ದಡ ತಲುಪಲಿ
ರೇಖೆಗಳನ್ನು ಬಿಡಿಸುತ್ತಿರುವೆ
ತೋಚಿದಂತೆ ಗೀಚಿದಂತೆ
ಬೇಕಾದ ಆಕಾರಗಳು
ಮೂಡುತ್ತವೆಯೋ ಬಿಡುತ್ತವೆಯೋ
ಅದರ ಹಂಗು ಯಾರಿಗಿದೆ
ಎಲ್ಲ ತೊರೆದಾದ ಮೇಲೆ
ನಿರೀಕ್ಷಿಸಿಯೇ ಇರದ
ಚಿತ್ರ ಚಿತ್ತಾರಗಳು
ಧುತ್ತನೆ ಎದುರಾಗಬಹುದೋ
ಮೈಮರೆಸಿ ದಾರಿ ತಪ್ಪಿಸಬಹುದೋ!
ಪುಟಗಳು ಮುಗಿವವರೆಗೆ
ಪೆನ್ನಿನ ಶಾಯಿ ತೀರುವವರೆಗೆ
ಇರುಳು ಕೊನೆಗೊಳ್ಳುವವರೆಗೆ
ನೆರಳು ಬೆಳಕುಗಳ ಕೊರೆದು
ಮೌನ ತೀರವ ಗುರುತಿಸುವಾಸೆ
ನಿರ್ಜನ ರಾತ್ರಿಯುದ್ದಕ್ಕೂ
ನದಿ ಸಾಗರ ಕೊಳ್ಳಗಳು
ಕಾಡು ಕಣಿವೆ ಕರಿ ಮೋಡಗಳು
ಮಳೆಮಾರುತ ಹಿಮಪ್ರವಾಹಗಳು
ಬಡಿ ಬಡಿದು ಅಪ್ಪಳಿಸಿ
ಆಸೆಗಳ ಕುಡಿದುಬಿಡಲಿ
ರೇಖೆಗಳು ಚದುರಿ
ಬಿಂದುಗಳಾಗಿ ಸೀಳಿ
ದಡ ತಲುಪಲಿ!
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು