ಒಬ್ಬ ಮಹಿಳೆ ತನ್ನ ಗಂಡನಿಂದಲೊ, ಜೀವನ ಸಂಗಾತಿಯಿಂದಲೊ ಅಥವಾ ಆ ರೀತಿಯ ಸಂಬಂಧವು ಕೊನೆಯಾಗಿ ಬೇರ್ಪಟ್ಟ ಮೇಲೂ ಅವರಿಂದ ಹಿಂಸೆಗೊಳಗಾಗಿ ಸಾಯುವುದು ಬಹಳ ದುಃಖಕರ ವಿಷಯ. ಅದು ಅಷ್ಟೇ ತೀವ್ರವಾದ ಸಾಮಾಜಿಕ ಸಮಸ್ಯೆಯೂ ಹೌದು. ಒಂದು ಮುಂದುವರೆದ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಾತ್ಯ ದೇಶವಾದ, ಕೇವಲ ೨೬ ಮಿಲಿಯನ್ ಜನರಿರುವ ಈ ದೇಶದಲ್ಲಿ ಕೌಟುಂಬಿಕ ಹಿಂಸೆ ಹಿನ್ನೆಲೆಯಲ್ಲಿ ಹೆಂಗಸೊಬ್ಬಳನ್ನು ಸಾಯಿಸುವುದು ಅವಮಾನವನ್ನುಂಟು ಮಾಡುವ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಬರಹ ನಿಮ್ಮ ಓದಿಗೆ
ಪ್ರಿಯ ಓದುಗರೆ,
ಆಸ್ಟ್ರೇಲಿಯಾದಲ್ಲಿ ಮತ್ತೆ ಭುಗಿಲೆದ್ದಿದೆ ಕುಟುಂಬ-ಆಧಾರಿತ ಮಹಿಳಾ ದೌರ್ಜನ್ಯ ಕುರಿತ ಮಾತುಕತೆ. ಆಸ್ಟ್ರೇಲಿಯಾದ ನಗರಗಳಲ್ಲಿ, ಪಟ್ಟಣಗಳಲ್ಲಿ ಸಾವಿರಾರು ಮಹಿಳೆಯರು, ಹುಡುಗಿಯರು ಕಳೆದ ವಾರಾಂತ್ಯದ ದಿನಗಳಲ್ಲಿ ಬೀದಿಗಿಳಿದು ಮಹಿಳೆಯರನ್ನು ಹಿಂಸಿಸುವ, ಅವರ ಮೇಲೆ ದೌರ್ಜನ್ಯ ನಡೆಸಿ ಕೊಲ್ಲುವುದನ್ನು ಪ್ರತಿಭಟಿಸಿದರು. ಈ ರೀತಿಯ ಕೌಟುಂಬಿಕ ಮತ್ತು ಖಾಸಗಿ ಸಂಬಂಧ ಹಿನ್ನೆಲೆಯಲ್ಲಿ ನಡೆದ ದೌರ್ಜನ್ಯದಿಂದ ೨೦೨೪ ರಲ್ಲಿ ಇಲ್ಲಿಯ ತನಕ, ಅಂದರೆ ಏಪ್ರಿಲ್ ತಿಂಗಳಿನವರಗೆ, ೨೬ ಮಹಿಳೆಯರು ಸತ್ತಿದ್ದಾರೆ. ಅಂದರೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಒಬ್ಬ ಮಹಿಳೆ ಕೌಟುಂಬಿಕ ದೌರ್ಜನ್ಯದ ಕಾರಣದಿಂದ ಸತ್ತಿದ್ದಾಳೆ. ಇದು ನೂರಕ್ಕೆ ನೂರು ಪಾಲು ಖಂಡನೀಯ. ಖಂಡಿಸಿರುವವರಲ್ಲಿ ಅನೇಕ ಮಹಿಳಾ-ಪರ ಸಂಸ್ಥೆಗಳು, ವಕೀಲರು, ಪೋಲೀಸರು, ಬರಹಗಾರರು, ವಿದ್ಯಾರ್ಥಿಗಳು, ಶಿಕ್ಷಕರು ಇದ್ದಾರೆ. ‘ಪರಿಸ್ಥಿತಿ ಬದಲಾಯಿಸಬೇಕು’ ಎನ್ನುವ ಇವರ ಕರೆಗೆ ಓಗೊಟ್ಟಿರುವವರು ರಾಜಕಾರಣಿಗಳು ಮತ್ತು ಅಧಿಕಾರದಲ್ಲಿರುವ ಮಂತ್ರಿಗಳು. ಮುಖ್ಯವಾಗಿ ದೇಶದ ಪ್ರಧಾನ ಮಂತ್ರಿ ಆಂಟೋನಿ ಆಲ್ಬಾನೀಸಿ ಅವರು ತಮ್ಮ ಬೆಂಬಲ ಮತ್ತು ದನಿಯನ್ನು ಜೋಡಿಸಿ ಮಹಿಳಾ ದೌರ್ಜನ್ಯವು ದೇಶದ ದೊಡ್ಡ ಬಿಕ್ಕಟ್ಟಿನ ವಿಷಯ, ಈ ಅಂಟುರೋಗವನ್ನು ನಿರ್ಮೂಲನೆ ಮಾಡಬೇಕು, ಎಂದಿದ್ದಾರೆ. ಅದನ್ನು ಕುರಿತು ಮತ್ತಷ್ಟು ಕೆಲಸ ಮಾಡಲು ತಮ್ಮ ಸರಕಾರದ ವತಿಯಿಂದ ಹಣಸಹಾಯವನ್ನು ಘೋಷಿಸಿದ್ದಾರೆ.
ಒಬ್ಬ ಮಹಿಳೆ ತನ್ನ ಗಂಡನಿಂದಲೊ, ಜೀವನ ಸಂಗಾತಿಯಿಂದಲೊ ಅಥವಾ ಆ ರೀತಿಯ ಸಂಬಂಧವು ಕೊನೆಯಾಗಿ ಬೇರ್ಪಟ್ಟ ಮೇಲೂ ಅವರಿಂದ ಹಿಂಸೆಗೊಳಗಾಗಿ ಸಾಯುವುದು ಬಹಳ ದುಃಖಕರ ವಿಷಯ. ಅದು ಅಷ್ಟೇ ತೀವ್ರವಾದ ಸಾಮಾಜಿಕ ಸಮಸ್ಯೆಯೂ ಹೌದು. ಒಂದು ಮುಂದುವರೆದ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಾತ್ಯ ದೇಶವಾದ, ಕೇವಲ ೨೬ ಮಿಲಿಯನ್ ಜನರಿರುವ ಈ ದೇಶದಲ್ಲಿ ಕೌಟುಂಬಿಕ ಹಿಂಸೆ ಹಿನ್ನೆಲೆಯಲ್ಲಿ ಹೆಂಗಸೊಬ್ಬಳನ್ನು ಸಾಯಿಸುವುದು ಅವಮಾನವನ್ನುಂಟು ಮಾಡುವ ವಿಷಯ. ಇದು ಕ್ಷಮಿಸಲಾರದ ಅಪರಾಧ. ಪುಣ್ಯವಶಾತ್, ಇಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ಗುರುತಿಸುವುದು, ಅವರನ್ನು ನ್ಯಾಯ ವಿಚಾರಣೆಗೊಳಪಡಿಸುವುದು ಸುಲಭ. ಹಾಗಾಗಿ ನ್ಯಾಯಕ್ಕೆ ಬೆಲೆ ಬರುತ್ತದೆ. ಈ ರೀತಿಯ ನ್ಯಾಯ ವಿಚಾರಣೆ ಬೇರೆ ರೀತಿಯ ಕೌಟುಂಬಿಕ ಹಿನ್ನೆಲೆಯಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಅಷ್ಟೊಂದು ಸುಲಭಸಾಧ್ಯವಲ್ಲ. ಉದಾಹರಣೆಗೆ ವಯಸ್ಸಾದ ಹಿರಿಯರ ಮೇಲೆ ಕುಟುಂಬದವರು ನಡೆಸುವ ಹಿಂಸೆ ಮತ್ತು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವುದೇ ಕಷ್ಟ. ಒಮ್ಮೊಮ್ಮೆ ಹಾಗೆ ಬಂದರೂ ಆ ಪ್ರಕರಣಗಳು ಅಪರಾಧಿಗಳನ್ನು ನ್ಯಾಯವಿಚಾರಣೆಗೆ ಒಳಪಡಿಸುವ ಹಂತದವರೆಗೂ ತಲುಪುವುದೇ ಇಲ್ಲ.
