ರಾತ್ರಿ ಕಳೆದು ಬೆಳಗಾಯಿತು. ಸುದ್ದಿ ಇಲ್ಲ. ಶಾಲೆಗೆ ಮಾಲೀಕರು ಬಂದರು. ಸಿ ಈ ಓ, ಡ್ರೈವರ್, ಆಯಾಗಳ ಮೀಟಿಂಗ್ ನಡೆಯಿತು. ಹೆಚ್ಚಿನ ವಿಷಯ ತಿಳಿಯಲಿಲ್ಲ. ಆದರೆ ಎಲ್ಲರೂ “ಅವರಿಬ್ಬರ ನಡುವೆ ಏನೋ ನಡೆಯುತ್ತಿತ್ತು. ಅವಳು ಬಲೆ ಪಾಕಡ…” ಎಂದು, ಕೆಲವರು ‘ಮಹದೇವ ಗುಮ್ಮನ ಗುಸಕ.. ಸೈಲೆಂಟಾಗಿ ಇದ್ದು ಹಿಂಗ್ ಮಾಡ್ಬಿಟ್ಟ’ ಹೀಗೆ… ತರಹೇವಾರಿ ಮಾತುಗಳು. ಶ್ರೀವಾಣಿಗೆ ಒಂದೇ ಭಯ.. ಲಿಂಗಮ್ಮ “ಏನು ಮೇಡಂ, ನೀವು ಎಂಥಾ ಕಡೆ ಸೇರಿಸಿಬಿಟ್ರಿ” ಅಂತಾಳೇನೋ ಅಂತ. ಹಾಗಾಗಲಿಲ್ಲ. ಒಂದು ವಾರ ಕಳೆಯಿತು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಇದು ಎಂಥಾ ಲೋಕವಯ್ಯ..” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ತ್ರೈಮಾಸಿಕ ಟೆಸ್ಟ್‌ನ ಪೇಪರ್‌ಗಳನ್ನು ಕರೆಕ್ಷನ್ ಮಾಡುತ್ತಾ ಶ್ರೀವಾಣಿ ಮಿಸ್ ಕುಳಿತಿದ್ದರು. ಅವರ ಮನೆಯ ಕೆಲಸದಾಕೆ ಲಿಂಗಮ್ಮ ನೆಲ ಒರೆಸುತ್ತಾ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಅವಳಿಗೆ ಗೊತ್ತು ಇಂತಹ ಸಮಯದಲ್ಲಿ ಮೇಡಂ ನವರನ್ನು ಮಾತನಾಡಿಸುವ ಹಾಗಿಲ್ಲ ಎಂದು. ಆಗಾಗ ಮೇಡಂನ ಮುಖ ನೋಡುತ್ತಾ ಏನೋ ಹೇಳಲು ಹವಣಿಸುತ್ತಾ ಕೆಲಸ ಮಾಡುತ್ತಿದ್ದಳು ಲಿಂಗಮ್ಮ. ಶ್ರೀವಾಣಿಗೆ ಅದು ಗೊತ್ತಾಗಿ ಪೇಪರ್ ಬಂಡಲ್ ಬದಿಗಿಟ್ಟು “ಯಾಕೆ ಹಾಗೆ ಆಗಾಗ ಮುಖ ನೋಡ್ತೀಯಾ? ಏನು ಹೇಳಬೇಕು ಹೇಳಿಬಿಡು” ಎಂದರು.

ಆಗ ಲಿಂಗಮ್ಮ “ಏನೂ ಇಲ್ಲ ಮೇಡಂ, ನಮ್ ನಾದಿನಿ ಬಂದಿದ್ದಾಳೆ ಊರಿಂದ, 15 ದಿನ ಆಯ್ತು. ಅವಳಿಗೆಲ್ಲಾದರೂ ಏನಾದರೂ ಕೆಲಸ ಕೊಡುಸ್ತೀರಾ ಅಂತ”. ಶ್ರೀವಾಣಿ ಒಂದು ಕ್ಷಣ ಸುಮ್ಮನಾದರು. ಇತ್ತೀಚೆಗೆ ಸಾಮಾನ್ಯವಾಗಿ ಯಾರಾದರೂ ಹಾಗೆ ಕೇಳಿದ್ರೆ “ಅಯ್ಯೋ ನನಗೆ ಯಾರು ಗೊತ್ತಮ್ಮ” ಅಂದು ಬಿಡುವವರೇ.. ಅದಕ್ಕೆ ಕಾರಣವೂ ಇತ್ತು.

