ಒಂದು ದಿನ ನಮ್ಮ ಪೀಜಿ ಮುಂದೆ ಆಂಬ್ಯುಲೆನ್ಸೊಂದು ‘ಣುಯ್ ಣುಯ್ ಣುಯ್’ ಸದ್ದು ಮಾಡುತ್ತಾ ನಿಂತಿತು. ಪ್ರತಿ ಅರ್ಧ ಗಂಟೆಗೊಮ್ಮೆ ಸಾವನ್ನು ಮಡಿಲಲ್ಲಿಟ್ಟುಕೊಂಡು ಸರಿದಾಡುವ ಆಂಬುಲೆನ್ಸ್ ಸದ್ದಿಗೆ ಸಂಕಟವಾಗುತ್ತಿದ್ದ ಹೊತ್ತದು. ಕೆಳಗಡೆ ಶುರುವಾದ ಗಿಜಿ ಗಿಜಿ ಕೇಳಿ ಕಿಟಕಿಯಿಂದ ನೋಡಿದಾಗ ಪೀಜಿ ಓನರ್ ಮತ್ತು ಅವನ ಹೆಂಡತಿ ಸುನೀತಕ್ಕ ಆಂಬುಲೆನ್ಸ್ ಹತ್ತುತ್ತಿದ್ದರು. ಕೂಡಲೇ ಕೆಳಗಡೆ ಓಡಿಹೋದೆ. ನಾನು ಹೋಗುವುದಕ್ಕೂ ಅಂಬುಲೆನ್ಸಿನ ಬಾಗಿಲು ಮುಚ್ಚುವುದಕ್ಕೂ ಸರಿ ಹೋಯಿತು. ಆ ಕ್ಷಣಭಂಗುರತೆಯ ಸಮಯದಲ್ಲೇ ನನಗೆ ಕಂಡಿದ್ದು ಕಣ್ಣೀರು ತುಂಬಿಕೊಂಡಿದ್ದ ಸುನೀತಕ್ಕ ಕಣ್ಣುಗಳು… ಆ ದೃಶ್ಯ ನನಗೆ ಪದೇ ಪದೇ ಕಣ್ಮುಂದೆ ಬರುತ್ತದೆ.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ
ನಮ್ಮ ಪೀಜಿಗೊಬ್ಬರು ನಡುವಯಸ್ಸಿನ ಹೆಣ್ಣುಮಗಳು ಬರುತ್ತಿದ್ದಳು. ಮಧ್ಯಾಹ್ನ ಎರಡೂವರೆ ಸುಮಾರಿಗೆ ಬಂದು ಸಂಜೆ ನಾಲ್ಕೂವರೆವರೆಗೂ ಇರುತ್ತಿದ್ದಳು. ಬೆಳಗಿನ ಎರಡು ಮನೆಗೆಲಸಗಳನ್ನು ಮುಗಿಸಿ ಸಂಜೆಯ ಮನೆಗೆಲಸದ ಮನೆಗೆ ಹೋಗುವುದಕ್ಕಿಂತ ಮುಂಚೆ ನಮ್ಮ ಪೀಜಿಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗುತ್ತಿದ್ದರು. ಪೀಜಿಯ ಹಾಲಿನ ಟೀವಿಯಲ್ಲಿ ಬರುತ್ತಿದ್ದ ತೆಲುಗು ಸಿನಿಮಾವನ್ನೋ ಅಥವಾ ತೆಲುಗು ಧಾರಾವಾಹಿಗಳನ್ನೋ ನೋಡುತ್ತಿದ್ದರು. ನಮ್ಮದು ಆಂಧ್ರ ಪೀಜಿ ಆಗಿದ್ದರಿಂದ ತೆಲುಗು ಚಾನೆಲ್ಲುಗಳದೇ ಹಾವಳಿ ಎನ್ನುವ ಹಾಗಾಗಿತ್ತು. ಪೀಜಿಯಲ್ಲಿರುವ ಎಲ್ಲರೂ ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದವರೇ ಆಗಿದ್ದರಿಂದ ಅವರಿಗೆ ಇದೊಂದು ಸಮಸ್ಯೆ ಆಗಿರಲಿಲ್ಲ. ಕ್ರಿಕೆಟ್ ಸಮಯ ಬಂದಾಗ ಮಾತ್ರ ತೆಲುಗು ಕಾರ್ಯಕ್ರಮಗಳು ನಮ್ಮ ಪೀಜಿಯಿಂದ ಮಾಯವಾಗುತ್ತಿದ್ದವು. ಆಗ ನಮ್ಮ ಪೀಜಿಯ ಓನರ್ ಹೆಂಡತಿ ನಮ್ಮ ಮೇಲೆ ಹಿಡಿ ಶಾಪವನ್ನು ಹಾಕುವ ಊದಿಸಿಕೊಂಡ ಮುಖ ಹೊತ್ತು ಪೀಜಿಯ ಮುಂದಿದ್ದ ಮರದ ಕೆಳಗಡೆ ಹರಟುತ್ತಾ ಕುಳಿತಿರುವುದು ಸಾಮಾನ್ಯವಾಗಿತ್ತು. ಪೀಜಿಯ ಓನರ್ ಹಾಗೂ ನಾನು ಕಥೆ ಹೇಳಹೊರಟ ಮನೆಗೆಲಸದ ಹೆಣ್ಣುಮಗಳು ಗೆಳತಿಯರಾದದ್ದರ ಹಿಂದೆ ಕೆಲಸದ ನಡುವಿನ ಬಿಡುವಿನ ಸಮಯ ಕಳೆಯಲು ಪರಸ್ಪರ ಸಿಕ್ಕ ಜೀವಗಳು ಎನ್ನುವ ಕಾರಣವನ್ನು ದಾಟಿ ಅವರಿಬ್ಬರ ಸ್ನೇಹ ಗಾಢವಾಗುತ್ತಾ ಹೋಗಿತ್ತು.
