೀ ದೂರದ ಜಿಕೆವಿಕೆಗೆ ಮತ್ತೊಂದು ಸ್ಟೋರೇಜ್‌ಗೆ ನೀರು ಹರಿಸಿದರು. ನಮ್ಮಲ್ಲಿ ನೀರು ಸರಿಯಾಗಿ ಬರ್ತಿಲ್ಲ ಅಂತ ಇಂಜಿನಿಯರ್‌ಗೆ ದೂರು ಸಲ್ಲಿಸಲು ಹೋದೆ. ಇನ್ಮೇಲೆ ನಿಮಗೆ ಗ್ರಾವಿಟಿ ಮೂಲಕ ನೀರು ಇವರೇ, ಕರೆಂಟ್ ಇರಲಿ ಬಿಡಲಿ ನಿಮಗೆ ನೀರು ಬಂದ್ ಬಿಡುತ್ತೆ, ಅಂತ ಅವರು ತುಂಬಾ ಸಂತೋಷದಿಂದ ಹೇಳಿದರು. ಅವರ ಮಾತು ಕೇಳಿ ಖುಷಿ ನೂರ್ಮಡಿ ಆಯ್ತು. ಅದೇ ಹುಮ್ಮಸ್ಸಿನಲ್ಲಿ ನಮ್ಮ ಏರಿಯಾದ ಎಲ್ಲರಿಗೂ ನಾನೇ bbc ಆದೆ, ಸುದ್ದಿ ಬಿತ್ತರಿಸಿದೆ. (bbc ಅಂದರೆ british broadcasting corporation ಅಂತ. ಇಡೀ ಜಗತ್ತಿಗೆ ಇವರೇ ಮೊದಲ ವಾರ್ತೆ ಕೊಡುವವರು ಅಂತ ಒಂದು ಕಾಲದಲ್ಲಿ ಫೇಮಸ್ ಆಗಿತ್ತು. ಈಗ ಅಷ್ಟು ವಿಶ್ವಾಸ ಇಲ್ಲ ಇದರ ನ್ಯೂಸ್ ಮೇಲೆ. ಬುರುಡೆ ನ್ಯೂಸ್ ಅಂತ ಹೆಸರು ಮಾಡಿದೆ). ಎಲ್ಲರೂ ನೀರಿನ ಬವಣೆ ನೀಗಿತು ಎಂದು ಕಾಮನ ಬಿಲ್ಲಿನ ಮೇಲೆ ಕೂತೆವು. ಹದಿನೈದು ದಿವಸದಲ್ಲಿ ಮತ್ತೆ ನೀರಿನ ಪ್ರಾಬ್ಲಂ ಬಂತು. ನೀರು ಆಫೀಸಿಗೆ ಫೋನ್ ಮಾಡಿದೆ. ಸಾರ್ ಕರೆಂಟ್ ಇಲ್ಲ ಅಂತ ಉತ್ತರ ಬಂತು. ರೀ ಅದೇನೋ ಗ್ರಾವಿಟಿ ಲೀ ನೀರು ಬಿಡ್ತೀವಿ ಅಂತ ನಿಮ್ಮ ಸಾಹೇಬ್ರು ಹೇಳಿದ್ರು… ಅಂದೆ. ಅವರಿಗೆ ಟ್ರಾನ್ಸ್ಫರ್ ಆಗಿ ಒಂದು ವಾರ ಆಯ್ತು.. ಅಂತ ಉತ್ತರ ಬಂತು! ಈಗಲೂ ಕರೆಂಟ್ ಇದ್ದರೆ, ಸ್ಟೋರ್‌ನಲ್ಲಿ ನೀರು ಇದ್ದರೆ, ಇಂಜಿನಿಯರ್‌ಗೆ ನೀರು ಬಿಡಬೇಕು ಅನಿಸಲೀ ಬಿಡಲಿ ನೀರು ಬರ್ತದೆ… ಗ್ರಾವಿಟಿ ಪ್ರಶ್ನೆ ಇಲ್ಲ!

