Advertisement
ವಲಸಿಗರ ನಾಡಿನಲ್ಲಿ ಹಾಲೋವಿನ್: ದೇವಿಕಾ ಶೆಟ್ಟಿ ಬರಹ

ವಲಸಿಗರ ನಾಡಿನಲ್ಲಿ ಹಾಲೋವಿನ್: ದೇವಿಕಾ ಶೆಟ್ಟಿ ಬರಹ

ಯಾವುದೇ ಆಚರಣೆ ಆರಾಧನೆಯ ಹಿಂದಿನ ಕಾರಣ ಪರಿಣಾಮಗಳನ್ನು ಕೆದಕುವಾಗ ಮನುಷ್ಯ ಅತೀ ಇಂದ್ರಿಯ ಶಕ್ತಿಗಳ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಬದುಕಿಬಾಳುವ ಸ್ವಾಸ್ಥ್ಯಕ್ಕಾಗಿ ಎನ್ನುವ ವಾಸ್ತವ ಅರಿವಾಗುತ್ತದೆ. ಹುಟ್ಟು ಸಾವಿನ ಬಗ್ಗೆ ಇದು ಹೀಗೆ ಎಂದು ಹೇಳಲಾಗದ ಮನುಷ್ಯ ದೈವ ದೇವರ ಸ್ವರೂಪ ನೀಡಿ ಪ್ರಾರ್ಥನೆಯಲ್ಲಿ ಕಂಡ ನೆಮ್ಮದಿಯ ಫಲ ಸ್ವರೂಪಗಳಿವು. ಆದರೆ ಹುಟ್ಟು ಸಾವಿನ ಹಿಂದು ಮುಂದಿನ ಮೂಲವನ್ನು ಕೆದಕುವಾಗ ನನಗೆ ಹುಟ್ಟಿದ ಕುತೂಹಲವಿದು. ಎಲ್ಲ ಜಾತಿ, ಮತ, ಧರ್ಮಗಳ ಆಚರಣೆ ಆರಾಧನೆಯ ಪರಂಪರೆಗಳಲ್ಲಿ ಇರುವ ನಂಬಿಕೆಗಳಲ್ಲಿರುವ ಸಾಮ್ಯ ಬೆರಗು ಉಂಟು ಮಾಡುತ್ತದೆ.
ಪಾಶ್ಚಿಮಾತ್ಯರು ಆಚರಿಸುವ ಹಾಲೋವಿನ್‌ ಹಬ್ಬದ ಕುರಿತು ದೇವಿಕಾ ನಾಗೇಶ್ ಬರಹ

ಹಬ್ಬಗಳೆಂದರೆ ಯಾರಿಗೆ ಸಂಭ್ರಮವಿಲ್ಲ ಹೇಳಿ. ದಿನ ನಿತ್ಯದ ಏಕತಾನತೆಯಿಂದ ಬಿಡುಗಡೆ ಬಯಸುವ ಜೀವಗಳಿಗೆ ಇಂತಹ ನೆವ ಸಿಕ್ಕಿದರೆ ಹುಡಿ ಹಾರಿಸಿ ಬಿಡುತ್ತಾರೆ. ಉದಾಹರಣೆಗೆ ನಮ್ಮ ಊರಿನ ಅಷ್ಟಮಿ, ಚೌತಿ, ದೀಪಾವಳಿ ಕ್ರಿಸ್ಮಸ್, ಬಕ್ರೀದ್ ಹಬ್ಬಗಳನ್ನು ನೆನಪಿಸಿಕೊಳ್ಳಿ. ಪ್ರತಿ ಹಬ್ಬಗಳ ಹಿಂದೆ ಒಂದು ಕಥೆ ಇರುತ್ತದೆ… ದಸರಾ ನಾಡ ಹಬ್ಬವಾಗಿ ಜಾತಿ ಮತ ಧರ್ಮಗಳನ್ನು ಮೀರಿ ಊರು ಪರವೂರಿನ ಪ್ರವಾಸಿಗರನ್ನು ಇಂದಿಗೂ ಸೆಳೆಯುತ್ತದೆ… ಅಮೇರಿಕಾದಲ್ಲಿ ಜಾತಿ, ಮತ, ಧರ್ಮ, ವರ್ಣಗಳ ಹಂಗಿಲ್ಲದಂತೆ ಆಚರಿಸುತ್ತಿರುವ ಹಬ್ಬ ಹಾಲೋವಿನ್.

ಅಬ್ಬರದ ಬೇಸಿಗೆಯ ಸಂಭ್ರಮ ಕಳೆದು ಮರಗಟ್ಟಿ ಹೋಗುವ ಚಳಿಯನ್ನು ಸ್ವಾಗತಿಸುವ ಸಂಕ್ರಮಣದ ಕಾಲವೂ ಇದು ಹೌದು. ಅಕ್ಟೋಬರ್ ತಿಂಗಳ ಕೊನೆಯ ದಿನ ಬರುವ ಈ ಹಬ್ಬಕ್ಕೆ ತಿಂಗಳ ಪ್ರಾರಂಭದಿಂದಲೇ ತಯಾರಿ ಶುರುವಾಗುತ್ತದೆ. ಹಾಲೋವಿನ್ ಹಬ್ಬದ ದಿನ ಮನೆಯವರೆಲ್ಲ ಧರಿಸಲು ಒಂದೇ ರೀತಿಯ ಉಡುಗೆ ಖರೀದಿ ಮಾಡುತ್ತಾರೆ. ಮನೆ ಹಿತ್ತಲು ತುಂಬ ಪ್ರೇತಗಳ ಮಾದರಿಗಳನ್ನು ಸೃಷ್ಟಿಸಿ ನೇತು ಹಾಕಿ ಸುತ್ತಲ ಪರಿಸರ ವಾತಾವರಣ ಕತ್ತಲಲ್ಲಿ ಭಯಾನಕವಾಗಿ ಕಾಣುವಂತೆ ಮಾಡುತ್ತಾರೆ. ಅಕ್ಟೋಬರ್ ತಿಂಗಳ ಪ್ರಾರಂಭದಲ್ಲಿ ಹಾಲೋವಿನ್ ಹಬ್ಬದ ಸಿದ್ಧತೆಯ ಪೂರ್ವಭಾವಿಯಾಗಿ ಮೊದಲು ಗದ್ದೆಯಲ್ಲಿ ಹೋಗಿ ಕುಂಬಳ ಕಾಯಿ ಆರಿಸಿ ತರಬೇಕು… ಎಂದು ಮಕ್ಕಳ ಬಾಯಿಯಿಂದ ಕೇಳಿ ಗೊತ್ತಿದ್ದ ನಾನು ಕಳೆದೆರಡು ವರ್ಷಗಳಿಂದ ಈ ಹಬ್ಬಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಅವಕಾಶ ಬಂದಿದೆ.