ಒಂದು ಭಾನುವಾರ ಮಧ್ಯಾಹ್ನದ ಬಿಡುವಿನಲ್ಲಿ ಯಾವುದೋ ಕಾರ್ಯಕ್ರಮ ಮುಗಿಸಿಕೊಂಡು ಪೀಜಿಗೆ ಬಂದಾಗ ಆ ಮನೆಗೆಲಸದ ಹೆಣ್ಣುಮಗಳು ಪೀಜಿಯ ಕಂಪೌಂಡಿನಲ್ಲಿದ್ದ ಕಟ್ಟೆಯಲ್ಲಿ ಕೂತಿದ್ದರು. ‘ಇವತ್ತೂ ಕೆಲಸ ಇತ್ತಾ?’ ಎಂದು ಏಕವಚನದಲ್ಲೇ ಪ್ರೀತಿತುಂಬಿದ ಸಲುಗೆಯಲ್ಲೇ ಮಾತಿಗೆಳೆದಿದ್ದರು. ‘ಇಲ್ಲ ಆಂಟಿ. ಇಲ್ಲೇ ಹೊರ್ಗಡೆ ಹೋಗಿದ್ದೆ.’ ಎಂದು ಒಂದು ಮುಗುಳ್ನಗೆ ತೋರಿ ಕೋಣೆಗೆ ನಡೆದಿದ್ದೆ. ಕೋಣೆಗೆ ಬಂದ ಕೂಡಲೇ ‘ಅರೆ, ಅವರು ನನ್ನನ್ನು ಅಷ್ಟು ಆತ್ಮೀಯವಾಗಿ ಮಾತನಾಡಿಸಿದರು. ನಾನು ಅವರ ಹೆಸರನ್ನು ಕೂಡ ಕೇಳಲಿಲ್ಲ!’ ಎನಿಸಿತು. ಮುಂದಿನ ಭೇಟಿಯಲ್ಲಿ ಈ ಸಲ ಮರೆಯಲೇಬಾರದು ಎಂದುಕೊಂಡು ‘ಆಂಟಿ, ನಿಮ್ಮ ಹೆಸರೇನು?’ ಎಂದು ಕೇಳಿದೆ. ಅವರು ಥಟ್ಟನೆ ‘ಮಲ್ಲಿಕಾ’ ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ನನ್ನ ತುಟಿಗಳು ಅಗಲವಾಗಿ ಮತ್ತೆ ಮೊದಲ ಸ್ಥಿತಿಗೆ ಬಂದವು. ಅದನ್ನು ಗಮನಿಸದವರೇ ‘ಯಾಕಪ್ಪಾ? ಮನೆಗೆಲಸದ ಹೆಣ್ಣುಮಕ್ಕಳು ಹೊಸಾ ರೀತಿ ಕಾಣೋ ಹೆಸರನ್ನು ಇಟ್ಟುಕೊಳ್ಳಬಾರದಾ?’ ಅಂತ ನೇರವಾಗಿ ಕೇಳಿಬಿಟ್ಟರು. ಅವರು ಕೇಳಿದ್ದು ಸರಿಯಿತ್ತು. ನಾನು ಸಾಮಾನ್ಯವಾಗಿ ಅವರ ಹೆಸರು ಅಮ್ಮ ಅಥವಾ ಅಕ್ಕ ಅಥವಾ ಅವ್ವ ಅಥವಾ ಬಾಯಿ ಎನ್ನುವ ಪದದೊಂದಿಗೆ ಮುಕ್ತಾಯವಾಗಿರುತ್ತದೆ ಎಂದುಕೊಂಡಿದ್ದೆ. ನಾನು ಆವರೆಗೆ ಸಾಮಾನ್ಯವಾಗಿ ಮನೆಗೆಲಸದ ಹೆಣ್ಣುಮಕ್ಕಳು ನಿಂಗವ್ವ, ಫಾತಿಮವ್ವ, ಪಾರ್ವತಮ್ಮ, ಸಿದ್ದಕ್ಕ, ಕೆಂಚಮ್ಮ, ಲಲಿತಾಬಾಯಿ ಇತ್ಯಾದಿ ಹೆಸರುಗಳನ್ನ ಹೊಂದಿದವರನ್ನೇ ಕಂಡಿದ್ದೆ. ಈಗ ಇಷ್ಟೊಂದು ಆಧುನಿಕ ಹೆಸರು ಒಬ್ಬ ಮನೆಗೆಲಸದ ಹೆಣ್ಣುಮಗಳಿಗೆ ಇರುತ್ತದೆನ್ನುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ. ನಾವು ಬದುಕುತ್ತಿರುವ ಪ್ರಪಂಚ ಅದು ಹೇಗೆ ಪೂರ್ವಾಗ್ರಹಿಗಳನ್ನಾಗಿ ಮಾಡಿಬಿಡುತ್ತದೆ ಎನ್ನುವುದು ಹೊಳೆದು ಭಯವಾಯಿತು. ಅದು ಒತ್ತಟ್ಟಿಗಿರಲಿ ನಮ್ಮ ನಿಂತ ನೀರಿನ ಪ್ರಪಂಚದಲ್ಲಿ ಅದು ಹೇಗೋ ಯಾವುದೋ ಒಂದು ರಹದಾರಿಯನ್ನು ಹುಡುಕಿಕೊಂಡು ನಮ್ಮ ಜೀವನದಲ್ಲಿ ಬಂದೊದಗುವ ಬದಲಾವಣೆಯನ್ನು ನಾವು ಅದೆಷ್ಟು ಅನುಮಾನದಿಂದ ಆಘಾತದಿಂದ ಎದುರುಗೊಳ್ಳುತ್ತೇವೆ ಎನ್ನುವುದೂ ಕೂಡ ಆ ಕ್ಷಣಕ್ಕೆ ಹೊಳೆಯಿತು.
ಇಂತಹುದೇ ಹೋಲಿಕೆಯ ಮಾತುಗಳನ್ನು ನಮ್ಮ ಓಣಿಯಲ್ಲಿಯೇ ‘ಬಾವಿ ತೋಡೋ ಬೋವಿ ನನ್ ಮಕ್ಳು ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿಕೊಂಡ್ಯರೆ!’ ಎಂತಲೋ ‘ಮೊದ್ಲಿಗೆ ಹರಿಜನ ಇದ್ರು. ಈಗವ್ರು ಎಷ್ಟು ಝಮ್ಮನಂಗೆ ಆಗ್ಯಾರನ್ತಿ!’ ಅಂತಲೋ ‘ಆ ಛಲವಾದಿ ಮನ್ಯಾಗೆ ಬಸುರಿದ್ದಳಲ್ಲ ಬಸಮ್ಮ, ತನ್ನ ಮೊಮ್ಮಗಳಿಗೆ ಅದ್ಯಾವ್ದೋ ದಾರವಾಯಿ ಇರೋಯಿನ್ ಹೆಸರಿಟ್ಟಾಳಂತೆ’ ಎನ್ನುವ ಕರುಬುತ್ತಲೇ ಅಲ್ಲೊಂದು ಮೆಚ್ಚುಗೆಯನ್ನೂ ದಾಟಿಸುವ ಮಾತುಗಳನ್ನು ಸರ್ವೇಸಾಮಾನ್ಯ ಎಂದು ಕೇಳಿಸಿಕೊಳ್ಳುತ್ತಿದ್ದ ನನಗೆ ನನ್ನ ಮುಂದೆಯೇ ನಡೆಯುತ್ತಿದ್ದ ಮಲ್ಲಿಕಾ ಪ್ರಸಂಗದಲ್ಲಿ ‘ಅರೆ ಇಂತವರಿಗೇಕೆ ಇಂತ ಆಧುನಿಕ ಹೆಸರು!’ ಎಂದೆನ್ನಿಸುವ ಸ್ಥಾನದಲ್ಲಿ ತಂದು ನಿಲ್ಲಿಸಿತ್ತು. ಆದರೆ ನನ್ನ ಅದೃಷ್ಟ ಎಂಬಂತೆ ಇವೆಲ್ಲಾ ‘ಅಸೂಕ್ಷ್ಮ’ ಎನ್ನುವುದು ಥಟ್ಟನೆ ಹೊಳೆದುಬಿಡುತ್ತದೆ. ಇದೊಂದು ವಿಷಯದಲ್ಲಿ ಮಾತ್ರ ಓದು ಅದೆಷ್ಟು ಸಹಾಯಕ್ಕೆ ಬರುತ್ತದೆ?! ತಿದ್ದಿಕೊಳ್ಳುವುದಕ್ಕೆ ಓದು ಸಹಾಯ ಮಾಡುತ್ತದೆ ಎನ್ನುವುದೇ ನನಗೆ ಈಗಲೂ ಪುಳಕವನ್ನುಂಟು ಮಾಡುತ್ತದೆ.
ಆ ಮಾತಿರಲಿ ಮಲ್ಲಿಕಾಳ ಬಗ್ಗೆ ಮತ್ತಷ್ಟು ವಿಷಯಗಳನ್ನು ಹೇಳುತ್ತೇನೆ. ಅವರು ಮಾತನಾಡುತ್ತಿದ್ದರೆ ಅವರ ಕಣ್ಣುಗಳಲ್ಲೊಂದು ಮಿಂಚು ಪ್ರವಹಿಸುತ್ತಿತ್ತು. ಮಾತಿನಲ್ಲಿ ಗತ್ತು. ‘ಮೊನ್ನೆ ನಾನು ಕೆಲಸ ಮಾಡೋ ಮನೆಯಲ್ಲಿ, ಅಕ್ಕ ಫ್ರಿಜ್ಜಲ್ಲಿ ಸ್ವಲ್ಪ ಅಡುಗೆ ಇದೆ. ತಗೊಂಡು ಹೋಗಿ ಅಕ್ಕ ಅಂತಂದ್ರು. ನಾನದಕ್ಕೆ ನಾಕು ವದ್ದಕ್ಕ ಅಂತಂದೆ. ಅಯ್ಯೋ ನಾವೇ ತಿಂತೀವಿ ನೀವು ತಿನ್ನಲ್ವಾ ಅಂದ್ರು… ನಾನಂದೆ; ನೀಕು ಬೇಕಂದ್ರೆ ನೀನು ತಿನ್ನಕ್ಕ. ಅದು ಮೊನ್ನೆ ಅಡಿಗಿ. ನೀನು ಅರಾಮ್ ಇಲ್ದೆ ಬಿದ್ರೆ ಇಡೀ ಮನೆಯೆಲ್ಲಾ ನೋಡತ್ತೆ. ನಾನು ಬಿದ್ರೆ ನಾನೇ ನೋಡ್ಬೇಕು. ನಾಕು ವದ್ದು ಅಂತ ಮುಖಕ್ಕೆ ಹೊಡೆದ ಹಾಗೆ ಅಂದು ಬಂದೆ.’ ಎಂದು ಹೇಳುತ್ತಿದ್ದರು. ‘ಮೊನ್ನೆ ಸಂಜೆ ಅಡುಗೆ ಮನೆಗೆ ಹೋಗ್ತೀನಲ್ಲ ಆ ಮನೆಲಂತೂ ಇನ್ನು ಹುಡುಗಿ ಮೂರನೇ ಕ್ಲಾಸ್ ಓದೋ ಚೋಟು ಹುಡುಗಿ. ಅವಳು ಏಯ್ ಇಲ್ಲಿ ಬಾ ಏಯ್ ಅಲ್ಲಿ ಬಾ ಅಂತಾ ಇದ್ರೆ ಅವರ ಮನೆಯವರು ಏನೂ ಆಗೇ ಇಲ್ಲ ಅನ್ನೋ ತರ ನೋಡ್ತಾ ಇದ್ರು. ನಾನ್ ಸುಮ್ನೆ ಬಿಡ್ತೀನಾ? ಅವರಮ್ಮನಿಗೆ ಸರಿ ಕ್ಲಾಸ್ ತಗಂಡು ನಿನ್ನ ಮಗಳಿಗೆ ಸರಿಯಾಗಿ ಬುದ್ಧಿ ಹೇಳಮ್ಮ. ಕೆಲಸದವರಂದ್ರೆ ಸುಮ್ನೆ ಅಲ್ಲ ಅಂತ ಹೇಳಿ ಬಂದೆ.’ ಅಂದಿದ್ದರು. ಮುಂಚೆ ಹೋದ್ರೆ ಇಲ್ದೆ ಇರೋ ಕೆಲಸ ಎಲ್ಲಾ ಹೇಳ್ತಾರೆ ಅದಕ್ಕೆ ನಾನು ಸರಿ ಟೈಮಿಗೆ ಹೋಗಿ ಕಸ ಮುಸುರೆ ಮಾಡಿ ಅಲ್ಲಿಂದ ರೈಟ್ ಹೇಳಿ ಬರ್ತೀನಿ ಎಂದು ಕಡ್ಡಿ ಮುರಿದ ಹಾಗೆ ಹೇಳ್ತಾ ಇದ್ರು.
ನಮ್ಮ ನಿಂತ ನೀರಿನ ಪ್ರಪಂಚದಲ್ಲಿ ಅದು ಹೇಗೋ ಯಾವುದೋ ಒಂದು ರಹದಾರಿಯನ್ನು ಹುಡುಕಿಕೊಂಡು ನಮ್ಮ ಜೀವನದಲ್ಲಿ ಬಂದೊದಗುವ ಬದಲಾವಣೆಯನ್ನು ನಾವು ಅದೆಷ್ಟು ಅನುಮಾನದಿಂದ ಆಘಾತದಿಂದ ಎದುರುಗೊಳ್ಳುತ್ತೇವೆ ಎನ್ನುವುದೂ ಕೂಡ ಆ ಕ್ಷಣಕ್ಕೆ ಹೊಳೆಯಿತು.
ಈ ವಿಚಾರಗಳು ನಿಮಗೆ ಸ್ವಲ್ಪ ಆಕಳಿಗೆ ತರಿಸಿರಬಹುದು. ಈಗ ಒಂಚೂರು ರೋಚಕತೆಯ ವಿಚಾರ ಹೇಳ್ತಿನಿ. ಕೋವಿಡ್ ಎರಡನೇ ಅಲೆ ಎಲ್ಲರ ಉಸಿರಿನ ಜೊತೆಗೆ ಆಟವಾಡಲು ಶುರುವಿಟ್ಟುಕೊಂಡಿತ್ತು. ಒಂದು ದಿನ ನಮ್ಮ ಪೀಜಿ ಮುಂದೆ ಆಂಬ್ಯುಲೆನ್ಸೊಂದು ‘ಣುಯ್ ಣುಯ್ ಣುಯ್’ ಸದ್ದು ಮಾಡುತ್ತಾ ನಿಂತಿತು. ಪ್ರತಿ ಅರ್ಧ ಗಂಟೆಗೊಮ್ಮೆ ಸಾವನ್ನು ಮಡಿಲಲ್ಲಿಟ್ಟುಕೊಂಡು ಸರಿದಾಡುವ ಆಂಬುಲೆನ್ಸ್ ಸದ್ದಿಗೆ ಸಂಕಟವಾಗುತ್ತಿದ್ದ ಹೊತ್ತದು. ಕೆಳಗಡೆ ಶುರುವಾದ ಗಿಜಿ ಗಿಜಿ ಕೇಳಿ ಕಿಟಕಿಯಿಂದ ನೋಡಿದಾಗ ಪೀಜಿ ಓನರ್ ಮತ್ತು ಅವನ ಹೆಂಡತಿ ಸುನೀತಕ್ಕ ಆಂಬುಲೆನ್ಸ್ ಹತ್ತುತ್ತಿದ್ದರು. ಕೂಡಲೇ ಕೆಳಗಡೆ ಓಡಿಹೋದೆ. ನಾನು ಹೋಗುವುದಕ್ಕೂ ಅಂಬುಲೆನ್ಸಿನ ಬಾಗಿಲು ಮುಚ್ಚುವುದಕ್ಕೂ ಸರಿ ಹೋಯಿತು. ಆ ಕ್ಷಣಭಂಗುರತೆಯ ಸಮಯದಲ್ಲೇ ನನಗೆ ಕಂಡಿದ್ದು ಕಣ್ಣೀರು ತುಂಬಿಕೊಂಡಿದ್ದ ಸುನೀತಕ್ಕ ಕಣ್ಣುಗಳು… ಆ ದೃಶ್ಯ ನನಗೆ ಪದೇ ಪದೇ ಕಣ್ಮುಂದೆ ಬರುತ್ತದೆ. ಅಯಾಚಿತ ಅನಾಥ ಭಾವದಲ್ಲಿ, ಸಂಕಟದಲ್ಲಿ, ಮುಂದೇನೋ ಹೇಗೋ ಎನ್ನುವ ಘಳಿಗೆಗಳಲ್ಲಿ ತುಂಬಿಕೊಳ್ಳುವ ಕಣ್ಣೀರಿನ ಭಾಷೆಯ ಮುಂದೆ ನಮ್ಮೆಲ್ಲರ ತಲೆಯೊಳಗಿನ ಭಾರಗಳು ಧೂಳಿಪಟಗಳಾಗಿಬಿಡುತ್ತವೆ ಎನಿಸುತ್ತದೆ. ಅಂತಹ ದುರ್ಭರ ಘಳಿಗೆಗಳನ್ನು ಕಂಡು ಬಂದಿರುವ ನಾವುಗಳು ಅದರಿಂದೇನು ಪಾಠ ಕಲಿಯಲಿಲ್ಲವೆಂಬುದು ಬೇರೆಯದೇ ಮಾತು.