ಮತ್ತೆ ಧರ್ಮಾಂಬುದಿ ಕೆರೆಗೆ…. ಈ ಹಳ್ಳದಲ್ಲಿ ಅಥವಾ ಕೆರೆಯಲ್ಲಿ ನೀರು ಇದ್ದದ್ದು ಈಗ ಬದುಕಿರುವವರಲ್ಲಿ ಯಾರೂ ನೋಡಿದ ಹಾಗೇ ಇಲ್ಲ. ಒಂದು ಮಾಹಿತಿ ಪ್ರಕಾರ ೧೯೩೦ ರಲ್ಲಿ ಇಲ್ಲಿಗೆ ನೀರು ಬರುವುದು ನಿಂತು ಹೋಯಿತು. ಯಾತಕ್ಕೆ ನಿಂತು ಹೋಯಿತು, ಯಾರು ನಿಲ್ಲಿಸಿದರು ಎನ್ನುವುದನ್ನು ಪತ್ತೆ ಮಾಡಬೇಕು. ಅರವತ್ತರ ದಶಕದಲ್ಲಿ ಇಲ್ಲಿ ಈಗಿನ ಬೆಂಗಳೂರು ಬಸ್ ಸ್ಟಾಂಡಿನ ಜಾಗದಲ್ಲಿ ಕಾಂಗ್ರೆಸ್ ಎಕ್ಸಿಬಿಷನ್ ಅಂತ ಒಂದು ಎಕ್ಸಿಬಿಷನ್ ಆಗ್ತಾ ಇತ್ತು. ಇದು ವರ್ಷದಲ್ಲಿ ಒಮ್ಮೆ ಮೂರು ತಿಂಗಳಿನಷ್ಟು ಕಾಲ ಇರುತ್ತಿತ್ತು. ಜಯಂಟ್ ವೀಲ್, ಬೊಂಬೆ ಕುದುರೆ ಮೇಲೆ ಕೂತು ಸುತ್ತು ಹೊಡೆಯುವ ಆಟ ಮೆರ್ರಿ ಗೋ ರೌಂಡ್, ಪುಟಾಣಿ ಆಟದ ರೈಲು.. ಮೊದಲಾದ ಆಕರ್ಷಣೆಗಳು ಮಕ್ಕಳಿಗೆ ಇದ್ದವು. ದೊಡ್ಡವರಿಗೆ ಖಾದಿ ಬಟ್ಟೆ, ರೇಷ್ಮೆ ಬಟ್ಟೆ ಮಳಿಗೆಗಳು ಇದ್ದವು. ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಒಂದು ದೊಡ್ಡ ಮಳಿಗೆ ಇರುತ್ತಿತ್ತು. ರಾಜ್ಯ ಸರ್ಕಾರದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸಹ ಇರುತ್ತಿತ್ತು. ಇಲ್ಲಿ ಮಾತ್ರ ಕಾಟನ್ ಕ್ಯಾಂಡಿ ಸಿಗುತ್ತಿತ್ತು, ಮೊರದಗಲದ ಹಪ್ಪಳ ಇಲ್ಲೇ ಮೊದಲು ನೋಡಿದ್ದು, ಇಡೀ ದೊಣ್ಣೆ ಮೆಣಸಿನ ಕಾಯಿ ಬೋಂಡಾ ಇಲ್ಲಿ ಮೊದಲು ನೋಡಿದ್ದು.. ಹೀಗೆ ಏನೇನೋ ಆಕರ್ಷಣೆಗಳು ಇದ್ದವು. ಈ ಆಕರ್ಷಣೆಗಳು ನಮ್ಮನ್ನು ಹಾಗೂ ದೊಡ್ಡವರನ್ನು ಸಹ ಸೆಳೆಯುತ್ತಿತ್ತು. ಇದಕ್ಕೆ ಕಾಂಗ್ರೆಸ್ ವಸ್ತು ಪ್ರದರ್ಶನ ಎಂದು ಪತ್ರಿಕೆಗಳು ಬರೆಯುತ್ತಿದ್ದವು. ಈ ಕಾಂಗ್ರೆಸ್ ವಸ್ತು ಪ್ರದರ್ಶನ ನಿಂತು ಹೋಯಿತು ಮತ್ತು ಈಗ ಅದು ದೆಹಲಿಯಲ್ಲಿ (ಜಂತರ್ ಮಂತರ್) ಮತ್ತು ದೇಶದ ಎಲ್ಲೆಡೆ ನಡೀತದೆ, ಅದರಲ್ಲಿನ ಮೇನ್ ಅಟ್ರಾಕ್ಷನ್ ಎಂದರೆ ಅದರ ತುಂಬಾ ಜೋಕರ್ಸ್ ಇದಾರೆ, ಒಳ್ಳೇ ನಗು ಉಕ್ಕಿಸಿ ಮಜಾ ಕೊಡ್ತಾರೆ ಎಂದು ನನ್ನ ಭಾಜಪ ಮಿತ್ರರು ಹೇಳುತ್ತಾರೆ!