ಇರಲಿ, ಮತ್ತೆ ಆಸ್ಟ್ರೇಲಿಯಾದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಮಹಿಳಾ ದೌರ್ಜನ್ಯ ಪ್ರತಿಭಟನೆ ವಿಷಯಕ್ಕೆ ಬರುತ್ತೀನಿ. ಈ ವರ್ಷ ಏಪ್ರಿಲ್ ತಿಂಗಳವರೆಗೂ ೨೬ ಮಹಿಳೆಯರ ಸಾವಿಗೆ ಅವರ ಗಂಡನೋ, ಜೀವನಸಂಗಾತಿಯೊ, ಪ್ರೇಮಿಯೊ ಅಥವಾ ಅವರ ಅಂತಹ ಮಾಜಿಗಳು ಕಾರಣರಾಗಿದ್ದಾರೆ. ಈ ಮಹಿಳೆಯರಲ್ಲಿ ಅರ್ಧ ಸಂಖ್ಯೆ ದೇಶದ ಗ್ರಾಮಾಂತರ (rural) ಪ್ರದೇಶಗಳಲ್ಲಿನವರು. ಇದೊಂದು ಸಂಖ್ಯೆಯೇ ಬಹಳಷ್ಟು ಕಥೆಗಳನ್ನು ಹೇಳುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯೊಬ್ಬಳು ಕೌಟುಂಬಿಕ ಹಿಂಸೆಗೊಳಗಾದಾಗ ಅವಳಿಗೆ ಸಿಗುವ ಸಹಾಯ ಕಡಿಮೆ ಅಥವಾ ತಡವಾಗಬಹುದು ಎನ್ನುತ್ತಾರೆ ಮಹಿಳಾ-ಪರ ಸಹಾಯ ಸಂಘಟಕರು. ಏಕೆಂದರೆ, ಹತ್ತಿರದ ಪಟ್ಟಣದಿಂದಲೂ ಕೂಡ ದೂರವಿರುವ ಪ್ರದೇಶಕ್ಕೆ ಸಾರ್ವಜನಿಕ ಸಾರಿಗೆ ಸೌಕರ್ಯ ಬಹಳ ಕಡಿಮೆ. ಹಿಂಸೆ ಅನುಭವಿಸುವ ಅವಳು ಮನೆ ತೊರೆದು ಹೊರಬಂದು ತನಗೆ ರಕ್ಷಣೆ ಸಿಗುವ ಕಡೆ ಹೋಗಬೇಕೆಂದರೆ ಎದುರಾಗುವ ಮೊದಲ ಸಮಸ್ಯೆ ವಾಹನ ಸೌಲಭ್ಯ. ಅವಳ ಬಳಿಯೇ ಕಾರ್ ಇದ್ದರೂ ಅವಳು ಅದನ್ನು ಚಲಾಯಿಸಿ ಹೊರಡುವ ಮುಂಚೆಯೇ ಹಿಂಸೆ ಕೊಡುತ್ತಿರುವ ವ್ಯಕ್ತಿ ಅವಳನ್ನು ಸಮೀಪಿಸಬಹುದು. ಈ ಭಯದಿಂದ ಅವಳು ಮನೆ ತೊರೆಯುವುದೇ ಕಡಿಮೆ. ಒಂದು ಪಕ್ಷ ಅವಳು ಮನೆತೊರೆದು ಬಂದರೂ ಸಾಮಾಜಿಕ ಭದ್ರತೆ ಮತ್ತು ತಾನು ಕ್ಷೇಮವಾಗಿರುವ ನೆಲೆ ಸಿಗುವುದು ಕಷ್ಟ.