ಮರುದಿನ ಸುನೀತಕ್ಕ ಫೋನ್ ಮಾಡಿ ‘ಅಣ್ಣಾಕು ತುಂಬಾ ಜ್ವರ ಬಂದಿತ್ತು. ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ. ಅದಕ್ಕೆ ನಿನ್ನೆ ನಾವು ಆಂಧ್ರಕ್ಕೆ ಹೊರಟು ಬಂದ್ವಿ. ಸ್ವಲ್ಪ ಪೀಜಿ ಕಡೆ ನೋಡ್ಕೋತ ಇರಿ. ಅಡಿಗೆಗೆ ಒಬ್ರು ಸೌಭಾಗ್ಯ ಅಂತ ವರ್ತಾರು. ಬೆಳಿಗ್ಗೆ ಬಂದಿ ತಿಂಡಿ, ಪಾತ್ರೆ, ಕ್ಲೀನಿಂಗ್ ಮತ್ತೆ ಮಧ್ಯಾಹ್ನನೆ ಅವಾಕಿಂದು ಮತ್ತೆ ರಾತ್ರಿಗೂ ಅಡಿಗೆ ಮಾಡಿ ಹೋಕ್ತಾರು. ಕಿರಾಣಿ ಸಾಮಾನು ಏನು ಬೇಕೋ ಅದನ್ನ ತಂದುಕೊಡಿ. ನಿಮ್ಮ ಅಕೌಂಟಿಗೆ ದುಡ್ಡು ಹಾಕ್ತಿವಿ.’ ಎಂದರು. ನಾನು ಪೀಜಿ ಓನರ್ ಅರೋಗ್ಯ ವಿಚಾರಿಸಿಕೊಂಡು ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಫೋನಿಟ್ಟೆ.
ಮರುದಿನ ಬೆಳಿಗ್ಗೆ ಸೌಭಾಗ್ಯ ಬಂದರು. ಪೀಜಿಯ ಮುಂಬಾಗಿಲನ್ನ ನಾನೇ ತೆಗೆದೆ. ಮಾಸ್ಕ್ ಕೆಳಗೆ ಮಾಡಿ ಒಂದು ಭಯಬೆರೆತ ಮುಗುಳ್ನಗು ಹೊತ್ತು ‘ನಾನು ಸೌಭಾಗ್ಯಮ್ಮ ಅಂತ. ಅಡಿಗೆಗೆ ಹೇಳಿದ್ರು.’ ಅಂದರು. ಬನ್ನಿ ಎಂದು ಸ್ವಾಗತಿಸಿದೆ. ಒಳಗೆ ಬರುತ್ತಲೇ ‘ನಾವು ಉತ್ತರ ಕರ್ನಾಟಕ ಮಂದಿ ಅದೀವಿ ನೋಡ್ ತಮ್ಮಾ. ನಮ್ಮ ಕಡಿ ಅಡಿಗಿ ನಿಮಿಗೆ ಇಷ್ಟ ಅಕ್ಕೆತೋ ಇಲ್ಲೋ!’ ಎನ್ನುವ ಅಳುಕಿನಿಂದಲೇ ಎದುರಿಗೇ ಕಾಣುತ್ತಿದ್ದ ಅಡುಗೆ ಮನೆಗೆ ಧಾವಿಸಿ ಅಲ್ಲೇ ಸಿಂಕಿನಲ್ಲಿ ಬಿದ್ದಿದ್ದ ಪಾತ್ರೆಗಳನ್ನು ತೊಳೆಯಲು ಶುರುವಿಕ್ಕಿದರು. ‘ಆಂಟಿ ನಾನೂ ಉತ್ತರ ಕರ್ನಾಟಕದವನೇ. ನಿಮಗೆ ವಗ್ಗರಣಿ ಮಾಡಕ್ ಬರ್ತೇತೇನ್ರಿ?’ ಎಂದು ಕೇಳಿದೆ. ನಮ್ಮ ಕಡೆಯವರು ಎಂದು ತಿಳಿದ ಕೂಡಲೇ ಆಡುವ ಮೊದಲ ಮಾತಿನಲ್ಲೇ ಆಗುವ ಮಾತಿನ ಬದಲಾವಣೆಯನ್ನು ಕಂಡು ನನಗೇ ಅಚ್ಚರಿ ಎನಿಸಿತು. ‘ಮಂಡಕ್ಕಿ ತಂದುಕೊಡ ಯಪ್ಪಾ. ಅದ್ರಾಗೇನದ ಮಾಡೋಣು.’ ಎಂದಿದ್ದೆ ತಡ ನನ್ನ ಕೋಣೆಗೆ ಹೋಗಿ ಮುಖಕ್ಕೆ ಮಾಸ್ಕ್ ಮತ್ತು ಕಾಲಿಗೆ ಚಪ್ಪಲಿ ಹಾಕಿ ಸುಮಾರು ಇನ್ನೂರು ಮೀಟರ್ ದೂರದಲ್ಲಿದ್ದ ಕಿರಾಣಿ ಅಂಗಡಿಯಲ್ಲಿ ಮಂಡಕ್ಕಿ ಪ್ಯಾಕೆಟ್ ತಂದುಕೊಟ್ಟೆ. ಸ್ವಲ್ಪ ಮುಂದೆ ಹೋಗಿ ಈರುಳ್ಳಿ, ಟೊಮಾಟೊ, ಆಲೂಗಡ್ಡೆ ಇತರೆ ತರಕಾರಿಗಳನ್ನು ತೆಗೆದುಕೊಂಡು ಬಂದೆ. ಅಂದಿನಿಂದ ಮುಂದಿನ ಒಂದು ವಾರ ಆಂಧ್ರ ಪೀಜಿ ಧಾರವಾಡದ ಖಾನಾವಳಿಯೇನೊ ಎನ್ನುವ ಹಾಗಾಗಿ ಹೋಯಿತು.