ಮಕ್ಕಳಿರುವ ಮನೆಯಲ್ಲಿ ಇದರ ಸಂಭ್ರಮ ಇನ್ನೂ ವಿಶೇಷದ್ದು. ತಿಂಗಳ ಪ್ರಾರಂಭದಿಂದಲೇ ಹಬ್ಬವನ್ನು ಇತರರಿಗಿಂತ ಭಿನ್ನವಾಗಿ ವಿನೂತನವಾಗಿ ಹೇಗೆ ಆಚರಿಸುವುದು? ಮನೆ, ಹಿತ್ತಲು ಹೇಗೆ ಸಿಂಗರಿಸುವುದು? ಆ ದಿನ ಮನೆ ಮಂದಿ, ಸಾಕು ಪ್ರಾಣಿ ಸಹಿತ ಯಾವ ಕಾಸ್ಟ್ಯೂಮ್ ಧರಿಸುವುದು..? ಹೀಗೆ ಮನೆ ಮನೆಗಳಲ್ಲಿ ಚರ್ಚೆ ಶುರುವಾಗುತ್ತದೆ. ಸಾಲದ್ದಕ್ಕೆ ಹಬ್ಬದ ಪೂರ್ವ ತಯಾರಿಗೆ ಗ್ರಾಹಕರನ್ನು ಸೆಳೆಯಲು ಸೂಪರ್ ಬಜಾರ್‌ಗಳು ಮಾಲ್‌ಗಳು ಪೈಪೋಟಿಗಿಳಿಯುತ್ತವೆ. ಆನ್ ಲೈನ್ ಯುಗದಲ್ಲಿಯಂತೂ ಕಿರುಬೆರಳಿನಲ್ಲಿ ಮೊಬೈಲ್ ಒತ್ತಿದರೆ ಸಾಕು ಅಂಗಡಿಯವರೇ ಬಂದು ವಸ್ತುಗಳನ್ನು ದಿನಂಪ್ರತಿ ಮನೆಯಲ್ಲಿ ಬಿಸಾಡಿ ಹೋಗುತ್ತಾರೆ. ಮಕ್ಕಳು ಹೇಳುವಂತೆ ವಲಸಿಗರ ನಾಡು ಅಮೇರಿಕಾದಲ್ಲಿ ಪ್ರತಿ ಹಬ್ಬ, ಹರಿದಿನ ಇತ್ಯಾದಿ ಆಚರಣೆಗಳ ಹಿಂದೆ ಒಂದು ವ್ಯಾಪಾರದ ಹುನ್ನಾರ ಇರುತ್ತದೆಯಂತೆ. ರೈತರನ್ನು ಪ್ರೋತ್ಸಾಹಿಸಲು ಕೊಯ್ಲು ಮುಗಿದ ತಕ್ಷಣ ಬರುವ ಹಾಲೋವಿನ್ ಹಬ್ಬವನ್ನು ತಿಂಗಳು ಪೂರ್ತಿ ಉತ್ಸವದ ರೀತಿ ಆಚರಿಸುತ್ತಾರೆ. ಇದು ಗೊತ್ತಿದ್ದೂ ಈ ಸುಳಿಯಲ್ಲಿ ಭಾಗಿಗಳಾಗುವ ಮಕ್ಕಳನ್ನು ಅನುಸರಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ನಾವು ಕೋಲೆಬಸವನ ಹಾಗೆ ಈ ಸಂಭ್ರಮದ ಭಾಗವಾಗಿದ್ದೇವೆ. ಅಂದರೆ ಸಂಭ್ರಮಿಸುತ್ತಿದ್ದೇವೆ. ಅಕ್ಟೋಬರ್ ತಿಂಗಳಲ್ಲಿ ಬೆಚ್ಚನೆಯ ಹಿತವಾದ ಬೇಸಿಗೆ ಕಳೆದು ಕಠಿಣ ಚಳಿಗಾಲವನ್ನು ಸ್ವಾಗತಿಸುವ ಸಲುವಾಗಿ ತಯಾರಿಗಳೂ ನಡೆಯುತ್ತವೆ. ಕೊಯಿಲು ಮುಗಿದ ನಂತರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬರುವ “ಥ್ಯಾಂಕ್ಸ್ ಗಿವಿಂಗ್” ಗೆ ತಯಾರಿಯೂ ನಡೆಯುತ್ತದೆ.

 

ಈ ಸಲ ಹಾಲೋವಿನ್ ಗದ್ದಲ ನಮ್ಮ ಮನೆಯಲ್ಲಿ ಹೀಗೆ ಶುರು ಹಚ್ಚಿಕೊಂಡಿತು. ಇದೇ ಅಕ್ಟೋಬರ್ ತಿಂಗಳ ಮೊದಲ ಒಂದು ಭಾನುವಾರ ಬೆಳಗಾತ ಎದ್ದು ಸಿದ್ಧವಾಗಿದ್ದ ಬೆಳಗಿನ ಉಪಹಾರವನ್ನು ಪ್ಯಾಕ್ ಮಾಡಿ “ಆಂಟಿ ಎಲ್ಲರೂ ಹೊರಡಲಿದ್ದೇವೆ ಗದ್ದೆಗೆ ಕುಂಬಳ ಕಾಯಿ ತರಲು ಎಂದಾಗ” ಎಲ್ಲಿಯ ಗದ್ದೆ? ಎಲ್ಲಿಯ ಕುಂಬಳಕಾಯಿ? ಇಲ್ಲೇ ಮನೆ ಹತ್ತಿರದ ಅಂಗಡಿಯಲ್ಲಿ ರಾಶಿ ಬಿದ್ದಿದೆ ಅಲ್ಲವೇ, ತಿರುಗಾಟಕ್ಕೆ ನೆಪವೇ? ಎಂದು ಅಚ್ಚರಿ ಯಾಗಿತ್ತು. ನಾವು ಹೋಗಬೇಕಿರುವುದು… ಬರ್ಲಿನ್ ಗೇಟ್‌ಗೆ ಕಾರಿನಲ್ಲಿ ಎರಡೂವರೆ ಘಂಟೆ ಪ್ರಯಾಣ” ಎಂದಿದ್ದಳು. ಸೊಸೆ ಮಗ ತಾವೂ ಸಿದ್ಧವಾಗಿ ನನಗೂ ಹೇಳಿ ಮಗು ಮತ್ತು ನಾಯಿ ಅರ್ಬರ್‌ನನ್ನು ಕರೆದುಕೊಂಡು ಜೊತೆಯಲ್ಲಿ ಕಾರಿನಲ್ಲಿ ಕೂತೆವು. ಪಯಣದ ದಾರಿಯ ಉದ್ದ ಹಲವು ಕಡೆ ಗದ್ದೆಗಳಲ್ಲಿ ಹಾಲೋವಿನ್ ಕುಂಬಳಕಾಯಿ ಸಂತೆಗಳಿದ್ದರೂ ಸೊಸೆ ಯಾವತ್ತಿನಂತೆ ಪೆಟ್‌ಗಳಿಗೂ (ನಾಯಿ)ಪ್ರವೇಶ ಅವಕಾಶ ಇರುವ ಈ ಸ್ಥಳ ಆಯ್ಕೆ ಮಾಡಿದ್ದಳು.