ಶ್ರೀವಾಣಿ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸಹೋದ್ಯೋಗಿಯಾಗಿದ್ದ ಶ್ರೀವಳ್ಳಿ ಒಂದು ದಿನ, ಶಾಲೆಯ ಬಿಡುವಿನ ಸಮಯದಲ್ಲಿ, ಶ್ರೀವಾಣಿ ಒಬ್ಬರೇ ಇದ್ದಾಗ “ಮ್ಯಾಮ್, ನೀವೇನು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ನನಗೆ ಸ್ವಲ್ಪ ಅರ್ಜೆಂಟಾಗಿ ದುಡ್ಡು ಬೇಕಿತ್ತು.. ಮುಂದಿನ ತಿಂಗಳು ಕೊಟ್ಟು ಬಿಡ್ತೇನೆ.” ಎಂದರು. ಶ್ರೀವಾಣಿ ಏನು ಸಮಸ್ಯೆಯೋ ಎಂದುಕೊಂಡು, “ಎಷ್ಟು ಬೇಕಿತ್ತು?” ಎಂದರು. ಆಗ ಶ್ರೀವಳ್ಳಿ “ಇಪ್ಪತ್ತು ಸಾವಿರ ಕೊಡಿ ಸಾಕು, ಮುಂದಿನ ತಿಂಗಳು ಕೊಟ್ಟು ಬಿಡ್ತೀನಿ” ಎಂದರು. ಆಗ “ಅಯ್ಯೋ ಅಷ್ಟೊಂದು ಬೇಕಾದರೆ ಮನೆಯವರನ್ನ ಕೇಳಬೇಕಾಗುತ್ತೆ, ಒಂದು ಹತ್ತು ಸಾವಿರ ಆದರೆ ಕೊಡಬಲ್ಲೆ” ಎಂದುಬಿಟ್ಟರು ಶ್ರೀ ವಾಣಿ. “ಹೌದಾ, ಸರಿ ಹತ್ತಾದರೆ 10 ನಾಳೆ ಕೊಡ್ತೀರಾ, ಮುಂದಿನ ತಿಂಗಳು ಖಂಡಿತ ವಾಪಸ್ ಮಾಡ್ತೀನಿ” ಎಂದರು ಶ್ರೀವಳ್ಳಿ. ಮುಂದಿನ ತಿಂಗಳು ಶ್ರೀವಳ್ಳಿ ಕೆಲಸಕ್ಕೆ ಬರಲಿಲ್ಲ. ಆನಂತರ ಶ್ರೀವಾಣಿಗೆ ತಿಳಿದಿದ್ದೇನೆಂದರೆ, ಹೀಗೆ ಅವರಿವರ ಹತ್ತಿರ ಕೇಳಿಕೊಂಡು ಒಬ್ಬರಿಗೆ ತಿಳಿಯದಂತೆ ಇನ್ನೊಬ್ಬರ ಹತ್ತಿರ ಕೇಳಿ, ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ವಸೂಲಿ ಮಾಡಿಕೊಂಡು, ನಾಪತ್ತೆಯಾಗಿ ಬಿಟ್ಟಿದ್ದರು. ಕೊನೆಗೆ ಒಬ್ಬರಿಂದ ಒಬ್ಬರಿಗೆ ತಿಳಿದು ಮ್ಯಾನೇಜ್ಮೆಂಟ್ ನವರು ಎಲ್ಲರನ್ನು ಕರೆಸಿ, ಮೀಟಿಂಗ್ ಮಾಡಿ, ಕೊನೆಗೆ ಇವರೆಲ್ಲರಿಗೂ ಬಯ್ದು, ‘ಇವರುಗಳು ಹಣ ಕೊಡದಿದ್ದರೆ, ಆ ಟೀಚರ್ ಬಿಡ್ತಾ ಇರಲಿಲ್ಲ, ಒಳ್ಳೆಯ ಮ್ಯಾತ್ಸ್ ಟೀಚರ್ ಇಲ್ಲದ ಹಾಗಾಯಿತು’, ಎಂದು ಇವರುಗಳ ತಲೆಯ ಮೇಲೆ ಗೂಬೆ ಕೂರಿಸಿದರು.

ಹೀಗೇ ಒಂದು ದಿನ ಶ್ರೀವಾಣಿ ಮಿಸ್ ಸ್ಕೂಟಿಯ ಮೇಲೆ ಶಾಲೆಗೆ ಹೊರಟಿದ್ದರು. ಅವರ ಮನೆಯಿಂದ ಬಸ್ ಸ್ಟಾಪ್‌ಗೆ ಒಂದು ಕಿಲೋಮೀಟರ್. ಅಲ್ಲಿಂದ ಇನ್ನೂ ಸ್ವಲ್ಪ ದೂರ ಹೋದರೆ ಅವರ ಶಾಲೆ‌. ದಾರಿಯಲ್ಲಿ ಒಂದು ಹೆಂಗಸು ಕೈ ತೋರಿಸಿ, ಬಸ್ ನಿಲ್ಲಿಸಿ, ಸ್ಟಾಪ್‌ವರೆಗೂ ಬಿಡ್ತೀರಾ ಎಂದಾಗ, ಶ್ರೀವಾಣಿ ತಲೆಯಾಡಿಸಿ ಹತ್ತಿಸಿಕೊಂಡು ಸ್ವಲ್ಪ ದೂರ ಹೋದಾಗ ಪೈಪ್ ಲೈನ್‌ಗಾಗಿಯೋ, ವಿದ್ಯುಚ್ಛಕ್ತಿ ಜೋಡಣೆಗಾಗಿಯೋ ರಸ್ತೆಯ ಆ ಬದಿಯಿಂದ ಈ ಬದಿಗೆ ಅಗೆದವರು ಸರಿಯಾಗಿ ಮುಚ್ಚಿರಲಿಲ್ಲ. ಆ ಹಳ್ಳದಲ್ಲಿ ಒಮ್ಮೆ ಕುಸಿದು ದಾಟುವಾಗ ಹಿಂದೆ ಇದ್ದ ಹೆಂಗಸು ಬಿದ್ದು, ತರಚಿದ ಗಾಯವಾಗಿ, ಹತ್ತಿರದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಿ, ಸಾಲದ್ದಕ್ಕೆ ಆ ಹೆಂಗಸಿನ ಗಂಡನಿಂದ, ಅಲ್ಲದೇ ತಡವಾಗಿ ಹೋದದ್ದಕ್ಕೆ ಶಾಲೆಯಲ್ಲಿ ಪ್ರಿನ್ಸಿಪಾಲ್ ಕಡೆಯಿಂದ ಬೈಸಿಕೊಂಡು, ‘ಇನ್ನುಮುಂದೆ ಯಾರಿಗೂ ಇಂತಹ ಸಹಾಯಗಳನ್ನು ಮಾಡಬಾರದೆಂದು’ ನಿರ್ಧರಿಸಿಬಿಟ್ಟಿದ್ದರು.

