ಅದೇ ಈಗ ಅರ್ಜುನ್ ವಿಷಯ ಹಾಗಲ್ಲ. ಅವರ ಇನ್’ಸ್ಟಾಗ್ರಾಮ್ ಪೋಸ್ಟ್ ಗಳನ್ನ ನೋಡಿದರೆ ಅದರ ಕೆಳಗೆ ಬರೀ ದ್ವೇಷದ ಕಮೆಂಟ್ಸ್ ಗಳೇ. ಅರ್ಜುನ್ ಅವರ ಪ್ರತೀ ಸೋಲನ್ನೂ ಒಂದು ದೊಡ್ಡ ಗುಂಪು ಆಡಿಕೊಳ್ಳುತ್ತದೆ. ಅವರನ್ನ ಹಾಸ್ಯ ಮಾಡುತ್ತದೆ. ಟ್ರೋಲ್ ಪುಟಗಳು ಅವರನ್ನ ಹೀಯಾಳಿಸಿ ಪೋಸ್ಟ್ ಹಾಕುತ್ತವೆ. ತಮಾಷೆಯೆಂದರೆ ಇವರ ಪೈಕಿ ಬಹಳ ಜನ ತಮ್ಮ ಜೀವನದಲ್ಲಿ ಅರ್ಜುನ್ ಅವರ ಅರ್ಧದಷ್ಟೂ ಸಾಧನೆ ಮಾಡಿರುವುದಿಲ್ಲ. ಅಂಥವರೂ ಕೂಡ ನೀನು ಅಂಥೋನು, ಇಂಥೋನು, ಸಂತೇಲಿ ಮೆಂತೆ ಕದ್ದೋನು ಎಂಬೆಲ್ಲ ಟೀಕೆಗಳನ್ನು ಹರಿಯಬಿಡುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ
ಅರ್ಜುನ್ ತೆಂಡುಲ್ಕರ್ ನೆನಪಾದಾಗೆಲ್ಲ ಕಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಜನ ಅವರ ಬಗ್ಗೆ ಬರೆಯುವ ಕಮೆಂಟ್ ಗಳನ್ನು ನೋಡಿದಾಗೆಲ್ಲ ಅದೇಕೋ ಬಹಳ ವಿಷಾದವೆನಿಸುತ್ತದೆ. ಅರ್ಜುನ್ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಕ್ರಿಕೇಟಿಗನ ಮಗ. ಆದ್ರೆ ಎಲ್ಲೋ ಒಂದುಕಡೆ ಇದೇ ಅವರ ಕರಿಯರ್ಗೆ ಮುಳುವಾಯ್ತೇನೋ ಎಂದು ಒಮ್ಮೊಮ್ಮೆ ಅನಿಸುವುದಿದೆ.
ಅದೇಕೋ ಗೊತ್ತಿಲ್ಲ, ಸೆಲೆಬ್ರಿಟಿಗಳ, ಸಿನಿಮಾ ತಾರೆಯರ ಮಗನಾಗಿ ಹುಟ್ಟಿದವರು ಅಪ್ಪನ ಉದ್ಯೋಗವನ್ನೇ ತಮ್ಮದೂ ಮಾಡಿಕೊಂಡಾಗ ಜನ ಅವರನ್ನು ಮೊದಲ ದಿನದಿಂದಲೂ ಅವರ ತಂದೆಯ ಜೊತೆಗೇ ಹೋಲಿಕೆ ಮಾಡುತ್ತಾರೆ. ಅವರ ಜೊತೆಗೇ ಅವರ ಸಣ್ಣ ಚಲನವಲನವನ್ನೂ ಸೆರೆಹಿಡಿಯುವ ಕ್ಯಾಮರಾ ಕೂಡ ಹುಟ್ಟಿಕೊಂಡುಬಿಡುತ್ತದೆ. ಬಾಲಿವುಡ್’ನಲ್ಲಿ ಅಭಿಶೇಕ್ ಬಚ್ಚನ್ ಅವರಿಗೆ ಆಗಿದ್ದೂ ಹೀಗೆ. ಕ್ರಿಕೇಟಿನಲ್ಲಿ ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಅನುಭವಿಸಿದ್ದೂ ಇದನ್ನೇ. ತಮ್ಮ ಕ್ಷೇತ್ರದಲ್ಲಿ ಜೊತೆಗೆ ದುಡಿಯುವ ಬೇರೆ ಯಾರಿಗೂ ಇಲ್ಲದ ಒತ್ತಡ ಮೊದಲ ದಿನದಿಂದಲೇ ಇವರ ಮೇಲೆ ಶುರುವಾಗಿರುತ್ತದೆ.
