ಭಾರತೀಯ ಪ್ರಾಚೀನ ಕುಶಲಕರ್ಮಿಗಳ ಶ್ರೇಷ್ಠತೆಯನ್ನು ನೋಡಬೇಕೆಂದರೆ ದೆಹಲಿಯ ಮೆಹ್ರೌಲಿಯಲ್ಲಿರುವ 8 ಟನ್ ತೂಕದ ತುಕ್ಕು ನಿರೋಧಕ ಕಬ್ಬಿಣ ಕಂಬವನ್ನು ನೋಡಬಹುದು. ನಾಗಪುರದ ಸ್ಥಳೀಯ ಕುಲುಮೆ “ಕೋಥಿ” ಒಂದು ಸಲಕ್ಕೆ 40 ಕೇಜಿ ತೂಕದ ಕಬ್ಬಿಣ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ದೆಹಲಿಯಲ್ಲಿರುವ 8 ಟನ್ ತೂಕದ ಕಬ್ಬಿಣ ಕಂಬವನ್ನು ತಯಾರಿಸಲು ಪ್ರತಿ ಸಲ 40 ಕೆಜಿಯಂತೆ 200 ಸಲ ಕುಲಮೆ ಕಾಯಿಸಿ ಬೆಸುಗೆ ಮಾಡಬೇಕಿತ್ತು. ದೆಹಲಿಯ ಕಬ್ಬಿಣ ಕಂಬದ ಪರೀಕ್ಷಿತ ದೃಢತೆ ಮತ್ತು ರಚನಾತ್ಮಕ ಏಕರೂಪತೆಯು ಭಾರತೀಯ ಪುರಾತನ ಕಬ್ಬಿಣದ ಕುಶಲತೆಗೆ ಜೀವಂತ ಸಾಕ್ಷಿಯಾಗಿದೆ
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಏಳನೆಯ ಅಧ್ಯಾಯ
ತಾಮ್ರ ಮತ್ತು ಕಂಚಿನ ಯುಗಕ್ಕಿಂತ ಮಾನವನ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿ ಬೆಳೆದ ಯುಗವೆಂದರೆ ಕಬ್ಬಿಣ ಯುಗ. ಕ್ರಿ.ಪೂ. 700ಕ್ಕೆ ಕಬ್ಬಿಣ ಯುಗ ಕೊನೆಗೊಂಡಿತು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ, ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ. ಈಗಲೂ ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕಬ್ಬಿಣದ ಉತ್ಪನ್ನಗಳನ್ನೇ ಇಂದಿಗೂ ಬಳಕೆ ಮಾಡಲಾಗುತ್ತಿದೆ.
ಕಬ್ಬಿಣ ಯುಗಕ್ಕೆ ಏಕೆ ಅಷ್ಟು ಪ್ರಾಶಸ್ತ್ಯ ಬಂದಿತು ಎಂದರೆ, ಕಬ್ಬಿಣದ ಅದಿರು ಉಳಿದೆಲ್ಲ ಲೋಹಗಳ ಅದಿರುಗಿಂತ ದೊಡ್ಡ ಪ್ರಮಾಣದಲ್ಲಿ ಭೂಮಿಯಲ್ಲಿ ದೊರಕುವುದು. ಕಬ್ಬಿಣ ಹೆಮಾಟೈಟ್, ಲಿಮೊನೈಟ್, ಮ್ಯಾಗ್ನೆಟೈಟ್, ಗೋಥೈಟ್ ಮತ್ತು ಸಿಡರೈಟ್ ಇತ್ಯಾದಿ ಅದಿರುಗಳ ಮೂಲಕ ದೊರಕುತ್ತದೆ. ಕಬ್ಬಿಣದ ಅದಿರನ್ನು ನೆಲದ ಮೇಲೆ ಸುಲಭವಾಗಿ ಗುರುತಿಸಬಹುದಾಗಿತ್ತು. ಕೃಷಿಗಾಗಿ ಮನುಷ್ಯ ನದಿ ತಟಗಳಲ್ಲಿ ನೆಲೆಸಲು ತೊಡಗಿದಾಗ ನೆಲವನ್ನು ಉತ್ತು, ಬಿತ್ತು, ಕೃಷಿ ಮಾಡಲು ತೊಡಗಿದಾಗ ಕಬ್ಬಿಣದ ಸಲಕರಣೆಗಳು ಬೇಕಾದವು.
ಮೊದಮೊದಲು ಆಕಾಶದಿಂದ ಬಿದ್ದದ್ದ ಉಲ್ಕಾಶಿಲೆಗಳು ಕಬ್ಬಿಣದ ಸಲಕರಣೆಗಳನ್ನು ತಯಾರಿಸಲು ಪ್ರಶಸ್ತ ಎನಿಸಿದವು. ಉಲ್ಕಾಶಿಲೆಗಳು ಸಾಮಾನ್ಯ ಶಿಲೆಗಳಲ್ಲಿರುವ ಖನಿಜಗಳ ಜೊತೆಗೆ ಹೆಚ್ಚಾಗಿ ಕಬ್ಬಿಣ ಮತ್ತು ನಿಕ್ಕಲ್ ಅಂಶವನ್ನು ಹೊಂದಿರುತ್ತವೆ. ಪ್ರಾಯಶಃ ಕಂಚಿನ ಯುಗದಲ್ಲೇ ಕಬ್ಬಿಣವನ್ನು ಈ ಮೂಲದಿಂದ ಪಡೆದಿರಬಹುದೆಂದು ತಜ್ಞರು ಊಹಿಸುತ್ತಾರೆ ಮತ್ತು ಕಬ್ಬಿಣ ಯುಗ ಏಕೆ ತಡವಾಯಿತು ಎಂಬುದಕ್ಕೆ ತಜ್ಞರು ಹೀಗೆ ಹೇಳುತ್ತಾರೆ. ಕಬ್ಬಿಣವನ್ನು ಕರಗಿಸುವ ದ್ರವದ ಬಿಂದು 1530 ಡಿಗ್ರಿ ಸೆಂ. ಇದ್ದು ಇಷ್ಟೊಂದು ಶಾಖವನ್ನು ಉತ್ಪಾದಿಸುವುದು ಕಷ್ಟದ ಕೆಲಸವಾಗಿತ್ತು. ಜೊತೆಗೆ ಕಬ್ಬಿಣದ ಅದಿರಿನಲ್ಲಿ ಸಹಜವಾಗಿರುವ ಆಮ್ಲಜನಕದ ಅಂಶವನ್ನು ತೆಗೆದುಹಾಕುವುದು ಮತ್ತು ಅನುಷಂಗಿಕವಾಗಿ ಬರುವ ಸಿಲಿಕಾವನ್ನು ಶಾಖ ಕೊಟ್ಟು ಬೇರ್ಪಡಿಸುವ ತಂತ್ರಜ್ಞಾನ ಆ ಕಾಲಕ್ಕೆ ಬೆಳೆದಿರಲಿಲ್ಲ.
ಕಬ್ಬಿಣವನ್ನು ಕರಗಿಸಿದಾಗ ಎರಡು ಬಗೆಯ ಉತ್ಪನ್ನಗಳು ಹೊರಬರುತ್ತವೆ. ಮೃದು ಕಬ್ಬಿಣ (wrought iron) ಮತ್ತು ಎರಕ ಕಬ್ಬಿಣ (cast iron). ಮೃದು ಕಬ್ಬಿಣದಲ್ಲಿ ಇಂಗಾಲ ಪ್ರಮಾಣ ಕಡಿಮೆ ಇದ್ದು ಅದಕ್ಕೆ ಬೇಕಾದ ಆಕಾರ ಕೊಡಬಹುದಾಗಿತ್ತು. ಇಂಗಾಲದ ಪ್ರಮಾಣ ಹೆಚ್ಚಾದರೆ ಕಬ್ಬಿಣ ಗಡುಸಾಗಿ ಇದನ್ನು ಎರಕ ಕಬ್ಬಿಣ ಎಂದು ಕರೆಯಲಾಯಿತು. ಆದರೆ ಎರಕ ಕಬ್ಬಿಣ ಬಹು ಬೇಗನೆ ಒಡೆದುಹೋಗುತ್ತಿತ್ತು. ಈ ಎರಡೂ ವಿಷಯಗಳನ್ನು ನಿಭಾಯಿಸಲು ಕ್ರಿ.ಪೂ. 1300ರ ಹೊತ್ತಿಗೆ ಕಬ್ಬಿಣಕ್ಕೆ ಎಷ್ಟು ಬೇಕೊ ಅಷ್ಟು ಇಂಗಾಲ ಸೇರಿಸಿ ಕಬ್ಬಿಣದ ಉಪಯುಕ್ತತೆಯನ್ನು ಹೆಚ್ಚಿಸುವ ತಂತ್ರವನ್ನು ಕಂಡುಕೊಳ್ಳಲಾಯಿತು.