ಗೂಗಲ್ ಬ್ರಹ್ಮನ ಅಣತಿಯ ಮೇರೆಗೆ ಮಗ ಕಾರು ಚಲಾಯಿಸುತ್ತಿದ್ದ. ನಾವು… ಬರ್ಲಿನ್ ಗೇಟ್ ತಲುಪುವಾಗ ಹುಲುಸಾಗಿ ಬೆಳೆದ ಜೋಳದ ಗದ್ದೆಯ ನಡು ನಡುವೆ ವಿವಿಧ ಆಕಾರ ಬಣ್ಣಗಳ ಕುಂಬಳ ಕಾಯಿಗಳು ಕೆಲವು ಬಳ್ಳಿಗೆ ಜೋತುಕೊಂಡು ಕೆಲವು ಒಣಗಿ ಕೂತ ಬಳ್ಳಿಗಳಿಂದ ಕಳಚಿ ಕೂತು ಗಿರಾಕಿಗಳನ್ನು ಸೆಳೆಯುತ್ತಿದ್ದವು. ಆದಾಗಲೇ ಅಲ್ಲಿ ಜನ ಜಾತ್ರೆ ಸೇರಿ ಆಗಿತ್ತು. ಕಾರು ಪಾರ್ಕಿಂಗ್ ಶುಲ್ಕ, ಪ್ರವೇಶ ಶುಲ್ಕ ತೆತ್ತು ನಮ್ಮ ದಂಡು ಗದ್ದೆ ಮೈದಾನ ಹೊಕ್ಕಿತು. ಹಳ್ಳಿ ಮೂಲೆಯವಳಾದ ನನಗೆ ಕಾಲದ ಹಂಗಿಲ್ಲದೆ ನಾನೇ ನಾನಾಗಿ ಅಂಡಲೆಯಬಹುದಲ್ಲ ಎನ್ನುವ ಸಂಭ್ರಮದಲ್ಲಿ ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಫೋಟೋ ಕ್ಲಿಕ್ಕಿಸುತ್ತ ದಾರಿ ಕಂಡಲ್ಲೆಲ್ಲ ಸುತ್ತು ಹಾಕಿದೆ. ಮಗು ಇಶ್ವ, ನಾಯಿ ಅರ್ಬರ್ ಹುಲ್ಲು ಮೆದೆಯಲ್ಲಿ, ಹಸಿರಿನಲ್ಲಿ, ಮಣ್ಣಿನಲ್ಲಿ ವಾಸನೆಗೆ ಅರಳಿ ಬೇಕಾಬಿಟ್ಟಿ ಹೊರಳಾಡಿ, ಕುಣಿದು ಆನಂದಿಸಿದರು. ಮಗುವಿನೊಂದಿಗೆ ಸೊಸೆ ರೈಲು ಗಾಡಿಯಲ್ಲಿ , ಟ್ರಾಕ್ಟರ್‌ನಲ್ಲಿ ಗದ್ದೆ ಬೈಲು ಸುತ್ತಿ ಬಂದಳು. ನಗರ ಮತ್ತು ಹಳ್ಳಿ ಈ ಎರಡನ್ನು ಜೋಡಿಸಿಕೊಂಡ ಗ್ರಾಹಕರನ್ನು ಆಕರ್ಷಿಸುವ ಸಂತೆ ಬೀದಿ, ಮಕ್ಕಳ ಮನೋರಂಜನೆಗೆ ಬೇಕಾದ ಆಟ ನೋಟಗಳ ವೈಭವ ದ ಪ್ರಾಣಿ ಜಗತ್ತು ನ ಮಾದರಿಗಳು, ಜಾರುಮನೆ, ಹಾಡಿ ಕುಣಿಯಲು ಅನುಕೂಲ ಇರುವ ಮಕ್ಕಳ ಸ್ನೇಹಿ ಜಿಗಿಯುವ ಮೆತ್ತನೆ ಮನೆ ಹಸಿವೆಗೆ ಆಹಾರ ನೀಡುವ ತಾತ್ಕಾಲಿಕ ಮೋಟಲ್ ಇಡೀ ಗದ್ದೆ ಬೈಲು ತುಂಬಿಕೊಂಡಿತ್ತು.

ಜೋಳದಹುಲ್ಲು ಮೆದೆಯಲ್ಲಿ ನಿರ್ಮಿಸಿದ್ದ ಹುಲ್ಲುಮೆದೆಯನ್ನು ಗೋಡೆಯಾಗಿಸಿಕೊಂಡ ಆಕಾಶವನ್ನೇ ಛಾವಣಿಯಾಗಿಸಿಕೊಂಡಂತೆ ಕಟ್ಟಿದ್ದ ಏಳು ಸುತ್ತಿನ ಕೋಟೆಗೆ ಟಿಕೆಟ್ ಪಡೆದು ಒಳ ಹೊಕ್ಕೆವು. ಒಮ್ಮೆ ಒಳಹೊಕ್ಕರೆ ಸುತ್ತಿ ಸುತ್ತಿ ಕಾಲು ಸೋತು ಸೊಂಟ ಸೋಬಾನೆ ಆದರೂ ಹೊರ ಬರುವ ದಾರಿ ತಿಳಿಯದೆ ಮಕ್ಕಳನ್ನು ಮಂಗ ಮಾಡುವುದು ಬಿಡಿ… ದೊಡ್ಡವರನ್ನೂ ಇದು ಹೇಗಪ್ಪಾ ಹೊರಗೆ ಹೋಗುವುದು ಎಂದು ಕಕ್ಕಾ ಬಿಕ್ಕಿ ಮಾಡುತ್ತಿತ್ತು ಆ ಮನೆ. ಇಡೀ ವಿಶ್ವದ ಬೇರೆ ಬೇರೆ ಮೂಲದ ಹಿನ್ನೆಲೆಯ ಕುಟುಂಬಗಳು ಇಲ್ಲಿ ಸೇರಿದ್ದರು. ಮಕ್ಕಳೂ ಸೇರಿದಂತೆ ಮೂಲದಲ್ಲಿ ಎಲ್ಲರೂ ಮನುಷ್ಯ ಮಾತ್ರದ ಗುಣ ಸ್ವಭಾವದವರು ಯಾರೂ ಹೆಚ್ಚಿಲ್ಲ ಯಾರೂ ಕಡಿಮೆಯಿಲ್ಲ ಎನ್ನುವ ಭಾವ ನನಗೆ ಈ ತಿರುಗಾಟ ಮೂಡಿಸಿತ್ತು.