ಉದಾಹರಣೆಗೆ ಅರ್ಜುನ್ ತೆಂಡುಲ್ಕರ್ ಜೊತೆಗೇ ಇನ್ನೊಬ್ಬ ಕ್ರಿಕೇಟರ್ ಕೂಡಾ ತನ್ನ ಕರಿಯರ್ ಅನ್ನು ಆರಂಭಿಸಿದ ಎಂದುಕೊಳ್ಳೋಣ. ಇಬ್ಬರೂ ಒಟ್ಟಿಗೇ ಆಡಿದರೂ ಜನರ ಕಣ್ಣೆಲ್ಲ ಅರ್ಜುನ್ ಮೇಲೇ ಇರುತ್ತದೆ. ಅರ್ಜುನ್ ಹೇಗೆ ಆಡುತ್ತಿದ್ದಾರೆ? ಅವರ ಕವರ್ ಡ್ರೈವ್ ಅಪ್ಪನ ಥರಾ ಇದೆಯಾ? ಕನಿಷ್ಠ ಬೌಲಿಂಗ್ ನಲ್ಲಾದರೂ ಅವರು ಸಚಿನ್ ರೀತಿ ಅನಿಸುತ್ತಾರಾ? ಅಷ್ಟೇ ಸಾಧನೆ ಮಾಡ್ತಾರಾ? ಹೀಗೆ ಕ್ಯಾಲ್ಕುಲೇಷನ್ಸ್ ಮೊದಲ ದಿನದಿಂದಾನೇ ಶುರುವಾಗಿಬಿಡುತ್ತೆ. ಮೊದಲ ಪರೀಕ್ಷೆಲಿ ನಮಗೆಲ್ಲ ನೂರಕ್ಕೆ ಎಪ್ಪತ್ತು ಅಂಕ ತೆಗೆಯಲು ಹೇಳಿದರೆ ಸೆಲೆಬ್ರಿಟಿಗಳ ಮಕ್ಕಳಿಗೆ ತೊಂಬತ್ತು ತೆಗಿ ಎನ್ನುವಂತೆ.
ಈ ಒತ್ತಡದಿಂದ ಹೊರಬಂದು ತಮ್ಮ ಶೈಲಿಯನ್ನ ತಾವು ಕಂಡ್ಕೊಳ್ಳೋದು ತುಂಬಾನೇ ಕಷ್ಟ. ಉದಾಹರಣೆಗೆ ಆಫೀಸಲ್ಲಿ ಅಥವಾ ಕಾಲೇಜಲ್ಲಿ ನಾವು ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ, ಓದಿದರೂ ರ್ಯಾಂಕ್ ವಿದ್ಯಾರ್ಥಿಯೊಬ್ಬನಿಗೆ ನಮ್ಮನ್ನು ಹೋಲಿಕೆ ಮಾಡಿ ನೀನು ಮಾಡಿದ್ದು ಕಡಿಮೆ ಅಂತಲೇ ಹೇಳುವಂತೆ… ಇಲ್ಲಿ ಅರ್ಜುನ್ ಅವ್ರಿಗೆ ಆಗುತ್ತಿರುವುದೂ ಅದೇ.

ಅರ್ಜುನ್ ಜೊತೆಗೇ ಮೈದಾನಕ್ಕಿಳಿದ ಇನ್ನೊಬ್ಬ ಆಟಗಾರ ತನ್ನ ಪಾಡಿಗೆ ತಾನು, ತನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಆಡುತ್ತಾನೆ. ಒಂದಷ್ಟು ಪಂದ್ಯಗಳಲ್ಲಿ ಚೆನ್ನಾಗಿ ಆಡಿ, ಯಾವುದೋ ಒಂದು ಐಪಿಲ್ ತಂಡಕ್ಕೆ ಆಯ್ಕೆಯಾಗಿ, ಒಂದಷ್ಟು ಉತ್ತಮ ಪ್ರದರ್ಶನ ನೀಡಿ, ಕೊನೆಗೆ ನಿವೃತ್ತಿಯನ್ನೂ ಪಡೆಯುತ್ತಾನೆ. ಸಮಾಜ ಅವನನ್ನು ‘ಏನೋ ಸಾಧನೆ ಮಾಡಿದಾನೆ ಬಿಡು’ ಎಂದು ಶ್ಲಾಘಿಸುತ್ತದೆ. ಆತ ಪ್ರಸಿದ್ಧನಾಗಿಲ್ಲ, ಯಾರನ್ನೋ ಮೀರಿಸಲಿಲ್ಲ ಎಂದೆಲ್ಲ ಯಾರೂ ಅವನನ್ನು ಟೀಕಿಸುವುದಿಲ್ಲ.