ಕೋವಿಡ್ ಸಂಕಷ್ಟದಲ್ಲಿ ಆದ ಒಂದೇ ಒಂದು ಒಳ್ಳೆಯದೆಂದರೆ ಅದೇ ಎನ್ನಬೇಕು. ಇದು ಸೌಭಾಗ್ಯಮ್ಮನಿಗೂ ಅನ್ವಯಿಸುತ್ತಿತ್ತು ಎನ್ನಬೇಕು. ಅವರ ಮನೆಯಲ್ಲಿ ಅದೇನು ಕಷ್ಟವಿತ್ತೊ ಏನೋ ಎರಡನೇ ದಿನ ಅವರ ಇಬ್ಬರು ಪುಟ್ಟ ಪುಟ್ಟ ಮೊಮ್ಮಕ್ಕಳನ್ನು ಕೂಡ ಕರೆತಂದರು. ಮೂರನೇ ದಿನ ಪುಣೆಗೆ ಕೊಟ್ಟಿದ್ದ ಅವರ ಮಗಳು ತವರಿಗೆ ಬಂದು ಕೋವಿಡ್ ಕಾರಣದಿಂದ ಇಲ್ಲೇ ಉಳಿದಿದ್ದಳು. ಅವಳನ್ನೂ ಸಹಾಯಕ್ಕೆಂದು ಇರಲಿ ಎಂದು ಕರೆದುಕೊಂಡು ಬಂದರು. ಅವರು ಬೆಳಿಗ್ಗೆ ಐದೂವರೆಗೆ ಎದ್ದು ತಮ್ಮ ಮನೆಯಿಂದ ಹೆಬ್ಬಾಳದಿಂದ ಸುಮಾರು ಐದು ಕಿಲೋಮೀಟರ್ ನಡೆದುಕೊಂಡೇ ಕುಟುಂಬಸಮೇತ ನಮ್ಮ ಪೀಜಿಗೆ ತಲುಪುತ್ತಿದ್ದರು. ಒಂದು ವಾರದ ನಂತರ ಹೋಗಿಬರುವುದಕ್ಕೆ ತುಂಬಾ ಕಷ್ಟ. ಆಟೋಗೆ ಕೊಡೋದಕ್ಕೂ ದುಡ್ಡಿಲ್ಲ ಎನ್ನುವ ಕಾರಣಕ್ಕಾಗಿ ಪೀಜಿಯಲ್ಲೇ ಒಂದು ರೂಮನ್ನು ಅವರಿಗೆ ಬಿಟ್ಟುಕೊಡಲಾಯಿತು. ಪೀಜಿ ಓನರ್ ಆಗಾಗ ಫೋನಿನಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಸಂಕಷ್ಟದ ಕಾಲದಲ್ಲಿ ಘನತೆಯಿಂದ ನಮ್ಮ ಪೀಜಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡರು. ಪಂಜಾಬ್ ಮತ್ತು ತಮಿಳುನಾಡಿನಿಂದ ಬಂದು ತಂಗಿದ್ದ ಬೇರೆ ಹುಡುಗರು ಇವರು ಮಾಡುತ್ತಿದ್ದ ನೀರು ಸಾಂಬಾರನ್ನು ನೋಡಿ ಬೈದುಕೊಳ್ಳುತ್ತಿದ್ದರೂ ಜಗ್ಗದೆ ಅಲ್ಲಿಯೇ ಉಳಿದರು.