ಕಾಂಗ್ರೆಸ್ ವಸ್ತು ಪ್ರದರ್ಶನದ ಪಕ್ಕದಲ್ಲಿ ಒಂದು ಜಾಗದಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿ ಅವರು ನಾಟಕ ಮಾಡುತ್ತಿದ್ದರು. ಅವರು ಆಡುತ್ತಿದ್ದ ಲಂಚಾವತಾರ ನಾಟಕಕ್ಕೆ ಜನ ಯಾವಾಗಲೂ ತುಂಬಿರುತ್ತಿದ್ದರು. ಒಂದು ಅತಿ ಪ್ರಚಾರ ಪಡೆದ ಸಂಗತಿ ಎಂದರೆ ಪ್ರತಿ ದಿವಸ ನಾಟಕದಲ್ಲಿ ಬೇರೆ ಬೇರೆ ಡಯಲಾಗ್‌ ಇರುತ್ತೆ. ರಾಜಕೀಯವನ್ನು ಹಾಗೂ ಮಂತ್ರಿಗಳನ್ನು ಚೆನ್ನಾಗಿ ಬಾಯಿಗೆ ಬಂದ ಹಾಗೆ ಬೈತಾನೆ ಹಿರಣ್ಣಯ್ಯ ಅನ್ನೋದು! ಹಿರಣ್ಣಯ್ಯ ಅವರ ಮಗ ನರಸಿಂಹ ಮೂರ್ತಿ ಈ ನಾಟಕದ ಮುಖ್ಯ ಪಾತ್ರಧಾರಿ ಮತ್ತು ಅವರು ಮಾಸ್ಟರ್ ಹಿರಣ್ಣಯ್ಯ ಎಂದು ಹೆಸರು ಮಾಡಿದ್ದರು. ಎರಡು ಮೂರು ವರ್ಷದ ಹಿಂದೆ ಇವರು ದೇವರ ಪಾದ ಸೇರಿದರು. ಲಂಚಾವತಾರ ಅಲ್ಲದೆ ಸುಮಾರು ಬೇರೆ ಬೇರೆ ನಾಟಕ ಇವರು ಮಾಡುತ್ತಿದ್ದರು. ಆದರೆ ಲಂಚಾವತಾರ ತುಂಬಾ ಹೆಸರು ಮಾಡಿತ್ತು. ಪ್ರೇಕ್ಷಕರು ಬಿದ್ದು ಬಿದ್ದು ನಗ್ತಾ ಇರೋರು. ನಗು ಒಂದು ರೀತಿ ಸಾಂಕ್ರಾಮಿಕ ಆಗುತ್ತಿತ್ತು. ಒಂದು ಡಯಲೋಗ್ ಡೆಲಿವರಿ ಆಗುತ್ತಿದ್ದ ಹಾಗೆ ಒಂದು ಮೂಲೆಯಲ್ಲಿ ನಗು ಸ್ಫೋಟ, ನಂತರ ಥಿಯೇಟರಿನಲ್ಲಿ ಎಲ್ಲ ಕಡೆ ನಗು ನಗು ಮತ್ತು ನಗು. ಕೆಲವು ಮಂತ್ರಿಗಳು ನಾಟಕ ನೋಡಲು ಬಂದು ಅವರಿಗೆ ಅವರ ಬಗ್ಗೆಯೇ ಮಾಡುವ ತಮಾಷೆ ತಡೆಯಲು ಆಗದೇ ನಾಟಕಬಿಟ್ಟು ಓಡುತ್ತಿದ್ದರಂತೆ! ಎರಡು ಮೂರು ವರ್ಷ ಈ ನಾಟಕ ನಡೆದ ನೆನಪು. ನಾನು ಎರಡು ಮೂರು ಸಲ ಅಥವಾ ಇನ್ನೂ ಹೆಚ್ಚು ಸಲ ಈ ಲಂಚಾವತಾರ ನಾಟಕ ಇಲ್ಲೇ ನೋಡಿದ್ದು. ಈ ನಾಟಕದ ನೆನಪು ಮತ್ತೆ ತಲೆಗೆ ಧುತ್ತೆಂದು ಹೊಳೆದದ್ದು ಮತ್ತೊಂದು ನಾಟಕವನ್ನು ತ್ರಿಭುವನ್ ಥಿಯೇಟರಿನ ಹಿಂಭಾಗದಲ್ಲಿ ಇದ್ದ ವರದಾಚಾರ್ ಹಾಲ್‌ನಲ್ಲಿ ಒಂದು ನಾಟಕ ನೋಡಿದಾಗ. ಚಿಂದೋಡಿ ಲೀಲಾ ಅವರ ಪೊಲೀಸನ ಮಗಳು ನಾಟಕ. ಅಂತಹ ಹೇಳಿಕೊಳ್ಳುವ ನಾಟಕ ಅಲ್ಲ ಅದು. ನಾಟಕ ನೋಡುತ್ತಾ ಕೂತಿದ್ದೆ. ಪಕ್ಕದಲ್ಲಿ ಕೂತವ ಯಾವುದೋ ಮಾತಿಗೆ ದೊಡ್ಡ ಶಬ್ದ ಮಾಡಿಕೊಂಡು ನಕ್ಕ. ಕೂಡಲೇ ಥಿಯೇಟರಿನಲ್ಲಿ ಐದಾರು ಮೂಲೆಗಳಿಂದ ಇದೇ ರೀತಿ ನಗು ಹೊಮ್ಮಿತು. ಅದು ನಿಧಾನಕ್ಕೆ ಸಾಂಕ್ರಾಮಿಕ ರೂಪ ತಳೆಯಿತು!

ಎಲ್ಲರೂ ನೀರಿನ ಬವಣೆ ನೀಗಿತು ಎಂದು ಕಾಮನ ಬಿಲ್ಲಿನ ಮೇಲೆ ಕೂತೆವು. ಹದಿನೈದು ದಿವಸದಲ್ಲಿ ಮತ್ತೆ ನೀರಿನ ಪ್ರಾಬ್ಲಂ ಬಂತು. ನೀರು ಆಫೀಸಿಗೆ ಫೋನ್ ಮಾಡಿದೆ. ಸಾರ್ ಕರೆಂಟ್ ಇಲ್ಲ ಅಂತ ಉತ್ತರ ಬಂತು. ರೀ ಅದೇನೋ ಗ್ರಾವಿಟಿ ಲೀ ನೀರು ಬಿಡ್ತೀವಿ ಅಂತ ನಿಮ್ಮ ಸಾಹೇಬ್ರು ಹೇಳಿದ್ರು… ಅಂದೆ. ಅವರಿಗೆ ಟ್ರಾನ್ಸ್ಫರ್ ಆಗಿ ಒಂದು ವಾರ ಆಯ್ತು.. ಅಂತ ಉತ್ತರ ಬಂತು!