ಅಂತಹ ಶ್ರೀವಾಣಿ ಮಿಸ್ ಲಿಂಗಮ್ಮ ಕೇಳಿದಾಗ ಒಂದೇ ಸಲಕ್ಕೆ ‘ಆಗಲ್ಲ’ ಎನ್ನುವವರೇ. ಆದರೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಶಾಲೆಯೊಂದರಲ್ಲಿ ನಡೆದ ಘಟನೆ, ಇನ್ನೂ ಕೆಲವು ಶಾಲೆಗಳಲ್ಲಿ ಪುನರಾವರ್ತಿಸಿದಾಗ- ಸಂಜೆ ಶಾಲೆಯಿಂದ ಮನೆಗೆ ಬಿಡಲು ಹೊರಟ ಶಾಲಾ ವ್ಯಾನ್‌ನಲ್ಲಿ ಕೊನೆಗೆ ಉಳಿದ ಇಬ್ಬರು ಹೆಣ್ಣು ಮಕ್ಕಳನ್ನು, ಡ್ರೈವರ್ ಹಾಗೂ ಅವನ ಅಸಿಸ್ಟೆಂಟ್ ಇಬ್ಬರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಮಕ್ಕಳ ಚೀರಾಟ ಕೇಳಿ ಬಂದ ಸಾರ್ವಜನಿಕರ ಕೈಗೆ ಸಿಕ್ಕಿ, ಪೆಟ್ಟು ತಿಂದು, ಸುದ್ದಿ ದೊಡ್ಡದಾಗಿ ಚಾನೆಲ್‌ಗಳಲ್ಲಿ ಬಿತ್ತರವಾಗಿ, ಖಾಸಗಿ ಶಾಲೆಗಳ ಮಾಲೀಕರ ಸರ್ಕಾರದ ಪ್ರತಿನಿಧಿಗಳ ಸಭೆಯಲ್ಲಿ ಇನ್ನು ಮುಂದೆ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕರೆತರಲು ಬಿಡಲು ಹೆಣ್ಣು ಆಯಾಗಳನ್ನೇ ನೇಮಕ ಮಾಡಬೇಕೆಂಬುದು ಕಡ್ಡಾಯವಾಗಿ, ಎಲ್ಲಾ ಕಡೆಗಳಲ್ಲೂ ಹಂತ ಹಂತವಾಗಿ ಮಹಿಳಾ ಆಯಾಗಳನ್ನೇ ನೇಮಕ ಮಾಡಿಕೊಳ್ಳತೊಡಗಿದರು. ಕೆಲವು ಶಾಲೆಗಳ ಆಡಳಿತ ವರ್ಗದವರು ಶುಲ್ಕ ಹೆಚ್ಚಿಸಿ ಪೋಷಕರಿಂದ ಪೀಕಿದರೆ, ಇನ್ನೂ ಕೆಲವು ಕಡೆ ಬೋಧಕ ವರ್ಗದ ವಾರ್ಷಿಕ ಇಂಕ್ರಿಮೆಂಟ್‌ಗೆ ಕತ್ತರಿ ಹಾಕಿದರು. ಹೀಗಾಗಿ ಶ್ರೀವಾಣಿಯ ಶಾಲೆಯಲ್ಲಿ ಕೆಲವರ ನೇಮಕವಾಗಿತ್ತು. ಇನ್ನೂ ಕೆಲವರ ಅವಶ್ಯಕತೆ ಇತ್ತು. ಆದ್ದರಿಂದಲೇ ಶ್ರೀವಾಣಿ ಮಿಸ್ “ಸರಿ ವಿಚಾರಿಸುವೆ” ಎಂದರು.