ಸುಮಾರು ಎರಡು ಸಾವಿರ ವರುಷಗಳ ಇತಿಹಾಸ ಇರುವ ಐರ್ಯಾಲ್ಯಾಂಡ್, ಬ್ರಿಟನ್ ಮತ್ತು ಉತ್ತರಫ್ರಾನ್ಸ್‌ನಲ್ಲಿ ನೆಲೆಸಿದ್ದ ಮೂಲ ನಿವಾಸಿ ಸೆಲಟ್ಸ್ ಜನಾಂಗದ ಕೃಷಿಕರು ತಮ್ಮ ಕೊಯ್ಲು ಮುಗಿದ ನಂತರ(samhain) ಆಚರಿಸುತ್ತಿದ್ದ ಹಬ್ಬ ಹಾಲೋವಿನ್. ಇದು ಅವರಿಗೆ ಅಳಿದು ಹೋದ ತಮ್ಮ ಪ್ರೀತಿಪಾತ್ರ ಹಿರಿ-ಕಿರಿಯ ಆತ್ಮಗಳನ್ನು ಸ್ಮರಿಸಿಕೊಂಡು ಅವರಿಗೆ ಗೌರವ ಸಲ್ಲಿಸುವ ಹಬ್ಬ. ಯುದ್ಧ, ವಲಸೆ, ಮತಾಂತರ ಇತ್ಯಾದಿ ಕಾರಣಗಳಿಂದ ಜನ ಮೂಲದ ಮಣ್ಣಿನಿಂದ ದೂರ ವಲಸೆ ಹೋದರೂ ಸಂಘರ್ಷ ಸವಾಲುಗಳ ನಡುವೆಯೂ ಏಳು ಸಮುದ್ರ ದಾಟಿ ಪರದೇಶಿಗಳಾದರೂ ಲೋಕಾಂತಗೊಂಡ ಹಬ್ಬವಿದು. ಮೂಲ ನಿವಾಸಿಗಳ ಮತ್ತು ವಸಾಹತುಷಾಹಿ ಸಂಸ್ಕೃತಿಯ ಸಮ್ಮಿಲನದ ಕೊಡು-ಕೊಳುವಿನ ಸುದೀರ್ಫ ಪರಂಪರೆ ಇರುವ ಈ ಹಬ್ಬ ಈಗ ಮೂಲ ಸ್ವರೂಪ ಕಳೆದುಕೊಂಡಿದ್ದರೂ ಜನ ಮಾನಸದಲ್ಲಿ ಜೀವಂತವಾಗಿದ್ದು ಜಾತ್ರೆಯ ಸ್ವರೂಪ ಪಡೆದುಕೊಂಡಿದೆ. ತಿಂಗಳಿಡೀ ಪ್ರೇತ ಆತ್ಮಗಳನ್ನು ತಣಿಸಲು ಮಕ್ಕಳು ದೊಡ್ಡವರು ಕ್ರಿಯಾ ಯೋಜನೆಗಳನ್ನು ಹಾಕಿಕೊಂಡು ಪೂರ್ವತಯಾರಿಗೆ ವಸ್ತುಗಳನ್ನು ಖರೀದಿಸಿ ಕಲೆ ಹಾಕಲು ರಜಾ ದಿನಗಳಲ್ಲಿ ಬಿಡುವಿನ ವೇಳೆ ಮಾಲ್‌ಗಳಲ್ಲಿ ಸುತ್ತುತ್ತಾರೆ. ಕುಂಬಳ ಕಾಯಿಗಳನ್ನು ಕೊರೆದು ಒಳಗೆ ಟೊಳ್ಳುಮಾಡಿ ಹೊರಗೆ ಹೊಳಪು ನೀಡಿ ಪ್ರಾಣಿಗಳು ಮಾನವರು ಹೀಗೆ ವಿವಿಧ ಆಕಾರ ನೀಡಿ ಮನೆಯ ಹೊರಗೆ ಪ್ರದರ್ಶನಕ್ಕಿಡುತ್ತಾರೆ. ಪ್ರೇತಗಳು ಮನುಷ್ಯ ಸ್ನೇಹಿಯಾಗುವಂತೆ ಅನುನಯಿಸಲು ಸೂಪರ್ ಹೀರೋಗಳನ್ನು ನಿರ್ಮಿಸುತ್ತಾರೆ. ಮನುಷ್ಯರ, ಪ್ರಾಣಿಗಳ ಅಸ್ತಿಪಂಜರಗಳನ್ನು ಜೋಡಿಸಿ ಇಟ್ಟು ಮನೆಯ ಮುಂದೆ ನಿಗೂಢ ಲೋಕ ಸೃಷ್ಟಿಸುತ್ತಾರೆ.

ಅಕ್ಟೋಬರ್ ೩೧ರಂದು ಪ್ರೇತಗಳಿಗೆ ಬರಲು ಅನುಕೂಲವಾಗುವಂತೆ ಮನೆಯನ್ನು ಕತ್ತಲೆ ಮಾಡುತ್ತಾರೆ. ನಂತರ ಮನೆಮಂದಿತಮ್ಮ ಹಾಲೋವಿನ್ ಕ್ಯಾಸ್ಟೂಮ್ ಧರಿಸಿ ಬೀದಿ ಸಂಚಾರ ಹೊರಡುತ್ತಾರೆ. ವಿಶೇಷವೆಂದರೆ ಈ ಉಡುಗೆ ತೊಡುಗೆ ರೈತಾಪಿಗಳ, ಹಳ್ಳಿಯ ಪರಿಸರದ ಪ್ರಾಣಿ ಪಕ್ಷಿಗಳದ್ದಾಗಿರುತ್ತದೆ. ಹೀಗೆ ಹೊರಟವರು ಇತರರ ಆಚರಣೆಗಳನ್ನು ವೀಕ್ಷಿಸುತ್ತಾರೆ. ಆಗ ಬೀದಿಯ ಕೆಲವು ಕುಟುಂಬಗಳು ಮನೆಯ ಮುಂದೆ ಸ್ಟಾಲ್ ಇಟ್ಟು ಬೇಡಿ ಬರುವ ಮಕ್ಕಳಿಗೆ ಕ್ಯಾಂಡಿ, ಚಾಕಲೇಟ್ ಹೀಗೆ ವಿವಿಧ ತಿಂಡಿಗಳನ್ನು ಪುಕ್ಕಟೆ ನೀಡುತ್ತಾರೆ. ತಡರಾತ್ರಿಯವರೆಗೆ ನಡೆಯುವ ಈ ಆಚರಣೆ ಸೊಬಗು ಮೆರಗು ಪಡೆಯುವುದು ಹಳ್ಳಿಯಲ್ಲಿ. ಕತ್ತಲೆಯಲ್ಲಿ ಗದ್ದೆಯ ನಡುವಿನಲ್ಲಿ ಸೌದೆ ಒಟ್ಟಿ ಬೆಂಕಿ ಹಾಕಿ ಅದರ ಸುತ್ತ ಪ್ರಾಣಿ ಪಕ್ಷಿ ಪರಿಸರದ ವಿವಿಧ ಸ್ವರೂಪಗಳ ಮುಖವಾಡ ಧರಿಸಿದ ದೊಡ್ಡವರು ಮಕ್ಕಳು ಮನಸೋ ಇಚ್ಛೆ ಕುಣಿದು ಕುಡಿದು ದಣಿದು ಪಿಶಾಚಿಗಳನ್ನು ಓಡಿಸುವಂತೆ ನಟಿಸಿ ನೆಲಕ್ಕೊರಗುತ್ತಾರೆ.