ಇಡೀ ನಾಟಕದ ಪ್ರದರ್ಶನ ಪೂರ್ತಿ ಪಕ್ಕದವನು ಬಿದ್ದು ಬಿದ್ದು ನಕ್ಕ. ನಾಟಕ ಮುಗಿದಮೇಲೆ ಅವನ ಸ್ನೇಹ ಬೆಳೆಸಿದೆ. ಬೈ ಟೂ ಕಾಫಿ ಕುಡಿದೆವು. ಹೆಚ್ಚು ಆತ್ಮೀಯರಾದೆವು. ನಗೋದಕ್ಕೆ ಅವನಿಗೆ ಪೇಮೆಂಟ್ ಆಗುತ್ತೆ ಅಂತ ಗೊತ್ತಾಯ್ತು! ಲಂಚಾವತಾರದ ಕಾಲದಲ್ಲಿ ಹೀಗಿರಲಿಲ್ಲ. ನಗೆ ಸ್ಫೋಟ ಅದು. ನಾಟಕದ ಇಪ್ಪತ್ತೈದು, ಐವತ್ತು ಎಪ್ಪತ್ತೈದು ನೂರರ ಪ್ರದರ್ಶನಕ್ಕೆ ಪ್ರತಿ ಪ್ರದರ್ಶನ ನೋಡುತ್ತಿದ್ದ ಪ್ರೇಕ್ಷಕನನ್ನು ಗುರುತಿಸಿ ವೇದಿಕೆಗೆ ಕರೆದು ಆತನ ಸನ್ಮಾನ ಆಗುತ್ತಿತ್ತು. ನಾಟಕದ ಟಿಕೆಟ್‌ನ ಕನಿಷ್ಠ ದರ ಎಂದರೆ ಆಗ ನಾಲ್ಕಾಣೆ. ಹೆಚ್ಚಿನ ಪ್ರೇಕ್ಷಕರು ನಾಲ್ಕಾಣೆ ಕೊಟ್ಟು ನಾಟಕ ನೋಡುವವರು. ಅವರನ್ನು ತುಂಬಾ ಮರ್ಯಾದೆಯಿಂದ ನಾಲ್ಕಾಣೆ ಪ್ರಭುಗಳು ಎಂದು ಕರೆಯುತ್ತಿದ್ದರು. ಈಗ ಈ ನಾಲ್ಕಾಣೆ ಪ್ರಭುಗಳು ಎನ್ನುವ ಪ್ರಯೋಗ ಕಣ್ಮರೆ ಆಗಿದೆ, ನಾಲ್ಕಾಣೆ ಸೀಟು ಇಲ್ಲ, ನಾಲ್ಕಾಣೆ ಕಣ್ಮರೆ ಆದ ಹಾಗೇ!