ಬಹುಶಃ ಇದು ಮೊದಲು ಪ್ರಾರಂಭವಾಗಿದ್ದು ಕಾಕೇಸಿಯನ್ ಪರ್ವತಗಳಲ್ಲಿ (ಯುರೋಪ್-ಏಷ್ಯಾ ನಡುವಿನ ಪರ್ವತ ಶ್ರೇಣಿಗಳು). ಹಾಗೆ ನೋಡಿದರೆ ಜಪಾನ್ನಲ್ಲಿ ತಾಮ್ರ-ಕಂಚಿನ ಯುಗಗಳ ನಾಗರಿಕತೆಗಳು ಅಭಿವೃದ್ಧಿ ಹೊಂದಲಿಲ್ಲವೇನೊ ಅಥವಾ ಆ ಸ್ಥಳಗಳು ನಾಶವಾದವೊ ತಿಳಿದಿಲ್ಲ! ಅಥವಾ ಜಪಾನ್ನಲ್ಲಿ ನೇರವಾಗಿ ನವ ಶಿಲಾಯುಗದಿಂದ ಕಬ್ಬಿಣ ಯುಗಕ್ಕೆ ಪ್ರವೇಶ ಪಡೆದಿರುವುದು ಕಾಣಿಸುತ್ತದೆ. ಭಾರತ, ಇಟಲಿ, ಚೈನಾ, ಗ್ರೀಸ್ನಲ್ಲಿ ಕಬ್ಬಿಣದ ಯುಗದಲ್ಲಿ ದೊಡ್ಡ ಪ್ರಮಾಣದ ಕಬ್ಬಿಣ ಸಲಕರಣೆಗಳು ಉತ್ಪಾದನೆಯಾಗಿರುವುದು ಕಾಣಿಸುತ್ತದೆ. ಭಾರತದಲ್ಲಿ ವಿಶೇಷವಾಗಿ ಕಬ್ಬಿಣ ಯುಗದಲ್ಲಿ ಬೃಹತ್ ಕಲ್ಲು ಗೋರಿಗಳಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿವೆ. ಯೂರೋಪ್ನಲ್ಲಿ ಕಬ್ಬಿಣ ಯುಗ ಬಹು ತಡವಾಗಿ ಆರಂಭವಾಗಿದ್ದು ಸುಮಾರು ಕ್ರಿ.ಪೂ. 650 ಎನ್ನಲಾಗಿದೆ.
ಕೃಷಿ ವ್ಯಾಪಕವಾಗಿ ವಿಸ್ತರಿಸಲು ಕಬ್ಬಿಣದ ಅವಿಷ್ಕಾರವೇ ಕಾರಣವಾಗಿದೆ. ಈ ಅವಧಿಯಲ್ಲಿ ಎಲ್ಲಾ ಲೋಹಗಳಿಗಿಂತ ಕಬ್ಬಿಣ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಯಿತು. ಕಂಚಿನ ಯುಗದ ಶ್ರೇಷ್ಠತೆಯನ್ನು ಕಬ್ಬಿಣ ಯುಗ ಬಂದು ಕಿತ್ತುಕೊಂಡಿತು ಎನ್ನಲಾಗಿದೆ. ಚಿನ್ನ, ಬೆಳ್ಳಿ, ವಜ್ರಗಳು ರಾಜರು ಮತ್ತು ಹಣವಂತರ ಪಾಲಾದರೆ ಕಬ್ಬಿಣವನ್ನು ಸಮಾಜದಲ್ಲಿ ಯಾರು ಬೇಕಾದರೂ ಬಳಸಬಹುದಾಗಿತ್ತು. ಬಹುಶಃ ಇದೇ ಕಾರಣದಿಂದಲೇ ಕಬ್ಬಿಣ ಯುಗ ಸಾಕಷ್ಟು ಅಭಿವೃದ್ಧಿಗೊಳ್ಳಲು ಸಹಾಯವಾಗಿರಬೇಕು.

(ಚಿತ್ರ: ಪ್ರಾಚೀನ ಕಾಲದ ಕಬ್ಬಿಣ ಸ್ತಂಭ, ಮೇಹ್ರೌಲಿ, ದೆಹಲಿ.)
ಇಂದೋರ್ ಬಳಿಯ ಧಾರ್ ಎಂಬಲ್ಲಿ ಮತ್ತೊಂದು ಪ್ರಖ್ಯಾತ ಕಬ್ಬಿಣ ಕಂಬವಿದೆ. ಇದರ ಒಟ್ಟು ಉದ್ದ 40 ಅಡಿಗಳು. ಪ್ರಾಯಶಃ ಕ್ರಿ.ಶ. 320-480ರ ಮಧ್ಯಕಾಲದಲ್ಲಿ ಇದನ್ನು ತಯಾರಿಸಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒರಿಸ್ಸಾದ ಕೊನಾರ್ಕ್ ಸೂರ್ಯದೇವಾಲಯದಲ್ಲಿ ಒಟ್ಟು 29 ಕಬ್ಬಿಣದ ತೊಲೆಗಳನ್ನು, ಜಂತೆಗಳನ್ನು ಬಳಸಿದ್ದಾರೆ. ಈ ದೇವಾಲಯವನ್ನು ಕ್ರಿ.ಶ. 1300ರಲ್ಲಿ ಕಟ್ಟಲಾಗಿದೆ. ಹಾಗೆಯೇ ಪುರಿಯ ಗುಂಡಿಚ ಎಂಬ ದೇವಾಲಯದಲ್ಲೂ 239 ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. ಇದು 12ನೇ ಶತಮಾನದಲ್ಲಿ ಕಟ್ಟಿದ ದೇವಾಲಯ.
ಕ್ರಿ.ಪೂ. 400ರಲ್ಲಿ ಅಲೆಕ್ಸಾಂಡರ್ ನಮ್ಮ ದೇಶದ ಮೇಲೆ ದಂಡೆತ್ತಿ ಬಂದಾಗ ಅವನಿಗೆ ಕಪ್ಪ ಕಾಣಿಕೆಯಾಗಿ 39 ಪೌಂಡ್ ಕಬ್ಬಿಣದ ಉಂಡೆಯನ್ನು (17.69 ಕಿ.ಗ್ರಾಂ) ಕೊಡಲಾಯಿತಂತೆ. ಈ ಹೊತ್ತಿಗಾಗಲೇ ಭಾರತದಲ್ಲಿ ಕಬ್ಬಿಣದ ಸಲಕರಣೆಗಳು, ಯುದ್ಧೋಪಕರಣಗಳು ತಯಾರಾಗುತ್ತಿದ್ದವೆಂಬುದು ನಿರ್ವಿವಾವಿದ. ಇದಲ್ಲದೆ ವಾಗ್ಭಾಟನ “ರಸರತ್ನ ಸಮುಚ್ಚಯ” ಗ್ರಂಥದಲ್ಲಿ ಕಬ್ಬಿಣ ಸಂಬಂಧಿತ ಲೋಹಗಳನ್ನು ಬೇರೆ ಬೇರೆಯಾಗಿ ವರ್ಗೀಕರಿಸಿರುವುದನ್ನು ಕಾಣಬಹುದು. ಇತ್ತೀಚೆಗೆ 2003ರಲ್ಲಿ ಪುರಾತತ್ತ್ವಶಾಸ್ತ್ರ ಇಲಾಖೆ ಉತ್ತರ ಪ್ರದೇಶದ ಮಧ್ಯಗಂಗಾ ಬಯಲು ಮತ್ತು ಪೂರ್ವ ವಿಂಧ್ಯಾಚಲದ ಮಲ್ಹಾರ್, ದದುಪುರ್, ರಾಜನಾಲ ಕಾ ತಿಲ ಮತ್ತು ಲಹುರದೇವದಲ್ಲಿ ನಡೆಸಿದ ಉತ್ಖನನದಿಂದ ಕಬ್ಬಿಣದ ಬಳಕೆ ಮತ್ತು ಗಣಿ ಕಾರ್ಯಗಳು ನಡೆದಿರುವ ಪುರಾವೆಗಳನ್ನು ಪತ್ತೆ ಹಚ್ಚಿದೆ. ಇದು ಕ್ರಿ.ಪೂ. 1800 ರಿಂದ ಕ್ರಿ.ಪೂ. 900 ವರ್ಷಗಳ ನಡುವಿನ ಕಾಲಕ್ಕೆ ಸೇರಿದೆ ಎನ್ನಲಾಗಿದೆ.
