ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ ಹಿಂಬಾಲಿಸತೊಡಗಿದೆ. ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು. ನನ್ನ ಮನದಲ್ಲಿ ಅವರ ಕುರಿತು ಯೋಚಿಸುತ್ತಿದ್ದ ಭಾವ ಅವರು ಅಂಧರೆಂದುಕೊಂಡು ಮನದೊಳಗೆ ಮೂಡಿದ್ದ ಅಸಡ್ಡೆಯ ಭಾವ ಸರ್ರನೆ ಇಳಿಯಿತು.
ಮಹಮ್ಮದ್ ರಫೀಕ್ ಕೊಟ್ಟೂರು ಬರಹ ನಿಮ್ಮ ಓದಿಗೆ
ಹೋದೆ ಹೋದೆ ಏನೋ ಬದಲಾವಣೆಯಾಗಿದೆ ಕಾಂಪೌಂಡು ಎತ್ತರಿಸಿದ್ದಾರೆ ಎನ್ನುತ್ತಾ ಮುಂದೆ ಚಲಿಸಿದೆ. ನಾನಂದುಕೊಂಡಂತೆ ಕಮೀಷನರ್ ಆಫೀಸ್ ಬರಲೇ ಇಲ್ಲ. ಈ ಹುಡುಗನ ಲೆಫ್ಟ್ ರೈಟ್‌ನಲ್ಲಿ ನನ್ನ ದಾರಿ ತಪ್ಪಿತು ಎಂದು ಆ ಹುಡುಗನನ್ನು ಬೈದುಕೊಳ್ಳುತ್ತಾ ಮನುಷ್ಯರಾರಾದರೂ ಕಾಣುತ್ತಾರ ಎಂದು ಅತ್ತಿತ್ತ ಹಿಂದೆ ಮುಂದೆ ನೋಡುತ್ತಾ, ಮುಂದೆ ಹೋದೆ ಹಿಂದೆ ಹೋದರೆ ಮತ್ತೆ ಅರ್ಧ ಕಿಲೋ ಮೀಟರ್ ಚಲಿಸಬೇಕಲ್ಲ ಎಂದು. ಪಕ್ಕದಲ್ಲಿ ಶಾಲೆಯ ರೀತಿಯ ಆದರೆ ಮಕ್ಕಳ ಧ್ವನಿಯಿರದ ಕಟ್ಟಡದೊಳಗೆ ಒಂದಿಬ್ಬರು ಕಂಡಿದ್ದರಿಂದ ಒಳಗೆ ಹೋದೆ. ಇಬ್ಬರೂ ಫೋನಿನಲ್ಲಿ ತಲ್ಲೀನ…. ನನ್ನೆಡೆಗೆ ನೋಡುತ್ತಿಲ್ಲ. ಏನ್ ಮಾಡೋದು ಎಂದು ಕೆಮ್ಮಿದೆ. ಊಹುಂ ನನ್ನೆಡೆ ತಲೆಯೂ ಎತ್ತಲಿಲ್ಲ. ಕೊನೆಗೆ ಆದದ್ದಾಗಲಿ ಎಂದು ‘ಸಾರ್ ಇಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆದಿದೆಯಲ್ಲಾ ಆಯುಕ್ತರ ಕಚೇರಿ ಎಲ್ಲಿದೆʼ ಎಂದೆ. ಪಾಪ ಆಪ್ತತೆಯಿಂದ ಅವರು ‘ಈ ಕಟ್ಟಡ ಅಂಧರ ಶಾಲೆ ಈ ಕಟ್ಟಡದ ಹಿಂಭಾಗಕ್ಕೆ ಕೈ ತೋರಿಸಿ ಈ ಗೇಟಿನಿಂದ ಹೋಗಿ ಬಲಕ್ಕೆ ತಿರುಗಿ ಸರ್ ಹತ್ತಿರ ಇದೆʼ ಎಂದರು.

ಅವರು ಗೇಟಿನ ಹೊರ ಬಂದು ‘ಮುಂದೆ ಸ್ಟೇಡಿಯಂ ಕಾಣಿಸುತ್ತಿದೆಯಲ್ಲಾ ಸರ್ʼ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿರುವವರ ರೀತಿಯಲ್ಲಿ ಕೇಳಿದರು… ‘ಕಾಣುತ್ತಿದೆ ಹೇಳಿʼ ಎಂದೆ ‘ಅದರ ಮುಂದಿನ ಸಿ.ಸಿ ರೋಡ್ ಹಿಡಿದು ಬಲಕ್ಕೆ ಹೋಗಿ, ಅಲ್ಲಿ ಹೋಟೇಲಿದೆ. ನಿಮ್ಮ ಶಿಕ್ಷಕರು ಅಲ್ಲಿಯೇ ಇರುತ್ತಾರೆʼ ಎಂದರು. ನಾನು ಅವರು ಹೇಳಿದಂತೆ ಸಿ.ಸಿ.ರೋಡ್ ಬಳಸಿ ಆಯುಕ್ತರ ಕಚೇರಿ ತಲುಪಿದಾಗ ಎಂಟು ಮುಕ್ಕಾಲು. ಇನ್ನೂ ಸಮಯವಿತ್ತು. ಇನ್ನೂ ಕೌನ್ಸಿಲಿಂಗ್ ತಡವಿದ್ದುದರಿಂದ ಮತ್ತೆ ಹೋಟೇಲ್ ಕಡೆ ನಡೆದೆ.