ನಾಲ್ಕನೇಯ ಶತಮಾನದಲ್ಲಿ ರೋಮನರ ಆಕ್ರಮಣದಿಂದ ರೂಪಾಂತರಗೊಳ್ಳಲು ಪ್ರಾರಂಭಗೊಂಡ ಈ ಆಚರಣೆಗಳು 8ನೇ ಶತಮಾನದಲ್ಲಿ ರೋಮನ್ ಕ್ಯಾಥೋಲಿಕ್‌ರ ಪ್ರಭಾವದಿಂದ ಹಾಲೋವಿನ್ ಹಬ್ಬದ ಮರುದಿನ ಅಂದರೆ ನವೆಂಬರ್ 1ರಂದು ಸಂತರ ಹಬ್ಬವೆಂದು ಆಚರಿಸಲು 3ನೇ ಪೋಪ್ ಗ್ರೇಗೋರಿ ಪ್ರಾರಂಭಿಸಿದರು. ಅಮೇರಿಕಾ ಕೆನಡಾ ದೇಶಗಳಲ್ಲಿ ಸಾರ್ವಜನಿಕ ರಜೆ ಇರುವ “ಥ್ಯಾಂಕ್ಸ್ ಗಿವಿಂಗ್” (ಭೂಮಿಯೂ ಸೇರಿದಂತೆ ಎಲ್ಲರಿಗೂ ಋಣ ಭಾರಕ್ಕೆ ಕೃತಜ್ಞತೆ ಸಲ್ಲಿಸುವ) ಸಮಾರಂಭ ಇದು. ಆಗ ಊರು ಪರವೂರಿನ ಸ್ನೇಹಿತರು, ನೆಂಟರು ಮನೆಗೆ ಬಂದು ಸ್ನೇಹ, ಕೃತಜ್ಞತೆ, ಪ್ರೀತಿಯ ದ್ಯೋತಕವಾಗಿ ಉಡುಗೊರೆಗಳನ್ನು ಹಂಚಿಕೊಳ್ಳುತ್ತಾರೆ. ಹಿರಿಯರನ್ನು ಗೌರವಿಸುತ್ತಾರೆ. ಈ ದಿನ ಸ್ನೇಹಿತರು, ಸಂಬಂಧಿಗಳು ಪರಸ್ಪರ ಒಟ್ಟಾಗಿ ಒಂದು ಕಡೇ ತಮ್ಮವರದ್ದೇ ಯಾರ ಮನೆಯಲ್ಲಾದರೂ ಸೇರಿ ಹಬ್ಬದ ಅಡುಗೆ ಮಾಡಿ ಜೊತೆಗೆ ತಿಂದು ಕುಡಿದು ಸಂಭ್ರಮ ಪಡುತ್ತಾರೆ. ಜೋಳ ತಿನಿಸು, ಕುಂಬಳ ಕಾಯಿ ಅಥವಾ ಆಪಲ್‌ನಿಂದ ತಯಾರಿಸಲಾದ ಪೈ (pie) ತಯಾರಿಸಲಾದ ವಿಶೇಷ ಖಾದ್ಯ, ಬಟಾಟೆ ಬಜ್ಜಿ, ಟರ್ಕಿಕೋಳಿ ಅಡುಗೆ ಆಗ ಮನೆಗಳಲ್ಲಿ ಹೋಟೆಲ್ ಬೇಕರಿಗಳಲ್ಲಿ ಲಭ್ಯ ಇರುತ್ತದೆ. ಕೆನಡಾ, ಅಮೇರಿಕಾ ಹೀಗೆ ಹಲವು ಕಡೆ ಬೇರೆ ಬೇರೆ ದಿನ ಈ ಆಚರಣೆ ಇದೆ. ಕೊಯಿಲು ಮುಗಿದ ನಂತರ ಆಚರಿಸುವ ಔತಣ ಕೂಟವಿದು.

ಕರಾವಳಿ ಕರ್ನಾಟಕದಲ್ಲಿ ದೀಪಾವಳಿಯು ಕೃಷಿಕರಿಗೆ ಕೊಯ್ಲು ಮುಗಿದ ತಕ್ಷಣ ಬರುವ ಸಮೃದ್ಧಿಯ ಹಬ್ಬ. ಬಹುತೇಕ ಅಕ್ಟೋಬರ್ ನವೆಂಬರ್‌ನಲ್ಲಿ ಕೊಯ್ಲು ಮುಗಿದ ತಕ್ಷಣ ಬರುವ ದೀಪಾವಳಿ ಹಾಲೋವಿನ್ ಅನ್ನು ಬಹುತೇಕ ಹೋಲುತ್ತದೆ. ಮೂರು ದಿನಗಳ ಈ ಹಬ್ಬದಲ್ಲಿ ಮೊದಲ ದಿನ ಸತ್ತವರ ಹಬ್ಬ(ನರಕ ಚತುರ್ದಶಿ)ಎರಡನೇಯ ಬಲಿಪಾಡ್ಯ ಅಂದು ನಮ್ಮ ಹಿರಿಯ ಭೂಮಿಯ ಒಡೆಯನಾದ ಬಲಿಯೇಂದ್ರ ತನ್ನ ಪ್ರಜೆಗಳ ಸುಖ ಕಷ್ಟ ವಿಚಾರಿಸಲು ಆಶೀರ್ವದಿಸಲು ಭೂಮಿಗೆ ಭೇಟಿ ನೀಡುತ್ತಾನೆ ಎಂಬ ನಂಬಿಕೆಯಿದೆ. ರೈತಾಪಿ ಜನ ರಾತ್ರಿ ಗದ್ದೆ ಬೈಲಿಗೆ ತೆರಳಿ ಅವನಿಗೆ ಆಸರು, ವೀಳ್ಯ, ಅಡಿಕೆ, ಇಟ್ಟು ದೊಂದಿ ಬೆಳಕಿನಲ್ಲಿ ಅವನನ್ನು ಬಲಿ… ಬಲಿ ಬಲಿಯೇಂದ್ರ… ಎಂದು ಹಾಡಿ ಕರೆಯುವರು. ಮೂರನೇಯ ದಿನ ಗೋಪೂಜೆ. ಅಂದು ಒಂದು ರೀತಿಯಲ್ಲಿ ಕೃಷಿಗೆ ಸಂಬಂಧಿಸಿದ ಸಕಲ ವಸ್ತು ವೈವಿದ್ಯಗಳಿಗೆ ನಮಿಸುವ ಸಾಕು ಪ್ರಾಣಿಗಳ ಮೈ ತೊಳೆದು ಶುಚಿಗೊಳಿಸಿ ಪೂಜಿಸುತ್ತೇವೆ. ಅಂದು ರಾತ್ರಿ ಮನೆಯೊಡೆಯ ಧನದಾನ್ಯಗಳಿಗೆ ಪೂಜಿಸಿ ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸಲಿ ಎಂದು ಬಯಸುತ್ತಾನೆ. ನಮ್ಮ ಈ ಸೌಭಾಗ್ಯಕ್ಕೆ ಕಾರಣರಾದ ಹಿರಿಯರಿಗೆ ಗೌರವ ಸಲ್ಲಿಸುವ ಹಬ್ಬವೂ ಇದುವೇ ಹೌದು. ಬಯಲುಸೀಮೆಯವರು ಆಚರಿಸುವ ಮಕರ ಸಂಕ್ರಾಂತಿಯು ಇಂತಹದ್ದೇ ಒಂದು ಸಂಭ್ರಮದ ಆಚರಣೆ.