ಇಲ್ಲಿ ದೊರಕಿದ ಕುಂಬಾರಿಕೆ ಪ್ರಕಾರಗಳನ್ನು ಚಾಲ್ಕೊಲಿಥಿಕ್ ಅವಧಿಯ (ಕ್ರಿ.ಪೂ.2000 ರಿಂದ ಕ್ರಿ.ಪೂ.700) ಗುಣಲಕ್ಷಣಗಳೆಂದು ಪರಿಗಣಿಸಲಾಗಿದ್ದು ಅವು ಕ್ರಿ.ಪೂ. 2ನೇ ಸಹಸ್ರಮಾನದ ಆರಂಭದಿಂದ ಕೊನೆಯವರೆಗಿನ ಕಾಲಕ್ಕೆ ಸೇರಿವೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ಕಬ್ಬಿಣದ ವಸ್ತುಗಳು ಕ್ರಿ.ಪೂ. 11 ರಿಂದ ಕ್ರಿ.ಪೂ. 12ನೇ ಶತಮಾನದ ಕಾಲಕ್ಕೆ ಸೇರಿದ್ದಾಗಿವೆ. ಚಾಕುಗಳು, ಬಾಣದ ತಲೆಗಳು, ಚಮಚಗಳು, ಬಟ್ಟಲುಗಳು ಮುಂತಾದ ಕಬ್ಬಿಣ ವಸ್ತುಗಳು ಕ್ರಿ.ಪೂ. 600 ರಿಂದ ಕ್ರಿ.ಪೂ. 200 ವರ್ಷಗಳ ಕಾಲಕ್ಕೆ ಸೇರಿದ್ದು, ಈ ವಸ್ತುಗಳು ದೇಶದ ಅನೇಕ ಸ್ಥಳಗಳಲ್ಲಿ ದೊರಕಿವೆ. ಮೌರ್ಯರ ಕಾಲದ ಅವಧಿಗೆ (ಕ್ರಿ.ಪೂ. 322 ರಿಂದ ಕ್ರಿ.ಪೂ. 185) ಕಬ್ಬಿಣ ಸೇರಿದಂತೆ ಎಲ್ಲಾ ಲೋಹಗಳ ಲೋಹಶಾಸ್ತ್ರ ಹೆಚ್ಚು ಅಭಿವೃದ್ಧಿ ಹೊಂದಿತ್ತು.
ಕ್ರಿ.ಪೂ. 300ರಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಗುಣಮಟ್ಟದ ಉಕ್ಕನ್ನು ಕುಲುಮೆಗಳಲ್ಲಿ ಉತ್ಪಾದಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಕಬ್ಬಿಣ, ಇದ್ದಿಲು ಮತ್ತು ಗಾಜನ್ನು ಒಟ್ಟು ಬೆರೆಸಿ ಕುಲುಮೆ ಮೇಲಿಟ್ಟು ಇಂಗಾಲವನ್ನು ಹೀರಿಕೊಳ್ಳುವವರೆಗೂ ಕಾಯಿಸಲಾಗುತ್ತಿತ್ತು. ಪ್ರಾರಂಭದಲ್ಲಿ ತಯಾರಿಸಲಾದ ಈ ಉಕ್ಕನ್ನು (ವೂಟ್ಜ್ ಉಕ್ಕು) ಪ್ರಾಚೀನ ಯೂರೋಪ್, ಚೀನಾ ಮತ್ತು ಅರಬ್ ಜಗತ್ತಿಗೆ ರಫ್ತು ಮಾಡಲಾಗುತ್ತಿತ್ತು. ಇದು ಮುಂದೆ ಮಧ್ಯಪ್ರಾಚ್ಯದಲ್ಲಿ “ಡಮಾಸ್ಕಸ್ ಉಕ್ಕು” ಎಂದು ಪ್ರಸಿದ್ಧಿಯಾಯಿತು. “ವೊಟ್ಜ್” ಪದ ಕನ್ನಡದ “ಉಕ್ಕು” ಪದದ ಮೂಲದಿಂದ ಬಂದಿದೆ ಎಂದು ಇತಿಹಾಸಕಾರು ಹೇಳುತ್ತಾರೆ.
ಚಂದ್ರಗುಪ್ತ-2 ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ (ಕ್ರಿ.ಶ. 375-413), ದೆಹಲಿಯ ಮೆಹ್ರೌಲಿಯಲ್ಲಿರುವ ತುಕ್ಕುರಹಿತ ಕಬ್ಬಿಣದ ಕಂಬವನ್ನು ತಯಾರಿಸಲಾಯಿತು. ಇದು ವಿಶ್ವದ ಮೊಟ್ಟಮೊದಲ ಕಬ್ಬಿಣದ ಕಂಬವಾಗಿದೆ. ಈ ಕಂಬವನ್ನು ಭಾರತೀಯ ಉಪಖಂಡದಲ್ಲಿ ಲೋಹಶಾಸ್ತ್ರದ ಪ್ರಮುಖ ಮತ್ತು ಶ್ರೇಷ್ಠ ಸಾಕ್ಷ್ಯವೆಂದು ಪರಿಗಣಿಸಲಾಗಿದೆ. ಕಾರಣ, ಇದು ಇಂದಿಗೂ ತುಕ್ಕು ನಿರೋಧಕ ಕಂಬವಾಗಿ ನಿಂತಿದೆ. ಸಾಹಿ (1979) ದಕ್ಷಿಣ ರಾಜಸ್ತಾನದ ಆಹರ್ ನದಿ ದಡಗಳಲ್ಲಿರುವ ಚಾಲ್ಕೊಲಿಥಿಕ್ ಕಾಲದ ಸ್ಥಳಗಳಲ್ಲಿ ಕಬ್ಬಿಣದ ಉಪಸ್ಥಿತಿಯ ಬಗ್ಗೆ ಗಮನ ಸೆಳೆಯುತ್ತ, “ಭಾರತದಲ್ಲಿ ಕಬ್ಬಿಣ ಕರಗಿಸುವಿಕೆಯ ಆರಂಭದ ಕಾಲವನ್ನು ಕ್ರಿ.ಪೂ. 16ನೇ ಶತಮಾನಕ್ಕೆ ಕೊಂಡೊಯ್ಯಬಹುದು” ಎಂದಿದ್ದಾರೆ. ಅಂದರೆ ಭಾರತೀಯ ಉಪಖಂಡದಲ್ಲಿ ಕಬ್ಬಿಣದ ಬಗೆಗಿನ ಜ್ಞಾನ ಸುಮಾರು 20,000 ವರ್ಷಗಳಿಂದಲೆ ಇತ್ತು.

(ಚಿತ್ರ: ಮಧ್ಯಗಂಗಾ ಬಯಲು, ಪೂರ್ವ ವಿಂಧ್ಯಾಚಲ ಮತ್ತು ಭಾರತದ ವಿವಿಧ ಪ್ರದೇಶಗಳ ಆರಂಭಿಕ ಕಬ್ಬಿಣ ಯುಗದ ಪುರಾತತ್ತ್ವಶಾಸ್ತ್ರ ಸ್ಥಳಗಳನ್ನು ತೋರಿಸುವ ನಕ್ಷೆ.)

(ಚಿತ್ರ: ಮಧ್ಯ ಪ್ರದೇಶದ ಬುಡಕಟ್ಟಿನ ಅಗರಿಯಾಗಳ (ಕುಂಬಾರಿಕೆ ಸಮುದಾಯ) ಸಾಂಪ್ರದಾಯಿಕ ಕಬ್ಬಿಣ ಕರಗಿಸುವ ಕುಲುಮೆ.)