ಆಸ್ಟ್ರೇಲಿಯಾಯದಲ್ಲಿ ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯಕ್ಕೊಳಗಾಗಿರುವ ಅನೇಕ ಮಹಿಳೆಯರು ಎದುರಿಸುವ ಇತರ ಸಮಸ್ಯೆಗಳನ್ನು ನೋಡಿದರೆ ಅವುಗಳಲ್ಲಿ ಎತ್ತಿ ಕಾಣುವುದು ಅವರು ವಸತಿಹೀನರಾಗುವ (homeless) ಸಂಭವ, ಹಣದ ಅನಾನುಕೂಲತೆ, ನೌಕರಿಯಲ್ಲಿರದಿರುವುದು, ಇದ್ದರೂ ಮಕ್ಕಳ ಪೋಷಣೆಯ ಕಾರಣದಿಂದ ಅರೆಕಾಲಿಕ ಕಡಿಮೆ ವರಮಾನದ ನೌಕರಿಯಲ್ಲಿರುವುದು, ಇದರಿಂದ ಉಂಟಾಗುವ ಉಳಿತಾಯದ ಕೊರತೆ, ಈ ಕಾರಣದಿಂದ ಅವಳು ತನ್ನ ಗಂಡನನ್ನೋ ಇಲ್ಲಾ ಜೀವನಸಂಗಾತಿಯನ್ನೋ ಅವಲಂಬಿಸುವುದು ಆಗುತ್ತದೆ. ಆಸ್ಟ್ರೇಲಿಯಾದ ಪಾಶ್ಚಾತ್ಯ ಸಮಾಜದ ಸಂಸ್ಕೃತಿಯಲ್ಲಿ ಸ್ವಂತಿಕೆಯೆಂಬುದು, ವೈಯಕ್ತಿಕ ಮನೋಭಾವನೆ ವ್ಯಕ್ತಿಗತವಾಗಿರುತ್ತದೆ. ಅವಲಂಬನೆ ಕಷ್ಟವಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಹಣದ ಅಭದ್ರತೆ, ತನ್ನ ಮಕ್ಕಳ ಯೋಗಕ್ಷೇಮ ಮತ್ತು ಮನೆಮಕ್ಕಳಂತಿರುವ ಸಾಕುಪ್ರಾಣಿಗಳ ಕ್ಷೇಮದ ಚಿಂತೆ, ಹೊರಬಂದರೆ ಮತ್ತೊಂದು ರೀತಿಯ ಅವಲಂಬನೆಯಲ್ಲಿ ಸಿಕ್ಕಿಕೊಳ್ಳುವ ಬಗ್ಗೆ ಇರುವ ಅಧೈರ್ಯ, ಹೀಗೆ ಅನೇಕ ಕಾರಣಗಳಿಂದ ಹಿಂಸೆಯನ್ನು ಅನುಭವಿಸಿಕೊಂಡೇ ಇದ್ದುಬಿಡುವ ನಿರ್ಧಾರದಲ್ಲಿ ಮಹಿಳೆಯರು ಸಿಕ್ಕಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರ ರಕ್ಷಣೆಗೆ, ತಾತ್ಕಾಲಿಕ ಆಶ್ರಯ ಕೊಡುವ, ಸರಕಾರದ ಹಣ ನೆರವನ್ನು ಪಡೆಯಲು ಸಹಾಯ ಮಾಡುವ ಅನೇಕ ಸಂಸ್ಥೆಗಳಿವೆ.