ಅದೇ ಈಗ ಅರ್ಜುನ್ ವಿಷಯ ಹಾಗಲ್ಲ. ಅವರ ಇನ್’ಸ್ಟಾಗ್ರಾಮ್ ಪೋಸ್ಟ್ ಗಳನ್ನ ನೋಡಿದರೆ ಅದರ ಕೆಳಗೆ ಬರೀ ದ್ವೇಷದ ಕಮೆಂಟ್ಸ್ ಗಳೇ. ಅರ್ಜುನ್ ಅವರ ಪ್ರತೀ ಸೋಲನ್ನೂ ಒಂದು ದೊಡ್ಡ ಗುಂಪು ಆಡಿಕೊಳ್ಳುತ್ತದೆ. ಅವರನ್ನ ಹಾಸ್ಯ ಮಾಡುತ್ತದೆ. ಟ್ರೋಲ್ ಪುಟಗಳು ಅವರನ್ನ ಹೀಯಾಳಿಸಿ ಪೋಸ್ಟ್ ಹಾಕುತ್ತವೆ. ತಮಾಷೆಯೆಂದರೆ ಇವರ ಪೈಕಿ ಬಹಳ ಜನ ತಮ್ಮ ಜೀವನದಲ್ಲಿ ಅರ್ಜುನ್ ಅವರ ಅರ್ಧದಷ್ಟೂ ಸಾಧನೆ ಮಾಡಿರುವುದಿಲ್ಲ. ಅಂಥವರೂ ಕೂಡ ನೀನು ಅಂಥೋನು, ಇಂಥೋನು, ಸಂತೇಲಿ ಮೆಂತೆ ಕದ್ದೋನು ಎಂಬೆಲ್ಲ ಟೀಕೆಗಳನ್ನು ಹರಿಯಬಿಡುತ್ತಾರೆ.
ಈ ಸೋಶಿಯಲ್ ಮೀಡಿಯಾದ ದುರಂತವೇ ಇದು. ಇಲ್ಲಿ ಯಾರು ಯಾರನ್ನ ಬೇಕಾದ್ರೂ, ಏನು ಬೇಕಾದರೂ ಅನ್ನಬಹುದು, ಆಡಿಕೊಳ್ಳಬಹುದು. ಇಲ್ಲಿ ಬೈಯುತ್ತಿರುವುದು ಯಾರನ್ನೆಂದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಬೈದಿದ್ದು ಯಾರು? ಅವನ ಯೋಗ್ಯತೆ ಏನು? ಎಂದು ಯಾರಿಗೂ ಗೊತ್ತಾಗುವುದಿಲ್ಲ. ಅದನ್ನೆಲ್ಲ ನಾವು ಯೋಚನೆ ಮಾಡುವುದೂ ಇಲ್ಲ. “ಯಾಕೆ ಹೀಗಂದೆ?” ಅಂತ ಕತ್ತುಪಟ್ಟಿ ಹಿಡಿದು ಕೇಳೋಣವೆಂದರೆ ಅಂದ್ರೆ ಅದು ನಕಲಿ ಖಾತೆ! ಮಾತುಗಳಷ್ಟೇ ಅಚ್ಚಾಗಿ ಅದರ ಹಿಂದಿನ ಚಹರೆ ನಿಗೂಢವಾಗಿಯೇ ಉಳಿಯುವ ರಹಸ್ಯಮಯ ಲೋಕವಿದು.