ಭಾರತೀಯ ಪ್ರಾಚೀನ ಕುಶಲಕರ್ಮಿಗಳ ಶ್ರೇಷ್ಠತೆಯನ್ನು ನೋಡಬೇಕೆಂದರೆ ದೆಹಲಿಯ ಮೆಹ್ರೌಲಿಯಲ್ಲಿರುವ 8 ಟನ್ ತೂಕದ ತುಕ್ಕು ನಿರೋಧಕ ಕಬ್ಬಿಣ ಕಂಬವನ್ನು ನೋಡಬಹುದು. ನಾಗಪುರದ ಸ್ಥಳೀಯ ಕುಲುಮೆ “ಕೋಥಿ” ಒಂದು ಸಲಕ್ಕೆ 40 ಕೇಜಿ ತೂಕದ ಕಬ್ಬಿಣ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ದೆಹಲಿಯಲ್ಲಿರುವ 8 ಟನ್ ತೂಕದ ಕಬ್ಬಿಣ ಕಂಬವನ್ನು ತಯಾರಿಸಲು ಪ್ರತಿ ಸಲ 40 ಕೆಜಿಯಂತೆ 200 ಸಲ ಕುಲಮೆ ಕಾಯಿಸಿ ಬೆಸುಗೆ ಮಾಡಬೇಕಿತ್ತು. ದೆಹಲಿಯ ಕಬ್ಬಿಣ ಕಂಬದ ಪರೀಕ್ಷಿತ ದೃಢತೆ ಮತ್ತು ರಚನಾತ್ಮಕ ಏಕರೂಪತೆಯು ಭಾರತೀಯ ಪುರಾತನ ಕಬ್ಬಿಣದ ಕುಶಲತೆಗೆ ಜೀವಂತ ಸಾಕ್ಷಿಯಾಗಿದೆ (ಪ್ರಕಾಶ್, 1997).
ಕೊಡಚಾದ್ರಿ ಬೆಟ್ಟದ ಮೇಲಿರುವ ಕಬ್ಬಿಣ ಧ್ವಜಸ್ತಂಭ: ದೆಹಲಿಯ ಮೆಹ್ರೌಲಿ ಮತ್ತು ಮಧ್ಯಪ್ರದೇಶದ ಧರ್ನಲ್ಲಿರುವ ಸ್ತಂಭಗಳನ್ನು ಬಿಟ್ಟರೆ ಕರ್ನಾಟಕದ ಕೊಚಾದ್ರಿಯಲ್ಲಿರುವ ಸ್ತಂಭ ಲೋಹತಜ್ಞರ ಗಮನ ಸೆಳೆಯುತ್ತದೆ. ಜನಸಾಮಾನ್ಯರಿಗೆ ಇದರ ಬಗ್ಗೆ ಹೆಚ್ಚಿನ ಅರಿವಿಲ್ಲ. ಏಕೆಂದರೆ, ಇದು ಕಾಡಿನ ಮಧ್ಯದಲ್ಲಿದ್ದು ಅಲ್ಲಿಗೆ ಜನರು ತಲಪುವುದು ಅಪರೂಪ. ಕೊಲ್ಲೂರಿನಿಂದ 40 ಕಿ.ಮೀ. ದೂರದಲ್ಲಿ ಪಶ್ಚಿಮಘಟ್ಟಗಳ ಮಧ್ಯ ಕೊಡಚಾದ್ರಿ ಬೆಟ್ಟದಲ್ಲಿ ಆದಿ ಮೂಕಾಂಬಿಕ ದೇವಾಲಯವಿದ್ದು, ದೇವಾಲಯದ ಮುಂದೆ ಈ ಕಬ್ಬಿಣ ಸ್ತಂಭವನ್ನು ಸ್ಥಾಪಿಸಲಾಗಿದೆ.
ಸ್ಥಳೀಯರ ಪ್ರಕಾರ ಇದು ಮೂಕಾಸುರ ಎಂಬ ರಕ್ಕಸನನ್ನು ಅಂಬಿಕಾ ಎಂಬ ದೇವಿ ತ್ರಿಶೂಲದಿಂದ ಇರಿದು ಕೊಂದ ಸ್ಥಳವಾಗಿದೆ. ಅನೇಕ ಲೋಹಶಾಸ್ತ್ರ ತಜ್ಞರು ಈ ಸ್ತಂಭ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಕಂಬದ ಎತ್ತರ 8.7 ಮೀಟರ್ ಇದ್ದು ಸಿಮೆಂಟ್ ಕಟ್ಟೆಯ ಮೇಲೆ ನಿಲ್ಲಿಸಲಾಗಿದೆ. ಸ್ತಂಭ ಚೌಕಾಕಾರವಾಗಿದ್ದು, ಇದರ ಸುತ್ತಳತೆ 27.5 ಸೆಂ.ಮೀ. ಇದ್ದು ಬುಡದಿಂದ ಮೇಲೆ ಹೋದಂತೆ ಚೂಪಾಗಿದೆ.
ತಜ್ಞರ ಪ್ರಕಾರ ಈ ಸ್ತಂಭವನ್ನು ಆದಿವಾಸಿಗಳು ಕುಲುಮೆಯಲ್ಲಿ ಕಬ್ಬಿಣವನ್ನು ಕಾಸಿ, ಘನಸ್ಥಿತಿಗೆ ಬಂದಾಗ ಬಡಿದು ನಿಲ್ಲಿಸಿದ ಸ್ತಂಭ ಇದಾಗಿದೆ ಎನ್ನಲಾಗಿದೆ. ಸ್ತಂಭ ಉದ್ದಕ್ಕೂ ಏಕರೂಪವಾಗಿದ್ದು ಮೇಲ್ಮೈ ತುಂಬಾ ಒರಟಾಗಿದೆ. ಹವಾಮಾನದಿಂದ ಈಗ ಕೆಂಪುಮಿಶ್ರಿತ ಕಂದುಬಣ್ಣ ತಳೆದಿದೆ. ಉಳಿದ ಭಾಗಗಳಿಗಿಂತ ಕೊನೆಯ 1.25 ಮೀಟರ್ ಭಾಗ ಹೆಚ್ಚು ಸವೆತಕ್ಕೊಳಗಾಗಿದೆ ಹಾಗೂ ಮುಕ್ಕಾಗುತ್ತಿದೆ. ಬುಡದಿಂದ ತುದಿಯವರೆಗೆ ಅದು ಹೆಚ್ಚು ಒರಟಾಗುತ್ತ ಹೋಗುತ್ತದೆ. ಅದರ ಪಶ್ಚಿಮ ಮುಖ ಅರಬ್ಬೀ ಸಮುದ್ರದ ಕಡೆಗೆ ಇರುವುದರಿಂದ ಉಪ್ಪುಮಿಶ್ರಿತ ಗಾಳಿ ಬೀಸಿ ಸ್ತಂಭವನ್ನು ಹೆಚ್ಚು ಮುಕ್ಕಾಗಿಸಿದೆ.
ಇಡೀ ಸ್ತಂಭದ ಒಟ್ಟು ತೂಕ ಸುಮಾರು 500 ಕಿಲೋಗ್ರಾಂ ಇದೆ ಎಂದು ಅಂದಾಜು ಮಾಡಲಾಗಿದೆ. ದೆಹಲಿಯ ಕಬ್ಬಿಣದ ಸ್ತಂಭಕ್ಕೆ ಹೋಲಿಸಿದರೆ ಇದರ ಕಬ್ಬಿಣವೂ ಅಷ್ಟೇ ಶುದ್ಧ, ಶೇ. 99.5 ಭಾಗ. ಕಬ್ಬಿಣದ ಒಳರಚನೆಯನ್ನು ಅರಿಯಲು ಮಾಡಿರುವ ಅಧ್ಯಯನದಿಂದ ಈ ಸ್ತಂಭದಲ್ಲಿ ಇಂಗಾಲದ ಪ್ರಮಾಣ ಶೇ. 0.15 ಭಾಗ ಇರುವುದಾಗಿ ತಿಳಿದಿದೆ. ಬಳಸಿರುವ ಕಾರ್ಬನ್ ಏಕಪ್ರಕಾರವಾಗಿ ಹಂಚಿಕೆಯಾಗಿಲ್ಲದ ಕಾರಣ ಇಡೀ ಸ್ತಂಭದ ಕಾಠಿಣ್ಯತೆಯಲ್ಲಿ ವ್ಯತ್ಯಾಸವಿದೆ. ಈ ಸ್ತಂಭದಲ್ಲಿ ರಂಜಕದ ಅಂಶ ಶೇ. 1 ಭಾಗವಿದ್ದು ಕ್ಯಾಲ್ಸಿಯಂಆಕ್ಸೈಡ್ ಪ್ರಮಾಣ ಹೆಚ್ಚಾಗಿದ್ದು ತುಕ್ಕನ್ನು ನಿರೋಧಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಯಾವುದು ಏನೇ ಇರಲಿ, ಇಲ್ಲಿನ ಮೂಲ ಆದಿವಾಸಿಗಳು ಈ ಮಟ್ಟದ ತಂತ್ರಜ್ಞಾನವನ್ನು ರೂಢಿಸಿಕೊಂಡಿದ್ದ ವಿಷಯ ದೇಶ ವಿದೇಶಗಳ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

(ಚಿತ್ರ: ಕೊಡಚಾದ್ರಿ ಬೆಟ್ಟದ ಮೇಲಿರುವ ಕಬ್ಬಿಣದ ಧ್ವಜಸ್ತಂಭ.)