ಕಳೆದ ವಾರಾಂತ್ಯದ ಪ್ರತಿಭಟನಾಕಾರಲ್ಲಿ ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ಇದ್ದರು. ಅನೇಕರು ಹೇಳಿದ್ದು ಕೌಟುಂಬಿಕ ದೌರ್ಜನ್ಯವೆಂಬ ನಾಣ್ಯದ ಮತ್ತೊಂದು ಮುಖವಾದ ಗಂಡಸಿನ ಮನೋಭಾವ, ಚರ್ಯೆಗಳು ಬದಲಾಗಬೇಕು ಎಂದು. ಇದನ್ನು ಕುರಿತ ‘ಮೆನ್ಸ್ ಬಿಹೇವಿಯರ್ ಚೇಂಜ್’ ಹೆಸರಿನ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಆ ಪ್ರಯತ್ನ ಸಾಲದಾಗಿದೆ. ಮಹಿಳೆಯರನ್ನು ಗೌರವಿಸಬೇಕು ಎನ್ನುವ ಸಂದೇಶ ಕೆಲಸ ಮಾಡುತ್ತಿಲ್ಲ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಿದ್ದರೂ ಪ್ರಕರಣಗಳು ಮುಂದುವರೆದಿವೆ. ಈ ದೇಶದಲ್ಲಿ ಮಹಿಳೆಯ ಬಗ್ಗೆ ಇರುವ ಸಮಾಜದ ದೃಷ್ಟಿಕೋನವು ಬದಲಾಗಬೇಕು. ಅದಾಗಬೇಕೆಂದರೆ ಮನೆಮನೆಯಲ್ಲಿನ ಗಂಡಸರು- ತಂದೆ, ಸಹೋದರ, ಮಗ, ಮಾವ, ಅಂಕಲ್, ತಾತ – ಎಲ್ಲರ ಮನೋಭಾವಗಳು, ದಿನನಿತ್ಯದ ಜೀವನದಲ್ಲಿ ಅವರು ತೋರಿಸುವ ಹೆಂಗಸರ, ಹುಡುಗಿಯರ ಬಗೆಗಿನ ಚರ್ಯೆಗಳು, ಧೋರಣೆಗಳು, ನಿಲುವುಗಳು ಬದಲಾಗಬೇಕು.
ಮಹಿಳಾ ದೌರ್ಜನ್ಯ ವಿಷಯ ಹೊಸದೇನಲ್ಲ. ಅದು ಪ್ರಪಂಚದಾದ್ಯಂತ ಇನ್ನೂ ಚಾಲ್ತಿಯಲ್ಲಿದೆ. ಅದರ ವಿರುದ್ಧ ಪ್ರತಿಭಟನೆ, ಕೆಲಸ ನಡೆದೇ ಇದೆ. ನಾವಿರುವ ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಜ್ವಲಂತವಾಗಿರುವ ಈ ಸಮಸ್ಯೆ ನಾಚಿಕೆಗೇಡಿನ ವಿಷಯ. ಅದರಲ್ಲೂ ಮುಂದುವರೆದ ದೇಶಗಳ ಸಮಾಜದಲ್ಲಿ ಇದೆಯೆಂದರೆ ಅದು ಮುಖಕ್ಕೆ ರಾಚುತ್ತದೆ. ಅಂತಹುದೊಂದು ದೇಶವಾದ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಘನತೆಗೆ ಬೆಲೆಯಿರಲಿ. ಅವರ ಕುಟುಂಬಗಳಲ್ಲಿನ ಗಂಡಸರ ಮನೋದೃಷ್ಟಿಗಳಲ್ಲಿ, ನಂಬಿಕೆಗಳಲ್ಲಿ ಮಹಿಳಾ-ಪರ ಬದಲಾವಣೆಗಳು ಬರಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.