ಎಕ್ಸ್ಹಿಬಿಷನ್‌ನ ಕೆಲವು ನೆನಪು ಇನ್ನೂ ಇದೆ. ಅದರಲ್ಲಿ ಒಂದು ಕುಕ್ಕರ್ ಹೊಸದಾಗಿ ಬಂದಾಗ ಅದನ್ನು ಈ ಎಕ್ಸ್ಹಿಬಿಷನ್‌ನಲ್ಲಿ ನೋಡಿಬಂದು ಮನೆಯಲ್ಲಿ ಅದರ ಬಗ್ಗೆ ನಡೆದ ಚರ್ಚೆ. ಒಂದು ಪಾತ್ರೆಯಲ್ಲಿ ಅಕ್ಕಿ, ಬೇಳೆ, ತರಕಾರಿ ಎಲ್ಲವನ್ನೂ ನೀರಲ್ಲಿ ಹಾಕಿ ಮುಚ್ಚಿ ಬೇಯಿಸಿದರೆ ಅಡುಗೆ ರೆಡಿ ಆಗಿ ಬಿಡುತ್ತೆ ಅಂತೆ… ಹೀಗೆ ಕುಕ್ಕರ್ ಬಗ್ಗೆ ಕುತೂಹಲದ ಚರ್ಚೆ ನಡೆದಿತ್ತು. ಇನ್ನು ಅಡಿಗೆ ಗ್ಯಾಸ್ ಬಂದಾಗ ಅದರ ಮೊದಲ ಪ್ರದರ್ಶನ ಈ ಎಕ್ಸ್ಹಿಬಿಷನ್‌ನಲ್ಲಿ. ಹತ್ತು ನಿಮಿಷದಲ್ಲಿ ನೂರು ಜನಕ್ಕೆ ಅಡುಗೆ ಮಾಡಬಹುದಂತೆ… ಇದೂ ಸಹ ಒಂದು ನೆನಪು. ಇನ್ನು ಲಿಗ್ನೈಟ್ ಯಾರಿಗೆ ನೆನಪಿದೆಯೋ. ಪಕ್ಕದ ರಾಜ್ಯದಲ್ಲಿ ನೈವೆಲಿ ಅನ್ನುವ ಕಡೆ ಲಿಗ್ನೈಟ್ ಕಾರ್ಪೋರೇಶನ್ ಅನ್ನುವ ಸಂಸ್ಥೆ ಆರಂಭ ಆಗಿ ಲಿಗ್ನೈಟ್ ಹೆಸರಿನ ಕಲ್ಲಿದ್ದಲು ನಿಕ್ಷೇಪ ಕಂಡು ಹಿಡಿದರು. ಇದರ ಸಂಸ್ಕರಣೆ ಆಗಬೇಕಾದರೆ ಒಂದು ರೀತಿಯ ಕಲ್ಲಿದ್ದಲು ಒಂದು ತ್ಯಾಜ್ಯ ವಸ್ತು. ಅದನ್ನು ಉರವಲು ರೀತಿಯಲ್ಲಿ ಮಾರುಕಟ್ಟೆಗೆ ಬಿಟ್ಟರು. ಆಗ ಅಡಿಗೆಗೆ ಸೌದೆ ಮತ್ತು ಇದ್ದಿಲು ಉಪಯೋಗ ಆಗುತ್ತಿತ್ತು. ಇದ್ದಿಲು ಬೆಂಗಳೂರಿಗೆ ಕಾನಕಾನಹಳ್ಳಿಯಿಂದ ಸಪ್ಲೈ ಆಗುತ್ತಿತ್ತು. ಸೌದೆ ಅಂಗಡಿ ಅವರೇ ಇದ್ದಿಲು ಅಂಗಡಿಯನ್ನು ಇಡುತ್ತಿದ್ದರು. ಮೂಟೆಯಲ್ಲಿ ಈ ಇದ್ದಲಿನ ಮಾರಾಟ ಆಗುತ್ತಿತ್ತು. ಈ ಲಿಗ್ನೈಟ್ ಮಾರುಕಟ್ಟೆಗೆ ಬಿಡುವ ಮೊದಲು ಈ ಎಕ್ಸ್ಹಿಬಿಷನ್‌ನಲ್ಲಿ ಅದರ ಪ್ರಚಾರ ನಡೆಯಿತು. ಮಾಮೂಲಿ ಇದ್ದಲಿಗಿಂತ ನಾಲ್ಕು ಪಟ್ಟು ಹೆಚ್ಚು ಶಾಖ ಮತ್ತು ಬೆಲೆ ಸಹ ಕಡಿಮೆ, ಬಿಳೀ ಬೂದಿ ಕೊಡುತ್ತೆ…. ಹೀಗಿತ್ತು ಪ್ರಚಾರ. ಒಂದು ಇದ್ದಲಿನ ಒಲೆ, ಅಥವಾ ಅಗ್ಗಿಸ್ಟಿಕೆ ಅದಕ್ಕೆ ಲಿಗ್ನೈಟ್ ತುಂಡುಗಳನ್ನು ಹಾಕಿ ಹತ್ತಿಸುವುದು ಮತ್ತು ಕೆಲವೇ ನಿಮಿಷದಲ್ಲಿ ಆ ಶಾಖದಲ್ಲಿ ಒಲೆಯ ಮೇಲಿನ ಪಾತ್ರೆಯಲ್ಲಿ ಕುದಿಯುತ್ತಿರುವ ನೀರು…! ಇದು ಪ್ರದರ್ಶನದ ಜಿಸ್ಟು. ಹೀಗೆ ಇದ್ದಲಿನ ಸ್ಥಾನವನ್ನು ಲಿಗ್ನೈಟ್ ಆಕ್ರಮಿಸಿದ್ದು. ಐರನ್ ಅಂಗಡಿ ಅವರೂ ಸಹ ಇಸ್ತ್ರಿ ಮಾಡಲು ಲಿಗ್ನೈಟ್ ಇದ್ದಲನ್ನೆ ಉಪಯೋಗಿಸುವಷ್ಟು ಮಟ್ಟಿಗೆ ಅದರ ಪ್ರಭಾವ ಇತ್ತು. ಅಡುಗೆ ಅನಿಲ ಬಂದ ನಂತರ ಈ ಲಿಗ್ನೈಟ್ ಹೆಸರು ಮರೆತೇ ಹೋಗಿತ್ತು. NLC ಅಂದರೆ Neyveli Lignite Corporation ಹೆಸರಿನ ಒಂದು ನವರತ್ನ ಕಂಪನಿ ತಮಿಳುನಾಡಿನ ನೈವೇಲಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ. ಈ ಲಿಗ್ನೈಟ್ ಎನ್ನುವುದು ಕಲ್ಲಿದ್ದಲಿನ ನಾಲ್ಕು ರೂಪಗಳಲ್ಲಿ ಒಂದು ಮತ್ತು ಇದನ್ನು ವಿದ್ಯುತ್ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ. ಅಡುಗೆ ಮನೆಯಲ್ಲಿ ಇದರ ಉಪಯೋಗ ಮೊದಲಿಗಿಂತ ತುಂಬಾ ಕಡಿಮೆ ಆಗಿದೆ.