ಇದೆ ಪುಟ್ಟ ಕಾಲದಲ್ಲಿ ಮಲ್ಲಿಕಾ ಮತ್ತು ಸೌಭಾಗ್ಯ ಗೆಳತಿಯರಾದರು. ಸತ್ತವರ ಸುದ್ದಿಗಳನ್ನೇ ಬಿತ್ತರಿಸುವ ಟೀವಿಯನ್ನು ನೋಡುವುದೇ ಬೇಡ ಎಂದು ನಿರ್ಧರಿಸಿದ್ದರಿಂದ ಅವರಿಬ್ಬರ ನಡುವೆ ಸಾಕಷ್ಟು ಮಾತಾಗುತ್ತಿದ್ದವು. ಇಬ್ಬರ ಊರು, ಮನೆ, ಗಂಡ, ಕೆಲಸ ಹೋಗಿದ್ದು ಇತ್ಯಾದಿ ಇತ್ಯಾದಿಗಳು. ಈ ನಡುವೆಯೇ ನನಗೆ ಉಸಿರಾಟದ ತೊಂದರೆಯಾಗಿ ರಾತ್ರೋರಾತ್ರಿ ಕ್ಯಾಬಿನಲ್ಲಿ ಊರಿನವರೆಗೂ ಹೋಗಿದ್ದೂ ಆಯಿತು. ಆ ಹೊತ್ತಿನಲ್ಲಿ ಸಹಾಯಕ್ಕೆ ಬಂದದ್ದು ಅಮೇರಿಕಾದಲ್ಲಿ ನೆಲೆಸಿರುವ ಗುರುಪ್ರಸಾದ್ ಕಾಗಿನೆಲೆ ವೈದ್ಯರ ತಂಡ. ಅವರು ಆನ್ಲೈನ್ ಪ್ರಾಥಮಿಕ ಮಾಹಿತಿ ತಂಡವೊಂದನ್ನು ರಚಿಸಿದ್ದರು. ಅದು ನನ್ನನ್ನೂ ಸೇರಿ ಸಾಕಷ್ಟು ಜನರ ನೆರವಿಗೂ ಬಂತು. ಇಂತವರ ನಿಸ್ವಾರ್ಥ ಕೆಲಸಗಳು ಅವರ ಸಂತತಿ ನೂರಾಗಲಿ ಎಂದು ಬೇಡುವಂತೆ ಮನಸಾಗುತ್ತದೆ.
ನಾನು ಅದಾದ ಒಂದು ತಿಂಗಳಾದ ಮೇಲೆ ಊರಿಂದ ಬಂದೆ. ಬಂದಾಗ ಸೌಭಾಗ್ಯಮ್ಮ ಪೀಜಿಯಲ್ಲಿ ಇರಲಿಲ್ಲ. ಓನರ್ ಕೂಡ ಇರಲಿಲ್ಲ. ಮಲ್ಲಿಕಾ ಕೂಡ ಕಾಣಲಿಲ್ಲ. ಸೌಭಾಗ್ಯಮ್ಮಳ ಮೇಲೆ ಅಲ್ಲಿನ ಹಲವಾರು ದೊಡ್ಡ ದೊಡ್ಡ ಪಾತ್ರೆಗಳನ್ನು ಅಕ್ಕಿ ಮೂಟೆಗಳನ್ನು ಮನೆಗೆ ಸಾಗಿಸಿದ್ದ ಆರೋಪ ಬಂದಿತ್ತು. ಪಕ್ಕದ ಪಾನ್ ಬೀಡಾ ಅಂಗಡಿಯವನು ಪೀಜಿ ಕಂಪೌಂಡಿನಲ್ಲಿ ಇರಿಸಿದ್ದ ಪುಟ್ಟ ಬೇಬಿ ಸೈಕಲ್ಲನ್ನು ಕೂಡ ಅವಳ ಮೊಮ್ಮಗಳಿಗಿರಲಿ ಎಂದು ಸಾಗಿಸಿದ್ದಳು ಎಂಬ ಗಾಳಿಮಾತಿತ್ತು.
ಮಲ್ಲಿಕಾ ಕೂಡ ಯಾಕೋ ಬರಲಿಲ್ಲ. ಯಾರನ್ನು ಕೇಳುವುದು ತಿಳಿಯಲಿಲ್ಲ. ಕಣ್ಣುಮುಚ್ಚಿ ಕಣ್ಣು ತೆಗೆಯುವುದರೊಳಗೆ ಏನೋ ಒಂದು ಬದಲಾಗಿಬಿಟ್ಟಿರುತ್ತದಲ್ಲ… ಯಾರನ್ನೋ ಕಳೆದುಕೊಂಡಿರುತ್ತೇವೆ. ಯಾರೋ ಕಣ್ಮರೆಯಾಗಿರುತ್ತಾರೆ. ಯಾರೋ ಬದುಕಿನ ಭರವಸೆ ಬಿಟ್ಟು ಕೂತಿರುತ್ತಾರೆ. ಹೀಗೆ ಹೇಳುವಾಗಲೇ ಯಾರೋ ಕಾಪಾಡು ದೇವರೇ ಎಂದು ಕೈಮುಗಿಯುತ್ತಿರುತ್ತಾರೆ… ಏನೋ ಒಂದು ಬದಲಾಗಿರುತ್ತದೆ. ಬಹುಶಃ ಬದಲಾವಣೆಯೇ ನಿರಂತರ. ಕಾಲಘಟ್ಟದಲ್ಲಿ ನಾವು ಎಲ್ಲವನ್ನೂ ಮರೆಯುತ್ತೇವೆ. ಆ ಮರೆವೆ ನಮ್ಮನ್ನು ಹಳೆಯ ಭಾರವನ್ನು ಕಳೆದುಕೊಂಡು ಹೊಸದಾಗಿ ಮುಂದೆ ಸಾಗಲು ಸಹಾಯ ಮಾಡುತ್ತದೆ.