ಹಾಗೆಯೇ ಲಿಂಗಮ್ಮ ತನ್ನ ನಾದಿನಿಯನ್ನು ಶ್ರೀವಾಣಿಯ ಮುಂದೆ ಹಾಜರುಪಡಿಸಿ, ಅವಳ ಜಾಣತನದ ಪ್ರದರ್ಶನ ಮಾಡಿಸಿ, ಒಂದು ದಿನ ಶ್ರೀವಾಣಿ ಲಿಂಗಮ್ಮಳ ನಾದಿನಿ- ಸುರೇಖಾ- ಳನ್ನು ಶಾಲಾ ಆಡಳಿತ ಅಧಿಕಾರಿಯ ಮುಂದೆ ನಿಲ್ಲಿಸಿ, ಮಾತಾಡಿ ಒಪ್ಪಿಸಿ, ಕೆಲಸದ ವಿವರ ತಿಳಿಸಿ, ಮಾರನೇ ದಿನದಿಂದ ಕೆಲಸಕ್ಕೆ ಬರುವಂತೆ ಆದೇಶ ಪಡೆದಳು. ಹೀಗೆ ಸುರೇಖಾ, ಶ್ರೀವಾಣಿ ಕೆಲಸ ಮಾಡುತ್ತಿದ್ದ ಗ್ರೇಟ್ ಇಂಡಿಯನ್ ಸ್ಕೂಲ್‌ನ ಒಳ ಹೊಕ್ಕು ಕೆಲವು ದಿನಗಳಲ್ಲಿಯೇ ತನ್ನ ಚಾಕಚಕ್ಯತೆಯಿಂದ, ಯಾವ ಕೆಲಸ ಕೊಟ್ಟರೂ ಇಲ್ಲವೆನ್ನದ ಸ್ವಭಾವದಿಂದ, ಎಲ್ಲರಿಗೂ ಅಚ್ಚುಮೆಚ್ಚಿನ ಆಯಾ ರೇಖಾ ಆದಳು. ಬೆಳಿಗ್ಗೆ ಮಕ್ಕಳನ್ನು ಕರೆ ತರುವುದು ನಂತರ ಶಾಲಾ ಆವರಣದ ತೋಟಕ್ಕೆ ನೀರು ಹಾಯಿಸುವುದು, ಮೆಮೋಗಳನ್ನು ತರಗತಿಗೆ ಒಯ್ಯುವುದು, ಕಾಫಿ ಚಹಾ ಸಮಯದಲ್ಲಿ ಕ್ಯಾಂಟೀನ್‌ನಿಂದ ಕ್ಲಾಸ್ ರೂಮ್‌ಗಳಿಗೂ, ಆಫೀಸ್ ಹಾಗೂ ಸ್ಟಾಫ್ ರೂಮ್‌ಗಳಿಗೂ ಒಯ್ಯುವುದು, ಸಂಜೆ ಮಕ್ಕಳನ್ನು ಎರಡು ಹಂತದಲ್ಲಿ ವ್ಯಾನ್‌ಗಳಲ್ಲಿ ಬಿಟ್ಟು ಬರುವುದು ಹೀಗೆ….. ಅಲ್ಲದೆ ಕೆಲವೊಮ್ಮೆ ಶಾಲೆ ವ್ಯಾನ್‌ಗಳನ್ನು ತೊಳೆದು ಕ್ಲೀನ್ ಮಾಡುವಾಗ ಡ್ರೈವರ್ ಗಳಿಗೆ ಸಹಾಯ ಕೂಡ ಮಾಡಬೇಕಾಗುತ್ತಿತ್ತು.

ರೇಖಾ ಹೋಗಿ ಬರುತ್ತಿದ್ದ ವ್ಯಾನ್ ಡ್ರೈವರ್ ಮಹಾದೇವ ಉಳಿದ ಡ್ರೈವರ್‌ಗಳಂತೆ ಹೆಚ್ಚು ಮಾತಾಡುತ್ತಿರಲಿಲ್ಲ. ಸಂಭಾವಿತ. ಅವನಿಗೆ ಹೋಲಿಸಿದರೆ ರೇಖಾಳೇ ಮಾತುಗಾರ್ತಿ. ಒಟ್ಟಿನಲ್ಲಿ ಯಾವ ಸಮಸ್ಯೆಯೂ ಇಲ್ಲದೆ ದಿನ ಕಳೆಯುತ್ತಿತ್ತು. ಲಿಂಗಮ್ಮಳು ಖುಷಿಯಾಗಿ ಶ್ರೀವಾಣಿಯ ಬಳಿ ಹೇಳಿಕೊಂಡಿದ್ದಳು. ರೇಖಾ ತನಗೆ ದೊರಕುತ್ತಿದ್ದ ಹನ್ನೆರಡು ಸಾವಿರ ಸಂಬಳದಲ್ಲಿ ನಾಲ್ಕು ಸಾವಿರ ಅಣ್ಣನ ಕೈಲಿ ಕೊಟ್ಟು, ನಾಲ್ಕು ಸಾವಿರ ಊರಿಗೆ ಕಳಿಸಿ, ನಾಲ್ಕು ಸಾವಿರ ತನ್ನ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದಳಂತೆ. ಅವಳಿಗೇನು ಹೆಚ್ಚಿನ ಖರ್ಚು ಇರಲಿಲ್ಲ. ತಿಂಡಿ, ಊಟ, ಕಾಫಿ.. ಕ್ಯಾಂಟೀನ್‌ನಲ್ಲಿ ಆಗುತ್ತಿತ್ತು. ಹೀಗೆ ಕೆಲವು ತಿಂಗಳು ಕಳೆದವು.