ಮತ್ತೆ ಧರ್ಮಾಂಬುಧಿ ಕೆರೆಗೆ…. ಅರವತ್ತರ ದಶಕದಲ್ಲಿ ಇದರ ಸುತ್ತಲೂ ತಂತಿ ಬೇಲಿ ಹಾಕಿದ್ದರು. ಆಗಾಗ ಆ ತಂತಿ ಬೇಲಿ ಕಿತ್ತು ಕೆಲವರು ಒಳ ಸೇರುತ್ತಿದ್ದರು. ರಾಜಕಾರಣಿಗಳಿಗೆ ಹಾಗೂ ಪುಢಾರಿಗಳಿಗೆ ಮುಂದೆ ಈ ಜಾಗದ ಬೆಲೆ ಹೇಗೆ ಏರಬಹುದು ಅನ್ನುವ ಕಲ್ಪನೆಯೇ ಇರಲಿಲ್ಲ. ಅದರಿಂದ ಯಾರ ಕಣ್ಣೂ ಯಾವ ಲ್ಯಾಂಡ್ ಶಾರ್ಕ್ ಕಣ್ಣೂ ಅದರ ಮೇಲೆ ಬಿದ್ದಿರಲಿಲ್ಲ. ಈ ವಿಷಯಕ್ಕಾಗಿ ಆದರೂ ಅಂದಿನ ಮರಿ ಪುಡಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು! ನಂತರದ ಒಂದು ದಶಕದಲ್ಲಿ ಮೈದಾನದ ಎಡ ಭಾಗಕ್ಕೆ ಬೆಂಗಳೂರು ಸಾರಿಗೆ ಇಲಾಖೆ ಬಸ್ ನಿಲ್ದಾಣ ಕಟ್ಟಲು ಶುರು ಮಾಡಿತು. ಕೆಲವು ತಿಂಗಳ ನಂತರ ಬಲ ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ತನ್ನ ನಿಲ್ದಾಣ ಹಾಗೂ ಕಟ್ಟಡದ ನಿರ್ಮಾಣ ಶುರು ಮಾಡಿತು. ಸುಮಾರು ವರ್ಷ ಇದರ ನಿರ್ಮಾಣ ಕೆಲಸ ನಡೆಯಿತು. ಅಲ್ಲಿ ಒಂದು ಮೈದಾನ ಇತ್ತು, ಇಲ್ಲೇ ಇದೇ ರಸ್ತೆಯಲ್ಲಿ ನಮ್ಮ ಹಿಂದಿ ವಿರೋಧಿ ಮೆರವಣಿಗೆ ಆಯಿತು, ಗೆಳೆಯನೊಬ್ಬ ಪೊಲೀಸರ ಲಾಠಿ ಏಟಿನಿಂದ ಬಾಸುಂಡೆ ಬರಿಸಿಕೊಂಡಿದ್ದ, ಮತ್ತೊಬ್ಬ ಅರೆಸ್ಟ್ ಆಗಿದ್ದ… ಇಲ್ಲೇ ಕಾಂಗ್ರೆಸ್ ವಸ್ತು ಪ್ರದರ್ಶನ ಆಗುತ್ತಿತ್ತು, ಇದೇ ಜಾಗಕ್ಕೆ ಸುಭಾಷ ನಗರ ಮೈದಾನ ಎನ್ನುವ ಸುಭಾಷ ಚಂದ್ರ ಬೋಸರ ನೆನಪಿನ ಜಾಗ ಇತ್ತು….
ಮೊದಲಾದ ಎಲ್ಲ ಸಂಗತಿಗಳೂ ಮರೆತೇ ಹೋಗಿತ್ತು.

ಧರ್ಮಾಂಬುಧಿ ಕೆರೆ ಶಾಶ್ವತವಾಗಿ ತನ್ನ ನೆಲೆ ಮತ್ತು ಹೆಸರು ಎಲ್ಲವನ್ನೂ ಕಳೆದು ಕೊಂಡಿತು. ಮುಂದಿನ ಪೀಳಿಗೆಗೆ ಧರ್ಮಾಂಬುಧಿ ಕೆರೆ ಅಂದರೆ ಏನು ಎಂದು ಯಾರಾದರೂ ತಿಳಿದವರು ಹೇಳಬೇಕು ಅಷ್ಟೇ…! ಈ ದೊಡ್ಡ ಬಸ್ ಸ್ಟಾಂಡ್ ಆಗುವ ಮೊದಲು ನಗರ ಸಾರಿಗೆ ಬಸ್ಸುಗಳು ಎಲ್ಲಿ ನಿಲ್ಲುತ್ತಿದ್ದವು ಎಂದರೆ ಅದೇ ಒಂದು ಗತ ಪುರಾಣ. ಅದರ ಬಗ್ಗೆ ಸ್ವಲ್ಪ ಚಿಕ್ಕದಾಗಿ ಹೇಳಿಬಿಡ್ತೀನಿ….

ಈ ಧರ್ಮಾಂಬುಧಿ ಕೆರೆ ನೀರು ಪೂರ್ಣ ಬತ್ತಿ ಹೋಗಿತ್ತು. ರೈಲ್ವೆ ಸ್ಟೇಶನ್ ಮುಂಭಾಗದಲ್ಲಿ ಕೊಂಚ ಬಲಕ್ಕೆ ಅದರ ತೂಬು ಅವಶೇಷ ಅರವತ್ತರ ದಶಕದ ಉತ್ತರಾರ್ಧ ದಲ್ಲಿ ಸಹ ಇತ್ತು. ಅದು ಒಂದು ರೂಮಿನ ಹಾಗಿತ್ತು ಮತ್ತು ಯಾವುದೋ ತಮಿಳು ಸಂಸಾರ ಅಲ್ಲಿ ವಾಸ ಇತ್ತು. ಹಾಗೆ ನೋಡಿದರೆ ತುಳಸಿ ತೋಟ ಮತ್ತು ಇತರೆಡೆ ಪಾರ್ಕ್, ಬಸ್ ಸ್ಟ್ಯಾಂಡ್ ಶೆಲ್ಟರ್ ಇಲ್ಲೆಲ್ಲ ತಮಿಳು ವಲಸಿಗರು ತುಂಬಿದ್ದರು. ಇಲ್ಲೇ ಹುಟ್ಟಿ ಬೆಳೆದ ನಮ್ಮೂರಿಗರಿಗೆ ಇಲ್ಲದ ನಗರದ ಮಧ್ಯಭಾಗದಲ್ಲಿ ವಾಸಿಸುವ ಸುವರ್ಣ ಅವಕಾಶ ಇವರಿಗೆ ಸಿಕ್ಕಿದೆಯಲ್ಲಾ ಎನ್ನುವ ಆಕ್ರೋಶ ಹುಟ್ಟುತ್ತಿತ್ತು. ಸುಮಾರು ವರ್ಷ ಸುಮಾರು ಸಂಸಾರಗಳು ಇಲ್ಲೇ ತಮ್ಮ ಜೀವನ ರೂಪಿಸಿಕೊಂಡು ಬೆಳೆದವು. ಈಗಲೂ ಕೆಲವು ಸಂಸಾರ ಅಲ್ಲೇ ಬೀಡು ಬಿಟ್ಟಿವೆ. ಇದು ಅಪ್ಪಡಿ ಇರಕುಟ್ಟಮ್.

ಕೆರೆ ಬತ್ತಿದ ನಂತರ ಅದರ ಏರಿಯನ್ನು (tank band ಟ್ಯಾಂಕ್ ಬಂಡ್ ಅನ್ನುವ ಹೆಸರು ಇದಕ್ಕೆ. ಈಗಲೂ ಸಂಗಂ ಥಿಯೇಟರ್ ರಸ್ತೆ tank band road ಎನ್ನುವ ಹೆಸರು ಹೊತ್ತಿದೆ. ಮುಂದಿನ ಪೀಳಿಗೆಗಳು ಇಲ್ಲಿ ಟ್ಯಾಂಕ್ ಎಲ್ಲಿತ್ತು, ಇದಕ್ಕೆ tankband ಹೆಸರು ಹೇಗೆ ಬಂತು ಎಂದು ಅನ್ವೇಷಣೆ ನಡೆಸಬಹುದು!) ಹಾಗೇ ಉಳಿಸಿಕೊಳ್ಳಲಾಗಿತ್ತು. ಇದು ಯಾವ ಕಾರಣಕ್ಕೋ ತಿಳಿಯದು. ಆದರೆ ಈ ಏರಿಯ ಉಪಯೋಗ ಅರವತ್ತರ ದಶಕದಲ್ಲಿ ತುಂಬಾ ಸೊಗಸಾಗಿ ಆಯಿತು. ಪೂರ್ಣ tank band ಅನ್ನು BTS ಸಂಸ್ಥೆ ಬಸ್ ನಿಲ್ದಾಣವನ್ನು ಮಾಡಿ ಪ್ರಯೋಜನ ಪಡೆದುಕೊಂಡೆವು. BTS ಅಂದರೆ ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್ ಅಂತ. ಇದು ನಂತರ BMTC ಆಯಿತು. ರಾಜಾಜಿನಗರದ ಕಡೆಯ ಬಸ್ಸುಗಳು ಆಗಿನ ಟೂರಿಸ್ಟ್ ಹೋಟೆಲ್, ತುಳಸಿ ತೋಟ ಇಲ್ಲಿ ಪ್ರಯಾಣಿಕರ ಹತ್ತುವ ಇಳಿಯುವ ಸ್ಟ್ಯಾಂಡ್ ಮಾಡಿದ್ದವು. ಸಂಗಂ ಎದುರಿನ ಒಂದು ಸ್ಟಾಪ್‌ನಲ್ಲಿ ಯಲಹಂಕ ಕಡೆಗೆ ಹೋಗುವ ಬಸ್ಸುಗಳು ನಿಲ್ಲುತ್ತಿದ್ದವು. ಈ ಎರಡು ತಾಣಗಳ ನಡುವೆ ನಗರದ ಮಿಕ್ಕ ಭಾಗಗಳಿಗೆ ಹೋಗುವ ಬಸ್ಸುಗಳು. ಬಸ್ ಬಂದಾಗ ಜನ ನುಗ್ಗಬಾರದು ಎನ್ನುವ ಕಾರಣಕ್ಕೆ ಕ್ಯೂ ಪಾಲಿಸಲು ರೈಲಿಂಗ್ಸ್ ಇದ್ದವು. ಅಲ್ಲಿ ರಶ್ ಸಮಯದಲ್ಲಿ ಕಂಡಕ್ಟರ್‌ಗಿಂತ ಮೇಲಿನ ಹುದ್ದೆಯವರು ನಿಂತು ಕ್ಯೂ ನಿಯಂತ್ರಣ, ಬಸ್ಸುಗಳ ಹತೋಟಿ ಮುಂತಾದ ಸುಗಮ ಸಂಚಾರಕ್ಕೆ ಅಗತ್ಯದ ಕೆಲಸ ಮಾಡುತ್ತಿದ್ದರು. ಆಗಲೂ ಈಗಿನ ಹಾಗೇ ಗಂಟೆಗಟ್ಟಲೆ ಬಸ್ಸುಗಳು ಕಾಣಿಸುತ್ತಾ ಇರಲಿಲ್ಲ. ಮತ್ತು ಇದೂ ಈಗಿನ ಹಾಗೆಯೇ ಒಂದರ ಹಿಂದೆ ಒಂದು ದಪ ದಪ ಬಂದು ಬಿಡೋದು. ಒಂದು ಜೋಕ್ ಆಗಿನದ್ದು ಎಲ್ಲರೂ ಹೇಳುತ್ತಿದ್ದರು. ಮನುಷ್ಯನಿಗೆ ಕಷ್ಟಗಳು ಒಂದರ ಹಿಂದೆ BTS ಬಸ್ಸು ಬಂದ ಹಾಗೇ ಬರುತ್ತೆ ಅಂತ.