ಕ್ರಿ.ಶ. 1620ರಲ್ಲಿ ರಾಜಗೋಪಾಲ ಬೀರಂಗಿ ಅವರು ತಂಜಾವೂರಿನಲ್ಲಿ ಬೆಸುಗೆ ಹಾಕಿ ನಿರ್ಮಿಸಿರುವ ಕಬ್ಬಿಣದ ಪಿರಂಗಿ ವಿಶ್ವದ ಅತಿದೊಡ್ಡ ಭಾರತೀಯ ಕಬ್ಬಿಣದ ಕರಕುಶಲತೆಗೆ ಉದಾಹರಣೆಯಾಗಿದೆ ಎಂದಿದ್ದಾರೆ. ಒಂದು ಅಂದಾಜಿನ ಪ್ರಕಾರ, ಕ್ರಿ.ಶ. 1800ರ ದಶಕದಲ್ಲಿ ಭಾರತದಲ್ಲಿ ವಾರ್ಷಿಕ 2,00,000 ಟನ್ನು ಕಬ್ಬಿಣ ಉತ್ಪಾದನೆಯಾಗುತ್ತಿತ್ತು ಎಂಬ ಲೆಕ್ಕಾಚಾರವಿದೆ. ಭಾರತದಲ್ಲಿ ಕಬ್ಬಿಣ ಅದಿರುಗಳ ದೊಡ್ಡದೊಡ್ಡ ನಿಕ್ಷೇಪಗಳಿದ್ದು ಹೆಚ್ಚಾಗಿ ಒಡಿಸಾ, ಜಾರ್ಖಂಡ್, ಛತ್ತೀಸಗಡ್, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿದ್ದು ಇತರ ರಾಜ್ಯಗಳಲ್ಲಿ ಸಣ್ಣ ಪ್ರಮಾಣದ ನಿಕ್ಷೇಪಗಳಿವೆ. ಕಬ್ಬಿಣದ ಕಲಾಕೃತಿಗಳು ಮತ್ತು ಕಿಟ್ಟ (ಸ್ಲ್ಯಾಗ್) ಕಾಶ್ಮೀರದ ಬುರ್ಜಾಹೋಮ್, ಗುಫ್ಕ್ರಾಲ್, ಸೆಮತಾನ್, ಬಾರಾಮುಲ್ಲಾ ಮತ್ತು ಪ್ರಾಂಗ್ ಪ್ರದೇಶಗಳಲ್ಲಿಯೂ ಕಂಡುಬಂದಿದೆ (ಯಟೂ, 2015).
ಕ್ರಿ.ಪೂ. 4ನೇ ಶತಮಾನದಲ್ಲಿಯೇ ಕುಲುಮೆಗಳಲ್ಲಿ ಗಟ್ಟಿಯಾದ ಕಬ್ಬಿಣ ತಯಾರುಮಾಡಿ ಶಸ್ತ್ರಾಸ್ತ್ರಗಳು ಮತ್ತು ಕಬ್ಬಿಣ ಆಯುಧಗಳನ್ನು ತಯಾರಿಸುತ್ತಿದ್ದರು. ಬಾಣಗಳ ತಲೆಗಳು, ಈಟಿ ತುದಿಗಳು, ಕಠಾರಿಗಳು, ಚಾಕುಗಳು, ಎರಡೂ ಸಮಾನಾಂತರ ಬದಿಯ ಕತ್ತಿಗಳು, ಮುಳ್ಳಿನ ಬಾಣಗಳು, ಉಳಿಗಳು ಇತ್ಯಾದಿ ಯುದ್ಧ ಸಲಕರಣೆಗಳು ಗುಜರಾತ್ನಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರಕಿವೆ (ಹೆಗ್ಡೆ, 1996). ರಾಜಸ್ತಾನದ ಜುಂಜುನು, ಸಿಕಾರ್, ಆಳ್ವಾರ್, ಭಿಲ್ವಾರ, ಉದಯಪುರ ಜಿಲ್ಲೆಗಳಲ್ಲಿ ಕಬ್ಬಿಣ ಅದಿರಿನ ಸಣ್ಣ ಘಟಕಗಳು ಮತ್ತು ನಿಕ್ಷೇಪಗಳು ಕಂಡುಬಂದಿವೆ.

(ಚಿತ್ರ: ಟಿಪ್ಪು ಸುಲ್ತಾನ್ ಖಡ್ಗ, ಉತ್ತರ ಪ್ರದೇಶದ ಸೋನ್ಭದ್ರದಲ್ಲಿ ದೊರಕಿದ ಕಬ್ಬಿಣದ ಕಲಾಕೃತಿಗಳು ಮತ್ತು ಕುಲುಮೆ, ತಂಜಾವೂರು ಫಿರಂಗಿ ಮತ್ತು ದೆಹಲಿಯ ಮೆಹ್ರೌಲಿಯಲ್ಲಿರುವ ಕಬ್ಬಿಣದ ಕಂಬ (ತಿವಾರಿ, 2003).
ಉತ್ತರಾಖಂಡ್ ರಾಜ್ಯದಲ್ಲಿ ಹಳೆಯ ಕಬ್ಬಿಣದ ಗಣಿ ಕಾರ್ಯಗಳು ಖುಷ್ ಅಥವಾ ಚಾಂದಪುರದಲ್ಲಿವೆ; ಚಾಂದಪುರದ ತಳ್ಳಿ ಮತ್ತು ತಳ್ಳಿ ಕಲಿಫತ್; ನಾಗಪುರ ಹತ್ತಿರದ ಭುಖಂಡ್ ಜಖ್ತೋಲಿ, ಗಿಲೆಟ್ ಮತ್ತು ಹ್ಯಾಟ್; ಗರ್ವಾಲ್ ಜಿಲ್ಲೆಯ ಬಚ್ಚನ್ಸ್ಯುನ ದುಂಗ್ರಾಖಾನ್; ಮತ್ತು ಅದೇ ಜಿಲ್ಲೆಯ ಇಡಿಯೊಕೋಟ್ನ ಪೀಪ್ಲಿ ಮತ್ತು ದಂಡತೋಲಿ ಪ್ರದೇಶಗಳಲ್ಲಿ ಇವೆ. ಬಚ್ಚನ್ಸ್ಯುನ ಕಬ್ಬಿಣದ ಗಣಿಗಳಲ್ಲಿ ಖಡ್ಗಗಳು, ಚಾಕು, ಕೊಡಲಿ, ದಾರತಿ/ಕುಡುಗೋಲುಗಳನ್ನು ತಯಾರು ಮಾಡಲಾಗುತ್ತಿತ್ತು.