ಒಂದು ದಿನ ಲಿಂಗಮ್ಮ ಶ್ರೀವಾಣಿಯ ಮನೆಗೆ ಬಂದಳು. ಆಗ ಸಮಯ ಸಂಜೆ ಏಳು ದಾಟಿತ್ತು. ‘ಅಡ್ವಾನ್ಸ್ ಏನಾದರೂ ಬೇಕೇನೋ, ಅಥವಾ ಸಕ್ಕರೆ, ಟೀ ಪುಡಿ ಕೇಳಲು ಬಂದಿರಬಹುದು’ ಎಂದುಕೊಂಡಳು. ಏಕೆಂದರೆ ಆರು ಗಂಟೆಗೆ ಮನೆ ಕೆಲಸ ಮುಗಿಸಿ ಹೋಗಿದ್ದಳು ಲಿಂಗಮ್ಮ. ಆದರೆ ಲಿಂಗಮ್ಮ ಬಂದ ಕಾರಣ ಬೇರೆಯೇ ಇತ್ತು. ಸಾಮಾನ್ಯವಾಗಿ ಆರು ಗಂಟೆಯೊಳಗೆ ಮನೆಗೆ ಬರುವ ಸುರೇಖಾ ಇನ್ನೂ ಬಂದಿರಲಿಲ್ಲ. ಸ್ವಲ್ಪ ಹೊತ್ತು ಕಾದು ಆ ಬಗ್ಗೆ ವಿಚಾರಿಸಲು ಬಂದಿದ್ದಳು. ಶ್ರೀವಾಣಿ ನಾಲ್ಕೂವರೆಗೆಲ್ಲಾ ಮನೆಗೆ ಬರುತ್ತಾಳೆ. ಆದರೆ ಆಯಾಗಳು ಡ್ರೈವರ್‌ಗಳು, ಮಕ್ಕಳನ್ನು ಬಿಟ್ಟು ಬಂದು, ಶಾಲೆಯಲ್ಲಿ ಬೆರಳು ಒತ್ತಿ ಹೊರಡುವಾಗ, ಐದು ನಲವತ್ತೈದು ಆಗುತ್ತದೆ. ಒಮ್ಮೊಮ್ಮೆ ಟ್ರಾಫಿಕ್ ಹೆಚ್ಚಿದ್ದರೆ ಶಾಲೆಗೆ ಬರುವುದೇ ಆರು ಗಂಟೆ ದಾಟುತ್ತದೆ. ಇದೆಲ್ಲ ಯೋಚಿಸಿ ಶ್ರೀವಾಣಿ, ಶಾಲೆಯ ಸೆಕ್ಯೂರಿಟಿಗೆ ಫೋನ್ ಮಾಡಿದಳು. ‘ಎಲ್ಲಾ ವ್ಯಾನ್‌ಗಳು ಬಂದವೆಂದೂ, ಡ್ರೈವರ್ ಆಯಾಗಳೆಲ್ಲ ಆರು ಗಂಟೆಗೆ ಹೊರಟರೆಂದು’ ಸೆಕ್ಯೂರಿಟಿ ನಂಜಪ್ಪ ಹೇಳಿದ. ಶ್ರೀವಾಣಿಗೆ ತಕ್ಷಣ ಹೆದರಿಕೆ ಏನು ಆಗಲಿಲ್ಲ. ಬೇರೆ ಪರಿಚಿತ ಆಯಾ ಮನೆಗೆ ಏನಾದರೂ ಹೋಗಿರಬಹುದು. ಅಥವಾ ಈದಿನ ಸೋಮವಾರವಾದ್ದರಿಂದ ಈಶ್ವರನ ಗುಡಿಗೆ ಏನಾದರೂ ಹೋಗಿರಬಹುದು.. ಎಂದು ಶಂಕಿಸಿದಳು.

ಆದರೆ ಲಿಂಗಮ್ಮ “ಹಾಗೇನು ಇಲ್ಲಮ್ಮ ಬೆಳಗ್ಗೆ ಸ್ಕೂಲ್ ಗೆ ಹೋಗುವಾಗಲೇ ‘ದೇವಸ್ಥಾನಕ್ಕೆ ಹೋಗಿ ಹೋಗ್ತೀನಿ’ ಅಂದಿದ್ದಳು, ಸಾಮಾನ್ಯವಾಗಿ ಕೆಲಸ ಮುಗಿಸಿ ಬಂದುಬಿಡುತ್ತಾಳೆ” ಎಂದಾಗ ಶ್ರೀವಾಣಿಗೆ ಆತಂಕ ಶುರುವಾಯಿತು. ತನ್ನ ಫೋನ್‌ನಿಂದ ಲಿಂಗಮ್ಮನ ಬಳಿ ನಂಬರ್ ಪಡೆದುಕೊಂಡು ರೇಖಾಗೇ ಫೋನ್ ಮಾಡಿದಳು. ಸ್ವಿಚ್ ಆಫ್ ಆಗಿತ್ತು. ಆದರೂ ಧೃತಿಗೆಡದೆ ಲಿಂಗಮ್ಮನಿಗೆ ಹೇಳಿದಳು. “ಇನ್ನೂ ಸ್ವಲ್ಪ ಹೊತ್ತು ಕಾಯೋಣ ನಿನ್ನ ಗಂಡ ಬಂದ ಕೂಡಲೇ ಇಲ್ಲಿ ಸುತ್ತಮುತ್ತ ಒಂದು ರೌಂಡ್ ಹುಡುಕಿ ಬರಲಿ. ನಾನು ಪುನಹ ಶಾಲೆಗೆ ಫೋನ್ ಮಾಡಿ ವಿಚಾರಿಸುವೆ” ಎಂದಳು.