ಎಲ್ಲೋ ನಮ್ನಮ್ಮ ಮನೆಗಳಲ್ಲಿ ಬೆಚ್ಚಗೆ ಕೂತು, ನಮ್ಮದಲ್ಲದ ಹೆಸರಿಂದ ಯಾರಿಗೋ ಬಾಯ್ತುಂಬಾ ಬಯ್ಯುವ ನಾವು ಈ ಕಮೆಂಟಿನಿಂದ ಆ ವ್ಯಕ್ತಿಗೆ ಎಷ್ಟು ನೋವಾಗಬಹುದೆಂದು ಯೋಚನೆಕೂಡಾ ಮಾಡುವುದಿಲ್ಲ. ಹೀಗೆ ಈಕುಪೂಕಿಲ್ಲದ ಬೈಗುಳದ ಪ್ರವಾಹಕ್ಕೆ ಸಿಕ್ಕು ಜರ್ಝರಿತಾಗಿಹೋದ ಮನಸ್ಸುಗಳೆಷ್ಟೋ? ಅರ್ಜುನ್ ಮನಸ್ಸು ಮಾಡಿದ್ದರೆ ಏನೂ ಕೆಲಸ ಮಾಡದೇ ಸುಮ್ಮನೆ ಸುತ್ತಾಡುತ್ತ, ಮೋಜುಮಸ್ತಿ ಮಾಡುತ್ತ ಸಮಯ ಕಳೆಯಬಹುದು. ಕ್ರಿಕೇಟ್, ಅಭ್ಯಾಸ, ರಣಜಿ ಎಂದೆಲ್ಲ ಬೆವರು ಹರಿಸಿ, ಆಮೇಲೆ ಕೂಡಾ ಟೀಕಿಸಿಕೊಳ್ಳುವುದೆಲ್ಲ ಅವರಿಗೆ ಯಾಕೆ ಬೇಕಾಗಿದೆ? ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ ಅವರ ಮನೆಯಲ್ಲಿದೆ. ಆದರೆ ಅರ್ಜುನ್ ಹಾಗೆ ಮಾಡಲಿಲ್ಲ. ಅವರು ಕ್ರಿಕೇಟನ್ನ ಆಯ್ಕೆಮಾಡ್ಕೊಂಡರು. ಸೋಲೋ, ಗೆಲುವೋ, ಕೀರ್ತಿಯೋ, ಅಪಹಾಸ್ಯವೋ… ಏನೇ ಬಂದರೂ ಅವರು ಪ್ರಯತ್ನ ಪಡೋದನ್ನ ಬಿಟ್ಟಿಲ್ಲ. ಇಷ್ಟೆಲ್ಲ ಅಪಹಾಸ್ಯಕ್ಕೆ ಈಡಾದ ಮೇಲೂ ಪ್ರಯತ್ನ ಪಡುತ್ತಲೇ ಇರುವಂಥ ಗಟ್ಟಿ ಮನಸ್ಥಿತಿ ನಮ್ಮಲ್ಲಿ ಎಷ್ಟು ಜನರಿಗಿದೆ ಹೇಳಿ?
ಇಲ್ಲಿ ಸಚಿನ್ ಅವರ ಮಗ ಅನ್ನೋ ಕಾರಣಕ್ಕೆ ಅರ್ಜುನ್ ತೆಂಡುಲ್ಕರ್ ಅವರಿಗೆ ಒಂದಷ್ಟು ರಿಯಾಯಿತಿಗಳು ಸಿಕ್ಕಿರಬಹುದು. ಆದ್ರೆ ಹಾಗಂತ ಅವರು ಇಷ್ಟೆಲ್ಲ ದ್ವೇಷಕ್ಕೆ ಅರ್ಹರಾ? ಕೇವಲ ಒಬ್ಬ ಅರ್ಜುನ್ ತೆಂಡುಲ್ಕರ್ ಮಾತ್ರ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡದ ತಪ್ಪಿಗೆ ಟ್ರೋಲ್ ಆಗೋ ಸಾವಿರಾರು ಜನರನ್ನ ನಾವು ದಿನಾ ನೋಡುತ್ತೇವೆ. ಅವರಲ್ಲಿ ಕೆಲವರು ಈ ಟ್ರೋಲ್, ಟೀಕೆ, ಬೈಗುಳಗಳನ್ನ ಸಹಿಸಲಾಗದೇ ಬದುಕನ್ನೇ ಬಿಟ್ಟು ಎದ್ದುಹೋಗಿರೋ ಉದಾಹರಣೆಗಳೂ ಇವೆ. ನಾವು ಯಾಕೆ ಹೀಗೆ? ನಮ್ಮ ಮನಸ್ಥಿತಿಗಳು ಯಾಕೆ ಇಷ್ಟು ನಿಕೃಷ್ಟ ಆಗಿವೆ? ಇದನ್ನೆಲ್ಲ ನಾವು ಯೋಚನೆ ಮಾಡಲೇಬೇಕು.

ಮಾತನಾಡುವುದು ಸುಲಭ. ಕಮೆಂಟು ಹಾಕುವುದು ಇನ್ನೂ ಸುಲಭ. ಆದರೆ ಕೆಲಸ ಮಾಡುವುದು ಮಾತ್ರ ಕಷ್ಟ. ಈ ಸಮಾಜದಲ್ಲಿ ಈಗಾಗಲೇ ತುಂಬಾ ದ್ವೇಷವಿದೆ. ಅದನ್ನ ಹೋಗಲಾಡಿಸುವುದು ಸಾಧ್ಯ ಆಗದಿದ್ರೂ ಬೇಡ, ಬೆಳೆಸೋ ಕೆಲಸ ಮಾಡದಿರೋಣ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.