ಪ್ರಾಚೀನ ಕಾಲದಲ್ಲಿ ವನ್ಯಪ್ರಾಣಿಗಳ ಬೇಟೆಯಾಡುವುದು ಆದಿಮಾನವನ ಪ್ರಮುಖ ಕೆಲಸವಾಗಿತ್ತು. ಕಾಲಾನಂತರ ಕೃಷಿ ಬೆಳಕಿಗೆ ಬಂದು, ಕಬ್ಬಿಣ ಸಲಕರಣೆಗಳ ಅಗತ್ಯದಿಂದ ದೇಶದ ಉದ್ದಗಲಕ್ಕೂ ಎಲ್ಲಾ ಪ್ರದೇಶಗಳಲ್ಲೂ ಕಬ್ಬಿಣವನ್ನು ತಯಾರಿಸಲಾಗುತ್ತಿತ್ತು. ಪಶ್ಚಿಮದಲ್ಲಿ ಕಚ್ನಿಂದ ಹಿಡಿದು ದೇಶದ ಮಧ್ಯ ರಾಜ್ಯಗಳ ಮೂಲಕ ಈಶಾನ್ಯದ ಖಾಸಿ (ಮೇಘಾಲಯ) ಬೆಟ್ಟಗಳವರೆಗೂ, ಕೇರಳದಿಂದ ನೈರುತ್ಯ ಕರಾವಳಿಯಲ್ಲಿ ಡೆಕ್ಕನ್ ಪ್ರಸ್ಥಭೂಮಿ ಮತ್ತು ನರ್ಮದಾ ಕಣಿವೆಯ ಮೂಲಕ, ಹಿಮಾಲಯದ ಕುಮೌನ್ ಮತ್ತು ಗರ್ವಾಲ್ ಮತ್ತು ಇನ್ನೂ ಉತ್ತರಕ್ಕೆ ಹಿಮಾಚಲ ಮತ್ತು ಕಾಶ್ಮೀರದವರೆಗೂ ಕಬ್ಬಿಣ ಗಣಿ ಕಾರ್ಯಗಳು ಮತ್ತು ಕುಲುಮೆಗಳು ಹರಡಿಕೊಂಡಿವೆ.
ಮಧ್ಯ ಭಾರತದಲ್ಲಿ ಕಬ್ಬಿಣದ ಕುಲುಮೆಗಳನ್ನು ಅಗರಿಯಾ ಮತ್ತು ಅಸುರ್ ಬುಡಕಟ್ಟು ಜನಾಂಗಗಳು ನಡೆಸುತ್ತಿದ್ದರೆ, ಒಡಿಸಾದಲ್ಲಿ ಅವರನ್ನು ಕೋಲ್ಸ್, ಮಹಾರಾಷ್ಟ್ರದಲ್ಲಿ ಘೇಸ್ರಿ, ಕರ್ನಾಟಕದಲ್ಲಿ ಬೇಲ್ ಕುಂಬಾರ ಮತ್ತು ಉತ್ತರ ಭಾರತದಲ್ಲಿ ಲೋಹಾರ್ ಎಂದು ಕರೆಯಲಾಗುತ್ತಿತ್ತು. ಅಗರಿಯಾ ಬುಡಕಟ್ಟು ಜನರು ಕಬ್ಬಿಣವನ್ನು ಕರಗಿಸುವ ಒಂದು ಪ್ರಮುಖ ಜನಾಂಗವಾಗಿದ್ದು, ಮಧ್ಯ ಭಾರತದ ಎತ್ತರ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಪೌರಾಣಿಕವಾಗಿ, ಅಗರಿಯಾ ಜನರು ತಮ್ಮ ಮೂಲವನ್ನು ಹನ್ನೆರಡು ಅಸುರ್ ಸಹೋದರರು ಮತ್ತು ಅವರ ಪೂರ್ವಜರ ದೇವರಾದ ಸಬರ್ ಸಾಯಿ ಅವರ ಪುತ್ರರೆಂದು ಹೇಳಿಕೊಳ್ಳುತ್ತಾರೆ. ಜಾರ್ಖಂಡ್ನ ಅಸುರರಂತೆ ಅಗರಿಯಾ “ಲೋಹಾಸುರ್” ಕಬ್ಬಿಣದ ದೇವರು (ಕಬ್ಬಿಣದ ಅದಿರು), “ಅಗ್ಯಾಸುರ್” ಬೆಂಕಿಯ ದೇವರು, ಮತ್ತು “ಕೋಲಾಸುರ್” ಇದ್ದಿಲಿನ ದೇವರುಗಳೆಂದು ಪೂಜಿಸುತ್ತಾರೆ.

(ಚಿತ್ರ: ಅಗರಿಯಾ ಜನರು ಕಬ್ಬಿಣ ಕರಗಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದು, ಪಲಾಮೋ, ಜಾರ್ಖಂಡ್ (ಚಿತ್ರ ಟಿ.ಎಫ್. ಪೆಪ್ಪಿ).
ಅಗರಿಯಾ ಪುರಾಣದಲ್ಲಿ, ಪೌರಾಣಿಕ ಲೋಗುಂಡಿ ರಾಜನ ಆಳ್ವಿಕೆಯಲ್ಲಿ ಹನ್ನೆರಡು ಅಸುರ ಸಹೋದರರು ಕಬ್ಬಿಣವನ್ನು ಕರಗಿಸುವ ಕೆಲಸದಲ್ಲಿ ತೊಡಗಿಕೊಂಡು ಸಮೃದ್ಧವಾಗಿ ಬದುಕು ನಡೆಸುತ್ತಿದ್ದಾಗ ಕಬ್ಬಿಣದ ಕೋಟೆ ಲೋಹ್ರಿಪುರ ನಾಶವಾದ ದುರಂತ ಕತೆಯನ್ನು ವಿವರಿಸಲಾಗಿದೆ (http://bharatkalyan97.blogspot.com/). ಖಾಸಿ, ಮೇಘಾಲಯದ ಬೆಟ್ಟಗಳಲ್ಲಿ ದೊರಕಿದ ಕಬ್ಬಿಣದ ಕಿಟ್ಟನಿಂದ ಕಾರ್ಬನ್ ಡೇಟಿಂಗ್ ಮಾಡಿದಾಗ ಅದು ಕಳೆದ ಎರಡು ಸಹಸ್ರಮಾನಗಳ ಕಾಲಕ್ಕೆ ವಿಸ್ತರಿಸುತ್ತದೆ.
2040 (ಹೆಚ್ಚು ಕಡಿಮೆ 80 ವರ್ಷಗಳು) ವರ್ಷಗಳ (ಕ್ರಿ.ಪೂ. 353 ರಿಂದ ಕ್ರಿ.ಶ.128) ಕಾಲವನ್ನು ತೋರಿಸುತ್ತದೆ. ಇವು ಈಶಾನ್ಯ ಭಾರತದಲ್ಲಿ ಅತ್ಯಂತ ಹಳೆಯ ಕಬ್ಬಿಣ ಗಣಿ ಕಾರ್ಯಗಳು ಮತ್ತು ಕುಲುಮೆಗಳು ನಡೆಯುತ್ತಿದ್ದ ಸ್ಥಳಗಳಾಗಿವೆ. ಕಬ್ಬಿಣ ಅದಿರಿನ ನಿಕ್ಷೇಪಗಳ ಮೂಲವನ್ನು ಗ್ರಾನೈಟ್ ಕೊಲ್ಯುವಿಯಲ್ ಟೈಟಾನಿಫೆರಸ್ ಮ್ಯಾಗ್ನಟೈಟ್ ಶಿಲೆಗಳು ಎಂದು ಪರಿಗಣಿಸಲಾಗಿದೆ (ಪ್ರೊಕೊಪ್ ಮತ್ತು ಸುಲಿಗಾ, 2013). ಹಿಮಾಚಲ ಪ್ರದೇಶದ ಸಿರ್ಮೌರ್, ಶಿಮ್ಲಾ, ಕುಲು, ಕಿನ್ನೌರ್ ಮತ್ತು ಲಾಹೌಲ್-ಸ್ಪಿತಿ ಜಿಲ್ಲೆಗಳಲ್ಲಿ ಸಣ್ಣಸಣ್ಣ ಕಬ್ಬಿಣದ ಅದಿರು ನಿಕ್ಷೇಪಗಳು ಕಂಡುಬಂದಿದ್ದು ಕಬ್ಬಿಣ ಕರಗಿಸುವ ಕುಲುಮೆಗಳು ಬಹಳ ಹಿಂದಿನಿಂದಲೂ ಇಲ್ಲಿ ನಡೆದಿರುವುದು ಕಂಡುಬಂದಿವೆ.

ಚಿತ್ರ: ಅಗರಿಯಾ ಕಬ್ಬಿಣ ಕರಗಿಸುವ ಕುಲುಮೆ ಮತ್ತು ಅದರ ರೇಖಾಚಿತ್ರ ಮಧ್ಯಪ್ರದೇಶ, (ಶ್ರೀವತ್ಸ, 1999).

(ಚಿತ್ರ: ಮೆಗಾಲಿಥಿಕ್ ಕುಲುಮೆ, ನೈಕುಂಡ್, ಉತ್ತರ ಪ್ರದೇಶ (ಶ್ರೀವತ್ಸ, 1999).