ಸಮಯ ಎಂಟೂವರೆ ಆದರೂ ಸುಳಿವಿಲ್ಲ. ಈಗ ಶ್ರೀವಾಣಿಗೆ ನಿಜಕ್ಕೂ ಹೆದರಿಕೆ ಶುರುವಾಯಿತು. ಆದರೂ ತನಗೆ ತಾನೇ ಹೇಳಿಕೊಂಡಳು ‘ನಾನು ಕರೆದುಕೊಂಡು ಹೋಗಿ ಸೇರಿಸಿದೆ ನಿಜ, ಹಾಗೆಂದ ಮಾತ್ರಕ್ಕೆ ಅವಳ ಜವಾಬ್ದಾರಿ ನನ್ನದೇ…’ ಆದರೂ ಶಾಲೆಯ ಸಿ.ಇ.ಓ. ಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಅವರು “ಸರಿ, ನಾನು ವಿಚಾರಿಸುವೆ. ನೀವೇನು ಯೋಚಿಸಬೇಡಿ” ಎಂದರು. ಮೊದಲು ಅವರು ಮಹದೇವನ ಮೊಬೈಲ್‌ಗೆ ಫೋನ್ ಮಾಡಿದರು. ಸ್ವಿಚ್ ಆಫ್ ಆಗಿತ್ತು. ಸುರೇಖಾಳ ಫೋನ್ ಕೂಡ ಸ್ವಿಚ್ ಆಫ್ ಬಂದಾಗ, ಅನುಮಾನ ಶುರುವಾಯಿತು. ಕೂಡಲೇ ಅವರು ಮಹಾದೇವನ ಗೆಳೆಯ ಇನ್ನೊಬ್ಬ ಡ್ರೈವರ್ ಪೀಟರ್‌ಗೆ ಫೋನ್ ಮಾಡಿದರು. ಅವನು ತೆಗೆದ. ಅವನಿಗೆ ವಿಷಯ ತಿಳಿಸಿ ಅವನಿಗೇನಾದರೂ ಗೊತ್ತೇ ಎಂದಾಗ ಅವನು “ಇಲ್ಲಾ ಸಾರ್ ಇವತ್ತು ನಾನೇ ಲಾಸ್ಟ್ ಬಂದಿದ್ದು, ಗೇಟ್ ಒಳಗೆ ಗಾಡಿ ತಗೊಂಡು ಹೋಗುವಾಗ ಅವರಿಬ್ಬರೂ ಗೇಟ್ ಬಳಿ ನಿಂತಿದ್ದರು. ಪುನಃ ನಾನು ಗಾಡಿ ನಿಲ್ಲಿಸಿ ಬಂದಾಗ ಅವರಿರಲಿಲ್ಲ. ಸರ್ ಇನ್ನೊಂದು ವಿಷಯ ಹೇಗೆ ಹೇಳ್ಬೇಕೋ ಗೊತ್ತಿಲ್ಲ, ಗಾಡಿ ಕ್ಲೀನ್ ಆದಮೇಲೆ ಇಬ್ಬರು ಒಳಗೆ ಕೂತು ಮಾತಾಡ್ತಾ ಇದ್ದರು, ನಾನು ಗಮನಿಸಿದೆ. ಆಮೇಲೆ ಮಹದೇವನ ದಬಾಯಿಸಿ ಕೇಳಿದೆ “ಏನೋ, ಏನೋ ಮಸಲತ್ತು ನಡೆಸಿದಂಗೆ ಕಾಣ್ತೀಯಾ, ಹುಷಾರು, ಚೆನ್ನಾಗಿರಾಕಿಲ್ಲ”. ಅಂತ. ಅವನು, “ಏನಿಲ್ಲ ಕಣಪೋ, ಸುಮ್ನೆ ಕಷ್ಟ- ಸುಖ ಮಾತಾಡ್ತಾ ಇದ್ವಿ’ ಅಂತ. ಆದರೂ ನಾನು ಆಗಾಗ ಗಮನಿಸ್ತಾ ಇದ್ದೆ ಕಣ್ಸನ್ನೆ ಬಾಯ್ಸನ್ನೇಲಿ ಮಾತಾಡ್ತಾ ಇರ್ತಿದ್ರು”‘ ಅಂದಾಗ ಸಿ ಇ ಓ ಶಿವಶಂಕರ್ ಗೆ ಆತಂಕ ಹೆಚ್ಚಾಯ್ತು. ಕೂಡಲೇ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಆಗ ಅವರು “ನೋಡ್ರೀ ವ್ಯಾನ್ ಎತ್ಕೊಂಡು ಹೋಗಿದ್ರೆ ತಲೆಕೆಡಿಸಿಕೊಳ್ಳಬೇಕಿತ್ತು. ಕೆಲಸ ಮುಗಿಸಿ ಹೊರಟ ಮೇಲೆ ಅದಕ್ಕೆ ನಾವು ಜವಾಬ್ದಾರರಲ್ಲ ಅಲ್ದೆ ಇಬ್ಬರು ಮೇಜರ್. ನೋಡೋಣ.. ಒಂದು ದಿನ ಕಾಯೋಣ.. ಬೇಕಾದರೆ ಇಲ್ಲಿನ ಎಸ್ಸೈ ನಮ್ಮವನೇ… ಅನಫಿಶಿಯಲ್ ಆಗಿ ಒಂದು ಕಂಪ್ಲೇಂಟ್ ಕೊಡೋಣ.. ನೀವೇನು ತಲೆಕೆಡಿಸಿಕೊಳ್ಳಬೇಡಿ” ಎಂದರು. ಸಿ ಇ ಓ ಗೆ ನಿರಾಳವಾಯಿತು.

