ಮರೆಯದಿರಿ!
ನೀವು ಮಹಿಳೆಯಾಗಿದ್ದರೆ
ಅಥವಾ
ಮಹಿಳೆಯ ಹೆಸರಿನ
ಪ್ರೊಫೈಲ್ ಹೊಂದಿದ್ದರೆ
ನಿಮಗಿದು ಅನುಭವಕ್ಕೆ
ನಿಲುಕಿರುತ್ತದೆ!
ರಾತ್ರಿ ಹನ್ನೊಂದೂವರೆ
ಹನ್ನೆರಡರ ಆಸುಪಾಸು
ಫೇಸ್ಬುಕ್ ಆನ್ ಲೈನಲ್ಲಿದ್ದರೆ
‘ಟಣ್’ ಸದ್ದು ಮಾಡುತ್ತ
ಮೆಸೆಂಜರಿಗೆ ಸಂದೇಶ
-ವೊಂದು ಬಂದು ಬೀಳುತ್ತದೆ..
ಬೆನ್ನುಬೆನ್ನಿಗೇ ಮತ್ತೊಂದಷ್ಟು
ಮೆಸೇಜುಗಳು ಕುಣಿದುಕೊಂಡು
ಸದ್ದು ಮಾಡುತ್ತ ಬರುತ್ತವೆ!
ಗಮನಿಸಿ,
ಗಂಡಸಿನ ಖಾತೆಯಿಂದ;
ಅಲ್ಲವೆಂದಾದರೆ ಹೆಣ್ಣುಹೆಸರಿನ
ಪುರುಷನದ್ದೇ ಪ್ರೊಫೈಲಿನಿಂದ!
ನೀವು ಗಂಡಸಾಗಿದ್ದರೆ
ಮನೆಯಲ್ಲಿ ಅಂತಹ
ಗಡಿಬಿಡಿಯೇನೂ ಆಗಲಿಕ್ಕಿಲ್ಲ!
ಹೆಣ್ಣಾದರೆ ಮಾತ್ರ
ಭೂಕಂಪವೋ ಪ್ರಳಯವೋ
ಸುನಾಮಿಯೋ ಕಟ್ಟಿಟ್ಟದ್ದು!
ನಿದ್ದೆಗೆ ಜಾರುತ್ತಿರುವ
ಗಂಡ ಹೊದಿಕೆ ಸರಿಸಿ
ಕಿರುಗಣ್ಣಲ್ಲಿ ಗಮನಿಸಿ
ಜಗಳದ ಪುಟ
ಅಚಾನಕ್ ತೆರೆಯಬಹುದು!
ಓದಿನಲ್ಲಿ ಮುಳುಗಿಹೋಗಿದ್ದ
ಮಕ್ಕಳೂ ತಲೆಯೆತ್ತಿ
ಮುಖ ಸಿಂಡರಿಸಬಹುದು
ನಡುರಾತ್ರಿಯ ನೀರವದಲ್ಲಿ
ನೀವು ಕಂಡೂ ಕಾಣದಂತೆ
ಚಡಪಡಿಸಿ ಜೀವ ಹಿಡಿಯಾಗಿ
ಇಡೀ ದಿನದ ನೆಮ್ಮದಿ
ಕಳೆದುಹೋಗಬಹುದು..
ನಿದ್ದೆ ಕೈ ತಪ್ಪಿ
ಆರೋಗ್ಯ ಬಿಗಡಾಯಿಸಬಹುದು
ಅದೃಷ್ಟ ಕೆಟ್ಟಿದ್ದರೆ
ಬದುಕಿನ ಹಣೆಬರವೇ
ಏರುಪೇರಾಗಬಹುದು!
ಮುಂದಿನ ಸಲ
ರಾತ್ರಿ ಹತ್ತು- ಹನ್ನೊಂದರ ನಂತರ
ಯಾವುದೇ ಕಾರಣಕ್ಕೂ
ಫೇಸ್ಬುಕ್ ತೆರೆಯದಿರಿ!
ಅಂತಹಾ ಅನಿವಾರ್ಯವೆಂದಾದರೆ
ಮೊಬೈಲ್ ಜಾಲಾಡಿ
ವಿಧವಿಧವಾದ ಬೀಪ್ ಸೌಂಡ್
-ಗಳನ್ನು ಆಫ್ ಮಾಡಿ
ತೀರಾ ಜಾಗರೂಕರಾಗಿ
ಮುಂದುವರಿಯುವುದನ್ನು
ಮರೆಯದಿರಿ!

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