ಭಾರತದಲ್ಲೂ ಹಬ್ಬಗಳ ಸಂಭ್ರಮ ಕಡಿಮೆಯಿಲ್ಲ. ಹಿಂದೆ ಮಾರ್ನಮಿ ಎಂದು ಆಚರಿಸುತ್ತಿದ್ದ ನವರಾತ್ರಿಯ ಆಚರಣೆಯ ವಿಶೇಷವೂ ವ್ಯಾಪಾರೀಕರಣವಲ್ಲವೇ? ರಸ್ತೆ ಬೀದಿಗಳಲ್ಲಿ ಇದನ್ನು ಸಂಭ್ರಮಿಸಲು ಸೇರುವ ಜನಜಾತ್ರೆ ಆರ್ಕೆಸ್ಟ್ರಾಗಳ ಪೈಪೋಟಿ ಡೋಲು ಕುಣಿತ, ನೃತ್ಯ ರೂಪಕಗಳು ಟ್ಯಾಬ್ಲೋಗಳು ಇವನ್ನೂ ಮೀರಿಸುವಂತೆ ಇರುವುದೂ ನಿಜವೇ! ಕಾಲದ ಪ್ರವಾಹದೊಂದಿಗೆ ಬದಲಾವಣೆಗೆ ಒಗ್ಗಿಕೊಳ್ಳುತ್ತ ಜನ ಸಮುದಾಯಗಳು ಬುಡಕಟ್ಟು ಸಂಸ್ಕೃತಿಯ ನೆಲ ಮೂಲದ ಆಚರಣೆ ಆರಾಧನೆಗಳನ್ನು ಸಾಂಕೇತಿಕವಾಗಿ ನಡೆಸುವುದು ದೇಶ ಕಾಲ ಭಾಷೆಗಳ ಗಡಿ ಮೀರಿ ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ಎಂದು ವಿಶ್ವವ್ಯಾಪಿಯಾಗಿರುವುದು ಗಮನಾರ್ಹ ಅಂಶ. ಕೃಷಿಗೆ ಪೂರಕವಾದ ಪ್ರಾಣಿ ಪಕ್ಷಿ ಜಗತ್ತನ್ನು, ಈ ನೆಲದ ಮೂಲ ಪುರುಷರನ್ನು ಹಿರಿಯರನ್ನು ಸ್ತ್ರೀ ಯರನ್ನೂ ಸಮಾನ ಗೌರವದಿಂದ ಕಂಡು ಆರಾಧಿಸುತ್ತಿರುವುದೂ ಕೂಡ ನೆಲ ಮೂಲ ಸಂಸ್ಕೃತಿಯ ಸಾರ ಸತ್ವ. ಪಿತೃ ಆರಾಧನೆ, ಮಾತೃ ಆರಾಧನೆಗಳು ಸುದೀರ್ಘ ಇತಿಹಾಸ ಇರುವ ಕಾಲದ ಸತ್ಯಗಳು. ಹೀಗಾಗಿ ಸಾವಿನ ನಿಗೂಢತೆ ಮನುಷ್ಯನನ್ನು ನಿರಂತರ ಕಾಡುತ್ತಿರುತ್ತದೆ. ಹಾಲೋವಿನ್‌ನಲ್ಲಿ ವ್ಯಾಪಕವಾಗಿ ಬಳಸುವ ಕುಂಬಳಕಾಯಿ ನಮ್ಮಲ್ಲಿ ದೈವ ಸ್ಥಾನ, ದೇವಸ್ಥಾನಗಳಲ್ಲಿ ಪ್ರಾಣಿ ಬಲಿಗೆ ಪರ್ಯಾಯವಾಗಿ ಮತ್ತು ಸಾವಿನ ಬೊಜ್ಜಕ್ಕೆ ಬಳಸುವ ಕರು ಕುಂಬಳ ಕಾಯಿ ಗದ್ದೆ ಹಿತ್ತಲುಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ ನಿಜ! ಆದರೂ ಇವುಗಳನ್ನು ಬಳಸುವ ಸಮಯ, ಸಂದರ್ಭಗಳ ಹಿನ್ನೆಲೆಯೂ ಅವುಗಳ ಸುತ್ತ ಪ್ರಚಲಿತದಲ್ಲಿರುವ ನಂಬಿಕೆಗಳು ಕಾಲದ ಪ್ರವಾಹದಲ್ಲಿ ಕಳೆದು ಹೋಗದೇ ಇಂದಿಗೂ ಉಳಿದು ಬಂದಿರುವುದು ನೋಡುವಾಗ ಬರಿಯ ವ್ಯಾಪಾರಕ್ಕೆ ಎಂದು ಅಸಡ್ಡೆ ಮಾಡುವ ಸಂಗತಿ ಅಲ್ಲ ಅಲ್ಲವೇ?