ಈ ಎಲ್ಲಾ ವಿಷಯ ಶ್ರೀವಾಣಿಗೆ ತಿಳಿಯಿತು. ಅವಳು ಎಷ್ಟು ಬೇಕೋ ಅಷ್ಟನ್ನ ಲಿಂಗಮ್ಮನಿಗೂ, ಅವಳ ಗಂಡನಿಗೂ ಹೇಳಿದಳು. ಲಿಂಗಮ್ಮನ ಗಂಡನ ಮುಖದಲ್ಲಿ – ಎಷ್ಟೇ ಆಗಲಿ ಅಣ್ಣನಲ್ಲವೇ- ತುಸು ಆತಂಕ ಹೆಚ್ಚೇ ಕಾಣಿಸಿತು. ಅವನು ಹೇಳಿದ “ಅದಕ್ಕೆ ಮೇಡಂ, ಅವಳನ್ನ ಇಲ್ಲಿ ಇಟ್ಕೊಳ್ಳೋದು ನಂಗಿಷ್ಟ ಇರಲಿಲ್ಲ, ಮುಂದಿನ ವರ್ಷ ಊರಲ್ಲೇ ‘ಒಂದು ಗಂಡು ನೋಡಿ, ಮದುವೆ ಮಾಡಿ, ಸಾಗಾಕಿ ಬಿಡಾಣ..’ ಅಂತಿದ್ದೆ. ಅಷ್ಟರಲ್ಲಿ ಹಿಂಗ್ ಮಾಡ್ಕೊಂಡ್ಬಿಟ್ಲು” ಎಂದ.

ರಾತ್ರಿ ಕಳೆದು ಬೆಳಗಾಯಿತು. ಸುದ್ದಿ ಇಲ್ಲ. ಶಾಲೆಗೆ ಮಾಲೀಕರು ಬಂದರು. ಸಿ ಈ ಓ, ಡ್ರೈವರ್, ಆಯಾಗಳ ಮೀಟಿಂಗ್ ನಡೆಯಿತು. ಹೆಚ್ಚಿನ ವಿಷಯ ತಿಳಿಯಲಿಲ್ಲ. ಆದರೆ ಎಲ್ಲರೂ “ಅವರಿಬ್ಬರ ನಡುವೆ ಏನೋ ನಡೆಯುತ್ತಿತ್ತು. ಅವಳು ಬಲೆ ಪಾಕಡ…” ಎಂದು, ಕೆಲವರು ‘ಮಹದೇವ ಗುಮ್ಮನ ಗುಸಕ.. ಸೈಲೆಂಟಾಗಿ ಇದ್ದು ಹಿಂಗ್ ಮಾಡ್ಬಿಟ್ಟ’ ಹೀಗೆ… ತರಹೇವಾರಿ ಮಾತುಗಳು. ಶ್ರೀವಾಣಿಗೆ ಒಂದೇ ಭಯ.. ಲಿಂಗಮ್ಮ “ಏನು ಮೇಡಂ, ನೀವು ಎಂಥಾ ಕಡೆ ಸೇರಿಸಿಬಿಟ್ರಿ” ಅಂತಾಳೇನೋ ಅಂತ. ಹಾಗಾಗಲಿಲ್ಲ. ಒಂದು ವಾರ ಕಳೆಯಿತು.