ಚಿತ್ರ: ಹಳೆಯ ಕಬ್ಬಿಣ ಗಣಿ ಕಾರ್ಯಗಳು, ತೋಲಾ-ಜಿಂಕ್ಲಿ ಮತ್ತು ಬಿಜೇತಾ, ಜಹಜಪುರ ಶಿಸ್ಟ್ ಪಟ್ಟಿ, ರಾಜಸ್ತಾನ.
ಕಬ್ಬಿಣದ ಅದಿರು ರಚನೆಯ ಪ್ರಕ್ರಿಯೆಗಳು
ನೆಲದ ಮೇಲೆ ಕಬ್ಬಿಣದ ಅದಿರು ನಿಕ್ಷೇಪಗಳು ಹಲವು ರೀತಿಯಲ್ಲಿ ರೂಪುಗೊಳ್ಳುತ್ತವೆ :
* ನಿಕ್ಷೇಪಗೊಳ್ಳುವ ಜಲಾನಯನ ಬೋಗುಣಿ ಫರ್ರುಜಿನಸ್ (ಕಬ್ಬಿಣ ಅಂಶದಿಂದ ಸಮೃದ್ಧವಾಗಿರಬೇಕು) ನೀರನ್ನು ಹೊಂದಿರಬೇಕು.
* ಈ ಪ್ರಕ್ರಿಯೆ ಅನಾಕ್ಷಿಸ್ ಆಗಿರಬೇಕು, ಏಕೆಂದರೆ ಫೆರಸ್ ಕಬ್ಬಿಣವು ಕರಗಿದ ಆಮ್ಲಜನಕದ ಉಪಸ್ಥಿತಿಯಲ್ಲಿ ಕೆಲವು ಗಂಟೆಗಳು ಕಾಲ ಅಥವಾ ದಿನಗಳಲ್ಲಿ ಫೆರಿಕ್ ಕಬ್ಬಿಣವಾಗಿ ಉತ್ಕರ್ಷಣಗೊಳ್ಳುತ್ತದೆ ಅಥವಾ ಬದಲಾಗುತ್ತದೆ.
* ನೀರು ಯುಸೆನಿಕ್ (ಸಮೃದ್ಧ ಹೈಡ್ರೋಜನ್ ಸಲ್ಫೈಡ್) ಇರಬಾರದು, ಏಕೆಂದರೆ ಇದು ಫೆರಸ್ ಕಬ್ಬಿಣವನ್ನು ಪೈರೈಟ್ ಆಗಿ ಪ್ರತ್ಯೇಕಿಸಲು ಕಾರಣವಾಗುತ್ತದೆ.
ಬ್ಯಾಂಡೆಡ್ ಕಬ್ಬಿಣದ ಶಿಲಾರಚನೆಗಳು (ಬ್ಯಾಂಡೆಡ್ ಐರನ್ ಸ್ಟೋನ್ ರಚನೆಗಳು ಅಥವಾ ಬಿ.ಐ.ಎಫ್.ಗಳು) ಕಬ್ಬಿಣದ ಆಕ್ಸೈಡ್ಗಳು ಮತ್ತು ಕಬ್ಬಿಣದ-ಕಳಪೆ ಚರ್ಟ್ನ ಪರ್ಯಾಯ ಪದರುಗಳನ್ನು ಒಳಗೊಂಡ ಜಲಜ ಶಿಲೆಗಳು (ಸೆಡಿಮೆಂಟರಿ) ವಿಶಿಷ್ಟ ಘಟಕಗಳಾಗಿವೆ. ಅವು ನೂರಾರು ಮೀಟರ್ಗಳಷ್ಟು ದಪ್ಪ ಮತ್ತು ನೂರಾರು ಕಿ.ಮೀ.ಗಳವರೆಗೆ ವಿಸ್ತರಿಸಬಹುದು.
ಈ ಎಲ್ಲಾ ಶಿಲಾರಚನೆಗಳು ಪ್ರಿಕ್ಯಾಂಬ್ರಿಯನ್ ಯುಗಕ್ಕೆ ಸೇರಿದವು ಮತ್ತು ಎಲ್ಲಾ ಸಾಗರಗಳು ಆಮ್ಲಜನಕೀಕರಣವನ್ನು ದಾಖಲಿಸುತ್ತವೆ ಎಂದು ಭಾವಿಸಲಾಗಿದೆ. ಸುಮಾರು 3,700 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಭೂಮಿಯ ಕೆಲವು ಹಳೆಯ ಶಿಲಾರಚನೆಗಳು ಬ್ಯಾಂಡೆಡ್ ಕಬ್ಬಿಣದ ರಚನೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ತಿಳಿದುಬಂದಿದೆ.
ದ್ಯುತಿಸಂಶ್ಲೇಷಿತ ಸೈನೋಬ್ಯಾಕ್ಟೀರಿಯಾದಿಂದ (ಜಗತ್ತಿನಲ್ಲಿ ಮೊದಲಿಗೆ ಕಾಣಿಸಿಕೊಂಡ ಬ್ಯಾಕ್ಟೀರಿಯಗಳು) ಅಗಾಧ ಆಮ್ಲಜನಕ ಉತ್ಪಾದನೆಗೊಂಡು ಸಮುದ್ರಗಳ ನೀರಿನಲ್ಲಿ ಬ್ಯಾಂಡೆಡ್ ಕಬ್ಬಿಣದ ಶಿಲಾ ರಚನೆಗಳು ರೂಪುಗೊಂಡಿವೆ ಎಂದು ಭಾವಿಸಲಾಗಿದೆ. ಆಮ್ಲಜನಕ ಸಾಗರಗಳಲ್ಲಿ ಕರಗಿದ ಕಬ್ಬಿಣದೊಂದಿಗೆ ಸಂಯೋಜಿಸಲ್ಪಟ್ಟು ಕರಗದ ಕಬ್ಬಿಣದ ಆಕ್ಸೈಡ್ಗಳನ್ನು ರೂಪಿಸಿತು. ಇದು ಆವೇಗವನ್ನು ಉಂಟುಮಾಡಿ ಸಾಗರ ತಳದಲ್ಲಿ ತೆಳುವಾದ ಪದರವನ್ನು ರೂಪಿಸಿತು. ಪ್ರತಿಯೊಂದು ಪದರು ವಾರ್ಷಿಕ ಋತುವನ್ನು ಸೂಚಿಸುವುದರೊಂದಿಗೆ ಆಮ್ಲಜನಕದ ಉತ್ಪಾದನೆ ಚಕ್ರೀಯ ವ್ಯತ್ಯಾಸಗಳಿಂದ ಉಂಟಾಗುತ್ತದೆ.
ಬ್ಯಾಂಡೆಡ್ ಕಬ್ಬಿಣದ ರಚನೆಗಳನ್ನು ಮೊದಲ ಬಾರಿಗೆ ಉತ್ತರ ಮಿಚಿಗನ್ನಲ್ಲಿ 1844ರಲ್ಲಿ ಕಂಡುಹಿಡಿಯಲಾಯಿತು. ಬ್ಯಾಂಡೆಡ್ ಕಬ್ಬಿಣ ರಚನೆಗಳು ಜಾಗತಿಕ ಕಬ್ಬಿಣದ ನಿಕ್ಷೇಪಗಳಲ್ಲಿ 60%ಕ್ಕಿಂತ ಹೆಚ್ಚು ಪ್ರಮಾಣವನ್ನು ಹೊಂದಿವೆ ಮತ್ತು ಪ್ರಸ್ತುತ ಹೆಚ್ಚಿನ ಕಬ್ಬಿಣದ ಅದಿರನ್ನು ಒದಗಿಸುತ್ತಿವೆ. ಹೆಚ್ಚಿನ ಕಬ್ಬಿಣ ಅದಿರು ರಚನೆಗಳನ್ನು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಯು.ಎಸ್.ನಲ್ಲಿ ಕಾಣಬಹುದು.