ಇತ್ತೀಚಿಗೆ ಎರಡು ತಿಂಗಳ ಹಿಂದೆ ಪೀಜಿ ಹತ್ತಿರದಲ್ಲೇ ಇರುವ ಉಡುಪಿ ಉಪಹಾರ ದರ್ಶಿನಿಯಲ್ಲಿ ಎಂಬಂತೆ ನಾನು ಮೊಸರು ವಡೆ ತಿನ್ನುತ್ತಿದ್ದೆ. ಸ್ವಲ್ಪ ದೂರದಲ್ಲಿ ಮಲ್ಲಿಕಾ ಸಾಂಬಾರ್ ಡಿಪ್ ಮಾಡಿದ ವಡೆಯನ್ನು ತಿನ್ನುತ್ತಿದ್ದರು. ಕಾಕತಾಳಿಯವೋ ಅವರನ್ನು ನೋಡಿದ್ದೇ ತಡ ನನ್ನ ವಡೆ ತಟ್ಟೆಯನ್ನು ಎತ್ತಿಕೊಂಡೆ ಅವರ ಬಳಿ ಹೋಗಿ ‘ಆಂಟಿ! ಏನು ಪತ್ತೇನೆ ಇಲ್ಲ. ಹೇಗಿದೀರಿ? ಆರಾಮ? ಈಗೆಲ್ಲಿ ಕೆಲಸ ಮಾಡ್ತಿದೀರಿ? ತುಂಬಾ ದಿನ ಆದಮೇಲೆ ಈಕಡೆ ಬಂದಿದಿರಿ?’ ಎಂದು ಒಂದೇ ಉಸಿರಿನಲ್ಲಿ ಕೇಳಿದೆ. ಅವರು ನಿಧಾನವಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಕೋವಿಡ್ ಕಾಲದಲ್ಲೇ ಅವರು ಮಗನ ಊರಿಗೆ ಹೋಗಿ ಇದ್ದರಂತೆ. ಎಲ್ಲಾ ಸರಿ ಆದ ಮೇಲೆ ಅಲ್ಲೆಲ್ಲ ತಮಗೆ ಸರಿ ಹೋಗಲ್ಲ ಅಂತ ಮತ್ತೆ ಬೆಂಗಳೂರಿಗೆ ಬಂದರಂತೆ. ಮೊದಲಿದ್ದ ಮನೆಯಲ್ಲೇ ಕೆಲಸ ಸಿಕ್ಕಿದೆಯಂತೆ. ‘ಕೆಲಸ ಬಿಟ್ಟು ಕೆಲಸ ಸೇರಿಕೊಂಡರೆ ಎಲ್ಲವೂ ಮೊದಲಿನಂತೆ ಇರೋದಿಲ್ಲ. ಇನ್ನು ಕೀಳಾಗಿ ನೋಡ್ತಾರೆ. ಆದ್ರೆ ದುಡ್ಡು ಅವಶ್ಯಕತೆ ಅಂದ್ರೆ ಮರುಗಿ ಕೊಡ್ತಾರೆ. ಬರಿ ಮಾತಾಡೋ ಜನಗಳೇ ಹೆಚ್ಚಾಗಿರುವಾಗ ಹೀಗೆ ಅತ್ತು ಕರೆಯೋರೆ ವಾಸಿ ಅಲ್ವಾಪ!’ ಎಂದು ಹೇಳಿದ್ರು. ಆದರೂ ಅವರ ಕಣ್ಣುಗಳಲ್ಲಿ ಮೊದಲು ಕಾಣುತ್ತಿದ್ದ ಮಿಂಚು ಮತ್ತು ದನಿಯಲ್ಲಿನ ಗತ್ತು ಕಾಣೆಯಾಗಿತ್ತು. ಬದುಕೇ ಹೀಗೆ… ಮನುಷ್ಯ ಕುಗ್ಗಿ ಹೋಗುವುದು ಬದುಕಿನ ರೌದ್ರ ವಾಸ್ತವಗಳನ್ನು ತಲೆಬಾಗಿ ಒಪ್ಪಿಕೊಳ್ಳುತ್ತಾ ಹೋಗುವಾಗ… ಅಲ್ಲವೇ? ಅದನ್ನ ಮೆಟ್ಟಿ ನಿಲ್ಲುವ ಕೆಚ್ಚು ತಂದುಕೊಳ್ಳಲು ಮನುಷ್ಯ ಮನಸ್ಸಿನಲ್ಲೇ ಅದೆಷ್ಟು ಒದ್ದಾಡುತ್ತಾನೆ. ಅದು ಆಗಾಗ ಕಿಡಿಯಾಗಿ ಹೊರಹೊಮ್ಮುತ್ತಲೇ ಇರುತ್ತದೆ. ಹೀಗಂದುಕೊಳ್ಳುವಾಗಲೇ ಅವ್ರು ಮೊಸರು ವಡೆಗೆ ಎಷ್ಟು ಎಂದು ಕೇಳಿದರು. ನಾನು ಬೇಕಾ ಆಂಟಿ ತರಲಾ ಎಂದೆ. ಬೇಡಪ್ಪ, ಟೀ ಅಷ್ಟೇ ಕೊಡಿಸು ಅಂದರು. ಹೂ ತರ್ತೀನಿ ಅಂದು ಕೌಂಟರ್ ಕಡೆ ಹೊರಟೆ. ಹಾಗೆ ಹೋಗುವಾಗ ಎರಡು ಬೇರೆ ಬೇರೆ ತಟ್ಟೆಗಳಲ್ಲಿ ಸಾಂಬಾರ್ ಮತ್ತು ಮೊಸರಿನಲ್ಲಿ ಮುಳುಗಿ ತೇಲುತ್ತಿದ್ದ ಉದ್ದಿನ ವಡೆಗಳೇ ನೆನಪಿಗೆ ಬಂದವು.
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.
👍