ಆಗ ನಗರದಲ್ಲಿ ಸಂಚಾರದ ಒತ್ತಡ ಅಷ್ಟು ಇರಲಿಲ್ಲ. ಅದರಿಂದ ಈ ವ್ಯವಸ್ಥೆ ಸುಮಾರು ವರ್ಷ ನಡೆಯಿತು. ಒತ್ತಡ ಹೆಚ್ಚಿದ ಹಾಗೆ ಈ ಕೆರೆಯ ಜಾಗವನ್ನು ಬಸ್ ಸ್ಟ್ಯಾಂಡ್ ಆಗಿ ಬಳಸಿಕೊಳ್ಳುವ ಯೋಜನೆ ಸರ್ಕಾರಕ್ಕೆ ಯಾರೋ ಬುದ್ಧಿವಂತರು ಕೊಟ್ಟರು. ಕೆರೆಯ ಅರ್ಧ ಭಾಗ ನಗರ ಸಾರಿಗೆ ವ್ಯವಸ್ಥೆಗೆ ಎಂದಾಯಿತು. ಮಿಕ್ಕ ಅರ್ಧ ಜಾಗ ರಾಜ್ಯ ರಸ್ತೆ ಸಾರಿಗೆ ಪಾಲಿಗೆ ಬಂತು.

ರಾಜ್ಯ ರಸ್ತೆ ಸಾರಿಗೆಗೆ ಅದರದ್ದೇ ಆದ ಒಂದು ದೊಡ್ಡ ನಿಲ್ದಾಣ ಇರಲಿಲ್ಲ. ಕಲಾಸಿಪಾಳ್ಯದಿಂದ ಸುಮಾರು ಬಸ್ಸುಗಳು ಓಡಾಟ ಮಾಡುತ್ತಿತ್ತು ಮತ್ತು ತುಂಬಾ ಕಿರಿದಾದ ರಸ್ತೆ ಹಾಗೂ ಧೂಳು ತುಂಬಿದ ವಾತಾವರಣ ಪ್ರಯಾಣಿಕರು ಅದು ಹೇಗೋ ಈ ಹಿಂಸೆ ತಡೆದುಕೊಂಡಿದ್ದರು. ಎರಡೂ ಬಸ್ ನಿಲ್ದಾಣ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾದವು. ಆದರೆ ಅಷ್ಟರಲ್ಲಿ ರಾಜ್ಯ ರಸ್ತೆ ಸಾರಿಗೆ ಗರ್ಭ ದೊಡ್ಡದಾಗಿದ್ದು ಅದರ ನಿರ್ವಹಣೆಗೆ ಬೇರೆ ಬೇರೆ ಸ್ಥಳ ಬೇಕಾಯಿತು. ಹೀಗಾಗಿ ನಗರದ ಸುತ್ತ ಹಲವು ನಿಲ್ದಾಣ ಹುಟ್ಟಿತು. ಕೆಂಗೇರಿ, ಶಾಂತಿ ನಗರ ಮೊದಲಾದ ಡಿಪೋಗಳು ಹುಟ್ಟಿದ್ದು ಹೀಗೆ. ಕತೆ ಹೀಗೆ ಮುಂದುವರೆಯುತ್ತದೆ.

ಈ ನಡುವೆ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರ ಕಾಲದ ಕೆಂಪಾಂಬುಧಿ ಕೆರೆ ವಿಷಯ ಮರೆತಿತ್ತು. ಈಗ ಅದಕ್ಕೆ ಬನ್ನಿ.

ಇದು ವಿಕಿಪೀಡಿಯ ಮಾಹಿತಿ: ಕೆಂಪಾಂಬುಧಿ ಕೆರೆ ಎಂದೂ ಕರೆಯಲ್ಪಡುವ ಕೆಂಪಾಂಬುಧಿ ಸರೋವರವು 16 ನೇ ಶತಮಾನದ ಸರೋವರವಾಗಿದೆ. ವಿಜಯನಗರ ಸಾಮ್ರಾಜ್ಯದ ಮುಖ್ಯಸ್ಥ ಕೆಂಪೇಗೌಡ ಅವರು ಬೆಂಗಳೂರನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದು, ಅವರು ತಮ್ಮ ಕುಲದೇವತೆ ಕೆಂಪಮ್ಮನಿಗಾಗಿ ಈ ಕೆರೆಯನ್ನು ಕಟ್ಟಿಸಿದರು. ಚಾಮರಾಜಪೇಟೆಯ ಜಿಂಕೆ ಉದ್ಯಾನವನದ ಹಿಂದೆ 47 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆಯನ್ನು ನೀವು ಕಾಣಬಹುದು. ಕೆಂಪಾಂಬುಧಿ ಕೆರೆ ಎಂದಾಕ್ಷಣ ನೆನಪಾಗುವುದು ಚಾಮರಾಜಪೇಟೆ ಮತ್ತು ಬಸವನಗುಡಿಯಿಂದ ಕೂಡಿದ್ದ ಹಳೆಯ ಬೆಂಗಳೂರಿನ ಜೀವನ. ಕೆಂಪಾಂಬುಧಿ ಕೆರೆ ಊರಿನ ಜೀವನಾಡಿಯಾಗಲು ಮುಖ್ಯ ಕಾರಣ ಕೆಂಪೇಗೌಡರು. ಇಮ್ಮಡಿ ಕೆಂಪೇಗೌಡ ಅವರು ಸರೋವರ ಮತ್ತು ಹತ್ತಿರದ ವಸತಿ ಪ್ರದೇಶಗಳಿಗೆ ನೀರು ಸರಬರಾಜು ಜಾಲವನ್ನು ಸ್ಥಾಪಿಸಿದರು.

(ಮುಂದುವರೆಯುವುದು…)

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