ಕೊಳಲಾಗುವುದೆಂದರೆ…

ಸಾಮಾನ್ಯ ಬಿದಿರೊಂದು
ಕೊಳಲಾಗುವುದೆಂದರೆ-

ಹಿಂದಿದ್ದವರ ಹಿಂದೆಯೇ ಉಳಿಸಿ
ಮುಂದಿದ್ದವರಿಗಿಂತಲೂ ಮುಂದಕ್ಕೆ ಚಲಿಸಿ
ಮಂದೆಯಲೊಂದಾಗದ ಮುಂದುಗಾರನಾಗಿ
ಮುಂದೆ ಮುಂದೆ ಬರುವುದು

ಕಾಡಿನ ಮಡಿಲಲ್ಲಿದ್ದ
ಅನಾಥ ಮಗುವೊಂದು
ರಸಿಕನ ಕೈಯ್ಯ
ತೆಕ್ಕೆಯನ್ನು ಸೇರುವುದು

ಸೀಳುವ ಆಯುಧಕ್ಕೂ ಮುತ್ತಿಟ್ಟು
ರಂಧ್ರ ಕೊರೆದರೂ ನೋಯದೆ
ಎಲ್ಲವನ್ನೂ ಒಪ್ಪಿಕೊಳ್ಳುವುದು;
ಅಪ್ಪಿಕೊಳ್ಳುವುದು

ನಾಭಿಯಿಂದೆದ್ದ ಪರಿದ್ರೋಣ ಕಂಪಿತ ನಾದತರಂಗ
ಕಲಾರಸಿಕರ ಹೃದಯ ತಲುಪುವವರೆಗೂ
ಉಸಿರಾಡುವುದು;
ಜೀವಂತವಾಗಿರುವುದು