ಬ್ಯಾಂಡೆಡ್ ಕಬ್ಬಿಣ ರಚನೆಗಳು ಗ್ರೇಟ್ ಆಮ್ಲಜನೀಕರಣ ಘಟನೆಯ ಕಾಲಕ್ಕೆ ಮುಂಚಿನ ಪುರಾವೆಗಳನ್ನು ಒದಗಿಸುತ್ತದೆ, ಅದು ಸುಮಾರು 2,400 ದಶಲಕ್ಷ ವರ್ಷಗಳು. ಪ್ರೆಸ್ಟನ್ ಕ್ಲೌಡ್ 1968ರಲ್ಲಿ ಭೂಮಿಯ ಆರಂಭಿಕ ವಾತಾವರಣ ಮತ್ತು ಸಾಗರಗಳ ಬಗ್ಗೆ ಬರೆದ ತನ್ನ ಪ್ರಬಂಧದಲ್ಲಿ ಸಾರ್ವತ್ರಿಕವಾಗಿ ಅಲ್ಲದಿದ್ದರೂ ವ್ಯಾಪಕವಾಗಿದ್ದ ಸಾಮಾನ್ಯ ಚೌಕಟ್ಟನ್ನು ಸ್ಥಾಪಿಸಿ ಬಿ.ಐ.ಎಫ್. ನಿಕ್ಷೇಪಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯಕವಾದರು.

(ಚಿತ್ರ: ಕಬ್ಬಿಣ ಅದಿರು (Blogspot.com, jankazblogspot: Iron Ore Islands and Rocks).
ಕೊನೆ ಮಾತು
ಎಲ್ಲಾ ರೀತಿಯ ಖನಿಜಗಳು ಮತ್ತು ಲೋಹಗಳು ಭೂಮಿಯ ಒಳಗೆ ಮತ್ತು ಮೇಲ್ಮೈಯಲ್ಲಿ ಭೂಭೌತಿಕ ಭೂಪ್ರಕ್ರಿಯೆಗಳಿಂದ ನಿಕ್ಷೇಪಗಳಾಗಿ ಕ್ರೋಡೀಕರಣಗೊಳ್ಳುವುದು, ಛಿದ್ರವಾಗುವುದು ಮತ್ತು ನಾಶವಾಗುವುದು ನಡೆಯುತ್ತಲೇ ಇರುತ್ತದೆ. ಆದರೆ ಭೂಮಿಯ ಒಳಗೆ ಮತ್ತು ಭೂಮಿಯ ಮೇಲ್ಮೈಯಲ್ಲಿ ಯಾವುದೇ ಒಂದು ಅಣು-ಪರಮಾಣವೂ ಕೂಡ ಹೊಸದಾಗಿ ಸೃಷ್ಟಿಯಾಗುವುದಿಲ್ಲ. ಕಲ್ಲು, ಮಣ್ಣು, ಗಾಳಿ, ನೀರು, ಬೆಂಕಿ, ಖನಿಜಗಳು, ಲೋಹಗಳು ಎಲ್ಲವೂ ಬಿಗ್ಬ್ಯಾಂಗ್ ಸ್ಫೋಟದಿಂದ ಅಥವಾ ನೆಬ್ಯುಲಾ ಸಮ್ಮಿಳನದಿಂದಲೇ ರೂಪುಗೊಂಡಂತವು. ಒಬ್ಬ ಮನುಷ್ಯನ ದೇಹವೂ ಕೂಡ ಸಂಪೂರ್ಣವಾಗಿ ನೀರು, ಗಾಳಿ ಮತ್ತು ಖನಿಜಗಳಿಂದಲೇ ತುಂಬಿಕೊಂಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಾಗೆ ಗಿಡ ಮರ ಪಕ್ಷಿ-ಪ್ರಾಣಿ, ಬೆಟ್ಟಗಳೂ ಕೂಡ.
ಮನುಷ್ಯನ ಬುದ್ಧಿ ಕಾಲಕಾಲಕ್ಕೆ ವಿಕಾಶಗೊಳ್ಳುತ್ತಿದ್ದಂತೆ ಪ್ರಕೃತಿಯಲ್ಲಿ ತನ್ನ ಸುತ್ತಲಿನ ನಿಸರ್ಗದ ಜೊತೆಗೆ ಅನ್ವೇಷಣೆಗಳನ್ನು ಪ್ರಾರಂಭಿಸತೊಡಗಿದ. ಕಾಡಿನಿಂದ ನಾಡಿಗೆ ಬಂದ ಮನುಷ್ಯ, ವನ್ಯ ಪ್ರಾಣಿಗಳನ್ನು ಸಾಕು ಪ್ರಾಣಿಗಳಾಗಿ ಪಳಗಿಸಿ, ಕೃಷಿ ಕಂಡುಕೊಂಡು ಗುಡಿಸಿಲುಗಳನ್ನು ನಿರ್ಮಿಸುತ್ತಿದ್ದಂತೆ ಸಾವಿರಾರು ವರ್ಷಗಳು ಕಳೆದುಹೋಗಿದ್ದವು. ಈ ನಡುವೆ ಶಿಲಾಯುಗ, ಕಂಚಿನಯುಗ, ಕಬ್ಬಿಣ ಯುಗಗಳ ನಾಗರಿಕತೆಗಳು ಬೆಳೆದವು. ನಿಸರ್ಗದಲ್ಲಿನ ಸದ್ದು ಮೌಖಿಕ ಭಾಷೆಯಾಗಿ ಕೊನೆಗೆ ಲಿಪಿಗಳು ಸೃಷ್ಟಿಯಾಗಿ ವೇದ ಉಪನಿಷತ್ತುಗಳು, ಪುರಾಣ ಶಾಸ್ತ್ರಗಳು, ರಾಮಾಯಣ ಮಹಾಭಾರತಗಳು ಸೃಷ್ಟಿಯಾದವು. ತೀರಾ ಇತ್ತೀಚೆಗೆ ಕಲಿಯುಗ, ಆಧುನಿಕ ಯುಗ, ಯಂತ್ರ-ತಂತ್ರಜ್ಞಾನದೊಂದಿಗೆ ಬಾಹ್ಯಾಕಾಶ ಯುಗ ಪ್ರಾರಂಭವಾಗಿ ಬ್ರಹ್ಮಾಂಡದ ಕಡೆಗೆ ಚಿತ್ತ ಹರಿದಿದೆ. ಜಿನೋಮ್ ನಕ್ಷೆ, ಕೃತಕ ಬುದ್ಧಿಮತ್ತೆ ರೋಬೋಟ್ಸ್ ಬರುತ್ತಿವೆ. ಇನ್ನೂ ಏನೋನೋ ಯೋಜನೆಗಳು ಮನುಷ್ಯನ ಮಿದುಳುನಲ್ಲಿ ರೂಪ ಪಡೆದುಕೊಳ್ಳುತ್ತಿವೆ.

ಒಬ್ಬ ಮನುಷ್ಯನಲ್ಲಿ ಆಮ್ಲಜನಕ 65%, ಇಂಗಾಲ 18%, ಜಲಜನಕ 9.5%, ಸಾರಜನಕ 3.2%, ಕ್ಯಾಲ್ಸಿಯಂ 1.5%, ರಂಜಕ 1.2%, ಪೊಟ್ಯಾಸಿಯಮ್ 0.4%, ಗಂಧಕ 0.2%, ಸೋಡಿಯಂ 0.2%, ಕ್ಲೋರಿನ್ 0.2%, ಮೆಗ್ನೀಸಿಯಮ್ 0.1% ಇರುತ್ತದೆ. (ಖನಿಜಗಳು 6%, ಕೊಬ್ಬು 16% ಮತ್ತು ಕಾರ್ಬೋಹೈಡ್ರೇಟ್ಸ್ 1%. ನೀರು 62% ಮತ್ತು ಪ್ರೊಟೀನ್ 16%). ಅದೇ ರೀತಿ ಪಕ್ಷಿ-ಪ್ರಾಣಿಗಳು ಸಹ ಮೇಲಿನ ಎಲ್ಲಾ ಖನಿಜ ಧಾತುಗಳನ್ನು ಹೊಂದಿದ್ದು ಶೇಕಡಾವರು ಹೆಚ್ಚುಕಡಿಮೆ ಇರುತ್ತದೆ. “ನನ್ನ ದೇಹದ ಪ್ರತಿಯೊಂದು ಕಣವೂ ಯಾವುದೋ ಕಾಲದಲ್ಲಿ ಪ್ರತಿ ನಕ್ಷತ್ರದ ಕಣವಾಗಿತ್ತು” ಎಂಬುದಾಗಿ ಕಾರ್ಲ್ ಸಗಾನ್ ಹೇಳಿದ್ದಾರೆ.
(ಮೂಲ: Coffee table book on HISTORIC MINING IN INDIA, by GEOLOGICAL SURVEY OF INDIA (2021).).

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. “ಕೋಲಾರ ಚಿನ್ನದ ಗಣಿಗಳು” ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.