ಹೊಸೂರು ಬಳಿ ಯಾರೋ ಮಹಾದೇವನ ನೋಡಿರೋದಾಗಿ ಒಬ್ಬರು ಹೇಳಿದರು. ಇನ್ನೊಬ್ಬರು ತಿರುಪತಿಯಲ್ಲಿ ಇಬ್ಬರೂ ಇದ್ದುದನ್ನು ನಮ್ಮ ನೆಂಟರು ಹೇಳಿದರು ಎಂದರು. ಒಂದು ದಿನ ಮಹದೇವನಿಂದ ಸಿಇಓ ಶಿವಶಂಕರ್ ಗೆ ಫೋನ್ ಬಂತು “ಸರ್ ಒಂದು ನಿಮಿಷ ನೀವು ಕೋಪ ಮಾಡ್ಕೊಳ್ಳಲ್ಲ ಅಂದ್ರೆ ಪರ್ಸನಲ್ ವಿಷಯ ಮಾತಾಡಬೇಕು” ಎಂದ. ಅವನು ಹೇಳಿದ್ದು ಇಷ್ಟೆ. ಇಬ್ಬರೂ ಪರಸ್ಪರ ಆಕರ್ಷಣೆಗೆ ಒಳಗಾದರು, ಜಾತಿ ಬೇರೆ. ಇಬ್ಬರ ಮನೆಯಲ್ಲಿ ಒಪ್ಪಿಸುವುದು ಕಷ್ಟ. ಹಾಗಾಗಿ ಧರ್ಮಸ್ಥಳಕ್ಕೆ ಹೋಗಿ ಮದುವೆ ಮಾಡಿಕೊಂಡರು. ಆಮೇಲೆ ಮಹದೇವ ಅವರ ಮನೆಯವರಿಗೆ ವಿಷಯ ತಿಳಿಸಿ ಒಂದು ವಾರ ಸುಬ್ರಹ್ಮಣ್ಯ ಕಟೀಲು ಉಡುಪಿ ಅಂತ ಸುತ್ತಾಡಿಕೊಂಡು ಮನೆಗೆ ಹೋದರು. ಮನೆಯವರು ಹೆಣ್ಣನ್ನು ನೋಡಿ ಒಪ್ಪಿಕೊಂಡು ಒಳಗೆ ಸೇರಿಸಿದರು. ಈಗ ಜೀವನೋಪಾಯಕ್ಕೆ ಕೆಲಸ ಬೇಕು. ನೀವೇ ಏನಾದರೂ ಮಾಡಬೇಕು ಎಂದು. ಶಿವಶಂಕರ್ ” ಸರಿ ಯಜಮಾನರಿಗೆ ಹೇಳಿ ಒಪ್ಪಿಸುವೆ ಸದ್ಯಕ್ಕೆ ನಿನ್ನ ಜಾಗಕ್ಕೆ ಬೇರೆ ಡ್ರೈವರ್ ಬಂದಿದ್ದಾನೆ, ಬೇಕಾದರೆ ಮಾರತಹಳ್ಳಿ ಬ್ರಾಂಚ್‌ನಲ್ಲಿ ಟ್ರೈ ಮಾಡೋಣ” ಎಂದಾಗ ಮಹದೇವನಿಗೆ ಸಮಾಧಾನವಾಯಿತು. ಶಿವಶಂಕರ್ ಅವರೇ ಲಿಂಗಮ್ಮನನ್ನು ಅವಳ ಗಂಡನನ್ನು ಕರೆಸಿಕೊಂಡು, ಸಮಾಧಾನದಿಂದ ವಿಷಯ ತಿಳಿಸಿ, ‘ಈಗೇನು ಮಾಡಲು ಸಾಧ್ಯವಿಲ್ಲ. ಮಹದೇವ ಒಳ್ಳೆಯವನೇ, ನಿಮ್ಮ ಹುಡುಗಿ ಸುಖವಾಗಿ ಇರುತ್ತಾಳೆ..’ ಎಂದು ಹೇಳಿ ಕಳಿಸಿದರು.

ಆ ದಿನ ಮನೆಯ ಕೆಲಸಕ್ಕೆ ಬಂದಾಗ ಲಿಂಗಮ್ಮ ಏನು ಹೇಳುವಳೋ ಎಂಬ ಆತಂಕ ಶ್ರೀವಾಣಿ ಗೆ. ಆದರೆ ಲಿಂಗಮ್ಮ “ಒಳ್ಳೇದೇ ಆಯ್ತು ಬಿಡಿ ಮೇಡಂ, ಮನೇಲಿ ನಂಗೆ ಬಲೆ ಕಾಟ ಕೊಡೊಳು, ಅವರ ಅಣ್ಣನ ಹತ್ತಿರ ನನ್ನ ಮೇಲೆ ಚಾಡಿ ಹೇಳೋಳು, ಊರಲ್ಲೂ ಗುಸುಗುಸು.. ಪಿಸುಪಿಸು.. ಮಾಡಿ ಇಲ್ಲಿ ಬಂದಿದ್ಲು, ನಮಗೂ ಮದುವೆ ಖರ್ಚು ಉಳೀತು. ಒಂದ್ಸಲ ಊರಿಗೆ ಕರ್ಕೊಂಡು ಹೋಗಿ, ಮನೆ ಮುಂದೆ ಕೂರಿಸಿ, ಆರತಿ ಮಾಡಿ ಕಳಿಸಿಬಿಟ್ಟರೆ, ನಮ್ ಜವಾಬ್ದಾರಿ ಮುಗೀತು…” ಎಂದಾಗ ಶ್ರೀವಾಣಿಗೆ ಮನಸೇನೋ ಹಗುರವಾಯಿತು. ಆದರೆ ಮಕ್ಕಳನ್ನು ಕಾಯಬೇಕೆಂದು ಹೊರಟವರೇ ಹೀಗೆ ಮಾಡಿದರೆ… ಎನ್ನುವ ಪ್ರಶ್ನೆ ನಗು ಮೂಡಿಸಿತು.