ಹಳ್ಳಿ ಪಟ್ಟಣಗಳ ಗಲ್ಲಿಗಳಲ್ಲಿ ಜಾತಕ ನೋಡುವ ಭವಿಷ್ಯ ಹೇಳುವ ಜ್ಯೋತಿಷಿಗಳು, ಕವಡೆ ಶಾಸ್ತ್ರದವರು ಎಲ್ಲ ಕಾಲ ದೇಶಗಳಲ್ಲೂ ಇದ್ದಾರೆ. ಲೋಕ ನಡೆಯುವುದೇ ನಮ್ಮಿಂದ ಎಂದು ನಿರೂಪಿಸುವ ಇಂತಹವರನ್ನು ನಂಬಿ ಅವರಲ್ಲಿಗೆ ಬರುವ ಭಕ್ತರು ಇಂದಿಗೂ ಇದ್ದಾರೆ. ಹಕ್ಕಿ ಶಕುನ ಹೇಳುವ ಕುರುಕುರು ಮಾಮಗಳು ನಮ್ಮ ಬಾಲ್ಯದಲ್ಲಿ ಮನೆ ಮನೆಗೆ ಬರುತ್ತಿದ್ದರು. ನಾವು ಆಗ ಇವರು ಹೊಟ್ಟೆ ಪಾಡಿಗೆ ಈ ಉದ್ಯೋಗ ಮಾಡುತ್ತಾರೆ ಎಂದು ತಿಳಿಯದ ಮುಗ್ಧರಿದ್ದೆವು. ಸಾಕ್ಷಾತ್ ದೇವರೇ ಮನೆಗೆ ಬಂದಂತೆ ಅವರನ್ನು ಮನೆಯ ದೊಡ್ಡವರು ಬಾಯೂರಿಕೆ ನೀಡಿ ಸತ್ಕರಿಸುವುದು ಕಂಡಿದ್ದೆವು. ಬಸವನನ್ನು ಅಲಂಕರಿಸಿ ಕೊಂಬಿಗೆ ಹೂ ಇಟ್ಟು ಪೂಜಿಸಿ ಇದು ಶಿವ ಪರಮಾತ್ಮನ ವಾಹನ ನಂದಿಯೆಂದು ಹೇಳಿ ಮನೆ ಮನೆ, ಬೀದಿ ಬೀದಿ ತಿರುಗಿ ಹಣ ವಸೂಲಿ ಮಾಡುವ ಮಹಿಳೆಯರು ಪುರುಷರು ಈಗಲೂ ಇದ್ದಾರೆ. ತಂತ್ರ, ಮಂತ್ರ, ಸಾಧುಗಳು ಸಂತರು ಬ್ಲಾಕ್ ಮ್ಯಾಜಿಕ್ ಹೀಗೆ ನಾವು ಅರಿಯದ ನಿಗೂಢ ಜಗತ್ತು ಇದೆ. ಅರುವತ್ತನಾಲ್ಕು ವಿದ್ಯೆಗಳಲ್ಲಿ ಇದೂ ಒಂದು ಎಂದು ಹೇಳುವವರಿದ್ದಾರೆ. ಮನೆಯೊಳಗೆ ಬಾವಲಿ ಬಂದರೆ ಮನೆಯ ಗಂಡಸು ಸಾಯುತ್ತಾರೆ. ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನ ಹೀಗೆ ಶಕುನ ಶಾಸ್ತ್ರಗಳಿವೆಯಂತೆ. ಇದನ್ನು ಹೇಳುವ ಕೇಳುವ ಮಂದಿ ಎಲ್ಲ ದೇಶ ಕಾಲಗಳಲ್ಲೂ ಇದ್ದಾರೆ ಎನ್ನುವುದು ವಾಸ್ತವ. ಯಾವುದೇ ನಂಬಿಕೆ ಮನಸ್ಸಿಗೆ ಹಿತವಾಗಿ ಶಕ್ತಿಮೂಲವಾಗಿದ್ದರೆ ಉತ್ತಮ ಅದೇ ವ್ಯಸನವಾಗಿ ಮೂಢನಂಬಿಕೆಯಾದರೆ ಗಂಡಾತರ. “ಹುತ್ತವ ಬಡಿದರೆ ಹಾವು ಸಾಯ ಬಲ್ಲುದೇ ಅಯ್ಯಾ? ಅಘೋರ ತಪವ ಮಾಡಿದಡೇನು? ಅಂತರಂಗ ಆತ್ಮ ಶುದ್ಧಿಯಿಲ್ಲದವರನೆಂತು ನಂಬುವನಯ್ಯಾ ಕೂಡಲ ಸಂಗಮದೇವ?” ಎನ್ನುವ ವಚನದಂತೆ ಮಾನವೀಯ ಸ್ಪಂದನೆ ಇಲ್ಲದ ಯಾವುದೇ ತಿಳಿವು ಹರವು ಬಹುಕಾಲ ಬಾಳದು.

ಯಾವುದೇ ಆಚರಣೆ ಆರಾಧನೆಯ ಹಿಂದಿನ ಕಾರಣ ಪರಿಣಾಮಗಳನ್ನು ಕೆದಕುವಾಗ ಮನುಷ್ಯ ಅತೀ ಇಂದ್ರಿಯ ಶಕ್ತಿಗಳ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಬದುಕಿಬಾಳುವ ಸ್ವಾಸ್ಥ್ಯಕ್ಕಾಗಿ ಎನ್ನುವ ವಾಸ್ತವ ಅರಿವಾಗುತ್ತದೆ. ಹುಟ್ಟು ಸಾವಿನ ಬಗ್ಗೆ ಇದು ಹೀಗೆ ಎಂದು ಹೇಳಲಾಗದ ಮನುಷ್ಯ ದೈವ ದೇವರ ಸ್ವರೂಪ ನೀಡಿ ಪ್ರಾರ್ಥನೆಯಲ್ಲಿ ಕಂಡ ನೆಮ್ಮದಿಯ ಫಲ ಸ್ವರೂಪಗಳಿವು. ಆದರೆ ಹುಟ್ಟು ಸಾವಿನ ಹಿಂದು ಮುಂದಿನ ಮೂಲವನ್ನು ಕೆದಕುವಾಗ ನನಗೆ ಹುಟ್ಟಿದ ಕುತೂಹಲವಿದು. ಎಲ್ಲ ಜಾತಿ, ಮತ, ಧರ್ಮಗಳ ಆಚರಣೆ ಆರಾಧನೆಯ ಪರಂಪರೆಗಳಲ್ಲಿ ಇರುವ ನಂಬಿಕೆಗಳಲ್ಲಿರುವ ಸಾಮ್ಯ ಬೆರಗು ಉಂಟು ಮಾಡುತ್ತದೆ. ತುಳುನಾಡಿನ ಮಾತೃ ಮೂಲ ಕುಟುಂಬದಲ್ಲಿ ಸತ್ತವ್ಯಕ್ತಿಯನ್ನು ಹದಿನಾರು ದಿನಗಳ ನಂತರ ಮನೆಯ ಒಳಗೆ ಸೇರಿಸಿ ಅವರು ನಮ್ಮ ಜೊತೆಗೆ ಇದ್ದು ಹಿರಿಯರಾಗಿ ನಮ್ಮನ್ನು ಪೊರೆಯುತ್ತಾರೆ ಎಂದು ನಂಬುವ ಕ್ರಮವಿದೆ. ವಿಶ್ವದ ಬಹುತೇಕ ಆಚರಣೆ ಆರಾಧನೆಯ ಪರಂಪರೆಗಳು ಹುಟ್ಟು ಸಾವಿನ ಸುತ್ತ ಜೋತುಕೊಂಡಿರುವುದು ಗಮನಿಸುವಾಗ ಇದು ಸಂಶೋಧನೆಗೆ ವಿಪುಲ ಅವಕಾಶ ಇರುವ ವಿಷಯ ಅನ್ನಿಸುತ್ತದೆ. ನಾಡಿಯಾ ಓವುಸು ಎನ್ನುವ ಆಫ್ರಿಕನ್ ಅಮೇರಿಕನ್ ಲೇಖಕಿ ತನ್ನ ತಂದೆಯ ಸಾವಿನ ನಂತರದ ಆಚರಣೆಗಳ ಬಗ್ಗೆ ಬರೆಯುತ್ತ ಈ ಆಚರಣೆಗಳಲ್ಲಿ ಲೋಪವಾದರೆ ಸತ್ತವರು ಪ್ರೇತಗಳಾಗುತ್ತಾರೆ ಬದುಕಿ ಇದ್ದವರನ್ನು ಪೀಡಿಸುತ್ತಾರೆ ಎಂಬ ಭಯ ತೀರಿಕೊಂಡವರ ಕುಟುಂಬದಲ್ಲಿ ಇರುತ್ತದೆ ಎಂದು ತನ್ನ ಕೃತಿ “ಆಫ್ಟರ್ ಶಾಕ್”ನಲ್ಲಿ ಬರೆದಿದ್ದಾರೆ. ತುಳುನಾಡಿನ ದೈವಾರಾಧನೆ, ಆಟಿ ಅಗೆಲ್, ಕರ್ನಾಟಕದ ಉದ್ದಗಲ ಆಚರಿಸುವ ಮಲಯ ಅಮಾವಾಸ್ಯೆ, ಪಿತೃಪಕ್ಷ, ದೀಪಾವಳಿಯ ನರಕ ಚತುರ್ದಶಿ, ಮುಸ್ಲಿಂ ರ ಉರುಸ್ ಈ ಎಲ್ಲವೂ ಸಾವಿನ ನಂತರ ಇನ್ನೇನು? ಎನ್ನುವ ಕೊನೆ ಮೊದಲಿಲ್ಲದ ಪ್ರಶ್ನೆಗೆ ಉತ್ತರದ ಹುಡುಕಾಟವೇ?

ನಮ್ಮ ಬಾಲ್ಯದಲ್ಲಿ ಹುಟ್ಟಿನ ಅಚ್ಚರಿ ಸಾವಿನ ಭಯ ನಿಗೂಢತೆಗಳ ಬಗ್ಗೆ ಕಥೆಗಳನ್ನು ಕೇಳಿ ಓದಿ ಬೆಳೆದವರು. ಅರ್ಧ ಶತಮಾನಕ್ಕೂ ಹಿಂದೆ ರಾತ್ರಿಯ ಕರ್ಕಂಡ ಕತ್ತಲೆಯಲ್ಲಿ ಕಾಡು ಹಾದಿಯಲ್ಲಿ ನಡೆದು ಬರುತ್ತಿದ್ದ ಅಪ್ಪನಿಗೆ ನಿಶಾಚರಿ ಪ್ರೇತಗಳು ಎದುರಾಗಿ ಮಾತಾಡಿದ್ದು ಅವು ಪ್ರೇತ ಎಂದು ಅವರಿಗೆ ಖಾತ್ರಿಯಾದದ್ದು ಅದರ ಕಾಲಿನ ಪಾದ ಉಲ್ಟಾ ಇರಲಾಗಿ… ಹೀಗೆ ಅಮ್ಮನ ಬಾಯಿಯಲ್ಲಿ ಕಥೆ ಕೇಳುತ್ತಿದ್ದಾಗ ಪ್ರೇತಗಳ ಕೈಗೆ ಸಿಕ್ಕಿಯೂ ಬಚಾವ್ ಆಗಿ ತಪ್ಪಿಸಿಕೊಂಡು ಬರುತ್ತಿದ್ದ ಅಪ್ಪ ನಮ್ಮ ಕಣ್ಣಲ್ಲಿ ಆಗ ಅಚ್ಚರಿಯ ಮೊತ್ತವಾಗಿ ಹೀರೋ ಆಗಿ ಬಿಡುತ್ತಿದ್ದ. ನಂತರ ವಿದ್ಯುತ್ತ್ ಬೆಳಕು ಬಂದ ನಂತರ ಪ್ರೇತ ಪಿಶಾಚಿಗಳು ಪಲಾಯನ ಮಾಡಿವೆ ಎಂದು ಹಿರಿಯರು ಗೊಣಗುವುದು ಕೇಳಿದ್ದೆ. ನಮ್ಮ ಮಕ್ಕಳು ನಾವು ಕೇಳಿದ್ದ ಭಯಾನಕ ಕಥೆಗಳಿಂದ ವಂಚಿತರೇ ಎನ್ನುವ ಬೇಸರ ನನಗಿತ್ತು. ಸರಿ ಸುಮಾರಿಗೆ ಒಂದೇ ಸಮಯದಲ್ಲಿ ಬರುವ ಅಮೇರಿಕಾದ ಹಾಲೋವಿನ್ ಮತ್ತು ಕರ್ನಾಟಕದ ಎಲ್ಲೆಡೆ ಆಚರಿಸುವ ಪಿತೃ ಪಕ್ಷದ ಸತ್ತವರಿಗೆ ಬಡಿಸಿ ಇಡುವ ಪದ್ಧತಿಯನ್ನು ಅಕ್ಕನ ಮೊಮ್ಮಗಳು ಹಾಲೋವಿನ್ ಎಂದು ಕರೆದದ್ದು ಕೇಳಿ ಅಡ್ಡಿಯಿಲ್ಲವೇ ಮಕ್ಕಳು ಅನ್ನಿಸಿತ್ತು.

ಹಬ್ಬ ಸತ್ತವರದಿರಲಿ ಬದುಕಿರುವವರದಿರಲಿ ಸಮಾನತೆಯನ್ನು ಸಾರುವ ಸೌಹಾರ್ದತೆಯನ್ನು ಬೆಸೆಯುವ ಹಂಚಿ ತಿನ್ನುವ ಇಫ್ತಾರ್ ಕೂಟವಾಗಲಿ… ಪರಿಸರ ಸ್ನೇಹಿ ಹಬ್ಬ ಹ್ಯಾಲೋವಿನ್ ಗಡಿ ಗುರುತು ತೊರೆದು ಯುದ್ಧ ಭೀತಿ ಮರೆತು ಲೋಕ ಸಂಚಾರದಲ್ಲಿ ಹಸನಾಗಿ ಉಸಿರು ತುಂಬುವಂತಾಗಲಿ. ..

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